GURU-GUNA-STAVANA ( ಗುರುಗುಣಸ್ತವನಮ್ )


ಗುರುಗುಣಸ್ತವನಮ್ - ೧


ಉನ್ಮೀಲನ್ನೀಲನೀರೇರುಹಿನಿವಹಮಹ: ಪುಷ್ಟಿಮುಷ್ಟಿಂಧಯಿಶ್ರೀ:
ಶ್ರೀಭೂದುರ್ಗಾದೃಗಂತಪ್ರಚಯಪರಿಚಯೋದಾರಕಿರ್ಮೀರಭಾವ:|
ಸ್ವೈರಕ್ಷೀರೊದನಿರ್ಯಚ್ಛಶಿರುಚಿನಿಚಯಾಖರ್ವಗರ್ವಾಪನೋದಿ
ಪಾತು ಶ್ರೀನೇತುರಸ್ಮಾನ್ ಸಪದಿ ಬುಧಜನತ್ರಾಣದಕ್ಷ: ಕಟಾಕ್ಷ: ।। ೧ ।।


ಭಾವಾರ್ಥ : 
ಅರಳುತ್ತಿರುವ ಕೆನ್ನೈದಿಲೆಗಳ ಸಮೂಹಗಳ ಕಾಂತಿ ಸಮೃದ್ಧಿಯನ್ನು ತಿರಸ್ಕರಿಸಲು ಸಮರ್ಥವಾದ ಕಾಂತಿಯಿಂದ ಕೂಡಿದ, ಶ್ರೀ ದೇವಿ, ಭೂ ದೇವಿ, ದುರ್ಗಾ ದೇವಿಯರ ಕಡೆಗಣ್ಣನೋಟದ ಅಧಿಕ ಸಹವಾಸದಿಂದ ಶ್ರೇಷ್ಠವಾದ ಚಿತ್ರ ವಿಚಿತ್ರವರ್ಣೋಪೇತವಾದ ಕ್ಷೀರ ಸಾಗರದಿಂದ ಹೊರಹೊಮ್ಮುತ್ತಿರುವ ಪೂರ್ಣಚಂದ್ರನ ಕಾಂತಿ ಸಮೂಹದ ಅಪರಿಮಿತ ಅಹಂಕಾರವನ್ನು ಪರಿಹರಿಸಲು ಸಮರ್ಥವಾದ ಶ್ರೀಪತಿಯ ಕಟಾಕ್ಷವು ನಮ್ಮನ್ನು ಕೂಡಲೆ ಕಾಪಾಡಲಿ. 


ತಾತ್ಪರ್ಯಾರ್ಥ:    
ಶ್ರೀ ವಾದೀಂದ್ರ ತೀರ್ಥರು ತಾವು ಮಾಡಬಯಸಿದ ಗುರುಗುಣಸ್ತವನದ ನಿರ್ವಿಘ್ನ ಪರಿಸಮಾಪ್ತಿಗಾಗಿ ಇಷ್ಟದೇವತಾ ಪ್ರಾರ್ಥನಾರೂಪವಾದ ಮಂಗಳವನ್ನಿಲ್ಲಿ ಆಚರಿಸುತ್ತಿದ್ದಾರೆ. ಇಲ್ಲಿ ಶ್ರೀಹರಿಯ ಕಟಾಕ್ಷಕ್ಕೆ ಶ್ರೀ ಸನ್ನಿಧಾನ ವರ್ಣನೆ ಮಾಡಿರುವುದರಿಂದ ಪ್ರಸನ್ನತೆಯ ಧ್ವನಿತವಾಗಿದೆ. ಇಲ್ಲಿ ಬುಧಜನ ತ್ರಾಣದಕ್ಷ:, ಗರ್ವಾಪನೋದಿ ಎಂಬ ಪದಗಳಿಂದ ಭಗವಂತನ ಶಿಷ್ಟರಕ್ಷಣ-ದುಷ್ಟಶಿಕ್ಷಣ ಇವುಗಳು ಸೂಚಿತವಾಗಿವೆ. 



ಶ್ಲೋಕ ೧ ರಲ್ಲಿ
*ಕಂಡುಬರುವ ಪ್ರಾರ್ಥನಾರೂಪ ವಾಕ್ಯಗಳು


' ಪಾತು ಶ್ರೀನೇತುರಸ್ಮಾನ್ಸಪದಿ ಬುಧಜನಾತ್ರಾಣದಕ್ಷ ಕಟಾಕ್ಷ: ' ( ಇದನ್ನು ಸುಭಾಷಿತ ಅಥವಾ ನೀತಿವಾಕ್ಯ ಎಂದು ಕರೆಯಬಹುದು)
-- ಬುಧ ಜನರ ರಕ್ಷಣೆಯಲ್ಲಿ ದಕ್ಷವಾದ ಶ್ರೀಪತಿಯ ಕಟಾಕ್ಷವು ನಮ್ಮನ್ನು ಕೂಡಲೇ ರಕ್ಷಿಸಲಿ.


* ಶ್ಲೋಕದಲ್ಲಿ ಕಂಡುಬರುವ ನ್ಯಾಯ- ಖಲೇ ಕಪೋತನ್ಯಾಯ ,ಕಾಕಾಕ್ಷಿ ಗೋಲಕ ನ್ಯಾಯ.
* ಇಲ್ಲಿ ಕಂಡು ಬರುವ ಅಲಂಕಾರಗಳು
೧) ಪ್ರತೀಪ ( ಅರ್ಥಾಲಂಕಾರ )
೨) ಪರಿಕರ ( ಅರ್ಥಾಲಂಕಾರ)
೩) ವ್ರುತ್ಯನುಪ್ರಾಸ ( ಶಬ್ದಾಲಂಕಾರ)


ಈ ರೀತಿ ಸರ್ವರೀತಿಯಲ್ಲೂ ಸಂಪತ್ಭರಿತ ಗ್ರಂಥ ಅಂದರೆ ಗುರುಗುಣಸ್ತವನ . ಈ ಎಲ್ಲ ಗುಢಾರ್ಥಗಳನ್ನೂ ಶ್ರೀ ವಾದೀಂದ್ರ ಸ್ವಾಮಿಗಳಿಂದಲೇ ತಿಳಿದುಕೊಂಡು ಅವರ ಶಿಷ್ಯರಾದ ಅವರ ನಂತರ ಪೀಠಕ್ಕೆ ಬಂದ ಶ್ರೀ ವಸುಧೇಂದ್ರ ತೀರ್ಥರು ಹಾಗು ಅವರ ತನಯಮಣಿಗಳಾದ ಶ್ರೀ ಧೀರೇಂದ್ರ ತೀರ್ಥರು ಎಲ್ಲವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.





ಗುರುಗುಣಸ್ತವನಮ್ -  ೨


ಮಾತಸ್ತ್ವಾಮುಪಕಲ್ಪಿತಾಖಿಲಜಗತ್ ಸರ್ಗೇsಜಭರ್ಗೇಡಿತೇ
ಚೇತೋ ನ ಪ್ರಜಹಾತು ಜಾತುಚಿದಿಹ ಸ್ವರ್ಗೇsಪವರ್ಗೇsಪಿ ನಃ ।
ಲಾವಣ್ಯಾದಧರೀಕೃತಾಮರವಧೂವರ್ಗೇ ನಿಸರ್ಗೇ ಹಿತಂ
ಕಾರುಣ್ಯಂ ಕುರು ಮಾ ಕೃಥಾ ಮಯಿ ಪುನರ್ದುರ್ಗೇ  ವಿಸರ್ಗೇ ಮತಿಂ ।।೨।।


ಅರ್ಥ - ಬ್ರಹ್ಮಾದಿ ಸಕಲ ಪ್ರಪಂಚವನ್ನು ಸೃಷ್ಟಿಸುವ, ಬ್ರಹ್ಮರುದ್ರಾದಿಗಳಿಂದ ಸ್ತುತಿಸಲ್ಪಡುತ್ತಿರುವ, ತನ್ನ ಸೌಂದರ್ಯದಿಂದ ದೇವತಾ ಸ್ತ್ರೀಸಮೂಹದ ಸೌಂದರ್ಯವನ್ನು ಕಡಿಮೆ ಮಾಡಿದ, ಶ್ರೀ ಭೂದುರ್ಗಾತ್ಮಕಳಾದ ಹೇ ಲೋಕಮಾತೆಯೇ! ಈ ಲೋಕದಲ್ಲಾಗಲೀ ಸ್ವರ್ಗಲೋಕದಲ್ಲಾಗಲೀ ಮೋಕ್ಷದಲ್ಲಾಗಲೀ ಎಲ್ಲಿದ್ದರೂ ನಮ್ಮ ಮನಸ್ಸು ನಿನ್ನನ್ನು ಬಿಟ್ಟು ಹೋಗದಿರಲಿ. ನಮ್ಮ ಸ್ವಭಾವಾಪೇಕ್ಷಿತವಾದದನ್ನು ಕರುಣಿಸು. ದಾರಿದ್ರ್ಯಯುಕ್ತವಾದ ಕಷ್ಟಕಾಲದಲ್ಲಿ ನನ್ನನ್ನು ಪರಿತ್ಯಾಗ ಮಾಡುವ ಬುದ್ಧಿಯನ್ನು ಮಾಡಬೇಡ.

ಮೊದಲ ಶ್ಲೋಕದಲ್ಲಿ ಗ್ರಂಥಕಾರರಾದ ಶ್ರೀವಾದೀ೦ದ್ರ ತೀರ್ಥರು ಶ್ರೀಪತಿಯನ್ನು ಸ್ತುತಿಸಿ, ಎರಡನೇ ಶ್ಲೋಕದಲ್ಲಿ ಶ್ರೀರಮಾದೇವಿಯನ್ನು ಸ್ತುತಿಸಿದ್ದಾರೆ. ಇಲ್ಲಿ ಲಕ್ಷ್ಮೀದೇವಿಯನ್ನು ಭಾಗವದುಪಸರ್ಜನತಯಾ ಸ್ತುತಿಸಿದಂತಾಗುತ್ತದೆ.

ಮಾತಃ ಎಂಬ ವಿಶೇಷಣದಿಂದ ಲಕ್ಷ್ಮೀದೇವಿಯರ ಸರ್ವಜನಪೋಷಕತ್ವಗುಣ ಕಥಿತವಾಗಿದೆ. ಉಪಕಲ್ಪಿತಾಖಿಲಜಗತ್ ಸರ್ಗೇ ಎಂದುದರಿಂದ ಸಕಲಸೃಷ್ಟಿಕರ್ತೃತ್ವವೂ, ಲಾವಣ್ಯಾದಧರೀಕೃತಾಮರವಧೂವರ್ಗೇ (ಸೌಂದರ್ಯದಲ್ಲಿ ದೇವತಾಸ್ತ್ರೀಯರ ಸೌಂದರ್ಯವನ್ನೇ ಕಡಿಮೆಗೊಳಿಸಿದವಳು) ಎಂಬುದರಿಂದ ಅವಳ ಅಸಾಮಾನ್ಯ ಸೌಂದರ್ಯವೂ ಧ್ವನಿತವಾಗಿದೆ.

                                                                   

ಗುರುಗುಣಸ್ತವನಂ - ೩



ಶ್ಲೋಕ-

ಶ್ರೀವಾದೀಂದ್ರ ತೀರ್ಥರ ,  ಮುಖ್ಯಪ್ರಾಣದೇವರ ಪ್ರಾರ್ಥನಾ ರೂಪದ ಮಂಗಳಾಚರಣೆ -



ಶ್ರೀಮದ್ರಾಮಾಭಿರಾಮಮಿತಮಹಿಮಪದ ಪ್ರೌಢಪಾಥೋರುಹಾಲಿ: 
ಕೃಷ್ಣಾನಿಷ್ಟಾಮಿತಕ್ಷ್ಮಾಪರಿವೃಢಪಟಲೀಪಾಟನೈಕ ಪ್ರವೀಣಃ ।।
ವೇದವ್ಯಾಸೋಪದೇಶಾಧಿಕಸಮಧಿಗತಾನಂತ ವೇದಾಂತಭಾವೋ 
ಭೂಯಾತ್ಕೀಶಾವನೀಶ ವೃತಿತನುರನಿಲಃ ಶ್ರೇಯಸೇ ಭೂಯಸೇನಃ ।।೩।। 


ಅರ್ಥ-  "ಕಾಂತಿಯುತನಾದ ಶ್ರೀರಾಮಚಂದ್ರನ ಮನೋಹರವಾದ ಹಾಗು ಅಮಿತವಾದ ಮಹಿಮೆಗಳಿಂದ ಕೂಡಿದ ಪಾದಕಮಲಗಳಲ್ಲಿ ಭ್ರಮರದಂತಿರುವ ( ಕೀಶತನು:- ಹನುಮಂತನ ಅವತಾರವುಳ್ಳ ಮುಖ್ಯಪ್ರಾಣನು) , ಶ್ರೀಕೃಷ್ಣನ ( ಅಥವಾ ಕೃಷ್ಣೆಯ ಅಂದರೆ ದ್ರೌಪದಿಯ ) ಶತ್ರುಗಳಾದ ಅಸಂಖ್ಯ ರಾಜರುಗಳ ಸಮೂಹವನ್ನು ನಾಶಮಾಡುವಲ್ಲಿ ಅತ್ಯಂತ ಸಮರ್ಥನಾದ ( ಅವನೀಶತನು: - ಭೀಮಸೇನದೇವರ ಅವತಾರ ಉಳ್ಳ ಮುಖ್ಯಪ್ರಾಣನು ) , ಶ್ರೀ ವೇದವ್ಯಾಸದೇವರ ಉಪದೇಶಗಳಿಂದ ಅನಂತ ವೇದ ಹಾಗು ಉಪನಿಷತ್ತುಗಳ ವೇದಾರ್ಥ ನಿರ್ಣಾಯಕವಾದ ಬ್ರಹ್ಮ ಮೀಮಾಂಸಾಶಾಸ್ತ್ರದ ಭಾವವನ್ನು ಚೆನ್ನಾಗಿ ತಿಳಿದಿರುವ ( ವೃತಿತನು: - ಸನ್ಯಾಸಿಗಳಾದ ಶ್ರೀ ಮಧ್ವಾಚಾರ್ಯರ ಅವತಾರವುಳ್ಳ ಮುಖ್ಯಪ್ರಾಣನು) ಹೀಗೆ ಹನುಮ-ಭೀಮ-ಮಧ್ವರೂಪಗಳಿಂದ ಅವತರಿಸಿದ ಮುಖ್ಯಪ್ರಾಣನು ನಮಗೆ ಮೋಕ್ಷಾದಿ ಪುರುಷಾರ್ಥಗಳನ್ನೂ ಅನುಗ್ರಹಿಸಲಿ" ಎಂದು ಶ್ರೀ ವಾದೀಂದ್ರ ತೀರ್ಥರು ತಮ್ಮ ಮೂಲಪುರುಷ ಮಧ್ವರ ಅವತಾರ , ಗುರುಭಕ್ತಿ , ಜ್ಞಾನ , ಪ್ರತಿಭಾ ಗುಣಗಳ ಸ್ತವನವನ್ನು ಮಾಡಿದ್ದಾರೆ.

ವಿಶೇಷ ಅರ್ಥ- ಬಳಿತ್ಥಾ ಸೂಕ್ತಾದಿಗಳಿಂದ ಮುಖ್ಯಪ್ರಾಣನಿಗೆ ೩ ಅವತಾರಗಳು ಎಂಬುದನ್ನು ವಾದೀಂದ್ರ ಸ್ವಾಮಿಗಳು ಎತ್ತಿ ಹಿಡಿದು ತೋರಿಸಿದ್ದಾರೆ. " ಜ್ಞಾನೇವಿರಾಗೇ ಹರಿಭಾಕ್ತಿಭಾವೇ ಧೃತಿಸ್ಥಿತಿಪ್ರಾಣ ಬಲೇಶುಯೋಗೆ । ಬುದ್ಧೌ ಚ ನಾನ್ಯೋ ಹನುಮತ್ಸಮಾನಃ ಪುಮಾನ್ ಕದಾಚಿತ್ ಕ್ವಚ್ ಕಶ್ಚನೈವ ।। " ಎಂಬ ಶ್ಲೋಕಕ್ಕೆ ಅನುಸಾರವಾಗಿ ಮೂರು ಅವತಾರಗಳ ವಿಶೇಷಣವನ್ನು ನೀಡಿದ್ದಾರೆ.





No comments:

Post a Comment

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...