ಶ್ರೀರಾಘವೇಂದ್ರವಿಜಯ ಉಲ್ಲೇಖಿಸುವ ಶ್ರೀರಾಘವೇಂದ್ರತೀರ್ಥರ ಪಟ್ಟಾಭಿಷೇಕ.
ವೇದಾಂತೇತಿಹಾಸದಲ್ಲಿ ಶ್ರೀರಾಘವೇಂದ್ರಗುರುಸಾರ್ವಭೌಮರ ಸ್ಥಾನದ ಪರಿಚಯವನ್ನು ಪ್ರಯಾಸದಿಂದ ತಿಳಿಯುವ ಅಗತ್ಯ ಸರ್ವಥಾ ಇಲ್ಲ, ಕಾರಣ ಅದು ಸರ್ವಜನನಿತವಾದ ವಿಷಯ. ಶ್ರೀಪದ್ಮನಾಭತೀರ್ಥರು, ಶ್ರೀಮಟ್ಟೀಕಾಕೃತ್ಪಾದರು, ಶ್ರೀವಿಬುಧೇಂದ್ರ-ಜಿತಾಮಿತ್ರರು, ಶ್ರೀಸುರೇಂದ್ರರು, ಶ್ರೀವಿಜಯೀಂದ್ರರು, ಶ್ರೀಸುಧೀಂದ್ರ-ಶ್ರೀರಾಘವೇಂದ್ರರು, ಶ್ರೀಸುಮತೀಂದ್ರ-ಶ್ರೀವಾದೀಂದ್ರರು, ಶ್ರೀವಸುಧೇಂದ್ರ-ಶ್ರೀವರದೇಂದ್ರ-ಶ್ರೀಧೀರೇಂದ್ರರು ಹೀಗೆ ಮಹೋನ್ನತ ಯತಿಪರಂಪರೆಯ ಆ ವಿದ್ಯಾಪ್ರಭಾವ, ಗ್ರಂಥನಿರ್ಮಾಣ, ವಾದಿ-ದಿಗ್ವಿಜಯಗಳು ಮಾತ್ರವಲ್ಲದೇ ಅವರು ಸಮಾಜದ ಕೊನೆಯ ವ್ಯಕ್ತಿಯ ಮೇಲೂ ಮಾಡಿದ ಪರಮಾನುಗ್ರಹ ಪ್ರತ್ಯಕ್ಷಸಿದ್ಧ. ಹೀಗೆ ಶ್ರೀಮನ್ಮಧ್ವಾಚಾರ್ಯರಿಂದ ಪ್ರವಹಿಸಿದ ವಿಶಿಷ್ಟವಾದ ಪರಂಪರೆಯಲ್ಲಿ ಉದಯಿಸಿದ ಒಬ್ಬೊಬ್ಬ ಯತಿಗಳೂ ಕೂಡ ಶ್ರೀಮೂಲರಾಮನಿಗರ್ಪಿಸಿದ ನಕ್ಷತ್ರಮಾಲೆಯ ಹೊಳೆಯುವ ನಕ್ಷತ್ರಗಳು.
ಅಂತಹ ಶ್ರೇಷ್ಠ ಗುರುಪರಂಪರೆಯಲ್ಲಿ ಬಂದ ಪೂರ್ಣಚಂದ್ರಮರೇ ಶ್ರೀರಾಘವೇಂದ್ರಗುರುಸಾರ್ವಭೌಮರು. ಪ್ರಹ್ಲಾದನ ಅವತಾರಭೂತರಾದ ಶ್ರೀರಾಯರ ಚರಿತ್ರೆಯನ್ನು ದಾಖಲಿಸುವ ಮಹತ್ವಪೂರ್ಣ ಕೃತಿ ಶ್ರೀರಾಘವೇಂದ್ರವಿಜಯ. ಐತಿಹಾಸಿಕವಾಗಿಯೂ ಪರಮಪ್ರಮಾಣವೆನಿಸಿದ, ಸ್ವತಃ ಶ್ರೀರಾಘವೇಂದ್ರಗುರುಸಾರ್ವಭೌಮರೇ ಪರಿಶೀಲಿಸಿದ ಐತಿಹಾಸಿಕ ದಾಖಲೆ ಇದಾಗಿದೆ ಎನ್ನುವುದನ್ನು ಮರೆಯುವಂತಿಲ್ಲ. ಪ್ರಾಥಮಿಕವಾಗಿ ಕಾವ್ಯ-ಸಾಹಿತ್ಯ-ವ್ಯಾಕರಣಾದಿ ಪ್ರಾಥಮಿಕ ಪಾಠವನ್ನು ರಾಯರಿಗೆ ಹೇಳಿದ ಗುರುಗಳಾದ ಶ್ರೀಲಕ್ಷ್ಮೀನರಸಿಂಹಾಚಾರ್ಯರ ಹಾಗೂ ರಾಯರ ಪೂರ್ವಾಶ್ರಮ ಅಕ್ಕಂದಿರಾದ ವೇಂಕಟಾಂಬಾ ಅಮ್ಮನವರ ಸುಪುತ್ರರಾದ ಶ್ರೀನಾರಾಯಣಾಚಾರ್ಯರೇ ಈ ಗ್ರಂಥದ ಕರ್ತೃಗಳು. ಶ್ರೀನಾರಾಯಣಾಚಾರ್ಯರು ತಮ್ಮ ಸೋದರಮಾವಂದಿರಾದ ಶ್ರೀರಾಘವೇಂದ್ರತೀರ್ಥರನ್ನು ತಮ್ಮ ಬಾಲ್ಯದಿಂದಲೇ ಹತ್ತಿರದಿಂದ ನೋಡಿಕೊಂಡು ಬೆಳೆದವರು. ಅವರ ವ್ಯಕ್ತಿತ್ವವನ್ನು ಪ್ರತ್ಯಕ್ಷವಾಗಿ ನೋಡಿ ಹಿರಿ ಹಿರಿ ಹಿಗ್ಗಿದವರು. ಪ್ರಾಯಃ ಶ್ರೀರಾಘವೇಂದ್ರಗುರುಗಳ ಜೀವನದಲ್ಲಿನ ಎಲ್ಲ ಘಟನೆಗಳಿಗೆ ಪ್ರತ್ಯಕ್ಷದರ್ಶಿಗಳಾಗುರುವವರು.