Monday, 17 October 2022

"ವಸುಧಾತಲವಿಖ್ಯಾತ ಶ್ರೀವಸುಧೇಂದ್ರತೀರ್ಥರು"



    ಶ್ರೀಹಂಸನಾಮಕಪರಮಾತ್ಮನ, ಶ್ರೀಮಧ್ವ-ಪದ್ಮನಾಭ-ಶ್ರೀಜಯಾರ್ಯಾದಿ ಯತಿಗಳ ಸತ್ಪರಂಪರೆಯಲ್ಲಿ ಅವತರಿಸಿದ ಮಹಾತಪಸ್ವೀಗಳ ಸಾಲಿನಲ್ಲಿ ಅಗ್ರಗಣ್ಯರು ಶ್ರೀರಾಘವೇಂದ್ರಗುರುಸಾರ್ವಭೌಮರ ವಂಶೋದ್ಭವರಾದ ಶ್ರೀವಸುಧೇಂದ್ರತೀರ್ಥ ಶ್ರೀಪಾದಂಗಳವರು.  

    ಶ್ರೀರಾಘವೇಂದ್ರಗುರುಸಾರ್ವಭೌಮರ ಪೂರ್ವಾಶ್ರಮದ ಸದ್ವಂಶದಲ್ಲಿ, ಅವರ ಮರಿಮಕ್ಕಳಾಗಿ ಅವತರಿಸಿದವರೇ ಶ್ರೀವೇಣುಗೋಪಾಲಾಚಾರ್ಯರು. ಅವರು ಶ್ರೀವಾದೀಂದ್ರತೀರ್ಥರ ಪೂರ್ವಾಶ್ರಮ ತಮ್ಮಂದಿರೂ ಹೌದು. ಶ್ರೀವೇಣುಗೋಪಲಾಚಾರ್ಯರ ಜ್ಯೇಷ್ಠ ಮಕ್ಕಳೇ ಶ್ರೀಪುರುಷೋತ್ತಮಾಚಾರ್ಯರು. 


    ಶ್ರೀಪುರುಷೋತ್ತಮಾಚಾರ್ಯರೇ ಶ್ರೀವಾದೀಂದ್ರತೀರ್ಥರಿಂದ ಚತುರ್ಥಾಶ್ರಮ ಸ್ವೀಕರಿಸಿ "ಶ್ರೀವಸುಧೇಂದ್ರತೀರ್ಥ"ರಾದರು. ಅವರ ಅಪಾರ ಮಹಿಮೆ, ಅಪ್ರತಿಮ ಪಾಂಡಿತ್ಯ, ಮಹಾಸಂಸ್ಥಾನದ ಅಭಿವೃದ್ಧಿ, ಮಹೋನ್ನತವಾದ ವಿದ್ಯಾಪರೆಂಪರೆ,  ಗ್ರಂಥಕರ್ತರೆನಿಸುವ ಶಿಷ್ಯರ ನಿರ್ಮಾಣ, ಅಪಾರ ತಪಃ ಪ್ರಭಾವ, ವೈಭವದ ಶ್ರೀಮೂಲರಾಮಾರ್ಚನೆ, ಹರಿದಾಸಸಾಹಿತ್ಯದ ಪೋಷಣೆ ಶ್ರೀವಿಜಯದಾಸ, ಶ್ರೀಗೋಪಾಲದಾಸರು ಹಾಗೂ ಶ್ರೀಜಗನ್ನಾಥದಾಸರಿಗೆ ಅವರು ಮಾಡಿದ ಪರಮಾನುಗ್ರಹ ಹೀಗೆ ಹಲವು ರೀತಿಯಲ್ಲಿ ಶ್ರೀವಸುಧೇಂದ್ರತೀರ್ಥರ ಹೆಸರು ಚಿರಸ್ಥಾಯಿಯಾಗಿದೆ.



ಮಹಾಸಂಸ್ಥಾನವನ್ನು ಭದ್ರಪಡಿಸಿದ  ಮಹಾನುಭಾವರು:


ಶ್ರೀಗುರುಸಾರ್ವಭೌಮರ ಕಾಲದಲ್ಲಿ ಶ್ರೀಮಠಕ್ಕೆ ಜಹಗೀರು ನೀಡಿದ ಮಂತ್ರಾಲಯಗ್ರಾಮವು ಎಲ್ಲಿಯವರೆಯೆ ಶ್ರೀಮಠದ ಸುಪರ್ದಿಗೆ ಒಳಪಟ್ಟಿದ್ದು ಎನ್ನುವುದು ಸ್ಪಷ್ಟವಿರಲಿಲ್ಲ. ಹಲವು ರಾಜಕೀಯವಿಪ್ಲವಗಳ ಮಧ್ಯೆ ಹಲವು ಕಾಲ ಮಂತ್ರಾಲಯದಲ್ಲೇ ಉಳಿದು ಪಾಠ ಪ್ರವಚನಗಳನ್ನು ನಡೆಸಿ ತಮ್ಮ ಕಾಲದಲ್ಲಿ ಅಂದಿನ ಆದೋನಿಯ ನವಾಬ ಸಬ್ದಲ್ ಜಂಗ್ ಬಹಾದೂರ್ ನಲ್ಲಿ ಮಂತ್ರಾಲಯ ಗ್ರಾಮದ ಬಗ್ಗೆ ಭವಿಷ್ಯದ ಬಗ್ಗೆ ಯೋಚಿಸಿ ಸೂಕ್ತ ಕಾಗದ ಪ್ರತ್ರಗಳನ್ನು ಮಾಡಿಸಿ,ಮಂತ್ರಾಲಯವನ್ನು ಭದ್ರ ಪಡಿಸಿದರು. 


ಹಿಂದೆ ಶ್ರೀರಾಘವೇಂದ್ರಗುರುಗಳ ಕಾಲದಲ್ಲಿ ಶ್ರೀಮಠಕ್ಕೆ ಜಗಗೀರಾಗಿ ಲಭ್ಯವಾಗಿದ್ದ ಕಿರಿಟಗಿರಿಗ್ರಾಮವು ಬದಲಾದ ರಾಜಕೀಯ ಸನ್ನಿವೇಶದಿಂದ ಮಹಾಸಂಸ್ಥಾನದ ಕೈತಪ್ಪಿ ಹೋಗಿತ್ತು. ತಮ್ಮ ವಿಶಿಷ್ಟ ತಪಃ ಪ್ರಭಾವ, ಚರ್ಯೆಯಿಂದ ಶ್ರೀಗಳವರು ಅದನ್ನು ಮರಳಿ ಸಂಸ್ಥಾನಕ್ಕೆ ಬರುವಂತೆ ಮಾಡಿದರು. ಇದಲ್ಲದೇ ಇನ್ನು ಹತ್ತು ಹಲವು ಗ್ರಾಮಗಳನ್ನು ಶ್ರೀಮೂಲರಾಮದೇವರ ಸೇವಾರ್ಥವಾಗಿ ಶ್ರೀಮಠಕ್ಕೆ  ಭದ್ರಪಡಿಸಿದ್ದಲ್ಲದೇ ಅನೇಕ ರಾಜರಿಂದ, ಪಾಳೆಯಗಾರರಿಂದ ಸಮ್ಮಾನಿತರಾಗಿ ಅನೇಕ ಗ್ರಾಮಗಳನ್ನು ದಾನಪಡೆದು ಸಂಸ್ಥಾನಕ್ಕೆ ಅರ್ಪಿಸುವ ವರ್ಚಸ್ಸು ಶ್ರೀಗಳವರಿಗೆ ಇದ್ದಿತ್ತು. 


ಮಹೋನ್ನತವಿದ್ಯಾಪರಂಪರೆಯನ್ನು ಬೆಳಗಿದ ಧೀಮಂತ ಯತಿಗಳು : 


ಶ್ರೀವಸುಧೇಂದ್ರತೀರ್ಥರು ಅಪ್ರತಿಮ ಪಾಂಡಿತ್ಯವನ್ನು ಹೊಂದಿದ್ದ ಮಹಾನುಭಾವರು. ಶ್ರೀವಾದೀಂದ್ರತೀರ್ಥಗುರುಸಾರ್ವಭೌಮರಂತಹ ವಿದ್ವನ್ಮೂರ್ಧನ್ಯರಲ್ಲಿ ಅಧ್ಯಯನ ಮಾಡಿದ ಮಹಾ ಸೌಭಾಗ್ಯ ಅವರದ್ದು. ಶ್ರೀಮದಾಚಾರ್ಯರಿಂದ ನೇರವಾಗಿ ಶ್ರೀಪದ್ಮನಾಭತೀರ್ಥ ಶ್ರೀಜಯತೀರ್ಥರಾದಿಯಾಗಿ ಹರಿದು ಬಂದು ಶ್ರೀರಾಘವೇಂದ್ರತೀರ್ಥರ ತನ್ಮೂಲಕ ಶ್ರೀಸುಮತೀಂದ್ರತೀರ್ಥರ, ಶ್ರೀಉಪೇಂದ್ರತೀರ್ಥರ ನಂತರ ಶ್ರೀವಾದೀಂದ್ರತೀರ್ಥರ ವರೆಗೆ ಪ್ರವಹಿಸಿದ  ಶ್ರೇಷ್ಠ ವಿದ್ಯಾಪರಂಪರೆಯ ವಿದ್ಯಾಗಂಗೆಯಲ್ಲಿ ಮಿಂದೆದ್ದ ಪೂತಾತ್ಮರು ಶ್ರೀವಸುಧೇಂದ್ರರು.  


ತಂತ್ರಸಾರಸಂಗ್ರಹಕ್ಕೆ ವ್ಯಾಖ್ಯಾನ ರಚಿಸಿದ ವ್ಯಾಸ-ದಾಸ ಸಾಹಿತ್ಯಧುರೀಣರಾದ, ಶ್ರೀಜಗನ್ನಾಥದಾಸರಂತಹ ಶಿಷ್ಯೋತ್ತಮರನ್ನು ಹೊಂದಿದ್ದ ಶ್ರೀವರದೇಂದ್ರತೀರ್ಥರಂತಹ ಶ್ರೇಷ್ಠವಿದ್ವಾಂಸರಿಗೆ ಪಾಠಹೇಳಿದ ಮಹಾನುಭಾವರು ಶ್ರೀವಸುಧೇಂದ್ರರು. 


ಶ್ರೀಅಯ್ಯಣಾಚಾರ್ಯರೆಂಬ ಗ್ರಹಸ್ತರಾದ ಗ್ರಂಥಕಾರರು ಇವರ ಶಿಷ್ಯರಾಗಿದ್ದವರು. ಬ್ರಹ್ಮಸೂತ್ರಗಳ ಮೇಲೆ ಬಂದಿರುವ ತತ್ಸಂಬಂಧಿ ಟೀಕಾ, ವ್ಯಾಖ್ಯಾನಗಳಲ್ಲಿ ಬಂದಿರುವ ವಿಷಯಗಳನ್ನು ಮಥಿಸಿ ವಿಮರ್ಶೆ ಮಾಡುವ, 'ಶ್ರೀಬ್ರಹ್ಮಸೂತ್ರ-ಅನುವ್ಯಾಖ್ಯಾನ- ನ್ಯಾಯಹರಿವನಮಾಲಾ' ಎಂಬ ಗ್ರಂಥವನ್ನು, ಹಾಗೂ ಶ್ರೀಮದ್ಭಾಗವತಸಂಗ್ರಹ, ಆನಂದ - ತಾರತಮ್ಯಸಮರ್ಥನಮ್ , ತ್ರಿಮತೈಕ್ಯ ಪ್ರಕಾಶಿಕಾ ಮುಂತಾದ ವಿದ್ವತ್ಪೂರ್ಣಗ್ರಂಥಗಳನ್ನು ರಚಿಸಿದ ಅಯ್ಯಣಾಚಾರ್ಯರು ತಮ್ಮನ್ನು ತಾವು "ಶ್ರೀವಸುಧೇಂದ್ರತೀರ್ಥ ಶಿಷ್ಯೇಣ.." ಎಂದು ಉಲ್ಲೇಖಿಸಿಕೊಂಡಿದ್ದಾರೆ. ಶ್ರೀಅಯ್ಯಣಾಚಾರ್ಯರಂತಹ ಗ್ರಹಸ್ತಶಿಷ್ಯರಿಗೆ ಪಾಠ ಹೇಳಿದವರು ಶ್ರೀವಸುಧೇಂದ್ರತೀರ್ಥರು.


ಶ್ರೀಮಾನವೀ ಜಗನ್ನಾಥದಾಸರಾರ್ಯರು (ವಿದ್ಯಾಪ್ರಶಿಷ್ಯರು) ಇವರ ವಿದ್ಯಾಪರಂಪರೆಗೆ ಸೇರಿದವರೇ . 

ಹೀಗೆ ಅನೇಕ ಅಪ್ರತಿಮ ಶಿಷ್ಯ-ಪ್ರಶಿಷ್ಯರನ್ನು ನಿರ್ಮಾಣ ಮಾಡಿದವರು   ಶ್ರೀವಸುಧೇಂದ್ರತೀರ್ಥರು. 


ಅದ್ಭುತ ಗ್ರಂಥಕಾರರು:  


ಶ್ರೀವಸುಧೇಂದ್ರತೀರ್ಥರು ಶ್ರೀಮಠದ ಅಭಿವೃದ್ಧಿ ಹಾಗೂ ಉತ್ತಮ ಶಿಷ್ಯರ ನಿರ್ಮಾಣದ ಜೊತೆ ಜೊತೆಗೆ ಗ್ರಂಥರಚನಾಕಾರರೂ ಆಗಿದ್ದು ಇವರ ವೈಶಿಷ್ಟ್ಯ.


1. "ತಂತ್ರಸಾರಸಂಗ್ರಹ ವ್ಯಾಖ್ಯಾನ": 

 ಶ್ರೀಮದಾಚಾರ್ಯರ ಸರ್ವಮೂಲಗ್ರಂಥಗಳಲ್ಲಿ ವಿಶಿಷ್ಟವಾದ ಗ್ರಂಥ "ತಂತ್ರಸಾರಸಂಗ್ರಹ". ಆ ಗ್ರಂಥಕ್ಕೆ ಶ್ರೀವಸುಧೇಂದ್ರತೀರ್ಥರು ಟೀಕೆಯನ್ನು ರಚಿಸಿದ್ದಾರೆ. ಗಾತ್ರದಲ್ಲಿ ಅತ್ಯಂತ ಚಿಕ್ಕದಾದರೂ, ತಂತ್ರಶಾಸ್ತ್ರದ ಅನೇಕ ಉಪಯುಕ್ತ ವಿಷಯಗಳನ್ನು ಏಕತ್ರ ಕ್ರೋಢೀಕರಿಸಿದ್ದಾರೆ. 


2. "ಗುರುಗುಣಸ್ತವನವ್ಯಾಖ್ಯಾನ" : 

ಟಿಪ್ಪಣ್ಯಾಚಾರ್ಯಸಾರ್ವಭೌಮರೆನಿಸಿದ ಮಂತ್ರಾಲಯ ಪ್ರಭುಗಳ ಶ್ರೇಷ್ಠ ಸನ್ನಿಧಾನ ಅವರ ಗ್ರಂಥಗಳು. ಆ ಗ್ರಂಥಗಳ ರಚನೆಯೇ ಗುರುಗಳ ದೊಡ್ಡಗುಣ (ಗುರುಗುಣ). ಶ್ರೀಗುರುರಾಜರ ಆ ಗ್ರಂಥರಚನ ಸಾಮರ್ಥ್ಯ, ಶೈಲಿ, ಅವುಗಳ ಮಹಿಮೆ, ಹಿರಿಮೆಯನ್ನು ಎದೆಯುಬ್ಬಿಸಿ ವರ್ಣನೆ ಮಾಡುವ ಖಂಡಕಾವ್ಯವೇ ಗುರುಗುಣಸ್ತವನ. ತಮ್ಮ ಸಾಕ್ಷಾತ್ ಸ್ವರೂಪೋದ್ಧಾರಕರು ರಚಿಸಿದ ಗುರುಗುಣಸ್ತವನಕ್ಕೆ ಗುರುಗಳ ಹಾರ್ದವನ್ನು ತಿಳಿಸುವುದಕ್ಕಾಗಿ ಶ್ರೀವಸುಧೇಂದ್ರತೀರ್ಥರು ರಚಿಸಿದ ವ್ಯಾಖ್ಯಾನವೇ ಗುರುಗುಣಸ್ತವನ ಟೀಕಾ. 


ಪ್ರತಿ ಶ್ಲೋಕಕ್ಕೂ ಅವತಾರಿಕೆಗಳನ್ನು ಕೊಟ್ಟು, ಪದಾರ್ಥಗಳನ್ನು ಸರಿಯಾಗಿ ನಿರೂಪಿಸಿ, ಭಾವಾರ್ಥವನ್ನೂ ತಿಳಿಸಿಕೊಡುವುದು ಈ ವ್ಯಾಖ್ಯಾನದ ವೈಶಿಷ್ಟ್ಯ. 


3.  "ಗುರುಪರಂಪರಾ ದಂಡಕ" : 

ಶ್ರೀಮನ್ಮಧ್ವಾಚಾರ್ಯರ ಸದ್ವಂಶವಾದ ಶ್ರೀರಾಘವೇಂದ್ರಸ್ವಾಮಿಗಳವರ ಮಠದ ಪರಂಪರೆಯನ್ನು ಲಘುವಾಗಿ ಸ್ಮರಣೆಗೆ ತಂದುಕೊಂಡು ಹಸ್ತೋದಕಾದಿಗಳನ್ನು ಮಾಡಲು ಅನುಕೂಲವಾಗುವಂತೆ ಸ್ರಗ್ಧರಾವೃತ್ತದಲ್ಲಿನ ಎರೆಡು ಶ್ಲೋಕಗಳಲ ಪುಟ್ಟ ಕೃತಿಯೇ ಗುರುಪರಂಪರಾದಂಡಕ. 


"ಶ್ರೀಮಧ್ವಂ ಪದ್ಮನಾಭಂ...." ಎಂದು, 


ಆರಂಭವಾಗುವ ದಂಡಕದಲ್ಲಿ ಶ್ರೀಮಧ್ವಾಚಾರ್ಯರಿಂದ ಪ್ರಾರಂಭಿಸಿ, 


"........ಪ್ರೌಢವಾದೀಂದ್ರವರ್ಯಮ್" ಎಂದು, 


ತಮ್ಮ ಗುರುಗಳ ವರೆಗೆ ಪರಂಪರೆಯ ಎಲ್ಲ ಗುರುಗಳನ್ನು ಉಲ್ಲೇಖಿಸಿದ್ದಾರೆ. ಅಲ್ಲಲ್ಲಿ ಆಯಾ ಗುರುಗಳ ಸ್ಮರಣೆ ಬರುವಂತೆ ವಿಶೇಷಣಗಳನ್ನು ಇಟ್ಟಿದ್ದಾರೆ. 


 ಶ್ರೀರಾಘವೇಂದ್ರಸ್ವಾಮಿಗಳವರ ಮಠದ ಶಿಷ್ಯಪರಂಪರೆಗೆ ಸೇರಿದ ಮನೆಗಳಲ್ಲಿ ನಿತ್ಯವೂ ಭಗವತ್ಪೂಜಾಕಾಲದಲ್ಲಿ, ಹಸ್ತೋದಕಾದಿಗಳ ಸಮರ್ಪಣಾಕಾಲದಲ್ಲಿ, ಗುರುಗಳ ಸ್ಮರಣೆ ಮಾಡಿಕೊಳ್ಳುವ ಸಂದರ್ಭದಲ್ಲಿ ದಂಡಕವನ್ನು ಹೇಳುವ ಪರಿಪಾಠವಿದೆ. 


ಮಹಾವಿದ್ವಾಂಸರಾಗಿದ್ದ ಶ್ರೀವಸುಧೇಂದ್ರತೀರ್ಥರು ಇನ್ನೂ ಅನೇಕ ಗ್ರಂಥಗಳನ್ನು ರಚಿಸಿರಬಹುದಾದರೂ ಉಪಲಬ್ಧವಿರುವುದು ಮೇಲಿನವುಗಳು ಮಾತ್ರ. 


ಅಪ್ರತಿಮ ತಪಸ್ವಿಗಳು :


ರಾಜಕೀಯ ವಿಪ್ಲವದ ಸಂದರ್ಭದಲ್ಲಿ ಮಹಾಸಂಸ್ಥಾನವನ್ನು ಸರ್ವರೀತಿಯಿಂದಲೂ ಚ್ಯುತಿಬಾರದಂತೆ ಸಮರ್ಥವಾಗಿ ಮುನ್ನಡೆಸಿಕೊಂಡು ಅಭಿವೃದ್ಧಿಸಿದ ಮಹಾನ್ ಕೀರ್ತಿ ಶ್ರೀವಸುಧೇಂದ್ರತೀರ್ಥರಿಗೆ ಸಲ್ಲಬೇಕು. 


ಸ್ವಾಮಿಗಳು ಮಹಾತಪಸ್ವಿಗಳು ಎಂದು ಪರಂಪರೆಯಿಂದ ತಿಳಿದುಬರುತ್ತದೆ. ಸದಾಕಾಲ ಪಾಠಪ್ರವಚನನಿರತ ಶ್ರೀಪಾದಂಗಳವರು ಜಪತಪಾನುಷ್ಠಾನಗಳ ಕಠಿಣವಾಗಿ ಮಾಡುತ್ತಿದ್ದರು. 


ಇಂದಿಗೂ ಅವರ ತಪಃ ಪ್ರಭಾವ ಅವರ ಮೂಲವೃಂದಾವನ ಕ್ಷೇತ್ರದಲ್ಲಿ ಜಗಾರೂಕವಾಗಿ ಸನ್ನಿಹಿತವಾಗಿದೆ. ತುಂಗಭದ್ರಾ ನದೀತೀರದ ಈ ಜಾಗದಲ್ಲಿ ದೇಹಶುದ್ಧಿ ಇಲ್ಲದೇ ಹೋಗುವವರಿಗೆ ತಕ್ಷಣದಲ್ಲೇ ಶಿಕ್ಷಿಸಿದ ಅಲೌಕಿಕ ಅನುಭವಗಳನ್ನು ಪ್ರತ್ಯಕ್ಷ ಕಂಡವರಿದ್ದಾರೆ. 


ಶ್ರೀವಸುಧೇಂದ್ರತೀರ್ಥರು ಮಹಿಮೆ, 

ಶ್ರೀವಸುಧೇಂದ್ರರು ಪೂಜಿಸಿದ ಶ್ರೀಮೂಲರಾಮ, ಶ್ರೀದಿಗ್ವಿಜಯರಾಮ ಮಹಿಮೆ:   


ಹರಿದಾಸ ಸಾಹಿತ್ಯ ಶ್ರೀಪುರಂದರದಾಸರ ನಂತರ ಮತ್ತೊಮ್ಮೆ ಔನ್ನತ್ಯವನ್ನು ಹೊಂದಿದ ಕಾಲಘಟ್ಟದಲ್ಲಿ ಮಹಾಸಂಸ್ಥಾನವನ್ನು ಒಪ್ಪಿಸಿಕೊಂಡವರು ಶ್ರೀವಸುಧೇಂದ್ರತೀರ್ಥರು. 


ಹರಿದಾಸ ಶ್ರೇಷ್ಠರಾದ ಶ್ರೀವಿಜಯದಾಸರು, ಶ್ರೀಗೋಪಾಲದಾಸರು ಹಾಗೂ ಶ್ರೀಜಗನ್ನಾಥದಾಸರು ಇವರ ಸಮಕಾಲೀನರಾಗಿದ್ದವರು. ಇವರಿಂದ ವಿಶಿಷ್ಟವಾಗಿ ಸ್ತುತ್ಯರಾಗಿ ಮಾನ್ಯರಾದವರು ಶ್ರೀವಸುಧೇಂದ್ರತೀರ್ಥರು. 


ಅಂದು ವಿದ್ಯಾಮಠದ ಮಹಾಪೀಠದಲ್ಲಿ ಕಿರಿಯ ಪಟ್ಟದಲ್ಲಿದ್ದ ಶ್ರೀವಸುಧೇಂದ್ರತೀರ್ಥರು ಮಾಡುತ್ತಿದ್ದ "ಶ್ರೀಮಧ್ವಾಚಾರ್ಯರ ಕರಾರ್ಚಿತವಾದ ಶ್ರೀದಿಗ್ವಿಜಯರಾಮದೇವರ" ಮಹಾಪೂಜೆಯನ್ನು ನೋಡಿ ಆ ದಿಗ್ವಿಜಯರಾಮದೇವರ ಬಗ್ಗೆ ವಿಪುಲವಿವರ ಇರುವ ಸುಳಾದಿಯನ್ನು ಶ್ರೀವಿಜಯದಾಸರು ರಚಿಸಿದ್ದಾರೆ. ಅಲ್ಲಿ, 


ವಸುಧೇಂದ್ರಮುನಿಯಿಂದ ನಾನಾಪೂಜೆಯಗೊಂಡು |

ವಸುಧೆಯೊಳು ಮೆರೆವ "ವಿಜಯವಿಠ್ಠಲ" ರಾಮಾ ||


ಸಾಕ್ಷಾತ್ ಶ್ರೀಮದಾಚಾರ್ಯರ ಕರಸ್ಪರ್ಶದಿಂದ ದಿವ್ಯಸನ್ನಿಧಾನೋಪೇತವಾದ ಶ್ರೀದಿಗ್ವಿಜಯ ರಾಮದೇವರ ಪ್ರತಿಮೆಯನ್ನು ಶ್ರೀವಸುಧೇಂದ್ರಮುನಿಯಿಂದ ನಾನಾ ಪೂಜೆಯಗೊಂಡಾತನೆಂದು ಸ್ತುತಿಸಿದ್ದಾರೆ. 


ಶ್ರೀವಸುಧೇಂದ್ರತೀರ್ಥರು ಮಾಡುತ್ತಿದ್ದ ಮೂಲರಾಮದೇವರ ಪೂಜೆಯನ್ನು ನೋಡುತ್ತ ಶ್ರೀಗೋಪಾಲದಾಸರು ಶ್ರೀಮೂಲರಾಮದೇವರ ಬಗ್ಗೆ ತಾವು ರಚಿಸಿದ "ತರಣೀಕುಲೋತ್ಪನ್ನ ತಪುತಕಾಂಚನವರ್ಣ.." ಎಂಬ ಸುಳಾದಿಯಲ್ಲಿ 

"ಗುರುವಸುಧೇಂದ್ರಮುನಿಯ ಈಶ",

" ಗುರುವಸುಧೇಂದ್ರರ ಕರಕಮಲದೊಳು ತೋರ್ಪ ಸಿರಿರಾಮ"

 

ಎಂದು ವರ್ಣಿಸಿದ್ದಾರೆ. 


ಅಲ್ಲಿ ಮೂಲರಾಮನ ಬಗ್ಗೆ ಹೇಳುವಾಗ ಆ ಪ್ರತಿಮೆಯ ಪೂಜಾರಾಧನೆ ಮಾಡುವ ಶ್ರೀವಸುಧೇಂದ್ರತೀರ್ಥರ ಬಗ್ಗೆ, 


"ಮಂದಿಮತಿಗಳು ಅವರ ಮನುಜರೆಂದರಿದರೇ

 ಪೊಂದುವರು ಮಹದಾದಿ ನಿರಯದಲ್ಲಿ"

 

ಎಂದು ಆ ವಿಗ್ರಹ ಪೂಜೆ ಒದುಗುವುದು ದೇವತೆಗಳಿಗೆ ಮಾತ್ರ ಎಂದು ಉದ್ಗರಿಸಿ, 


"ಚೆಂದದಿ ಬೊಮ್ಮ ರುದ್ರ ಇಂದ್ರಾದಿಗಳು                                                                                       ಕುಂದದೇ ಸುರಋಷಿ ಗಂಧರ್ವಾದಿಗಳು                                                                                       ಒಂದೊಂದಂಶದಿಂದ ಬಂದು ನಿನ್ನನರ್ಚಿಸಿ                                                                                    ಮಂದಬುದ್ಧಿಗಳುಳ್ಳ ಜಗ ಪಾಲಿಸುವರು"

 ಎಂದು ಶ್ರೀವಸುಧೇಂದ್ರತೀರ್ಥರ ಸಂಶದೇವತೆಗಳೇ ಆಗಿದ್ದಾರೆಂದು ಅಪರೋಕ್ಷಜ್ಞಾನಿಗಳಾದ ಶ್ರೀಗೋಪಾಲದಾಸರು ತಿಳಿಸಿದ್ದಾರೆ. 


ಈ ಕೀರ್ತನೆಯಲ್ಲಿ 8 ಬಾರೀ ಶ್ರೀವಸುಧೇಂದ್ರತೀರ್ಥರ ಉಲ್ಲೇಖವನ್ನು ಎದೆಯುಬ್ಬಿ ಮಾಡಿದ್ದಾರೆ ಶ್ರೀಗೋಪಾಲದಾಸರು.


ಶ್ರೀಮನ್ಮಧ್ವಾಚಾರ್ಯರ ಮೂಲಪೀಠದ ಮೇಲೆ ವಿರಾಜಿಸಿದ ಯತಿಸಾರ್ವಭೌಮ ಶ್ರೀವಸುಧೇಂದ್ರತೀರ್ಥರ ಕರದೊಳು ಮೆರೆವ ಶ್ರೀಮನ್ಮೂಲರಾಮನನ್ನು ಶ್ರೀವರದೇಂದ್ರತೀರ್ಥರ ವಿದ್ಯಾಶಿಷ್ಯರಾದ ಶ್ರೀಜಗನ್ನಾಥದಾಸರು ತಮ್ಮ "ರಾಮನ ನೋಡಿರೈ..." ಎಂಬ ಕೀರ್ತನೆಯಲ್ಲಿ "ಶ್ರೀವಸುಧೇಂದ್ರಾರ್ಯರಪ್ರಿಯ" ಎಂದು ಕೊಂಡಾಡಿ ಸ್ತೋತ್ರ ಮಾಡಿದ್ದಾರೆ. 


 ಹೀಗೆ ಶ್ರೀವಸುಧೇಂದ್ರತೀರ್ಥರು ಮಾಡುವ ಪೂಜೆಯನ್ನು, ಮಹಿಮೆಯನ್ನು ಬಹುಪ್ರಕಾರವಾಗಿ ಹರಿದಾಸರು ಕೊಂಡಾಡಿದ್ದಾರೆ.  


ಶ್ರೀಜಗನ್ನಾಥದಾಸರು, 

 "ಮಂಗಳಮ್ ಗುರುವಸುಧೇಂದ್ರಗೆ |

ಮಂಗಳಮ್ ಕಲ್ಯಾಣಸಾಂದ್ರಗೆ ||....... ", 


"ವಸುಧೇಂದ್ರರಾಯ ಪಾವನಕಾಯ ಕೋವಿದಜನ ಪ್ರಿಯಾ || ...." 


ಎಂಬ ಹೀಗೆ ಕೀರ್ತನೆಗಳನ್ನೇ ರಚನೆ ಮಾಡಿದ್ದಾರೆ. ಅವರ ಸದ್ಗುಣಗಳನ್ನು, ಅವರ ಚರ್ಯೆಯನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. 


ಉಪಸಂಹಾರ


ಊಹೆಗೂ ನಿಲುಕದ ಎತ್ತರದ ಮಹಿಮೆ ಶ್ರೀವಸುಧೇಂದ್ರತೀರ್ಥರದ್ದು. ಶ್ರೀವಿಜಯದಾಸರು, ಶ್ರೀಗೋಪಾಲದಾಸರಂತಹವರು, ಸಾಕ್ಷಾತ್ ಪ್ರಶಿಷ್ಯರಾದ ಶ್ರೀಜಗನ್ನಾಥದಾಸರು ಇವರ ಮಹಿಮೆ ಬಣ್ಣಿಸಲು ಅಧಿಕಾರಿಗಳೇ ಹೊರತು ಸಾಮಾನ್ಯ ಮನುಜರಲ್ಲ.


ಅಂತಹ ಶ್ರೀವಸುಧೇಂದ್ರಾರ್ಯರ ಚರಣಕಮಲಗಳಿಗೆ ಅನಂತಕೋಟೀ ದಂಡಪ್ರಣಾಮಗಳು. 


✍️ ಸಮೀರ ಜೋಷಿ


No comments:

Post a Comment

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...