Monday, 12 December 2016

 "ವಿದ್ಯಾಮಠದಲ್ಲಿ ಶ್ರೀಮನ್ಯಾಯಸುಧಾಮಂಗಳ ಮಹೋತ್ಸವ" 

                        ತತ್ವಜ್ಞಾನಕ್ಕೋಸ್ಕರ ಬ್ರಹ್ಮರುದ್ರಾದಿಗಳಿಂದ ಪ್ರಾರ್ಥಿಸಲ್ಪಟ್ಟ ಸರ್ವೋತ್ತಮನಾದ ಶ್ರೀಮನ್ನಾರಾಯಣನು ಶ್ರೀವೇದವ್ಯಾಸರಾಗಿ ಅವತರಿಸಿ ನಾಶವನ್ನು ಹೊಂದುತ್ತಿರುವ ಅಸ್ತ್ವವ್ಯಸ್ತವಾದ ವೇದರಾಶಿಯನ್ನು ವಿಭಾಗಿಸಿ ತದರ್ಥನಿರ್ಣಯಕ್ಕೋಸ್ಕರ ಸೂತ್ರಸಮೂಹಾತ್ಮಕವಾದ ಬ್ರಹ್ಮಮೀಮಾಂಸಾಶಾಸ್ತ್ರವನ್ನು ರಚಿಸಿದರು. ಸಮನ್ವಯ-ಅವಿರೋಧ-ಸಾಧನ-ಫಲಪ್ರತಿಪಾದಕ ಚತುರಾಧ್ಯಾಯರೂಪವಾದ ಬ್ರಹ್ಮಮೀಮಾಂಸಾಶಾಸ್ತ್ರದಲ್ಲಿ ೫೬೪ ಸೂತ್ರಗಳಿಂದ ನಾರಾಯಣರೂಪಿಯಾದ ಪರಬ್ರಹ್ಮನನ್ನು ಚೆನ್ನಾಗಿ ಪ್ರತಿಪಾದಿಸಿದರು. ಅವೇ ಬ್ರಹ್ಮಸೂತ್ರಗಳು ಎಂದು ಪ್ರಸಿದ್ಧಿ ಪಡೆದಿವೆ.
                 ಶ್ರೀವೇದವ್ಯಾಸರಿಂದ ರಚಿತವಾದ ಅಪರಿಮಿತವಾದ ಬ್ರಹ್ಮಮೀಮಾಂಸಾದಿಶಾಸ್ತ್ರಗಳಿಂದ ಚೆನ್ನಾಗಿ ನಿರ್ಣಯಿಸಲ್ಪಟ್ಟಿರುವ ಸಕಲ ಜ್ಞಾನಿಗಳಿಗೆ ಸಮ್ಮತವಾದ ದೋಷರಹಿತವಾದ ಭಾವವನ್ನು ತಮ್ಮ ಗ್ರಂಥಗಳ ಮೂಲಕವಾಗಿ  ಪ್ರತಿಪಾದಿಸಿದವರು ಅಶೇಷ ಸಜ್ಜನರಿಗೆಲ್ಲ ಜ್ಞಾನದೀಪದಂತಿರುವ, ಶ್ರೀಮುಖ್ಯಪ್ರಾಣ ದೇವರ ಅವತಾರರಾದ ತ್ರೈಲೋಕ್ಯಗುರುಗಳಾದ ಶ್ರೀಮನ್ಮಧ್ವಾಚಾರ್ಯರು. ಜಗತ್ತಿಗೆ ಜಗದ್ಗುರುಗಳಿಂದ ಪ್ರಣೀತವಾದ  ಆ ಅಮೂಲ್ಯ ಸಂಪತ್ತುಗಳೇ  ಸರ್ವಮೂಲ ಗ್ರಂಥಗಳು. ಶ್ರೀವೇದವ್ಯಾಸದೇವರು ಮಾಡಿದ ಆ ಬ್ರಹ್ಮಸೂತ್ರಗಳಿಗೆ ವ್ಯಾಖ್ಯಾನರೂಪವಾಗಿ ಒಂದಲ್ಲ ಎರೆಡಲ್ಲ ಬ್ರಹ್ಮಸೂತ್ರಭಾಷ್ಯ, ಅನುವ್ಯಾಖ್ಯಾನ, ನ್ಯಾಯವಿವರಣ ಹಾಗು ಅಣುಭಾಷ್ಯ ಎಂಬ ನಾಲ್ಕು (೪) ಗ್ರಂಥರತ್ನಗಳನ್ನು ಬರೆದು ಅನುಗ್ರಹ ಮಾಡಿದ್ದಾರೆ.
                  ಈ ಬ್ರಹ್ಮಸೂತ್ರಗಳಿಗೆ ಭಾಷ್ಯರೂಪವಾಗಿ  ೨೧ ಪರಮತೀಯ  ಆಚಾರ್ಯರು ಬರೆದ ಭಾಷ್ಯಗಳ ವಿಮರ್ಶಾತ್ಮಕ ರೂಪವಾಗಿ ಹೊರಟ ಗ್ರಂಥವೇ ಶ್ರೀಮದಾಚಾರ್ಯರ ಬ್ರಹ್ಮಸೂತ್ರಭಾಷ್ಯ. ಶ್ರೀಕೃಷ್ಣಪರಮಾತ್ಮ ತನ್ನ ಪುಟ್ಟ ಬಾಯಲ್ಲಿ ಬ್ರಹ್ಮಾಂಡವನ್ನೇ ತೋರಿದಂತೆ ಸಮಗ್ರ ಬ್ರಹ್ಮಮೀಮಾಂಸಾ ಶಾಸ್ತ್ರಗಳ ಅರ್ಥಸಾರವನ್ನು ಅಣುಭಾಷ್ಯದಲ್ಲಿ ಹಿಡಿದಿಟ್ಟಿದ್ದಾರೆ ನಮ್ಮ ಜಗದ್ಗುರುಗಳು.ಬ್ರಹ್ಮಸೂತ್ರಗಳ ಮಹತ್ವ ತಿಳಿಸಿ , ಶಾಸ್ತ್ರಪ್ರಮೇಯಗಳನ್ನು ವಿಮರ್ಶಾತ್ಮಕವಾಗಿ ಶಿಷ್ಯರ ಪ್ರಾರ್ಥನೆಯ ಮೇರೆಗೆ ಶ್ರೀಮದಾಚಾರ್ಯರು ನಿರೂಪಿಸಿದ ಗ್ರಂಥವೇ ಶ್ರೀಮದಾನುವ್ಯಾಖ್ಯಾನ.
 ಮೇಲಿನ ಮೂರೂ ಗ್ರಂಥಗಳನ್ನು ಬರೆದಾದಮೇಲೆ ರಚಿಸಿದ ಗ್ರಂಥವೇ ನ್ಯಾಯವಿವರಣ. ಮೇಲಿನ ಮೂರೂಗ್ರಂಥಗಳಲ್ಲಿ ಅಡಕವಾದ ನ್ಯಾಯಗಳ ವಿವರಣೆಗಾಗಿ ಈ ಗ್ರಂಥ ಹೊರಟಿದೆ ಎಂದು ಶ್ರೀಮದಾಚಾರ್ಯರು ತಾವೇ ಹೇಳಿದ್ದಾರೆ .
                ಶ್ರೀಮದಾಚಾರ್ಯರ ಅನುವ್ಯಾಖ್ಯಾನಕ್ಕೆ ಅವರ ಸಾಕ್ಷಾತ್ ಶಿಷ್ಯರಾದ, ಶ್ರೀಮಠದ ಪೂರ್ವಿಕ ಗುರುಗಳಾದ, ಶ್ರೀಜಯತೀರ್ಥರು, ಶ್ರೀವಿಬುಧೇಂದ್ರ ತೀರ್ಥರು , ಶ್ರೀವಿಜಯೀ೦ದ್ರ ತೀರ್ಥರು, ಶ್ರೀ ಸುಧೀ೦ದ್ರ ತೀರ್ಥರು, ಶ್ರೀರಾಘವೇಂದ್ರ ತೀರ್ಥರಿಗೇ ಮೊದಲಾದ ಎಲ್ಲ ಜ್ಞಾನಿಗಳಿಗೂ ಪರಮಮಾನ್ಯರಾದ, ಆದಿಟೀಕಾಚಾರ್ಯರಾದ ಶ್ರೀ ಪದ್ಮನಾಭ ತೀರ್ಥರು 'ಸನ್ನ್ಯಾಯರತ್ನಾವಲೀ' ಎಂಬ ಗ್ರಂಥವನ್ನು ಬರೆದಿದ್ದಾರೆ.
                ಸೂತ್ರಪ್ರಸ್ಥಾನದಲ್ಲಿ ಶ್ರೀಮದಾಚಾರ್ಯರ ನಾಲ್ಕು ಗ್ರಂಥಗಳಲ್ಲಿ ಮೂರು ಗ್ರಂಥಗಳಿಗೆ ಮಹತ್ವಪೂರ್ಣವಾದ ಟೀಕೆ ಬರೆದವರು ಶ್ರೀಮಜ್ಜಯತೀರ್ಥ ಗುರುಸಾರ್ವಭೌಮರು   (ಶ್ರೀಮಟ್ಟೀಕಾಕೃತ್ಪಾದರು). ಶ್ರೀಮಜ್ಜಯತೀರ್ಥರು ಬರೆದ ಟೀಕಾಗ್ರಂಥಗಳಲ್ಲಿ ಶ್ರೀಮನ್ಯಾಯಸುಧಾ ಅವರ ಮೇರುಕೃತಿ. ಈ ಶ್ರೀಮನ್ಯಾಯಸುಧೆಯು ಶ್ರೀಮದಾಚಾರ್ಯರ ಅನುವ್ಯಾಖ್ಯಾನಕ್ಕೆ ಟೀಕಾ ರೂಪದಲ್ಲಿ ಬರೆಯಲ್ಪಟ್ಟಿರುವ ಗ್ರಂಥ. ಮಾಧ್ವವಾಂಗ್ಮಯದಲ್ಲೇ ಎತ್ತರಸ್ಥಾನದಲ್ಲಿ ಪೂಜೆಗೊಳ್ಳುವ  ಗ್ರಂಥ. ಆಚಾರ್ಯರ ನಿಜವಾದ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳುವ ಗ್ರಂಥ. ಜ್ಞಾನಿಗಳು ಅಧ್ಯಯನ-ಅಧ್ಯಾಪನ ನಡೆಸುವದಕ್ಕಾಗಿ ಜೀವನವನ್ನೇ ತೇಯ್ದಗ್ರಂಥ ಶ್ರೀಮನ್ಯಾಯಸುಧಾ.
ಪ್ರಸಕ್ತ ಮಾಧ್ವವಾಂಗ್ಮಯದಲ್ಲಿ ಶ್ರೀಮನ್ಯಾಯಸುಧೆಗೆ  ಹೆಚ್ಚು ಟಿಪ್ಪಣಿಗಳು ಬರೆಯಲ್ಪಟ್ಟಿವೆ. ಇಂತಹ ಅಪೂರ್ವಕೃತಿಗೆ ಇಷ್ಟೊಂದು ಮಹತ್ವವಿದ್ದುದರಿಂದಲೇ ಶ್ರೀಮನ್ಯಾಯಸುಧಾ ಪಾಠ-ಪ್ರವಚನ-ಅನುವಾದ- ಮಂಗಳ ಎಲ್ಲವೂ ಸಜ್ಜನರಿಗೆ ಮಹಾ ಉತ್ಸವವೇ.
              ಮಧ್ವವಾಂಗ್ಮಯದ  ವಿಶಿಷ್ಟಕೃತಿಯಾದ ಶ್ರೀಮನ್ಯಾಯಸುಧೆಯ ಪಾಠ ಪ್ರವಚನವನ್ನು ಶ್ರೀಮಜ್ಜಯತೀರ್ಥರ ನಂತರ ಅವರ ಶಿಷ್ಯರಾದ ಶ್ರೀವಿದ್ಯಾಧಿರಾಜತೀರ್ಥರು ಹಾಗು ಅವರ ಪರಂಪರೆಯೆಯಲ್ಲಿ ಬಂದ ಶ್ರೀವಾಗೀಶತೀರ್ಥರು, ಶ್ರೀಕವೀಂದ್ರ ತೀರ್ಥರು, ಶ್ರೀರಾಮಚಂದ್ರ ತೀರ್ಥರು, ಶ್ರೀವಿಬುಧೇ೦ದ್ರ ತೀರ್ಥರು ವಿಶೇಷವಾಗಿ ನಡೆಸಿಕೊಂಡು ಬಂದು ಶ್ರೀಹರಿವಾಯು ಗುರುಗಳ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.
               ನಂತರ ಮಾಧ್ವವಾಂಗ್ಮಯದಲ್ಲಿ ವಿಶೇಷವಾದ ಛಾಪನ್ನು ಮೂಡಿಸಿದ ಕೀರ್ತಿ ಶ್ರೀರಾಮಚಂದ್ರ ತೀರ್ಥರ ಕರಕಮಲ ಸಂಜಾತರಾದ ಶ್ರೀವಿಬುಧೇ೦ದ್ರ ತೀರ್ಥರಿಗೆ ಸಲ್ಲುತ್ತದೆ. ಅವರ ಚರಮ ಶ್ಲೋಕವೇ ಹೇಳುವಂತೆ ಕೆರಳದಿಂದ ಹಿಮಾಲಯದಪರ್ಯಂತ ಅದ್ವೈತ-ಶೈವವಾದಿಗಳನ್ನು ಗುರುಗಳ ಅನುಗ್ರಹದಿಂದ ನಿರಾಕರಿಸಿ, ಅನೇಕ ಜಯಪತ್ರಿಕೆಗಳನ್ನು ಪಡೆದು, ಅವೆಲ್ಲವನ್ನು ತಿರುಪತಿಯ ಸನ್ನಿಧಾನದಲ್ಲಿ ಭಗವಂತನಿಗೆ ಸಮರ್ಪಿಸಿದ ಕೀರ್ತಿ ಅವರದ್ದು. ಇವರ ಶ್ರೀಮನ್ಯಾಯಸುಧಾಗ್ರಂಥದಲ್ಲಿನ ನೈಪುಣ್ಯಕ್ಕೆಇವರ ಹತ್ತಿರ ಅಧ್ಯಯನ ಮಾಡಿದ ಮಹಾನುಭಾವರಾದ ದೃವಾಂಶಸಂಭೂತರಾದ ಶ್ರೀಪಾದರಾಜರೇ ಸಾಕ್ಷಿ. ಶ್ರೀಮನ್ಯಾಯಸುಧಾ ಗ್ರಂಥಕ್ಕೆ ಪ್ರಪ್ರಥಮ ಟಿಪ್ಪಣಿ 'ಬರೆದು ಮಹದುಪಕಾರ ಮಾಡಿದ ಕೀರ್ತಿ ಶ್ರೀವಿಬುಧೇ೦ದ್ರರ ವಿದ್ಯಾಶಿಷ್ಯರಾದ ಶ್ರೀಪಾದರಾಜರಿಗೆ ಸಲ್ಲುತ್ತದೆ. ಇದು ಶ್ರೀವಿಭುಧೇ೦ದ್ರ ತೀರ್ಥರ ವಿದ್ಯಾಪರಂಪರೆಯ ಕೊಡುಗೆ. ಶ್ರೀಪಾದರಾಜರ ಮಹದುಪಕಾರ.
                 ಕೇರಳದಿಂದ ಹಿಮಾಚಲಪರ್ಯಂತ ಸತ್ಸಿದ್ಧಾಂತವನ್ನು ಪ್ರತಿಷ್ಠಾಪಿಸಿ ವೇದಾಂತಸಾಮ್ರಾಜ್ಯವನ್ನು ಅನೇಕ ವರ್ಷಗಳ ಕಾಲ ಆಳಿದ ಮಾಹಾನುಭಾವರಾದ ಶ್ರೀವಿಬುಧೆಂದ್ರ ತೀರ್ಥರ ನಂತರ ಅವರ ಕರಕಮಲ ಸಂಜಾತರಾದ ಶ್ರೀಜಿತಾಮಿತ್ರ ತೀರ್ಥರು ವಿಶೇಷ ತಪಸ್ಸನ್ನಾಚಿರಿಸುತ್ತ ಶ್ರೀಮದಾಚಾರ್ಯರ ಸಿದ್ಧಾಂತವನ್ನು ಪ್ರಚಾರಮಾಡಿ ವಿಶೇಷವಾದ ಸೇವೆಯನ್ನು ಮಾಡಿದರು. ಶ್ರೀವಿಬುಧೇಂದ್ರ ತೀರ್ಥರ ವಿದ್ಯಾಶಿಷ್ಯರಾದ ಶ್ರೀಪಾದರಾಜರು, ಶ್ರೀಜಿತಾಮಿತ್ರತೀರ್ಥರ ಮೇಲಿನ ಕೀರ್ತನೆಯಲ್ಲಿ ಶ್ರೀಜಿತಾಮಿತ್ರ ತೀರ್ಥರನ್ನು "ಸೂತ್ರಪಾಠ ಪಠಿಸುವ ಸುಗುಣ ಜಿತಾಮಿತ್ರ" " ಅಗಣಿತ ಮಹಿಮ"  ಇತ್ಯಾದಿಯಾಗಿ ಸ್ತುತಿಸಿದ್ದಾರೆ. ಇದಲ್ಲದೆ ಇವರ ಗ್ರಂಥರಚನಾ-ಪಾಠಡಾ ಬಗ್ಗೆ ಹೇಳುವಾಗ "ಮಧ್ವಶಾಸ್ತ್ರದ ಗ್ರಂಥಸಾರದ ಪದ್ಧತಿ ತಿಳಿದಂಥ, ಅದ್ವೈತ ಪಂಥ ಮುರಿದು ಮತ ಉದ್ಧರಿಸಿದಂಥ" ಎಂದು ಶ್ರೀಜಿತಾಮಿತ್ರ ತೀರ್ಥರು ಮಾಡಿದ ಸ್ವಮತಸ್ಥಾಪನಾ ಕಾರ್ಯವನ್ನು ವರ್ಣಿಸಿದ್ದಾರೆ. ಇವರ ಗ್ರಂಥರಚನಾ-ಪಾಠನಾ ಸಾಮರ್ಥ್ಯ ಶ್ರೀಪಾದರಾಯರು ವರ್ಣಿಸುವಾಗ ಅದರ  ಮಹತ್ವ ನಮಗೆ ತಿಳಿದು ಬರುತ್ತದೆ.
               ಇವರ ಶಿಷ್ಯರಾದ ಶ್ರೀರಘುನಂದನ ತೀರ್ಥರು ಮಧ್ವಸಿದ್ಧಾಂತ ಸ್ಥಾಪನೆ ಮಾಡಿದ ವಿಚಾರ ಕೆಲ ಉಲ್ಲೇಖಗಳಿಂದ ತಿಳಿದು ಬರುತ್ತದೆ. ಶ್ರೀ ರಘುನಂದನ ತೀರ್ಥರ ಕಾರಕಮಲಸಂಜಾತರಾದ ಶ್ರೀ ಸುರೇಂದ್ರ ತೀರ್ಥರು ಅನಶನವೃತದಿಂದ ಭಾರತವನ್ನು ಮೂರುಬಾರಿ ಸಂಚಾರ ಮಾಡಿದ ಮಹಾನುಭಾವರು. ಇವರು ಟಿಪ್ಪಣಿಗಳನ್ನು ರಚಿಸಿ ವಿದ್ವತ್ಪ್ರಪಂಚದಲ್ಲಿ ಮಾನ್ಯರಾಗಿದ್ದ ತಪಸ್ವಿಗಳು. ಇವರೂ  ಶ್ರೀಮನ್ಯಾಯಸುಧೆಗೆ ಟಿಪ್ಪಣಿಗಳನ್ನು ಬರೆದು ಸುಧಾಗ್ರಂಥದ ಪ್ರಚಾರ ಮಾಡಿದ್ದಾರೆ.
               ಚತುಷ್ಷಷ್ಟಿ ವಿದ್ಯಾಪ್ರವೀಣರಾದ, ಚತುರಧಿಕ ಶತ ಗ್ರಂಥರತ್ನಪ್ರಣಿತರಾದ ಶ್ರೀಸುರೇಂದ್ರವೃತಿವರತನಯರಾದ, ಶ್ರೀವ್ಯಾಸರಾಯರ ವಿದ್ಯಾಶಿಷ್ಯರಾದ ಶ್ರೀವಿಜಯೀ೦ದ್ರ ತೀರ್ಥರು ಶ್ರೀಮನ್ಯಾಯಸುಧಾಗ್ರಂಥಕ್ಕೆ ಶ್ರೀಮನ್ಯಾಯಸುಧಾಬಿಂದು ಎಂಬ  ಟಿಪ್ಪಣಿ ಬರೆದು ತಮ್ಮದೇ ಆದ ಕೊಡುಗೆಯನ್ನ ಟಿಪ್ಪಣಿಗಳ ಪ್ರಪಂಚಕ್ಕೆ ನೀಡಿದ್ದಾರೆ.
                ಇವರ ಶಿಷ್ಯರಾದ ಮಹಾತಪಸ್ವಿಗಳಾದ ಶ್ರೀಸುಧೀಂದ್ರ ತೀರ್ಥರು ಶ್ರೀಮನ್ಯಾಯಸುಧಾಗ್ರಂಥದ ಪಾಠ ಪ್ರವಚನಗಳಲ್ಲಿ ವಿಶೇಷ ಆಸಕ್ತಿ ಇರಿಸಿಕೊಂಡು ಭಗವಂತನ ಕೃಪೆಗೆ ಪಾತ್ರರಾದವರು. ಇವರ ಮಹಿಮೆಯನ್ನು,  ವಾಗ್ದೇವಿಯು "ಶ್ರೀಸುಧೀಂದ್ರ ತೀರ್ಥರಲ್ಲಿ ನಾನು ನೆಲೆಸಿದ್ದೇನೆ" ಎಂದು ರಾಯರಿಗೆ ಆಶ್ರಮ ತೆಗೆದುಕೊಳ್ಳುವಂತೆ ಮನವೊಲೈಕೆಗೆ ಬಂದಾಗ ಹೇಳಿದ್ದನ್ನು ನೋಡಿ ತಿಳಿದುಕೊಳ್ಳಬಹುದು. ಶ್ರೀರಾಘವೇಂದ್ರ ತೀರ್ಥರಂತಹ ವಿದ್ವನ್ಮೂರ್ಧನ್ಯರನ್ನು ತಯಾರು ಮಾಡಿ, ಜಗದ್ಗುರು ಶ್ರೀಮದಾಚಾರ್ಯರ ಪೀಠದ ಮೇಲೆ ಕುಳ್ಳರಿಸಿದ ಮಹಾನ್ ಕೀರ್ತಿ ಶ್ರೀಸುಧೀಂದ್ರರದ್ದು. ಅಂತಹ ಮಹದುಪಕಾರಕ್ಕೆ ಇಡೀ ಮಾಧ್ವ ಸಮಾಜ ಎಂದೆಂದಿಗೂ  ಅವರ ಋಣ ತೀರಿಸಲು ಸಾಧ್ಯವಿಲ್ಲಾ. ಇವರು ಶ್ರೀಮನ್ಯಾಯಸುಧಾ ಗ್ರಂಥಕ್ಕೆ ಟಿಪ್ಪಣಿ ಬರೆದಿದ್ದಾರೆ ಎಂದು ಇತಿಹಾಸದಿಂದ ತಿಳಿದು ಬರುತ್ತದೆ.

                 ಇಂತಹ ಮಹಾನ್ ಯತಿಗಳ ಶಿಷ್ಯರಾಗಿ ಸಮಗ್ರ ವೇದಾಂತ ಸಾಮ್ರಾಜ್ಯವನ್ನು ಆಳಿದವರು ಮಂತ್ರಾಲಯದ ಮುನಿವರೇಣ್ಯ ಶ್ರೀರಾಘವೇಂದ್ರವೃತೀಂದ್ರರು. ಸಮಸ್ತಮಾಧ್ವ ವಾಂಗ್ಮಯದ ಉದ್ಗ್ರಂಥಗಳಿಗೆ ಟಿಪ್ಪಣಿಗಳನ್ನು  ಬರೆದು ಎಲ್ಲರ ಮನದಲ್ಲಿ ಮನೆಮಾಡಿದವರು. ವಿದ್ವಾಂಸರಿಗೆ ಸರಳವಾಗಿ ಅರ್ಥವಾಗುವಂತೆ ಮಾಡಿ ಅವರ ಆರಾಧ್ಯದೈವ ಎನಿಸಿದ ದೈವಾಂಶ ಸಂಭೂತರು. ಇವರ ಗ್ರಂಥಗಳಿಲ್ಲದೇ ಶ್ರೀಜಯತೀರ್ಥರ ಶ್ರೀಮದಾಚಾರ್ಯರ ಹಾರ್ದ ಅರ್ಥವಾಗುವದಿಲ್ಲವೆಂದೇ ಹೇಳಬಹುದು. ಸೌಮ್ಯಸ್ವಾಭಾವದ ಸ್ವಾಮಿಗಳು. ಮಹಾಕರುಣಾಳುಗಳು. ಗಂಭೀರಶೈಲಿಯಲ್ಲಿ ನಿರ್ದುಷ್ಟವಾಗಿ ಬರೆದ ಧೀಮಂತಯತಿಗಳು. ಆಯುಕ್ತವಾದ ಅರ್ಥಗಳನ್ನು ಹೇಳುವದಿರಲಿ, ಅದರ ಚಿಂತನೆಯೂ ಇವರ ಹತ್ತಿರ ಸುಳಿಯುವದಿಲ್ಲ. ಇವರಿಗೆ ಚಿಕ್ಕ ಗ್ರಂಥಗಳನ್ನು ವಿಸ್ತಾರವಾಗಿ ಹೇಳುವದು ಗೊತ್ತು. ವಿಸ್ತಾರವಾದ ಗ್ರಂಥಗಳನ್ನೂ ಚಿಕ್ಕದಾಗಿ ಮೂಲ ಅರ್ಥಕ್ಕೆ ಬಾಧಕವಾಗದಂತೆ, ಯಾವುದೇ ವಿಷಯ ಬಿಟ್ಟು ಹೋಗದಂತೆ ಚೊಕ್ಕದಾಗಿ ಹೇಳುವದು ಗೊತ್ತು. ಅಂತಹ ಯತಿವರೇಣ್ಯರ ಮೇರು ಕೃತಿ ಶ್ರೀಮನ್ಯಾಯಸುಧೆಗೆ ಅವರು ಬರೆದ ಟಿಪ್ಪಣಿ "ಶ್ರೀಮನ್ಯಾಯಸುಧಾಪರಿಮಳ". ಹೆಸರಿಗೆ ತಕ್ಕಂತೆ ಶ್ರೀಮನ್ಯಾಯಸುಧೆಯಾ ಪರಿಮಳವನ್ನ ಸೂಸುವ ಮಹದ್ಗ್ರಂಥ. ಇವರ ಶಿಷ್ಯರು ಇವರನ್ನು ಕರೆದದ್ದು ಪರಿಮಳಾಚಾರ್ಯರೆಂದು.ಶ್ರೀಮನ್ಯಾಯಸುಧೆಯಾ ಹಾರ್ದವನ್ನು ಬಿಚ್ಚಿಟ್ಟ ಮಹಾನ್ ಗುರುಗಳು ಶ್ರೀ ರಾಘವೇಂದ್ರ ತೀರ್ಥರು. ಇಂದಿಗೂ ಇವರ ಟಿಪ್ಪಣಿಯೇ ಎಲ್ಲ ಮಾಧ್ವ ವಿದ್ವಾಂಸರಿಗೆ ಪರಮಮಾನ್ಯ. ಅದು ಪರಿಮಳದ ನಿಜವಾದ ಪರಿಮಳ. ಇವರು ಹಾಕಿ ಕೊಟ್ಟ ಮಾರ್ಗದಲ್ಲಿಯೇ ಇವರ ಆಶ್ರಮಶಿಷ್ಯರಾದ ಶ್ರೀಯೋಗೀ೦ದ್ರತೀರ್ಥರು, ವಿದ್ಯಾಶಿಷ್ಯರಾದ ಶ್ರೀಸೂರೀ೦ದ್ರತೀರ್ಥರು ಮುನ್ನಡೆದು ಶ್ರೀಮನ್ಯಾಯಸುಧಾಗ್ರಂಥದ ಪಾಠ-ಪ್ರವಚನ ನಡೆಸಿದ್ದಾರೆ.
                  ಶ್ರೀರಾಘವೇಂದ್ರ ತೀರ್ಥರ ವಿದ್ಯಾಶಿಷ್ಯರೇ ಆಗಿರುವ, ಅವರ ಹತ್ತಿರವೇ ಅಧ್ಯಯನ ಮಾಡಿದ ಮಹಾನ್ ಭಾಗ್ಯಶಾಲಿಗಳು  ಶ್ರೀಸುಮತೀಂದ್ರ ತೀರ್ಥರು. ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರಲ್ಲಿ ಗ್ರಂಥಗಳ ವಿನಿಯೋಗದ ಬಗ್ಗೆ  ಪ್ರಶ್ನೆ ಮಾಡಿದಾಗ
           " ಭಾವ್ಯಸಂಶಯಮಹೋ ಗುರುವಂಶೇ ದರ್ಶನಶೃತಿಪರಸ್ಸುಮತೀಂದ್ರ: ।
              ತಸ್ಯಸಾರ್ಥಕಮಿದಂ ಸಕಲಮ್ ಸ್ಯಾದಿತ್ಯವೇತ್ಯ ಕೃತವಾನ್ ಕೃತಿಸಾರ್ಥಂ ।। "
  ಅಂದರೆ " ನಮ್ಮ ಈ ಮಹಾ ಗುರುಪರಂಪರೆಯಲ್ಲಿ ಗ್ರಂಥಾವಲೋಕನ, ಗ್ರಂಥರಚನಾ, ಮಧ್ವಶಾಸ್ತ್ರಶ್ರವಣದಲ್ಲೇ ಆಸಕ್ತರಾಗಿರುವ  ಶ್ರೀಸುಮತೀಂದ್ರ ತೀರ್ಥರು ಬರಲಿದ್ದಾರೆ, ಅವರಿಗೆ ವಿಶೇಷವಾಗಿ ನಮ್ಮ ಗ್ರಂಥಸಮೂಹಗಳು ಪ್ರಯೋಜಕವಾಗಿ ಇರುವವು" ಎಂದರು ಎಂದು ರಾಘವೇಂದ್ರ ವಿಜಯ ಹೇಳುತ್ತದೆ. ಅರ್ಥಾತ್ ತಮ್ಮ ವಿದ್ಯಾಶಿಷ್ಯರಾದ ಶ್ರೀಸುಮತೀಂದ್ರ ಸ್ವಾಮಿಗಳಿಗೆ ಮಾರ್ಗದರ್ಶಕವಾಗಿ ಇರುತ್ತವೆ ಎಂದು ಹೇಳಿದರಂತೆ ಗುರುಸಾರ್ವಭೌಮರು. ಅಂತಹ ಮಹಾನ್ ಕೀರ್ತಿಗೆ ಭಾಜನರಾದ ಶ್ರೀಸುಮತೀಂದ್ರ ತೀರ್ಥರು ಮಹಾನ್ ಟಿಪ್ಪಣಿಕಾರರು. ಇವರು ಕೂಡ ಶ್ರೀಮನ್ಯಾಯಸುಧಾ ಗ್ರಂಥಕ್ಕೆ ಟಿಪ್ಪಣಿಯನ್ನು ಬರೆದಿದ್ದಾರೆ. ಇದಲ್ಲದೇ ತಮ್ಮ ಶಿಷ್ಯರಾದ, ವಾದಿನಿಗ್ರಹ ಶಕ್ತರಾದ  ಶ್ರೀಉಪೇಂದ್ರ ತೀರ್ಥರನ್ನು ತಾಯರು ಮಾಡಿದವರು ಸುಮಾರು ಬಾರಿ ಶ್ರೀಮನ್ಯಾಯಸುಧಾ ಮಂಗಳವನ್ನು ಮಾಡಿದ್ದಾರೆ. .
              ಶ್ರೀಮದುಪೇಂದ್ರ ತೀರ್ಥ ಕಾರಕಮಲ ಸಂಜಾತರಾದ ಶ್ರೀ ವಾದೀಂದ್ರ ತೀರ್ಥರು ಹೆಸರಿಗೆ ಅನ್ವರ್ಥಕವಾಗಿ ವಾದಿದಿಗ್ವಿಜಯಕ್ಕೆ ಹೆಸರಾದ ಮಹಾನುಭಾವರು. ಪೂರ್ವಾಶ್ರಮದಲ್ಲೇ ಅನೇಕ ಆಸ್ಥಾನಕ್ಕೆ ಹೋಗಿ ಶ್ರೀಮದಾಚಾರ್ಯರ ಸಿದ್ಧಾಂತದ ಬಗ್ಗೆ ಬಂದಿರುವ ಆಕ್ಷೇಪಗಳನ್ನು ಪರಿಹರಿಸುವದರಲ್ಲಿ ಎತ್ತಿದ ಕೈ. ಇವರೂ ಕೂಡ ಶ್ರೀಮನ್ಯಾಯಸುಧೆಯಲ್ಲಿ, ಶ್ರೀಗುರುರಾಜರ ಪರಿಮಳದಲ್ಲಿ ಮನಸಿಟ್ಟವರು ಎಂದು ಇವರ ಚಿರಿತ್ರೆ ಹೇಳುತ್ತದೆ. ಇಂತಹ ಮಹಾನ್ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲೇ ನಡೆದವರು ಶ್ರೀವಸುಧೇಂದ್ರ ತೀರ್ಥರು ಇವರು ಅನೇಕ ಬಾರಿ ಮಂಗಳವನ್ನಾಚರಿಸಿದ್ದಾರೆ.
             ಇಂತಹ ತಪಸ್ವಿ ಯತಿವರೇಣ್ಯರ ಶಿಷ್ಯರೇ ಶ್ರೀವರದೇಂದ್ರ ತೀರ್ಥರು. ಶ್ರೀಮಠಕ್ಕೆ ಶತಮಾನಗಳ ಹಿಂದೆ ಬಂದಿದ್ದ ವಿದ್ಯಾಮಠ ಎಂಬ ಬಿರುದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋದವರು. ಅನೇಕ ಗ್ರಂಥಗಳನ್ನು ನಿರ್ಮಾಣಮಾಡಿ-ಮಾಡಿಸಿದ ಮಹಾನುಭಾವರು. ಆಗಿನ ಕಾಲದಲ್ಲಿ ದೊಡ್ಡ ವಿದ್ಯಾಕೇಂದ್ರವಾಗಿದ್ದ ಮಂತ್ರಾಲಯದಲ್ಲಿ ಶ್ರೀನಿವಾಸಾಚಾರ್ಯ (ಶ್ರೀಜಗನ್ನಾಥದಾಸರು)ರಂತಹ ಮಾಹಾನ್ ಪಂಡಿತರನ್ನು ನಿರ್ಮಾಣ ಮಾಡಿದ ಮಹಾನ್ ಯತಿಗಳು. ಇವರೆಲ್ಲ ಶ್ರೀಮನ್ಯಾಯಸುಧಾ ಪಾಠಪ್ರವಚನದಲ್ಲೇ ನಿರತರಾಗಿದ್ದವರು. ಇವರೇ ಶ್ರೀಜಗನ್ನಾಥ ದಾಸರ "ಅಣುಸುಧಾ" ಎಂದೇ ಖ್ಯಾತಿಗಳಿಸಿದ  ಹರಿಕಥಾಮೃತಸಾರಕ್ಕೆ ಮುಖ್ಯ ಪ್ರೇರಣಾ ಶಕ್ತಿಯಾಗಿದ್ದವರು. ಆಗಿನ ಕಾಲದಲ್ಲಿ ಉತ್ತರ ಕರ್ನಾಟಕ ಪ್ರಾಂತ್ಯದಲ್ಲೇ ಇವರನ್ನು ಸಂಸ್ಕೃತದಲ್ಲಿ ಮೀರಿಸುವ ಪಂಡಿತರು ಇದ್ದಿದ್ದಿಲ್ಲ ಎಂದರೆ ಇವರ ಮಹತ್ವ ನಮಗೆ ತಿಳಿಯುತ್ತದೆ.
             ಶ್ರೀವರದೇಂದ್ರ ತೀರ್ಥರ ನಂತರ ಸರ್ವಜ್ಞ ಪೀಠವನ್ನಾಳಿದ ಮಹಾನುಭಾವರು ಶ್ರೀಧೀರೇಂದ್ರ ತೀರ್ಥರು. ಇವರು ದಕ್ಷಿಣ ಭಾರತದಲ್ಲೇ ಪ್ರಕಾಂಡ ಪಂಡಿತರು. ಶ್ರೀವಾದೀಂದ್ರ ತೀರ್ಥರ ವಿದ್ಯಾಶಿಷ್ಯರು. ಇವರ ಹತ್ತಿರ ತ್ರಿಮತಸ್ಥ ಪ್ರಕಾಂಡ ಪಂಡಿತೋತ್ತಮರು ಅಧ್ಯಯನಕ್ಕೆ ಇದ್ದರು ಎಂದು ತಿಳಿದು ಬರುತ್ತದೆ. ವಿದ್ಯಾಮಠದ ಗೌರವವನ್ನು ಹೆಚ್ಚಿಸಿದ ಮಹಾನುಭಾವರು. ವೇದಗಳಿಗೆ ವ್ಯಾಖ್ಯಾನಿಸಿದ ಮೇಧಾವಿಗಳು. ಕಾರ್ಯಕ್ಷೇತ್ರ ರಿತ್ತಿಯಲ್ಲಿ ಅನೇಕ ವಿದ್ವಾಂಸರ ತಾಯಾರಿಮಾಡುತ್ತಾ ನ್ಯಾಯಸುಧಾ ಪಾಠಪ್ರವಚನಮಾಡುತ್ತಲಿದ್ದವರು. ಇವರು ಶ್ರೀಮನ್ಯಾಯಸುಧಾಗ್ರಂಥಕ್ಕೆ ವ್ಯಾಖ್ಯಾನಮಾಡಿದ್ದಾರೆ. ಇವರ ಶಿಷ್ಯರು ಇವರನ್ನ ವಿಧ ವಿಧವಾಗಿ ಶ್ರೀಮನ್ಯಾಯಸುಧಾ-ತತ್ವಪ್ರಕಾಶಿಕಾದಲ್ಲಿ, ಶ್ರೀಮಜ್ಜಯತೀರ್ಥರ ಗ್ರಂಥಗಳಲ್ಲಿ ಮನಸಿಟ್ಟವರು ಎಂದು ವರ್ಣಿಸಿದ್ದಾರೆ. ಇವರಲ್ಲೇ ಅಧ್ಯಯನ ಮಾಡಿದ ಶ್ರೀ ಭುವನೇಂದ್ರ ತೀರ್ಥರು ಋಗ್ಭಾಷ್ಯದಲ್ಲಿ ಪಾಂಡಿತ್ಯಗಳಿಸಿದ ಮಾಹಾನುಭಾವರು. ಶ್ರೀಮನ್ಯಾಯಸುಧೆಗೆ ಟಿಪ್ಪಣಿ ಬರೆದ ಮಹಾನುಭಾವರಾದ ಶ್ರೀವ್ಯಾಸತತ್ವಜ್ಞರ ಆಶ್ರಮ ಗುರುಗಳು. ಶ್ರೀವ್ಯಾಸತತ್ವಜ್ಞರು ಮಾದಿನೂರಿನ ಶ್ರೀವಿಷ್ಣುತೀರ್ಥರು, ಉತ್ತರಾದಿಮಠದ ಶ್ರೀ ಸತ್ಯಪ್ರಿಯ ತೀರ್ಥರ ಪೂರ್ವಾಶ್ರಮ ಮಕ್ಕಳು ಇವರೆಲ್ಲರಿಗೂ ಪಾಠ ಮಾಡಿದ ಮಹಾನುಭಾವರು. ಇದರಲ್ಲಿ ಶ್ರೀವಿಷ್ಣುತೀರ್ಥರು ಶ್ರೀಮನ್ಯಾಯಸುಧೆಗೆ ಟಿಪ್ಪಣಿ ಬರೆದಿದ್ದಾರೆ. ಇವರ ಕಾಲಕ್ಕೆ ವೇಣೀಸೋಮಪುರ ಬಹು ದೊಡ್ಡ ವಿದ್ಯಾಕೇಂದ್ರ. ಇವರು ನೆಲಿಸಿದ ಗದ್ವಾಲ್ ಪ್ರಾಂತ್ಯ ವಿದ್ವದ್ಗದ್ವಾಲ್ ಎಂದೇ ಖ್ಯಾತಿ ಪಡೆದಿತ್ತು.
             ಶ್ರೀಭುವನೇಂದ್ರ ತೀರ್ಥರ ಶಿಷ್ಯರೇ ಶ್ರೀಸುಬೊಧೇಂದ್ರ ತೀರ್ಥರು. ಇವರ ಚರಮ ಶ್ಲೋಕವೇ ಹೇಳುವಂತೆ ಶ್ರೀಮನ್ಯಾಯಸುಧಾ ಗ್ರಂಥದ ಸೇವೆಗಾಗಿಯೇ ತಮ್ಮನ್ನು ತೊಡಗಿಸಿಕೊಂಡವರು. ಇವರ  ಶಿಷ್ಯರೇ ಶ್ರೀಸುಜನೇಂದ್ರತೀರ್ಥರು ಇವರು ಗುರುಗಳಂತೆಯೇ ನ್ಯಾಯಸುಧಾಸಕ್ತರಾಗಿದ್ದವರು.
             ಇವರ ಶಿಷ್ಯರೇ ಶ್ರೀ ಸುಜ್ಞಾನೇಂದ್ರ ತೀರ್ಥರು. ಮಹಾ ತಪಸ್ವಿಗಳು ( ಇವರು ತಪೋನಿರತರಾಗಿದ್ದ ಅನೇಕ ಸ್ಥಳಗಳನ್ನು, ಅಲ್ಲಿನ ಮಹಿಮೆಗಳನ್ನು ಇಂದಿಗೂ ಪ್ರತ್ಯಕ್ಷ ಕಾಣಬಹುದು). ಇವರು ಗುರುಗಳ ಆದೇಶದಂತೆ ಶ್ರೀಮನ್ಯಾಯಸುಧಾಗ್ರಂಥಕ್ಕೆ ಟಿಪ್ಪಣಿ ಬರೆದ ಮಹಾನುಭಾವರು. ಶ್ರೀನ್ಯಾಯಸುಧಾಮಂಗಳಗಳನ್ನು ಅವರ ಕಾಲಕ್ಕೆ ಅತಿ ಹೆಚ್ಚು ಬಾರಿ ಆಚರಿಸಿದವರು. ಶ್ರೀಗಳವರು ಚಂದ್ರಿಕಾಗ್ರಂಥಕ್ಕೆ ಆಕ್ಷೇಪಬಂದಾಗ ತಕ್ಷಣವೇ  ಆಕ್ಷೇಪಗಳಿಗೆ ಸರಿಯಾಗಿ ಉತ್ತರಿಸಿದವರು. ಇವರ ಚರಮಶ್ಲೋಕವೇ ಹೇಳುವಂತೆ " ಸುಧಾಸಾರಾರ್ಥತತ್ವಜ್ಞ"ರಾಗಿದ್ದವರು. ಇವರು ತಮ್ಮ ಶಿಷ್ಯಪ್ರಶಿಷ್ಯರಿಂದ "ಶ್ರೀಸುಧಾ೦ಬುಧೀ "ಎಂದೇ ಗೇಗಿಯಮಾನರಾದವರು.
            ಇವರ ಶಿಷ್ಯರೇ ಶ್ರೀಸುಧರ್ಮೆಂದ್ರ ತೀರ್ಥರು. ಇವರು ಪ್ರತಿವಾದಿಭಯಂಕರರಾಗಿದ್ದವರು. ಇವರ ಮುಂದೆ ವಾದಕ್ಕೆ ಕೂಡಲು ಪ್ರತಿವಾದಿಗಳು ಹೆದರುತ್ತಿದ್ದರು. ಪಂಡಿತರು ಇವರ ಮುಂದೆ ಮಾತನಾಡಲು ತೊದಲುತ್ತಿದ್ದರು. ಇವರನ್ನು ಪ್ರತ್ಯಕ್ಷ ಕಂಡ  ಶ್ರೀಕೃಷ್ಣಾವಧೂತರು ಬರೆದ "ಶ್ರೀಸುಧರ್ಮೇಂದ್ರ ಮಹೋದಯಃ" ಎಂಬ ಗ್ರಂಥಪುಷ್ಪ ಇವರ ಪಾಂಡಿತ್ಯ-ಔದಾರ್ಯಗಳಿಗೆ ಹಿಡಿದಕೈಗನ್ನಡಿ. ಇವರ ಶಿಷ್ಯರು ಇವರನ್ನು " ಸುಧಾ೦ಶುಮಿವಸಂಭೂತಮ್ ಸುಜ್ಞಾನೇಂದ್ರಸುಧಾ೦ಬುಧೌ" ಎಂದಿದ್ದಾರೆ. ಇವರು ಶ್ರೀಮನ್ಯಾಯಸುಧಾಗ್ರಂಥವನ್ನು ವಿಶೇಷವಾಗಿ ಸೇವೆ ಮಾಡಿದವರು ಎಂದು ತಿಳಿದು ಬರುತ್ತದೆ.
             ಇವರ ಶೊಷ್ಯೋತ್ತಮರೇ ಶ್ರೀಸುಗುಣೇಂದ್ರ ತೀರ್ಥರು. ಮಹಾ ಬರಗಾಲದಲ್ಲೂ  ಅನ್ನದ ಕೊರತೆ ಉಂಟಾದಾಗ ಇಡೀ ಸಂಸ್ಥಾನಕ್ಕೆ ಮೃಷ್ಟಾನ್ನ ಭೋಜನ ಮಾಡಿಸಿದ ಧೀಮಂತ ಯತಿಗಳು. ಅಂತಹ ಬರಗಾಲದಲ್ಲೂ ಪಾಠ-ಪ್ರವಚನಕ್ಕೆ ಕುಂದುಬಾರದಂತೆ ಸಂಸ್ಥಾನ ನಡೆಸಿಕೊಂಡು ಹೋದವರು. ಇವರು ಮಹಾನ್ ಮೇಧಾವಿಗಳಾಗಿದ್ದರಲ್ಲದೇ ಅನೇಕ ಜನ ಸುಧಾಪಂಡಿತೋತ್ತಮರನ್ನು ತಯಾರುಮಾಡಿ ವಿದ್ವತ್ಪ್ರಪಂಚಕ್ಕೆ ಕೊಡುಗೆ ಇತ್ತವರು. ಇವರ ದೊಡ್ಡ ಕೊಡುಗೆಯೇ ಶ್ರೀಮನ್ಯಾಯಸುಧೆಯಲ್ಲಿ ವಿಶೇಷ ಪಾಂಡಿತ್ಯ ಗಳಿಸಿದ್ದ ಶ್ರೀಸುಪ್ರಜ್ಞೇ೦ದ್ರ ತೀರ್ಥರು. ಇವರು ಪ್ರಕಾಂಡ  ಪಂಡಿತರಾಗಿದ್ದವರು. ಇವರ  ಶ್ರೀಮನ್ಯಾಯಸುಧಾ ಅನುವಾದ-ಪಾಠ-ಜಿಜ್ಞಾಸೆಯ ರೀತಿ ಸಜ್ಜನರಿಗೆ ಪರಮಾನಂದವನ್ನುಂಟು ಮಾಡುತ್ತಿದ್ದವು ಎಂದು ಇವರ ಪುಣ್ಯಕರ ಚರಿತ್ರೆಯಿಂದ ತಿಳಿದುಬರುತ್ತದೆ. ಅನೇಕ ಜನ ಪಂಡಿತರು ಇವರ ಗರಡಿಯಲ್ಲಿ ಪಳಗಿ ಶ್ರೀಮನ್ಯಾಯಸುಧೆಯಲ್ಲಿ ಮಿಂದೆದ್ದಿದ್ದಾರೆ. ಇವರ ಶಿಷ್ಯರೇ ಶ್ರೀಸುಕೃತೀಂದ್ರ ತೀರ್ಥರು. ಇವರ ಪಾಂಡಿತ್ಯ ವರ್ಣನಾತೀತ. ಶ್ರೀಮದಾಚಾರ್ಯರ ಸರ್ವಮೂಲ ಗ್ರಂಥಗಳನ್ನು ಪುಸ್ತಕಾನಪೇಕ್ಷಿತರಾಗಿ ಪಾಠ ಹೇಳುವ ಸಾಮರ್ಥ್ಯ- ಆ ಮೇಧಾವಿ ಶಕ್ತಿ ಶ್ರೀಗಳಿಗೆ ಒಲಿದಿತ್ತು.  ಸದ್ಗುಣಗಳ ಖಣಿಯಾಗಿದ್ದ ಶ್ರೀಗಳವರು ಮುಖಾರವಿಂದದಿಂದ ಹೊರಹುಮ್ಮುತ್ತಿದ್ದ  ಶಾಸ್ತ್ರ ಶ್ರವಣ ಮಾಡುವದೇ ದೊಡ್ಡ ಭಾಗ್ಯವಾಗಿತ್ತು ಅಂತಹ ವರ್ಚಸ್ಸು ಶ್ರೀಗಳದ್ದು ಎಂದು ತಿಳಿದುಬರುತ್ತದೆ.
                    ಇವರ  ಬಹು ದೊಡ್ಡ ಕೊಡುಗೆಯೇ ಶ್ರೀಸುಶೀಲೇಂದ್ರತೀರ್ಥರು. ಇವರ ಶಿಷ್ಯರೇ ವರ್ಣಿಸಿರುವ ಹಾಗೆ ಶ್ರೀಗಳ ಮುಖ್ಯ ಆಸಕ್ತಿ ಶ್ರೀಮನ್ಯಾಯಸುಧಾದಿ ಗ್ರಂಥಗಳ ಪಾಠ-ಪ್ರವಚನ. ಇವರು " ಸುಧಾದ್ಯಮಲ ಸದ್ಬೋಧರು" ಎಂದೇ ಪ್ರಖ್ಯಾತರು. ಇವರ ವೈರಾಗ್ಯ-ಪಾಂಡಿತ್ಯ-ವಿದ್ವತ್ಪಕ್ಷಪಾತ ಎಲ್ಲವು ವರ್ಣನಾತೀತ. ಶ್ರೀಗಳು ತಮ್ಮ ಪರಂಪರೆಯಲ್ಲಿ ಪ್ರಾಚೀನ ಸಭೆಯನ್ನು ಮಾರ್ಪಡಿಸಿ ಅದನ್ನು ವರ್ಷಕ್ಕೆ ಎರೆಡು ಬಾರಿ ನಡೆಯುವಂತೆ ವ್ಯವಸ್ಥೆಗೊಳಿಸಿ ವಿದ್ವತ್ಪ್ರಪಂಚದಲ್ಲಿ ಅಜರಾಮರಾದರು. ಇವರು ನ್ಯಾಯಸುಧೆಯಲ್ಲಿ ಇಟ್ಟಿದ್ದ ಭಕ್ತಿ- ಆಸಕ್ತಿಗಳು ಮಾರ್ಗದರ್ಶಕವಾಗಿದ್ದವುಗಳು. ಇವರ ಶಿಷ್ಯರೇ ಶ್ರೀಸುವೃತೀಂದ್ರ ತೀರ್ಥರು. ಇವರು ಗುರುಗಳು ಹಾಕಿಕೊಟ್ಟ ಮಾರ್ಗದಲ್ಲೇ ಚಾಚು ತಪ್ಪದೆ ನಡೆದ ಧೀಮಂತ ಶಿಷ್ಯರು. ಇವರ ಶಿಷ್ಯರಿಂದ "ಸುಧಾಪ್ರವಚನಾಸಕ್ತಮ್"  ಎಂದು ವರ್ಣಿತರಾದಂತೆ ಸದಾಕಾಲ ಶ್ರೀಮನ್ಯಾಯಸುಧಾ ಜಿಜ್ಞಾಸೆ- ಅದರ ಪಾಠ- ಪ್ರವಚನ- ಅನುವಾದಗಳಲ್ಲೇ ಆಸಕ್ತರಾಗಿದ್ದವರು. ಶ್ರೀಗಳಿಗೆ ವಿದ್ವತ್ಸಭೆ ಎಂದರೆ ಬಹು ಪ್ರೀತಿ. ತ್ರಿಮತಸ್ಥ ಪಂಡಿತರು ಶ್ರಿಗಳೊಡನೆ ವಾಕ್ಯಾರ್ಥ ಮಾಡಿ  ಅವರನ್ನು ಬಹುವಾಗಿ ಸ್ತುತಿಸಿದ್ದು ಕಂಡು ಬರುತ್ತದೆ. ಪರಮತೀಯರಿಂದಲೂ ಸ್ತುತಿಸಲ್ಪಟ್ಟ ಯತಿವರೇಣ್ಯರು ಶ್ರೀಸುವೃತೀಂದ್ರ ತೀರ್ಥರು.
                 ಶ್ರೀಸುವೃತೀಂದ್ರ ತೀರ್ಥರ ಕರಕಮಲ ಸಂಜಾತರೆ ಶ್ರೀಸುಯಮಿಂದ್ರ ತೀರ್ಥರು. ಶ್ರೀಗಳ ಚರಮ ಶ್ಲೋಕವೇ ಹೇಳುವಂತೆ ಇವರು ಬಹು ಕಾಲ ರಾಯರ ಸನ್ನಿಧಾನದಲ್ಲೇ ಇದ್ದುಕೊಂಡು ನಿರಂತರವಾಗಿ ಪಾಠಪ್ರವಚನ ಮಾಡಿಕೊಂಡು ಶ್ರೀಮನ್ಯಾಯಸುಧಾ ಹಾಗು ಪರಿಮಳದಲ್ಲೇ ಆಸಕ್ತರಾಗಿದ್ದರು. ಇವರ ಶಿಷ್ಯರೇ ಶ್ರೀಸುಜಯೀ೦ದ್ರ ತೀರ್ಥರು. ನವಮಂತ್ರಾಲಯದ ಶಿಲ್ಪಿಗಳು ಎಂದೇ ಖ್ಯಾತನಾಮರು.ಇವರೂ ಕೂಡ ಮಂತ್ರಾಲಯ ಕ್ಷೇತ್ರದಲ್ಲಿ ಶ್ರೀಮನ್ಯಾಯಸುಧಾದಿ ಗ್ರಂಥಗಳ ಪಾಠಪ್ರವಚನ ನಡೆಸಿದ್ದಾರೆ. ಅನೇಕ ಪಂಡಿತರನ್ನು ತಯಾರು ಮಾಡಿ ಶ್ರೀಮಠದ ಪ್ರಾಚೀನ ಸಂಸ್ಕೃತ ವಿದ್ಯಾಪೀಠವನ್ನು ಜೀರ್ಣೋದ್ಧಾರ ಮಾಡಿ ನೂತನವಾಗಿ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠ ಎಂದು ಮಂತ್ರಾಲಯದಲ್ಲಿ ಸ್ಥಾಪಿಸಿದರು.
              ಇವರ ಶಿಷ್ಯೋತ್ತಮರೇ ಶ್ರೀಸುಶಮೀ೦ದ್ರ ತೀರ್ಥರು. ಇವರು ಅವಧೂತಚರ್ಯೆಯನ್ನು ಹೊಂದಿದ್ದ ಶತಮಾನದ ಸಾಧಕರು. ನಡೆದಾಡುವ ರಾಯರು ಎಂದೇ ಖ್ಯಾತರಾಗಿದ್ದ ಅಪರೂಪದ ವ್ಯಕ್ತಿತ್ವ ಉಳ್ಳ ಮಾಹಾನುಭಾವರು. ಇವರ ಕಾಲದಲ್ಲಿ ಮಂತ್ರಾಲಯದಲ್ಲಿ ನಡೆದ ಜ್ಞಾನಕಾರ್ಯಕ್ರಮಗಳಿಗೆ ಲೆಕ್ಕವೇ ಇಲ್ಲ. ವೈಭವದ ಸುಧಾಮಂಗಳಗಳು ಸಜ್ಜನರನ್ನು ಆನಂದ ಪಡಿಸುತ್ತಿದ್ದವು. ಶ್ರೀಮಠದಲ್ಲಿ ಪಾಠ-ಪ್ರವಚನ, ಗ್ರಂಥ ಪ್ರಕಾಶನಕ್ಕೆ ಇವರ ಕೊಡುಗೆ- ಅನುಗ್ರಹ ಅಪಾರ. ಶ್ರೀಮನ್ಯಾಯಸುಧಾ ಗ್ರಂಥಕ್ಕೆ ೩೦ ಕ್ಕೂ ಹೆಚ್ಚು ವ್ಯಾಖ್ಯಾನ ಉಳ್ಳ ಬೃಹತ್ ಸಂಪುಟಸರಣಿಯನ್ನು ಹೊರತಂದವರು  ಶ್ರೀಸುಶಮೀ೦ದ್ರ ತೀರ್ಥರು. ಇವರ ವಿದ್ವತ್ಪಕ್ಷಪಾತವನ್ನು ಮನಗಾಣದ ಮಾಧ್ವ ಪಂಡಿತರು ಈ ಭೂಮಿಯಲ್ಲೇ ಇಲ್ಲ.  ಇವರ ಶಿಷ್ಯರೇ ಶ್ರೀಸುಯತೀಂದ್ರ ತೀರ್ಥರು ಹಾಗು ಶ್ರೀಸುವಿದ್ಯೇ೦ದ್ರ ತೀರ್ಥರು. ಇಬ್ಬರು ವಿದ್ಯಾಪಕ್ಷಪಾತಿಗಳು.ಶ್ರೀಸುವಿದ್ಯೇ೦ದ್ರ ತೀರ್ಥರು  ಅನೇಕ ಬಾರಿ ನ್ಯಾಯಸುಧಾ ಮಂಗಳವನ್ನಾಚರಿಸಿದ್ದಾರೆ. ವಿದ್ವತ್ಪ್ರಪಂಚದಲ್ಲಿ ದೊಡ್ಡ ಹೆಸರು ಶ್ರೀಸುವಿದ್ಯೇ೦ದ್ರ ತೀರ್ಥರದ್ದು. ಇನ್ನು ಶ್ರೀಸುಶಮೀ೦ದ್ರರ ನಂತರ ಪೀಠವನ್ನೇರಿದವರು ಶ್ರೀಸುಯತೀ೦ದ್ರ ತೀರ್ಥರು.  ಕೇವಲ ಎಂಟು ವರ್ಷದ ಅವಧಿಯಲ್ಲೇ ಎರೆಡು-ಮೂರು ಸುಧಾಮಂಗಳಗಳನ್ನು ಆಚರಿಸಿದ ಮಹಾನುಭಾವರು. ಶ್ರೀಮಠದ ಸಮೀರಸಮಯಸಂವರ್ಧಿನಿ ಸಭೆಯನ್ನು ತಮ್ಮ ಗುರುಗಳಂತೆಯೇ ನಡೆಸಿಕೊಂಡು ಬಂದವರು. ಇವರ ಬಹು ದೊಡ್ಡ ಕೊಡುಗೆಯೇ ಪ್ರಸ್ತುತ ಸರ್ವಜ್ಞ ಪೀಠದಲ್ಲಿ ವಿರಾಜಮಾನರಾದ ಶ್ರೀಸುಬುಧೇಂದ್ರ ತೀರ್ಥರು.
               
                  ಇದಲ್ಲದೇ ಶ್ರೀರಾಘವೇಂದ್ರ ಸ್ವಾಮಿಗಳವರ ಮಠದ ಶಿಷ್ಯಪರಂಪರೆಗೆ ಸೇರಿದ  ಶ್ರೀ ಲಿಂಗೇರಿ ಆಚಾರ್ಯರು , ಶ್ರೀ ಅಯ್ಯಣಾಚಾರ್ಯರು ಅನೇಕ ಸದ್ ಗ್ರಹಸ್ತರು ಶ್ರೀಮನ್ಯಾಯಸುಧೆಗೆ ವ್ಯಾಖ್ಯಾನಗಳನ್ನು ಬರೆದು ಮಹದುಪಕಾರ ಮಾಡಿದ್ದಾರೆ. ಒಟ್ಟಾರೆ ಶ್ರೀರಾಘವೇಂದ್ರ ಸ್ವಾಮಿಗಳವರ ಮಠದಿಂದಲೇ ಶ್ರೀಮನ್ಯಾಯಸುಧೆಗೆ ಸುಮಾರು ೨೦ಕ್ಕೂ ಹೆಚ್ಚು ಟಿಪ್ಪಣಿಗಳು ಬರಿಯಲ್ಪಟ್ಟಿವೆ. ಇದು ವಿದ್ಯಾಮಠಕ್ಕೆ ಸಂದ ಗೌರವ.
                     ಈ ರೀತಿ ಶ್ರೀಮದಾಚಾರ್ಯರ ಅನುಗ್ರಹದಿಂದ  ಅವರ ಮೂಲಪೀಠದಲ್ಲಿ ವಿರಾಜಮಾನರಾಗಿರುವ ಎಲ್ಲ ಯತೀಶ್ವರರು ಶ್ರೀಮನ್ಯಾಯಸುಧಾ ಗ್ರಂಥದ ಪಾಠ-ಪ್ರವಚನ- ಜಿಜ್ಞಾಸೆಗಳನ್ನೂ ವಿಶೇಷವಾಗಿ ನಡೆಸಿಕೊಂಡು ಬಂದು ವಿದ್ಯಾಮಠದ ಗೌರವವನ್ನು ಇಮ್ಮಡಿಸಿದ್ದಾರೆ.
                    ಶ್ರೀರಾಘವೇಂದ್ರ ಸ್ವಾಮಿಗಳವರ ಮಠದ ಅನೇಕ ಯತಿಗಳ ಚರಮ ಶ್ಲೋಕದಲ್ಲಿ ಅವರು ಮಾಡಿರುವ ಶ್ರೀಮನ್ಯಾಯಸುಧಾಗ್ರಂಥದ ಸೇವೆಯೇ ಪ್ರಧಾನಾಂಶವಾಗಿರುವದು ಗಮನಾರ್ಹ. ಶ್ರೀಮಧ್ವಾಚಾರ್ಯರ ಪೀಠ ಅಲಂಕರಿಸಿದ್ದ ಶ್ರೀಮಜ್ಜಯತೀರ್ಥ ಗುರುಸಾರ್ವಭೌಮರು  ಇಂದ್ರದೇವರ ಅವತಾರವಾಗಿದ್ದು ಶ್ರೀರಾಘವೇಂದ್ರ ಸ್ವಾಮಿಗಳವರ ಮಠದ ಯತೀಶ್ವರರು ಶ್ರೀಕವೀಂದ್ರ ತೀರ್ಥರ ಕಾಲದಿಂದಲೂ "ಇಂದ್ರ" ಎಂಬ ಉಪನಾಮ ಎಲ್ಲ ಯತಿಗಳ ನಾಮದಲ್ಲೂ ಸರ್ವೇಸಾಮಾನ್ಯವಾಗಿದ್ದು ಶ್ರೀಮನ್ಯಾಯಸುಧಾದಿ ಗ್ರಂಥಗಳ ಪಾಠ ಪ್ರವಚನ ಸೂಚಕವಾಗಿ ಶೋಭಿಸುತ್ತಿದೆ.

                    ಮಂತ್ರಾಲಯ  ಕ್ಷೇತ್ರದಲ್ಲೇ ಇದ್ದುಕೊಂಡು ಪಾಠಪ್ರವಚನ ಮಾಡಿಕೊಂಡಿದ್ದವರು ಶ್ರೀ ರಾಜಾ ಎಸ್ ಪವಮಾನಾಚಾರ್ಯರು.ತಮ್ಮ ತಂದೆಗಳಾದ ಶ್ರೀಪಾದಪುತ್ರ ರಾಜಾ ಗಿರಿಯಾಚಾರ್ಯರಲ್ಲಿ ದ್ವೈತವೇದಾಂತ ಅಭ್ಯಸಿಸಿ ಚಿಕ್ಕವಯಸ್ಸಿನಲ್ಲೇ ಶ್ರೀಮನ್ಯಾಯಸುಧಾಗ್ರಂಥದ ಮಂಗಳ ಮಾಡಿದವರು. ತಂದೆಯ ಗರಡಿಯಲ್ಲಿ ಪಳಗಿ ಶ್ರೀಪಲಿಮಾರು-ಭಂಡಾರಕೇರಿ ಮಠದ ಶ್ರೀವಿದ್ಯಾಮಾನ್ಯರಿಂದ ತಮ್ಮ ಪೂರ್ವಾಶ್ರಮದಲ್ಲಿ ೧೯೯೨ ರಲ್ಲಿ ಶ್ರೀಮನ್ಯಾಯಸುಧಾವಿದ್ವಾನ್ ಎಂದು ಕರೆಸಿಕೊಂಡವರು. ಪೀಠವೇರಿದಮೇಲೆ ಹತ್ತಾರು ವಿದ್ಯಾರ್ಥಿಗಳ ಜೊತೆಗೆ ಶ್ರೀಭೀಮನಕಟ್ಟೆ ಕಿರಿಯ ಮಠಾಧೀಶರಾದ ಶ್ರೀರಘುವರೇಂದ್ರ ತೀರ್ಥರಿಗೆ ಸುಧಾ ಹಾಗು ಚಂದ್ರಿಕಾ ಪಾಠವನ್ನು ಮಾಡಿದ್ದಾರೆ. ಇವರ ಪರಮಗುರುಗಳ ಕಾಲದಲ್ಲಿ ೨೫ ಟಿಪ್ಪಣಿಗಳ ಸಮೇತ  ಶ್ರೀಮನ್ಯಾಯಸುಧಾಗ್ರಂಥ ವಿದ್ವತ್ಪ್ರಪಂಚಕ್ಕೆ ಉಡುಗೊರೆಯಾಗಿ ಕೊಡುವಲ್ಲಿ ಶ್ರೀಪಾದರ ಪ್ರಯತ್ನ ಅವರ್ಣನೀಯ. ಆಗ ೨೫ ವ್ಯಾಖ್ಯಾನಸಮೇತ ಗ್ರಂಥಗಳನ್ನು ಬಿಡುಗಡೆ ಮಾಡಿದರೇ ಶ್ರೀಸುಬುಧೇಂದ್ರ ತೀರ್ಥರು ೨೫ ವ್ಯಾಖ್ಯಾನಗಳನ್ನು ಮಸ್ತಕದಲ್ಲಿ ಹೊತ್ತ ಚಲಪುಸ್ತಕಗಳನ್ನು ವಿದ್ವತ್ಪ್ರಪಂಚಕ್ಕೆ ಕೊಟ್ಟಿದ್ದಾರೆ. ಇದು ಅತ್ಯಂತ ಸ್ತುತ್ಯಾರ್ಹವಾದ ಕಾರ್ಯ.



ಪ್ರಸ್ತುತ ಸರ್ವಜ್ಞ ಪೀಠವೇರಿದ  ಮೇಲೆ ತಮ್ಮ ಪ್ರಥಮ ನ್ಯಾಯಸುಧಾಮಂಗಲಮಹೋತ್ಸವವನ್ನು ಡಿ. ೧೪ ಹಾಗು ೧೫ ರಂದು ಆಚರಿಸಲಿದ್ದು ತಮ್ಮ ಶಿಷ್ಯರನ್ನು ಸಮಾಜಕ್ಕೆ ಧಾರೆ ಎರೆಯಲಿದ್ದಾರೆ. ಶ್ರೀಪಾದರ ಈ ಸುಧಾಮಂಗಳವು ವೈಭವೋಪೇತವಾಗಿರಲಿದ್ದು ವಿಶೇಷ ಎಂದರೆ ಪರಿಮಳ ಸೇರಿದಂತೆ ಸುಮಾರು ೨೫ ಟಿಪ್ಪಣಿ ಸಹಿತವಾಗಿ ಶ್ರೀಮನ್ಯಾಯಸುಧಾಪಾಠವನ್ನು ಮಾಡಿದ್ದಾರೆ. ಅದಕ್ಕೆ ಪರೀಕ್ಷೆಯನ್ನು ತೆಗೆದುಕೊಳ್ಳಲು ಅನೇಕ ಪೀಠಾಧಿಪತಿಗಳು ಹಾಗು ತ್ರಿಮತಸ್ಥ ವಿದ್ವಾಂಸರು ಆಗಮಿಸಲಿದ್ದಾರೆ.
                                         
 ।।  ಶ್ರೀರಾಘವೇಂದ್ರ ಗುರವೇ ನಮಃ  ಕಾರುಣ್ಯ ಸಿಧಂವೇ ।। 

             


No comments:

Post a Comment

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...