ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕೃತಿ.
ಶ್ರೀರಾಯರೊಂದಿಗೆ ಬಾಲ್ಯದಲ್ಲಿ ಜೊತೆಜೊತೆಗೇ ಅಧ್ಯಯನ ನಡೆಸಿದವರೂ, ಸ್ವತಃ ಶ್ರೀರಾಯರ ಪೂರ್ವಾಶ್ರಮ ಅಕ್ಕ ವೆಂಕಮ್ಮನವರ ಮಕ್ಕಳೂ, ಶ್ರೀರಾಘವೇಂದ್ರಸ್ವಾಮಿಗಳಿಗೆ ಆರಂಭಿಕಗ್ರಂಥಗಳನ್ನು ಪಾಠ ಹೇಳಿದ ಶ್ರೀಲಕ್ಷ್ಮೀನರಸಿಂಹಾಚಾರ್ಯರ ಪುತ್ರರೂ ಆದ ಶ್ರೀನಾರಾಯಣಾಚಾರ್ಯರೇ ಈ ಗ್ರಂಥದ ಕರ್ತೃಗಳು. ( ಶ್ರೀರಾಯರ ಪೂರ್ವಾಶ್ರಮ ಸೋದರಳಿಯ).
ದ್ವಿತೀಯಸರ್ಗದಲ್ಲಿ ಸ್ವತಃ ಶ್ರೀಮನ್ಮಧ್ವಾಚಾರ್ಯರೇ ಮೂಲರಾಮದೇವರ ಬಗ್ಗೆ ತಮ್ಮ ಶಿಷ್ಯರಿಗೆ ನೀಡಿದ ಉಪದೇಶಾತ್ಮಕವಾದ ಆದೇಶವನ್ನು ದಾಖಲಿಸಿದ್ದಾರೆ.
ಸಾ ಯತ್ರ ರಾಮಪ್ರತಿಮಾಸ್ತಿ ತತ್ರ
ಚತುಃ ಪುಮರ್ಥೀ ಸತತಂ ಚಕಾಸ್ತಿ |
ಆದಿಶ್ಯ ಚೈವಂ ಗುರುಣೈವ ದತ್ತಾಮ್
ಅಥಾರ್ಚಯತ್ತಾಮನಿಶಂ ಯಮೀಂದ್ರಾಃ ||
- ಶ್ರೀರಾಘವೇಂದ್ರವಿಜಯ
ಈ ಮಹದ್ಗ್ರಂಥಕ್ಕೆ ಶ್ರೀರಾಘವೇಂದ್ರತೀರ್ಥರ ಪೂರ್ವಾಶ್ರಮ ಸದ್ವಂಸಜಾತರೂ, ಶ್ರೀಧೀರೇಂದ್ರತೀರ್ಥರ ಮಕ್ಕಳಾದ, ಶ್ರೀಸುಜ್ಞಾನೇಂದ್ರತೀರ್ಥರ ಪಿತೃಪಾದರೂ ಆದ, ಸಾತ್ವಿಕರೂ ಮಹಾನ್ ವಿದ್ವಾಂಸರೂ ಆದ ಶ್ರೀರಾಮಾಚಾರ್ಯರು 'ಬಾಲಬೋಧಿನಿ' ಎಂಬ ವ್ಯಾಖ್ಯಾನವನ್ನು ರಚಿಸಿದ್ದಾರೆ.
ಅಲ್ಲಿ ಈ ಶ್ಲೋಕವನ್ನು ವ್ಯಾಖ್ಯಾನಿಸುವಾಗ,
"ಸಾ ರಾಮಪ್ರತಿಮಾ ಯತ್ರ ವರ್ತತೇ, ತತ್ರ ಚತುರ್ಣಾಂ ಪುಮರ್ಥಾನಾಂ ಸಮಾಹಾರಾಃ ಅನವರತಂ ದೀಪ್ಯಮಾನಾ ಭವತಿ | ಏವಂ ಪ್ರಕಾರೇಣ "ಆಚಾರ್ಯೇಣ" ಆಜ್ಞಪ್ಯ ತೇನ ದತ್ತಾಂ ತಾಂ ಪ್ರತಿಮಾಂ ಶ್ರೀಮದಾಚಾರ್ಯಾಣಾಂ ಶಿಷ್ಯಪ್ರಶಿಷ್ಯಸನ್ಯಾಸಿನಃ ಪೂಜಾಂ ಕೃತವಂತಃ ||" - ಬಾಲಬೋಧಿನಿವ್ಯಾಖ್ಯಾನಮ್
ಎಂದು, ಈ ಮೂಲರಾಮಪ್ರತಿಮೆಯು ಎಲ್ಲಿರುತ್ತದೆಯೋ ಅಲ್ಲೊ ಧರ್ಮಾರ್ಥಕಾಮಮೋಕ್ಷಾಖ್ಯ ಚತುರ್ವಿಧ ಪುರುಷಾರ್ಥಗಳೂ ಸ್ಫುಟವಾಗಿ ಶೋಭಿಸುವವು ಎಂದು ಮಹಿಮೋಪದೇಶವನ್ಮು ಮಾಡಿದ್ದಾರೆ. ಆ ಪ್ರಕಾರವಾಗಿಯೇ ಶ್ರೀಮದಾಚಾರ್ಯರಿಂದಲೇ ಆಜ್ಞಪ್ತರಾದ ಅವರ ಶಿಷ್ಯಪ್ರಶಿಷ್ಯರು ಮೂಲರಾಮಾರ್ಚನೆ ಮಾಡುತ್ತ ಬಂದಿದ್ದಾರೆ ಎಂದು ತಿಳಿಸಿದ್ದಾರೆ.
No comments:
Post a Comment