MAHAN MADHWA YATIGALU

                             ||   श्री पद्मनाभ गुरुभ्यो नमः ||
                 
                             ||  श्री १००८   श्री पद्मनाभ तीर्थरु ||
ಕಾಲ : ೧೩೧೭-೧೩೨೪ 
ಆಶ್ರಮ ಗುರುಗಳು : ಶ್ರೀಮನ್ ಮಧ್ವಾಚಾರ್ಯರು 
ಆಶ್ರಮ ಶಿಷ್ಯರು : ಶ್ರೀ ನರಹರಿ ತೀರ್ಥರು 
ಪೂರ್ವಾಶ್ರಮದ ಹೆಸರು : ಶ್ರೀ ಶೋಭನ ಭಟ್ಟರು 
ಆರಾಧನಾ ತಿಥಿ : ಕಾರ್ತೀಕ ಬಹುಳ ಚತುರ್ದಶಿ 
ವೃಂದಾವನ ಸ್ಥಳ :  ನವವೃಂದಾವನ [ ಆನೆಗೊಂದಿ ]

ಚರಮ  ಶ್ಲೋಕ :  
     पूर्णप्रज्ञकृतं भाष्यमादौ तद्भावपूर्वकम् ।
            योव्याकरोन्नमस्तस्मै पद्मनाभाख्ययोगिने ॥


              ಪೂರ್ಣಪ್ರಜ್ಞಕೃತಂಭಾಷ್ಯಮಾದೌ ತದ್ಭಾವಪೂರ್ವಕಮ್ |
                     ಯೋ ವ್ಯಾಕರೋ ನಮಸ್ತ್ಸಸ್ಮೈ ಪದ್ಮನಾಭಾಖ್ಯ ಯೋಗಿನೇ || 

ಇತಿಹಾಸ :
 ಸನಕಾದಿಗಳಿಂದ ನಡೆದುಬಂದು ಶ್ರೀ ಜಗದ್ಗುರು ಮಧ್ವಾಚಾರ್ಯರಿಂದ ಪುನರುತ್ಥಾನಗೊಂಡು ಬಂದ  ಸದ್ವೈಷ್ಣವ ಸಿದ್ಧಾಂತವನ್ನು ನಡೆಸಿಕೊಂಡು ಹೋಗು ವಂತಹ ಮಹಾಭಾರವನ್ನು ಶ್ರೀ ಮಧ್ವರು ಉಡುಪಿ ಅಷ್ಠ ಪೀಠಾಧಿಪತಿಗಳೊಡನೆ  ಶ್ರೀ ಪದ್ಮನಾಭ ತೀರ್ಥರಿಗೆ ವಹಿಸಿಕೊಟ್ಟರು. ಶ್ರೀ ಪದ್ಮನಾಭ ತೀರ್ಥರ ಪೂರ್ವಾಶ್ರಮದ ಹೆಸರು ಶ್ರೀ ಶೋಭನ ಭಟ್ಟರು.ಇವರ ಸ್ಥಳ ಗೋದಾವರಿ ತೀರ.ಇವರು ಒರಂಗಲ್ಲು ಸಂಸ್ಥಾನದ ಆಸ್ಥಾನ ಪಂಡಿತರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹರಿಹರ-ಬುಕ್ಕ ರೂ ಕೂಡ ಇವರಲ್ಲಿ ಗೌರವಾದಿಗಳನ್ನೂ ಇಟ್ಟುಕೊಂಡಿದ್ದರು.ಇವರು ತುಂಬಾ ಮೇಧಾವಿಗಳು ಹಾಗು ವರ್ಚಸ್ವಿಗಳು. ಇವರು ಆಚಾರ್ಯರೊಡನೆ ದ್ವೈತಾದ್ವೈತದ ವಾದದಲ್ಲಿ ಪಾಲ್ಗೊಂಡು ವಾದದಲ್ಲಿ ಸೋತು, ಶ್ರೀ ಮಧ್ವರಿಗೆ ತಲೆ ಬಾಗಿ ಅವರಲ್ಲಿ ಶಿಷ್ಯತ್ವ ಬೇಡಿ ಬಂದರು. ಇವರು ಆಚಾರ್ಯರೊಡನೆ ಹಲವು ಕಾಲ ಇದ್ದು,ಸುಮಾರು ೧೨೬೩( 1263)ರಲ್ಲಿ ಸಂನ್ಯಾಸ ಸ್ವೀಕರಿಸಿದರು.ಅಲ್ಲಿಂದ ಶ್ರೀಗಳ ಕೀರ್ತಿ ಎಲ್ಲೆಡೆಯೂ ಹಬ್ಬಿತು. ಇವರು ದ್ವೈತ ಸಿದ್ಧಾಂತದ ಪ್ರಚಾರದ ಜೊತೆಗೆ ಅನೇಕ ಗ್ರಂಥಗಳನ್ನೂ ರಚಿಸಿದ್ದಾರೆ. ಇವರು ಆಚಾರ್ಯರ ಭಾಷ್ಯಕ್ಕೆ ಸತ್ತರ್ಕರತ್ನಾವಳಿ  ಎಂಬ ವ್ಯಾಖ್ಯಾನವನ್ನು, ಅನುವ್ಯಖ್ಯಾನಕ್ಕೆ ಸಂನ್ಯಾಯ ರತ್ನಾವಳಿ  ಎಂಬ ವ್ಯಾಖ್ಯಾನವನ್ನು ರಚಿಸಿದ್ದಾರೆ. ಅಲ್ಲದೆ ಆನಂದಮಾಲಾ,ವಾಯುಲೀಲ ವಿಸ್ತರಣದ ೮ ಸರ್ಗಗಳನ್ನು ರಚಿಸಿದ್ದಾರೆ. ಮಾಯವಾದ ಖಂಡನ, ಉಪಾಧಿ ಖಂಡನಕ್ಕೂ ವ್ಯಾಖ್ಯಾನವನ್ನು ಬರೆದಿದ್ದಾರೆ.
ಹೀಗೆ ಪದ್ಮನಾಭ ತೀರ್ಥರು ಸುಮಾರು ೭ ವರ್ಷಗಳ ಕಾಲ ವೇದಾಂತ ಸಾಮ್ರಾಜ್ಯ ವನ್ನು ಆಚಾರ್ಯರ ನಂತರ ಆಳಿ. ಶ್ರೀ ಬ್ರಹ್ಮ ಕರಾರ್ಚಿತ ಮೂರ್ತಿ ಶ್ರೀ ಮೂಲರಾಮದೇವರನ್ನು ಅರ್ಚಿಸಿ, ಮಹಾ ಸಂಸ್ಥಾನವನ್ನು ಶ್ರೀಮದಾಚಾರ್ಯರ ಆದೇಶದಂತೆ ಅವರಿಂದಲೇ ಸನ್ಯಾಸ ಪಡೆದ  ಶ್ರೀ ನರಹರಿ ತೀರ್ಥರಿಗೆ ಒಪ್ಪಿಸಿ, ೧೩೨೪(1324) ರಲ್ಲಿ ನವವೃಂದಾವನ (ಆಗಿನ್ನೂ ಆನೆಗೊಂದಿ) ದಲ್ಲಿ ವೃಂದಾವನಸ್ಥರಾದರು. 

                                                              ಲೇಖಕರು- ಸಮೀರ ಜೋಷಿ
                                                                                                     ಆಧಾರ - ಗುರುಚರಿತೆ ಹಾಗು ಅಂತರ್ಜಾಲ 
                   || नरहरि तीर्थ गुरुभ्यो नाम: || 
                        || श्री १००८ श्री नरहरि तीर्थरु || 
ಕಾಲ : 1324 - 1333 
 ಆಶ್ರಮ ಗುರುಗಳು : ಶ್ರೀ ಮಧ್ವಾಚಾರ್ಯರು 
  ಹಿಂದಿನ ಯತಿಗಳು :      ಶ್ರೀ ಪದ್ಮನಾಭ ತೀರ್ಥರು
 ಆಶ್ರಮ ಶಿಷ್ಯರು : ಶ್ರೀ ಮಾಧವ ತೀರ್ಥರು
 ಪೂರ್ವಾಶ್ರಮದ ಹೆಸರು : ಶ್ರೀ ಶರ್ಮ ಶಾಸ್ತ್ರಿಗಳು
 ಆರಾಧನಾ ತಿಥಿ : ಪುಷ್ಯ ಶುಕ್ಲ ಸಪ್ತಮಿ
 ವೃಂದಾವನ ಸ್ಥಳ : ಹಂಪಿ , ಕರ್ನಾಟಕ
ಚರಮ  ಶ್ಲೋಕ : 
ससीतामूलरामार्चा कोशे गजपतेः स्थिता ।
येनानीता नमस्तस्मै श्रीमन्नृहरिभिक्षवे ॥

ಸಸೀತಾ ಮೂಲರಾಮಾರ್ಚಾ ಕೋಶೇ ಗಜಪತೆಃ ಸ್ಥಿತಾ |
ಯೇನಾನೀತಾ ನಮಸ್ತಸ್ಮೈ ಶ್ರೀಮನ್ನೃಹರಿಭಿಕ್ಷವೇ || 
 ಇತಿಹಾಸ :
ಶ್ರೀ ಮನ್ ಮೂಲ ರಾಮ-ಸೀತೆಯರನ್ನು ರನ್ನು ಗಜಪತಿ ಆಸ್ಥಾನದಿಂದ ತಂದು ಕೊಟ್ಟವರೇ ಶ್ರೀ ನರಹರಿ ತೀರ್ಥರು.

 ಶ್ರೀ ನರಹರಿ ತೀರ್ಥರ ಶ್ರಮದಿಂದ, ಜಗದ್ಗುರು ಶ್ರೀಮಧ್ವಾಚಾರ್ಯರ ಅನುಗ್ರಹದಿಂದ, ಕಳಿಂಗದೇಶದ ಗಜಪತಿ ಆಸ್ಥಾನದಿಂದ ಲಬ್ಧವಾದ ಇಂದಿಗೂ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶೋಭಿಸುತ್ತಿರುವ ಚತುರ್ಮುಖ ಬ್ರಹ್ಮ ಕರಾರ್ಚಿತ  ಶ್ರೀ ಮನ್ಮೂಲ ರಾಮಚಂದ್ರ ದೇವರು.  



             ಶ್ರೀ ಮಧ್ವಾಚಾರ್ಯರು ಬದರಿಕಾಶ್ರಮದಿಂದ ಮರಳಿ ಬಂದಾಗ ಶ್ರೀ ಶೋಭನ ಭಟ್ಟರು ( ಇವರೇ ಮುಂದೆ ಸನ್ಯಾಸ ಸ್ವೀಕರಿಸಿ ಶ್ರೀ ಪದ್ಮನಾಭ ತೀರ್ಥರೆಂದು ಪ್ರಸಿದ್ಧರಾದರು ) ಹಾಗು ಶ್ರೀ ಶರ್ಮ ಶಾಸ್ತ್ರಿಗಳು ಆಚಾರ್ಯರೊಡನೆ ವಾಕ್ಯಾರ್ಥ ಮಾಡಿದರು. ಇವರು ಪಂಡಿತರಲ್ಲೇ ಪಂಡಿತರೆನಿಸಿಕೊಂಡಿದ್ದರು. ಇವರು ಪೂರ್ವಾಶ್ರಮದಲ್ಲಿ ಕಳಿಂಗದೇಶದಲ್ಲಿ ರಾಜಕೀಯವಾಗಿಯೂ , ವೇದಾಂತ ಅಧ್ಯಯನಾದಿಗಳಲ್ಲಿ ಉತ್ತಮ ಪ್ರಭಾವ ಹೊಂದಿದ್ದರು. ಶರ್ಮ ಶಾಸ್ತ್ರಿಗಳು ಶ್ರೀ ಮಧ್ವಾಚಾರ್ಯರ ತತ್ವದಿಂದ ಬಹಳ ಪ್ರಭಾವಿತರಾಗಿ ಕ್ರಿ.ಶ.1262 ರಲ್ಲಿ ಆಚಾರ್ಯರ ಶಿಷ್ಯರಾಗಿ ಉಡುಪಿಗೆ ಆಗಮಿಸಿದರು. ಆಚಾರ್ಯರು , ಶರ್ಮ ಶಾಸ್ತ್ರಿಗಳು ತಮ್ಮ ಮೇಲಿಟ್ಟಿದ್ದ ಅಪಾರ ಶ್ರದ್ಧೆ ಹಾಗು ಅಪಾರವಾದ ಪಾಂಡಿತ್ಯವನ್ನು ಗಮನಿಸಿ ಇವರಿಗೆ ಸನ್ಯಾಸ ಧೀಕ್ಷೆಯನ್ನು ಕರುಣಿಸಿದರು. ಅವರೇ ಮುಂದೆ ಶ್ರೀ ನರಹರಿ ತೀರ್ಥರಾಗಿ ವೇದಾಂತ ಸಾಮ್ರಾಜ್ಯದಲ್ಲಿ ಶ್ರೀ ಪದ್ಮನಾಭ ತೀರ್ಥರ ನಂತರ ಪರಮಹಂಸ ಪೀಠವನ್ನೇರಿ 1324-1333 ರ ಅವಧಿಯಲ್ಲಿ , ಸುಮಾರು 9  ವರ್ಷಗಳ ಕಾಲ ವಿರಾಜಿಸಿದರು. ಇವರು ಆಚಾರ್ಯರ ಆದೇಶದಂತೆ ಕಳಿಂಗ ದೇಶಕ್ಕೆ ಹೋಗಿ ಅಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಸುಧಾರಿಸಿ,ಹತೋಟಿಗೆ ತಂದು ಅಲ್ಲಿಂದ ಗಜಪತಿ ಎಂಬ ರಾಜನ ಕೋಶದಲ್ಲಿದ್ದ ಚತುರ್ಯುಗ ಮೂರ್ತಿ ಶ್ರೀ  ಚತುರ್ಮುಖ ಬ್ರಹ್ಮ ಕರಾರ್ಚಿತ  ಶ್ರೀ  ಮೂಲ ಸೀತಾ ಸಮೇತ ಶ್ರೀ ಮೂಲ ರಾಮದೇವರನ್ನು ತಂದು ಆಚಾರ್ಯರಿಗೆ ಅರ್ಪಿಸಿದರು. ಇದನ್ನು  ಮುಂದೆ ಆಚಾರ್ಯರು 80  ದಿನಗಳ ಕಾಲ ಪೂಜಿಸಿ ಶ್ರೀ ಪದ್ಮನಾಭ ತೀರ್ಥರಿಗೆ ಕರುಣಿಸಿ, ಪರಮಹಂಸಾಶ್ರಮವನ್ನಿತ್ತು   ಬದರಿಕಾಶ್ರಮಕ್ಕೆ ಪ್ರಯಾಣ ಬೆಳೆಸಿದರು. ಒಂಬತ್ತು ವರ್ಷಗಳ ಕಾಲ ವೇದಾಂತ ಸಾಮ್ರಾಜ್ಯಾಧಿಪತಿಯಾಗಿ ವಿರಾಜಿಸಿದ ಶ್ರೀ ನರಹರಿ ತೀರ್ಥರು  ಯಮಕ ಭಾರತ , ಸೂತ್ರ  ಭಾಷ್ಯ , ಗೀತಾ  ಭಾಷ್ಯ ಇವೆ ಮುಂತಾದ ಗ್ರಂಥಗಳನ್ನು ಬರೆದಿದ್ದಾರೆ. ಶ್ರೀ ನರಹರಿ ತೀರ್ಥರು  1333 ರಲ್ಲಿ ಶ್ರೀ ಮಧ್ವಾಚಾರ್ಯರಿಂದಲೇ ಸನ್ಯಾಸ ಸ್ವೀಕರಿಸಿದ್ದ ಶ್ರೀ ಮಾಧವ ತೀರ್ಥರಿಗೆ ಮಹಾ ಸಂಸ್ಥಾನವನ್ನು ಒಪ್ಪಿಸಿ ವಿಜಯನಗರ ( ಹಂಪಿ ) ಯಲ್ಲಿ ಬೃಂದಾವನಸ್ಥರಾದರು.
                                                                                                                   ಲೇಖಕರು- ಸಮೀರ ಜೋಷಿ
                                                                                                     ಆಧಾರ - ಗುರುಚರಿತೆ ಹಾಗು ಅಂತರ್ಜಾಲ
                        || श्री माधव तीर्थ गुरुभ्यो नम: ||
                         || श्री १००८ श्री माधव तीर्थरु ||
ಕಾಲ : 1333 - 1350 
 ಆಶ್ರಮ ಗುರುಗಳು : ಶ್ರೀ ಮಧ್ವಾಚಾರ್ಯರು 
  ಹಿಂದಿನ ಯತಿಗಳು : ಶ್ರೀ ನರಹರಿ ತೀರ್ಥರು
  ಆಶ್ರಮ ಶಿಷ್ಯರು : ಶ್ರೀ ಅಕ್ಷೋಭ್ಯ ತೀರ್ಥರು
 ಪೂರ್ವಾಶ್ರಮದ ಹೆಸರು : ಶ್ರೀ ಗೋವಿಂದ ಶಾಸ್ತ್ರಿಗಳು 
 ಆರಾಧನಾ ತಿಥಿ : ಭಾದ್ರಪದ ಬಹುಳ ಅಮಾವಾಸ್ಯ
  ವೃಂದಾವನ ಸ್ಥಳ : ಮಣೂರು
  ಚರಮ  ಶ್ಲೋಕ : 
ಸಾಧಿತಾಖಿಲ ಸತ್ತತ್ವ೦ ಬಾಧಿತಾಖಿಲ ದುರ್ಮತ೦
ಬೊಧಿತಾಖಿಲ ಸನ್ಮಾರ್ಗ೦ ಮಾಧವಾಖ್ಯ ಗುರು೦ ಭಜೇ || 

साधिताखिल सत्तत्त्वं बाधिताखिलदुर्मतम् ।
बोधिताखिलसन्मार्गं माधवाख्य यतिं भजे ॥ 

ಇತಿಹಾಸ : 
  ಇವರು ಶ್ರೀ ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರು. ಇವರ ಪೂರ್ವಾಶ್ರಮದ ಹೆಸರು ಶ್ರೀ ಗೋವಿಂದ ಶಾಸ್ತ್ರಿಗಳು . ಇವರ ಮೂಲ ದೇಶ , ಸನ್ಯಾಸ ಸ್ವೀಕರಿಸಿದ ಕಾಲ ಖಚಿತವಾಗಿ  ಇನ್ನು ತಿಳಿದುಬಂದಿಲ್ಲ. ಆದರೆ ಇವರು ಆಚಾರ್ಯರಿಂದ ಪ್ರಾಪ್ತ ವಾದ ಮಹಾ ಸಂಸ್ಥಾನವನ್ನು ೧೬ ವರ್ಷಗಳ ಕಾಲ ಆಳಿ ವಿಕ್ರುತಿನಾಮ ಸಂವತ್ಸರದ ಭಾದ್ರಪದ ಬಹುಳ ಅಮಾವಾಸ್ಯೆಯಂದು ಭೀಮಾತೀರದ ಮಣೂರು ಎಂಬಲ್ಲಿ ವೃಂದಾವನಸ್ಥರಾದರು . ಇವರು ಆಚಾರ್ಯರ ಶಿಷ್ಯರು ಎಂದಮೇಲೆ ಮಹಾ ಪಾಂಡಿತ್ಯ ಎಂತಹದು  ತಿಳಿದುಬರುತ್ತದೆ .ಇವರು ಅನೇಕ ಗ್ರಂಥಗಳನ್ನೂ ರಚಿಸಿರ ಬಹುದು ಎಂದು ತಿಳಿಯಬಹುದು.ಇವರು ಆಚಾರ್ಯರು ತಮಗೆ ಕರುಣಿಸಿದ ಶ್ರೀ ವೀರ ರಾಮ ಮೂರ್ತಿಯನ್ನು ಶ್ರೀ ಮಧು ಹರಿ ತೀರ್ಥ ಎಂಬ ಯತಿಗಳಿಗೆ ಕರುಣಿಸಿ ಹೊಸ ಸಂಸ್ಥಾನಕ್ಕೆ ನಾಂದಿ ಹಾಡಿದರು . ಅವರಿಂದ ಪ್ರಾರಂಭವಾದ ಪರಂಪರೆ ಈಗಲೂ ಮಾಧವ ತೀರ್ಥ ಮಹಾ ಸಂಸ್ಥಾನವೆಂದು ಪ್ರಸಿದ್ಧ ವಾಗಿದೆ.
                                                                                                                    ಲೇಖಕರು- ಸಮೀರ ಜೋಷಿ
                                                                                                     ಆಧಾರ - ಗುರುಚರಿತೆ ಹಾಗು ಅಂತರ್ಜಾಲ
                 || श्री अक्षोभ्य तीर्थ गुरुभ्यो नम: ||
                              || श्री १००८  श्री अक्षोभ्य तीर्थरु || 
 ಕಾಲ : 1350 - 1365 
 ಆಶ್ರಮ ಗುರುಗಳು : ಶ್ರೀ ಮಧ್ವಾಚಾರ್ಯರು
 ಹಿಂದಿನ ಯತಿಗಳು : ಶ್ರೀ ಮಾಧವ ತೀರ್ಥರು
 ಆಶ್ರಮ ಶಿಷ್ಯರು : ಶ್ರೀ ಮಜ್ಜಯತೀರ್ಥರು ( ಟೀಕಾ ರಾಯರು )
 ಪೂರ್ವಾಶ್ರಮದ ಹೆಸರು : ಶ್ರೀ  ಗೋವಿಂದ  ಭಟ್ಟರು
ಆರಾಧನಾ ತಿಥಿ :    ಮಾರ್ಗಶಿರ ಕೃಷ್ಣ  ಪಂಚಮಿ 
 ವೃಂದಾವನ ಸ್ಥಳ : ಮಳಖೇಡ
ಚರಮ  ಶ್ಲೋಕ : 
ಯೋ ವಿದ್ಯಾರಣ್ಯವಿಪಿನಂ ತತ್ತ್ವಮಸ್ಯಾಸಿನಾಚ್ಛಿನತ್ |
ಶ್ರೀಮದೋಕ್ಷೋಭ್ಯತೀರ್ಥಾಯ ನಮಸ್ತಸ್ಮೈ ಮಹಾತ್ಮನೇ ||

यो विद्यारण्यविपिनं तत्त्वमस्यासिनाच्छिनत् ।
श्रीमदोक्षभ्यतीर्थाय नमस्तस्मै महात्मने ॥

ಇತಿಹಾಸ : 
 ಇವರು ಶ್ರೀಮದಾಚಾರ್ಯರ ಶಿಷ್ಯರು . ಇವರ ಪೂರ್ವಾಶ್ರಮದ ಗೋತ್ರ ಭಾರದ್ವಾಜ ಗೋತ್ರ. ಮನೆತನ ಸ್ವರ್ಣಭಂಡಾರ ವಂಶ. ಇವರಿಗೆ ರಾಜಕೀಯವೇ ಹಾಸಿಗೆಯಾಗಿ ತೋರಿತ್ತು. ಅಷ್ಟು ಹೊತ್ತಿಗೆ ಜಗದ್ಗುರು ಶ್ರೀ ಮಧ್ವಾಚಾರ್ಯರ ಕೀರ್ತಿ ದಿಗಂತಗಳಲ್ಲೆಲ್ಲ ವ್ಯಾಪಿಸಿತ್ತು . ದುರ್ಮತವನ್ನು ಖಂಡಿಸಿ , ಎಲ್ಲ ವಾಕ್ಯಾರ್ಥಗಳಲ್ಲೂ ಆಚರ್ಯರಿಗೆ ಜಯವಿತ್ತು . ಇವರು  ಆಚಾರ್ಯರೆಡೆಗೆ ಆಕರ್ಷಿತರಾಗಿ ಅವರನ್ನು ಭೇಟಿ ಮಾಡಲು ಮುಂದಾದರು. ಆಚಾರ್ಯರ ದರ್ಶನ ಮಾತ್ರದಿಂದ ಇವರಿಗೆ ಅಚಾರ್ಯರಲ್ಲಿ ಅಸದೃಶ ಭಕ್ತಿ ಉಂಟಾಯಿತು. ಆಚಾರ್ಯರ ತತ್ವ-ಸಿದ್ಧಾಂತಗಳಿಗೆ ಮನಸೋತು,ಇದೆ ಜಗತ್ಸತ್ಯವಾದುದು , ದುರ್ಮತಗಳಿಗೆ ತಲೆದೂಗ ಬಾರದು ಎಂದು ನಿರ್ಧರಿಸಿ  ಕ್ರಿ.ಶ.1312 ರಲ್ಲಿ ಸನ್ಯಾಸಾಶ್ರಮವನ್ನು ಸ್ವೀಕರಿಸಿದರು. ಶ್ರೀ ಮಾಧವತೀರ್ಥರ ಕಾಲಾನಂತರ 1350 ರಲ್ಲಿ ಶ್ರೀ ಮಧ್ವಾಚರ್ಯರ ಆದೇಶದಂತೆ  ವಿದ್ವತ್ಸಾಮ್ರಜ್ಯಾಧಿಪತಿಯಾಗಿ ಅಭಿಷಿಕ್ತಗೊಂಡು ಸುಮಾರು ೧೬ ವರ್ಷಗಳ ಕಾಲ ವಿರಾಜಿಸಿದರು. ಇವರು ಮಹಾಮೇಧಾವಿಗಳಾದ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣೀಕರ್ತರಾದ ಶ್ರೀ ವಿದ್ಯಾರಣ್ಯರನ್ನು "ತತ್ವಮಸಿ" ಎಂಬ ವಾದ ವಿಷಯದಲ್ಲಿ "ಅದು ನೀನು ಇದ್ದೀಯ" ಎಂಬ ಅಪಾತತ: ಅಭೇದವನ್ನು ಹೇಳುವಂತೆ ತೋರುವ   ಈ ವಾಕ್ಯವನ್ನು , ಮಧ್ವರ ಸದ್ವೈಷ್ಣವ ದ್ವೈತ  ಸಿದ್ಧಾಂತದ ಪರವಾಗಿ ಮಂಡಿಸಿ ವಿಜಯಶೀಲರಾದರು. ಈ ಘಟನೆ ಇಡೀ ಮಾಧ್ವ ಸಮಾಜಕ್ಕೆ ಮುಕುಟವಿಟ್ಟಂತೆ ರಾರಾಜಿಸುತ್ತಿದೆ. ಈ ದಿಗ್ವಿಜಯದ ಸೂಚನೆಗಾಗಿ ವಾದ ಸ್ಥಳವಾದ ಮುಳುಬಾಗಿಲು ಎಂಬ ಪ್ರದೇಶದಲ್ಲಿ ಶ್ರೀ ಅಕ್ಷೋಭ್ಯ ತೀರ್ಥರ ಪರವಾಗಿ ವಾದದ ತೀರ್ಪುಗಾರರಾಗಿದ್ದ ವೇದಾಂತ ದೇಶಿಕರು  " असिना तत्वमसिना परजीव प्रभेदिना | विद्यारण्यं महारण्यं अक्षोभ्य मुनि रच्छिनत || "  ಎಂಬ ಶ್ಲೋಕಸಹಿತ ವಾದ "ವಿಜಯಸ್ಥಂಭ " ಸ್ಥಾಪನೆಗೊಂಡಿತು, ಇಂದಿಗೂ ನಾವದನ್ನು ಮುಳುಬಾಗಿಲಿನಲ್ಲಿ ಕಾಣಬಹುದು.  ಈ ವಿಷಯವೇ ಅವರ ಚರಮ ಶ್ಲೋಕದಲ್ಲಿ ನಿರೂಪಿತವಾಗಿದೆ. ಅಕ್ಷೋಭ್ಯ ಮುನಿಗಳು ವಿದ್ಯಾರಣ್ಯರೆಂಬ ಮಹಾ ಅರಣ್ಯವನ್ನು ವಿನಾಶಗೊಳಿಸಿದರು ಎಂಬುದು ಇದರ ಸಾರಾಂಶ. ಇದೊಂದು ಅಪೂರ್ವ ವಿಜಯವಾಗಿತ್ತು ಎಂದು ಅವರ ಆಶ್ರಮ ಶಿಷ್ಯರಾದ ಶ್ರೀ ಮಜ್ಜಯತೀರ್ಥರು ತಮ್ಮ ತತ್ವಪ್ರಕಾಶಿಕಾ ಗ್ರಂಥದ ಮಂಗಳಾಚರಣ ಶ್ಲೋಕದಲ್ಲಿ " दुर्वादि वाद विदारण दक्ष दीक्षमक्षोभ्य तीर्थ मृगराजमहं नमामि " ಎಂದು  ಸೂಚಿಸಿದ್ದಾರೆ. ಇವರು ತಮಗೆ ಶ್ರೀಮದಾಚಾರ್ಯರಿಂದ ದತ್ತವಾದ ಶ್ರೀ ರಾಮ ಪ್ರತಿಮೆಗಳನ್ನು ಪೂಜಿಸಿ ತ್ರೈಲೋಕ್ಯಭೂಷಣ ತೀರ್ಥರು ಹಾಗೂ ಲೋಕಪೂಜ್ಯರಿಗೆ ಕರುಣಿಸಿದರು. ಇವುಗಳು ಈಗಲೂ  ಇವೆರಡು ಶ್ರೀ ಅಕ್ಷೋಭ್ಯ ತೀರ್ಥ ಮಹಾ ಸಂಸ್ಥಾನಗಳೆಂದು ಪ್ರಸಿದ್ಧವಾಗಿವೆ. ಇವರ ಅನೇಕ ಗ್ರಂಥಗಳ ಹೆಸರುಗಳು ಮಾತ್ರ ಲಭ್ಯವಾಗಿದ್ದು ಇವರ ಗ್ರಂಥಗಳಾವು ಸಂಪೂರ್ಣ ಲಭ್ಯವಿಲ್ಲ . ಇವರ ಶಿಷ್ಯರ ವರ್ಣನೆಯಿಂದ ಇವರ ಪಾಂಡಿತ್ಯ ಪ್ರಚುರಗೊಳ್ಳುತ್ತದೆ. 
                                                                                                                     ಲೇಖಕರು- ಸಮೀರ ಜೋಷಿ
                                                                                                     ಆಧಾರ - ಗುರುಚರಿತೆ ಹಾಗು ಅಂತರ್ಜಾಲ
                                                   
                         || ಶ್ರೀ ಜಯತೀರ್ಥರು [ಶ್ರೀ ಟೀಕಾಕೃತ್ಪಾದರು] ||
                                                  Sri Jayateertharu
 ಆಶ್ರಮ ಗುರುಗಳು - ಶ್ರೀ ಅಕ್ಷೋಭ್ಯ ತೀರ್ಥರು
 ಆಶ್ರಮ ಶಿಷ್ಯರು - ಶ್ರೀ  ವಿದ್ಯಾಧಿರಾಜ ತೀರ್ಥರು
  ಕಾಲ - 1365 - 1388
 ಪೂರ್ವಾಶ್ರಮದ ಹೆಸರು - ರಘುನಾಥ ನಾಯಕ 
 ಚರಮ ಶ್ಲೋಕ -
 यस्य वाक्कामधेनुर्नः कामितार्थान् प्रयच्छति ।
सेवे तं जययोगीन्द्रं कामबाणाच्छिदं सदा ॥

ಯಸ್ಯ ವಾಕ್ಕಾಮಧೇನುರ್ನಃ ಕಾಮಿತಾರ್ಥಾನ್ ಪ್ರಯಚ್ಛತಿ |
ಸೇವೇ ತಂ ಜಯ ಯೋಗೀಂದ್ರಂ ಕಾಮಬಾಣಚ್ಛಿದಂ ಸದಾ ||

 ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನದ  , ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಿಕ ಗುರುಗಳಾದ ಶ್ರೀ ಮಜ್ಜಯತೀರ್ಥರು ದ್ವೈತ ಸಾಮ್ರಾಜ್ಯಕ್ಕೆ ಭದ್ರ ಬುನಾದಿ ಹಾಕಿದ ಮಹಾನ್ ಗುರುಗಳು . ಇವರ ಪೂರ್ವಾಶ್ರಮದ ಹೆಸರು ದು0ಡೋಪಂಥ( ರಘುನಾಥ ನಾಯಕ?? ಎಂಬ ಉಲ್ಲೇಖವೂ ಕೆಲವೆಡೆ ಉಂಟು  ) , ಇವರ ತಂದೆಯ ಹೆಸರು ದು0ಡಿರಾಜ . ರಾಜರಿಗೆ ರಘುನಾಥ ನಾಯಕ ಒಬ್ಬನೇ ಒಬ್ಬ ಮಗ . ತಂದೆಯ ನಂತರ ರಘುನಥನಾಯಕ ತಮ್ಮ ಸ್ವಾಯತ್ತತೆಯಲ್ಲಿದ್ದ ಪ್ರಾಂತಗಳಿಗೆ ಒಡೆಯನಾದ . 1352 ರಲ್ಲಿ ಬಹಮನಿ ರಾಜ್ಯದ ಅಲ್ಲವುದ್ದೀನನು ಯಾದವರ ಮೇಲೆ ಧಾಳಿ ಮಾಡಿದ , ಯಾದವರ ಸೈನ್ಯವನ್ನು ಹಿಮ್ಮೆಟ್ಟಿಸಿದ . ಅನೇಕ ಸಾವು-ನೋವುಗಳು ಸಂಭವಿಸಿದವು . ಇದನ್ನು ಕಂಡ ನಾಯಕನಿಗೆ ಬಹಳ  ಬೇಸರವಾಯಿತು . ಮನಸ್ಸು ವೈರಗ್ಯದೆಡೆ  ಸೆಳೆಯಿತು . ಹೀಗೆ ಒಂದು ದಿನ ತನ್ನ ಪರಿವಾರದೊಡನೆ ಬೇಟೆಗಾಗಿ ಹೊರಟಾಗ ನೀರು ಕುಡಿಯಲೆಂದು ಭೀಮಾನದಿ ತೀರದಲ್ಲಿ ತಂಗಿದ್ದಾಗ , ಅದೇ ದಾರಿಯಲ್ಲಿ ಶ್ರೀ ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಶ್ರೀ ಮದಕ್ಶೋಭ್ಯ ತೀರ್ಥರು ಸಂಚಾರ ಹೊರಟಿದ್ದರು . ಮಹಾರಾಜನನ್ನು ನೋಡಿ ಅವನ ಅಪಾರ ತೇಜಸ್ಸನ್ನು ನೋಡಿ , ಮುಂದಿನ ಘಟನಾವಳಿಗಳ ಅರಿವಾಗಿ , ಅವನ ಅವತಾರ ಕಾರ್ಯ ಸನ್ನಿಹಿತ ಎಂದು ತಿಳಿದು ರಾಜನನ್ನು ಕುರಿತು  " ರಘುನಾಥ , ಇದೇನಪ್ಪ ? ಈ ರಾಜ್ಯ ಕೋಶಾದಿಗಳು ನಿನಗೆ ಶಾಶ್ವತವೇ ? ನಿನ್ನ ಉದ್ಧಾರ ಇದರಿಂದ ಸಾಧ್ಯವಿಲ್ಲಪ್ಪಾ " ಎಂದು ಸೂಕ್ಷ್ಮವಾಗಿ ಹೇಳಿದರು. ನಾಯಕನ ಮನಸ್ಸು ವೈರಾಗ್ಯದೆಡೆ  ಮೊದಲೇ ಜಾರಿದ್ದರಿಂದ ಶ್ರೀ ಗಳವರ ಮಾತು ಬಹಳವಾಗಿ ಮನಸ್ಸಿಗೆ ನಾಟಿದವು . ತನ್ನ ಪರಿವಾರ , ರಾಜ್ಯ ,ಸಂಪತ್ತು , ಅಧಿಕಾರ ಎಲ್ಲವನ್ನು ಬದಿಗೊತ್ತಿ ಶ್ರೀ ಗಳವರಲ್ಲಿಗೆ ಬಂದು " ಸ್ವಾಮಿ ನೀವು ನನ್ನ ಕಣ್ಣು ತೆರೆಸಿದಿರಿ ಇಂದಿನಿಂದ  ನೀವು ನನ್ನ ಗುರುಗಳು , ನಾನು ನಿಮ್ಮ ಶಿಷ್ಯ . ನನಗೆ ಸನ್ಯಾಸ ಕೊಟ್ಟುಬಿಡಿ ಸ್ವಾಮಿ, ಇದೆಲ್ಲ ಸಾವು-ನೋವು ಯಾತಕ್ಕಾಗಿ ? ಈ ಸಂಪತ್ತು ಮಡದಿ-ಮಕ್ಕಳು ಯಾರಿಗಾಗಿ ?? ಸನ್ಯಾಸ ಸ್ವೀಕಾರ ಮಾಡಿದರೆ ಸಾಧನೆಗೆ ನೆರವಾದೀತು ದಯಮಾಡಿ ಸನ್ಯಾಸ  ಭೀಕ್ಷೆ ನೀಡಿ ಸ್ವಾಮೀ " ಎಂದು ಮನವಿ ಮಾಡಿಕೊಂಡ . ತ್ರಿಕಾಲ ಜ್ಞಾನಿಗಳಾದ ಶ್ರೀಗಳಿಗೆ ಎಲ್ಲವು ಗೊತ್ತಿದ್ದರು ಏನು ಗೊತ್ತಿಲ್ಲವೇನೋ ಎಂಬಂತೆ " ರಘುನಾಥ ನಿನ್ನ ವೈರಗ್ಯಕ್ಕೆ ನಾನು ಮೆಚ್ಚಿದೆ . ಆದರೆ ನೀನು ವಿವಾಹಿತ ಯುವಕ . ನಿನ್ನ ಸಂಸಾರದ ಗತಿ ? ನಿನ್ನ ಅಶ್ರಿತರ ಗತಿ ? ನೀನು ಮನೆಗೆ ತೆರಳು  ನಾವು ನಿನಗೆ ಆಚಾರ್ಯರ ಗ್ರಂಥಗಳನ್ನು ಬೋಧಿಸುತ್ತೇವೆ . ಸನ್ಯಾಸದ ಬಗ್ಗೆ ಈಗ ವಿಚಾರ ಬೇಡ ." ಎಂದು ಹೇಳಿದರು. ಆಗ ನಾಯಕ " ಇಲ್ಲ ಸ್ವಾಮಿ ಶಾಶ್ವತ ಸುಖದ ದಾರಿ ತೋರಿ ನೀವು ನನಗೆ ಅನುಗ್ರಹಿಸಬೇಕು . ಈ ಸಂಸಾರ ಅಸಾರ . ಇದು ಅಶಾಶ್ವತ . ಈ ಲೌಕಿಕ ಜೀವನಕ್ಕೆ ಕೊನೆಯೇ ಇಲ್ಲ , ದಯವಿಟ್ಟು ನನಗೆ ಸನ್ಯಾಸ ಕೊಡಿರಿ" ಎಂದು ನಿಜವಾದ ವೈರಾಗ್ಯದಿಂದ ನುಡಿದ. ಆಗ ಶ್ರೀಗಳು ತಥಾಸ್ತು ಎಂದು ನಾಯಕನಿಗೆ ಸನ್ಯಾಸ ನೀಡಿ ಶ್ರೀ ಜಯತೀರ್ಥರು ಎಂದು ನಾಮಕರಣ ಮಾಡಿ  ವೇದಾಂತ ಸಾಮ್ರಾಜ್ಯಕ್ಕೆ ಪಟ್ಟಾಭಿಷೇಕ ಮಾಡಿದರು. ನಾಯಕರು ಶ್ರೀ ಜಯತೀರ್ಥರಾದದ್ದನ್ನು ಕೇಳಿ ಅವರ ಪೂರ್ವಾಶ್ರಮದ ಮನೆಯವರು ಬಂದು ಶ್ರೀ ಅಕ್ಷೋಭ್ಯ ತೀರ್ಥರನ್ನು ನಿಂದಿಸಿ ಶ್ರೀ ಜಯತೀರ್ಥರನ್ನು ಮರಳಿ ಮನೆಗೆ ಕರೆದೊಯ್ದರು . ಅಲ್ಲಿ ಅವರ ಪೂರ್ವಾಶ್ರಮದ ಪತ್ನಿಯನ್ನು ಪತಿಸಂಗಮಕ್ಕಾಗಿ ಕಳುಹಿಸಿದಾಗ ಶ್ರೀ ಶೇಷನ ಆಕೃತಿಅಲ್ಲಿದ್ದ ಶ್ರೀ ಜಯತೀರ್ಥರ ದಿವ್ಯ ತೇಜಸ್ಸನ್ನು ಕಂಡು ಅವರನ್ನು ಕಣ್ಣಿನಿಂದ ನೋಡಲಾಗದೆ ಹೊರಗೆ ಓಡಿಹೋದಳು . ಮನೆಯವರಿಗೆಲ್ಲ ಶ್ರೀ ಜಯತೀರ್ಥರ ಶಕ್ತಿ ಅರಿವಾಗಿ ಎಲ್ಲರು ಕ್ಷಮಾದಾನ ಬೇಡಿದರು . ಶ್ರೀ ಹರಿಯ ಇಚ್ಚೆಯನ್ನು ಬದಲಿಸಲಾಗದು ಎಂದು ತಮ್ಮ ಅವತಾರ ಕಾರ್ಯ ಅರಿತ  ಶ್ರೀ ಜಯತೀರ್ಥರು ಅವರಿಗೆ ಬುದ್ಧಿ ಹೇಳಿ ಅಲ್ಲಿಂದ ಗುರುಗಳು ಇದ್ದಲ್ಲಿಗೆ ಬಂದರು . ಶ್ರೀ ಅಕ್ಷೋಭ್ಯ ತೀರ್ಥರಲ್ಲಿ ಸಮಗ್ರ ಆಚಾರ್ಯರ ಗ್ರಂಥಗಳ ಅಧ್ಯನವಾಯಿತು . ಶ್ರೀ ಜಯತೀರ್ಥರು ,ತಮ್ಮ ಗೀತಭಾಷ್ಯದ  ಕೊನೆಯಲ್ಲಿ " ಅಕ್ಷೋಭ್ಯತೀರ್ಥ ಗುರುಣಾ ಶುಕವತ್ ಶಿಕ್ಷಿತಸ್ಯ ಮೇ " (  ಶ್ರೀ ಅಕ್ಷೋಭ್ಯ ತೀರ್ಥರು ನನಗೆ ಗಿಳಿಗೆ ಪಾಠ ಹೇಳಿದಂತೆ ಪಾಠ ಹೇಳಿದರು ) ಎಂದು ತಮ್ಮ ಅಧ್ಯಯನದ ರೀತಿಯನ್ನು ಮೆಲುಕು ಹಾಕಿದ್ದಾರೆ  . ಶ್ರೀ ಅಕ್ಶೋಭ್ಯರ ಹತ್ತಿರ ಸಕಲ ಗ್ರಂಥಾಧ್ಯಯನವಾದ ನಂತರ ಶ್ರೀ ಜಯತೀರ್ಥರು ಆಚಾರ್ಯರ ಗ್ರಂಥಗಳಿಗೆ ಟಿಪ್ಪಣಿ ಬರೆಯಲು ಪ್ರಾರಂಭಿಸಿದರು . ಶ್ರೀ ಅಕ್ಷೋಭ್ಯ ತೀರ್ಥರವರೆಗೆ ಎಲ್ಲರೂ ಸಾಕ್ಷಾತ್ ಮಧ್ವರ ಕೈಯಲ್ಲಿ ಪಳಗಿದ್ದರಿಂದ ಮಧ್ವರ ಗ್ರಂಥಗಳಿಗೆ ಟಿಪ್ಪಣಿ ಅಷ್ಟೊಂದು ಅವಶ್ಯಕತೆ ಇರಲಿಲ್ಲ . ಆದರೆ ಆಚರ್ಯರನ್ನು ಬಿಟ್ಟು ಅವರ ಶಿಷ್ಯರ ಹತ್ತಿರ ಅಧ್ಯಯನ ಮಾಡಿದ ಶ್ರೀ ಜಯ ತೀರ್ಥರು ಮುಂದಿನ ದಿನಮಾನದಲ್ಲಿ ಮಾಧ್ವ ಗ್ರಂಥಗಳಿಗೆ ಟಿಪ್ಪಣಿಯ ಅವಶ್ಯಕತೆಗಳನ್ನು ಅರಿತು ಅದನ್ನು ರಚಿಸಲು ಮುಂದಾದರು . ಈ ಟಿಪ್ಪಣಿಗಳನ್ನು ರಚಿಸಲು ಜಯತೀರ್ಥರು ಒಂದು ಗುಹೆಗೆ ತೆರಳಿದರು. ಅಲ್ಲಿಯೇ ದೇವತಾರ್ಚನೆ ಮುಂತಾದ ಕಾರ್ಯಗಳನ್ನು ಯಾವುದೇ ಲೋಪವಿಲ್ಲದೆ ಮಾಡುತ್ತಿದ್ದರು. ಹೀಗೆ ಆ ಗುಹೆಗೆ ಶ್ರೀ ಶಂಕರ ಮಹಾ ಪೀಠವಾದ ,ಶೃಂಗೇರಿ ಶಾರದ ಪೀಠದ ಶ್ರೀ ವಿದ್ಯಾರಣ್ಯರು ಅಲ್ಲಿಗೆ ಬಂದರು ( ವಿದ್ಯಾರಣ್ಯರು ಈಗಾಗಲೇ ಜಯತೀರ್ಥರ ಗುರುಗಳಾದ ಅಕ್ಷೋಭ್ಯ ತೀರ್ಥರ ಹತ್ತಿರ "ತತ್ವಮಸಿ" ಎಂಬ ಪದದ ವಾಕ್ಯರ್ಥದಲ್ಲಿ ಸೋತಿದ್ದರು) . ವಿದ್ಯಾರಣ್ಯರಿಗೆ ಶ್ರೀ ಜಯತೀರ್ಥರು ತಾವು ವ್ಯಾಖ್ಯಾನ ಬರೆಯುತ್ತಿದ್ದ , ಮಧ್ವರ "ಪ್ರಮಾಣ ಲಕ್ಷಣಂ" ಎಂಬ ಗ್ರಂಥವನ್ನು ತೋರಿಸಿದರು. ಆಗ ವಿದ್ಯಾರಣ್ಯರಿಗೆ ಅದರ ತಲೆ ಬುಡ ಹತ್ತಲಿಲ್ಲ. ಅವರು " ಬಾಲಕನ ಮಾತುಗಳನ್ನು ಕಟ್ಟಿಕೊಂಡೆನು" ಎಂದು ಹಾಸ್ಯ ಮಾಡಿದರು. ಆಗ ಶ್ರೀ ಜಯತೀರ್ಥರು ತಾವು ಆ ಗ್ರಂಥದ ಮೇಲೆ ರಚಿಸಿದ ಟಿಪ್ಪಣಿಯನ್ನು ತೋರಿಸಿದರು ಅದನ್ನು ಓದಿದ ವಿದ್ಯಾರಣ್ಯರಿಗೆ ಶ್ರೀ ಜಯತೀರ್ಥರ ಸಾಮರ್ಥ್ಯ ತಿಳಿಯಿತು. ಆ ಗ್ರಂಥ ಅವರಿಗೆ ಈಗ ಅರ್ಥವಾಗಿತ್ತು. [ಅವರು ಮಧ್ವರ ಗ್ರಂಥಗಳ ಮೆರವಣಿಗೆ ಮಾಡಿಸಿದರು ಎಂಬ ಐತಿಹ್ಯವೂ ಉಂಟು ] . ಶ್ರೀ ಜಯತೀರ್ಥರ ವ್ಯಾಖ್ಯಾನಗಳು ಬಹಳ ಗಂಭೀರ , ಸುಂದರ . ಅತೀವ ಆನಂದವನ್ನು ಉಂಟು ಮಾಡುತ್ತವೆ.
                      ಶ್ರೀ ಜಯತೀರ್ಥರ ಹತ್ತಿರ ಪೇಜಾವರ ಮಠದ  ಶ್ರೀ ಮಹೇಂದ್ರ ತೀರ್ಥರು ತಾವು ಬರೆದ " ಭಾಗವತ ವ್ಯಾಖ್ಯಾನ" ಗ್ರಂಥವನ್ನು ತೋರಿಸಿ ಜಯಾರ್ಯರಿಂದ ಪ್ರಶಂಸೆ ಗಿಟ್ಟಿಸಿದರು. ಶ್ರೀ ಜಯತೀರ್ಥರ ಟಿಪ್ಪಣಿ ಗಳಿಲ್ಲದೆ ಶ್ರೀಮದಾಚಾರ್ಯರ ಯಾವ ಗ್ರಂಥಗಳು ಅರ್ಥವಾಗುವದಿಲ್ಲ. ಶ್ರೀ ಜಯತೀರ್ಥರು ಅನೇಕ  ಗ್ರಂಥಗಳನ್ನು ರಚಿಸಿರುತ್ತಾರೆ. ಅವುಗಳಲ್ಲಿ ಅವರ "ಶ್ರೀಮನ್ಯಾಯ ಸುಧಾ" ಇವರ ಮೇರು ಕೃತಿ  . ಇವರ  ಶ್ರೀಮನ್ಯಾಯಸುಧಾ ಗ್ರಂಥದ ಬಗ್ಗೆ ಒಂದು ಉಕ್ತಿ ಇದೆ " ಸುಧಾ ವಾ ಪಠನೀಯಾ ವಸುಧಾ ವಾ ಪಾಲನೀಯ"ಎಂದು. ಇವರ ಗ್ರಂಥಗಳು ಇಲ್ಲದಿದ್ದರೆ ಇಂದಿನ ಸಮಾಜದಲ್ಲಿ ಮಾಧ್ವರು ಆಚಾರ್ಯರನ್ನು ಅರ್ಥೈಸಿಕೊಳ್ಳುವದೇ ಸಾಧ್ಯವಿರಲಿಲ್ಲ . ಇವರ ಗ್ರಂಥಗಳು ಅಷ್ಟೊಂದು ಮಹತ್ವವನ್ನು ಪಡೆದುಕೊಂಡಿವೆ. ಇವರ ನ್ಯಾಯ ಸುಧೆ ಇಂದು ಪಂಡಿತರಿಗೆ ನೀಡುವ "ಡೀಗ್ರೀ ಸೇರ್ಟಿಫಿಕೆಟ್ " ಆಗಿದೆ . ಅಂದರೆ ಅದನ್ನು ಓದಿದರೆ ಮಾತ್ರ ಆಚಾರ್ಯರ ಗ್ರಂಥಗಳು ಅರ್ಥವಾಗುವವು ಎಂದು.
*ಶ್ರೀ ವ್ಯಾಸರಾಜ ತೀರ್ಥರು  ಟೀಕಾಚಾರ್ಯರನ್ನು ಕುರಿತು ಹೀಗೆ ಹೇಳಿದ್ದಾರೆ , 

                   ಆನಂದತೀರ್ಥ ಉಪದಿಷ್ಟೋ ನಿಧಿರ್ನಾರಾಯಣಾಹ್ವಯ : |
                   ಪ್ರದರ್ಶಿತೋ ಯೇನ ಸಮ್ಯಕ್  ಜಯತೀರ್ಥಂ ತಮಾಶ್ರಯೇ || 
                                                           - ತರ್ಕ ತಾಂಡವ  
             
*ಶತಾಧಿಕ ಗ್ರಂಥರತ್ನ ಪ್ರಣೆತ  ಶ್ರೀ ವಿಜಯೀಂದ್ರ ತೀರ್ಥರು ಟೀಕಾಚಾರ್ಯರನ್ನು ಕುರಿತು ,

                   ಮಧ್ವಶಾಸ್ತ್ರಮಹಾಚಾಪಮನುದ್ಧಾರ್ಯಮಪೀತರೈ: |
                   ಉಧ್ರುತ್ಯ ಕೀರ್ತಿಂ ಯೋ ಲೇಭೆ ತಮ್ ಜಯಾರ್ಯಂ ಸದಾ ಭಜೆ ||
                                                               - ಭೇದವಿದ್ಯಾ ವಿಲಾಸ 
 
                   ಯಸ್ಯ ವಾಕ್ಕಾಮಧೇನುರ್ನಃ ಕಾಮಿತಾರ್ಥಾನ್ ಪ್ರಯಚ್ಛತಿ |
                  ಸೇವೇ ತಂ ಜಯ ಯೋಗೀಂದ್ರಂ ಕಾಮಬಾಣಚ್ಛಿದಂ ಸದಾ ||
                                                              - ಮಧ್ವಾದ್ವಕಂಟಕೊದ್ಧಾರ ಮಂಗಳಾಚರಣ ಶ್ಲೋಕ 


 ಈ ಮೇಲಿನ ' ಯಸ್ಯ ವಾಕ್ಕಾಮಧೇನುರ್ನ: ................ ಸದಾ ' ಶ್ಲೋಕವು ರಾಘವೇಂದ್ರ ಸ್ವಾಮಿಗಳವರ ಪೂರ್ವಿಕ ಗುರುಗಳು  ಶ್ರೀ ವಿಜಯೀಂದ್ರ ತೀರ್ಥ ಶ್ರೀಪಾದಂಗಳವರು ಬರೆದದ್ದು . ಇದು ಬಹಳ  ಮಹತ್ವವಾದ ಶ್ಲೋಕ . ಇದನ್ನು ಶ್ರೀ ವಿಜಯೀಂದ್ರ ತೀರ್ಥರೆ ಬರೆದದ್ದು ಎನ್ನಲು ಬಹಳ ದಾಖಲೆಗಳು ಲಭ್ಯ . ಇದರ ವಿಶೇಷತೆ ಏನು ಅಂದರೆ ' ಈ ಶ್ಲೋಕವನ್ನು ಪ್ರಸ್ತುತ ಜಗದ್ಗುರು ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನಗಳಾದ  ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಹಾಗು ಶ್ರೀ ಉತ್ತರಾದಿ ಮಠದಲ್ಲಿನ ಗುರು ಪರಂಪರಾ ಚರಮ ಶ್ಲೋಕಗಳ ಸಾಲಿನಲ್ಲಿ ಶ್ರೀ ಜಯತೀರ್ಥರ ಚರಮ ಶ್ಲೋಕಕ್ಕೆ ಇದೇ  ಶ್ಲೋಕವನ್ನು ನೀಡಲಾಗಿದೆ .** ( ಕೊನೆಗೆ ನೀಡಲಾಗಿರುವ ಪರಿಶಿಷ್ಟ 1ನ್ನು ಓದಿ )
       
                    
                   ಶ್ರೀ ವಾದಿರಾಜ ತೀರ್ಥರು ಟೀಕಾಚಾರ್ಯರನ್ನು ಕುರಿತು ,

                   ಶ್ರೀ ಮನ್ಯಾಯಸುಧಾ ಏನ ನಿರ್ಮಿತಾ ಧೀಮತಾ ಮತಾ |
                   ತಮ್ ಜ್ಞ್ಯಾನಾದಿ ಗುಣೋಪೇತಂ ಜಯತೀರ್ಥ ಗುರುಂ ಭಜೆ || 
                                                              -  ನಯ ಸಿದ್ಧಾಂತ ಸಂಗ್ರಹ 
          
                   ಶ್ರೀ ರಾಘವೇಂದ್ರ ಗುರುಸಾರ್ವಭೌಮರು  ಟೀಕಾಚಾರ್ಯರನ್ನು ಕುರಿತು ,

                   ಪ್ರತ್ಯಕ್ಷರಂ ಪ್ರತಿಪದಂ ಅನೇಕಾಕೂತಗರ್ಭಿತಾ |
                   ಪ್ರತಿಭಾತಿ ಸುಧಾSಥಾಪಿ ಗ್ರಂಥಾಲ್ಪತ್ವಾಯ ನೋಚ್ಯತೆ ||
                                                             - ನ್ಯಾಯಸುಧಾ ಪರಿಮಳ 
 
ಶ್ರೀಮನ್  ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ-ವಿದ್ಯಾಮಠ- ಮಂತ್ರಾಲಯ/ನಂಜನಗೂಡು ಇದರ ಪೀಠ ವಿರಾಜಮಾನ , ಪ್ರಾತ: ಸ್ಮರಣೀಯರಾದ ಶ್ರೀ 1008 ಶ್ರೀ ಸುಶಮೀಂದ್ರ ತೀರ್ಥ ಶ್ರೀಪಾದಂಗಳವರ ವರಕುಮಾರರಾದ ಅಧುನಾ ಪೀಠ ವಿರಾಜಮಾನರಾದ ಶ್ರೀ 1008 ಶ್ರೀ ಸುಯತೀಂದ್ರ ತೀರ್ಥ ಶ್ರೀಪಾದಂಗಳವರು ತಮ್ಮ ಪೂರ್ವಿಕ ಗುರುಗಳಾದ ಶ್ರೀ ಜಯತೀರ್ಥರ ಬಗೆಗೆ ನುಡಿದ ಮಾತುಗಳು - 
 
     " ಮಧ್ವ ಸಿದ್ಧಾಂತಕ್ಕೆ ನಮ್ಮ ಪೂರ್ವಿಕ ಗುರುಗಳಾದ ಶ್ರೀ ಜಯತೀರ್ಥರ ಕೊಡುಗೆ ಅಪಾರ . ಶ್ರೀ ಮನ್ಯಾಯ ಸುಧಾ ಗ್ರಂಥವನ್ನು ಸಾರಸ್ವತಲೋಕಕ್ಕೆ ಕೊಡುವ ಮೂಲಕ ಸಿದ್ಧಾಂತವನ್ನು ಶ್ರೀಮಂತಗೊಳಿಸಿದರು . ಶ್ರೀ ಜಯತೀರ್ಥರ ಗ್ರಂಥದ ಮೇಲೆ ನಾಣ್ಣುಡಿ ಒಂದು ರಚಿತ ವಾಗಿದೆ ಎಂದರೆ ಅವರ ಗ್ರಂಥ ರಚನಾ ಸಾಮರ್ಥ್ಯ , ರಚನಾ ಶಕ್ತಿ ಎಂತಹುದು ಎಂದು ತಿಳಿಯಬಹುದು . ಇಂದು ಮಧ್ವ ಸಿದ್ಧಾಂತದ ಮೇರು ಕೃತಿಯಾದ ಶ್ರೀ ನ್ಯಾಯ ಸುಧೆಗೆ  30 ಕ್ಕೂ ಹೆಚ್ಚು ಟಿಪ್ಪಣಿಗಳಿವೆ ಇದರಿಂದಲೇ ಸುಧಾ ಗ್ರಂಥದ ಅಗಾಧ ಪ್ರೌಢಿಮೆ ಯನ್ನು ನಾವು ಅರಿಯಬಹುದು. ಶ್ರೀ ಮಠವು ಶ್ರೀ ಜಯತೀರ್ಥರ ಸಮಗ್ರ ಗ್ರಂಥಗಳ ಅಧ್ಯಯನಕ್ಕಾಗಿ ವಿಶೇಷ ವ್ಯವಸ್ಥೆಗಳನ್ನೂ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದಲ್ಲಿ ಮಾಡಿ ಮಠದ ಪೂರ್ವಿಕ ಗುರುಗಳಾದ ಶ್ರೀ ಜಯತೀರ್ಥರ ಸೇವೆಯನ್ನು ನಿರಂತರ ಮಾಡುತ್ತಲಿದೆ "
                                                              - "ಶ್ರೀ ಸುಯತೀಂದ್ರ ಸೂಕ್ತಿ ಸುಧಾ " 
                                                                  " ಶ್ರೀ ಗುರುಸಾರ್ವಭೌಮ " ಕನ್ನಡ ಮಾಸಪತ್ರಿಕೆ 
                                                                   ಶ್ರೀ ಮಠದ ಅಧಿಕೃತ ಮಾಸ ಪತ್ರಿಕೆ , ಜುಲೈ - ಆಷಾಢ ಸಂಚಿಕೆ 2012 
 
 ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥರ ಜಯತೀರ್ಥರ ಬಗೆಗಿನ ಮಾತುಗಳು 
   
  ಶ್ರೀಮಜ್ಜಯ ತೀರ್ಥರು ಶ್ರೀರಂಗ ಮುಂತಾದ ವೈಷ್ಣವ ಕ್ಷೇತ್ರಗಳಿಗೆ ಭೇಟಿ ನೀಡಿದ ದಾಖಲೆಗಳು ಇವೆ . ಟೀಕಾ ಕೃತ್ಪಾದರು ತಮ್ಮ ಕೊನೆಗಾಲದಲ್ಲಿ ದಕ್ಷಿಣದೇಶದಲ್ಲೆಲ್ಲ ಸಂಚರಿಸಿ ತಮ್ಮ ಗುರುಗಳು ವೃಂದಾವನಸ್ಥರಾಗಿದ್ದ ಮಳಖೇಡ ( ಮಾನ್ಯಖೇಠ )ದಲ್ಲಿ 1388 ರಲ್ಲಿ  ವೃಂದಾವನ ಪ್ರವೇಶ ಮಾಡಿದರು. ** ( ಪರಿಶಿಷ್ಟ 2 ನೋಡಿ )
 
        ಪರಿಶಿಷ್ಟ1** ಶ್ರೀ ಜಯತೀರ್ಥರ ಪಟ್ಟದ ಶಿಷ್ಯ  ಶ್ರೀ ವಿದ್ಯಾಧಿರಾಜ ತೀರ್ಥರು ಬರೆದ ಚರ್ಮ ಶ್ಲೋಕ ಎಲ್ಲಿ ಹೋಯಿತು ಎಂಬ ಪ್ರಶ್ನೆ ಉದ್ಭವಿಸುತ್ತದೆ . ಇದಕ್ಕೆ ಉತ್ತರ ಇನ್ನು ದೊರೆತಿಲ್ಲಾ . ಮತ್ತು ಶ್ರೀ ವಿದ್ಯಾಧಿರಾಜ ತೀರ್ಥರ ಪೂರ್ವಾಶ್ರಮದ ಹೆಸರು ಕೃಷ್ಣಭಟ್ಟರು , ಇವರು 4 ವರ್ಷಗಳ ಕಾಲ ಅಧಿಪತಿಯಾಗಿದ್ದರು , ' ಮುಂದೆ ಯರಗೊಳದಲ್ಲಿ ವೃಂದಾವನಸ್ಥರಾದರು' ಎಂದು ಮಠಗಳಲ್ಲಿನ ಗುರು ಪೀಳಿಗೆಯಿಂದ ತಿಳಿದು ಬರುತ್ತದೆ.ಆದರೆ ಇತಿಹಾಸಕಾರರ ಕೆಲವು ಸಂಶೋಧನೆಗಳ ಪ್ರಕಾರ  ಇವರ ವೃಂದಾವನ ಕಳಿಂಗದ(ಒರಿಸ್ಸಾ)ದ  ಜಗನ್ನಾಥ ಪುರಿಯಲ್ಲಿ ಇತ್ತು  .ಆದರೆ ಇವರ ವೃಂದಾವನ ಲಭ್ಯವಿಲ್ಲ . ಇವರು ರಚಿಸಿದ ಶ್ರೀ ಜಯತೀರ್ಥರ ಚರಮ  ಶ್ಲೋಕವೂ ಲಭ್ಯವಿಲ್ಲ . ಇವರು ಜಯತೀರ್ಥರ ಶಿಷ್ಯರು ಎಂದಾದಮೇಲೆ ಇವರ ಪಾಂಡಿತ್ಯದ ಮಟ್ಟವನ್ನು ಊಹಿಸಬಹುದು . ಶ್ರೀ ವಿದ್ಯಾಧಿರಾಜರ ಬಗೆಗೆ ಕೇವಲ ಸ್ವಲ್ಪ ಮಾತ್ರವೇ ಮಾಹಿತಿ ಲಭ್ಯವಿದ್ದುದು , ಅವರು ರಚಿಸಿದ ಯಾವುದೇ ಗ್ರಂಥಗಳು ಸಿಗದಿದ್ದುದು , ಅವರ ರಚನಾ ಸಾಮರ್ಥ್ಯ ಇಂದಿನ ಜನರಿಗೆ ತಿಳಿಯದಿದ್ದುದು ಸಾಕಲ ಮಾಧ್ವ ಸಮಾಜಕ್ಕೆ ಒಂದು ದುರದೃಷ್ಟಕರ ಸಂಗತಿ .                            
     ಪರಿಶಿಷ್ಟ2**  "  ಶ್ರೀ ಮಜ್ಜಯ ತೀರ್ಥರು 1388 ರಲ್ಲಿ ಕೇವಲ ತಮ್ಮ ಗುರುಗಳ ವೃಂದಾವನ ದರ್ಶನ ಮಾಡಿಕೊಂಡರೆ ಹೊರತು ಅಲ್ಲಿ ಅವರ ವೃಂದಾವನ ಪ್ರವೇಶ ಮಾಡಲಿಲ್ಲ ಮುಂದೆ ಅವರು ತಮ್ಮ ಪೂರ್ವಿಕ ಗುರುಗಳಾದ ಶ್ರೀ ಪದ್ಮನಾಭ ತೀರ್ಥರ ವೃಂದಾವನವಿದ್ದ ಗಜ ಗಹ್ವರ ( ಆನೆಗೊಂದಿ , ಈಗ ನವವೃಂದಾವನ) ದಲ್ಲಿ ವೃಂದವನ ಪ್ರವೇಶ ಮಾಡಿದರು." ಎಂಬುದು ಇತ್ತೀಚಿನ ಕೆಲವು ಸಂಶೋಧಕರ( ವಿದ್ವಾನ್ ಬಿ ಏನ್ ಕೆ ಶರ್ಮ ಹಾಗು ಇತ್ಯಾದಿ ) ಅಭಿಪ್ರಾಯವಾಗಿದೆ .   ಯಾದಕ್ಕೆ ಪುಷ್ಟಿ ನೀಡುವ ಲಬ್ಧ ಪ್ರಮಾಣ ಶ್ರೀ ವಾದಿರಾಜರು ರಚಿಸಿದ ತೀರ್ಥ ಪ್ರಬಂಧ . ಇದರಲ್ಲಿ ರಾಜರು ತಾವು ಭೇಟಿ ನೀಡಿರುವ ಕ್ಷೇತ್ರಗಳ ಮಹಿಮೆ ಅಲ್ಲಿರುವ ದೈವವನ್ನು ವರ್ಣಸಿರುತ್ತಾರೆ . ಅದೇ ರೀತಿ ರಾಜರು ಗಜ ಗಹ್ವರ ಕ್ಕೆ ಭೇಟಿ ನೀಡಿದಾಗ ಶ್ರೀ ಪದ್ಮನಾಭ ತೀರ್ಥಾದಿಯಾಗಿ ಯತಿಗಳನ್ನು ನಮಿಸುವಾಗ ಶ್ರೀ ಮಜ್ಜಯ ತೀರ್ಥ ರನ್ನು ನಮಿಸಿದ್ದಾರೆ . ಅದರಿಂದ ಮಳಖೇಡದಲ್ಲಿರುವದು ಕೇವಲ ಮೃತ್ತಿಕ ವೃಂದಾವನ ಗಜ ಗಹ್ವರದಲ್ಲಿರುವದೇ  ಮೂಲ ವೃಂದವನ ಎಂಬ ಅಭಿಪ್ರಾಯಕ್ಕೆ ಸಂಶೋಧಕರು ಬಂದಿದ್ದಾರೆ . ಆದರೆ ದಾಸರ ಪದಗಳಲ್ಲಿ ಜಯ ತೀರ್ಥರು " ಮಳಖೇಡ ವಾಸ " ಎಂದೇ ವರ್ಣಿತರಾಗಿದ್ದಾರೆ . ಆದ್ದರಿಂದ ಈ ವಿಷಯದಲ್ಲಿ ಇನ್ನು ಹೆಚ್ಚು ಸಂಶೋಧನೆ ಅಗತ್ಯವಿದೆ .   

                                           ಆದರೆ ಶ್ರೀ ಜಯತೀರ್ಥರು ಮಾತ್ರ ನಮ್ಮೊಂದಿಗೆ ಆನೆಗೊಂದಿ ಯಲ್ಲೇ ಆಗಲಿ ಮಲಖೆಡದಲ್ಲೇ ಇರಲಿ ಒಟ್ಟು ಇದ್ದಾರೆ .    
                                                                                                                              ಲೇಖಕರು- ಸಮೀರ ಜೋಷಿ
                                                                                                 
                                                 || श्री विबुधेन्द्र तीर्थ गुरुभ्यो नमः ||
         ಶ್ರೀ ವಿಬುಧೆಂದ್ರ ತೀರ್ಥ ಶ್ರೀಪಾದಂಗಳವರ ಮೂಲ ವೃಂದಾವನ , ತಾಮ್ರ ಪರ್ಣಿ ನದಿ ತೀರ , ತಿರುನಲ್ವೇಲಿ , 

ಕಾಲ-1435 - 1490
ಆಶ್ರಮ ಗುರುಗಳು - ಶ್ರೀ ರಾಮಚಂದ್ರ ತೀರ್ಥರು 
ಆಶ್ರಮ ಶಿಷ್ಯರು - ಶ್ರೀ ಜಿತಾಮಿತ್ರ ತೀರ್ಥರು 
ವಿದ್ಯಾ ಗುರುಗಳು- ಶ್ರೀ ರಾಜೇಂದ್ರ ತೀರ್ಥರು 
ವಿದ್ಯಾ ಶಿಷ್ಯರು - ಶ್ರೀ ಲಕ್ಶ್ಮಿನಾರಾಯಣ ತೀರ್ಥರು ( ಶ್ರೀ ಶ್ರೀಪಾದರಾಜರು )
ಶ್ರೀಮಠ- ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ 
ಆರಾಧನಾ ತಿಥಿ - ಮಾರ್ಗಶಿರ ಶುಕ್ಲ ದಶಮಿ 
ವೃಂದಾವನ ಸ್ಥಳ -ತಾಮ್ರ ಪರ್ಣಿ ನದಿ ತೀರ , ತಿರುನಲ್ವೇಲಿ ತಮಿಳುನಾಡು.
ಚರಮ ಶ್ಲೊಕ -
 आकॆरलं तथा सॆतुमागंगं चा हिमालयम् ।
निराकृताद्वैतशैवं विबुधॆंद्रगुरुं भजॆ ॥

                                     ಆಕೇರಲಂ  ತಥಾ ಸೇತುಮಾಗಂಗಂ ಚಾ ಹಿಮಾಲಯಮ್ |
ನಿರಾಕೃತಾದ್ವೈತಶೈವಂ ವಿಬುಧೇಂದ್ರಗುರುಂ ಭಜೇ ||


 ಇತಿಹಾಸ - 
 ಶ್ರೀ ವಿಬುಧೆಂದ್ರ ತೀರ್ಥರು ಶ್ರೀ ಜಯತೀರ್ಥ - ವಿದ್ಯಾಧಿರಾಜ -ಕವಿಂದ್ರ - ವಾಗೀಶ - ರಾಮಚಂದ್ರ ತೀರ್ಥರ ನಂತರ ವೇದಾಂತ ಸಾಮ್ರಾಜ್ಯಕ್ಕೆ ಅಧಿಪತಿಯಾದರು . ಶ್ರೀ ವಿಬುಧೆಂದ್ರ ತೀರ್ಥರು  ಶ್ರೀ ರಾಮಚಂದ್ರ ತೀರ್ಥರ ಹಿರಿಯ(ಜ್ಯೇಷ್ಠ) ಪೀಠಾಧಿಪತಿಗಳು . ಇವರು ಪ್ರಕಾಂಡ ಪಂಡಿತರು ಆಗಿದ್ದರು ಅಂತ ಇವರ ಚರಮ ಶ್ಲೋಕದಿಂದ ತಿಳಿಯಬಹುದು. ಅಂತಲೇ ಇವರ  ಗುರುಗಳಾದ ಶ್ರೀ ರಾಮಚಂದ್ರ ತೀರ್ಥರು ಇವರನ್ನು ಉತ್ತರ ಭಾರತದ  ದಿಗ್ವಿಜಯಕ್ಕೆ ಕಳುಹಿಸಿದ್ದರು. ಮಹಾಸ್ವಾಮಿಗಳು ಆಕೇರಳ-ಹಿಮಾಲಯ ಪರ್ಯಂತವಾಗಿ ಸಂಚಾರ,ವಾದಿ ದಿಗ್ವಿಜಯ , ಸಿದ್ಧಾಂತಪ್ರಸರ ಕಾರ್ಯವನ್ನು ಮಾಡಿದರು. ಇವರು ತಾವು ಜಯಿಸಿದ ೧೦೮ ವಾದ ಜಯ ಪತ್ರಗಳನ್ನು ತಿರುಪತಿ ಶ್ರೀನಿವಾಸದೇವರಿಗೆ ಸಮರ್ಪಿಸಿದರು ಎನ್ನುತ್ತದೆ ಇತಿಹಾಸ. ಇವರು ಅದ್ವೈತ ಭಯಂಕರ, ವಾಗ್ವಜ್ರಕಾರರಾದ , ಶ್ರೀ ಪದ್ಮನಾಭ ತೀರ್ಥರ ಪರಂಪರೆಯ ಶ್ರೀಪಾದರಾಜರ ( ಲಕ್ಷ್ಮಿನಾರಾಯಣ ತೀರ್ಥರ) ವಿದ್ಯಾಗುರುಗಳು . ಮತ್ತು ಸಪ್ತರಾತ್ರ ಪರ್ಯಂತವಾಗಿ ಕೃಷ್ಣವೇಣಿಯಲ್ಲಿ ಧ್ಯಾನಾಸಕ್ತರಾಗಿದ್ದ ರುದ್ರಾಂಶ ಸಂಭೂತ ಶ್ರೀ ಜಿತಾಮಿತ್ರ ತೀರ್ಥರು ಇವರ ಪ್ರಿಯ ಶಿಷ್ಯರು , ಪಟ್ಟದ ಶಿಷ್ಯರು , ಮಧ್ವ-ಜಯಾರ್ಯ-ರಾಮಚಂದ್ರ ತೀರ್ಥರಿಂದ ಬಂದ ಭವ್ಯ ಪರಂಪರೆಯನ್ನು ಮುಂದುವರೆಸಿದವರು.. ಇವರ ಶಿಷ್ಯರಾದ ಶ್ರೀಪಾದರಾಜರು  ಅದ್ವೈತಿ ಭಯಂಕರ , ವಿಜಯನಗರ ಸಾಮ್ರಾಟ್ ಶ್ರೀ ಕೃಷ್ಣದೇವರಾಯನ ರಾಜಗುರುಗಳಾಗಿ ಕನ್ನಡ ಸಾಮ್ರಾಜ್ಯವನ್ನು ಅನಭಿಷಿಕ್ತವಾಗಿ ಆಳಿದ ಶ್ರೀ ವ್ಯಾಸತೀರ್ಥರ ಗುರುಗಳು ,ಶ್ರೀ ವ್ಯಾಸರಾಜರು ತಮ್ಮ ಸ್ನೇಹಿತ - ಆಪ್ತರಾಗಿದ್ದ ವಿಬುಧೆಂದ್ರ ಮಠದ (ಈಗಿನ ರಾಯರ ಮಠದ) ಶ್ರೀ ಸುರೇಂದ್ರ ತೀರ್ಥರಿಗೆ ತಾವೇ ಬಾಲ್ಯದಲ್ಲಿ ಸನ್ಯಾಸ ಕೊಟ್ಟು ಸಲುಹಿ ಚುತುಷ್ಶಷ್ಟಿ ಕಲಾವಿದ್ಯಾವಿಶೇಷರಾಗಿ ಭೂಷಿತರಾದ  ಶ್ರೀ ವಿಜಯೀಂದ್ರ ತೀರ್ಥರನ್ನು ಪೂರ್ವದಲ್ಲೇ ಸಂಕಲ್ಪವಾದಂತೆಯೇ ದಯಪಾಲಿಸಿದರು . ಇದಲ್ಲದೆ ಶ್ರೀ ವ್ಯಸತೀರ್ಥರ ಮತ್ತೊಂದು ಅನರ್ಘ್ಯ ರತ್ನ ಸೋದೆ ಮಠದ  ಭಾವಿ ಸಮೀರ ಶ್ರೀ ವಾದಿರಾಜ ತೀರ್ಥರು. ಇವರನ್ನು ಒಳಗೊಂಡಂತೆ ಇತರ ಅನೇಕ ಸನ್ಯಾಸಿ ಶಿಷ್ಯರ ವಿದ್ಯಾ ಗುರುಗಳು . ಹೀಗೆ ಆಚಾರ್ಯರಿಂದ ಆರಂಭವಾದ ಈ ಜ್ಞಾನ ಪರಂಪರೆ ಅನೇಕ ಶಾಖೆಒಡೆದು ಶ್ರೀ ರಾಮಚಂದ್ರ ತೀರ್ಥರ ಕರಕಮಲ ಸಂಜಾತರಾದ ಶ್ರೀ ವಿಬುಧೆಂದ್ರ ತೀರ್ಥರಿಂದ ಹೊಸ ಆಯಾಮ ಪಡೆದದ್ದು ಇತಿಹಾಸ.
                   ಈ ಎಲ್ಲ ಕಾರಣಗಳಿಂದ ಇಡಿಯದಾದ ವೈದಿಕ ಸಾಮ್ರಾಜ್ಯದಲ್ಲಿ ಒಂದು ಸ್ವಾರಸ್ಯಕರವಾದ ಮಾತಿದೆ " विबुधेन्द्रोच्चिष्टं जगत्सर्वं " ( ವಿಬುಧೆಂದ್ರೋಚ್ಚಿಷ್ಟಂ ಜಗತ್ಸರ್ವಂ ) ಎಂಬ ಮಾತು ಇದೆ . ಇದು ಕೇವಲ ಅವರ ಕೊಡುಗೆಯನ್ನು ಜ್ಞಾನಕಾರ್ಯವನ್ನು ಸೂಚಿಸಲು ಇರುವ ವರ್ಣನವಾಕ್ಯ. ಇಂದಿಗೆ ಮಧ್ವ ಸಾಮ್ರಾಜ್ಯದಲ್ಲಿ ನೆಲೆಸಿದ ಜ್ಞಾನಕ್ಕೆ , ಸಾಮ್ರಾಜ್ಯದ ಉಳಿವಿಗೆ ಶ್ರೀ ವಿಬುಧೆಂದ್ರ ತೀರ್ಥರೆ ಕಾರಣ.  ಇವತ್ತಿಗೂ ಇರುವ ಮಧ್ವ ಪ್ರಜ್ಞೆಯ ಮೂಲ ಶ್ರೀ ವಿಬುಧೆಂದ್ರ ತೀರ್ಥ ಶ್ರೀಪಾದಂಗಳವರು ಶ್ರೀ ನೃಸಿಂಹ ದೇವರ ಆರಾಧಕರು . ಶ್ರೀ ಮೂಲರಾಮದೇವರ ಪೂಜೆ ಇವರಿಗೆ ದೊರಕದಿದ್ದರೂ ಶ್ರೀಹರಿ ಸ್ವಪ್ನದಲ್ಲಿ ಬಂದು ನರಸಿಂಹ ರೂಪಿಯಾಗಿ ಗುರುಗಳಿಗೆ ಒಲಿದ. ಆದರೆ ಸ್ವಪ್ನದಲ್ಲಿ ಸೂಚಿಸಿದಂತೆಯೇ ಬ್ರಹ್ಮ ಕರಾರ್ಚಿತ ಶ್ರೀಮನ್ಮೂಲ ರಾಮಚಂದ್ರ ದೇವರ ಪೂಜೆಗಾಗಿಯೇ  ವಿಬುಧೆಂದ್ರರು ಶ್ರೀ ವಿಜಯೀಂದ್ರ ತೀರ್ಥರಾಗಿ ಅವತಾರ ಮಾಡಿದರು ಅನ್ನುವದು ಸಂಪ್ರದಾಯದ ಮಾತು , ಗ್ರಂಥಕಾರರ ಉಕ್ತಿ . ಇಂತಹ ವಿಬುಧೆಂದ್ರ ತೀರ್ಥರ ಮಹಿಮೆ , ಅವರ ವೈಶಿಷ್ಟ್ಯವನ್ನು ಅವರ ಸಮಕಾಲಿನ ಅನೇಕ ಗ್ರಂಥಗಳಿಂದ ಪಡೆದುಕೊಳ್ಳಬಹುದು. ಇದಲ್ಲದೆ  ವಾದಿರಾಜರ ಶಿಷ್ಯ ಮಧ್ವಕವಿ ಕೃತ ವಿಜಯೀಂದ್ರ  ವಿಜಯ ಇತ್ಯಾದಿ ಗ್ರಂಥಗಳು ವಿಬುಧೆಂದ್ರರ ಮಹಾಮಹಿಮೆಯನ್ನು ಸಾರುತ್ತವೆ. ನಾವೆಲ್ಲ ಇಂದು ಅನುಭವಿಸುತ್ತಿರುವ ಮಾಧ್ವ ತತ್ವಜ್ಞಾನ ಶ್ರೀ ವಿಬುಧೇಂದ್ರ ತೀರ್ಥರ ಜ್ಞಾನ ಪರಂಪರೆಯಿಂದ ಬಂದದ್ದು .  ಅಂತಹ ಮಹಾ ಜ್ಞಾನಿಗಳಾದ ವಿಬುಧೆಂದ್ರ ತೀರ್ಥರಿಗೆ ಪ್ರಸಕ್ತ ಮಾಧ್ವ ಸಮಾಜ ಬಹಳ ಋಣವನ್ನು ತೀರಿಸಬೇಕಿದೆ .  ಅದು ನಮ್ಮಿಂದ ಸಾಧ್ಯವಿಲ್ಲದಿದ್ದರೂ ಗುರುದಕ್ಷಿಣ ರೂಪವಾಗಿ ಯಥಾ ಶಕ್ತಿ , ಯೋಗ್ಯತಾನುಸಾರಿಯಾಗಿ ಮಧ್ವ ಶಾಸ್ತ್ರಗಳನ್ನು ಅಧ್ಯಯನ ಮಾಡೋಣ . ಶ್ರೀ ಕೃಷ್ಣಾರ್ಪಣ ಮಸ್ತು.



2 comments:

  1. ತುಂಬ ಚೆನ್ನಾದ ಭಾವಪೂರ್ಣ ಮಾಹಿತಿ, ಸಮೀರ್ ಜೋಷಿಯವರೇ, ಅನೇಕಾನೇಕ ಧನ್ಯವಾದಗಳು.

    ReplyDelete

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...