Wednesday 9 August 2023

ಶ್ರೀವರದೇಂದ್ರ ಗುರುವೈಭವ - ಶ್ರೀವರದೇಂದ್ರರ ಪುಣೆ ದಿಗ್ವಿಜಯಯಾತ್ರೆಯ ಪ್ರಸಂಗ

ಶ್ರೀಶ್ರೀವರದೇಂದ್ರತೀರ್ಥ ಗುರುಭ್ಯೋ ನಮಃ 


ವಾದೇ ವಿಜಯಶೀಲಾಯ ವರದಾಯ ವರಾರ್ಥಿನಾಮ್ । 

ವದಾನ್ಯಜನಸಿಂಹಾಯ ವರದೆಂದ್ರಾಯ ತೇ ನಮಃ ।। 


    ಸನ್ಯಾಸಿಗಳ  ಕರ್ತವ್ಯ ಪರಮತಖಂಡನಪೂರ್ವಕ-ಸ್ವಮತಪ್ರತಿಷ್ಠಾಪನವೇ ಆಗಿದೆ. ಶ್ರೀವರದೇಂದ್ರ ಗುರುರಾಜರು ಇದನ್ನು ಮೈಗೂಡಿಸಿಕೊಂಡು ಸದ್ವೈಷ್ಣವಸಿದ್ಧಾಂತಪ್ರತಿಷ್ಠಾಪನಾಚಾರ್ಯ ಎನ್ನುವ ಬಿರುದಿಗೆ ಅನ್ವರ್ಥದಂತಿದ್ದವರು.


ಶ್ರೀವರದೇಂದ್ರತೀರ್ಥರ ಮೂಲ ವೃಂದಾವನ, ಪುಣೆ 

ಶ್ರೀವರದೇಂದ್ರರ ಸನ್ನಿಧಿಯಲ್ಲಿ  ಪ್ರಸ್ತುತ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರತೀರ್ಥರು 


    ಅವರು ಒಮ್ಮೆ ಪುಣ್ಯನಗರಿ ( ಪುಣೆ) ಗೆ ದಿಗ್ವಿಜಯ ಮಾಡಿಸಿದರಂತೆ. ಅಲ್ಲಿನ ದಿಗ್ವಿಜಯ ಯಾತ್ರೆ ಶ್ರೀವರದೇಂದ್ರರು ಸಾಧಿಸಿದ ದಿಗ್ವಿಜಯಗಳಲ್ಲಿ ಅತ್ಯಂತ ಪ್ರಸಿದ್ಧ ಜನನಿತವಾದ ದಿಗ್ವಿಜಯ.  ಇದನ್ನು ಶ್ರೀವದೇಂದ್ರರನ್ನು ಸಾಕ್ಷಾತ್ತಾಗಿ ಕಂಡ, ಅವರ ಅನುಗ್ರಹ ಪಡೆದ ಧನ್ಯಾತ್ಮರಾದ ಶ್ರೀಪ್ರಾಣೇಶದಾಸರು ಹಾಗೂ ಮುಂದಿನ ಪೀಳಿಗೆಯವರಾದ ಶ್ರೀವರದೇಶವಿಠಲರು ದಾಖಲಿಸಿದ್ದಾರೆ. ಶ್ರೀವರದೇಶದಾಸರಂತೂ ಈ ಸಂಪೂರ್ಣ ಘಟನೆಯ ಚಿತ್ರಣವನ್ನೇ ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ್ದಾರೆ.

"ಇನಿತು ಪೇಳಿ ಸಂಸೇವಿತರಾಗುತ ಮುನಿಗಳು ತೆರಳಿದರು ಹರುಷದಲಿ ।। 

ಪುಣೆಯ ಸೇರಿದರು ದುರ್ವಾದಿಯ ಮತವನು ದಿಗ್ವಿಜಯಿಪ ಇಚ್ಛೆಯಲೀ ।। " 

ಎಂದು ಶ್ರೀವರದೇಂದ್ರ ಪುಣೆ ದಿಗ್ವಿಜಯಯಾತ್ರೆಯ ಪ್ರಸಂಗವನ್ನು ಉಲ್ಲೇಖಿಸಿದ್ದಾರೆ. 

ಇದು ಕೇವಲ ದಂತೆಕಥೆಯಾಗಿರದೇ ಇತಿಹಾಸದ ಪುಟಗಳಲ್ಲಿ ದಾಖಲಾದ ನಿಚ್ಚಳ ಚರಿತ್ರೆಯಾಗಿದೆ. ಇತಿಹಾಸದ ಪುಟಗಳಲ್ಲಿ ಹೊಕ್ಕು ನೋಡಿದಾಗ, ಈ ಪ್ರಭುಣೆ ರಾಮಶಾಸ್ತ್ರಿಗಳ ಬಗ್ಗೆ ಹಲವು ಆಯಾಮಗಳಲ್ಲಿ ಮಾಹಿತಿ ದೊರೆಯುತ್ತದೆ.  

ಈ ಪ್ರಭುಣೆ ರಾಮಶಾಸ್ತ್ರಿಗಳು ೧೮ನೇ ಶತಮಾನದ ಉತ್ತರಾರ್ಧದ ಕಾಲಘಟ್ಟದಲ್ಲಿ ಮರಾಠಾ ಸಾಮ್ರಾಜ್ಯದ ಪೇಶ್ವೆಯವರ ಮುಖ್ಯ ನ್ಯಾಯಾಧೀಶರಾಗಿದ್ದವರು ( ಅಥವಾ ಪಂತ್ ನ್ಯಾಯಾಧೀಶ್).


ಮರಾಠಾ ಸಾಮ್ರಾಜ್ಯವು ಭಾರತಖಂಡವನ್ನೇ ಹಬ್ಬಿದ ಉತ್ತುಂಗದಲ್ಲಿತ್ತು. ಎರಡನೇ ಶಾಹೂ ಮಹಾರಾಜರು ಮರಾಠಾ ಸಾಮ್ರಾಜ್ಯದ ಅಧಿಪತಿಗಳಾಗಿದ್ದ ಕಾಲ. ಅದಾಗಲೇ ಆ ಘಟ್ಟದಲ್ಲಿ ಮರಾಠಾ ಸಾಮ್ರಾಜ್ಯ  ಪೇಶ್ವೆಗಳ ಕೈಹಿಡಿತದಲ್ಲಿ ಬರಹತ್ತಿತ್ತು. ಪೇಶ್ವೆಗಳ ಆಂತರಿಕ ದಾಯಾದಿ ಕಲಹದಲ್ಲಿ ಚಿಕ್ಕವಯಸ್ಸಿನ ಪೇಶ್ವೆನಾರಾಯಣರಾಯನನ್ನು, ಅವನ ಚಿಕ್ಕಪ್ಪನೇ ಆದ ರಘುನಾಥರಾಯ ಹತ್ಯೆಮಾಡುತ್ತಾನೆ. ರಾಮಶಾಸ್ತ್ರಿಗಳು ನ್ಯಾಯದ ವಿಚಾರದಲ್ಲಿ ಎಂತಹ ದೀಕ್ಷೆ ಉಳ್ಳವರಾಗಿದ್ದವರು ಎಂದರೇ ನ್ಯಾಯಾಧೀಶರಾಗಿ ಪ್ರಬಲನಾದ ಪೇಶ್ವೆ ರಘುನಾಥರಾಯ ಮಾಡಿದ ಈ ಕಾರ್ಯಕ್ಕೆ "ಮರಣದಂಡನೆಯೇ  ಸೂಕ್ತ" ಎಂದು ನ್ಯಾಯದ ಪರವಾಗಿ ನಿಂತು ದಿಟ್ಟತನದ ತೀರ್ಪು ನೀಡಿದವರು. 

ರಾಮಶಾಸ್ತ್ರಿಗಳು ಮಹಾರಾಷ್ಟ್ರದ ಸತಾರ ಹತ್ತಿರದ ಸಂಗಮ ಮಾಹುಲಿ ಎಂಬ ಸ್ಥಳದ  ದೇಶಸ್ಥ ಋಗ್ವೇದಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು. ಪುಣೆಯಲ್ಲಿಯೇ ಸರ್ವಶಾಸ್ತ್ರವಿಶಾರದ ಎಂದು ಸರ್ವಮಾನ್ಯರಾಗಿದ್ದವರು ರಾಮಾಶಾಸ್ತ್ರಿಗಳು. ಪೇಶ್ವೇಗಳ ಆಸ್ಥಾನದಲ್ಲಿ ಪ್ರಾಮಾಣಿಕತೆ, ಬದ್ಧತೆಗಳಿಗೆ ಖ್ಯಾತನಾಮರಾದವರು. ಪೇಶ್ವೇಗಳು ಸುಮ್ಮನೇ ಕಾರಣವಿಲ್ಲದೇ ಉಡುಗೊರೆಗಳನ್ನು ನೀಡಿದರೇ ಅದನ್ನು ಮುಲಾಜಿಲ್ಲದೇ ನಿರಾಕರಿಸುತ್ತಿದ್ದರಂತೆ. ರಾಜರಿಂದ ಅಧಿಕೃತ ನಿವಾಸ ಕೊಡುವುದಾಗಿ ಹೇಳಿದರೂ ಅದನ್ನು ನಿರಾಕರಿಸಿ, ತಮ್ಮ ಪೂರ್ವಿಕರಿದ್ದ ಮನೆಯಲ್ಲಿಯೇ ಪ್ರಾಮಾಣಿಕತೆಯಿಂದ ವಾಸಮಾಡುತ್ತಿದ್ದರಂತೆ. 


ಶ್ರೀವರದೇಂದ್ರರೊಡನೆ ವಾದ ಮಾಡಿದ ಅದ್ವೈತ ಪಂಡಿತರಾದ ಶ್ರೀಪ್ರಭುಣೆ ರಾಮಶಾಸ್ತ್ರಿಗಳು 

ಅದ್ವೈತ ವೇದಾಂತದ ಮಹಾನ್ ವಿದ್ವಾಂಸರು ಎಂದು ಗುರುತಿಸಲ್ಪಟ್ಟಿದ್ದರು.  ವೇದಗಳ, ಉಪನಿಷತ್ತುಗಳ ಹಾಗು ಪುರಾಣಗಳಲ್ಲಿ ಅಧಿಕಾರಯುತ  ಪರಿಣಿತಿಯೊಂದಿಗೆ  ರಾಜನೀತಿ, ಅರ್ಥಶಾಸ್ತ್ರ, ಕಾನೂನು ಹಾಗೂ ಆಡಳಿತಾತ್ಮಕ ವಿಷಗಳಲ್ಲಿ ಪರಿಣಿತಿ ಹೊಂದಿದ್ದರೆಂದು, ಸಂಸ್ಕೃತ, ಮರಾಠಿ, ಹಿಂದಿ, ಉರ್ದು ಹಾಗು ಇಂಗ್ಲಿಷ್ ಭಾಷೆಯಲ್ಲೂ ಅವರಿಗೆ ಹಿಡಿತವಿದ್ದಿತು ಎಂದು ಇತಿಹಾಸದ ದಾಖಲೆಗಳಿಂದ  ತಿಳಿದು ಬರುತ್ತದೆ.  ಭಾರತಖಂಡದ ಯಾರೇ ವಿದ್ವಾಂಸರಾಗಿರಲಿ, ಯಾವ ಶಾಸ್ತ್ರದಲ್ಲೇ ಇರಲಿ ಪುಣೆಗೆ ಬಂದರೇ ವಾಕ್ಯಾರ್ಥಕ್ಕೆ ಶಾಸ್ತ್ರಿಗಳ ಆಹ್ವಾನ ಸಿದ್ಧವಿರುತ್ತಿತ್ತಂತೆ. ಸೌಹಾರ್ದಯುತವಾಗಿ ವಾದಕ್ಕೆ ಆಹ್ವಾನಿಸಿ, ಚರ್ಚೆಯಲ್ಲಿ ಪಾಲ್ಗೊಂಡು ವಿಜಯಶೀಲರಾಗುತ್ತಿದ್ದ ಶಾಸ್ತ್ರಿಗಳ ಮೇಲೆ ಪೇಶ್ವೇಗಳಿಗೆ ಅಪಾರ ಗೌರವ. ಇವರ ವ್ಯಕ್ತಿತ್ವದ ಕುರಿತು ಹೇರಳ ದಾಖಲೆಗಳು ದೊರೆಯುತ್ತವೆ. ಆಧುನಿಕ ಯುಗದಲ್ಲಿ ಇವರ ಕುರಿತು ಅನೇಕ ಹೊತ್ತಿಗೆಗಳು ಬಂದಿವೆಯಲ್ಲದೇ, ಮರಾಠಿ ಭಾಷೆಯಲ್ಲಿ ಚಲನಚಿತ್ರವೂ ಇದೆ. ಅಂತಹ ಪ್ರಾಭಾವಿಗಳು ಶಾಸ್ತ್ರಿಗಳು. 

ಇಂತಹ ಪ್ರಕಾಂಡ ಪಂಡಿತಪ್ರತಿವಾದಿಗಳಾದ ರಾಮಶಾಸ್ತ್ರಿಗಳ ಬಗ್ಗೆ ಉಲ್ಲೇಖಿಸುವಾಗ ಶ್ರೀವರದೇಶದಾಸರ ಪದಗಳು ಹೀಗಿವೆ, 

ರಾಮಶಾಸ್ತ್ರಿ ಎಂಬಾ ಮಹಾವಾದಿಯು । ತಾ ಮದಗಜದಂತಿರುತಿಹನು ।। 

ಶ್ರೀಮಂತರ ಆಶ್ರಯದಿ ತನ್ನ ಸರಿ । ಭೂಮಿಯೊಳಿಲ್ಲೆಂದರಿತಿಹನು ।। 


ಶ್ರೀವರದೇಂದ್ರರು ಬಂದಿರುವ ವಾರ್ತೆಯನ್ನು ತಿಳಿದ ಪೇಶ್ವೆಗಳು ಶ್ರೀಗಳನ್ನು ಕರೆಸಿ ಶ್ರೀಮದಾಚಾರ್ಯರ ಸಂಸ್ಥಾನಕ್ಕೆ ಸಲ್ಲುವ ಎಲ್ಲ ಗೌರವಗಳನ್ನು ಮಾಡಿಸಿ, ತನ್ನ ಮಂದಿರದಲ್ಲೇ ಇರಬೇಕು ಎಂದು ಪ್ರಾರ್ಥಿಸಿಕೊಂಡನು. ಆಗ ಶಾಸ್ತ್ರಿಗಳು ಶ್ರೀವರದೇಂದ್ರ ವಿಲಕ್ಷಣ ವಿದ್ಯಾಸಂಪತ್ತನ್ನು ಕೇಳಿ ತಿಳಿದವರಾಗಿ ಶ್ರೀಗಳವರೊಡನೆ ವಾಕ್ಯಾರ್ಥ ಮಾಡಲು ಅಪೇಕ್ಷಿಸಿ ಆಹ್ವಾನಿಸಿದರು. 


ಆಗ ಶ್ರೀಮದಾಚಾರ್ಯರ ಸಿದ್ಧಾಂತದ ಮೇಲೆ ಅಚಲ ಅಬೇಧ್ಯ ನಿಷ್ಠೆಯನ್ನಿಟ್ಟಿದ್ದ ಶ್ರೀಪಾದಂಗಳವರು ನಸು ನಕ್ಕು, 

"ಶಪಥವ ಮಾಡುವೆ ವಿಪರೀತ ಜನರೆಲ್ಲ ಕೇಳಿರಲ್ಲ || 

ಸುಪಥವ ಶಾಸ್ತ್ರದಿ ಸಾಧಿಸಿ ಕೊಡುವೆವು ಸಂದೇಹವಿನಿತಿಲ್ಲಾ ||

ಸಕಲಶೃತಿಸ್ಮೃತಿಸಿದ್ಧಾಂತವಿದೆ ಸತ್ಯ ಕೇಳಿರೆಲ್ಲ ।।

ಯುಕುತಿಗೆ ಅನುಕೂಲವಾದ ತತ್ತ್ವವಿದು ಸಟಿಯು ಅಲ್ಲಾ ।।


ಎಂದು ಘರ್ಜಿಸಿದರಂತೆ. ಅದು 'ವದಾನ್ಯಜನಸಿಂಹರಾದ' ಶ್ರೀವರದೇಂದ್ರಗುರುಸಾರ್ವಭೌಮರ ವ್ಯಕ್ತಿತ್ವ. ಮತ್ತೆ ಶ್ರೀಮದಾಚಾರ್ಯರ ಪರಿಶುದ್ಧ ತತ್ವದ ಹಿರಿಮೆಯನ್ನು,


" ಮಧ್ವಶಾಸ್ತ್ರವೇ ಶಾಸ್ತ್ರ ಮಧ್ವರಾಯನೇ ಗುರು ಸತ್ಯಸತ್ಯಾ । । " ಎಂದು ಉದ್ಗರಿಸಿದರಂತೆ.


ಹೀಗೆ ಶ್ರೀಮದಾಚಾರ್ಯರ ಸಿದ್ಧಾಂತದ ಪ್ರಾಮಾಣ್ಯವನ್ನು ಸಾರಿ, 

 

"ಈ ಸುವಾದದಿ ಪರಾಜಿತರಾದರೇ ನಾವು ಕೇಳಿ ಬ್ಯಾಗ

ಲೇಸು ವೈಭವ ಸನ್ಯಾಸಸಹಿತವಾಗೇ ತ್ಯಜಿಪೆವೀಗ || 


ವರದೇಶವಿಠಲನ ಕರುಣದಿ ದುರ್ಮತದ ಮೂಲವನ್ನೂ || 

ಹರಿದು ಬಿಡುವೆವು ವಾದಿಯ ಬರಹೇಳು ಸಭೆಯೊಳಿನ್ನು|| " ಎಂದು,


ಈ ವಾದದಲ್ಲಿ ಪರಾಜಿತರಾದರೇ  ಈ ಸನ್ಯಾಸವನ್ನು, ಸಂಸ್ಥಾನಾಧಿಪತ್ಯವನ್ನು ತ್ಯಜಿಸಿ ತೆರಳುತ್ತೇವೆ ಇದೆ ನಾವು ಕಟ್ಟುವ ಪಣ ಎಂದು ಘರ್ಜಿಸಿದರಂತೆ. ಅಬ್ಬಾ! ಅದೆಂತಹ ಗುರುಭಕ್ತಿ! ಅದೆಂತಹ ಸಿದ್ಧಾಂತ ನಿಷ್ಠೆ!


ಇದನ್ನು ಕೇಳಿ ಪ್ರಕಾಂಡ ಪಂಡಿತರಾದ ರಾಮಶಾಸ್ತಿಗಳು, ಮಹಾರಾಜನ ಮುಂದೆ ತೆರಳಿ ತಾನು ಈ ವಾದದಲ್ಲಿ ಸೋತರೆ ಈ ಸಂಸ್ಥಾನವನ್ನು ತ್ಯಜಿಸಿ ದೇಶಾಂತರದಲ್ಲಿ ವಾಸಮಾಡುತಲೇ ಶೇಷಾಯುಷ್ಯವನ್ನು ಕಳೆಯುವೆನು. ಅಷ್ಟೇ ಅಲ್ಲ! ನಾನು ಸೋತರೆ ನನ್ನ ಈ ಭವ್ಯ ಮನೆಯು ಈ ಮುನಿಗಳ ಮಠವಾಗಲಿ ಎಂದನಂತೆ.


ನಂತರ ಹಲವು ದಿನಗಳ ಕಾಲ ದ್ವೈತ- ಅದ್ವೈತದ ಚರ್ಚೆ ನಡೆಯಿತು, ಪುಣೆ ನಗರದಲ್ಲಿ ವಿದ್ವನ್ಮಣಿಗಳ ವಾಗ್ಝರಿ ಹರಿಯಿತು. ಇದೇ ವಾದದಲ್ಲಿ ಶ್ರೀಗಳವರ ಪಕ್ಷದಲ್ಲಿ ಶ್ರೀಜಯರಾಮಾಚಾರ್ಯರು ( ಪೂರ್ವಾಶ್ರಮದ ಶ್ರೀಧೀರೇಂದ್ರತೀರ್ಥರು) ಭಾವಹಿಸಿ, ಶ್ರೀಗಳ ಅಪ್ಪಣೆ ಪಡೆದು 'ಇದಕ್ಕೆ ಶ್ರೀಗಳ ಅವಶ್ಯಕತೆ ಇಲ್ಲ, ಈ ವಾದಸರಣಿಯನ್ನು ಅವರ ಅನುಗ್ರಹದಿಂದ ನಾವೇ ವಿಮರ್ಶಿಸುತ್ತೇವೆ" ಎಂದು ಪ್ರತಿಪಕ್ಷಿಗಾಲ ವಾಕ್ಪ್ರಹಾರಗಳಿಗೆ ತಕ್ಕ ಉತ್ತರ ನೀಡಿ ಆಚಾರ್ಯರ ಸಿದ್ಧಾಂತದವನ್ನು ಸಮರ್ಥಿಸ ಹತ್ತಿದರು. ಆಗ ದಿನ ಉರುಳಿದಂತೆ, ಶಾಸ್ತ್ರಿಗಳು ನಾನು ಕೇವಲ 'ಶ್ರೀಗಳ ಜೊತೆಗೆ ಮಾತ್ರ ವಾದ ಮಾಡುವೆ' ಇತರರು ಮಧ್ಯ ಪ್ರವೇಶಿಸುವಂತಿಲ್ಲ ಎಂದು ಹೇಳಿ, ಪೇಶ್ವೆಗಳನ್ನೇ ಮಧ್ಯಸ್ಥಿಕೆ ವಹಿಸುವಂತೆ ಮಾಡಿದರಂತೆ. ಆಗ ಶ್ರೀವರದೇಂದ್ರಗುರುರಾಜರು ಲೀಲಾಜಾಲವಾಗಿ ಪ್ರತಿಪಕ್ಷಿಗಳ ವಾದಸರಣಿಯನ್ನು ಖಂಡಿಸುತ್ತಾ ನಡೆದರು. ಹಲವು ದಿನಗಳ ಬಳಿಕ ಶಾಸ್ತ್ರಿಗಳಿಗೆ ಸೋಲು ಸನ್ನಿಹಿತವಾಯಿತು ಎಂದು ತಿಳಿಯಿತು, ಮೌನಕ್ಕೆ ಶರಣಾದರು. ಪೇಶ್ವೇಗಳ ಮಧ್ಯಸ್ಥಿಕೆಯಲ್ಲಿ ಶ್ರೀವರದೇಂದ್ರಸ್ವಾಮಿಗಳ ದಿಗ್ವಿಜಯವನ್ನು ಉದ್ಘೋಷಿಸಲಾಯಿತು. 


ಕೊಟ್ಟ ಮಾತಿಗೆ ತಪ್ಪದಂತೆ ನಿಷ್ಠರಾದ ಶಾಸ್ತ್ರಿಗಳು ವಾದದಲ್ಲಿನ ಸೋಲನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡು, ಶ್ರೀವರದೇಂದ್ರಸ್ವಾಮಿಗಳವರ ಮಹಾವಿದ್ವತ್ತಿಗೆ ತಲೆದೂಗಿ, ಪಣದಂತೆ ತಮ್ಮ ಸ್ವಗ್ರಹವನ್ನು ಶ್ರೀಗಳಿಗೆ ಬಿಟ್ಟುಕೊಟ್ಟು ಶಿರಸಾಷ್ಟಾಂಗಕ್ಕೆರಗಿದರು. 


ಇದನ್ನೇ ಶ್ರೀವರದೇಶವಿಠಲರು,


' ರಾಮನಗ್ರಹವಿ ರಾಮಗಾಯಿತು । 

ಆ ರಾಮಗೆ ವಿರಾಮವಾಯಿತು ।।' ಎಂದು, ದಾಖಲಿಸಿದ್ದಾರೆ. 


ಇವತ್ತು ಶ್ರೀವರದೇಂದ್ರ ಮಹಾಸ್ವಾಮಿಗಳವರ ಆ ಐತಿಹಾಸಿಕ ದಿಗ್ವಿಜಯದ ದ್ಯೋತಕವಾಗಿ ಆ ಮಠವು ಇರುವುದನ್ನು ಕಾಣಬಹುದು. ಮುಂದೆ ಶ್ರೀವರದೇಂದ್ರಗುರುರಾಜರು ಅಲ್ಲಿಯೇ ವೃಂದಾವನಪ್ರವೇಶ ಮಾಡಿ, ಇಂದಿಗೂ ಬಂದ ಭಕ್ತರ ಇಷ್ಟಾರ್ಥಗಳ ಕರುಣಿಸುತ್ತ ವಿರಾಜಿಸಿದ್ದಾರೆ. 


No comments:

Post a Comment

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...