ಶ್ರೀಹಂಸನಾಮಕನ ಸಾಕ್ಷಾತ್ ಪರಂಪರೆಯಲ್ಲಿ ಶ್ರೀಪದ್ಮನಾಭತೀರ್ಥರ- ಶ್ರೀಜಯತೀರ್ಥರ-ಶ್ರೀಕವೀಂದ್ರತೀರ್ಥರ ಪರಂಪರೆಯಲ್ಲಿ ಉದಿಸಿದ ಪೂರ್ಣಪ್ರಜ್ಞಮತದ ಪೂರ್ಣಚಂದ್ರಮರೇ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದ ವಿಭೂತಿಪುರುಷ ಶ್ರೀಸುಮತೀಂದ್ರ ತೀರ್ಥರು.
ಶ್ರೀಮದಾಚಾರ್ಯರ ಸತ್ಪರಂಪರೆಯ ಇತಿಹಾಸದಲ್ಲಿಯೇ ವಿಶಿಷ್ಟಸ್ಥಾನವನ್ನು ಆಚಂದ್ರಾರ್ಕಪರ್ಯಂತ ಪಡೆದ ಅಪ್ರತಿಮ ಪ್ರತಿಭಾ ಸಂಪನ್ನ ಶಕಪುರುಷರು ಶ್ರೀಸುಮತೀಂದ್ರ ತೀರ್ಥರು.
ಶ್ರೀರಾಘವೇಂದ್ರ ಗುರುಸಾರ್ವಭೌಮರ ವಂಶೋದ್ಭವರಾದ ಶ್ರೀಗಳು ಶ್ರೀಮನ್ನ್ಯಾಯಸುಧಾದಿ ಉದ್ಗ್ರಂಥಗಳ ಪಾಠವನ್ನು ಸಾಕ್ಷಾತ್ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ ಪದತಲದಲ್ಲಿ ಕುಳಿತು ಕೇಳಿದ ಗುರುರಾಜರ ಸಾಕ್ಷಾತ್ ಶಿಷ್ಯರು.
ಪೂರ್ವಾಶ್ರಮ ಹಾಗೂ ವಿದ್ಯಾಭ್ಯಾಸ
ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರ ಪೂರ್ವಾಶ್ರಮ ಅಣ್ಣಂದಿರಾದ ಶ್ರೀಗುರಾಜಾಚಾರ್ಯರ ಮಕ್ಕಳೇ ಶ್ರೀವೆಂಕಟನಾರಾಯಣಾಚಾರ್ಯರು. ಅವರಿಗೆ ಐದು ಜನ ಗಂಡು ಮಕ್ಕಳು.
ಶ್ರೀವೇಂಕಣ್ಣಾಚಾರ್ಯರು, ಶ್ರೀವಾಸುದೇವಾಚಾರ್ಯರು, ಶ್ರೀಮುದ್ದುವೇಂಕಟಕೃಷ್ಣಾಚಾರ್ಯರು, ಶ್ರೀವಿಜಯೀಂದ್ರಾಚಾರ್ಯರು ಹಾಗು ಶ್ರೀಗರುಡವಾಹನ ಲಕ್ಷ್ಮೀನಾರಾಯಣಾಚಾರ್ಯರು ಎಂದು.
ಅವರೆಲ್ಲ ಕ್ರಮವಾಗಿ ಶ್ರೀಯೋಗೀಂದ್ರತೀರ್ಥರು , ಶ್ರೀಸೂರೀಂದ್ರತೀರ್ಥರು, ಶ್ರೀಸುಮತೀಂದ್ರತೀರ್ಥರು, ಶ್ರೀಉಪೇಂದ್ರತೀರ್ಥರು, ಶ್ರೀಮುನೀಂದ್ರತೀರ್ಥರೆಂದು ಯತ್ಯಾಶ್ರಮ ಸ್ವೀಕರಿಸಿ ವೈರಾಗ್ಯಕ್ಕೆ ಹೆಸರಾದವರು.
ಇವರಲ್ಲಿ ನಾಲ್ಕು ಜ್ಞಾನ ಶ್ರೀಮದಾಚಾರ್ಯರ ಪೀಠವನ್ನೇರಿದರೇ ಶ್ರೀಮುನೀಂದ್ರತೀರ್ಥರು ಬಿಡಿ ಸಂನ್ಯಾಸಿಗಳಾಗಿಯೇ ಇದ್ದು ಪೀಠಾಧಿಪತಿಗಳಾಗಲಿಲ್ಲ.
ಇವರೆಲ್ಲರೂ ಶ್ರೀರಾಘವೇಂದ್ರಸ್ವಾಮಿಗಳವರಲ್ಲಿಯೇ ಅಧ್ಯಯನ ನಡೆಸಿದ ಭಾಗ್ಯಶಾಲಿಗಳು. ಶ್ರೀರಾಘವೇಂದ್ರವಿಜಯವು
ಜನಕೋಪಮಕನ್ಯಕೇsನ್ವಯೇsಸ್ಮಿನ್ನಿಜತಾತಾಧಿಕನಂದನೇ ಗುಣೌಘೈಃ ।
ಅನುಜಾತಸಮಾನಪೂರ್ವಜಾತೇsಭವದೇಕೋ ಭುವಿಕೃಷ್ಣನಾಮಧಾಮಾ ।।
(ಶ್ರೀರಾಘವೇಂದ್ರವಿಜಯ)
ಎಂದು ಉಲ್ಲೇಖಿಸುವಂತೆ, ತಂದೆಯನ್ನೇ ಮೀರಿಸುವ ಮಕ್ಕಳು, ಗುಣಗಳಲ್ಲಿ ಅಣ್ಣನ ಸಮಾನನೆನಿಸುವ ತಮ್ಮಂದಿರು ಆ ವಂಶದಲ್ಲಿ ಅವತರಿಸುವವರು ಎಂಬ ಮಾತಿನಂತೆ ಎಲ್ಲರೂ ವಿಶಿಷ್ಟಪಾಂಡಿತ್ಯಪೂರ್ಣರೂ, ಗ್ರಂಥಕಾರರು ಎನ್ನುವುದು ವಿಶೇಷ.
ಪಾಂಡವರಂತಿದ್ದ ಈ ಐವರಲ್ಲಿ ಮಧ್ಯಮಪಾಂಡವನಂತೆ ವಿಲಕ್ಷಣಕೀರ್ತಿಸಂಪನ್ನರಾದವರು ಶ್ರೀಮುದ್ದುವೆಂಕಟಕೃಷ್ಣಾಚಾರ್ಯರು. ಇವರೇ ಗುರುರಾಜರ ಇಚ್ಛೆ ಹಾಗೂ ಆದೇಶದಂತೆ ಶ್ರೀಸೂರೀಂದ್ರತೀರ್ಥರಿಂದ ಚತುರ್ಥಾಶ್ರಮ ಸ್ವೀಕರಿಸಿ, ಶ್ರೀಮದಾಚಾರ್ಯರ ಮೂಲಪರಂಪರೆಯ ೨೦ನೇ ಪೀಠಾಧೀಶ್ವರರಾಗಿ ಶ್ರೀಸುಮತೀಂದ್ರತೀರ್ಥರಾದರು.
ಶ್ರೀರಾಘವೇಂದ್ರಸ್ವಾಮಿಗಳವರ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದ್ದ ಶ್ರೀಗಳವರ ಬಗ್ಗೆ ಸ್ವತಃ ಶ್ರೀರಾಘವೇಂದ್ರಗುರುಸಾರ್ವಭೌಮರೇ ಹೇಳಿದ ರೋಮಾಂಚಕಾರೀ ಮಾತುಗಳನ್ನು ಶ್ರೀರಾಘವೇಂದ್ರವಿಜಯವು ದಾಖಲಿಸುತ್ತದೆ.
ಪರಿಮಳಾದಿ ಅನೇಕ ಗ್ರಂಥಗಳನ್ನು ಯಾವ ಕಾರಣಕ್ಕಾಗಿ ರಚನೆ ಮಾಡಿದ್ದಾರೆಂಬ ಪ್ರಶ್ನೆಗೆ, ಶ್ರೀಗುರುರಾಜರು,
ಭಾವ್ಯಸಂಶಯಮಹೋ ಗುರುವಂಶೇ ದರ್ಶನಶೃತಿಪರಸ್ಸುಮತೀಂದ್ರ: ।
ತಸ್ಯ ಸಾರ್ಥಕಮಿದಂ ಸಕಲಂ ಸ್ಯಾದಿತ್ಯವೇತ್ಯ ಕೃತವಾನ್ ಕೃತಸಾರ್ಥಂ।।
- ಶ್ರೀರಾಘವೇಂದ್ರವಿಜಯ ( ೮-೧೩ )
ನಮ್ಮ ಈ ಗುರುಪರಂಪರೆಯಲ್ಲಿ ಗ್ರಂಥಾವಲೋಕನ ಮತ್ತು ಮಧ್ವಶಾಸ್ತ್ರಗಳಲ್ಲಿಯೇ ಸದಾ ಆಸಕ್ತರಾದ ಶ್ರೀಸುಮತೀಂದ್ರತೀರ್ಥರು ನಿಸ್ಸಂಶಯವಾಗಿ ಬರಲಿರುವರು, ಅವರು ವ್ಯಾಸಮಧ್ವರ ಸೇವೆಗೆ ಈ ಗ್ರಂಥಸಮೂಹವು ಪ್ರಯೋಜನಕರವಾಗಿರಲಿವೆ.
ಎಂದು ಭವಿಷ್ಯವಾಣಿಯಿಂದ ಶ್ಲಾಘಿತರಾದವರು ಶ್ರೀಸುಮತೀಂದ್ರತೀರ್ಥ ಗುರುಸಾರ್ವಭೌಮರು. ಗುರುರಾಜರು ಹೇಳಿದ ಇದೊಂದೇ ಮಾತು ಸಾಕು ಇವರ ಮಹಾಮಹಿಮಯನ್ನು ತಿಳಿಸಲು.
ಅಂತಹ ಮಹಾನ್ ಕೀರ್ತಿಗೆ ಭಾಜನರಾದ ಸುಮತೀಂದ್ರತೀರ್ಥರು (ಶ್ರೀಮುದ್ದುವೇಂಕಟಕೃಷ್ಣಾಚಾರ್ಯರು) ಪರಮಶ್ರೇಷ್ಠ ವಿದ್ವಾಂಸರ ಮನೆತನದಲ್ಲಿ ಅವತರಿಸಿ ಸಹಜವಾಗಿಯೇ ಪ್ರತಿಭಾಸಂಪನ್ನರಾಗಿದ್ದವರು.
ಶ್ರೀಮುದ್ದುವೇಂಕಟಕೃಷ್ಣಾಚಾರ್ಯರ ಪ್ರಾಥಮಿಕ ವಿದ್ಯಾಭ್ಯಾಸ ಅವರ ತಂದೆಗಳಲ್ಲಿಯೇ ಆಯಿತು.
ಇವರನ್ನೇ ಶ್ರೀಸುಮತೀಂದ್ರತೀರ್ಥರು ತಮ್ಮ ಗ್ರಂಥಗಳಲ್ಲಿ,
ಭೂರೀಮನೀಷಾಗಮಚಿತಕರಣಾನ್
ಶ್ರೀಜಯತೀರ್ಥವ್ರತಿಕೃತಿಶರಣಾನ್ ।
ಸಂತತಮೀಡೇ ಸುಚರಿತಚಾರಣಾನ್
ವೇಂಕಟನಾರಾಯಣಗುರುಚರಣಾನ್ ।।
ಶ್ರೇಷ್ಠವಾದ ವೇದಾರ್ಥಗಳಲ್ಲಿ ಪರಿಪೂರ್ಣವಾದ ಜ್ಞಾನವುಳ್ಳವರಾದ, ಶ್ರೀಮಟ್ಟೀಕಾಕೃತ್ಪಾದರ ಗ್ರಂಥಗಳಲ್ಲೇ ಆಸಕ್ತರಾಗಿ ಅವರಲ್ಲೇ ಶರಣುಹೊಂದಿದವರಾದ, ಅಂತಹ ಸುಚರಿತಚರಣರಾದ ಶ್ರೀವೇಂಕಟನಾರಾಯಣಾಚಾರ್ಯರೆಂಬ ಗುರುಚರಣರನ್ನೇ ನಾವು ಸಂತತವಾಗಿ ಆಶ್ರಯಿಸುತ್ತೇವೇ.
ಎಂದು ತಮಗೆ ಬಾಲ್ಯದಲ್ಲಿ ಪಾಠ ಹೇಳಿದ ತಮ್ಮ ಪೂರ್ವಾಶ್ರಮ ಪಿತೃಪಾದರನ್ನು ಅತ್ಯಂತ ಗೌರವಪೂರ್ಣವಾಗಿ ತಮ್ಮ ಪ್ರಮೇಯದೀಪಿಕಾ-ಭಾವರತ್ನಕೋಶದ ಹಾಗೂ ತತ್ತ್ವಪ್ರಕಾಶಿಕಾ-ಭಾವರತ್ನಕೋಶದ ಮುಂತಾದ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ.
ಉನ್ನತ ವಿದ್ಯಾಭ್ಯಾಸ ಸಾಕ್ಷಾತ್ ಶ್ರೀಗುರುಸಾರ್ವಭೌಮರಲ್ಲಿಯೇ ಆಯಿತು. ಶ್ರೀಮನ್ನ್ಯಾಯಸುಧಾದಿ ಉದ್ಗ್ರಂಥಗಳ ಪಾಠ ಹೇಳಿದ ಮಂತ್ರಾಲಯಪ್ರಭುಗಳನ್ನು ಶ್ರೀಸುಮತೀಂದ್ರರು,
ಸುಧಾವ್ಯಾಖ್ಯಾದಿ** ಸರ್ವಸಜ್ಜನೋದ್ಧಾ**ರತತ್ಪರಾನ್ ।
ರಾಘವೇಂದ್ರಗುರೂನ್ ವಂದೇ ಮಾಮ ವಿದ್ಯಾಗುರೂನಹಮ್ ।।
ಶ್ರೀರಾಘವೇಂದ್ರತೀರ್ಥಶ್ರೀಚರಣಾಮರಭೂರುಹಮ್ ।
ಕಾಮಿತಾಖಿಲಕಲ್ಯಾಣಕಲನೋನ್ಮುಖಮಾಶ್ರಯೇ ।।
ಎಂದು ತಮ್ಮ ವಿದ್ಯಾಗುರುಗಳು ಎಂದು ತಮ್ಮ ಭಾವರತ್ನಕೋಶಾದಿ ಗ್ರಂಥಗಳಲ್ಲಿ ಹೆಮ್ಮೆಯಿಂದ ಸ್ತೋತ್ರ ಮಾಡಿದ್ದಾರೆ.
ಸಂನ್ಯಾಸ ಹಾಗೂ ಅವತಾರ ಕಾರ್ಯ
ಶ್ರೀವೇದವ್ಯಾಸರಿಂದ ವ್ಯುಪ್ತವಾದ ತತ್ತ್ವಜ್ಞಾನಬೀಜವು ಶ್ರೀಮದಾಚಾರ್ಯರಿಂದ ಭುವಿಯಲ್ಲಿ ತತ್ತ್ವವಾದವನ್ನು ಪ್ರಚುರಪಡಿಸುವ ಮೂಲಕ ಅಂಕುರಹೊಂದಿತು. ನೇರ ಶಿಷ್ಯರಾದ ಶ್ರೀಪದ್ಮನಾಭತೀರ್ಥರೇ ಮೊದಲಾದ ಪ್ರಾಚೀನಾಚಾರ್ಯರಿಂದ ಸ್ವಲ್ಪವೇ ಮೊಳಕೆಹೊಂದಿದ ಭವ್ಯವಾದ ದ್ವೈತ ತತ್ತ್ವಜ್ಞಾನ ಪರಂಪರೆಯು ಶ್ರೀಜಯತೀರ್ಥರಿಂದ ವಿವಿಧ ಶಾಖೆಗಳನ್ನು ಹೊಂದಿ ಭವ್ಯವಾಗಿ ಪಸರಿಸಿತು. ನಂತರ ಶ್ರೀವ್ಯಾಸರಾಜರ ವಿಶೇಷ ಪ್ರಯತ್ನದಿಂದ ಶಾಖೆಗಳಲ್ಲಿ ಚಿಗುರುಗಳನ್ನು ಹೊಂದಿ ಶ್ರೀವಿಜಯೀಂದ್ರತೀರ್ಥರಿಂದ ಪುಷ್ಪಿತವಾದ ತತ್ತ್ವಜ್ಞಾನವೃಕ್ಷವು ಶ್ರೀರಾಘವೇಂದ್ರಗುರುಸಾರ್ವಭೌಮರಿಂದ ಫಲಿತವಾಗಿ ವಿಶೋಭಿತವಾಗಿ ಸುಭದ್ರವಾಗಿ ಸ್ಥಾಪಿತವಾಗಿತ್ತು.
ಶ್ರೀಗುರುಸಾರ್ವಭೌಮರ ಅವತಾರದ ನಂತರ ಶ್ರೀಮದಾಚಾರ್ಯರ ಮೂಲ ಮಹಾಸಂಸ್ಥಾನಕ್ಕೆ 'ಶ್ರೀರಾಘವೇಂದ್ರಸ್ವಾಮಿಗಳವರ ಮಠ' ಎಂಬ ಹೆಸರೇ ಜಗತ್ಪ್ರಸಿದ್ಧವಾಗಿ ಪ್ರಚಲಿತವಾಯಿತು. ಅವರ ನಂತರ ಬಂದ ಶ್ರೀರಾಘವೇಂದ್ರಕುಮಾರರಾದ ಶ್ರೀಯೋಗೀಂದ್ರತೀರ್ಥರು, ಶ್ರೀಸೂರೀಂದ್ರತೀರ್ಥರು ಮಹಾ ಸಂಸ್ಥಾನವನ್ನು ಪ್ರಾಚೀನಾಚಾರ್ಯರಂತೆಯೇ ಮುಂದುವರೆಸಿಕೊಂಡು ಹೋದರು. ನಂತರ ೧೬೯೨ರಲ್ಲಿ ಶ್ರೀಸೂರೀಂದ್ರತೀರ್ಥರು, ಶ್ರೀಮುದ್ದುವೆಂಕಟಕೃಷ್ಣಾಚಾರ್ಯರಿಗೆ ಚತುರ್ಥಾಶ್ರಮ ದಯಪಾಲಿಸಿ ಶ್ರೀಸುಮತೀಂದ್ರತೀರ್ಥ ಎಂಬ ಅಭಿದಾನವನ್ನಿತ್ತು ವೇದಾಂತಸಾಮ್ರಾಜ್ಯಾಧಿಪತಿಗಳನ್ನಾಗಿಸಿದರು. ಗುರುರಾಜರ ಕೃಪಾಶ್ರಯದಲ್ಲಿಯೇ ಬೆಳೆದ ಅವರಿಂದಲೇ ಪೋಷಿತವಾದ ವಿದ್ಯಾಮಠದ ವಿದ್ಯಾವೈಭವದ ಮತ್ತೊಂದು ಸುವರ್ಣ ಅಧ್ಯಾಯದ ಆರಂಭ ಎಂದು ಗುರುತಿಸಬಹುದು.
ಶಕಪುರುಷ ಶ್ರೀಸುಮತೀಂದ್ರತೀರ್ಥರು
ಕ್ರಿಶ ೧೬೯೨ ರಿಂದ ಕ್ರಿಶ ೧೭೨೫ರ ವರೆಗೆ ೩೩ ವರ್ಷಗಳಕಾಲ ಶ್ರೀಮದಾಚಾರ್ಯರ ಮೂಲ ಮಹಾ ಸಂಸ್ಥಾನದ ಪೀಠಾಧಿಪತಿಗಳಾಗಿ ವಿರಾಜಿಸಿದ ಶ್ರೀಸುಮತೀಂದ್ರತೀರ್ಥರು, ಅಸಾಧಾರಣವಾದ ಕಾರ್ಯಗಳಿಂದ, ಮಹಿಮೆಗಳಿಂದ ಸುಪ್ರಸಿದ್ಧರು. ಶ್ರೀಮಠದ ಭವ್ಯಪರಂಪರೆಯ ಮೆರಗನ್ನು ತಮ್ಮ ವಿಶಿಷ್ಟ ಪಾಂಡಿತ್ಯ, ವಾದಿದಿಗ್ವಿಜಯ, ಅನರ್ಘ್ಯ ಕವಿತಾಸಾಮರ್ಥ್ಯ, ಅಪ್ರತಿಮ ಗ್ರಂಥರಚನಾ ಕೌಶಲ, ಶ್ರೇಷ್ಠ ತಪಸ್ಸು, ಪಡೆದ ಸಿದ್ಧಿಗಳಿಂದ ಇವರ ಪ್ರತಿಭಾಸಾಮರ್ಥ್ಯಕ್ಕೆ ದ್ಯೋತಕವಾಗಿ ಸರ್ವಜ್ಞಪೀಠವನ್ನು ಇವರು ಅಲಂಕರಿಸಿದ ಮೇಲೆ ಮಹಾಸಂಸ್ಥಾನವು ಶ್ರೀಸುಮತೀಂದ್ರಮಠವೆಂದೇ ಸುಪ್ರಸಿದ್ಧವಾಯಿತು.
ಪೂರ್ಣಪ್ರಜ್ಞರ ಪೂರ್ಣಾನುಗ್ರಹಕ್ಕೆ ಪಾತ್ರರಾಗಿದ್ದ ಶ್ರೀಸುಮತೀಂದ್ರತೀರ್ಥರು ಅಪ್ರತಿಮ ವಾದಮಲ್ಲರಾಗಿದ್ದವರು. ಪೂರ್ವಿಕಗುರುಗಳಿಂದ ಬಳುವಳಿಯಾಗಿ ಬಂದಿದ್ದ ನ್ಯಾಯ, ಮೀಮಾಂಸೆ, ವ್ಯಾಕರಣ, ಅಲಂಕಾರ ಹೀಗೆ ಅನೇಕ ಶಾಸ್ತ್ರ ಪಾರಂಗತರು.
ಆರಣಿ ಸಂಸ್ಥಾನದಲ್ಲಿ ದಿಗ್ವಿಜಯ:
ಆರಣಿ ಸಂಸ್ಥಾನದ ಜಹಗೀರುದಾರನಾಗಿದ್ದ ಸುಭಾನುರಾಯ ಎಂಬುವವನು ಜ್ಯೋತಿಷ್ಮತಿ ತೈಲಪಾನದಿಂದ ಪಡೆದ ಪಾಂಡಿತ್ಯ, ಕವಿತಾ ಸಾಮರ್ಥ್ಯ ಹಾಗೂ ಬಾಹುಬಲದಿಂದ ಉನ್ಮತ್ತನಾಗಿದ್ದ. ಅವನು ಪಡೆದ ಸಿದ್ಧಿಗಳಿಂದ ಕೂಡಿದ್ದ ಅವನನ್ನು ಗೆದ್ದವರೇ ಇರಲಿಲ್ಲ! ಶ್ರೀಪಾದಂಗಳವರು ಆರಣಿಯ ಕಡೆಗೆ ದಿಗ್ವಿಜಯ ಬೆಳೆಸಿದಾಗ ಅವನು ಶ್ರೀಗಳಲ್ಲೂ ವಾಕ್ಯಾರ್ಥಕ್ಕೆ ಬಂದ. ಸತತ ೮ ದಿನಗಳು ವಾಕ್ಯಾರ್ಥದ ನಂತರ ಶ್ರೀಗಳವರಲ್ಲಿ ಸೋಲೊಪ್ಪಿ ಶರಣಾಗತನಾದ.
ಸಹಜವಾಗಿ ಪೀಠಾಧಿಪತಿಗಳಾದವರು ವ್ಯಾಕರಣಾದಿ ಶಾಸ್ತ್ರಗಳಲ್ಲಿ ನಿಷ್ಣಾತರಾಗಿರುವುದು ಸಹಜ ಕವಿತಾ ಸಾಮರ್ಥ್ಯ ಸನ್ಯಾಸಿಗಳಿಗೆ ಇರುವುದಿಲ್ಲ ಎಂದು ಬಗೆದು ಶ್ರೀಗಳವರನ್ನು ಹೇಗಾದರೂ ಮಾಡಿ ಜಯಿಸಲೇಬೇಕೆಂದು ಕಾವ್ಯಶಾಸ್ತ್ರದಲ್ಲಿ ಸ್ಪರ್ಧೆ ಹೂಡಿದ. ಅವನ ದುರಾಗ್ರಹವನ್ನು ಅರಿತ ಶ್ರೀಗಳು,
ಅನಾರಾಧ್ಯ ಕಾಳಿಂ ಅನಾಸ್ವಾದ್ಯ ಚೌಳಿಂ
ವೀನಾ ಮಂತ್ರತಂತ್ರೇ ಋತೇ ಶಬ್ದಚೌರ್ಯಾತ್ ।
ಪ್ರಪಂಚಪ್ರಸಿದ್ಧಪ್ರಬಂಧಂ ವಿಧಾತುಂ
ವಿರಿಂಚಪ್ರಪಂಚೇ ಮದನ್ಯ: ಕವಿ: ಕಃ ? ।।
ನಾವೇನೂ ಕಾಳಿಯ ಆರಾಧನೆ ಮಾಡಿಲ್ಲ, ಜ್ಯೋತಿಷ್ಮತಿ ತೈಲವನ್ನು ಸೇವಿಸಲಿಲ್ಲ, ತಾಮಸಿಕ ಮಂತ್ರ-ತಂತ್ರಗಳನ್ನೇನೂ ಮಾಡಲಿಲ್ಲ, ಬೇರೆ ಗ್ರಂಥೋಕ್ತ ಶಬ್ದಗಳನ್ನೇನೂ ಕದಿಯುವದಿಲ್ಲ, (ಆದರೂ) ಚತುರ್ಮುಖನ ಈ ಸೃಷ್ಟಿಯಲ್ಲಿ ಉತ್ತಮ ಕವಿತೆಯನ್ನು ರಚಿಸಲು ನಮಗಿಂತ ಉತ್ತಮರಾರಿದ್ದಾರೆ ? ನೋಡೋಣ,
ಎಂದು ಮಂದಹಾಸದಿಂದ ಶುದ್ಧ ಸಾತ್ವಿಕವಾದ ಶ್ರೀಮದಾಚಾರ್ಯರ ಮತಾನುಯಾಯಿಗಳಾದ ನಾವು ಎಂದಿಗೂ ಶ್ರೀಹರಿ-ವಾಯು-ಗುರುಗಳ ಕರುಣಾಪೂರ್ಣ ಅನುಗ್ರಹದೃಷ್ಟಿಯನ್ನು ಹೊರತು ಪಡಿಸಿ, ಶುದ್ಧವಾದ ಸಾತ್ವಿಕಮಾರ್ಗವನ್ನು ಬಿಟ್ಟು ಬೇರೆ ಯಾವುದರ ಅವಲಂಬನೆಯನ್ನೂ ಮಾಡಿಲ್ಲ, ಮಾಡುವುದಿಲ್ಲ, ಮಾಡಬಾರದು ಎಂಬ ಪರಿಶುಧ್ಧತತ್ತ್ವವನ್ನು ತಿಳಿಸಿ ಪಂಥಾಹ್ವಾನವನ್ನು ಸ್ವೀಕರಿಸಿದರು. ಮತ್ತೆ ಅನೇಕ ದಿನಗಳ ಕಾಲ ನಡೆದ ಕಾವ್ಯಗೋಷ್ಠಿಯಲ್ಲಿ ಸುಭಾನುರಾಯ ನಿರುತ್ತರನಾದ.
ಪರಿಶುದ್ಧವಾದ ರೀತಿಯಲ್ಲಿ, ಶ್ರೀಹರಿಯ ಒಲುಮೆಯಿಂದ ಒದಗಿ ಬಂದ ಸಾತ್ವಿಕವಾದ ಪ್ರತಿಭೆಗೂ, ಜ್ಯೋತಿಷ್ಮತಿ ತೈಲದಿಂದ, ವಾಮಮಾರ್ಗಗಳಿಂದ ಗಳಿಸಿಕೊಂಡ ಅಸಾತ್ವಿಕ ವಿದ್ಯೆಗೂ ವ್ಯತ್ಯಾಸವನ್ನು ಅರಿತವನಾಗಿ, ಶ್ರೀಗಳವರಲ್ಲಿ ಭಕ್ತಿಭಾವದಿಂದ ,
"ಪ್ರತಿಮಠಮುದರಂಭರಯೋ ಬಹವೋ ಹಂತ ವರ್ತ೦ತ ।
ಸುಮತಿಯತೇ ವಿತತಮತೇ ಭವತಾ ಸಮತಾಂ ಕಃ ಪುಮಾನಿಯೇತ ?"
ಪ್ರತಿ ಮಠ ಮಠಗಳಲ್ಲೂ ಅನೇಕ ಸನ್ಯಾಸಿಗಳಿದ್ದಾರೆ. ಆದರೇ ಶ್ರೀಸುಮತೀಂದ್ರತೀರ್ಥರೇ! ನಿಮ್ಮ ಸರಿಸಮಾನ ನಿಲ್ಲುವವರು ಯಾರಿದ್ದಾರೆ ??
ಎಂದು ಉದ್ಗರಿಸಿ ಶರಣಾಗತನಾದ. ಈ ದಿಗ್ವಿಜಯದ ದ್ಯೋತಕವಾಗಿ ರಾಹುಕೇತುವಾದ್ಯವನ್ನು, ಚಿತ್ರಾಸನದ್ವಯವನ್ನು ಸಮರ್ಪಿಸಿ ಕೃತಾರ್ಥನಾದ.
ಈ ಘಟನೆಯನ್ನು ಶ್ರೀರಾಘವೇಂದ್ರಕವಿ ರಚಿಸಿದ 'ಸಾರಸ್ವತ ಪರಿಣಯ'ದಲ್ಲಿ ಉಲ್ಲೇಖಿಸಿದ್ದಾನೆ. ಸುಭಾನುರಾಯನ ಪತ್ನಿಯು ಶ್ರೀಗಳಿಂದ ಬೇಡಿ ನಿತ್ಯ ಪೂಜೆಗಾಗಿ ಲಕ್ಷ್ಮೀಪ್ರತಿಮೆಯನ್ನು ಪಡೆದುಕೊಂಡಳು ಎನ್ನುವ ಉಲ್ಲೇಖವೂ ಇಲ್ಲಿದೆ.
ಶ್ರೀಪಾದಂಗಳವರು ಆರಣಿಯಿಂದ ಮುಂದೆ ದಿಗ್ವಿಜಯಯಾತ್ರೆಯನ್ನು ಬೆಳೆಸಿ ಕುಂಭಕೋಣ, ತಂಜಾವೂರು, ಮಧುರೈ ಪ್ರಾಂತ್ಯಗಳಲ್ಲಿ ಸಂಚಾರ ಕೈಕೊಂಡರು.
ಮಧುರೈ ಸಂಸ್ಥಾನದಲ್ಲಿ ದಿಗ್ವಿಜಯ:
ದಕ್ಷಿಣದ ಕಡೆಗೆ ದೇಶದಲ್ಲಿಯೇ ಹೆಚ್ಚು ಕಾಲ ಬೀಡು ಬಿಟ್ಟಿದ್ದ ಮಹಾ ಸಂಸ್ಥಾನವು ಕುಂಭಕೋಣಂ, ತಂಜಾವೂರು ಹಾಗೂ ಮಧುರೈ ಪ್ರಾಂತದಲ್ಲಿ ಅಲ್ಲಿನ ಅರಸರಿಂದ ವಿಶೇಷ ಆಶ್ರಯ ಪಡೆದುಕೊಂಡಿತ್ತು. ತಂಜಾವೂರು ಅರಸರ ಹಾಗೂ ಮಧುರೈಯ ಚೊಕ್ಕನಾಥನಾಯಕರ ಕಾಲದಲ್ಲಿ ಶ್ರೀಮಠಕ್ಕೆ ಅತ್ಯಂತ ಭಕ್ತಯಿಂದ ವರ್ತಿಸಿ ಶ್ರೀಮೂಲರಾಮರ ಪೂಜಾರಾಧನೆಗೆ ಯಾವುದೇ ಚ್ಯುತಿ ಬಾರದಂತೆ ಅನೇಕ ಕಾಣಿಕೆಗಳನ್ನು, ಗ್ರಾಮಗಳನ್ನು ಸಮರ್ಪಿಸರುವುದಕ್ಕೆ ಶಾಸನಗಳ ಉಪಲಬ್ಧಿ ಇದೆ. ಮಧುರೈ ಅರಸರ ಪಟ್ಟದ ರಾಣಿ ಮಂಗಮ್ಮಳಂತೂ ಧಾರ್ಮಿಕ ಸ್ವಭಾವದವಳು, ಅನೇಕ ವೈದಿಕರಿಗೆ, ಮಠ-ಮಾನ್ಯಗಳಿಗೆ ರಾಜಾಶ್ರಯವಿತ್ತ ಪುಣ್ಯಕೀರ್ತಿಶಾಲಿ.
ಶ್ರೀಸುಮತೀಂದ್ರತೀರ್ಥರು ಸಂಚಾರತ್ವೇನ ಮಧುರೈಗೆ ಆಗಮಿಸಿದಾಗ ಅವರನ್ನು ಸಂದರ್ಶಿಸಿದ ಮಹಾರಾಣಿಯವರು, ಶ್ರೀಗಳ ವಿಲಕ್ಷಣ ಅಲೌಕಿಕ ತೇಜಸ್ಸಿಗೆ, ಅವರ ಪ್ರವಚನ ಶೈಲಿಗೆ ಶರಣಾಗಿ ಅವರ ಅನುಗ್ರಹ ರಾಜ್ಯದ ಮೇಲೆ ಇರಬೇಕು ಎಂದು ಪ್ರಾರ್ಥಿಸುತ್ತಾಳೆ. ಶ್ರೀಪಾದಂಗಳವರು ಅಲ್ಲಿ ತಂಗಿದ್ದ ಕಾಲದಲ್ಲಿ ಅನೇಕ ಮತತ್ರಯ ವಿದ್ವತ್ಸಭೆಗಳನ್ನು, ಸಮ್ಮೇಳನಗಳನ್ನು ಮಧುರೈ ಸಂಸ್ಥಾನದಿಂದ ನಡೆಯುತ್ತಿರುತ್ತವೆ.
ಹೀಗೆ ಅನೇಕ ಮಾಧ್ವ ಪೀಠಾಧೀಶರ ಸಮ್ಮುಖದಲ್ಲಿ ಶ್ರೀರಂಗದಲ್ಲಿ ನಡೆದ ಮತತ್ರಯ ವಾಕ್ಯಾರ್ಥ ಸಭೆಯಲ್ಲಿ ಶ್ರೀಸುಮತೀಂದ್ರತೀರ್ಥರ ಪಾಂಡಿತ್ಯಕ್ಕೆ ವಿದ್ವತ್ಸಭೆಯಲ್ಲಿ ಉಪಸ್ಥಿತರಿದ್ದವರೆಲ್ಲರೂ ತಲೆದೂಗಿದರು. ಶ್ರೀಉತ್ತರಾದಿ ಮಠದ ಅಂದಿನ ಸ್ವಾಮಿಗಳಾದ ಶ್ರೀಸತ್ಯಪೂರ್ಣತೀರ್ಥರೂ ತಮ್ಮ ವಿದ್ಯಾಪಕ್ಷಪಾತಿತ್ವವನ್ನು ತೋರಿಸಿ ಮಠಬೇಧ ಮರೆತು "ನಿಮ್ಮ ಪಾಂಡಿತ್ಯ ಅಸದೃಶವಾದುದು, ಇಂದಿನಿಂದ ನಮ್ಮ ಗೌರವದ ದ್ಯೋತಕವಾಗಿ ಎರೆಡು ಗದ್ದುಗೆಗಳ ಮೇಲೆ ಕೂತು ಪಾಠ ಪ್ರವಚನ ನಡೆಸಬೇಕು" ಎಂದು ಶ್ರೀಸುಮತೀಂದ್ರತೀರ್ಥರನ್ನು ಗೌರವಿಸಿದರು.
ಶ್ರೀಗಳವರ ಪಾಂಡಿತ್ಯಕ್ಕೆ ಮನಸೋತ ಮಹಾರಾಣಿಯಾರಾದ ಮಂಗಮ್ಮನವರು ಶ್ರೀಪಾದಂಗಳವರಿಗೆ ತುಂಬಿದ ಸಭೆಯಲ್ಲಿ ಗೌರವಿಸಿ, ಈಶ್ವರ ಸಂವತ್ಸರದ ಮಾಘ ಶುದ್ಧ ಪೌರ್ಣಿಮೆಯಂದು (ಕ್ರಿ.ಶ ೧೬೯೮) ಅನೇಕ ಗ್ರಾಮಗಳನ್ನು, ದೇವಾಲಯಗಳನ್ನು ಶ್ರೀಗಳ ಸುಪರ್ದಿಗೆ ದಾನವಾಗಿ ಸಮರ್ಪಿಸಿ ಶಾಸನ ಬರೆಸಿದಳು. (ತೆಲುಗು ಲಿಪಿಯ ತಾಮ್ರ ಶಾಸನ ಲಭ್ಯವಿದೆ).
ಶ್ರೀಗಳವರಲ್ಲಿ ಅನವರತ ಭಕ್ತಿಯನ್ನು ಹೊಂದಿದ್ದ ಮಹಾರಾಣಿ ಮಂಗಮ್ಮಳು ಮಧುರೈನ ಪಾಂಡ್ಯ ಭೂಪತಿಗಳ ವಂಶಪಾರಂಪರ್ಯವಾಗಿ ಲಬ್ಧವಾಗಿದ್ದ, ಅಮೂಲ್ಯ ನವತ್ನಖಚಿತವಾದ, ರಮಾದೇವಿಯರ ವಿಶೇಷ ಸನ್ನಿಧಾನೋಪೇತರಾದ ಶ್ರೀನೀಳಾದೇವಿ ಕರಾರ್ಚಿತವಾದ ಶ್ರೀಭೂ-ದುರ್ಗಾ-ಸಮೇತ ಶ್ರೀವೈಕುಂಠ ವಾಸುದೇವರ ಪ್ರತಿಮೆಯನ್ನೂ ಹಾಗೂ ಕಲ್ಪವೃಕ್ಷವನ್ನು ಕೂಡ ಶ್ರೀಸುಮತೀಂದ್ರರ ಇಚ್ಛೆ ಹಾಗೂ ಅಣತಿಯಂತೆ ಮಹಾಸಂಸ್ಥಾನಕ್ಕೆ ಒಪ್ಪಿಸಿದ್ದೂ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ಐತಿಹಾಸಿಕ ಪ್ರಸಂಗ.
ಹೀಗೆ ಶ್ರೀಸುಮತೀಂದ್ರರಿಗೆ ಒಲಿದ ಶ್ರೀನೀಳಾದೇವಿ ಕರಾರ್ಚಿತವಾದ ಶ್ರೀಭೂ-ದುರ್ಗಾ-ಸಮೇತ ಶ್ರೀವೈಕುಂಠ ವಾಸುದೇವರ ಪ್ರತಿಮೆಯು ಇಂದಿಗೂ ಶ್ರೀರಾಘವೇಂದ್ರಸ್ವಾಮಿಗಳವರ ಮಹಾಸಂಸ್ಥಾನದಲ್ಲಿ ಸಂಸ್ಥಾನಮುಖ್ಯ ಪ್ರತಿಮೆಗಳಲ್ಲಿ ಒಂದಾಗಿ ಅರ್ಚನೆಗೊಳ್ಳುತ್ತಿರುವುದನ್ನು ಕಾಣಬಹುದು. ಈ ಐತಿಹಾಸಿಕ ಘಟನೆಯನ್ನು ಶ್ರೀಸುಮತೀಂದ್ರರ ಪ್ರಶಿಷ್ಯರೇ ಆಗಿರುವ ಶ್ರೀವಾದೀಂದ್ರತೀರ್ಥರು ತಮ್ಮ ಐತಿಹಾಸಿಕ ಕೃತಿಯಾದ 'ಅರ್ಚಾಗತಿಕ್ರಮದಲ್ಲಿ',
ಅನರ್ಘ್ಯಮಣಿಮಯ್ಯರ್ಚಾ ಶ್ರೀಭೂದುರ್ಗಾಸಮನ್ವಿತಾ ।
ಪಾಂಡ್ಯಭೂಪತಿಭಿರ್ದತ್ತಾ ಸುಮತೀಂದ್ರಯತೀಶೀತು: ।।
ಎಂದು ದಾಖಲಿಸಿದ್ದಾರೆ.
ಈ ಹಿಂದೆ ಶ್ರೀನರಹರಿ ತೀರ್ಥರು ಗಜಪತಿಯ ಬಂಢಾರದಿಂದ ಶ್ರೀಮದಾಚಾರ್ಯರ ಸಂಸ್ಥಾನಕ್ಕೆ ಶ್ರೀಮೂಲರಾಮಚಂದ್ರದೇವರ ಪ್ರತಿಮೆಯನ್ನು ತಂದರೇ, ಪಾಂಡ್ಯ ಅರಸರ ಬಂಢಾರದಿಂದ ಶ್ರೀವೈಕುಂಠ ವಾಸುದೇವರನ್ನು ಸಂಸ್ಥಾನಕ್ಕೆ ತಂದವರು ಶ್ರೀಸುಮತೀಂದ್ರತೀರ್ಥರು.
ರಾಜರಿಗೂ ರಾಜರು ವೇದಾಂತ ಸಾಮ್ರಾಜ್ಯದ ರಾಜರು :
ಮರಾಠರ ದೊರೆಯಾದ ಶಿವಾಜಿ ಮಹಾರಾಜರ ಮೊಮ್ಮಗನಾದ ಶಾಹು ಮಹಾರಾಜನು, ಶ್ರೀಸುಮತೀಂದ್ರತೀರ್ಥರ ಸಮಕಾಲೀನ. ಶ್ರೀಗಳವರ ಪೂರ್ವಾಶ್ರಮದಿಂದಲೂ ಇವನು ಅವರ ಸಂಪರ್ಕದಲ್ಲಿರುವ ಬಗ್ಗೆ ಸಾಕ್ಷಿಯಾಗಿ ಶ್ರೀಸುಮತೀಂದ್ರತೀರ್ಥರು ಪೂರ್ವಾಶ್ರಮದಲ್ಲಿ ಬರೆದ ಪತ್ರಿಕೆಗಳಿಂದ ತಿಳಿದುಬರುತ್ತದೆ. ಶಾಹು ಮಹಾರಾಜರ ಸಾಧನೆಗಳನ್ನು ಶ್ಲಾಘಿಸಿ ಶ್ರೀಗಳು ಪೂರ್ವಾಶ್ರಮದಲ್ಲಿ ಬರೆದಿದ್ದ 'ಜಯಘೋಷಣಾ ಪತ್ರಿಕೆ'ಯು ಇವರಿಬ್ಬರ ಮಧುರಮೈತ್ರಿಗೆ ಹಿಡಿದ ಕೈಗನ್ನಡಿ. ಪೂರ್ವಾಶ್ರಮದಲ್ಲೇ ಅವನಿಂದ ಸಮ್ಮಾನಿತರಾಗಿದ್ದ ಶ್ರೀಗಳು, ಆಶ್ರಮಾನಂತರ ಅವನ ಆಸ್ಥಾನಕ್ಕೆ ಆಹ್ವಾನದ ಮೇರೆಗೆ ಭೇಟಿ ಇತ್ತು, ಅವನಿಂದ ಅನೇಕ ಭೂಸ್ವಾಸ್ಥ್ಯಗಳನ್ನೂ ಪಡೆದ ದಾಖಲೆಗಳು ಉಪಲಬ್ಧವಿವೆ.
ತಮಿಳುನಾಡಿನ ಹಾಗೂ ಕರ್ನಾಟಕ ಪ್ರಾಂತ್ಯದ ಅನೇಕ ನಾಯಕರುಗಳು, ಸರದಾರರು, ಒಡೆಯರುಗಳ ಶ್ರೀರಘುಪತಿದೇವರ ಪೂಜಾರ್ಥವಾಗಿ, ಸೇವಾರ್ಥವಾಗಿ ಶ್ರೀರಘುಪತಿದೇವರ ಭಂಡಾರಕ್ಕೆ ಅನೇಕ ಗ್ರಾಮಗಳನ್ನು, ಭೂಪ್ರದೇಶಗಳನ್ನು, ದೇವಸ್ಥಾನ ಮಠಗಳನ್ನು ಇವರ ಕಾಲದಲ್ಲಿ ಸಮರ್ಪಿಸಿದ್ದರ ಕುರುಹಾಗಿ ಅನೇಕ ಶೀಲಾಶಾಸನಗಳು, ತಾಮ್ರ ಶಾಸನಗಳು ಇಂದಿಗೂ ಸುಸ್ಥಿತಿಯಲ್ಲಿ ಲಭ್ಯವಿವೆ.
ಅದರಂತೆಯೇ ಚಿತ್ರದುರ್ಗದ ಮದಕರಿನಾಯಕರ ಭರಮಣ್ಣ ನಾಯಕರೂ ಶ್ರೀಪಾದಂಗಳವರಲ್ಲಿ ಭಕ್ತಿಪೂರ್ವಕವಾಗಿ ಜಹಗೀರುಗಳನ್ನು ಸಮರ್ಪಿಸಿದ ಬಗ್ಗೆ ಶಾಸನಗಳಲ್ಲಿ ಮಾಹಿತಿ ದೊರೆಯುತ್ತವೆ.
ಶ್ರೀಗಳವರು ದುರ್ಗಕ್ಕೆ ಬಂದಾಗ ಘಟಿಸಿದ ಐತಿಹಾಸಿಕ ಕಾರ್ಯವೆಂದರೇ 'ಶ್ರೀಗುರುರಾಜರ ಮೃತ್ತಿಕಾ ವೃಂದಾವನ ಪ್ರತಿಷ್ಠಾಪನೆ. ಇಂದಿಗೂ ಆ ಮಠವನ್ನು ಕಾಣಬಹುದು. ತಮ್ಮ ಸ್ಮಾರಕವಾಗಿ ಪ್ರಾಣದೇವರ ಪ್ರತಿಷ್ಠೆಯನ್ನು ಮಾಡಿದನ್ನು ಅನೇಕ ನಿದರ್ಶನಗಳನ್ನೂ ಕಾಣಬಹುದು.
ಶ್ರೀರಂಗನಾಥನ ಸನ್ನಿಧಿಯಲ್ಲಿ ದುಷ್ಟಶಕ್ತಿಗಳ ಪ್ರತಿಬಂಧನ:
ರಾಜಾಧಿರಾಜರಿಂದ ಸಮ್ಮಾನಿತರಾಗಿ, ತಮ್ಮ ಅಲೌಕಿಕ ತೇಜಸ್ಸಿನಿಂದ, ತಪಃ ಪ್ರಭಾವದಿಂದ ವಿರಾಜಿಸಿದವರು ಶ್ರೀಸುಮತೀಂದ್ರತೀರ್ಥರು. ದಕ್ಷಿಣದಿಂದ ಉತ್ತರಾದ ಕಡೆಗೆ ಸಂಚರಿಸಿ ಶ್ರೀಪದ್ಮನಾಭಾದಿಯತಿಗಳ ಹಾಗೂ ಮಂತ್ರಾಲಯ ಪ್ರಭುಗಳೇ ಮೊದಲಾದ ಪ್ರಾಚೀನಾಚಾರ್ಯರ ಸಂದರ್ಶಿಸಿ ಮತ್ತೆ ದಕ್ಷಿಣದೇಶದೆಡೆಗೆ ತಮ್ಮ ಪರಮಗುರುಗಳಾದ ಶ್ರೀಯೋಗೀಂದ್ರತೀರ್ಥರ ದರ್ಶನ ಮಾಡಲು ಈಗಾಗಲೇ ಶ್ರೀಮಠದ ನಿಕಟ ಸಂಪರ್ಕದಲ್ಲಿದ್ದ ಶ್ರೀರಂಗ ಕ್ಷೇತ್ರಕ್ಕೆ ಬರುತ್ತಾರೆ.
ಶ್ರೀರಂಗದಲ್ಲಿ ಶಾಕ್ತೋಪಾಸಕ ಮಾಂತ್ರಿಕನೊಬ್ಬ ದುರುದ್ದೇಶದಿಂದ ಶ್ರೀರಂಗನಾಥನ ಕಳಾಕರ್ಷಣ ಮಾಡಿದ್ದ. ಅದರ ಪ್ರಭಾವದಿಂದ ದೇವರ ಮುಖದಲ್ಲಿನ ಕಾಂತಿಯೇ ಕ್ಷೀಣವಾಗಿತ್ತು. ಇದನ್ನು ನೋಡಿದ ಅರ್ಚಕರು ಶ್ರೀಸುಮತೀಂದ್ರತೀರ್ಥರನ್ನು ಪ್ರಾರ್ಥಿಸಿದಾಗ ಶ್ರೀಮನ್ಮೂಲರಾಮನ, ತದಭಿನ್ನನಾದ ಶ್ರೀನರಸಿಂಹದೇವರನ್ನು ಪ್ರಾರ್ಥಿಸಿ ಕೃಪಾಬಲದಿಂದ ಮಾಂತ್ರಿಕನು ಹೂಡಿದ್ದ ದುಷ್ಟ ಶಕ್ತಿಗಳ ಪ್ರತಿಬಂಧನ ಮಾಡಿ ತಮ್ಮ ತಪಃ ಪ್ರಭಾವವನ್ನು ತೋರಿಸಿ ಆ ಮಾಂತ್ರಿಕನು ಓಡಿಹೋಗುವಂತೆ ಮಾಡಿ, ದುಷ್ಟಶಕ್ತಿಗಳ ಪ್ರತಿಬಂಧಕ್ಕಾಗಿ ಶ್ರೀರಂಗನಾಥನೆದುರಿಗೆ ಶ್ರೀಮುಖ್ಯಪ್ರಾಣದೇವರ ಪ್ರತಿಷ್ಠೆಯನ್ನು ಮಾಡಿದರು. ಆ ಶ್ರೀಸುಮತೀಂದ್ರತೀರ್ಥ ಪ್ರತಿಷ್ಠಿತ ಪ್ರಾಣದೇವರನ್ನು ಇಂದಿಗೂ ಶ್ರೀರಂಗನಾಥನ ಎದುರು ನೋಡಬಹುದು. ಇಂತಹ ಪರಮಾದ್ಭುತ ತಪಸ್ಸು ಶ್ರೀಗಳವರದ್ದಾಗಿತ್ತು.
ಹರಿದಾಸ ಸಾಹಿತ್ಯದ ಪೋಷಕರು ಶ್ರೀಸುಮತೀಂದ್ರರು:
ಸಾಕ್ಷಾತ್ ಶ್ರೀಮದಾಚಾರ್ಯರಿಂದಲೇ ಸ್ಫೂರ್ತಿ ಪಡೆದು ಶ್ರೀನರಹರಿತೀರ್ಥರಾದಿಯಾಗಿ ಪ್ರವರ್ತಿತವಾದ ಹರಿದಾಸ ಸಾಹಿತ್ಯ ಪರಂಪರೆಯನ್ನು ಉಳಿಸಿ ಬೆಳಿಸುವದರಲ್ಲಿ ಶ್ರೀರಾಘವೇಂದ್ರ ಗುರುಸಾರ್ವಭೌಮರ ಮಠದ ಕೊಡುಗೆ ಅಪಾರ. ತಮ್ಮ ಪ್ರಾಚೀನಾಚಾರ್ಯರಂತೆಯೇ ಅದರ ಪೋಷಣೆಯನ್ನು ಮುಂದುವರೆಸಿಕೊಂಡು ಬಂದವರು ಶ್ರೀಸುಮತೀಂದ್ರ ತೀರ್ಥರು.
ಶ್ರೀಗಳವರು ತಮ್ಮ ಸಮಕಾಲೀನ ಹರಿದಾಸರಾಗಿದ್ದ ಅನೇಕ ಹರಿದಾಸರಿಗೆ ಆಶ್ರಯಭೂತರಾಗಿದ್ದವರು. ಶ್ರೀಜಗನ್ನಾಥದಾಸಾರ್ಯರ ತಂದೆಗಳಾಗಿದ್ದ ಶ್ರೀನರಸಿಂಹದಾಸರು ತಮ್ಮ ಕುಲಗುರುಗಳಾದ ಇವರಲ್ಲೇ ಶಿಷ್ಯತ್ವ ವಹಿಸಿದ್ದವರು. ಶ್ರೀಗಳು ದಾಸರಿಗೆ ತಮ್ಮ ದೇವರ ಪೆಟ್ಟಿಗೆಯಲ್ಲಿನ ನರಸಿಂಹ ಸಾಲಿಗ್ರಾಮವನ್ನು ಕೊಟ್ಟು ಅನುಗ್ರಹಿಸಿದ್ದರು. ಮುಂದೆ ದಾಸರು ಶ್ರೀಸುಮತೀಂದ್ರಸ್ವಾಮಿಗಳ ಕರಕಮಲ ಸಂಜಾತರಾದ ಶ್ರೀಉಪೇಂದ್ರತೀರ್ಥರಲ್ಲಿ ಶಿಷ್ಯತ್ವವನ್ನು ವಹಿಸಿದ್ದರು.
ಅಂದಿನ ಹರಿದಾಸ ವಾಂಗ್ಮಯದ ಅಧ್ಯಾಯದ ಪ್ರಸಿದ್ಧನಾಮ ಹೆಳವನಕಟ್ಟೆ ಗಿರಿಯಮ್ಮನವರದ್ದು. ಸರಿಯಾದ ಔಪಚಾರಿಕ ಶಿಕ್ಷಣವಿಲ್ಲದೇ, ಸಾಂಸಾರಿಕ ಆಸಕ್ತಿಗಳನ್ನು ಬದಿಗೊಡ್ಡಿ ಕೇವಲ ರಂಗನಾಥನ ಸೇವೆಯನ್ನೇ ಮಾಡುತ್ತಲಿದ್ದ ಗಿರಿಯಮ್ಮ ಶ್ರೀಸುಮತೀಂದ್ರತೀರ್ಥರನ್ನು ಸಂದರ್ಶಿಸಿ ಅವರ ವಿಶೇಷ ಅನುಗ್ರಹಕ್ಕೆ ಪಾತ್ರಳಾದ ವೃತ್ತಾಂತ ಬಹುಪ್ರಚಲಿತ.
ಶ್ರೀಗಳವರ ಶ್ರೀಮೂಲರಾಮದೇವರ ಪೂಜೆಯನ್ನು ಕಂಡು ಕೃತಾರ್ಥಳಾದ ಗಿರಿಯಮ್ಮಶ್ರೀಗಳವರ ಪೂಜೆಯಲ್ಲಿ ಕೌಸಲ್ಯಾನಂದನ ಶ್ರೀರಾಮಚಂದ್ರನು ಸಾಕ್ಷಾತ್ ನೆಲೆಸಿದ್ದನ್ನು ಕಣ್ತುಂಬಿಕೊಂಡು,
"ಸದಾನಂದ ಸುಮತೀಂದ್ರಹೃದಯ ಪಂಕಜಭೃಂಗ ।"
ಎಂದು ಶ್ರೀರಾಮಚಂದ್ರನನ್ನು ಸುಮತೀಂದ್ರಹೃದಯ ಪಂಕಜಭೃಂಗನೆಂದು ಕಂಡು ಕೀರ್ತನೆಯಲ್ಲಿ ಸ್ತೋತ್ರ ಮಾಡಿದ್ದಾರೆ. ಈ ಸ್ತೋತ್ರದಿಂದ ಸುಪ್ರೀತನಾಗಿ ಮಗುವಿನ ರೂಪದಲ್ಲಿ ಸಾಕ್ಷಾತ್ ರಾಮಚಂದ್ರನೇ ಶ್ರೀಗಳವರ ಎದುರೇ ಗಿರಿಯಮ್ಮನಿಗೆ ದರ್ಶನವಿತ್ತನಂತೆ. ಆ ಕೂಸನ್ನು ಶ್ರೀಗಳವರೂ ಮುದ್ದಿಸಿದರು ಎಂಬ ಐತಿಹ್ಯವಿದೆ. ಊರ ಮುಂದೆ ಒಬ್ಬ ಬಂಜೆ, ಒಬ್ಬ ಸಾಮಾನ್ಯ ಮಹಿಳೆಯಂತೆ ನಿರ್ಲಕ್ಷಿಸಲ್ಪಟ್ಟಿದ್ದ ಗಿರಿಯಮ್ಮನವರ ಅಪ್ರತಿಮ ಏಕಾಂತ ಸಾಧನೆಯನ್ನು ದಿವ್ಯಚಕ್ಷುಗಳಿಂದ ಗುರುತಿಸಿ "ನಮ್ಮ ರಾಮದೇವರನ್ನು ಎತ್ತಿ ಆಡಿಸುವವಳಮ್ಮ ನೀನು" ಎಂದು ಅವರಿಗೆ ಪ್ರಥಮ ಮುದ್ರಾಧಾರಣೆ ಹಾಗೂ ಪ್ರಥಮ ತೀರ್ಥವನ್ನು ಕರುಣಿಸಿ ಅನುಗ್ರಹಿಸಿ ಸ್ಫೂರ್ತಿಯನ್ನಿತ್ತ ಧೀಮಂತ ಕ್ರಾಂತಿಕಾರಿ ಯತಿಗಳು ಶ್ರೀಸುಮತೀಂದ್ರತೀರ್ಥರು. ಶ್ರೀಸುಮತೀಂದ್ರತೀರ್ಥರ ಪರಮಾನುಗ್ರಹದಿಂದ ಭಗವಂತನ ಸಾಕ್ಷಾತ್ಕಾರ ಪಡೆದ ಗಿರಿಯಮ್ಮನವರು ಸಾವಿರಾರು ಕೀರ್ತನೆಗಳನ್ನು ರಚಿಸಿ ಹರಿದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.
ಆಗಿನ ಕಾಲದ ಮತ್ತೊಬ್ಬ ಖ್ಯಾತ ಹರಿದಾಸರಾದ ಶ್ರೀಪ್ರಸನ್ನವೆಂಕಟದಾಸರೂ ಶ್ರೀಸುಮತೀಂದ್ರತೀರ್ಥ ತಪಸ್ಸು, ಜ್ಞಾನ, ಕೀರ್ತಿ, ಪ್ರಭಾವಗಳನ್ನು ಕೇಳಿ ಇವರಲ್ಲಿ ಬಂದು ಇವರ ಅನುಗ್ರಹವನ್ನು ಪಡೆದವರೇ. ಅವರು ಶ್ರೀಗಳ ವಿಲಕ್ಷಣವಾದ ಅಲೌಕಿಕ ವ್ಯಕ್ತಿತ್ವವನ್ನು ತಮ್ಮ ಕೀರ್ತನೆಗಳಲ್ಲಿ ವರ್ಣಿಸಿದ್ದಾರೆ,
ತಮ್ಮದೊಂದು ಕೀರ್ತನೆಯಲ್ಲಿ,
"ಶರಣು ಮುನಿಪ ಮಣಿಯೇ ಸುಮತೀಂದ್ರ ।
ಕರುಣಾಮೃತದ ಖಣಿಯೇ ।।
ಶರಣೆಂದವರಿಗೆ ವರಚಿಂತಾಮಣಿಯೇ
ಧರೆಯ ಮೇಲಿನೊಬ್ಬ ದೊರೆ ನಿನಗೆಣೆಯೇ ।। ಪ ।।"
ಎಂದು ಹಾಗೂ ,
" ಸಲಹು ಸುಖತೀರ್ಥಮತ ಜಲಧಿಚಂದ್ರ ।
ನಳಿನೀಶಾರ್ಚಕ ಇಂದ್ರ ಇಳೆಗೆ ಸುಮತೀಂದ್ರ ಸಲಹು ।। "
ಎಂದು ಮತ್ತೊಂದು ಕೀರ್ತನೆಯಲ್ಲಿ ಹೀಗೆ ತಾವು ಕಂಡ ಶ್ರೀಸುಮತೀಂದ್ರಸ್ವಾಮಿಗಳ ಮಹಾ ವೈಭವ, ಅವರ ವಿದ್ಯಾವೈಭವ, ಅವರ ಭಕ್ತವಾತ್ಸಲ್ಯ ಇತ್ಯಾದಿ ಗುಣಗಳನ್ನು ಭಕ್ತಿಪೂರ್ವಕವಾಗಿ ಸ್ತೋತ್ರ ಮಾಡಿ ದಾಖಲಿಸಿದ್ದಾರೆ.
ಹೀಗೆ ಶ್ರೀನರಸಿಂಹದಾಸರು, ಶ್ರೀಪ್ರಸನ್ನವೆಂಕಟದಾಸರು, ಹೆಳವನಕಟ್ಟೆ ಗಿರಿಯಮ್ಮ ಮುಂತಾದ ಹರಿದಾಸ ವಾಂಗ್ಮಯದ ಧುರೀಣರಿಗೆ ಪ್ರೋತ್ಸಾಹಿಸಿ ಪರಮಾನುಗ್ರಹ ಮಾಡಿ ಹರಿದಾಸ ಸಾಹಿತ್ಯದ ಬೆಳವಣಿಗೆಗೆ ತಮ್ಮ ಕಾಲದಲ್ಲಿ ವಿಶೇಷ ಅನುಗ್ರಹ ಮಾಡಿದವರು ಶ್ರೀಸುಮತೀಂದ್ರತೀರ್ಥರು. ಶ್ರೀಸುಮತೀಂದ್ರತೀರ್ಥರ ಕಾಲವನ್ನು ಹರಿದಾಸ ವಾಂಗ್ಮಯದ ಸುವರ್ಣಯುಗದ ಪೂರ್ವ ಪೀಠಿಕೆಯಾಗಿ ಭದ್ರಬುನಾದಿಯನ್ನಿತ್ತ ಕಾಲ ಎನ್ನುವುದರಲ್ಲಿ ಸಂಶಯವಿಲ್ಲ.
ಶ್ರೀಗಳವರ ಪಾಂಡಿತ್ಯ, ಕವಿತಾ ಸಾಮರ್ಥ್ಯ ಹಾಗೂ ಗ್ರಂಥರಚನಾ ಕೌಶಲ:
ಶ್ರೀಸುಮತೀಂದ್ರತೀರ್ಥರು ಶ್ರೀಮಠದ ಪರೆಂಪರೆಯಲ್ಲಿ ೧೪ ಬಾರಿ ಶ್ರೀಮನ್ನ್ಯಾಯಸುಧಾ ಮಂಗಲವನ್ನು ಆಚರಿಸಿದ ಮಹಾನುಭಾವರು. ವಿದ್ಯಾಮಠದ ಅಧಿಪತಿಗಳಾಗಿ ಸಮಸ್ತ ಮಾಧ್ವರ ಅಘೋಷಿತ ಪ್ರತಿನಿಧಿಗಳಂತೆ, ಸಮಸ್ತ ಮಾಧ್ವರ ಮುಖವಾಣಿಯಂತೆ ಕಂಗೊಳಿಸಿದವರು. ಶ್ರೀಸುಮತೀಂದ್ರತೀರ್ಥರ ಪ್ರತಿಭಾಸಾಮರ್ಥ್ಯಗಳನ್ನು ಮನಗಾಣದವರು ಅವರ ಕಾಲದಲ್ಲಿ ಯಾರೂ ಇರಲಿಲ್ಲ. ಸ್ವಮತ - ಪರಮತ ಹೀಗೆ ಸರ್ವರಿಂದಲೂ ಮಾನ್ಯರಾದವರು ಶ್ರೀಸುಮತೀಂದ್ರಪ್ರಭೃತಿಗಳು.
ಶ್ರೀರಾಘವೇಂದ್ರಸ್ವಾಮಿಗಳವರ ನಂತರದಲ್ಲಿ ಅತೀ ಹೆಚ್ಚು ಗ್ರಂಥಗಳನ್ನು ರಚಿಸಿದ ಮಹಾನ್ ಕೀರ್ತಿ ಶ್ರೀಸುಮತೀಂದ್ರತೀರ್ಥರಿಗೆ ಸಲ್ಲುತ್ತದೆ.
ಒಟ್ಟು ೪೨ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಮಹಾನುಭಾವರು ಶ್ರೀಸುಮತೀಂದ್ರತೀರ್ಥರು.
ಋಗ್ಭಾಷ್ಯಟೀಕಾ-ಭಾವರತ್ನಕೋಶ
ಬ್ರಹ್ಮಸೂತ್ರಭಾಷ್ಯ - ತತ್ತ್ವಪ್ರಕಾಶಿಕಾ - ಭಾವರತ್ನಕೋಶ -
ವಾಕ್ಯಾರ್ಥಕೋಶ - ನ್ಯಾಯಸುಧಾ ಟಿಪ್ಪಣಿ
ಗೀತಾಭಾಷ್ಯಪ್ರಮೇಯದೀಪಿಕಾ-ಭಾವರತ್ನಕೋಶ -
ಶ್ರೀಸುಧೀಂದ್ರಯತಿಕೃತ ಬ್ರಹ್ಮಸೂತ್ರನ್ಯಾಯಸಂಗ್ರಹ ವ್ಯಾಖ್ಯಾನ
ಪ್ರಮಾಣಪದ್ಧತಿ ವ್ಯಾಖ್ಯಾನ
ವಾದಾವಲಿ ಟಿಪ್ಪಣಿ
ತಾತ್ಪರ್ಯಚಂದ್ರಿಕಾ ಟಿಪ್ಪಣಿ
ನ್ಯಾಯಾಮೃತಭೂಷಣಂ
ಭೇದೋಜ್ಜೀವನ ಟಿಪ್ಪಣಿ
ವಿರೋಧೋದ್ಧಾರ
ಮಂತ್ರರತ್ನಕೋಶ
ಶ್ರೀರಾಮತಾರಾವಲಿ
ಶ್ರೀರಾಮಗುಣಾವಲಿ
ಶ್ರೀರಾಮದಂಡಕ - ಸ್ವಕೃತ ವ್ಯಾಖ್ಯಾನ ಸಹಿತ
ಶ್ರೀನೃಸಿಂಹಸ್ತುತಿ ವ್ಯಾಖ್ಯಾನ - ಏಕಾವಲಿ
ಶ್ರೀವಿಜಯೀಂದ್ರಯತಿಕೃತ ನೃಸಿಂಹಾಷ್ಟಕ ವ್ಯಾಖ್ಯಾನ
ರಾಘವೇಂದ್ರಸ್ತೋತ್ರ ವ್ಯಾಖ್ಯಾನ
ಚತುರ್ವಿಂಶತಿಮೂರ್ತಿ ಸ್ತುತಿಃ
ಉಷಾಹರಣದೀಪಿಕಾ (ರಸರಂಜಿನಿ)
ಅಲಂಕಾರಮಂಜರಿ ವ್ಯಾಖ್ಯಾನ (ಮಧುಧಾರಾ)
ಸುಭದ್ರಾಪರಿಯಾಣಯನಾಟಕ ವ್ಯಾಖ್ಯಾನ
ವ್ಯಾಸರಾಜವಿಜಯ ವ್ಯಾಖ್ಯಾನ
ರಾಘವೇಂದ್ರವಿಜಯ ವ್ಯಾಖ್ಯಾನ
ತಂತ್ರಸಾರೋಕ್ತ ದೇವಪೂಜಾ ಪದ್ಧತಿಃ
ಹನುಮತ್ಪೂಜಾ ಪದ್ಧತಿಃ
ಪ್ರಾಣಪೂಜಾ ಪದ್ಧತಿಃ
ಭೂಗೋಲಸಂಗ್ರಹಃ
ಶ್ರವಣದ್ವಾದಶೀನಿರ್ಣಯಃ
ಯೋಗಿಂದ್ರತಾರಾವಲಿ
ಅಭಿನವ ಕಾದಂಬರಿ
ಬಿರುದಾವಲಿ
ಶಾಹುರಾಜವಿಜಯಃ
ಜಯಘೋಷಣಾ
ಚಕ್ರವಾಲ ಪ್ರಬಂಧ
ಶ್ರೀಮದಾಚಾರ್ಯರ ಪೂರ್ಣಸನ್ನಿಧಾನ, ಶ್ರೀಮಟ್ಟೀಕಾಕೃತ್ಪಾದರ ವಾಗ್ವೈಭವ, ಶ್ರೀವಿಬುಧೇಂದ್ರತೀರ್ಥರ ವಾದಿದಿಗ್ವಿಜಯ ಸಾಮರ್ಥ್ಯ, ಶ್ರೀಜಿತಾಮಿತ್ರತೀರ್ಥರ ವೈರಾಗ್ಯ, ಶ್ರೀಸುರೇಂದ್ರ ತೀರ್ಥರ ತಪಸ್ಸು, ಶ್ರೀವಿಜಯೀಂದ್ರ ತೀರ್ಥರ ಚಾತುರ್ಯ, ಶ್ರೀವಾದಿರಾಜರ ಕವಿತ್ವ, ಶ್ರೀಸುಧೀಂದ್ರತೀರ್ಥರ ಕುಶಾಗ್ರಮತಿ, ಶ್ರೀರಾಘವೇಂದ್ರತೀರ್ಥರ ಗ್ರಂಥರಚನಾಸಾಮರ್ಥ್ಯ ಇವೆಲ್ಲವೂ ಶ್ರೀಸುಮತೀಂದ್ರತೀರ್ಥರಲ್ಲಿ ಏಕತ್ರದಲ್ಲಿ ಸಮ್ಮಿಳಿತಗೊಂಡಿದ್ದವು.
ಶ್ರೀಮದಾಚಾರ್ಯರ ಗ್ರಂಥಗಳಿಗೆ ವ್ಯಾಖ್ಯಾನಿಸಿದ ಪೂರ್ವಿಕರಾದ ಶ್ರೀಮಜ್ಜಯತೀರ್ಥಗುರುಸಾರ್ವಭೌಮರ ಗ್ರಂಥಗಳಿಗೆ ಇವರು ರಚಿಸಿದ ಭಾವರತ್ನಕೋಶಾದಿ ಟಿಪ್ಪಣಿಗಳು ಪ್ರತಿಪದಾರ್ಥನಿರೂಪಣೆ, ಬೇರೆ ಬೇರೆ ವ್ಯಾಖ್ಯಾನಗಳಲ್ಲಿ ಅಭಿಪ್ರೇತ ವಿಷಯಗಳ ಉತ್ತಮ ವಿಮರ್ಶೆ, ಪೂರ್ವಾಚಾರ್ಯೋಕ್ತವಾದ ಅಭಿಪ್ರಾಯ ಸಮರ್ಥನಾ, ಪೂರ್ವಾಚಾರ್ಯರಿಂದ ಉಕ್ತಿಗಳಿಗೆ ಸ್ಪಷ್ಟಾರ್ಥನಿರೂಪಣಾ, ಅನೇಕ ಪದಪಂಕ್ತಿಗಳಿಗೆ ಅಪೂರ್ವಾರ್ಥ ಆವಿಷ್ಕಾರ ಮುಂತಾದ ಗುಣಗಳಿಂದ ವಿಭೂಷಿತವಾಗಿ ವಿದ್ವತ್ಪ್ರಪಂಚದಲ್ಲಿ ಅತ್ಯಂತ ವಿಶಿಷ್ಟ ಸ್ಥಾನ ಪಡೆದುಕೊಂಡಿವೆ.
ಅನೇಕ ಸ್ವತಂತ್ರ ಗ್ರಂಥಗಳು ಟಿಪ್ಪಣಿಗ್ರಂಥಗಳು ಹಾಗೂ ಅನೇಕ ಸ್ತೋತ್ರಗಳು, ಲಘುಕಾವ್ಯಗಳೆನ್ನಬಹುದಾದ ಸ್ತೋತ್ರಪ್ರಕಾರಗಳಲ್ಲಿಯೇ ವಿಶಿಷ್ಟ ಪ್ರಕಾರವೆನಿಸುವ ರಾಮತಾರಾವಲಿ, ಯೋಗಿಂದ್ರತಾರಾವಲಿಯಂತಹ ತಾರಾವಲಿ, ದಂಡಕಗಳು ಕೃತಿಗಳು. ಪೂರ್ವಾಚಾರ್ಯರು ಮಾಡಿದ ಸ್ತೋತ್ರಕ್ಕೆ ಬಹ್ವರ್ಥಗರ್ಭಿತ ಗಹನ ವ್ಯಾಖ್ಯಾನಗಳು. ಭೂಗೋಳಸಂಗ್ರಹದಂತಹ ವಿಶಿಷ್ಟ ಕೃತಿಗಳು. ದೇವಪೂಜಾಪದ್ಧತಿ, ಮಂತ್ರರತ್ನಕೋಶದಂತಹ ಆಹ್ನಿಕಗ್ರಂಥಗಳು, ಶ್ರವಣದ್ವಾದಶಿನಿರ್ಣಯದಂತಹ ನಿರ್ಣಯ ಗ್ರಂಥಗಳು, ಉತ್ತಮ ಕಾವ್ಯಗಳಿಗೆ ಉತ್ಕೃಷ್ಟ ಟಿಪ್ಪಣಿಗಳು. ಹೀಗೆ ಸರಿ ಸಾಟಿಯಿಲ್ಲದ ಗ್ರಂಥರಾಶಿಯ ನಿರ್ಮಾತೃಗಳು ಶ್ರೀಸುಮತೀಂದ್ರತೀರ್ಥರು.
ತಮ್ಮ ಕವಿತಾಸಾಮರ್ಥ್ಯದಲ್ಲಿ ಶ್ರೀಗಳು ಆಡುವ ಅಧಿಕಾರಯುತ ಮಾತುಗಳು ಅವರ ದಿಟ್ಟತನವನ್ನು ತೆರೆದಿಡುತ್ತವೆ, ಶ್ರೀಸುಧೀಂದ್ರತೀರ್ಥರ 'ಸುಭದ್ರಾಪರಿಯಾಣಯನಾಟಕ'ಕ್ಕೆ ವ್ಯಾಖ್ಯಾನಿಸುವಾಗ,
ಮಯಾ ವಿನಾ ಮಲಂ ಮಲಂ ಧುನಾತಿ ಕೋ ವಿನಾ ಸುಧೀಂದ್ರಸೂಕ್ತಿಷು
ಸುಧೀಂದ್ರಸ್ವಾಮಿಗಳ ವಾಕ್ಯಗಳಿಗೆ ವ್ಯಾಖ್ಯಾನಮಾಡಲು ನಮ್ಮನ್ನು ಹೊರತು ಪಡಿಸಿ ಇನ್ನಾರು ಸಮರ್ಥರು ?
ಎಂದು ತಮ್ಮ ಅಸಾಧಾರಣ ಪ್ರತಿಭೆಯನ್ನು ತೋರಿಸಿದ್ದಾರೆ.
ಇಂತಹ ಅಪೂರ್ವವಾದ ಅನೇಕಾನೇಕ ಗ್ರಂಥಗಳನ್ನು ಕರುಣಿಸಿದ ಮಹಾನುಭಾವರು ಶ್ರೀಸುಮತೀಂದ್ರತೀರ್ಥರು. ಇವರ ಅನೇಕ ಗ್ರಂಥಗಳು ಮಂತ್ರಾಲಯ ಶ್ರೀರಾಘವೇಂದ್ರಮಠದಿಂದ ಹಾಗೂ ಪೂರ್ಣಪ್ರಜ್ಞ ಸಂಶೋಧನಾ ಮಂದಿರವೇ ಮುಂತಾದ ಮಾಧ್ವ ವಿದ್ಯಾ ಸಂಸ್ಥೆಗಳಿಂದ ಪ್ರಕಾಶಿತಗೊಂಡಿವೆ. ಇನ್ನೂ ಹಲವು ಗ್ರಂಥಗಳು ಹಸ್ತಪ್ರತಿಯ ರೂಪದಲ್ಲೇ ಉಳಿದಿದ್ದರೇ ಇತರ ಅನೇಕ ಗ್ರಂಥಗಳು ದುರಾದೃಷ್ಟವಶಾತ್ ಅನುಪಲಬ್ಧವಾಗಿರುವುದು ನಮ್ಮೆಲ್ಲ ದೌರ್ಭಾಗ್ಯ.
ಉಪಸಂಹಾರ:
ಶ್ರೀಮದಾಚಾರ್ಯರಿಂದ ಪ್ರವರ್ತಿತವಾದ ಸದ್ವೈಷ್ಣವ ಪರಂಪರೆಯಲ್ಲಿ ಶತಶತಮಾನಗಳ ಪರ್ಯಂತ ಅನೇಕಾನೇಕ ವಿಭೂತಿಪುರುಷರು ಅವತರಿಸಿ, ತಮ್ಮ ತಪಸ್ಸು, ಜ್ಞಾನಗಳಿಂದ ಸಜ್ಜನೋದ್ಧಾರ ತತ್ಪರರಾಗಿ ಅನುಗ್ರಹ ಮಾಡಿದ್ದಾರೆ. ಹಾಗೆ ಅವತರಿಸಿ ಬಂಡ ವಿದ್ವದ್ವಿಭೂತಿಗಳಲ್ಲಿ ಕಂಗೊಳಿಸುವ ಧೃವನಕ್ಷತ್ರ ಶ್ರೀಸುಮತೀಂದ್ರಗುರುಸಾರ್ವಭೌಮರು.
ಕ್ರಿ.ಶ ೧೬೯೨ ರಿಂದ ಕ್ರಿ.ಶ ೧೭೨೫ ರ ವರೆಗೆ ೩೩ ವರ್ಷಗಳ ಕಾಲ ಶ್ರೀಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಶ್ರೀರಾಘವೇಂದ್ರಗುರುಸಾರ್ವಭೌಮರ ವಿದ್ಯಾಮಠದ ಅಧಿಪತಿಗಳಾಗಿ ವಿಲಕ್ಷಣವಾಗಿ ಮೆರೆದ ಶ್ರೀಸುಮತೀಂದ್ರಗುರುಸಾರ್ವಭೌಮರು, ತಮ್ಮ ಶಿಷ್ಯಾಗ್ರಗಣ್ಯರಾಗಿದ್ಧ ಶ್ರೀವಿಜಯೀಂದ್ರಾಚಾರ್ಯರಿಗೆ ಚತುರ್ಥಾಶ್ರಮವನ್ನು ದಯಪಾಲಿಸಿ 'ಶ್ರೀಉಪೇಂದ್ರತೀರ್ಥರು' ಎಂಬ ಅಭಿಧಾನವನ್ನಿತ್ತು ವೇದಾಂತಸಾಮ್ರಾಜ್ಯ ಪಟ್ಟಾಭಿಷೇಕ ಮಾಡಿ ಕ್ರಿ.ಶ ೧೭೨೫ರಲ್ಲಿ ತಮ್ಮ ಪರಮಗುರುಗಳಾದ ಶ್ರೀಯೋಗಿಂದ್ರತೀರ್ಥರ ಪಕ್ಕದಲ್ಲೇ ಶ್ರೀರಂಗ ಕ್ಷೇತ್ರದಲ್ಲಿ ವೃಂದಾವನಸ್ಥರಾಗುತ್ತಾರೆ.
ಅವರ ವ್ಯಕ್ತಿತ್ವಕ್ಕೆ ತಕ್ಕಂತೆ ಅವರ ಚರಮ ಶ್ಲೋಕವಿದೆ.
ಪೂರ್ಣಪ್ರಜ್ಞಮತಾಂಭೋಧಿ ಪೂರ್ಣೇಂದುಮಕಲಂಕಿನಂ ।
ಸುಜನಾಂಬುಧಿಭಾಸ್ವಂತಂ ಸುಮತೀಂದ್ರಗುರುಂ ಭಜೇ ।।
ಇಂತಹ ಶ್ರೀರಾಯರಂತಹ ವಿಭೂತಿಪುರುಷರಿಂದ ವೇದಾಂತವಿದ್ಯಾ ಸಂಪತ್ತನ್ನು ಪಡೆದ ಶ್ರೀಸುಮತೀಂದ್ರತೀರ್ಥರಂತಹ ದೇವತೆಗಳ ಮಹಿಮೆ ತಿಳಿಯುವ ಯೋಗ್ಯತೆಯೂ ನಮ್ಮದಲ್ಲ. ಅದಕ್ಕೆ ಶ್ರೀಉಪೇಂದ್ರತೀರ್ಥರು ಶ್ರೀವಾದೀಂದ್ರತೀರ್ಥರೇ ಸರಿ.
ಶ್ರೀಕೃಷ್ಣಾರ್ಪಣಮಸ್ತು
No comments:
Post a Comment