ರಾಜಾಧಿರಾಜ-ಕೋಟಿರ-ಕೋಟಿ-ಕೂಟಾರ್ಚಿತಾಂಘ್ರಯೇ ಶ್ರೀಸುಧೀಂದ್ರಯತಯೇ ನಮೋ ನಮಃ
'ಜಗದ್ಗುರು ಶ್ರೀಸುಧೀಂದ್ರತೀರ್ಥರು'
ಶ್ರೀಹಂಸನಾಮಕನ ಸತ್ಪರಂಪರೆಯಲ್ಲಿ, ಶ್ರೀಮನ್ಮಧ್ವಾಚಾರ್ಯರಿಂದ ಹದಿನೈದನೇಯ ಪೀಠಾಧಿಪತಿಗಳಾಗಿ ಶ್ರೀಮನ್ಮಧ್ವಮತವನ್ನು ವಿಶಿಷ್ಟ ಆಯಾಮದಲ್ಲಿ ಪ್ರತಿಷ್ಠಾಪನೆ ಮಾಡಿದವರೇ ಶ್ರೀಸುಧೀಂದ್ರತೀರ್ಥರು.
ಸಕಲವಿದಜನಕುಮುದವನ ಕೌಮುದೀಶರಾದ, ಭಗವಂತನ ವಿಶಿಷ್ಟಕರುಣೆಗೆ ಪಾತ್ರರಾದ, ಶ್ರೀಸುರೇಂದ್ರತೀರ್ಥರೇ ಇವರ ಆಶ್ರಮ ಗುರುಗಳು, ಚತುಷ್ಷಷ್ಟಿಕಲಾಪ್ರಾವೀಣ್ಯದಿಂದ ಆಸ್ತಿಕ್ಯವನ್ನು ಪುಷ್ಟೀಕರಿಸಿದ, ಚತುರಧಿಕಶತಗ್ರಂಥರತ್ನಪ್ರಣೇತರಾದ (104 ಗ್ರಂಥಗಳನ್ನು ಕರುಣಿಸಿದ),ಚಾತುರ್ಯಕ್ಕೆ ಹೆಸರಾದ ಶ್ರೀವಿಜಯೀಂದ್ರತೀರ್ಥ ಗುರುಸಾರ್ವಭೌಮರು ಇವರ ಗುರುಗಳಾದರೇ,ನಾಸ್ತಿಕ್ಯವನ್ನು ಒದ್ದೋಡಿಸಿದ, ಆಸ್ತಿಕರ ಆರಾಧ್ಯರಾದ, ಶ್ರೀಮನ್ಮಧ್ವಮತಸಂವರ್ಧಕರಾದ ಶ್ರೀಮನ್ಮಂತ್ರಾಲಯಪ್ರಭುಗಳು,ಹಾಗೂ ತಪಸ್ವಿಗಳಾದ ಗ್ರಂಥಕಾರರಾದ ಶ್ರೀಯಾದವೇಂದ್ರತೀರ್ಥರು ಇವರ ವಿದ್ಯಾಶಿಷ್ಯರು, ಆಶ್ರಮಶಿಷ್ಯರು.
ಇಂತಹ ಲೋಕೋತ್ತರ ಕಾರ್ಯಗಳನ್ನು ಮಾಡಿದ ಗುರುಗಳನ್ನೂ, ಶಿಷ್ಯರನ್ನು ಪಡೆದ ಸ್ವಯಂ ಲೋಕೋತ್ತರ ಮಹಿಮೆಯನ್ನು ಹೊಂದಿದ ಮಹಾನುಭಾವರು ಶ್ರೀಸುಧೀಂದ್ರತೀರ್ಥರು.
ಶ್ರೀಸುಧೀಂದ್ರತೀರ್ಥರ ಆಶ್ರಮ:
ಶ್ರೀವ್ಯಾಸರಾಜರು ಬಾಲಸನ್ಯಾಸಿಗಳಾದ ಶ್ರೀವಿಷ್ಣುತೀರ್ಥರನ್ನು ಮೂಲರಾಮದೇವರ ಪೂಜಾರ್ಥವಾಗಿಯೇ ಶ್ರೀಸುರೇಂದ್ರ ತೀರ್ಥರಿಗೊಪ್ಪಿಸಿದಾಗ, ಸಂತುಷ್ಟರಾದ ಶ್ರೀಸುರೇಂದ್ರತೀರ್ಥರು ಅವರನ್ನು ಶ್ರೀಮಠದ ಸಂಪ್ರದಾಯಾನ್ವಯ ವಿದ್ಯುಕ್ತವಾಗಿ ದಂಡಪಲ್ಲಟಿಸಿ ಶ್ರೀವಿಜಯೀಂದ್ರತೀರ್ಥರು ಎಂಬ ಅಭಿದಾನವನ್ನು ದಯಪಾಲಿಸಿ ತಮ್ಮ ಪಟ್ಟದ ಶಿಷ್ಯರನ್ನಾಗಿ ಸ್ವೀಕಾರ ಮಾಡಿದರು.
ಶ್ರೀಮನ್ಮಧ್ವಾಚಾರ್ಯರಿಂದ, ಶ್ರೀಸುರೇಂದ್ರತೀರ್ಥರ ವರೆಗೆ ಅನೂಚಾನವಾಗಿ, ಅವಿಚ್ಛಿನ್ನವಾಗಿ ನಡೆದುಬಂದಿದ್ದ ಕರಕಮಲಸಂಜಾತತ್ವ ತಪ್ಪಿ ಹೋಯಿತು ಎನ್ನುವ ಅಪವಾದ ಮುಂದಿನ ದಿನಗಳಲ್ಲಿ ಬಂದೀತೆಂದು, ಅದರ ಪರಿಹಾರಕ್ಕಾಗಿ ನಾರಾಯಣಾಚಾರ್ಯರನ್ನು ವಿದ್ಯುಕ್ತವಾಗಿ ಸನ್ಯಸ್ತರನ್ನಾಗಿ ಮಾಡಿ, ಶ್ರೀವಿಜಯೀಂದ್ರತೀರ್ಥಗುರುಸಾರ್ವಭೌಮರಿಗೆ ಅವರನ್ನು ದಯಪಾಲಿಸಿದರು ಅವರೇ ಶ್ರೀಸುಧೀಂದ್ರತೀರ್ಥರು.
ಅರವತ್ನಾಲ್ಕು ವಿದ್ಯೆಗಳಲ್ಲಿ ಪ್ರವೀಣರು, ಕುಶಾಗ್ರಮತಿಗಳು, ವಾದಸಂಗರದಲ್ಲಿ ಪರವಾದಿಗಳಿಗೆ ಭೀತಿಯನ್ನುಂಟು ಮಾಡುವವರು ಶ್ರೀಸುಧೀಂದ್ರತೀರ್ಥರು.
ಈ ಘಟನೆಯನ್ನು ಶ್ರೀವಾದೀಂದ್ರತೀರ್ಥರು ತಮ್ಮ "ಶ್ರೀರಾಘವೇಂದ್ರಮಠಾಗತಾರ್ಚಾ-ಗತಿಕ್ರಮ" ಎಂಬ ಐತಿಹಾಸಿಕ ಕೃತಿಯಲ್ಲಿ
ಸುರೇಂದ್ರಃ ಸಾಂಪ್ರದಾಯಾಪ್ತನ್ಯಾಸವಿಚ್ಛೇದ ಬೀರುಕಃ |ಸುಧೀಂದ್ರಂ ನ್ಯಾಸಯಿತ್ವಾ ತಂ ವಿಜಯೀಂದ್ರಕರೇ ದದೌ ||
ಎಂದು ದಾಖಲಿಸಿದ್ದಾರೆ.
ರಾಜಧಿರಾಜರಿಂದ ಸೇವಿತರಾದವರು ಶ್ರೀಸುಧೀಂದ್ರತೀರ್ಥರು :
ಶ್ರೀಮಧ್ವಾಚಾರ್ಯರ ದಿವ್ಯಪರಂಪರೆಯಲ್ಲಿ ಬಂದ ಯತೀಶ್ವರರೆಲ್ಲ ಭೂಪಾಲಶ್ರೇಷ್ಠರಿಂದ ಸೇವಿತರಾದವರೇ. ಶ್ರೀಸುಧೀಂದ್ರತೀರ್ಥರೂ ತಮ್ಮ ಪೂರ್ವ ಪೀಠಾಧೀಶರಾದ ಶ್ರೀಪದ್ಮನಾಭತೀರ್ಥಾದಿ ಗುರುಗಳಂತೆ ವಿಶಿಷ್ಟ ಚರ್ಯೆಯಿಂದ ರಾಜಾಧಿರಾಜರಿಂದ ಸೇವಿತರಾಗಿದ್ದರು.
ಶ್ರೀಸುಧೀಂದ್ರತೀರ್ಥರು ನಿರ್ದುಷ್ಟವಾದ, ಮನೋಹಾರಿಯಾದ ಅನೇಕ ಗ್ರಂಥಗಳನ್ನು ರಚಿಸಿದ್ದರು. ಅವರು ತಮ್ಮ ಗ್ರಂಥಗಳಲ್ಲಿ ತೋರಿದ ಮನೋಜ್ಞವಾದ ಪ್ರತಿಭೆ, ಕೌಶಲಗಳನ್ನು ಕಂಡು ಕರ್ನಾಟಕ ಸಾಮ್ರಾಜ್ಯಾಧಿಪತಿಗಳು ಇವರನ್ನು ಕರೆಸಿ, ಇವರ ಉಪಸ್ಥಿತಿಯಲ್ಲಿ ಅನೇಕ ವಿದ್ವತ್ಸಮಾವೇಶಗಳನ್ನು ಮಾಡುತ್ತಿದ್ದರು ಎಂದು ಅನೇಕ ಐತಿಹಾಸಿಕ ಉಲ್ಲೇಖಗಳಿಂದ ತಿಳಿಯಬಹುದಾಗಿದೆ.
ಇವರ ಗ್ರಂಥಮಹಿಮೆ ಹೇಗಿತ್ತು ಎಂದರೇ, ಇವರು ಮಾಡಿರುವ ಅಸಂಖ್ಯಾತ ಗ್ರಂಥಗಳಲ್ಲಿರುವ ಚಾತುರ್ಯವನ್ನು ಕಂಡು ಹರ್ಷಿತನಾದ ಕರ್ಣಾಟದೇಶದ ವಿಜಯನಗರ ಸಾಮ್ರಾಟರು ಮೇಲಿಂದ ಮೇಲೆ ಅನೇಕ ರತ್ನಾಭಿಷೇಕಗಳನ್ನು ಮಾಡುತ್ತಿದ್ದ ಐತಿಹಾಸಿಕ ವಿಷಯವನ್ನು ಶ್ರೀವಾದೀಂದ್ರ ತೀರ್ಥರು 'ಗುರುಗುಣಸ್ತವನ'ದಲ್ಲಿ ದಾಖಲಿಸಿದ್ದಾರೆ.
ಆಗಿನ ಕಾಲದ ಕರ್ಣಾಟದೇಶದ ಭೂಪಾಲನಾಗಿದ್ದ ವಿಜಯನಗರದ 1ನೇ ರಂಗರಾಜನು ಶ್ರೀಸುಧೀಂದ್ರತೀರ್ಥದ ವಿಶೇಷ ಅನುಗ್ರಹಕ್ಕೆ ಪಾತ್ರನಾಗಿದ್ದ. ಶ್ರೀಪಾದಂಗಳವರ ಕಾಲದಲ್ಲಿ ಮಹಾಸಂಸ್ಥಾನಕ್ಕೆ ಅನೇಕ ಗ್ರಾಮ, ಜಹಗೀರುಗಳನ್ನು ಹಾಕಿ ಕೊಟ್ಟದ್ದಿದೆ. ಅವನು ಕೊಟ್ಟ ಶಾಸನಗಳಾಲ್ಲಿ ಶ್ರೀಸುಧೀಂದ್ರತೀರ್ಥರ ಭವ್ಯ ವ್ಯಕ್ತಿತ್ವದ ಅನಾವರಣವಾಗುತ್ತದೆ.
ಶಾಸನದಲ್ಲಿ, "ವೇದವೇದಾಂಗತತ್ವಾರ್ಥವೇದಿನೇ ಜಿತವಾದಿನೇ", "ಮಧ್ವಸಿದ್ಧಾಂತಾರ್ಥೋಪದೇಶಿನೇ" ಇತ್ಯಾದಿ ವಿಶೇಷಣಗಳಿಂದ ಸಂಭೋಧಿಸಲಾಗಿದೆ.
ಶ್ರೀಪಾದಂಗಳವರು ವಿಜಯನಗರದ ಅರಸರಲ್ಲದೇ ಭರತಖಂಡದ ಅನೇಕ ರಾಜಾಧಿರಾಜರಿಂದ ಪರಮಪೂಜ್ಯರಾಗಿದ್ದವರು. ಶ್ರೀಪಾದಂಗಳವರು ಶ್ರೀಮನ್ಮಧ್ವಸಿದ್ಧಾಂತದ ಗರಿಮೆಯನ್ನು ಉತ್ತರ ಭಾರತಕ್ಕೂ ಪಸರಿಸಿದವರು. ಗ್ವಾಲಿಯರ್ ಸಂಸ್ಥಾನಕ್ಕೆ ದಿಗ್ವಿಜಯ ಮಾಡಿಸಿ, ಅಲ್ಲಿನ ನ್ಯಾಯ-ತರ್ಕ-ಮೀಮಾಂಸಾ-ವೇದಾಂತ-ವ್ಯಾಕರಣ-ಅಲಂಕಾರಶಾಸ್ತ್ರ ಹೀಗೆ ಎಲ್ಲ ಶಾಸ್ತ್ರಗಳಲ್ಲಿ ನಿಪುಣರಾಗಿದ್ದ ವಿದ್ವಾಂಸಶ್ರೇಷ್ಠರನ್ಮೆಲ್ಲ ವಾದದಲ್ಲಿ ಗೆದ್ದು, ಗ್ವಾಲಿಯರ್ ನ ಮಹಾರಾಜನಿಂದ, ಅಲ್ಲಿನ ಅಶೇಷ ಪಂಡಿತರಿಂದ "ದಿಗ್ವಿಜಯ ವಿದ್ಯಾ ಸಿಂಹಾಸನಾಧೀಶ್ವರ" ಎಂಬ ಬಿರುದನ್ನು, "ಜಗದ್ಗುರು" ಎಂದು ಬಿರುದನ್ನು ಸಂಪಾದಿಸಿದವರು.
ಅವರ ಕಾಲದಲ್ಲಿ ಶ್ರೀಮಠದ ಪೀಠಕ್ಕೆ ಸಂದ ಬಿರುದು ಹಾಗೆಯೇ ಮುಂದೆಯೂ ಮುಂದುವರೆದದ್ದು ಇತಿಹಾಸ. ಈ ಪ್ರಸಂಗವು ಶ್ರೀರಾಘವೇಂದ್ರಸ್ವಾಮಿಗಳವರ ಮಠದಲ್ಲಿರುವ ಗ್ವಾಲಿಯರ್ ರಾಜಸಂಸ್ಥಾನದ ಬಿರುದಾವಲೀ ಪತ್ರಿಕೆಯಲ್ಲಿಯೂ ಉಲ್ಲೇಖಗೊಂಡಿರುವುದು ವಿಶೇಷ.
ಹೀಗೇಯೇ ಶ್ರೀಸುಧೀಂದ್ರತೀರ್ಥರು ಅನೇಕ ಕಡೆಗಳಲ್ಲಿ ದಿಗ್ವಿಜಯಗಳನ್ನು ಮಾಡಿ, ಎಲ್ಲೆಡೆ ಶ್ರೀಮನ್ಮಧ್ವರ ಸಿದ್ಧಾಂತದ ಕಂಪನ್ನು ಸೂಸಿದ ಮಹಾನುಭಾವರು. ಶ್ರೀರಾಘವೇಂದ್ರವಿಜಯ ಮಹಾಕಾವ್ಯ ಇವರನ್ನು ಸೇವಿಸಿದ ಅನೇಕ ರಾಜಾಸ್ಥಾನಗಳನ್ನು ಉಲ್ಲೇಖಿಸುತ್ತದೆ.
ಪ್ರಾಯಃ ದಕ್ಷಿಣಭಾರತದ ಎಲ್ಲ ರಾಜರೂ ಇವರ ದಾಸಾನುದಾಸರಾಗಿದ್ದರು.
ಅವರಿಗೆ ದೊರೆತ ಶಾಸನದಲ್ಲಿಯೂ ಈ ಬಗ್ಗೆ ಉಲ್ಲೇಖವಿದೆ,
"ರಾಜಾಧಿರಾಜ ಕೋಟಿರ ಕೋಟಿ ಕೂಟಾರ್ಚಿತಾಂಘ್ರಯೇ" -
ರಾಜಾಧಿರಾಜರ ಕೋಟೀಕಿರೀಟಗಳ ಸಮೂಹವು ಇವರ ಪದತಲದಲ್ಲಿದ್ದು ಅವರನ್ನು ಅರ್ಚಿಸಿತ್ತಿದ್ದವಂತೆ.
ಎಂತಹ ವೈಭವ ಶ್ರೀಸುಧೀಂದ್ರತೀರ್ಥರದ್ದು ? ಅವರ ಪೂರ್ವೀಕಗುರುಗಳೂ ಇದೇ ವೈಭವಕ್ಕೆ ಪಾತ್ರರು ಎನ್ನುವುದನ್ನೂ ಇತಿಹಾಸದಲ್ಲಿ ಗಮನಿಸಬಹುದು.
ಶ್ರೀಸುಧೀಂದ್ರತೀರ್ಥರ ಗ್ರಂಥಗಳು:
ಶ್ರೀವಿಜಯೀಂದ್ರವ್ರತೀಂದ್ರರಂತೆಯೇ ಅನೇಕ ಗ್ರಂಥಗಳನ್ನು ಬರೆದವರು ಶ್ರೀಸುಧೀಂದ್ರತೀರ್ಥರು. ಅವುಗಳಲ್ಲಿ ಕೆಲವು ಗ್ರಂಥಗಳು ಪ್ರಕಾಶಿತವಾಗಿವೆ, ಇನ್ನು ಕೆಲವು ಅನುಪಲಬ್ಧ. ಆದರೇ ಅನೇಕ ಐತಿಹಾಸಿಕ ಉಲ್ಲೇಖಗಳಿಂದ, ಶಸನಾದಿ ಪ್ರಮಾಣಗಳಿಂದ, ಸಮಕಾಲೀನ ಅನೇಕ ದಾಖಲೆಗಳಿಂದ, ಶ್ರೀಸುಮತೀಂದ್ರತೀರ್ಥರ ಹಾಗೂ ಶ್ರೀವಾದೀಂದ್ರತೀರ್ಥರೇ ಮೊದಲಾದ ಜ್ಞಾನಿಗಳ ಉಲ್ಲೇಖದಿಂದ ಇವರು ಅಸಂಖ್ಯಾತ ಗ್ರಂಥಗಳನ್ನು ಬರೆದಿರುವದಂತೂ ಸ್ಪಷ್ಟ.
ಅವರು ರಚಿಸಿರುವ ಗ್ರಂಥಗಳನ್ನು ದಾಖಲೆಗಳ ಜಾಡು ಹಿಡಿದು ಉಲ್ಲೇಖಿಸುತ್ತ ಹೊರಟರೇ ಪುಟಗಳೇ ಬೇಕಾದೀತು. ಆದರೂ ಪ್ರಸ್ತುತ ಉಪಲಬ್ಧವಿದ್ದು ಪ್ರಕಾಶಿತಗೊಂಡ ಗ್ರಂಥಗಳೆಂದರೇ,
1. ಅಲಂಕಾರ ಮಂಜರೀ - ಸಂಸ್ಕೃತ ಸಾಹಿತ್ಯದ ವಿಶಿಷ್ಟಪ್ರಕಾರದ ಕೃತಿ ಇದು. ಒಂದೊಂದು ಅಲಂಕಾರವನ್ನು ತೆಗೆದುಕೊಂಡು ಒಂದೊಂದು ಅಲಂಕಾರಕ್ಕೆ ತಮ್ಮ ಗುರುಗಳಾದ ಶ್ರೀವಿಜಯೀಂದ್ರತೀರ್ಥ ಗುರುಸಾರ್ವಭೌಮರನ್ನು ಉದಾಹರಣತ್ವೇನ ವಿಷಯೀಕರಿಸಿ ಗುರುಗಳ ಗುಣಗಳನ್ನು ವರ್ಣಿಸುವ ಉತ್ಕೃಷ್ಟ ಕೃತಿಯೇ ಅಲಂಕಾರಮಂಜರೀ.
2. ಶ್ರೀಮದ್ಭಾಗವತ ದ್ವಿತೀಯ ಸ್ಕಂದ ವ್ಯಾಖ್ಯಾನ
3. ಶ್ರೀಮದ್ಭಾಗವತ ಏಕಾದಶ ಸ್ಕಂದ ವ್ಯಾಖ್ಯಾನ
4. ಸುಭದ್ರಾಪರಿಣಯ ನಾಟಕ
5. ಅಧಿಕರಣರತ್ನಮಾಲಾ
6. ತರ್ಕತಾಂಡವವ್ಯಾಖ್ಯಾ - ಸದ್ಯುಕ್ತಿರತ್ನಾಕರ
7. ಸಾಹಿತ್ಯಸಾಮ್ರಾಜ್ಯ
8. ವ್ಯಾಸರಾಜಾಭ್ಯುದಯ
9. ವಿಜಯೀಂದ್ರಯಶೋಭೂಷಣಂ
10. ಅಮೃತಾಪಹರಣಂ
11. ವೈರಾಗ್ಯತರಂಗ
12. ಸಾಹಿತ್ಯಸಾಮ್ರಾಜ್ಯ
ಎಂಬಿತ್ಯಾದಿ ಗ್ರಂಥಗಳು.
ಕೇವಲ ಅಸತ್ಕಾವ್ಯಾದಿಗಳಿಗೆ ಹೇಳಿದ "ಕಾವ್ಯಾಲಾಪಾಂಶ್ಚ ವರ್ಜಯೇತ್" - ಕಾವ್ಯ, ಸಾಹಿತ್ಯ, ನಟಕ, ಅಲಂಕಾರಾಶಾಸ್ತ್ರಗಳೆಲ್ಲ ಸನ್ಯಾಸಿಗಳಿಗೆ ಅಲ್ಲ ಎಂದಿರುವದನ್ನೇ ಮೊದಲುಮಾಡಿಕೊಂಡು ಮೂಲೆಗುಂಪಾಗಿದ್ದ ಈ ಶಾಸ್ತ್ರಗಳನ್ನೇಲ್ಲ, ರಾಮಾಯಣ-ಮಹಾಭಾರತಾದಿ ಕಾವ್ಯಗಳ, ಶ್ರೀಮದಾಚಾರ್ಯರ ಸಿದ್ಧಾಂತದ ತಳಹದಿಯಲ್ಲಿ ಭಗವನ್ಮಯವಾಗಿಸಿ, ಸ್ವರೂಪೋದ್ಧಾರಕ ಗುರುಗಳ ಹಾಗೂ ಸರ್ವೋತ್ತಮನಾದ ಭಗವಂತನ ಗುಣಚಿಂತನೆಗಗಳನ್ನು ತೋರಿಸಿಕೊಟ್ಟ ಮಹಾಗುರುಗಳು ಶ್ರೀಸುಧೀಂದ್ರತೀರ್ಥರು.
ಇಂತಹ ಭವ್ಯ ವ್ಯಕ್ತಿತ್ವ ಹೊಂದಿದ ಶ್ರೀಸುಧೀಂದ್ರತೀರ್ಥರು ತಮ್ಮ ಕಾಲದಲ್ಲಿ ಸ್ವಮತೀಯ ಪಂಡಿತರು ಮಾತ್ರವಲ್ಲದೇ, ವಿಮತೀಯ ವಿದ್ವಾಂಸರಿಂದಲೂ ಮಾನ್ಯರಾಗಿದ್ದವರು.
ಕೃಷ್ಣಯಜ್ವಾ ಎಂಬ ವಿಮತೀಯ ಕವಿಯು ತನ್ನ "ಅಲಂಕಾರ ನಿಕಷ" ಎಂಬ ಗ್ರಂಥದಲ್ಲಿ ಶ್ರೀಸುಧೀಂದ್ರತೀರ್ಥರನ್ನು,
ಶ್ರೀಮತ್ಸುಧೀಂದ್ರವ್ರತಿಸಾರ್ವಭೌಮ ಗಾಂಭೀರ್ಯಮೌದಾರ್ಯಮುಖೈರ್ಗುಣೌಗೈಃ |ತುಲ್ಯಸ್ತ್ವಯಾ ನ ತ್ರಿಷು ವಿಷ್ಟಪೇಷು ನಿಶಾಮ್ಯತೇ ಕೋ ಪಿ ನಿಶಮ್ಯತೇ ವಾ ||
ಎಂದು ಶ್ರೀಸುಧೀಂದ್ರವ್ರತಿಸಾರ್ವಭೌಮರೇ! ಗಾಂಭೀರ್ಯ ಔದಾರ್ಯ ಮೊದಲಾದ ಸದ್ಗುಣಗಳನ್ನು ಹೊಂದಿರುಗ ನಿಮಗೆ ಸಮಾನವಾದ ಮತ್ತೊಬ್ಬ ವ್ಯಕ್ತಿ ಮೂರೂ ಲೋಕಗಳಲ್ಲೂ ಇಲ್ಲ! ಎಂದು ಬಹುಪ್ರಕಾರವಾಗಿ ಇನ್ನೂ ಅನೇಕ ಶ್ಲೋಕಗಳಿಂದ ಕೊಂಡಾಡಿದ್ದಾನೆ.
ಇವರ ಬಹುದೊಡ್ದ ಉಪಕಾರವೆಂದರೇ ಶ್ರೀಯಾದವೇಂದ್ರತೀರ್ಥರು ಹಾಗೂ ಶ್ರೀರಾಘವೇಂದ್ರತೀರ್ಥರನ್ನು ಸಮಾಜಕ್ಕೆ ಕೊಟ್ಟಿದ್ದು.
ಶ್ರೀಯಾದವೇಂದ್ರರು ಪೀಠವನ್ನೂ ಬಯಸದೇ, ತಪಸ್ಸನ್ನೇ ಜೀವಾಳವನ್ನಾಗಿಸಿಕೊಂಡು, ಗ್ರಂಥರಚನೆ, ಪಾಠಪ್ರವಚನವನ್ನು ಮಾಡಿ, ಶ್ರೀವ್ಯಾಸರಾಯರ ಸಂಸ್ಥಾನಕ್ಕೆ ಲಕ್ಷ್ಮೀನಾಥತೀರ್ಥರಂತಹ ಶಿಷ್ಯರನ್ನು ತಯಾರು ಮಾಡಿ ಕೊಟ್ಟರೇ,
ಶ್ರೀರಾಘವೇಂದ್ರರು, ಪೀಠದಲ್ಲಿದ್ದರೂ ಪ್ರಚಂಡ ತಪಸ್ಸನ್ನಾಚರಿಸಿದವರು. ಮಾಧ್ವಪ್ರಪಂಚದ ಶ್ರೇಷ್ಠ ಸಂತರಾದರು. ಶ್ರೀಯೋಗೀಂದ್ರ,ಶ್ರೀಸೂರೀಂದ್ರರು, ಶ್ರೀಸುಮತೀಂದ್ರರಂತಹ ಶಿಷ್ಯರನ್ನು ನಿರ್ಮಾಣ ಮಾಡಿ ಕೊಟ್ಟಿದ್ದಾರೆ. ಅರ್ಧಶತಕದಷ್ಟು ಗ್ರಂಥಗಳನ್ನು ಕೊಟ್ಟಿದ್ದಾರೆ. ನೂರಾರು ವರ್ಷಗಳು ಸಂದರೂ ನಂಬಿದ ಭಕ್ತರ ಉದ್ಧಾರಕರಾಗಿದ್ದಾರೆ. ಮಾಧ್ವರ ಹೃದಯಾಧೀಶರಾಗಿದ್ದಾರೆ.
ಇಂತಹ ಅಪ್ರತಿಮ ಮಹಿಮೆಗಳಿಂದ ತ್ರಿಲೋಕಮಾನ್ಯರಾದವರೇ ಶ್ರೀಸುಧೀಂದ್ರತೀರ್ಥರು.
ಅವರ ಆರಾಧನಾ ಶುಭದಿನದಂದು ನಮ್ಮೆಲ್ಲರನ್ನು ಅನುಗ್ರಹಿಸಲಿ.
ಶ್ರೀಕೃಷ್ಣಾರ್ಪಣಮಸ್ತು.
- ಸಮೀರ ಜೋಷಿ.
No comments:
Post a Comment