Monday 14 July 2014

|| ಶ್ರೀ ಜಯತೀರ್ಥರು [ಶ್ರೀ ಟೀಕಾಕೃತ್ಪಾದರು] ||
                                                  Sri Jayateertharu
 ಆಶ್ರಮ ಗುರುಗಳು - ಶ್ರೀ ಅಕ್ಷೋಭ್ಯ ತೀರ್ಥರು
 ಆಶ್ರಮ ಶಿಷ್ಯರು - ಶ್ರೀ  ವಿದ್ಯಾಧಿರಾಜ ತೀರ್ಥರು
  ಕಾಲ - 1365 - 1388
 ಪೂರ್ವಾಶ್ರಮದ ಹೆಸರು - ರಘುನಾಥ ನಾಯಕ 
 ಚರಮ ಶ್ಲೋಕ -
 यस्य वाक्कामधेनुर्नः कामितार्थान् प्रयच्छति ।
सेवे तं जययोगीन्द्रं कामबाणाच्छिदं सदा ॥

ಯಸ್ಯ ವಾಕ್ಕಾಮಧೇನುರ್ನಃ ಕಾಮಿತಾರ್ಥಾನ್ ಪ್ರಯಚ್ಛತಿ |
ಸೇವೇ ತಂ ಜಯ ಯೋಗೀಂದ್ರಂ ಕಾಮಬಾಣಚ್ಛಿದಂ ಸದಾ ||

 ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನದ  , ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಿಕ ಗುರುಗಳಾದ ಶ್ರೀ ಮಜ್ಜಯತೀರ್ಥರು ದ್ವೈತ ಸಾಮ್ರಾಜ್ಯಕ್ಕೆ ಭದ್ರ ಬುನಾದಿ ಹಾಕಿದ ಮಹಾನ್ ಗುರುಗಳು . ಇವರ ಪೂರ್ವಾಶ್ರಮದ ಹೆಸರು ದು0ಡೋಪಂಥ( ರಘುನಾಥ ನಾಯಕ?? ಎಂಬ ಉಲ್ಲೇಖವೂ ಕೆಲವೆಡೆ ಉಂಟು  ) , ಇವರ ತಂದೆಯ ಹೆಸರು ದು0ಡಿರಾಜ . ರಾಜರಿಗೆ ರಘುನಾಥ ನಾಯಕ ಒಬ್ಬನೇ ಒಬ್ಬ ಮಗ . ತಂದೆಯ ನಂತರ ರಘುನಥನಾಯಕ ತಮ್ಮ ಸ್ವಾಯತ್ತತೆಯಲ್ಲಿದ್ದ ಪ್ರಾಂತಗಳಿಗೆ ಒಡೆಯನಾದ . 1352 ರಲ್ಲಿ ಬಹಮನಿ ರಾಜ್ಯದ ಅಲ್ಲವುದ್ದೀನನು ಯಾದವರ ಮೇಲೆ ಧಾಳಿ ಮಾಡಿದ , ಯಾದವರ ಸೈನ್ಯವನ್ನು ಹಿಮ್ಮೆಟ್ಟಿಸಿದ . ಅನೇಕ ಸಾವು-ನೋವುಗಳು ಸಂಭವಿಸಿದವು . ಇದನ್ನು ಕಂಡ ನಾಯಕನಿಗೆ ಬಹಳ  ಬೇಸರವಾಯಿತು . ಮನಸ್ಸು ವೈರಗ್ಯದೆಡೆ  ಸೆಳೆಯಿತು . ಹೀಗೆ ಒಂದು ದಿನ ತನ್ನ ಪರಿವಾರದೊಡನೆ ಬೇಟೆಗಾಗಿ ಹೊರಟಾಗ ನೀರು ಕುಡಿಯಲೆಂದು ಭೀಮಾನದಿ ತೀರದಲ್ಲಿ ತಂಗಿದ್ದಾಗ , ಅದೇ ದಾರಿಯಲ್ಲಿ ಶ್ರೀ ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಶ್ರೀ ಮದಕ್ಶೋಭ್ಯ ತೀರ್ಥರು ಸಂಚಾರ ಹೊರಟಿದ್ದರು . ಮಹಾರಾಜನನ್ನು ನೋಡಿ ಅವನ ಅಪಾರ ತೇಜಸ್ಸನ್ನು ನೋಡಿ , ಮುಂದಿನ ಘಟನಾವಳಿಗಳ ಅರಿವಾಗಿ , ಅವನ ಅವತಾರ ಕಾರ್ಯ ಸನ್ನಿಹಿತ ಎಂದು ತಿಳಿದು ರಾಜನನ್ನು ಕುರಿತು  " ರಘುನಾಥ , ಇದೇನಪ್ಪ ? ಈ ರಾಜ್ಯ ಕೋಶಾದಿಗಳು ನಿನಗೆ ಶಾಶ್ವತವೇ ? ನಿನ್ನ ಉದ್ಧಾರ ಇದರಿಂದ ಸಾಧ್ಯವಿಲ್ಲಪ್ಪಾ " ಎಂದು ಸೂಕ್ಷ್ಮವಾಗಿ ಹೇಳಿದರು. ನಾಯಕನ ಮನಸ್ಸು ವೈರಾಗ್ಯದೆಡೆ  ಮೊದಲೇ ಜಾರಿದ್ದರಿಂದ ಶ್ರೀ ಗಳವರ ಮಾತು ಬಹಳವಾಗಿ ಮನಸ್ಸಿಗೆ ನಾಟಿದವು . ತನ್ನ ಪರಿವಾರ , ರಾಜ್ಯ ,ಸಂಪತ್ತು , ಅಧಿಕಾರ ಎಲ್ಲವನ್ನು ಬದಿಗೊತ್ತಿ ಶ್ರೀ ಗಳವರಲ್ಲಿಗೆ ಬಂದು " ಸ್ವಾಮಿ ನೀವು ನನ್ನ ಕಣ್ಣು ತೆರೆಸಿದಿರಿ ಇಂದಿನಿಂದ  ನೀವು ನನ್ನ ಗುರುಗಳು , ನಾನು ನಿಮ್ಮ ಶಿಷ್ಯ . ನನಗೆ ಸನ್ಯಾಸ ಕೊಟ್ಟುಬಿಡಿ ಸ್ವಾಮಿ, ಇದೆಲ್ಲ ಸಾವು-ನೋವು ಯಾತಕ್ಕಾಗಿ ? ಈ ಸಂಪತ್ತು ಮಡದಿ-ಮಕ್ಕಳು ಯಾರಿಗಾಗಿ ?? ಸನ್ಯಾಸ ಸ್ವೀಕಾರ ಮಾಡಿದರೆ ಸಾಧನೆಗೆ ನೆರವಾದೀತು ದಯಮಾಡಿ ಸನ್ಯಾಸ  ಭೀಕ್ಷೆ ನೀಡಿ ಸ್ವಾಮೀ " ಎಂದು ಮನವಿ ಮಾಡಿಕೊಂಡ . ತ್ರಿಕಾಲ ಜ್ಞಾನಿಗಳಾದ ಶ್ರೀಗಳಿಗೆ ಎಲ್ಲವು ಗೊತ್ತಿದ್ದರು ಏನು ಗೊತ್ತಿಲ್ಲವೇನೋ ಎಂಬಂತೆ " ರಘುನಾಥ ನಿನ್ನ ವೈರಗ್ಯಕ್ಕೆ ನಾನು ಮೆಚ್ಚಿದೆ . ಆದರೆ ನೀನು ವಿವಾಹಿತ ಯುವಕ . ನಿನ್ನ ಸಂಸಾರದ ಗತಿ ? ನಿನ್ನ ಅಶ್ರಿತರ ಗತಿ ? ನೀನು ಮನೆಗೆ ತೆರಳು  ನಾವು ನಿನಗೆ ಆಚಾರ್ಯರ ಗ್ರಂಥಗಳನ್ನು ಬೋಧಿಸುತ್ತೇವೆ . ಸನ್ಯಾಸದ ಬಗ್ಗೆ ಈಗ ವಿಚಾರ ಬೇಡ ." ಎಂದು ಹೇಳಿದರು. ಆಗ ನಾಯಕ " ಇಲ್ಲ ಸ್ವಾಮಿ ಶಾಶ್ವತ ಸುಖದ ದಾರಿ ತೋರಿ ನೀವು ನನಗೆ ಅನುಗ್ರಹಿಸಬೇಕು . ಈ ಸಂಸಾರ ಅಸಾರ . ಇದು ಅಶಾಶ್ವತ . ಈ ಲೌಕಿಕ ಜೀವನಕ್ಕೆ ಕೊನೆಯೇ ಇಲ್ಲ , ದಯವಿಟ್ಟು ನನಗೆ ಸನ್ಯಾಸ ಕೊಡಿರಿ" ಎಂದು ನಿಜವಾದ ವೈರಾಗ್ಯದಿಂದ ನುಡಿದ. ಆಗ ಶ್ರೀಗಳು ತಥಾಸ್ತು ಎಂದು ನಾಯಕನಿಗೆ ಸನ್ಯಾಸ ನೀಡಿ ಶ್ರೀ ಜಯತೀರ್ಥರು ಎಂದು ನಾಮಕರಣ ಮಾಡಿ  ವೇದಾಂತ ಸಾಮ್ರಾಜ್ಯಕ್ಕೆ ಪಟ್ಟಾಭಿಷೇಕ ಮಾಡಿದರು. ನಾಯಕರು ಶ್ರೀ ಜಯತೀರ್ಥರಾದದ್ದನ್ನು ಕೇಳಿ ಅವರ ಪೂರ್ವಾಶ್ರಮದ ಮನೆಯವರು ಬಂದು ಶ್ರೀ ಅಕ್ಷೋಭ್ಯ ತೀರ್ಥರನ್ನು ನಿಂದಿಸಿ ಶ್ರೀ ಜಯತೀರ್ಥರನ್ನು ಮರಳಿ ಮನೆಗೆ ಕರೆದೊಯ್ದರು . ಅಲ್ಲಿ ಅವರ ಪೂರ್ವಾಶ್ರಮದ ಪತ್ನಿಯನ್ನು ಪತಿಸಂಗಮಕ್ಕಾಗಿ ಕಳುಹಿಸಿದಾಗ ಶ್ರೀ ಶೇಷನ ಆಕೃತಿಅಲ್ಲಿದ್ದ ಶ್ರೀ ಜಯತೀರ್ಥರ ದಿವ್ಯ ತೇಜಸ್ಸನ್ನು ಕಂಡು ಅವರನ್ನು ಕಣ್ಣಿನಿಂದ ನೋಡಲಾಗದೆ ಹೊರಗೆ ಓಡಿಹೋದಳು . ಮನೆಯವರಿಗೆಲ್ಲ ಶ್ರೀ ಜಯತೀರ್ಥರ ಶಕ್ತಿ ಅರಿವಾಗಿ ಎಲ್ಲರು ಕ್ಷಮಾದಾನ ಬೇಡಿದರು . ಶ್ರೀ ಹರಿಯ ಇಚ್ಚೆಯನ್ನು ಬದಲಿಸಲಾಗದು ಎಂದು ತಮ್ಮ ಅವತಾರ ಕಾರ್ಯ ಅರಿತ  ಶ್ರೀ ಜಯತೀರ್ಥರು ಅವರಿಗೆ ಬುದ್ಧಿ ಹೇಳಿ ಅಲ್ಲಿಂದ ಗುರುಗಳು ಇದ್ದಲ್ಲಿಗೆ ಬಂದರು . ಶ್ರೀ ಅಕ್ಷೋಭ್ಯ ತೀರ್ಥರಲ್ಲಿ ಸಮಗ್ರ ಆಚಾರ್ಯರ ಗ್ರಂಥಗಳ ಅಧ್ಯನವಾಯಿತು . ಶ್ರೀ ಜಯತೀರ್ಥರು ,ತಮ್ಮ ಗೀತಭಾಷ್ಯದ  ಕೊನೆಯಲ್ಲಿ " ಅಕ್ಷೋಭ್ಯತೀರ್ಥ ಗುರುಣಾ ಶುಕವತ್ ಶಿಕ್ಷಿತಸ್ಯ ಮೇ " (  ಶ್ರೀ ಅಕ್ಷೋಭ್ಯ ತೀರ್ಥರು ನನಗೆ ಗಿಳಿಗೆ ಪಾಠ ಹೇಳಿದಂತೆ ಪಾಠ ಹೇಳಿದರು ) ಎಂದು ತಮ್ಮ ಅಧ್ಯಯನದ ರೀತಿಯನ್ನು ಮೆಲುಕು ಹಾಕಿದ್ದಾರೆ  . ಶ್ರೀ ಅಕ್ಶೋಭ್ಯರ ಹತ್ತಿರ ಸಕಲ ಗ್ರಂಥಾಧ್ಯಯನವಾದ ನಂತರ ಶ್ರೀ ಜಯತೀರ್ಥರು ಆಚಾರ್ಯರ ಗ್ರಂಥಗಳಿಗೆ ಟಿಪ್ಪಣಿ ಬರೆಯಲು ಪ್ರಾರಂಭಿಸಿದರು . ಶ್ರೀ ಅಕ್ಷೋಭ್ಯ ತೀರ್ಥರವರೆಗೆ ಎಲ್ಲರೂ ಸಾಕ್ಷಾತ್ ಮಧ್ವರ ಕೈಯಲ್ಲಿ ಪಳಗಿದ್ದರಿಂದ ಮಧ್ವರ ಗ್ರಂಥಗಳಿಗೆ ಟಿಪ್ಪಣಿ ಅಷ್ಟೊಂದು ಅವಶ್ಯಕತೆ ಇರಲಿಲ್ಲ . ಆದರೆ ಆಚರ್ಯರನ್ನು ಬಿಟ್ಟು ಅವರ ಶಿಷ್ಯರ ಹತ್ತಿರ ಅಧ್ಯಯನ ಮಾಡಿದ ಶ್ರೀ ಜಯ ತೀರ್ಥರು ಮುಂದಿನ ದಿನಮಾನದಲ್ಲಿ ಮಾಧ್ವ ಗ್ರಂಥಗಳಿಗೆ ಟಿಪ್ಪಣಿಯ ಅವಶ್ಯಕತೆಗಳನ್ನು ಅರಿತು ಅದನ್ನು ರಚಿಸಲು ಮುಂದಾದರು . ಈ ಟಿಪ್ಪಣಿಗಳನ್ನು ರಚಿಸಲು ಜಯತೀರ್ಥರು ಒಂದು ಗುಹೆಗೆ ತೆರಳಿದರು. ಅಲ್ಲಿಯೇ ದೇವತಾರ್ಚನೆ ಮುಂತಾದ ಕಾರ್ಯಗಳನ್ನು ಯಾವುದೇ ಲೋಪವಿಲ್ಲದೆ ಮಾಡುತ್ತಿದ್ದರು. ಹೀಗೆ ಆ ಗುಹೆಗೆ ಶ್ರೀ ಶಂಕರ ಮಹಾ ಪೀಠವಾದ ,ಶೃಂಗೇರಿ ಶಾರದ ಪೀಠದ ಶ್ರೀ ವಿದ್ಯಾರಣ್ಯರು ಅಲ್ಲಿಗೆ ಬಂದರು ( ವಿದ್ಯಾರಣ್ಯರು ಈಗಾಗಲೇ ಜಯತೀರ್ಥರ ಗುರುಗಳಾದ ಅಕ್ಷೋಭ್ಯ ತೀರ್ಥರ ಹತ್ತಿರ "ತತ್ವಮಸಿ" ಎಂಬ ಪದದ ವಾಕ್ಯರ್ಥದಲ್ಲಿ ಸೋತಿದ್ದರು) . ವಿದ್ಯಾರಣ್ಯರಿಗೆ ಶ್ರೀ ಜಯತೀರ್ಥರು ತಾವು ವ್ಯಾಖ್ಯಾನ ಬರೆಯುತ್ತಿದ್ದ , ಮಧ್ವರ "ಪ್ರಮಾಣ ಲಕ್ಷಣಂ" ಎಂಬ ಗ್ರಂಥವನ್ನು ತೋರಿಸಿದರು. ಆಗ ವಿದ್ಯಾರಣ್ಯರಿಗೆ ಅದರ ತಲೆ ಬುಡ ಹತ್ತಲಿಲ್ಲ. ಅವರು " ಬಾಲಕನ ಮಾತುಗಳನ್ನು ಕಟ್ಟಿಕೊಂಡೆನು" ಎಂದು ಹಾಸ್ಯ ಮಾಡಿದರು. ಆಗ ಶ್ರೀ ಜಯತೀರ್ಥರು ತಾವು ಆ ಗ್ರಂಥದ ಮೇಲೆ ರಚಿಸಿದ ಟಿಪ್ಪಣಿಯನ್ನು ತೋರಿಸಿದರು ಅದನ್ನು ಓದಿದ ವಿದ್ಯಾರಣ್ಯರಿಗೆ ಶ್ರೀ ಜಯತೀರ್ಥರ ಸಾಮರ್ಥ್ಯ ತಿಳಿಯಿತು. ಆ ಗ್ರಂಥ ಅವರಿಗೆ ಈಗ ಅರ್ಥವಾಗಿತ್ತು. [ಅವರು ಮಧ್ವರ ಗ್ರಂಥಗಳ ಮೆರವಣಿಗೆ ಮಾಡಿಸಿದರು ಎಂಬ ಐತಿಹ್ಯವೂ ಉಂಟು ] . ಶ್ರೀ ಜಯತೀರ್ಥರ ವ್ಯಾಖ್ಯಾನಗಳು ಬಹಳ ಗಂಭೀರ , ಸುಂದರ . ಅತೀವ ಆನಂದವನ್ನು ಉಂಟು ಮಾಡುತ್ತವೆ.
                      ಶ್ರೀ ಜಯತೀರ್ಥರ ಹತ್ತಿರ ಪೇಜಾವರ ಮಠದ  ಶ್ರೀ ಮಹೇಂದ್ರ ತೀರ್ಥರು ತಾವು ಬರೆದ " ಭಾಗವತ ವ್ಯಾಖ್ಯಾನ" ಗ್ರಂಥವನ್ನು ತೋರಿಸಿ ಜಯಾರ್ಯರಿಂದ ಪ್ರಶಂಸೆ ಗಿಟ್ಟಿಸಿದರು. ಶ್ರೀ ಜಯತೀರ್ಥರ ಟಿಪ್ಪಣಿ ಗಳಿಲ್ಲದೆ ಶ್ರೀಮದಾಚಾರ್ಯರ ಯಾವ ಗ್ರಂಥಗಳು ಅರ್ಥವಾಗುವದಿಲ್ಲ. ಶ್ರೀ ಜಯತೀರ್ಥರು ಅನೇಕ  ಗ್ರಂಥಗಳನ್ನು ರಚಿಸಿರುತ್ತಾರೆ. ಅವುಗಳಲ್ಲಿ ಅವರ "ಶ್ರೀಮನ್ಯಾಯ ಸುಧಾ" ಇವರ ಮೇರು ಕೃತಿ  . ಇವರ  ಶ್ರೀಮನ್ಯಾಯಸುಧಾ ಗ್ರಂಥದ ಬಗ್ಗೆ ಒಂದು ಉಕ್ತಿ ಇದೆ " ಸುಧಾ ವಾ ಪಠನೀಯಾ ವಸುಧಾ ವಾ ಪಾಲನೀಯ"ಎಂದು. ಇವರ ಗ್ರಂಥಗಳು ಇಲ್ಲದಿದ್ದರೆ ಇಂದಿನ ಸಮಾಜದಲ್ಲಿ ಮಾಧ್ವರು ಆಚಾರ್ಯರನ್ನು ಅರ್ಥೈಸಿಕೊಳ್ಳುವದೇ ಸಾಧ್ಯವಿರಲಿಲ್ಲ . ಇವರ ಗ್ರಂಥಗಳು ಅಷ್ಟೊಂದು ಮಹತ್ವವನ್ನು ಪಡೆದುಕೊಂಡಿವೆ. ಇವರ ನ್ಯಾಯ ಸುಧೆ ಇಂದು ಪಂಡಿತರಿಗೆ ನೀಡುವ "ಡೀಗ್ರೀ ಸೇರ್ಟಿಫಿಕೆಟ್ " ಆಗಿದೆ . ಅಂದರೆ ಅದನ್ನು ಓದಿದರೆ ಮಾತ್ರ ಆಚಾರ್ಯರ ಗ್ರಂಥಗಳು ಅರ್ಥವಾಗುವವು ಎಂದು.
*ಶ್ರೀ ವ್ಯಾಸರಾಜ ತೀರ್ಥರು  ಟೀಕಾಚಾರ್ಯರನ್ನು ಕುರಿತು ಹೀಗೆ ಹೇಳಿದ್ದಾರೆ , 
                   ಆನಂದತೀರ್ಥ ಉಪದಿಷ್ಟೋ ನಿಧಿರ್ನಾರಾಯಣಾಹ್ವಯ : |
                   ಪ್ರದರ್ಶಿತೋ ಯೇನ ಸಮ್ಯಕ್  ಜಯತೀರ್ಥಂ ತಮಾಶ್ರಯೇ || 
                                                           - ತರ್ಕ ತಾಂಡವ  ಗ್ರಂಥದಿಂದ ಆರಿಸಿದ್ದು
             
*ಶತಾಧಿಕ ಗ್ರಂಥರತ್ನ ಪ್ರಣೆತ  ಶ್ರೀ ವಿಜಯೀಂದ್ರ ತೀರ್ಥರು ಟೀಕಾಚಾರ್ಯರನ್ನು ಕುರಿತು ,
                   ಮಧ್ವಶಾಸ್ತ್ರಮಹಾಚಾಪಮನುದ್ಧಾರ್ಯಮಪೀತರೈ: |
                   ಉಧ್ರುತ್ಯ ಕೀರ್ತಿಂ ಯೋ ಲೇಭೆ ತಮ್ ಜಯಾರ್ಯಂ ಸದಾ ಭಜೆ ||
                                                               - ಭೇದವಿದ್ಯಾ ವಿಲಾಸ ಎಂಬ ಗ್ರಂಥದಿಂದ ಆರಿಸಿದ್ದು 
                   ಯಸ್ಯ ವಾಕ್ಕಾಮಧೇನುರ್ನಃ ಕಾಮಿತಾರ್ಥಾನ್ ಪ್ರಯಚ್ಛತಿ |
                  ಸೇವೇ ತಂ ಜಯ ಯೋಗೀಂದ್ರಂ ಕಾಮಬಾಣಚ್ಛಿದಂ ಸದಾ ||
                                                              - ಮಧ್ವಾದ್ವಕಂಟಕೊದ್ಧಾರ ಮಂಗಳಾಚರಣ ಶ್ಲೋಕ 

 ಈ ಮೇಲಿನ ' ಯಸ್ಯ ವಾಕ್ಕಾಮಧೇನುರ್ನ: ................ ಸದಾ ' ಶ್ಲೋಕವು ರಾಘವೇಂದ್ರ ಸ್ವಾಮಿಗಳವರ ಪೂರ್ವಿಕ ಗುರುಗಳು  ಶ್ರೀ ವಿಜಯೀಂದ್ರ ತೀರ್ಥ ಶ್ರೀಪಾದಂಗಳವರು ಬರೆದದ್ದು . ಇದು ಬಹಳ  ಮಹತ್ವವಾದ ಶ್ಲೋಕ . ಇದನ್ನು ಶ್ರೀ ವಿಜಯೀಂದ್ರ ತೀರ್ಥರೆ ಬರೆದದ್ದು ಎನ್ನಲು ಬಹಳ ದಾಖಲೆಗಳು ಲಭ್ಯ . ಇದರ ವಿಶೇಷತೆ ಏನು ಅಂದರೆ ' ಈ ಶ್ಲೋಕವನ್ನು ಪ್ರಸ್ತುತ ಜಗದ್ಗುರು ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನಗಳಾದ  ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಹಾಗು ಶ್ರೀ ಉತ್ತರಾದಿ ಮಠದಲ್ಲಿನ ಗುರು ಪರಂಪರಾ ಚರಮ ಶ್ಲೋಕಗಳ ಸಾಲಿನಲ್ಲಿ ಶ್ರೀ ಜಯತೀರ್ಥರ ಚರಮ ಶ್ಲೋಕಕ್ಕೆ ಇದೇ  ಶ್ಲೋಕವನ್ನು ನೀಡಲಾಗಿದೆ .** ( ಕೊನೆಗೆ ನೀಡಲಾಗಿರುವ ಪರಿಶಿಷ್ಟ 1ನ್ನು ಓದಿ )
       
                    
                   ಶ್ರೀ ವಾದಿರಾಜ ತೀರ್ಥರು ಟೀಕಾಚಾರ್ಯರನ್ನು ಕುರಿತು ,
                   ಶ್ರೀ ಮನ್ಯಾಯಸುಧಾ ಏನ ನಿರ್ಮಿತಾ ಧೀಮತಾ ಮತಾ |
                   ತಮ್ ಜ್ಞ್ಯಾನಾದಿ ಗುಣೋಪೇತಂ ಜಯತೀರ್ಥ ಗುರುಂ ಭಜೆ || 
                                                              -  ನಯ ಸಿದ್ಧಾಂತ ಸಂಗ್ರಹ 
          
                   ಶ್ರೀ ರಾಘವೇಂದ್ರ ಗುರುಸಾರ್ವಭೌಮರು  ಟೀಕಾಚಾರ್ಯರನ್ನು ಕುರಿತು ,
                   ಪ್ರತ್ಯಕ್ಷರಂ ಪ್ರತಿಪದಂ ಅನೇಕಾಕೂತಗರ್ಭಿತಾ |
                   ಪ್ರತಿಭಾತಿ ಸುಧಾSಥಾಪಿ ಗ್ರಂಥಾಲ್ಪತ್ವಾಯ ನೋಚ್ಯತೆ ||
                                                             - ನ್ಯಾಯಸುಧಾ ಪರಿಮಳ 
ಶ್ರೀಮನ್  ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ-ವಿದ್ಯಾಮಠ- ಮಂತ್ರಾಲಯ/ನಂಜನಗೂಡು ಇದರ ಪೀಠ ವಿರಾಜಮಾನ , ಪ್ರಾತ: ಸ್ಮರಣೀಯರಾದ ಶ್ರೀ 1008 ಶ್ರೀ ಸುಶಮೀಂದ್ರ ತೀರ್ಥ ಶ್ರೀಪಾದಂಗಳವರ ವರಕುಮಾರರಾದ ಅಧುನಾ ಪೀಠ ವಿರಾಜಮಾನರಾದ ಶ್ರೀ 1008 ಶ್ರೀ ಸುಯತೀಂದ್ರ ತೀರ್ಥ ಶ್ರೀಪಾದಂಗಳವರು ತಮ್ಮ ಪೂರ್ವಿಕ ಗುರುಗಳಾದ ಶ್ರೀ ಜಯತೀರ್ಥರ ಬಗೆಗೆ ನುಡಿದ ಮಾತುಗಳು - 
     " ಮಧ್ವ ಸಿದ್ಧಾಂತಕ್ಕೆ ನಮ್ಮ ಪೂರ್ವಿಕ ಗುರುಗಳಾದ ಶ್ರೀ ಜಯತೀರ್ಥರ ಕೊಡುಗೆ ಅಪಾರ . ಶ್ರೀ ಮನ್ಯಾಯ ಸುಧಾ ಗ್ರಂಥವನ್ನು ಸಾರಸ್ವತಲೋಕಕ್ಕೆ ಕೊಡುವ ಮೂಲಕ ಸಿದ್ಧಾಂತವನ್ನು ಶ್ರೀಮಂತಗೊಳಿಸಿದರು . ಶ್ರೀ ಜಯತೀರ್ಥರ ಗ್ರಂಥದ ಮೇಲೆ ನಾಣ್ಣುಡಿ ಒಂದು ರಚಿತ ವಾಗಿದೆ ಎಂದರೆ ಅವರ ಗ್ರಂಥ ರಚನಾ ಸಾಮರ್ಥ್ಯ , ರಚನಾ ಶಕ್ತಿ ಎಂತಹುದು ಎಂದು ತಿಳಿಯಬಹುದು . ಇಂದು ಮಧ್ವ ಸಿದ್ಧಾಂತದ ಮೇರು ಕೃತಿಯಾದ ಶ್ರೀ ನ್ಯಾಯ ಸುಧೆಗೆ  30 ಕ್ಕೂ ಹೆಚ್ಚು ಟಿಪ್ಪಣಿಗಳಿವೆ ಇದರಿಂದಲೇ ಸುಧಾ ಗ್ರಂಥದ ಅಗಾಧ ಪ್ರೌಢಿಮೆ ಯನ್ನು ನಾವು ಅರಿಯಬಹುದು. ಶ್ರೀ ಮಠವು ಶ್ರೀ ಜಯತೀರ್ಥರ ಸಮಗ್ರ ಗ್ರಂಥಗಳ ಅಧ್ಯಯನಕ್ಕಾಗಿ ವಿಶೇಷ ವ್ಯವಸ್ಥೆಗಳನ್ನೂ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದಲ್ಲಿ ಮಾಡಿ ಮಠದ ಪೂರ್ವಿಕ ಗುರುಗಳಾದ ಶ್ರೀ ಜಯತೀರ್ಥರ ಸೇವೆಯನ್ನು ನಿರಂತರ ಮಾಡುತ್ತಲಿದೆ "
                                                              - "ಶ್ರೀ ಸುಯತೀಂದ್ರ ಸೂಕ್ತಿ ಸುಧಾ " 
                                                                  " ಶ್ರೀ ಗುರುಸಾರ್ವಭೌಮ " ಕನ್ನಡ ಮಾಸಪತ್ರಿಕೆ 
                                                                   ಶ್ರೀ ಮಠದ ಅಧಿಕೃತ ಮಾಸ ಪತ್ರಿಕೆ , ಜುಲೈ - ಆಷಾಢ ಸಂಚಿಕೆ 2012 
 ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥರ ಜಯತೀರ್ಥರ ಬಗೆಗಿನ ಮಾತುಗಳು 
   
  ಶ್ರೀಮಜ್ಜಯ ತೀರ್ಥರು ಶ್ರೀರಂಗ ಮುಂತಾದ ವೈಷ್ಣವ ಕ್ಷೇತ್ರಗಳಿಗೆ ಭೇಟಿ ನೀಡಿದ ದಾಖಲೆಗಳು ಇವೆ . ಟೀಕಾ ಕೃತ್ಪಾದರು ತಮ್ಮ ಕೊನೆಗಾಲದಲ್ಲಿ ದಕ್ಷಿಣದೇಶದಲ್ಲೆಲ್ಲ ಸಂಚರಿಸಿ ತಮ್ಮ ಗುರುಗಳು ವೃಂದಾವನಸ್ಥರಾಗಿದ್ದ ಮಲಖೇಡ ಕ್ಷೇತ್ರಕ್ಕೆ ಹೋಗಿ ದರ್ಶನ ಮಾಡಿಕೊಂಡು 1388 ರಲ್ಲಿ  ಆನೆಗೊಂದಿಯಲ್ಲಿ ( ನವವೃಂದಾವನ ಕ್ಷೇತ್ರ ) ವೃಂದಾವನ ಪ್ರವೇಶ ಮಾಡಿದರು. ** ( ಪರಿಶಿಷ್ಟ 2 ನೋಡಿ )
        ಪರಿಶಿಷ್ಟ1** ಶ್ರೀ ಜಯತೀರ್ಥರ ಪಟ್ಟದ ಶಿಷ್ಯ  ಶ್ರೀ ವಿದ್ಯಾಧಿರಾಜ ತೀರ್ಥರು ಬರೆದ ಚರ್ಮ ಶ್ಲೋಕ ಎಲ್ಲಿ ಹೋಯಿತು ಎಂಬ ಪ್ರಶ್ನೆ ಉದ್ಭವಿಸುತ್ತದೆ . ಇದಕ್ಕೆ ಉತ್ತರ ಇನ್ನು ದೊರೆತಿಲ್ಲಾ . ಮತ್ತು ಶ್ರೀ ವಿದ್ಯಾಧಿರಾಜ ತೀರ್ಥರ ಪೂರ್ವಾಶ್ರಮದ ಹೆಸರು ಕೃಷ್ಣಭಟ್ಟರು , ಇವರು 4 ವರ್ಷಗಳ ಕಾಲ ಅಧಿಪತಿಯಾಗಿದ್ದರು , ' ಮುಂದೆ ಯರಗೊಳದಲ್ಲಿ ವೃಂದಾವನಸ್ಥರಾದರು' ಎಂದು ಮಠಗಳಲ್ಲಿನ ಗುರು ಪೀಳಿಗೆಯಿಂದ ತಿಳಿದು ಬರುತ್ತದೆ.ಆದರೆ ಇತಿಹಾಸಕಾರರ ಕೆಲವು ಸಂಶೋಧನೆಗಳ ಪ್ರಕಾರ  ಇವರ ವೃಂದಾವನ ಕಳಿಂಗದ(ಒರಿಸ್ಸಾ)ದ  ಜಗನ್ನಾಥ ಪುರಿಯಲ್ಲಿ ಇತ್ತು  .ಆದರೆ ಇವರ ವೃಂದಾವನ ಲಭ್ಯವಿಲ್ಲ . ಇವರು ರಚಿಸಿದ ಶ್ರೀ ಜಯತೀರ್ಥರ ಚರಮ  ಶ್ಲೋಕವೂ ಲಭ್ಯವಿಲ್ಲ . ಇವರು ಜಯತೀರ್ಥರ ಶಿಷ್ಯರು ಎಂದಾದಮೇಲೆ ಇವರ ಪಾಂಡಿತ್ಯದ ಮಟ್ಟವನ್ನು ಊಹಿಸಬಹುದು . ಶ್ರೀ ವಿದ್ಯಾಧಿರಾಜರ ಬಗೆಗೆ ಕೇವಲ ಸ್ವಲ್ಪ ಮಾತ್ರವೇ ಮಾಹಿತಿ ಲಭ್ಯವಿದ್ದುದು , ಅವರು ರಚಿಸಿದ ಯಾವುದೇ ಗ್ರಂಥಗಳು ಸಿಗದಿದ್ದುದು , ಅವರ ರಚನಾ ಸಾಮರ್ಥ್ಯ ಇಂದಿನ ಜನರಿಗೆ ತಿಳಿಯದಿದ್ದುದು ಸಾಕಲ ಮಾಧ್ವ ಸಮಾಜಕ್ಕೆ ಒಂದು ದುರದೃಷ್ಟಕರ ಸಂಗತಿ .                            
     ಪರಿಶಿಷ್ಟ2**  "  ಶ್ರೀ ಮಜ್ಜಯ ತೀರ್ಥರು 1388 ರಲ್ಲಿ ಕೇವಲ ತಮ್ಮ ಗುರುಗಳ ವೃಂದಾವನ ದರ್ಶನ ಮಾಡಿಕೊಂಡರೆ ಹೊರತು ಅಲ್ಲಿ ಅವರ ವೃಂದಾವನ ಪ್ರವೇಶ ಮಾಡಲಿಲ್ಲ ಮುಂದೆ ಅವರು ತಮ್ಮ ಪೂರ್ವಿಕ ಗುರುಗಳಾದ ಶ್ರೀ ಪದ್ಮನಾಭ ತೀರ್ಥರ ವೃಂದಾವನವಿದ್ದ ಗಜ ಗಹ್ವರ ( ಆನೆಗೊಂದಿ , ಈಗ ನವವೃಂದಾವನ) ದಲ್ಲಿ ವೃಂದವನ ಪ್ರವೇಶ ಮಾಡಿದರು." ಎಂಬುದು ಇತ್ತೀಚಿನ ಕೆಲವು ಸಂಶೋಧಕರ( ವಿದ್ವಾನ್ ಬಿ ಏನ್ ಕೆ ಶರ್ಮ ಹಾಗು ಇತ್ಯಾದಿ ) ಅಭಿಪ್ರಾಯವಾಗಿದೆ .   ಯಾದಕ್ಕೆ ಪುಷ್ಟಿ ನೀಡುವ ಲಬ್ಧ ಪ್ರಮಾಣ ಶ್ರೀ ವಾದಿರಾಜರು ರಚಿಸಿದ ತೀರ್ಥ ಪ್ರಬಂಧ . ಇದರಲ್ಲಿ ರಾಜರು ತಾವು ಭೇಟಿ ನೀಡಿರುವ ಕ್ಷೇತ್ರಗಳ ಮಹಿಮೆ ಅಲ್ಲಿರುವ ದೈವವನ್ನು ವರ್ಣಸಿರುತ್ತಾರೆ . ಅದೇ ರೀತಿ ರಾಜರು ಗಜ ಗಹ್ವರ ಕ್ಕೆ ಭೇಟಿ ನೀಡಿದಾಗ ಶ್ರೀ ಪದ್ಮನಾಭ ತೀರ್ಥಾದಿಯಾಗಿ ಯತಿಗಳನ್ನು ನಮಿಸುವಾಗ ಶ್ರೀ ಮಜ್ಜಯ ತೀರ್ಥ ರನ್ನು ನಮಿಸಿದ್ದಾರೆ . ಅದರಿಂದ ಮಳಖೇಡದಲ್ಲಿರುವದು ಕೇವಲ ಮೃತ್ತಿಕ ವೃಂದಾವನ ಗಜ ಗಹ್ವರದಲ್ಲಿರುವದೇ  ಮೂಲ ವೃಂದವನ ಎಂಬ ಅಭಿಪ್ರಾಯಕ್ಕೆ ಸಂಶೋಧಕರು ಬಂದಿದ್ದಾರೆ . ಆದರೆ ದಾಸರ ಪದಗಳಲ್ಲಿ ಜಯ ತೀರ್ಥರು " ಮಳಖೇಡ ವಾಸ " ಎಂದೇ ವರ್ಣಿತರಾಗಿದ್ದಾರೆ . ಆದ್ದರಿಂದ ಈ ವಿಷಯದಲ್ಲಿ ಇನ್ನು ಹೆಚ್ಚು ಸಂಶೋಧನೆ ಅಗತ್ಯವಿದೆ .   

                                           ಆದರೆ ಶ್ರೀ ಜಯತೀರ್ಥರು ಮಾತ್ರ ನಮ್ಮೊಂದಿಗೆ ಆನೆಗೊಂದಿ ಯಲ್ಲೇ ಆಗಲಿ ಮಲಖೆಡದಲ್ಲೇ ಇರಲಿ ಒಟ್ಟು ಇದ್ದಾರೆ .    
                                                                                                                           
ಸಶೇಷ .... 
To be continued 

No comments:

Post a Comment

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...