Tuesday, 2 June 2020

ಶ್ರೀಪಾದರಾಜರು

ಶ್ರೀಪಾದರಾಜರು ( ಶ್ರೀಲಕ್ಷ್ಮೀನಾರಾಯಣ ತೀರ್ಥರು) 

ತಂ ವಂದೇ ನರಸಿಂಹತೀರ್ಥನಿಲಯಂ ಶ್ರೀ ವ್ಯಾಸರಾಟ್ ಪೂಜಿತಂ ಧ್ಯಾಯಂತಾಂ ಮನಸಾ ನೃಸಿಂಹಚರಣಂ ಶ್ರೀಪಾದರಾಜಂ ಗುರುಂ॥

ಆಶ್ರಮನಾಮ: ಶ್ರೀಲಕ್ಷ್ಮೀನಾರಾಯಣ ತೀರ್ಥರು
ಆಶ್ರಮ ಗುರುಗಳು: ಶ್ರೀಸ್ವರ್ಣವರ್ಣತೀರ್ಥರು 
ವಿದ್ಯಾಗುರುಗಳು:  ಶ್ರೀ ವಿಬುಧೆಂದ್ರ ತೀರ್ಥರು (ಶ್ರೀಕವೀಂದ್ರ ತೀರ್ಥ ಪರಂಪರಾ ಭೂಷಾಮಣಿ) 
ಆಶ್ರಮ ಶಿಷ್ಯರು: ಶ್ರೀಹಯಗ್ರೀವತೀರ್ಥರು 
ಪರಂಪರೆ:
 ಶ್ರೀಪಾದರಾಜ ಮಠ : ಶ್ರೀಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ಮಾಧ್ವಯತಿಕುಲ ತಿಲಕ ಶ್ರೀಪದ್ಮನಾಭ ತೀರ್ಥರಿಂದ ಪ್ರವರ್ತಿತವಾದ, ಶ್ರೀಲಕ್ಷ್ಮಿಧರ ತೀರ್ಥ ಶ್ರೀಪಾದರಿಂದ ಮುಂದುವರೆದ ಪರಂಪರೆ. 
ಪೂರ್ವಾಶ್ರಮ ನಾಮ: ಲಕ್ಷ್ಮೀನಾರಾಯಣ 
ವೃಂದಾವನ ಸ್ಥಳ: ಮುಳುಬಾಗಿಲು


ಪೂರ್ವಾಶ್ರಮ - ಸಂನ್ಯಾಸ: 

ಬಾಲಕನಾಗಿದ್ದಾಗಲೇ ಅಪ್ರತಿಮ ಮಾತಿನ ವೈಖರಿಯಿಂದ ಶ್ರೀಸ್ವರ್ಣವರ್ಣತೀರ್ಥರ ಪರಮಾನುಗ್ರಹಕ್ಕೆ ಪಾತ್ರರಾಗಿ ಅವರಿಂದಲೇ  ಸಂನ್ಯಸ್ತರಾಗಿ ಬಾಲಯತಿಗಳಾಗಿ ಕಂಗೊಳಿಸಿದವರು ಶ್ರೀಲಕ್ಷ್ಮೀನಾರಾಯಣತೀರ್ಥರು..

ವಿದ್ಯಾಗುರುಗಳು- ವಿದ್ಯಾಭ್ಯಾಸ: 

ಸಂನ್ಯಸ್ತರಾದ, ಚತುರರಾದ ನೂತನ ಬಾಲಯತಿಗಳನ್ನು ಅಪ್ರತಿಮ ವಿದ್ವಾಂಸರನ್ನಾಗಿ ಮಾಡಬೇಕು ಎಂದು ಅಪೇಕ್ಷೇಯುಳ್ಳ ಶ್ರೀಸ್ವರ್ಣವರ್ಣತೀರ್ಥರು ಬಾಲಯತಿಗಳನ್ನು ಶ್ರೀವಿಬುಧೇಂದ್ರತೀರ್ಥರ ಹತ್ತಿರ ಕಳುಹಿಸುತ್ತಾರೆ.

ಶ್ರೀಮನ್ಮಧ್ವಾಚಾರ್ಯರ- ಶ್ರೀಪದ್ಮನಾಭತೀರ್ಥರ- ಶ್ರೀ ಜಯತೀರ್ಥರ ದಿವ್ಯ ಪರಂಪರೆಯನ್ನು ಬೆಳಗಿದ , ಶ್ರೀಮಧ್ವಾಚಾರ್ಯರ ಸಿದ್ಧಾಂತವನ್ನೇ ತಮ್ಮ ಸಾರಸರ್ವಸ್ವವನ್ನಾಗಿಸಿಕೊಂಡಿದ್ದವರು ಶ್ರೀವಿಬುಧೇಂದ್ರತೀರ್ಥರು. ಕೇರಲದಿಂದ ಹಿಮಾಲಯಪರ್ಯಂತ ದುರ್ವಾದಿಗಳನ್ನು ನಿರಾಕರಿಸಿದವರು, ದುರ್ವಾದಿವೀಘಟನ ದೀಕ್ಷಾಬದ್ಧರಾದ ಮಾಡುವ ಮಾಧ್ವಯತೀಶ್ವರರ ಸೇನಾನಾಯಕನಂತೆ ಕಂಗೊಳಿಸಿದವರು. ಆಗಿನ ಕಾಲದಲ್ಲಿ ವಿದ್ಯೆಗೆ ತವರಾದ ಮಹಾನ್ ಮೇಧಾವಿಗಳು.

ಶ್ರೀವಾದೀಂದ್ರತೀರ್ಥರು, ಶ್ರೀಪಾದರಾಜರ ವಿದ್ಯಾಗುರುಗಳಾದ ಶ್ರೀವಿಬುಧೇಂದ್ರತೀರ್ಥರನ್ನು ಸ್ತುತಿಸುವಾಗ,

"ಅಮೀಲಕ್ಷ್ಮೀನಾರಾಯಣಮುನಿಮುಖಾಶೇಷಯತಯಃ
ಯತೋ ವಿದ್ಯಾಮೃದ್ಧಾಮಧಿಜಗುರುಧಿಷ್ಠಾನಪತಯಃ |
ಮುಹುರ್ಮೋಹೋದಂಚತ್ಪರಮತಪರೀಭಾವಚತುರಃ
ಸ ಮೇ ಭೂಯಃ ಶ್ರೇಯೋ ದಿಶತು ವಿಬುಧೇಂದ್ರವ್ರತಿಪತಿಃ ||

ಎಂದು ಶ್ರೀಪಾದರಾಜರು ಶ್ರೀವಿಬುಧೇಂದ್ರರ ವಿದ್ಯಾಶಿಷ್ಯರು ಎಂದು ವಿಶೇಷವಾಗಿ ಸ್ಮರಿಸಿದ್ದಾರೆ.

ಶ್ರೀವಿಬುಧೆಂದ್ರತೀರ್ಥರಲ್ಲಿ ಸಮಸ್ತ ದ್ವೈತವೇದಾಂತವನ್ನು ಅಭ್ಯಸಿಸಿ, ಗುರುಗಳಂತೆಯೇ ಅಖಂಡ ವಿದ್ಯಾಪಾರಂಗತರಾಗಿ ವಿದ್ಯಾವ್ಯಾಸಂಗ ಮುಗಿಸಿ ಅವರ ಎತ್ತರದ ವ್ಯಕ್ತಿತ್ವದ ದ್ಯೋತಕವಾಗಿ "ಶ್ರೀಪಾದರಾಜರು" ಎಂಬ ಪ್ರಶಸ್ತಿಯನ್ನು ಪಡೆದವರಾಗಿ ಶ್ರೀಸ್ವರ್ಣವರ್ಣತೀರ್ಥರ ಹತ್ತಿರ ಬರುತ್ತಾರೆ.

ಇದನ್ನೇ ಶ್ರೀವಾದೀಂದ್ರ ಶ್ರೀಮಚ್ಚರಣರು ತಮ್ಮ 'ಶ್ರೀರಾಘವೇಂದ್ರಮಠಗತಾರ್ಚಾಗತಿಕ್ರಮ'ದಲ್ಲಿ, ಶ್ರೀಮದ್ವಿಬುಧೇಂದ್ರತೀರ್ಥರ ಬಗ್ಗೆ ಹೇಳುವಾಗ,

ಲಕ್ಷ್ಮೀನಾರಯಣಮುನಿಃ ವ್ಯಾಸದೇಶಿಕದೇಶಿಕಃ |
ಯಸ್ಮಾತ್ ಶ್ರೀಪಾದರಾಜಾಖ್ಯೋ ಹೃದ್ಯಗೀಷ್ಟಾಖಿಲಾಗಮಾನ್ ||
                                                                               - ಅ.ಗ.ಕ್ರ - 5

ಎಂದು ಗುರುಶಿಷ್ಯರ ವಿದ್ಯಾಸಂಬಂಧವನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ.

ಸಂಸ್ಥಾನಾಧಿಪತ್ಯ ಹಾಗೂ ವಿಶ್ವವಿದ್ಯಾನಿಲಯ ಸ್ಥಾಪನೆ : 


ಶ್ರೀಸ್ವರ್ಣವರ್ಣತೀರ್ಥರು ವೃಂದಾವನಸ್ಥರಾದಮೇಲೆ ಸಂಸ್ಥಾನದ ಸಕಲ ಹೊಣೆಯನ್ನು ಶ್ರೀಪಾದರಾಜರು ಹೊತ್ತುಕೊಂಡು ಶ್ರೀಮದಾಚಾರ್ಯ ಕರಾರ್ಚಿತ ಗೋಪಿನಾಥದೇವರೇ ಮೊದಲಾದ ಸಂಸ್ಥಾನ ಮುಖ್ಯಪ್ರತಿಮೆಗಳನ್ನು ಅನವರತವಾಗಿ ಪೂಜಿಸಿದರು.

ಪವಿತ್ರವಾದ ಪೌರಾಣಿಕ ಹಿನ್ನೆಲೆಯುಳ್ಳ, ಶ್ರೀಮದಕ್ಷೋಭ್ಯ ತೀರ್ಥರ ಪಾದಧೂಳಿ ಸೋಕಿದ, ಶ್ರೀಅಕ್ಷೋಭ್ಯರು ಮಹಾವಿಂದ್ವಾಂಸರಾದ ಪ್ರಸಿದ್ಧ ವಿದ್ಯಾರಣ್ಯರನ್ನು ಪರಾಜಿತರನ್ನಾಗಿ ಮಾಡಿದ ಐತಿಹಾಸಿಕ ಹಿನ್ನೆಲೆಯುಳ್ಳ, ತಾವೇ ಸ್ವತಃ ಅಂಗಾರದಲ್ಲಿ ನರಸಿಂಹದೇವರನ್ನು ಬರೆದ, ಶುಭಪ್ರದವಾದ
ಮುಳುಬಾಗಿಲು ಕ್ಷೇತ್ರವನ್ನೇ  ಶ್ರೀಮದಾಚಾರ್ಯರ ದ್ವೈತಮತದ ವಿಶೇಷ ಅಧ್ಯಯನ-ಅಧ್ಯಾಪನಕ್ಕಾಗಿ ಒಂದು ವಿದ್ಯಾಕೇಂದ್ರವನ್ನಾಗಿ ಮಾಡಿಕೊಂಡು ತತ್ವಜ್ಞಾನದ ಪ್ರತಿಷ್ಠಾನಕ್ಕೆ ಕಾರಣರಾದವರು ಶ್ರೀಪಾದರಾಜರು.

ಶ್ರೀವ್ಯಾಸರಾಜರನ್ನು ವಿದ್ಯಾಶಿಷ್ಯಾರಾಗಿ ಪಡೆದದ್ದು: 

ಶ್ರೀಬ್ರಾಹ್ಮಣ್ಯತೀರ್ಥರಿಂದ ಸಂನ್ಯಸ್ತರಾಗಿದ್ದ ಬಾಲಯತಿಗಳಾದ ಶ್ರೀವ್ಯಾಸತೀರ್ಥರನ್ನು ಅತ್ಯುತ್ತಮ ವಿದ್ವಾಂಸರನ್ನಾಗಿ ತಯಾರು ಮಾಡಲು ದ್ವೈತವಿದ್ಯಾನಿಲಯವೆಂದೇ ಪ್ರಸಿದ್ಧವಾಗಿದ್ದ ಶ್ರೀಪಾದರಾಜರಲ್ಲಿ ಕಳುಹಿಸಿದರು. ಶ್ರೀಮದ್ವಾಚಾರ್ಯರ ಈ ಮೋಕ್ಷಶಾಸ್ತ್ರವನ್ನು, ಸಕಾಲವೇದ-ಶಾಸ್ತ್ರಗಳನ್ನು ಶ್ರೀಪಾದರಾಜರಲ್ಲಿ ಅಭ್ಯಸಿಸಿದ ಶ್ರೀವ್ಯಾಸತೀರ್ಥರು ಭರತಖಂಡ ಕಂಡ ಶ್ರೇಷ್ಠವಿದ್ವಾಂಸರಾಗಿ ಬೆಳೆದು, ಪ್ರತಿವಾದಿಗಳ ಪಾಲಿಗೆ ಭಯಂಕರವಾದ, ಶ್ರೀನರಸಿಂಹದೇವರ ಮೂರೂಕಣ್ಣುಗಳಂತೆ ಇರುವ, ದ್ವೈತವಾಂಗ್ಮಯದ ಅಭೇದ್ಯ ಕೋಟೆಯಂತಿರುವ 'ತಾತ್ಪರ್ಯಚಂದ್ರಿಕಾ', 'ನ್ಯಾಯಾಮೃತ' ಹಾಗು 'ತರ್ಕತಾಂಡವ'ಗಳೆಂಬ ಅನರ್ಘ್ಯ ಕೃತಿಗಳನ್ನು  ಕೊಟ್ಟಿರುವದು ಇತಿಹಾಸ.


ವೈಭವ:

ವಿಜಯನಗರದ ಸಾಳುವ ನರಸಿಂಹ ತಿರುಪತಿಯಲ್ಲಿ ಅರ್ಚಕರ ರೀತಿ ನೀತಿಗಳು ಸರಿಹೋಗದೇ ಅವರನ್ನು ಕಡೆದು ನಿರ್ನಾಮ ಮಾಡುವಂತೇ ಆಜ್ಙೆ ಮಾಡಿದ್ದ. ಅದರ ಪರಿಣಾಮ ತನಗೆ ಬ್ರಹ್ಮಹತ್ಯಾ ದೋಷ ಬರುವದು ಎಂದು ಚಿಂತಾಕ್ರಾಂತನಾಗಿದ್ದ ಅವನ ದೋಷವನ್ನು ಪರಿಹಾರ ಮಾಡಿದ್ದಲ್ಲದೇ ರತ್ನಸಿಂಹಾಸನದ ಪರಮಭಾಗ್ಯವನ್ನು ಒದಗಿಸಿ ಕೊಟ್ಟವರು ಶ್ರೀಪಾದರಾಜರು.ಅದಕ್ಕಾಗಿ ಗುರುಗಳನ್ನು ನೆನೆದು ರಾಜೋಚಿತವಾಗಿ ರತ್ನಾಭಿಷೇಕವನ್ನು ಮಾಡಿದ.

ಈ ಸಮಯದಿಂದ ಶ್ರೀಪಾದರಾಜರು ಸುಗಂಧ ದ್ರವ್ಯಭರಿತ ಶುಧ್ಧೋದಕ ಸ್ನಾನ ಮಾಡುವದು, ಪ್ರತಿದಿನವೂ ಅರವತ್ತು ಬಗೆಯ ನಾನಾ ಭಕ್ಷ್ಯಭೋಜ್ಯಗಳನ್ನು ಶ್ರೀಗೋಪಿನಾಥದೇವರಿಗೆ ನಿವೇದಿಸಿ-ಸ್ವೀಕಾರ ಮಾಡುವದು, ನವರತ್ನ ಖಚಿತ, ಕುಂಡಲ, ಕವಚಗಳನ್ನು ಧರಿಸುವದು ರೂಢಿಯಲ್ಲಿ ಬಂದಿತು..

ಈ ಪರಮಾದ್ಭುತ ವೈಭವವನ್ನು ಶ್ರೀವ್ಯಾಸರಾಜರು ತಮ್ಮ ಶ್ರೀಪಾದರಾಜಪಂಚರತ್ನಮಾಲಿಕಾದಲ್ಲಿ ಪರಮಾದ್ಭುತವಾಗಿಯೇ ಚಿತ್ರಿಸಿದ್ದಾರೆ..ಹೀಗೆ ರಾಜಾಧಿರಾಜರಿಂದ ಮಾನೀತರಾದವರು ಶ್ರೀಪಾದರಾಜರು.


ಗ್ರಂಥರಚನೆ ಹಾಗೂ ಸಾಹಿತ್ಯಕ್ಕೆ ಕೊಡುಗೆಗಳು:

ವೇದಾಂತೇತಿಹಾಸದಲ್ಲಿ  ಶ್ರೀಜಯತೀರ್ಥಶ್ರೀಮಚ್ಚರಣರ 'ಶ್ರೀಮನ್ನ್ಯಾಸುಧಾ' ಗ್ರಂಥಕ್ಕೆ  ಎಲ್ಲಿಲ್ಲದ ಮನ್ನಣೆ. ಮಾಧ್ವವಾಂಗ್ಮಯದಲ್ಲಿ ರಾಶಿ-ರಾಶಿ ಟಿಪ್ಪಣಿಗಳನ್ನು ಹೊಂದಿದ ಮೇರು ಕೃತಿ ಇದು. ಮಾಧ್ವಪರಂಪರೆಯಲ್ಲಿ ಬಂದು ಹೋದ ಖ್ಯಾತನಾಮರೆಲ್ಲ ಈ ಗ್ರಂಥವನ್ನು ಶಿರಸಾ-ಮಾನ್ಯ ಮಾಡಿದ್ದಾರೆ. ಅಂತಹ ಶ್ರೀಮನ್ನ್ಯಾಸುಧೆಗೆ ಶ್ರೀಪಾದರಾಜರು ತಾವೇ ವಿದ್ವದ್ವಿಶಿಷ್ಟವಾದ 'ವಾಗ್ವಜ್ರ' ಎಂಬ ಟಿಪ್ಪಣಿ ಬರೆದಿದ್ದಾರೆ ಎಂದು ತಿಳಿದುಬರುತ್ತದೆ.

ಶ್ರೀಪಾದರಾಜರ 'ವಾಗ್ವಜ್ರ'ವು, ಶ್ರೀವ್ಯಾಸರಾಜರ 'ವ್ಯಾಸತ್ರಯ'ಗಳನ್ನ ರಚಿಸುವಲ್ಲಿ ಅಪ್ರತಿಮವಾದ ಪ್ರಭಾವ ಬೀರಿದ್ದು, ಶ್ರೀವ್ಯಾಸರಾಜರಿಗೆ ಸ್ಫೂರ್ತಿ ಇತ್ತ ಗ್ರಂಥ ಎಂದು , ಶ್ರೀಪಾದರಾಜಮಠಾಧೀಶರಾದ ಶ್ರೀಲಕ್ಷ್ಮೀಕಾಂತತೀರ್ಥರಿಂದ  ಕ್ರಿ.ಶಕ. ೧೭೫೦ ರಲ್ಲಿ ರಚಿಸಲ್ಪಟ್ಟ 'ಶ್ರೀಪಾದರಾಜಾಷ್ಟಕದಲ್ಲಿ' ಉಲ್ಲೇಖಿಸಲ್ಪಟ್ಟಿದೆ. ಮಹಾನ್ ಪಂಡಿತರಾದ ಶ್ರೀಪಾದರಾಜರು ಸಂಸ್ಕೃತದಲ್ಲಿ ಅನೇಕ ಗ್ರಂಥಗಳನ್ನು ರಚಿಸಿರುವಸಂಭವವಿದೆ. ಆದರೆ ಅವೆಲ್ಲವೂ ಬಹುತೇಕ ಅನುಪಲಬ್ಧ. ಶ್ರೀಪಾದರಾಜರ 'ವಾಗ್ವಜ್ರ' ಗ್ರಂಥದ ಕೆಲವು ಭಾಗಗಳೂ ಮಾತ್ರ ದೊರಕಿವೆ. ಸಂಪೂರ್ಣ ಉಪಲಬ್ಧವಿಲ್ಲ. (?)

ವಾಗ್ವಜ್ರದ ಬಗ್ಗೆ ಶ್ರೀಪಾದರಾಜಾಷ್ಟಕದಲ್ಲಿ, ಇದನ್ನು ಪ್ರಬಲ ಯುಕ್ತಿಗಳಿಂದ ಕೂಡಿದ್ದು, ದುರ್ವಾದಿಪಕ್ಷಗಳನ್ನು ಉತ್ತಮ ವಚನಗಳಿಂದ ಖಂಡಿಸುವದರಲ್ಲಿ ಅಗ್ರವಾಗಿರುವ, ಶ್ರೀವ್ಯಾಸರಾಜರಿಗೆ ಸ್ಪೂರ್ತಿ ಇತ್ತ ಗ್ರಂಥ, ಮಾಹಾತ್ಮ್ಯವನ್ನು ಹೊಂದಿದ ಗ್ರಂಥ ಎಂದು ಉಲ್ಲೆಖಿಸಲ್ಪಟ್ಟಿದೆ.

ಇಷ್ಟಲ್ಲದೆ ಶ್ರೀಮದಾಚಾರ್ಯರಿಂದ ಪ್ರೇರಿತವಾಗಿ, ಶ್ರೀನರಹರಿತೀರ್ಥರಿಂದ ಪ್ರವಹಿಸಿದ ಹರಿದಾಸಸಾಹಿತ್ಯ ವಿಶಿಷ್ಟವಾದ ಆಯಾಮ ಪಡೆದದ್ದು ಶ್ರೀಪಾದರಾಜರಿಂದ.
ಮೊದಲು 'ಗೋಪಿನಾಥ' ಎಂಬ ಅಂಕಿತದಿಂದ ಕನ್ನಡದಲ್ಲಿ ದೇವರನಾಮ ರಚಿಸಿದ್ದ ಶ್ರೀಪಾದರಾಜರಿಗೆ, ಗೋಪಿನಾಥನಿಂದ ಅಭಿನ್ನನಾದ 'ರಂಗವಿಠಲ' ಒಲಿದುಬಂದಮೇಲೆ, ಅದೇ ಅಂಕಿತದಲ್ಲಿ ಅನೇಕ ಕೀರ್ತನೆಗಳನ್ನೂ ಕನ್ನಡದಲ್ಲಿ ರಚಿಸಿ ಶ್ರೀಮದಾಚಾರ್ಯರ  ಸತ್ಸಿದ್ಧಾಂತದ ರುಚಿಯನ್ನು ಉಣಬಡಿಸಿದ್ದಾರೆ.

'ರಂಗವಿಠಲ' ಅಂಕಿತದಿಂದ ರಚಿತವಾದ ಅನೇಕ ದೇವರ ನಾಮಗಳು, "ಇಟ್ಟಾಂಗೇ ಇರುವೆನೋ ಹರಿಯೇ", "ಮಧ್ವನಾಮ"ವೇ ಮೊದಲಾದವುಗಳು ಇವರ ಪ್ರಸಿದ್ಧ ಕೃತಿಗಳು.

ಇದಲ್ಲದೇ ತಮ್ಮ ವಿದ್ಯಾಗುರುಗಳಾದ ಶ್ರೀವಿಬುಧೇಂದ್ರತೀರ್ಥ ಕರಕಮಲ ಸಂಜಾತರಾದ ಶ್ರೀಜಿತಾಮಿತ್ರತೀರ್ಥರನ್ನು  "ವಂದನೈ ಮಾಡಿರೈ ಯತಿಕುಲ ಚಂದ್ರನ ಪಾಡಿರೈ.." ಎಂದು ಮುಕ್ತಕಂಠದಿಂದ   ಕೊಂಡಾಡಿದ್ದಾರೆ.. ಪರಮಶ್ರೇಷ್ಠವಾದ ಸಂನ್ಯಾಸಜೀವನವನ್ನು ನಡೆಸಿದೆ ಶ್ರೀವ್ಯಾಸರಾಯರ ಸೇವೆ ನೋಡಿ ಸ್ವಶಿಷ್ಯರನ್ನೇ ಕೊಂಡಾಡಿದವರು ಶ್ರೀಪಾದರಾಜರು..

ಶ್ರೀಪಾದರಾಜನುತಿ:

ಶ್ರೀಪಾದರಾಜರನ್ನು ಅವರ ಮಹಿಮೆಯನ್ನು ಅನೇಕ ಯತಿವರೇಣ್ಯರು ಕೊಂಡಾಡಿದ್ದಾರೆ..

ಶ್ರೀಪಾದರಾಜರ ಸಕ್ಷಾತ್ ವಿದ್ಯಾಶಿಷ್ಯರಾಸ ಶ್ರೀವ್ಯಾಸರಾಜರು 'ಶ್ರೀಪಾದರಾಜಪಂಚರತ್ನಮಾಲಿಕಾಸ್ತೋತ್ರ' ಸ್ತೋತ್ರವನ್ನು ರಚಿಸಿದ್ದಾರೆ.

ಶ್ರೀಮದ್ವ್ಯಾಸರಾಜರ ಶಿಷ್ಯರಾದ ಶ್ರೀವಿಜಯೀಂದ್ರತೀರ್ಥರು 'ಶ್ರೀಪಾದರಾಜಾಷ್ಟಕ'ವೊಂದನ್ನು ರಚಿಸಿದ್ದಾರೆ.

ಭಾವೀಸಮೀರ ಶ್ರೀವಾದಿರಾಜರು ಪಠಿಸುವವರಿಗೆ ಸಕಲೇಷ್ಟಸಿದ್ಧಿಪ್ರದವಾದ 'ಶ್ರೀಪಾದರಾಜಸ್ತುತಿ'ಯೊಂದನ್ನು ರಚಿಸಿದ್ದಾರೆ.

"ವೇದಾಂತಾಭ್ಧಿವಿಹರಣನಿಪುಣವಿದ್ವತ್ತಿಮಿಂಗಲ" ಎಂದು ಖ್ಯಾತನಾಮರಾದ ಶ್ರೀಪದ್ಮನಾಭತೀರ್ಥರ ದಿವ್ಯವ್ಯಕ್ತಿತ್ವದ ಹಣತೆಯಂತೆ ಬೆಳಗಿದವರು ಶ್ರೀಲಕ್ಷ್ಮೀನಾರಾಯಣತೀರ್ಥರು.ಈ ರೀತಿಯಾಗಿ ಪರಮಶ್ರೇಷ್ಠ ರೀತಿಯಲ್ಲಿ ಸಂನ್ಯಾಸಜೀವನ ಮಾಡಿದ ಶ್ರೀಪಾದರಾಜರ ಮಹಿಮೆಯನ್ನು ಪದಗಳಲ್ಲಿ ವರ್ಣಿಸುವದು ಕಷ್ಟಸಾಧ್ಯ.

ಶ್ರೀವ್ಯಾಸತೀರ್ಥರು ಹೇಳಿದಂತೆ "ಮಹಿಮೆ ಸಾಲದೇ ಮಹಿಮೆ ಸಾಲದೇ ಅಹಿಶಯನನ ಒಲುಮೆಯಿಂದ ಮಹಿಮೆಯೊಳೆಮ್ಮ ಶ್ರೀಪಾದರಾಜರ", ಅವರ ಮಹಿಮಾತಿಶಯಗಳನ್ನು ವರ್ಣಿಸಲು ಶ್ರೀವ್ಯಾಸರಾಜರೇ ಸಮರ್ಥರು!

ಪದವಾಕ್ಯಪ್ರಮಾಣಾಬ್ಧಿವಿಕ್ರೀಡನವಿಶಾರದಾನ್|
ಲಕ್ಷ್ಮೀನಾರಾಯಣಮುನೀನ್ ವಂದೇ ವಿದ್ಯಾಗುರೂನ್ಮಮ||

ಶ್ರೀಕೃಷ್ಣಾರ್ಪಣಮಸ್ತು. 

ಲೇಖನ: ಸಮೀರ ಜೋಷಿ

No comments:

Post a Comment

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...