Thursday 13 March 2014

ಶ್ರೀ ಧೀರೇಂದ್ರ ತೀರ್ಥರ ಸಂಕ್ಷಿಪ್ತ ಚರಿತ್ರೆ - ಸಂಗ್ರಹ- ಶ್ರೀಪಾದಸೇವಕ ಸಮೀರ ಜೋಷಿ



ಶ್ರೀಮನ್ಮೂಲರಾಮೋ ವಿಜಯತೆ                                                                  ಶ್ರೀಗುರುರಾಜೋ ವಿಜಯತೆ


ಪೂರ್ವಾಶ್ರಮ-
                 ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ದಿಗ್ವಿಜಯ ವಿದ್ಯಾಸಿಂಹಾಸನಾಧೀಶ್ವರರಾದ ಶ್ರೀ ಶ್ರೀ ೧೦೦೮ ಶ್ರೀ ಧೀರೇಂದ್ರ ತೀರ್ಥರ ಬಗ್ಗೆ ಮಾತನಾಡಲು ನನ್ನ ಯೋಗ್ಯತೆ ಸಾಲದು. ಶ್ರೀ ರಾಘವೇಂದ್ರ ಗುರುಗಳ ಪರಮಾನುಗ್ರಹಕ್ಕೆ ಪಾತ್ರರಾಗಿದ್ದ ಶ್ರೀ ವಾದೀಂದ್ರ ತೀರ್ಥರ ಗುರುಸರ್ವಭೌಮರ ಪೂರ್ವಾಶ್ರಮ ಪುತ್ರರ ಹೆಸರು ಶ್ರೀ ಜಯರಾಮಚಾರ್ಯರು ಎಂದು. ಶ್ರೀ ಜಯರಾಮಾಚಾರ್ಯರು ತಮ್ಮ ಸಕಲ ವಿದ್ಯಾಭ್ಯಾಸಗಳನ್ನು ತಮ್ಮ ತಂದೆಗಳಾದ ಶ್ರೀ ಶ್ರೀನಿವಾಸಾಚಾರ್ಯರಲ್ಲಿ ಅರ್ಥಾತ್ ಶ್ರೀಮದಾಚಾರ್ಯರ  ಪೀಠವನ್ನು  ಶ್ರೀಮದುಪೇಂದ್ರ ತೀರ್ಥರ ನಂತರ ಆಳಿದ ಶ್ರೀ ವಾದೀಂದ್ರ ತೀರ್ಥ ಗುರುಸರ್ವಭೌಮರಲ್ಲೇ ಆಯಿತು. ಅವರಲ್ಲಿ ಜನ್ಮ ಪಡೆಯುವದಲ್ಲದೇ ಅವರಲ್ಲೇ  ವಿದ್ಯಾಭ್ಯಾಸ ಮಾಡುವ ಮಹಾ ಭಾಗ್ಯ ಶ್ರೀ ಧೀರೇಂದ್ರ ತೀರ್ಥ ಶ್ರೀಪಾದಂಗಳವರದ್ದು. ಆಚಾರ್ಯರು ಶ್ರೀ ವಾದೀಂದ್ರ ತೀರ್ಥರ ಪರಮಾನುಗ್ರಹದಿಂದ ವಿಲಕ್ಷಣ ಪಾಂಡಿತ್ಯ ಗಳಿಸಿ ಪೂರ್ವಾಶ್ರಮದಲ್ಲೇ ದೇಶದ ಉದ್ದಗಲಕ್ಕೂ ಸಂಚರಿಸಿ ವಾದಿ ದಿಗ್ವಿಜಯ , ಶ್ರೀಮದಾಚಾರ್ಯರ ಸಿದ್ಧಾಂತ ಮಂಡನೆ ಇತ್ಯಾದಿಗಳನ್ನು ಮಾಡಿ ಸಂಸ್ಥಾನದ ಸೇವೆಗೈಯುತ್ತಿದ್ದರು. ಶ್ರೀ ವಾದೀಂದ್ರ ತೀರ್ಥರು ತತ್ವಪ್ರಕಾಶಿಕಾ ಟಿಪ್ಪಣಿಯಾದ " 'ಮೀಮಾಂಸಾ ನಯದರ್ಪಣ' , 'ತತ್ವೊದ್ಯೋತ ಟಿಪ್ಪಣಿ ', 'ಭೂಗೋಳ-ಖಗೋಳ ವಿಚಾರಃ' , ' ಜಗದ್ಗುರು ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಮಠಾರ್ಚಾ ಗತಿಕ್ರಮ' , 'ಗುರುಗುಣಸ್ತವನಂ','ನವ್ಯದುರುಕ್ತಿ ಶಿಕ್ಷಾ (ಪೂರ್ವಾಶ್ರಮದಲ್ಲಿ ರಚಿಸಿದ್ದು)' ಹೀಗೆ    ಅನೇಕ ಪ್ರೌಢ ಗ್ರಂಥಗಳನ್ನು ರಚಿಸಿದ್ದಾರೆ. ಅದರಲ್ಲಿ ಶ್ರೀ ರಾಘವೇಂದ್ರ ಗುರುಗಳ ಗ್ರಂಥರಚನ ಶೈಲಿ , ಸಾಮರ್ಥ್ಯ , ಮಹತ್ವ ಎಲ್ಲವನ್ನೂ ವಿಶಿಷ್ಟವಾಗಿ ಸ್ತವನ ಮಾಡುವ ಕೃತಿಯೇ "ಶ್ರೀಗುರುಗುಣಸ್ತವನ" . ಇದನ್ನು ಶ್ರೀ ವಾದೀಂದ್ರ  ತೀರ್ಥರು ಶ್ರೀ ಗುರುಸಾರ್ವಭೌಮರಿಗೆ ಸಮರ್ಪಿಸಿದಾಗ ಶ್ರೀ ರಾಯರ ಮೂಲಬೃಂದಾವನವು ರಾಯರ ಸಮ್ಮತಿ ತಿಳಿಸಲು ಅಲುಗಾಡಿತು. ಅಂತಹ ಮಾಹಾನುಭಾವರು ರಾಯರನ್ನು ಅರಿತವರು ಶ್ರೀ ವಾದೀಂದ್ರ ತೀರ್ಥರು. ಈ ಘಟನೆ ತಿಳಿದು ಶ್ರೀ ಜಯರಾಮಚಾರ್ಯರು ಉತ್ಸುಕರಾಗಿ ಅದನ್ನು ಅಧ್ಯಯನ ಮಾಡಿ ಅದಕ್ಕೆ ತಮ್ಮದೇ ಒಂದು ವ್ಯಾಖ್ಯಾನ ರಚನೆ ಮಾಡಿ ಶ್ರೀ ವಾದೀಂದ್ರ ತೀರ್ಥ ಗುರುಸಾರ್ವಭೌಮರಲ್ಲಿ ಅದನ್ನು ಸಮರ್ಪಿಸಿದರು ( ಇದೆ ಗ್ರಂಥಕ್ಕೆ ಶ್ರೀ ವಾದೀಂದ್ರ ತೀರ್ಥರ ಪಟ್ಟದ ಶಿಷ್ಯ ಶ್ರೀ ವಸುಧೇಂದ್ರ ತೀರ್ಥರ ವ್ಯಾಖ್ಯಾನವೂ ಇದೆ ) .  ಆಗ ಶ್ರೀ ವಾದೀಂದ್ರ ತೀರ್ಥರು , ತಮ್ಮ ಪೂರ್ವಾಶ್ರಮ ಪುತ್ರರೂ ಹಾಗು ಸಂಸ್ಥಾನದ ಮಹಾ ಮೇಧಾವಿಗಳೂ ಆಗಿರುವ ಇವರು ಪೀಠಕ್ಕೆ ಬಂದರೆ ಸಂಸ್ಥಾನದ ಶ್ರೇಯೋಭಿವೃದ್ಧಿ ಆಗುವದು ಅಂತ ಅಂದುಕೊಂಡು ಆಚರ್ಯರಿಗೆ ಸೂಕ್ಷ್ಮವಾಗಿ "  ಜಯರಾಮ ! ಇಷ್ಟಾದರೆ ಸಾಲದಪ್ಪ ನಿಜವಾದ ವೈರಾಗ್ಯ ಬೇಕು " ಎಂದು ನುಡಿದರು.



              ಶ್ರೀ ಜಯರಾಮಚಾರ್ಯರು , ಶ್ರೀ ವಾದೀಂದ್ರರ ಮಾತಿನಂತೆ ವೈರಾಗ್ಯವನ್ನನುಸರಿಸುತ್ತ ಮತ್ತೆ ಸಂಚಾರ ಪ್ರಾರಂಭ ಮಾಡಿದರು . ಇತ್ತ ಕಾಲ ಕ್ರಮೇಣ ಶ್ರೀ ವಾದೀಂದ್ರ ತೀರ್ಥರು , ಶ್ರೀ ವಸುಧೇಂದ್ರ ತೀರ್ಥರಿಗೆ ಮಹಾ ಸಂಸ್ಥಾನ ಒಪ್ಪಿಸಿ ಮಂತ್ರಾಲಯದಲ್ಲಿ ಶ್ರೀ ಗುರುರಾಜರ ವೃಂದಾವನದ ಪಕ್ಕದಲ್ಲಿ , ಶ್ರೀ ಗುರುರಾಜರಿಗಾಗಿಯೇ ಸಂಕಲ್ಪಿಸಿದ ವೃಂದಾವನವನ್ನು , ಗುರುರಾಜರ ಅಣತಿಯಂತೆ , ಆದೇಶದಂತೆ ಶ್ರೀ ವಾದೀಂದ್ರ ತೀರ್ಥರು ಪ್ರವೇಶಿಸಿದರು. ಈ ಘಟನೆಯೊಂದೆ ಸಾಕು ಗುರುರಾಜರು ಶ್ರೀ ವಾದೀಂದ್ರ ತೀರ್ಥರ ಮೇಲೆ ಅದೆಷ್ಟು ಪ್ರೀತಿ ತೋರಿದ್ದಾರೆ ? ಅದೆಷ್ಟು ಅನುಗ್ರಹ ಮಾಡಿದ್ದಾರೆ ? ಅಂತ ತಿಳಿಯಲು. ಹೀಗೆ ಶ್ರೀ ವಾದೀಂದ್ರ ತೀರ್ಥರು ವೃಂದಾವನಸ್ಥರಾದ ವಿಷಯ ಕೇಳಿ ಶ್ರೀ ಜಯರಾಮಚರ್ಯರಿಗೆ ಸಿಡಿಲು ಬಡಿದಂತಾಗಿ ಅನಾಥ ಪ್ರಜ್ಞೆ ಮೂಡಿತು. ಆಚಾರ್ಯರ ವೈರಾಗ್ಯ ವೃದ್ದಿಗೆ ಇದು ಕಾರಣವಾಯಿತು .
              ಶ್ರೀ ವಾದೀಂದ್ರ ತೀರ್ಥರ ಹೃದ್ಗತ ವಿಷಯವನ್ನು ಅರಿತಿದ್ದ ಶ್ರೀ ವಸುಧೇಂದ್ರ ತೀರ್ಥರು , ಶ್ರೀ ಜಯರಾಮಚಾರ್ಯರನ್ನೇ ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಿಕೊಳ್ಳಲು ತೀರ್ಮಾನಿಸಿದರು . ಶ್ರೀಹರಿಯ ಸಂಕಲ್ಪ ಬೇರೆಯೇ ಇತ್ತು . ಶ್ರೀ ವಸುಧೇಂದ್ರ ತೀರ್ಥರು ಕೆಂಚನಗುಡ್ಡ ದ ಪ್ರದೇಶದಲ್ಲಿ ಸಂಚಾರದಲ್ಲಿ ಇದ್ದಾಗ ದೇಹಾಲಸ್ಯವಾಗಿ ಶ್ರೀ ವರದೇಂದ್ರ ತೀರ್ಥರಿಗೆ ತುರ್ತಾಗಿ ಆಶ್ರಮ ಪ್ರದಾನ ಮಾಡಿಸಿ ಅಲ್ಲಿಯೇ ವೃಂದಾವನಸ್ಥರಾದರು. ಮಹಾ ತಪಸ್ವಿಗಳಾಗಿದ್ದ ಶ್ರೀಗಳು ಇಂದಿಗೂ ಅಲ್ಲಿಯೇ ಸನ್ನಿಹಿತರಾಗಿ ಭಕ್ತರ ಅಭೀಷ್ಟ ಪೂರೈಸುತ್ತಿದ್ದಾರೆ. ಅಲ್ಲಿ ಯಾರಾದರೋ ದೇಹ ಶುದ್ಧಿ ಇಲ್ಲದೆ ಹೋದಲ್ಲಿ ಶಿಕ್ಷೆ ಮಾತ್ರ ಖಂಡಿತ . ಅಷ್ಟು ಜಾಗ್ರತ ಶ್ರೀ ವಸುಧೇಂದ್ರರ ಪುಣ್ಯ ಕ್ಷೇತ್ರ.
              ಇತ್ತ ಶ್ರೀ ವಸುಧೇಂದ್ರ ತೀರ್ಥರಲ್ಲಿ ಸನ್ಯಾಸ ಸ್ವೀಕಾರ ಮಾಡಿದ ಶ್ರೀ ವರದೇಂದ್ರ ತೀರ್ಥರು ಮಹಾ ತಪಸ್ವಿಗಳು , ದಾಸಶ್ರೇಷ್ಠರಾದ ಶ್ರೀ ಜಗನ್ನಾಥ ದಾಸರಿಗೆ ವಿದ್ಯೆ ಕೊಟ್ಟು ಸಲುಹಿದ ಮಹಾ ಗುರುಗಳು. ಶ್ರೀ ಜಯರಾಮಾಚಾರ್ಯರು ನೂತನ ಯತಿಗಳನ್ನು ಸಂಧಿಸಲು ಆಗಮಿಸಿದರು . ಒಮ್ಮೆ ಪುಣ್ಯನಗರಿ ( ಈಗಿನ ಪುಣೆಯಲ್ಲಿ) ಯಲ್ಲಿ ಪೇಶ್ವೆಗಳ ಪ್ರಧಾನ ನ್ಯಾಯಾಧೀಶನಾಗಿದ್ದ ಅದ್ವೈತಿ ಪಂಡಿತನೊಬ್ಬ ಶ್ರೀ ವರದೇಂದ್ರ ತೀರ್ಥರಿಗೆ ಬಹಿರಂಗವಾಗಿ ವಾದಿ ದಿಗ್ವಿಜಯಕ್ಕೆ ಆಹ್ವಾನ ನೀಡಿದ . ವಾದಕ್ಕೆ ವೇದಿಕೆ ಸಜ್ಜಾಯಿತು. ಶ್ರೀಯವರು ಗಾಂಭೀರ್ಯದಿಂದ ವಿರಾಜಮಾನರಾಗಿ ಪೇಶ್ವೆಯವರಿಂದ ಶ್ರೀ ಮಠಕ್ಕೆ ಸಲ್ಲಬೇಕಿದ್ದ ಮರ್ಯಾದೆಗಳನ್ನೆಲ್ಲ ಸ್ವೀಕರಿಸಿದರು. ಆಮೇಲೆ ಪಣ ನಿರ್ಧಾರದ ಸಮಯ. ಆಗ ಪೆಶ್ವೆಯಾ ನ್ಯಾಯಾಧೀಶ ಗೆದ್ದೇ ಗೆಲ್ಲುವೆ ಎಂಬ ಅಹಂಕಾರದಿಂದ " ಶ್ರೀಗಳವರ ಬಣ ವಾದದಲ್ಲಿ ಸೋತರೆ ಸಂಸ್ಥಾನವನ್ನು ಬಿಟ್ಟು ಬಿಡಿ ಸನ್ಯಾಸಿಗಳಂತೆ ಅಡ್ದಾಡಬೇಕು" ಎಂದು ಹೇಳಿದ. ಅದಕ್ಕೆ ಶ್ರೀಯವರು ಮಂದಹಾಸ ಬೀರಿ " ಆಗಲಿ , ನೀವೇನಾದರೂ ಸೋತರೆ ಈ ಭವ್ಯವಾದ ಮನೆಯನ್ನು ನಮಗೆ ಬಿಟ್ಟುಕೊಟ್ಟು, ಗಡಿಪಾರು ಹೊಂದಬೇಕು " ಎಂದು ಹೇಳಿದರು . ಆಗ ಇಬ್ಬರ ಬಣಗಳೂ ಇದನ್ನೋಪ್ಪಿ ವಾದ ಪ್ರಾರಂಭಕ್ಕೆ ಚಾಲನೆ ದೊರಕಿತು. ಬಹು ಕ್ಲಿಷ್ಟಕರ ವಾದ ವಿಷಯ ಎತ್ತಿಕೊಂಡು ಮಹಾ ಮೇಧಾವಿಯಾದ ಪಂಡಿತನು ತನ್ನ ವಾದ ಹೂಡಿದನು. ಆಗ ಅದಕ್ಕೆ ಶ್ರೀಯವರ ಬಣದಿಂದ ಶ್ರೀ ಜಯರಾಮಾಚಾರ್ಯರು ಎದ್ದು ನಿಂತು " ಇದಕ್ಕೆ ಶ್ರೀಗಳವರ  ಅವಶ್ಯಕತೆ ಇಲ್ಲವೇ ಇಲ್ಲ " ಎಂದು ಹೇಳಿ ತಾವೇ ಎಲ್ಲ ಪೂರ್ವಪಕ್ಷಗಳನ್ನು ಧ್ವಂಸ ಮಾಡಿ ಪರವಾದಿಗಳಿಗೆ ಸಿಂಹಸ್ವಪ್ನರಾದರು. ಆಗ ಶಾಸ್ತ್ರಿಗೆ ತನ್ನ ಸೋಲು ಸನಿಹ ಬರುತ್ತಿದೆ ಎಂದು ತಿಳಿದು , ಶ್ರೀ ಜಯರಮಾಚಾರ್ಯರ ಮಾತನ್ನು ಎದುರಿಸಲಾಗದೆ " ಶ್ರೀಗಳವರೊಂದಿಗೆ ಮಾತ್ರ ನಾನು ವಾದ ಮಾಡುವೆ ಇತರರೊಡನೆ ಮಾಡುವದಿಲ್ಲ" ಎಂದು ನುಡಿದ. ಆಗ ಶ್ರೀಗಳವರು ನುಸು ನಕ್ಕು ತಮ್ಮದೇ ಶೈಲಿಯಲ್ಲಿ ವಾದಿಯನ್ನು ಮಣಿಸಿದರು. ಇದು ಐತಿಹ್ಯ. ಈ ಘಟನೆಯನ್ನು ಶ್ರೀ ವರದೇಶ ವಿಠಲದಾಸರು ಬಹು ಸುಂದರವಾಗಿ ವರ್ಣಿಸಿದ್ದಾರೆ. ಇಲ್ಲಿ ಆಚಾರ್ಯರ ಪಾತ್ರ ಬಹು ಮುಖ್ಯವಾಗಿತ್ತು. ಆಗ ಶ್ರೀಗಳವರು ಜಯರಾಮಚಾರ್ಯರನ್ನು ಬಹುವಾಗಿ ಪ್ರಶಂಸಿಸಿ , ಸನ್ಮಾನಾದರಾದಿಗಳನ್ನೂ ಮಾಡಿಸಿ ಆಶೀರ್ವದಿಸಿ ಕಳುಹಿಸಿದರು.


ಸನ್ಯಾಸ-
       
ಒಮ್ಮೆ ಶ್ರೀ ಜಯರಾಮಚಾರ್ಯರು ಶ್ರೀ ವಿಜಯೀಂದ್ರ ತೀರ್ಥ ಗುರುಸಾರ್ವಭೌಮರ ಸನ್ನಿಧಾನವಾದ ಕುಂಭಕೋಣ ಕ್ಷೇತ್ರಕ್ಕೆ ದಯಮಾಡಿಸಿದ್ದರು. ಆಗ ವೃಂದಾವನದ ಎದುರಿಗೆ ಸಂಜೆ ಕುಳಿತಿದ್ದರು. ಆಗ ಶ್ರೀ ವಿಜಯೀಂದ್ರ ತೀರ್ಥರ ವೃಂದಾವನವನ್ನು ಅನುಸಂಧಾನ ಪೂರ್ವಕವಾಗಿ ನಮಸ್ಕರಿಸಿ ಅಲ್ಲಿಯೇ ಕುಳಿತಾಗ ಶ್ರೀ ಮಠದ ಗುರು ಪರಂಪರೆಯನ್ನು ಸ್ಮರಿಸುವಾಗ ತಮ್ಮ ಪೂರ್ವಾಶ್ರಮದ ಜನ್ಮದಾತರು ,  ವಿದ್ಯಾಗುರುಗಳೂ ಆದ ಶ್ರೀ ವಾದೀಂದ್ರ ಗುರುಗಳ ಸ್ಮರಣೆ ಬಂದಾಗ ಆಚರ್ಯರಿಗೆ ಮತ್ತೆ ಏನೋ ಭಾಸವಗುತ್ತಲಿತ್ತು. ಅವರು ಹೇಳಿದ ' ಇಷ್ಟಾದರೆ ಸಾಲದು ಜಯರಾಮ ! ನಿಜವಾದ ವೈರಾಗ್ಯ ಬೇಕು " ಅನ್ನೋ ಮಾತು ನಿರಂತರ ಕಿವಿಯಲ್ಲಿ ಹರಿದಾಡುತ್ತಿತ್ತು. ಸಂಜೆ ಕಳೆದು ರಾತ್ರಿಯಾಯಿತು ಆಚಾರ್ಯರು ಮಾತ್ರ ಅಲ್ಲೇ ಕುಳಿತಿದ್ದರು. ರಾತ್ರಿಯಿಡೀ ಅಲ್ಲಿಯೇ ಇದ್ದರು , ಬೆಳಗಿನ ಜಾವ ಸ್ವಲ್ಪ ಜ್ಹೊಂಪು ಹತ್ತಿದಾಗ ಆಚರ್ಯರಿಗೆ ಸಾಕ್ಷಾತ್ ಶ್ರೀ ವಿಜಯೀಂದ್ರ  ತೀರ್ಥ ಗುರುಸರ್ವಭೌಮರೆ ಬಂದು ನಿಂತು ಸನ್ಯಾಸ ದೀಕ್ಷೆಗೆ ಆದೇಶ ಮಾಡಿ , ದೀಕ್ಷೆ ನೀಡಿದರು . ಮರುದಿನವೇ ಶ್ರೀ ಆಚಾರ್ಯರು ವೃಂದಾವನದ ಸಾಕ್ಷಿಯಾಗಿ ಸನ್ಯಾಸ ದೀಕ್ಷೆ ಸ್ವೀಕಾರ ಮಾಡಿ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ವರದೇಂದ್ರ ತೀರ್ಥರ ಸನ್ನಿಧಾನಕ್ಕೆ ಹೊರಟರು. ಆಗ ಅಲ್ಲಿ ಶ್ರೀ ವರದೇಂದ್ರ ತೀರ್ಥರು ದೇಹಾಲಸ್ಯವಾಗಿದ್ದರಿಂದ ಜಯರಾಮಚಾರ್ಯರ ಆಗಮನವನ್ನೇ ನಿರೀಕ್ಷಿಸುತ್ತಿದ್ದರು. ಆದರೆ ಆಚಾರ್ಯರು ಅಲ್ಲಿ ಇರದ ಕಾರಣ , ಯಾವುದೇ ಕಾರಣಕ್ಕೂ ಸಂಸ್ಥಾನದ ಉಪಾಸ್ಯಮೂರ್ತಿ ಬ್ರಹ್ಮಕರಾರ್ಚಿತ ಮೂಲರಾಮದೇವರ ಪೂಜೆಗೆ ವ್ಯತ್ಯಯ  ಬರಬಾರದೆಂದು ನಿರ್ಧರಿಸಿ ಶ್ರೀ ಜಯರಾಮಚಾರ್ಯರ ಶಿಷ್ಯರೇ ಆದ  ಶ್ರೀ ಭುವನೇಂದ್ರ ತೀರ್ಥರಿಗೆ ಸನ್ಯಾಸ ದೀಕ್ಷೆನೀಡಿ ಮೂಲರಾಮ ಪೂಜಾ ಕೈಂಕರ್ಯ ನೆರವೇರಿಸಲು ಆದೇಶಿಸಿದರು. ಶ್ರೀ ವರದೇಂದ್ರ ತೀರ್ಥರು "ಜಯರಾಮಚರ್ಯರಿಗೆ ಸಂಸ್ಥಾನ ಒಪ್ಪಿಸತಕ್ಕದ್ದು" ಎಂದು ಹೇಳಿ  ಕಾಲವಾದ ಮೇಲೆ ಶ್ರೀ ಭುವನೆಂದ್ರ ತೀರ್ಥರು ಶ್ರೀ ಧೀರೇಂದ್ರ ತೀರ್ಥರಿಗೆ ಮಹಾ ಸಂಸ್ಥಾನವನ್ನು ಒಪ್ಪಿಸಿ , ಶ್ರೀ ಮೂಲರಾಮದೇವರ ಪೆಟ್ಟಿಗೆಯನ್ನು ಒಪ್ಪಿಸಿ ಶಿರಸಾಷ್ಟಾಂಗ ನಮಸ್ಕಾರ ಮಾಡಿದರು. ಶ್ರೀ ಧೀರೇಂದ್ರ ತೀರ್ಥರು ಅನೇಕ ವರ್ಷಗಳ ಶ್ರೀ ಮೂಲರಾಮಚಂದ್ರದೇವರ ಪೂಜೆಯನ್ನು ಮಾಡಿ ಸಂಸ್ಥಾನದ ಸಕಲ ರೀತಿಯ ಜವಾಬ್ದಾರಿಯನ್ನು ಶ್ರೀ ಭುವನೇಂದ್ರ ತೀರ್ಥ ಶ್ರೀಪಾದರಿಗೆ ವಹಿಸಿಕೊಟ್ಟು , ತಾವು ಜಪ-ತಪಗಳನ್ನಾಚರಿಸಲು ಹೊಸರಿತ್ತಿ ಗ್ರಾಮಕ್ಕೆ ಬಂದು ನೆಲೆಸಿದರು. ಅಲ್ಲಿಯೇ ಶ್ರೀ  ವರದೇಂದ್ರ
ತೀರ್ಥರ ಶಿಷ್ಯರಾದ ಜಗನ್ನಾಥದಾಸರು ಬಂದು "ಶ್ರೀ ಹರಿಕಥಾಮೃತ ಸರಾವನ್ನು" ಶ್ರೀ ಧೀರೇಂದ್ರ ತೀರ್ಥರ ಸನ್ನಿಧಾನದಲ್ಲೇ ಬರೆದು ಅವರಿಗೆ ಸಮರ್ಪಿಸಿದರು.

No comments:

Post a Comment

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...