ಶ್ರೀರಾಘವೇಂದ್ರವಿಜಯ ಉಲ್ಲೇಖಿಸುವ ಶ್ರೀರಾಘವೇಂದ್ರತೀರ್ಥರ ಪಟ್ಟಾಭಿಷೇಕ.
ವೇದಾಂತೇತಿಹಾಸದಲ್ಲಿ ಶ್ರೀರಾಘವೇಂದ್ರಗುರುಸಾರ್ವಭೌಮರ ಸ್ಥಾನದ ಪರಿಚಯವನ್ನು ಪ್ರಯಾಸದಿಂದ ತಿಳಿಯುವ ಅಗತ್ಯ ಸರ್ವಥಾ ಇಲ್ಲ, ಕಾರಣ ಅದು ಸರ್ವಜನನಿತವಾದ ವಿಷಯ. ಶ್ರೀಪದ್ಮನಾಭತೀರ್ಥರು, ಶ್ರೀಮಟ್ಟೀಕಾಕೃತ್ಪಾದರು, ಶ್ರೀವಿಬುಧೇಂದ್ರ-ಜಿತಾಮಿತ್ರರು, ಶ್ರೀಸುರೇಂದ್ರರು, ಶ್ರೀವಿಜಯೀಂದ್ರರು, ಶ್ರೀಸುಧೀಂದ್ರ-ಶ್ರೀರಾಘವೇಂದ್ರರು, ಶ್ರೀಸುಮತೀಂದ್ರ-ಶ್ರೀವಾದೀಂದ್ರರು, ಶ್ರೀವಸುಧೇಂದ್ರ-ಶ್ರೀವರದೇಂದ್ರ-ಶ್ರೀಧೀರೇಂದ್ರರು ಹೀಗೆ ಮಹೋನ್ನತ ಯತಿಪರಂಪರೆಯ ಆ ವಿದ್ಯಾಪ್ರಭಾವ, ಗ್ರಂಥನಿರ್ಮಾಣ, ವಾದಿ-ದಿಗ್ವಿಜಯಗಳು ಮಾತ್ರವಲ್ಲದೇ ಅವರು ಸಮಾಜದ ಕೊನೆಯ ವ್ಯಕ್ತಿಯ ಮೇಲೂ ಮಾಡಿದ ಪರಮಾನುಗ್ರಹ ಪ್ರತ್ಯಕ್ಷಸಿದ್ಧ. ಹೀಗೆ ಶ್ರೀಮನ್ಮಧ್ವಾಚಾರ್ಯರಿಂದ ಪ್ರವಹಿಸಿದ ವಿಶಿಷ್ಟವಾದ ಪರಂಪರೆಯಲ್ಲಿ ಉದಯಿಸಿದ ಒಬ್ಬೊಬ್ಬ ಯತಿಗಳೂ ಕೂಡ ಶ್ರೀಮೂಲರಾಮನಿಗರ್ಪಿಸಿದ ನಕ್ಷತ್ರಮಾಲೆಯ ಹೊಳೆಯುವ ನಕ್ಷತ್ರಗಳು.
ಅಂತಹ ಶ್ರೇಷ್ಠ ಗುರುಪರಂಪರೆಯಲ್ಲಿ ಬಂದ ಪೂರ್ಣಚಂದ್ರಮರೇ ಶ್ರೀರಾಘವೇಂದ್ರಗುರುಸಾರ್ವಭೌಮರು. ಪ್ರಹ್ಲಾದನ ಅವತಾರಭೂತರಾದ ಶ್ರೀರಾಯರ ಚರಿತ್ರೆಯನ್ನು ದಾಖಲಿಸುವ ಮಹತ್ವಪೂರ್ಣ ಕೃತಿ ಶ್ರೀರಾಘವೇಂದ್ರವಿಜಯ. ಐತಿಹಾಸಿಕವಾಗಿಯೂ ಪರಮಪ್ರಮಾಣವೆನಿಸಿದ, ಸ್ವತಃ ಶ್ರೀರಾಘವೇಂದ್ರಗುರುಸಾರ್ವಭೌಮರೇ ಪರಿಶೀಲಿಸಿದ ಐತಿಹಾಸಿಕ ದಾಖಲೆ ಇದಾಗಿದೆ ಎನ್ನುವುದನ್ನು ಮರೆಯುವಂತಿಲ್ಲ. ಪ್ರಾಥಮಿಕವಾಗಿ ಕಾವ್ಯ-ಸಾಹಿತ್ಯ-ವ್ಯಾಕರಣಾದಿ ಪ್ರಾಥಮಿಕ ಪಾಠವನ್ನು ರಾಯರಿಗೆ ಹೇಳಿದ ಗುರುಗಳಾದ ಶ್ರೀಲಕ್ಷ್ಮೀನರಸಿಂಹಾಚಾರ್ಯರ ಹಾಗೂ ರಾಯರ ಪೂರ್ವಾಶ್ರಮ ಅಕ್ಕಂದಿರಾದ ವೇಂಕಟಾಂಬಾ ಅಮ್ಮನವರ ಸುಪುತ್ರರಾದ ಶ್ರೀನಾರಾಯಣಾಚಾರ್ಯರೇ ಈ ಗ್ರಂಥದ ಕರ್ತೃಗಳು. ಶ್ರೀನಾರಾಯಣಾಚಾರ್ಯರು ತಮ್ಮ ಸೋದರಮಾವಂದಿರಾದ ಶ್ರೀರಾಘವೇಂದ್ರತೀರ್ಥರನ್ನು ತಮ್ಮ ಬಾಲ್ಯದಿಂದಲೇ ಹತ್ತಿರದಿಂದ ನೋಡಿಕೊಂಡು ಬೆಳೆದವರು. ಅವರ ವ್ಯಕ್ತಿತ್ವವನ್ನು ಪ್ರತ್ಯಕ್ಷವಾಗಿ ನೋಡಿ ಹಿರಿ ಹಿರಿ ಹಿಗ್ಗಿದವರು. ಪ್ರಾಯಃ ಶ್ರೀರಾಘವೇಂದ್ರಗುರುಗಳ ಜೀವನದಲ್ಲಿನ ಎಲ್ಲ ಘಟನೆಗಳಿಗೆ ಪ್ರತ್ಯಕ್ಷದರ್ಶಿಗಳಾಗುರುವವರು.
ಇಂತಹ ವಿದ್ವಾಂಸರಾದ ಶ್ರೇಷ್ಠಕರ್ತೃಗಳಿಂದ ರಚಿತವಾದ, ಸಕಲ ಸಲ್ಲಕ್ಷಣಗಳಿಂದ ಉಪೇತವಾದ ಈ ಮಹಾಕಾವ್ಯವು ಸಜ್ಜನರಿಗೆ ಅತ್ಯಂತ ಗ್ರಾಹ್ಯವಾಗಿದೆ. ಶೈಲಿ, ಪ್ರೌಢಿಮೆ, ವಿಷಯನಿರೂಪಣೆ, ಕಾವ್ಯಲಕ್ಷಣಗಳಲ್ಲಿ ಇದು ಶ್ರೀಸುಮಧ್ವವಿಜಯವನ್ನೇ ಹೋಲುತ್ತದೆ. ಶ್ರೀಸುಮಧ್ವವಿಜಯದ ಕರ್ತೃಗಳಾದ ಶ್ರೀನಾರಾಯಣಪಂಡಿತಾಚಾರ್ಯರೇ ಈ ಮಹಾಕಾವ್ಯರಚನೆಗೆ ಸ್ಫೂರ್ತಿ ಎನ್ನುವುದು ಎಂದು ಶ್ರೀರಾಘವೇಂದ್ರವಿಜಯ ಕರ್ತೃಗಳಾದ ನಾರಾಯಣಾಚಾರ್ಯರ ಮಾತುಗಳಿಂದಲೇ ತಿಳಿಯಬಹುದು.ಅಂತೆಯೇ ಶ್ರೀಸುಮಧ್ವವಿಜಯದ ಪಾರಾಯಣ-ಪ್ರವಚನಗಳು ಸಕಲ ಐಹಿಕ-ಪಾರಮಾರ್ಥಿಕ ಸಂಪತ್ತನ್ನು ಕರುಣಿಸುವಂತೆ, ಶ್ರೀರಾಘವೇಂದ್ರವಿಜಯವೂ ಈ ವಿಷಯದಲ್ಲಿ ಸಮರ್ಥವಾಗಿದೆ ಎನ್ನುವುದರಲ್ಲಿ ಲೇಶಸಂಶಯವೂ ಇಲ್ಲ.
ಈ ರೀತಿ ಶ್ರೀರಾಘವೇಂದ್ರ ಗುರುಗಳ ಪೂರ್ವಾಶ್ರಮಜೀವನ, ಯತ್ಯಾಶ್ರಮಜೀವನವನ್ನು ಕಣ್ಣಾರೆ ಕಂಡ ಶ್ರೀನಾರಾಯಣಾಚಾರ್ಯರು, ಶ್ರೀಸುಧೀಂದ್ರತೀರ್ಥರು ಶ್ರೀವೇಂಕಾಟಾರ್ಯರನ್ನು ವೇದಾಂತಸಾಮ್ರಾಜ್ಯಾಧಿಪತಿಗಳನ್ನಾಗಿ ಪಟ್ಟಾಭಿಷಿಕ್ತರನ್ನಾಗಿ ಮಾಡಿದ ಪರಮಾದ್ಭುತ ಪ್ರಸಂಗವನ್ನು ಖುದ್ದಾಗಿ ಕಣ್ತುಂಬಿಕೊಂಡವರು. ತಾವು ಪ್ರತ್ಯಕ್ಷ ಕಂಡ ಶ್ರೀರಾಯರ ಪಟ್ಟಾಭಿಷೇಕಕ್ಕೂ ಪೂರ್ವದಲ್ಲಿನ ಕೆಲವು ಪ್ರಸಂಗಗಳನ್ನು , ಪಟ್ಟಾಭಿಷೇಕದ ಸಂದರ್ಭವನ್ನು ಸೊಗಸಾಗಿ ಶ್ರೀರಾಘವೇಂದ್ರವಿಜಯದಲ್ಲಿ ದಾಖಲಿಸಿದ್ದಾರೆ.
ಸಂಸ್ಥಾನಾಧಿಪತ್ಯ ವಹಿಸಿಕೊಳ್ಳುವಂತೆ ಶ್ರೀಸುಧೀಂದ್ರತೀರ್ಥರ ಇಚ್ಛೆ ಪಟ್ಟಾಗ ಪ್ರಿಯಶಿಷ್ಯರಾದ ವೇಂಕಟಾರ್ಯರು ಲೌಕಿಕ ಕಾರಣಗಳನ್ನು ಕೊಟ್ಟು ಅದನ್ನು ಬೇಡವೆಂದರಂತೆ, "ಕ್ವಾಹಂ ನ್ಯಾಸಃ ? ಕುತ್ರ ವಾ ವೇದವಿದ್ಯಾ ? ಸಮ್ರಾಜ್ಯಂ ತೇ ಕ್ವಾಪಿ ವಿದ್ಯಾsಹಮಾರ್ಯ ? " - ಪೂಜ್ಯರೇ, ನಾನು ಎಲ್ಲಿ ? ಸಂನ್ಯಾಸವೆಲ್ಲಿ ? ಈ ವೇದಾಂತವಿದ್ಯಾ ಸಾಮ್ರಾಜ್ಯವಾದರೂ ಎಲ್ಲಿ ? ನಿಮ್ಮ ವಿದ್ಯಾಪ್ರಭಾವ ಎಲ್ಲಿ ? ಇವೆಲ್ಲದರ ಮುಂದೆ ನಾನು ಸರ್ವಾಥಾ ಯೋಗ್ಯತೆ ಇಲ್ಲದವ ಎಂದರಂತೆ. ಪರಮಾತ್ಮನಲ್ಲಿ ಸ್ಥಿರವಾದ ಮನೋನಿಷ್ಠೆ, ಇಂದ್ರಿಯನಿಗ್ರಹ, ನಿರ್ವಿಕಾರ ಮನಸ್ಸು, ಧಾರಾಳವಾಗಿ ಕೊಡುವ ಸ್ವಾಭಾವ ಇವೆಲ್ಲ ನೌಕೆಗಳು ಇದ್ದಂತೆ, ಆ ನೌಕೆಗೆ ನಮ್ಮ ಅನುಗ್ರಹವು ದ್ವಜಸ್ಥಂಭದಂತೆ ಇದೆ, ಇಷ್ಟಿರುವಾಗ ನಿಮಗೆ ಯಾವುದು ತಾನೇ ಕಷ್ಟವಾದೀತು ? ಎಂದು ಶ್ರೀಸುಧೀಂದ್ರರು ಅನೇಕ ಪ್ರಕಾರವಾಗಿ ಸಂಸಾರದಲ್ಲಿ ವಿರಕ್ತಿಯನ್ನು ದಯಪಾಲಿಸುವ ಉಪದೇಶಗಳನ್ನು ಮಾಡುತ್ತಾರೆ.
ಇಂತಹ ಪೂರ್ಣಾನುಗ್ರಹ ಮಾಡಿ ತಮ್ಮ ಸಂಪೂರ್ಣ ಅನುಗ್ರಹಾಭಯಗಳನ್ನು ನೀಡಿದ ಶ್ರೀಸುಧೀಂದ್ರತೀರ್ಥರು ಅವರ ಮನವೊಲಿಸಲು ಪ್ರಯತ್ನಿಸುವ ಪರಿಯನ್ನು ಅದ್ಭುತವಾಗಿ ಶ್ರೀರಾಘವೇಂದ್ರವಿಜಯ ವರ್ಣಿಸುತ್ತದೆ.
ವಿದ್ಯಾದೇವಿಯ ದರ್ಶನ:
ಆನಂದತೀರ್ಥಪ್ರಿಯಾ ಜಾತಾ - ನಾನು ಆನಂದತೀರ್ಥರಿಗೆ ಅತ್ಯಂತಪ್ರಿಯಳಾದವಳು ಎಂದು ವಿದ್ಯಾದೇವಿ ತನ್ನನ್ನು ತಾನು ಪರಿಚಯಿಸಿಕೊಂಡು, ಹೇ ವಿದ್ವದಾದ್ಯ! - ವಿದ್ವಾಂಸರಲ್ಲಿ ಅಗ್ರಗಣ್ಯನಾದವನೇ ಎಂದು ರಾಯರನ್ನು ಉದ್ದೇಶಿಸಿ “ಮಾಂ ವಿದ್ಯಾಲಕ್ಷ್ಮೀಂ ಜಾನೀಹಿ” - ನನ್ನನ್ನು ವಿದ್ಯಾಲಕ್ಷ್ಮೀಯಾದ ಸರಸ್ವತಿ ಎಂದು ತಿಳಿ, ಎಂದು ಹೇಳಿದಳಂತೆ. ಸಾಕ್ಷಾತ್ ಸರಸ್ವತಿ ದೇವಿಯೇ ವಿದ್ವದಾದ್ಯ ಎಂದು ಕರೆಯುತ್ತಿದ್ದಾಳೆ, "ವೇಂಕಟಾರ್ಯ!, ವಿದ್ವತ್ಸಂಘೇ ತ್ವದನ್ಯಃ ತದ್ವ್ಯಾಖ್ಯಾನೇ ಲಬ್ಧವರ್ಣಃ ನಾಸ್ತೇ, ಭಾವೀ ಚ ನೈವ" - ಹೇ ವೆಂಕಟಾರ್ಯನೇ, ವಿದ್ವಾಂಸರ ಸಮೂಹದಲ್ಲಿ ನಿನ್ನ ಹೊರತಾದ ಬೇರೊಬ್ಬನು ಆ ಸುಧಾ, ಚಂದ್ರಿಕಾದಿಗ್ರಂಥಗಳ ವ್ಯಾಖ್ಯಾನ ವಿಷಯದಲ್ಲಿ ಕುಶಲನಾದವನು ಇಲ್ಲ, ಮುಂದೇಯೂ ಹುಟ್ಟಲೂ ಸಾಧ್ಯವಿಲ್ಲ ಎಂದು ಮುಕ್ತಕಂಠದಿಂದ ವೇಂಕಟಾರ್ಯರನ್ನು ಉದ್ದೇಶಿಸಿ ಅವರು ಸಂನ್ಯಾಸದಲ್ಲಿ ಪ್ರವೃತ್ತರಾಗುವಂತೆ ಮಾಡುತ್ತಾಳೆ ಎಂದರೇ ಶ್ರೀವೇಂಕಟಾರ್ಯರ ಮಹಿಮೆ ಎಂತಹದ್ದು. ಅವರ ಮೇಲೆ ಸರಸ್ವತಿದೇವಿಯರ ಕಾರುಣ್ಯ ಎಂತಹದ್ದು.
ಶ್ರೀಮೂಲರಾಮದೇವರ ಪೂಜೆಗಾಗಿಯೇ ಸಂನ್ಯಾಸ ಸ್ವೀಕರಿಸುವಂತೆ ವಿದ್ಯಾದೇವಿಯ ಆದೇಶ:
ಶ್ರೀರಾಮಾರ್ಚಾ ಪೂಜ್ಯತೇ ಯೇನ ತಸ್ಮಿನ್
ವಾಸಂ ಯನ್ಮೇsಕಲ್ಪಯದ್ ವ್ಯಾಸದೇವಃ |
ಕರ್ಮದೀಂದ್ರೈರೇವ ಪೂಜಾsಪಿ ಕ್ಲೃಪ್ತಾ
ತಸ್ಮಾತ್ ಸಾsಹಂ ತೇಷು ನಿತ್ಯಂ ವಸಾಮಿ ||
ಶ್ರೀಮೂಲರಾಮಪ್ರತಿಮೆ ಇರುವುದೇ ವಿದ್ಯಾವೈಭವಕ್ಕಾಗಿ. ಶ್ರೀಮೂಲರಾಮಪ್ರತಿಮೆ ಎಲ್ಲಿರುತ್ತದೆಯೋ ಅಲ್ಲಿಯೇ ಇರಬೇಕು ಎಂದು ವೇದವ್ಯಾಸರೇ ನನಗೆ ನಿಯಮ ಮಾಡಿದ್ದಾರೆ. ಆದ್ದರಿಂದ ಕೇವಲ ಸಂನ್ಯಾಸಿಗಳಷ್ಟೇ ಅರ್ಚನೆ ಮಾಡುವ ಶ್ರೀಮೂಲರಾಮನಿರುವಲ್ಲಿ ತಾನು ಯಾವಾಗಲೂ ಸನ್ನಿಹಿತಳಾಗಿರುತ್ತೇನೆ, ಆದರಿಂದ ನೀನು ಸನ್ಯಾಸಿಯಾಗಲೇ ಬೇಕು ಎಂದು ವಿದ್ಯಾದೇವಿಯು ಶ್ರೀವೇಂಕಾಟಾರ್ಯರಿಗೆ ಆದೇಶಿಸುತ್ತಾಳೆ.
ಸಂನ್ಯಾಸಸ್ವೀಕರಿಸದಿದ್ದಲ್ಲಿ ಆಗುವ ಹಾನಿಯನ್ನು ತಾನೇ ಹೇಳಿದ ವಾಗ್ದೇವಿ:
ತಸ್ಮಾದಂಗೀಕೃತ್ಯ ಕರ್ಮಂದಿಭಾವಮ್
ರಾಜಾ ವಿದ್ಯಾರಾಜ್ಯಲಕ್ಷ್ಮ್ಯಾಭವ ತ್ವಂ |
ನೋ ಚೇಲ್ಲುಂಪೇನ್ನಿತ್ಯವಾಚಾಂ ವಿಚಾರೈಃ
ಸಾಕಂ ಲೋಕೆ ವೈಷ್ಣವಃ ಸಂಪ್ರದಾಯಃ ||
ನೀನು ಸನ್ಯಾಸವನ್ನು ಒಪ್ಪಿ ವೇದಾಂತವಿದ್ಯಾ ರಾಜ್ಯಲಕ್ಷ್ಮಿಗೆ ರಾಜನಾಗು, ಇಲ್ಲದಿದ್ದರೇ ಮಹಾ ಅನರ್ಥವಾಗುವದು. ಲೋಕದಲ್ಲಿ ವೇದಗಳ ವಿಮರ್ಶೆಗಳ ಜೊತೆಗೆ ವೈಷ್ಣವ ಸಂಪ್ರದಾಯವೇ ನಾಶ ಹೊಂದೀತು, ವೇದಘೋಷದಿಂದಿರುವ ಶೋಭಿಸುತ್ತಿರುವ ಮಠಗಳು, ನರಿಗಳು ತುಂಬಿರುವ ಬಂದೀಖಾನೆಯಂತಾಗುತ್ತವೆ ಎಂದು ನೇರ ಮಾತುಗಳಲ್ಲಿ ವಿದ್ಯಾದೇವಿ ಹೇಳಿದ್ದನ್ನು ರಾಘವೇಂದ್ರವಿಜಯ ದಾಖಲಿಸುತ್ತದೆ.
ಈ ಎಲ್ಲ ಘಟನೆಗಳಿಂದ ಮನಃ ಪರಿವರ್ತಿಸಿದ ವೇಂಕಟಾರ್ಯರು ನಮ್ಮೆಲ್ಲರನು ಉದ್ಧಾರ ಮಾಡಲು ಸಂನ್ಯಾಸಾಶ್ರಮವನ್ನು ತೆಗೆದುಕೊಳ್ಳಲು ಪ್ರವೃತ್ತರಗುವ ಸುಂದರ ಹಾಗೂ ವಿಸ್ತಾರವಾದ ವರ್ಣನೆ ಶ್ರೀರಾಘವೇಂದ್ರವಿಜಯದಲ್ಲಿದೆ.
ಪಟ್ಟಾಭಿಷೇಕ ಮಹೋತ್ಸವ:
ಶ್ರೀಸುಧೀಂದ್ರತೀರ್ಥರ ಇಚ್ಛೆಯಂತೆ ಶ್ರೀಸುಧೀಂದ್ರತೀರ್ಥರಿಂದಲೂ ಹಾಗೂ ಸಾಕ್ಷಾತ್ ವಿದ್ಯಾದೇವಿಯಿಂದಲೂ ಉಪದೇಶವನ್ನು ಪಡೆದ ಶ್ರೀವೆಂಕಟಾರ್ಯರು ಮಗನ (ಶ್ರೀಲಕ್ಷ್ಮೀನಾರಾಯಣಾಚಾರ್ಯರು) ಉಪನಯನವನ್ನು ಮಾಡಿ, ಕುಂಭಕೋಣನಗರದಿಂದ ತಂಜಾವೂರಿಗೆ ಸಂನ್ಯಾಸವನ್ನು ಸ್ವೀಕಾರ ಮಾಡಲು ಉದ್ಯುಕ್ತರಾಗುತ್ತಾರೆ. (ರಾಯರ ಪೂರ್ವಾಶ್ರಮ ಪುತ್ರರೇ ಶ್ರೀಲಕ್ಷ್ಮೀನಾರಾಯಣಾಚಾರ್ಯರು. ಋಗ್ಭಾಷ್ಯಟೀಕಾಟಿಪ್ಪಣಿ, ರಾಮಾಚಾರಿತ್ರ್ಯಮಂಜರಿ, ಕ್ರಷ್ಣಾಚಾರಿತ್ರ್ಯಮಂಜರಿಗಳಿಗೆ ವ್ಯಾಖ್ಯಾನ, ಮಹಾಭಾರತಭಾವಸಂಗ್ರಹವ್ಯಾಖ್ಯಾನ ಇತ್ಯಾದಿ ಗ್ರಂಥಗಳನ್ನು ಬರೆದು ಪ್ರಸಿದ್ಧರಾದವರು. ರಾಯರ ಪೂರ್ಣಾನುಗ್ರಹಪಾತ್ರರು.)
ಸಂನ್ಯಾಸಕ್ಕೆ ಬೇಕಾದ ಎಲ್ಲ ಪೂರ್ವವಿಧಿಗಳನ್ನು ಪೂರೈಸಿ ವಿರಜಾಹೋಮಾದಿಗಳನ್ನು ಮಾಡಿ ಅತ್ಯಂತ ಶ್ರೇಷ್ಠರಾದ ಬ್ರಾಹ್ಮಣರಿಂದ ವಿಮರ್ಶಿಸಲ್ಪಟ್ಟ ಲಗ್ನದಲ್ಲಿ "ಅಸ್ವಪ್ನದುರಾಪವೈಭವನಿಧಿ"ಗಳಾದ ಶ್ರೀಸುಧೀಂದ್ರತೀರ್ಥರು (ಅಸ್ವಪ್ನ - ದೇವತೆಗಳಿಂದಲೂ ದುರಾಪ- ಹೊಂದಲಸಾಧ್ಯವಾದ ವೈಭವನಿಧಿಃ - ಮಾಹಾತ್ಮ್ಯವನ್ನು ಹೊಂದಿದವರು ಶ್ರೀಸುಧೀಂದ್ರತೀರ್ಥರು - ಇಂತಹವರು ಶ್ರೀರಾಘವೇಂದ್ರರ ಗುರುಗಳು).
ಅಂತಹ ಶ್ರೀಸುಧೀಂದ್ರತೀರ್ಥರು ಪ್ರಣವೋಪದೇಶವನ್ನು ಮಾಡಿ, ಈ ಹಿಂದೆಯೇ ಶ್ರೀಮೂಲರಾಮನೇ ಸ್ವಪ್ನದಲ್ಲಿ ನೀಡಿದ್ದ ನಾಮವನ್ನೇ ಆಶ್ರಮನಾಮವನ್ನಾಗಿ ಕೊಟ್ಟ ವರ್ಣನೆ ಕಣ್ಣಿಗೆ ಕಟ್ಟುವಂತೆ ರಾಘವೇಂದ್ರವಿಜಯ ದಾಖಲಿಸುತ್ತದೆ.
ಶ್ರೀಸುಧೀಂದ್ರತೀರ್ಥರು ಮನಃ ತುಂಬಿ ಮಾಡಿದ ಆಶೀರ್ವಚನ:
ಶ್ರೀಸುರೇಂದ್ರವದಯನ್ ತಪಸ್ಯಯಾ
ಶ್ರೀಜಯೀಂದ್ರ ಇವ ಕೀರ್ತಿ ಸಂಪದಾ |
ವಿಶ್ರುತೋsಹಮಿವ ವಾದಸಂಗರೇ
ರಾಘವೇಂದ್ರಯತಿರಾಟ್ ಸಮೇಧತಾಮ್ ||
ಶ್ರೀಮದಾಚಾರ್ಯರ ಸತ್ಪರಂಪರೆಯಲ್ಲಿ ಬಂದ ಉಪವಾಸದಿಂದ ಮೂರುಬಾರಿ ಭೂಪ್ರದಕ್ಷಿಣೆಯನ್ನು ಮಾಡಿದ, ಮೂಲರಘುಪತಿಪೂಜಾಧುರಂಧರರಾದ, ತಪಸ್ಸಿಗೆ ಹೆಸರಾದ ಶ್ರೀಸುರೇಂದ್ರತೀರ್ಥರಂತೆ ಶ್ರೇಷ್ಠರೀತಿಯಲ್ಲಿ ಸಂನ್ಯಾಸಧರ್ಮದ ಆಚರಣೆ , ತಪಸ್ಸು ನಿಮ್ಮದಾಗಲೀ, ಚತುರಧಿಕಶತಗ್ರಂಥಗಳನ್ನು ಕೊಟ್ಟು, ಚಾತುರ್ಯದಿಂದಲೇ ಮಾಹಾನ್ ಕೀರ್ತಿಭಾಜನರಾದ ಶ್ರೀವಿಜಯೀಂದ್ರಗುರುಸಾರ್ವಭೌಮರ ಕೀರ್ತಿ ನಿಮ್ಮದಾಗಲೀ, ನಮ್ಮಂತಹ (ತ್ರಿಲೋಕದಲ್ಲಿಯೂ ಶ್ರೀಸುಧೀಂದ್ರತೀರ್ಥರಂತಹ ಜಗದ್ಗುರುಗಳು ಮತ್ತೊಬ್ಬರಿಲ್ಲ ಎಂದು ಪರಮತೀಯರಿಂದಲೂ ಮಾನ್ಯರಾದ ಶ್ರೀಸುಧೀಂದ್ರತೀರ್ಥರಂತಹ) ವಾದಸಂಗರಚಾತುರ್ಯ ನಿಮ್ಮದಾಗಲೀ, ಇಂತಹ ರಾಘವೇಂದ್ರಯಾತಿರಾಜರು ಅಭಿವೃದ್ಧಿ ಹೊಂದಲಿ ಎಂದು ಆಶೀರ್ವದಿಸಿದರಂತೆ.
ಇದಲ್ಲವೇ ವಾಕ್ಸಿದ್ಧಿ, ತಪಸ್ಸು ? ಅವರು ಮಾಡಿದ ಆಶೀರ್ವಾದ ಎಷ್ಟರಮಟ್ಟಿಗೆ ಸತ್ಯವಾಯಿತು ಎಂದು ನೆನೆದರೇ ಮೈ ರೋಮಾಂಚನವಾಗುತ್ತದೆ. ಅವರು ಮಾಡಿದ ಆಶೀರ್ವಚನಕ್ಕೆ ಒಪ್ಪುವಂತೆ ಶ್ರೇಷ್ಠಕರ್ಮಂದಿಗಳಾಗಿ ಮೆರೆದವರು ಶ್ರೀಗುರುಸಾರ್ವಭೌಮರು.
ಪಟ್ಟಾಭಿಷೇಕದ ವೈಭವ:
ಮಂತ್ರೈಃ ಪೂತೈರ್ವಾರಿಜಾದ್ಯೈಃ ಪ್ರಸೂನೈ
ರ್ಮುಕ್ತಾಮುಖ್ಯೈ ರತ್ನಜಾಲೈರುಪೇತೈಃ |
ವಾರ್ಭಿಃ ಶಂಖಾಪೂರಿತೈಃ ಸೋsಭಿಷಿಚ್ಯ
ಪ್ರಾಜ್ಞಂ ವಿದ್ಯಾರಾಜ್ಯರಾಜಂ ವಿತೇನೇ ||
ಆ ಜ್ಞಾನಿಗಳಾದ ಶ್ರೀಸುಧೀಂದ್ರರು ಪ್ರಾಜ್ಞರಾದ ಶ್ರೀರಾಯರನ್ನು ಕಮಲವೇ ಮೊದಲಾದ ಹೂವುಗಳಿಂದ ಮುತ್ತು ಮೊದಲಾದ ರತ್ನಗಳ ಸಮೂಹಗಳಿಂದ ಕೂಡಿರುವ ಪವಿತ್ರವಾದ ಶಂಖದಲ್ಲಿ ತುಂಬಿಸಿದ ನೀರುಗಳಿಂದ ಅಭಿಷೇಕಿಸಿ ವೇದಾಂತಸಿಂಹಾಸನಾಧೀಶ್ವರರನ್ನಾಗಿ ಮಾಡಿದರು.
ಮಹಾಸಂಸ್ಥಾನದ ಪ್ರತಿಮಾದಿ ರಾಜಚಿಹ್ನಾದಿಗಳ ಪ್ರದಾನ:
ಶ್ರೀರಾಮಾರ್ಚಾಂ ವ್ಯಾಸದೇವೋಪಲೌ ದ್ವೌ
ಶಾಸ್ತ್ರಾಘಾನಾಂ ಪುಸ್ತಕಂ ಚಾಮರೇ ಚ |
ಶ್ವೇತಚ್ಛತ್ರಂ ಸ್ವರ್ಣಯಾನಂ ಸವಾದ್ಯಂ
ಪ್ರಾದಾದಸ್ಮೈ ರಾಜಚಿಹ್ನಂ ಸ ಸರ್ವಮ್ ||
-
ಶ್ರೀಸುಧೀಂದ್ರತೀರ್ಥರು, ಶ್ರೀಮದಾಚಾರ್ಯರಿಂದ ಪರಂಪರಾಪ್ರಾಪ್ತವಾಗಿ ಬಂದ, ಶ್ರೀಮೂಲರಾಮಪ್ರತಿಮೆ, ಎರೆಡು ವ್ಯಾಸಮುಷ್ಟಿಗಳು ಹಾಗೂ ಎರೆಡು ಚಾಮರಗಳು, ಶ್ವೇತಛತ್ರವನ್ನೂ, ಚಿನ್ನದ ಪಲ್ಲಕ್ಕಿಯನ್ನು, ಆನೆಯ ಅಂಬಾರಿಯ ಚಿನ್ನದ ಮಂಟಪವನ್ನು, ಶಂಖ, ಧವಳ, ಮದ್ದಳೆ, ಭೇರಿ,ಕಹಳೆ ಮುಂತಾದ ಮಂಗಳ ವಾದ್ಯಗಳನ್ನೆಲ್ಲಾ, ಹಾಗೂ ರಾಜಚಿಹ್ನೆಗಳನ್ನು,. ಚಿನ್ನದ ಕೋಲು, ತಾಳ, ಸ್ತುತಿಪಾಠಕರು ಹಗಲು ದೀವಟಿಗೆ ಇತ್ಯಾದಿಯಾಗಿ ರಾಜಾಧಿರಾಜರಿಂದ ಸಂಸ್ಥಾನಕ್ಕೆ ದೊರೆತ ಎಲ್ಲ ರಾಜಚಿಹ್ನೆಗಳನ್ನು ತಮ್ಮ ಶಿಷ್ಯರಾದ ಶ್ರೀರಾಘವೇಂದ್ರತೀರ್ಥರಿಗೆ ದಯಪಾಲಿಸಿದರು.
ಈ ರೀತಿ ಪಟ್ಟಾಭಿಷಿಕ್ತರಾದ "ರಘುಪತಿಚರಣಾಸೇವನಾಸಕ್ತಚಿತ್ತ" - ಶ್ರೀಮೂಲರಾಮದೇವರ ಪಾದಗಳ ಭಕ್ತಿಪೂರ್ವಕ ಸೇವೆಯಲ್ಲಿಯೇ ಆಸಕ್ತಚಿತ್ತರಾದ, ಶಾಸ್ತ್ರದಲ್ಲಿ ಕೋವಿದರಾದ, ಗುಣಗಣಜಲಧಿಗಳಾದ ಶ್ರೀರಾಘವೇಂದ್ರತೀರ್ಥರಲ್ಲಿ ಆ ವಿದ್ಯಾದೇವಿ ಅಂತ್ಯಂತ ಸಂತೋಷದಿಂದ ಆಶ್ರಯಿಸಿದಳು.
ಈ ರೀತಿ ಶ್ರೀರಾಘವೇಂದ್ರಗುರುಗಳ ಪಟ್ಟಾಭಿಷೇಕದ ಪ್ರತಿಯೊಂದು ಪ್ರಸಂಗಗಳನ್ನು ಅದ್ಭುತವಾಗಿ ವರ್ಣಿಸಿದ, ಶ್ರೀರಾಘವೇಂದ್ರಗುರುಗಳ ಚರಿತೆ ಎಂಬ ಸಾಗರದಲ್ಲಿ ಈಸುವ ಮಹಾ ಭಾಗ್ಯವನ್ನು ಶ್ರೀರಾಘವೇಂದ್ರ ವಿಜಯದಿಂದ ನಮಗೆಲ್ಲ ಕರುಣಿಸಿದಕ್ಕಾಗಿ ಶ್ರೀನಾರಾಯಣಾಚಾರ್ಯರ ಪಾದಕ್ಕೆರಗಿ, ಅಪ್ಪಣಾಚಾರ್ಯರ ಮಾತಿನಂತೆ "ತವ ಸಂಕೀರ್ತನಂ" ವೇದ ಶಾಸ್ತ್ರಾರ್ಥ ಜ್ಞಾನಸಿದ್ಧಯೇ ಎಂಬ ಮಾತಿನಂತೆ ನಮಗೆಲ್ಲರಿಗೂ ಜ್ಞಾನಭಕ್ತಿವೈರಾಗ್ಯಗಳನ್ನು ರಾಯರು ಕರುಣಿಸಲಿ ಎಂದು ಪ್ರಾರ್ಥಿಸುತ್ತಾ .. ಶ್ರೀಕೃಷ್ಣಾರ್ಪಣಮಸ್ತು.
- ಸಮೀರ ಜೋಶಿ
No comments:
Post a Comment