ರಾಮನ ನೋಡಿರೈ.... ರಾಮನ ನೋಡಿರೈ ....
ತನ್ನ ಭಕ್ತಸಮೂಹವನ್ನು ಪಾಪಸಮುದ್ರದಿಂದ ತಾರಣ ಮಾಡಿಸಿ ರಕ್ಷಿಸಲಿಚ್ಛಿಸಲೆಂದು ಪರಮಕಾರುಣ್ಯದಿಂದ ಭಗವಂತ ಎತ್ತಿದ ಅವತಾರವೇ ಶ್ರೀರಾಮಾವತಾರ. 'ರಾಮ' ಎಂಬೆರೆಡಕ್ಷರ ಪ್ರೇಮದಿ ಸಲಹಿತು ಸುಜನರನು ಎಂದು ದಾಸರೇ ನುಡಿದಿದ್ದಾರೆ. ಸಮಸ್ತ ಆಸ್ತಿಕರ ಹೃತ್ಕಮಲಮದ್ಯನಿವಾಸಿ ಶ್ರೀರಾಮಚಂದ್ರ. ಈ ಭಾರತಭೂಮಿಯ ಅಸ್ಮಿತೆಯ ಸಂಕೇತ. ಸಾಧು-ಸಜ್ಜನರ ಆರಾಧ್ಯ. ಈ ದೇಶದ ಸಂಸ್ಕೃತಿಯ ಅವಿಭಾಜ್ಯ ಅಂಗ. ಭಕ್ತರ ಮನೆ-ಮನ ಆವರಿಸಿರುವ ಭಗವಂತನ ಭವ್ಯರೂಪ.
ಕಲ್ಯಾಣಗುಣಪರಿಪೂರ್ಣನಾದ ಆ ಭಾವಂತನ ಈ ಶ್ರೀರಾಮಚಂದ್ರರೂಪವನ್ನು ನಮ್ಮ ಮತಾಚಾರ್ಯರಾದ ಶ್ರೀಮದಾಚಾರ್ಯರು ಹನುಮಾವತಾರದಲ್ಲಿ ವಿಶೇಷವಾಗಿ ಆದರೂ ಮೂರು ಅವತಾರಗಳಲ್ಲಿ ಅನನ್ಯವಾಗಿ ಆರಾಧಿಸಿದ್ದಾರೆ, ಸೇವಿಸಿದ್ದಾರೆ. ಹಾಗೆಯೇ ತಮ್ಮ ಶಿಷ್ಯಪ್ರವರ ಶ್ರೀಪದ್ಮನಾಭತೀರ್ಥರಿಗೂ ವಿಶೇಷವಾಗಿ ಅನುಗ್ರಹಿಸಿ ಕೊಟ್ಟದ್ದು ಶ್ರೀರಘುಪತಿಯನ್ನೇ ಎಂದು ಶ್ರೀಹೃಷಿಕೇಶತೀರ್ಥರು ದಾಖಲಿಸಿದ್ದಾರೆ.
ಅಂತಹ ಶ್ರೀರಾಮದೇವರು ಅನೇಕ ಪ್ರತಿಮೆಗಳಲ್ಲಿ ಸನ್ನಿಹಿತನಾಗಿ ಶ್ರೀಮದಾಚಾರ್ಯರ ಕರಸ್ಪರ್ಶಮಾತ್ರದಿಂದಲೇ ಅತಿಪೂಜ್ಯ ಅನೂಹ್ಯ ಸನ್ನಿಧಾನವನ್ನು ಇಟ್ಟು ಶ್ರೀಮದಾಚಾರ್ಯರವರದನಾಗಿ ಮೆರೆದಿದ್ದಾನೆ. ಆ ಪ್ರತಿಮಾದಿಗಳ ಸ್ಪರ್ಶ ಮಾಡುವವರ, ಅರ್ಚಿಸುವವರ ಇಷ್ಟಾರ್ಥಗಳನ್ನು ಪೊರೆವುದಲ್ಲದೇ ಆ ಅಧಿಷ್ಠಾನದ ದರ್ಶನ ಮಾಡಿದವರ ಬೇಡಿದ ಕಾಮಿತಗಳನ್ನೆಲ್ಲ ಪೊರೆಯುವುದು ಎನ್ನಲು ಹರಿದಾಸರ ಸ್ವಾನುಭವದ ನೂರಾರು ಕೀರ್ತನೆಗಳೇ ಜ್ವಲಂತ ಸಾಕ್ಷಿ.
ಶ್ರೀಮದಾಚಾರ್ಯರು ಸ್ವಯಮ್ ತಾವೇ ಅರ್ಚಿಸಿದ ಪ್ರತಿಮೆಗಳ ಅಂತರ್ಗತನಾದ ಆ ಭಗವಂತನ ಸ್ತೋತ್ರಪರವಾದ ಅನೇಕ ಕೀರ್ತನೆಗಳು ಉಪಲಬ್ಧವಿವೆಯಷ್ಟೇ.
ಆದರೆ ಪ್ರಸ್ತುತ ಶ್ರೀರಾಮಚಂದ್ರ ದೇವರನ್ನು ಹಾಗೂ ರಾಮಾವತಾರದ ಮಹಾಮಹಿಮೆಯನ್ನು, ಆಚಾರ್ಯರೇ ಮೊದಲಾದ ಮಹನೀಯರು ಮೋದದಿಂದ ಅರ್ಚಿಸಿದ ಆ ದಿವ್ಯಸನ್ನಿಧಾನೋಪೇತ ಪ್ರತಿಮೆಗಳ ಸೌಂದರ್ಯಾದಿ ವೈಭವವನ್ನು ವರ್ಣಿಸಲು ಹರಿದಾಸರ ಈ ಮೂರು ಪದಗಳು ವಿಶಿಷ್ಟವಾಗಿವೆ. ಈ ಮೂರು ಪದಗಳ ಶೈಲಿ ಒಂದೇ ಆಗಿದ್ದು, ಆ ಕೀರ್ತನೆಗಳನ್ನು ಅವಲೋಕಿಸುವುದೇ, ಹಾಡಿ ಕೊಂಡಾಡಿ ಕೇಳುವದೇ ಮನಸ್ಸಿಗೆ ಮುದನೀಡುತ್ತದೆ.
ಮೂರೂ ಪದಗಳು 'ರಾಮನ ನೋಡಿರೈ.... " ಎಂದೇ ಆರಂಭವಾಗುತ್ತವೆ. ಒಂದೊಂದಾಗಿ ಆ ಪದಗಳ ಪರಿಚಯವನ್ನು ಸಂಕ್ಷಿಪ್ತವಾಗಿ ನೋಡೋಣ.
೧. "ರಾಮನ ನೋಡಿರೈ ನಿಮ್ಮಯ ಕಾಮಿತ ಬೇಡಿರೈ" -
ರಚನೆ: ದಾಸಶ್ರೇಷ್ಠ, ಹರಿಕಥಾಮೃತಸಾರಾದಿ ಉದ್ಗ್ರಂಥಳ ರಚಿಸಿದ ಶ್ರೀಜಗನ್ನಾಥದಾಸಾರ್ಯರ ರಚನೆ.
ವಸ್ತು: ಶ್ರೀರಾಘವೇಂದ್ರಮಠಸ್ಥಿತ ಶ್ರೀಬ್ರಹ್ಮಕರಾರ್ಚಿತ ಚತುರ್ಯುಗ ಮೂರ್ತಿ ಶ್ರೀಮೂಲರಾಮ ದೇವರ ದಿವ್ಯ ಪ್ರತಿಮೆ.
ಪ್ರಸಂಗ: ಶ್ರೀವಸುಧೇಂದ್ರ ತೀರ್ಥರು ಮಾಡುವ ವೈಭವದ ಶ್ರೀಮೂಲರಾಮಾರ್ಚನೆಯ ಸಂದರ್ಭದಲ್ಲಿ ಶ್ರೀಮೂಲರಾಮದೇವರ ಆಗತಿಕ್ರಮದ ರಚಿಸಿದ ಕೀರ್ತನೆ. ಶ್ರೀಮೂಲರಾಮಪ್ರತಿಮೆಯ ಬಗ್ಗೆ ದಾಸಾರ್ಯರು ದಾಖಲಿಸಿಟ್ಟ ಮಹತ್ತರವಾದ ಐತಿಹಾಸಿಕ ದಾಖಲೆ. ಮೂಲರಾಮನ ಪೂಜಾ ಪರಂಪರೆಯನ್ನು ದಾಖಲಿಸುವ ಕೃತಿ.
ಮೂಲರಾಮನನ್ನು 'ವಸುಧೇಂದ್ರಾರ್ಯರ ಪ್ರಿಯ ಕವಿಜನ ಗೇಯ' ಎಂದಿದ್ದಾರೆ.
|
ಶ್ರೀಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀರಾಘವೇಂದ್ರಸ್ವಾಮಿಗಳವರ ಮಠದ ಸಂಸ್ಥಾನ ಮುಖ್ಯಪ್ರತಿಮಾ ಚತುರ್ಮುಖಬ್ರಹ್ಮ ಕರಾರ್ಚಿತ ಶ್ರೀಮನ್ಮೂಲರಾಮಚಂದ್ರದೇವರು (ಮಧ್ಯದಲ್ಲಿ ) |
೨. "ರಾಮನ ನೋಡಿರೈ ರಘುಜಲಲಾಮನ ಪಾಡಿರೈ"-
ರಚನೆ: ದಾಸಶ್ರೇಷ್ಠ ಶ್ರೀಗೋಪಾಲದಾಸಾರ್ಯರ ಶಿಷ್ಯರೂ ಹಾಗೂ ತಮ್ಮಂದಿರಾದ ಶ್ರೀಗೋಪಾಲದಾಸಾರ್ಯರಿಂದಲೇ ಅಂಕಿತ ಪಡೆದ ಮಾಹಾನುಭಾವರಾದ ಶ್ರೀಗುರುಗೋಪಾಲದಾಸಾರ್ಯರ ರಚನೆ.
ವಸ್ತು: ಶ್ರೀರಾಘವೇಂದ್ರಮಠಸ್ಥಿತ ಶ್ರೀಬ್ರಹ್ಮಕರಾರ್ಚಿತ ಚತುರ್ಯುಗ ಮೂರ್ತಿ ಶ್ರೀಮೂಲರಾಮ ದೇವರ ದಿವ್ಯ ಪ್ರತಿಮೆ.
ಪ್ರಸಂಗ: ಶ್ರೀವಸುಧೇಂದ್ರ ತೀರ್ಥರ ಕಾರಕಮಲಸಂಜಾತರಾದ ಶ್ರೀವರದೇಂದ್ರತೀರ್ಥರು ಮಾಡುವ ವೈಭವದ ಶ್ರೀಮೂಲರಾಮಾರ್ಚನೆಯ ಸಂದರ್ಭದಲ್ಲಿ ಶ್ರೀಮೂಲರಾಮದೇವರ ಆಗತಿಕ್ರಮದ ಬಗ್ಗೆ ಉಲ್ಲೇಖಿಸುತ್ತಾ, ರಚಿಸಿದ ಕೀರ್ತನೆ. ಮೂಲರಾಮಪ್ರತಿಮೆಯ ಬಗ್ಗೆ ದಾಸಾರ್ಯರು ದಾಖಲಿಸಿಟ್ಟ ಮಹತ್ತರವಾದ ಐತಿಹಾಸಿಕ ದಾಖಲೆ. ಶ್ರೀವರದೇಂದ್ರತೀರ್ಥರ ಕರಗಳಿಂದ ಪೂಜೆಗೊಂಬ ಮೂಲರಾಮನ ವೈಭವ ಇಲ್ಲಿದೆ.
'ಗುರು ವರದೇಂದ್ರರ ಕಾರಕಮಲಾರ್ಚಿತಚರಣ' ಎಂದು ಮೂಲರಾಮನನ್ನು ಉಲ್ಲೇಖಿಸಿದ್ದಾರೆ.
|
ಶ್ರೀಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀರಾಘವೇಂದ್ರಸ್ವಾಮಿಗಳವರ ಮಠದ ಸಂಸ್ಥಾನ ಮುಖ್ಯಪ್ರತಿಮಾ ಚತುರ್ಮುಖಬ್ರಹ್ಮ ಕರಾರ್ಚಿತ ಶ್ರೀಮನ್ಮೂಲರಾಮಚಂದ್ರದೇವರು (ಮಧ್ಯದಲ್ಲಿ )
|
೩. "ರಾಮನ ನೋಡಿರೈ ಮಂಗಳಧಾಮನ ಪಾಡಿರೈ" -
ರಚನೆ: ಶ್ರೀಕೊಪ್ಪರ ಲಕ್ಷ್ಮೀ-ನರಸಿಂಹದೇವರ ದಿವ್ಯಪಾದಪದ್ಮಾರಾಧಕರಾದ ಅರ್ಚಕರಾದ, ಶ್ರೀರಾಘವೇಂದ್ರಗುರುಸಾರ್ವಭೌಮರ ಅನನ್ಯ ಭಕ್ತರಾದ, ಇಭರಾಮಪುರ ಕೃಷ್ಣಾಚಾರ್ಯರ ( ಪೂಜ್ಯ ಅಪ್ಪಾ ಅವರ) ಭಕ್ತರಾದ ಕೊಪ್ಪರ ಗಿರಿಯಾಚಾರ್ಯರು
ವಸ್ತು: ಶ್ರೀಕೂಡಲಿ ಆರ್ಯ ಅಕ್ಷೋಭ್ಯತೀರ್ಥಮಠಸ್ಥಿತ ಶ್ರೀಮಧ್ವಾಚಾರ್ಯರ ಕರಾರ್ಚಿತ ಶ್ರೀವೈಕುಂಠರಾಮ ದೇವರ ದಿವ್ಯ ಪ್ರತಿಮೆ.
ಪ್ರಸಂಗ: ಶ್ರೀರಘುಶಾಂತ ತೀರ್ಥರು ಮಾಡುವ ವೈಭವದ ಶ್ರೀವೈಕುಂಠರಾಮದೇವರ ಪೂಜೆಯ ಸಂದರ್ಭದಲ್ಲಿ ರಚಿಸಿದ ಕೀರ್ತನೆ. ಶ್ರೀವೈಕುಂಠರಾಮದೇವರ ಬಗ್ಗೆ ದಾಸಾರ್ಯರು ದಾಖಲಿಸಿಟ್ಟ ಮಹತ್ವಪೂರ್ಣ ಐತಿಹಾಸಿಕ ದಾಖಲೆ.
ಕರ್ತೃಗಳ ಕಾಲಮಾನ : ಕಾರ್ಪರ ನರಹರಿ ದಾಸರ ಕಾಲ (1896-1979)
|
ಕೂಡಲಿ ಆರ್ಯ ಅಕ್ಷೋಭ್ಯತೀರ್ಥ ಸಂಸ್ಥಾನದ ಮುಖ್ಯಪ್ರತಿಮಾ ಶ್ರೀಮನ್ಮಧ್ವಾಚಾರ್ಯರ ಕರಾರ್ಚಿತ ವೈಕುಂಠ ರಾಮಚಂದ್ರದೇವರು |
ಅಂತಹ ಶ್ರೀರಾಮಚಂದ್ರದೇವರ ದರ್ಶನವನ್ನು ಮಾಡಿ ನಾವು ನೀವು ಎಲ್ಲರೂ ಕೃತಾರ್ಥರಾಗೋಣ.