Thursday, 27 June 2013

 ಭಾವಿಸಮೀರ ಶ್ರೀಮದ್ವಾದಿರಾಜ ಗುರುಗಳ ಮಾತಿನ  ಮಹಿಮೆಯನ್ನು ಕವಿ ವರ್ಣಿಸುವ ಪರಿ -
   ಸವಿನೋದಂ ಸಾಟ್ಟಹಾಸಂ ಸಸ್ಮಿತಂ ಸುಸ್ವರಾನ್ವಿತಂ । 
   ಸರಹಸ್ಯಂ ಸಪ್ರಮಾಣಂ ವಾದಿರಾಜವಚೋSಮೃತಂ ॥

      ವಾದಿರಾಜರ ಮಾತುಗಳು  ಅರ್ಥಾತ್ ಅವರ ಅಸ್ಖಲಿತ ವಾಣಿಯು ವಿನೋದದಿಂದ ಕೂಡಿವೆ , ಅಟ್ಟಹಾಸದಿಂದ ( ದುರ್ವಾದಿಗಳಿಗೆ ಎಚ್ಚರಿಕೆ ಕೊಡುವಲ್ಲಿ ಅಟ್ಟಹಾಸ) ತುಂಬಿವೆ , ಮಂದಹಾಸವನ್ನು ಬೀರುತ್ತವೆ , ಉತ್ತಮ ಸ್ವರಗಳನ್ನು ಸೂಚಿಸುತ್ತವೆ. ಅವುಗಳಲ್ಲಿ ರಹಸ್ಯಾರ್ಥವಿದೆ , ಪ್ರಮಾಣ ಬದ್ಧವಾಗಿರುತ್ತವೆ , ಪ್ರಮಾಣಗಳಿಂದ ಕೂಡಿರುತ್ತವೆ. ಹೀಗೆ ರಾಜರ ಬಗ್ಗೆ ಆಡಿದ ಮಾತುಗಳು ಅತಿಶಯವೆನಿಸುವದಿಲ್ಲ . ಅದು ಅವರ ವಾಣಿಯ ಮಹಿಮೆ.
       ಹೀಗೆ ಮಹಾನುಭಾವರಾದ ಭಾವಿ ಸಮೀರ ವಾದಿರಾಜರ ಮಾತುಗಳ ಬಗ್ಗೆ ಕವಿ ಆಡಿರುವ ಮಾತುಗಳು ಅತಿಶಯ ಎನ್ನಿಸುವದೇ  ಇಲ್ಲ . ವಾದಿರಾಜರ ಮಾತಿನ ಮಹಿಮೆಯನ್ನು ಸಾರುವ ಒಂದು ಚಿಕ್ಕ-ಚೊಕ್ಕ ನಿದರ್ಶನ ಇಲ್ಲಿದೆ , 

 ಮಹಾಕವಿ ಕಾಳಿದಾಸನಿಂದ ರಚಿತವಾದ 'ರಘುವಂಶ ಮಹಾಕಾವ್ಯ'ದಲ್ಲಿ ಹೀಗೊಂದು ಉಪಮಾನಕ್ಕಾಗಿ ಬಳಸಿದ ಮಾತಿದೆ ,
    ನ ಪಾದಪೋನ್ಮೂಲನರಂಹ: ಶಿಲೋಚ್ಚಯೇ ಮೂರ್ಚತಿ ವಾಯುವೆಗ: 
ಅಂದರೆ , ಮಹಾವೃಕ್ಷಗಳನ್ನೂ ಬೇರುಸಹಿತವಾಗಿ ಉರುಳಿಸಿಬಿಡಬಲ್ಲ ಶಕ್ತಿಉಳ್ಳ ವಾಯುವಿನ ವೇಗವು ಕಲ್ಲಿನ ಸಮೂಹವಾದ ಬೆಟ್ಟದಮೇಲೆ ಪ್ರಭಾವಶಾಲಿಯಾಗಲಾರದು ಎಂದು. 

ಇದಕ್ಕೆ ಮಧ್ವರಾಜರಲ್ಲಿ ಭಕ್ತಿ ಉಳ್ಳವರಾದ , ಭಾವಿ ಸಮೀರರಾದ , ರುಜುಶಿರೋಮಣಿಗಳಾದ ವಾದಿರಾಜರು , ವಾಯುದೇವರ ಅಸಮರ್ಥತೆಯನ್ನು ತಿಳಿಸುವ ಕಾಳಿದಾಸನ ಮಾತಿಗೆ ಸೊಗಸಾಗಿ ತಮ್ಮ "ತೀರ್ಥ ಪ್ರಭಂಧ" ಗ್ರಂಥದಲ್ಲಿ ಉತ್ತರ ಕೊಡುತ್ತಾರೆ. ಅದು ಹೀಗೆ , 

ನ ಮೂರ್ಚತಿ ಶಿಲೋಚ್ಚಯೇ ಪವನವೇಗ ಇತ್ಯಜ್ಞವಾಕ್ 
ಯತೋ ಹನುಮತಾSಹ್ರುತಾ: ಸುಬಹವೋ ಮರುತ್ಸೂನುನಾ । 
ಗಭೀರತಾರಾವಾರಿಧಿಚ್ಛದನಚುಂಚವಃ ಪರ್ವತಾಃ 
ಜಯಂತಿ ಕೃತಸೇವತಃ ಕ್ಷಪಣಹೆತವೋ ರಕ್ಷಸಾಂ ॥

ಎಂದರೆ , ಕಲ್ಲಿನ ಸಮೂಹದ ಮೇಲೆ ವಾಯುವಿನ ವೇಗ ಪರಿಣಾಮಕಾರಿಯಾಗದು ಎಂಬ ಮಾತು ಮೂಢನ ಮತ್ತೆ ಸರಿ , ಏಕೆಂದರೆ ವಾಯುಪುತ್ರನಾದ ಹನುಮಂತನಿಂದ ಇಲ್ಲಿಗೆ ತರಲ್ಪಟ್ಟ ಅನೇಕ ಪರ್ವತಗಳು ಆಳವಾದ ಸಮುದ್ರವನ್ನು ಸಹಿತ ಮುಚ್ಚಲು ಸಮರ್ಥವಾಗಿದ್ದು , ಸೇತುವಿನ ರಚನೆಗೆ ಕಾರಣವಾಗಿ ಪ್ರಸಿದ್ಧವಾಗಿದೆ , ಅವು ರಾಕ್ಷಸರ ವಿನಾಶಕ್ಕೆ ಕಾರಣವಾಗಿವೆ. ವಾಯುವಿನ ವಿಚಾರ ಹಾಗಿರಲಿ , ವಾಯುವಿನ ಸೂನು ಮಾಡಿರುವ ಕೆಲಸ ನೋಡಿದರೆ ಸಾಕು ವಾಯುವಿನ ಮಹಿಮೆ ನಮಗೆ ತಿಳಿಯುತ್ತದೆ ಎಂದು ಕಾಳಿದಾಸನಿಗೆ ಉತ್ತರವನ್ನು ಕೊಟ್ಟಿದ್ದಾರೆ ನಮ್ಮ ಗುರುಗಳು . 

ಇದು ಕೇವಲ ಸಣ್ಣ ನಿದರ್ಶನ , ಮಹಾನ್ ಮಹಾನ್ ವಿದ್ವಾಂಸರು ರಾಜರ ಪ್ರತೀ ಮಾತಿನಲ್ಲಿಯೂ ಹೊಸತನ್ನು , ಹೊಸ ಅರ್ಥವನು , ಪ್ರಮಾಣ ಬಧ್ದತೆಯನ್ನು ಕಾಣುತ್ತಾರೆ . ಅಂತಹ ಭಾವಿ ಸಮೀರ ರಾಜರನ್ನು ಪಡೆದ ನಾವೆ ಧನ್ಯರು. 
   

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...