Friday, 6 October 2023

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ


ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕೃತಿ.

ಶ್ರೀರಾಯರೊಂದಿಗೆ ಬಾಲ್ಯದಲ್ಲಿ ಜೊತೆಜೊತೆಗೇ ಅಧ್ಯಯನ ನಡೆಸಿದವರೂ, ಸ್ವತಃ ಶ್ರೀರಾಯರ ಪೂರ್ವಾಶ್ರಮ ಅಕ್ಕ ವೆಂಕಮ್ಮನವರ ಮಕ್ಕಳೂ, ಶ್ರೀರಾಘವೇಂದ್ರಸ್ವಾಮಿಗಳಿಗೆ ಆರಂಭಿಕಗ್ರಂಥಗಳನ್ನು ಪಾಠ ಹೇಳಿದ ಶ್ರೀಲಕ್ಷ್ಮೀನರಸಿಂಹಾಚಾರ್ಯರ ಪುತ್ರರೂ ಆದ ಶ್ರೀನಾರಾಯಣಾಚಾರ್ಯರೇ ಈ ಗ್ರಂಥದ ಕರ್ತೃಗಳು. ( ಶ್ರೀರಾಯರ ಪೂರ್ವಾಶ್ರಮ ಸೋದರಳಿಯ).
ದ್ವಿತೀಯಸರ್ಗದಲ್ಲಿ ಸ್ವತಃ ಶ್ರೀಮನ್ಮಧ್ವಾಚಾರ್ಯರೇ ಮೂಲರಾಮದೇವರ ಬಗ್ಗೆ ತಮ್ಮ ಶಿಷ್ಯರಿಗೆ ನೀಡಿದ ಉಪದೇಶಾತ್ಮಕವಾದ ಆದೇಶವನ್ನು ದಾಖಲಿಸಿದ್ದಾರೆ.

ಸಾ ಯತ್ರ ರಾಮಪ್ರತಿಮಾಸ್ತಿ ತತ್ರ
ಚತುಃ ಪುಮರ್ಥೀ ಸತತಂ ಚಕಾಸ್ತಿ |
ಆದಿಶ್ಯ ಚೈವಂ ಗುರುಣೈವ ದತ್ತಾಮ್
ಅಥಾರ್ಚಯತ್ತಾಮನಿಶಂ ಯಮೀಂದ್ರಾಃ ||
- ಶ್ರೀರಾಘವೇಂದ್ರವಿಜಯ


ಈ ಮಹದ್ಗ್ರಂಥಕ್ಕೆ ಶ್ರೀರಾಘವೇಂದ್ರತೀರ್ಥರ ಪೂರ್ವಾಶ್ರಮ ಸದ್ವಂಸಜಾತರೂ, ಶ್ರೀಧೀರೇಂದ್ರತೀರ್ಥರ ಮಕ್ಕಳಾದ, ಶ್ರೀಸುಜ್ಞಾನೇಂದ್ರತೀರ್ಥರ ಪಿತೃಪಾದರೂ ಆದ, ಸಾತ್ವಿಕರೂ ಮಹಾನ್ ವಿದ್ವಾಂಸರೂ ಆದ ಶ್ರೀರಾಮಾಚಾರ್ಯರು 'ಬಾಲಬೋಧಿನಿ' ಎಂಬ ವ್ಯಾಖ್ಯಾನವನ್ನು ರಚಿಸಿದ್ದಾರೆ.
ಅಲ್ಲಿ ಈ ಶ್ಲೋಕವನ್ನು ವ್ಯಾಖ್ಯಾನಿಸುವಾಗ,

"ಸಾ ರಾಮಪ್ರತಿಮಾ ಯತ್ರ ವರ್ತತೇ, ತತ್ರ ಚತುರ್ಣಾಂ ಪುಮರ್ಥಾನಾಂ ಸಮಾಹಾರಾಃ ಅನವರತಂ ದೀಪ್ಯಮಾನಾ ಭವತಿ | ಏವಂ ಪ್ರಕಾರೇಣ "ಆಚಾರ್ಯೇಣ" ಆಜ್ಞಪ್ಯ ತೇನ ದತ್ತಾಂ ತಾಂ ಪ್ರತಿಮಾಂ ಶ್ರೀಮದಾಚಾರ್ಯಾಣಾಂ ಶಿಷ್ಯಪ್ರಶಿಷ್ಯಸನ್ಯಾಸಿನಃ ಪೂಜಾಂ ಕೃತವಂತಃ ||" - ಬಾಲಬೋಧಿನಿವ್ಯಾಖ್ಯಾನಮ್

ಎಂದು, ಈ ಮೂಲರಾಮಪ್ರತಿಮೆಯು ಎಲ್ಲಿರುತ್ತದೆಯೋ ಅಲ್ಲೊ ಧರ್ಮಾರ್ಥಕಾಮಮೋಕ್ಷಾಖ್ಯ ಚತುರ್ವಿಧ ಪುರುಷಾರ್ಥಗಳೂ ಸ್ಫುಟವಾಗಿ ಶೋಭಿಸುವವು ಎಂದು ಮಹಿಮೋಪದೇಶವನ್ಮು ಮಾಡಿದ್ದಾರೆ. ಆ ಪ್ರಕಾರವಾಗಿಯೇ ಶ್ರೀಮದಾಚಾರ್ಯರಿಂದಲೇ ಆಜ್ಞಪ್ತರಾದ ಅವರ ಶಿಷ್ಯಪ್ರಶಿಷ್ಯರು ಮೂಲರಾಮಾರ್ಚನೆ ಮಾಡುತ್ತ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

Wednesday, 4 October 2023

ರಾಮನ ನೋಡಿರೈ.... ರಾಮನ ನೋಡಿರೈ ....

  ರಾಮನ ನೋಡಿರೈ.... ರಾಮನ ನೋಡಿರೈ ....

ತನ್ನ ಭಕ್ತಸಮೂಹವನ್ನು ಪಾಪಸಮುದ್ರದಿಂದ ತಾರಣ ಮಾಡಿಸಿ ರಕ್ಷಿಸಲಿಚ್ಛಿಸಲೆಂದು ಪರಮಕಾರುಣ್ಯದಿಂದ ಭಗವಂತ ಎತ್ತಿದ ಅವತಾರವೇ ಶ್ರೀರಾಮಾವತಾರ. 'ರಾಮ' ಎಂಬೆರೆಡಕ್ಷರ ಪ್ರೇಮದಿ ಸಲಹಿತು ಸುಜನರನು ಎಂದು ದಾಸರೇ ನುಡಿದಿದ್ದಾರೆ. ಸಮಸ್ತ ಆಸ್ತಿಕರ ಹೃತ್ಕಮಲಮದ್ಯನಿವಾಸಿ ಶ್ರೀರಾಮಚಂದ್ರ. ಈ ಭಾರತಭೂಮಿಯ ಅಸ್ಮಿತೆಯ ಸಂಕೇತ. ಸಾಧು-ಸಜ್ಜನರ ಆರಾಧ್ಯ. ಈ ದೇಶದ ಸಂಸ್ಕೃತಿಯ ಅವಿಭಾಜ್ಯ ಅಂಗ. ಭಕ್ತರ ಮನೆ-ಮನ ಆವರಿಸಿರುವ ಭಗವಂತನ ಭವ್ಯರೂಪ. 

ಕಲ್ಯಾಣಗುಣಪರಿಪೂರ್ಣನಾದ ಆ ಭಾವಂತನ ಈ ಶ್ರೀರಾಮಚಂದ್ರರೂಪವನ್ನು ನಮ್ಮ ಮತಾಚಾರ್ಯರಾದ ಶ್ರೀಮದಾಚಾರ್ಯರು ಹನುಮಾವತಾರದಲ್ಲಿ ವಿಶೇಷವಾಗಿ ಆದರೂ ಮೂರು ಅವತಾರಗಳಲ್ಲಿ ಅನನ್ಯವಾಗಿ ಆರಾಧಿಸಿದ್ದಾರೆ, ಸೇವಿಸಿದ್ದಾರೆ. ಹಾಗೆಯೇ ತಮ್ಮ ಶಿಷ್ಯಪ್ರವರ ಶ್ರೀಪದ್ಮನಾಭತೀರ್ಥರಿಗೂ ವಿಶೇಷವಾಗಿ ಅನುಗ್ರಹಿಸಿ ಕೊಟ್ಟದ್ದು ಶ್ರೀರಘುಪತಿಯನ್ನೇ ಎಂದು ಶ್ರೀಹೃಷಿಕೇಶತೀರ್ಥರು ದಾಖಲಿಸಿದ್ದಾರೆ. 

ಅಂತಹ ಶ್ರೀರಾಮದೇವರು ಅನೇಕ ಪ್ರತಿಮೆಗಳಲ್ಲಿ ಸನ್ನಿಹಿತನಾಗಿ ಶ್ರೀಮದಾಚಾರ್ಯರ ಕರಸ್ಪರ್ಶಮಾತ್ರದಿಂದಲೇ ಅತಿಪೂಜ್ಯ ಅನೂಹ್ಯ ಸನ್ನಿಧಾನವನ್ನು ಇಟ್ಟು ಶ್ರೀಮದಾಚಾರ್ಯರವರದನಾಗಿ ಮೆರೆದಿದ್ದಾನೆ. ಆ ಪ್ರತಿಮಾದಿಗಳ ಸ್ಪರ್ಶ ಮಾಡುವವರ, ಅರ್ಚಿಸುವವರ ಇಷ್ಟಾರ್ಥಗಳನ್ನು ಪೊರೆವುದಲ್ಲದೇ ಆ ಅಧಿಷ್ಠಾನದ ದರ್ಶನ ಮಾಡಿದವರ ಬೇಡಿದ ಕಾಮಿತಗಳನ್ನೆಲ್ಲ ಪೊರೆಯುವುದು ಎನ್ನಲು ಹರಿದಾಸರ ಸ್ವಾನುಭವದ ನೂರಾರು ಕೀರ್ತನೆಗಳೇ ಜ್ವಲಂತ ಸಾಕ್ಷಿ. 

 ಶ್ರೀಮದಾಚಾರ್ಯರು ಸ್ವಯಮ್ ತಾವೇ ಅರ್ಚಿಸಿದ ಪ್ರತಿಮೆಗಳ ಅಂತರ್ಗತನಾದ ಆ ಭಗವಂತನ ಸ್ತೋತ್ರಪರವಾದ ಅನೇಕ ಕೀರ್ತನೆಗಳು ಉಪಲಬ್ಧವಿವೆಯಷ್ಟೇ. 

ಆದರೆ ಪ್ರಸ್ತುತ ಶ್ರೀರಾಮಚಂದ್ರ ದೇವರನ್ನು ಹಾಗೂ ರಾಮಾವತಾರದ ಮಹಾಮಹಿಮೆಯನ್ನು, ಆಚಾರ್ಯರೇ ಮೊದಲಾದ ಮಹನೀಯರು ಮೋದದಿಂದ ಅರ್ಚಿಸಿದ ಆ ದಿವ್ಯಸನ್ನಿಧಾನೋಪೇತ ಪ್ರತಿಮೆಗಳ ಸೌಂದರ್ಯಾದಿ ವೈಭವವನ್ನು ವರ್ಣಿಸಲು ಹರಿದಾಸರ ಈ ಮೂರು ಪದಗಳು ವಿಶಿಷ್ಟವಾಗಿವೆ. ಈ ಮೂರು ಪದಗಳ ಶೈಲಿ ಒಂದೇ ಆಗಿದ್ದು, ಆ ಕೀರ್ತನೆಗಳನ್ನು ಅವಲೋಕಿಸುವುದೇ, ಹಾಡಿ ಕೊಂಡಾಡಿ ಕೇಳುವದೇ ಮನಸ್ಸಿಗೆ ಮುದನೀಡುತ್ತದೆ. 

ಮೂರೂ ಪದಗಳು 'ರಾಮನ ನೋಡಿರೈ.... " ಎಂದೇ ಆರಂಭವಾಗುತ್ತವೆ. ಒಂದೊಂದಾಗಿ ಆ ಪದಗಳ ಪರಿಚಯವನ್ನು ಸಂಕ್ಷಿಪ್ತವಾಗಿ ನೋಡೋಣ. 

೧. "ರಾಮನ ನೋಡಿರೈ ನಿಮ್ಮಯ ಕಾಮಿತ ಬೇಡಿರೈ" - 

ರಚನೆ:     ದಾಸಶ್ರೇಷ್ಠ, ಹರಿಕಥಾಮೃತಸಾರಾದಿ ಉದ್ಗ್ರಂಥಳ ರಚಿಸಿದ ಶ್ರೀಜಗನ್ನಾಥದಾಸಾರ್ಯರ ರಚನೆ. 

ವಸ್ತು:      ಶ್ರೀರಾಘವೇಂದ್ರಮಠಸ್ಥಿತ ಶ್ರೀಬ್ರಹ್ಮಕರಾರ್ಚಿತ ಚತುರ್ಯುಗ ಮೂರ್ತಿ ಶ್ರೀಮೂಲರಾಮ ದೇವರ ದಿವ್ಯ ಪ್ರತಿಮೆ. 

ಪ್ರಸಂಗ:   ಶ್ರೀವಸುಧೇಂದ್ರ ತೀರ್ಥರು ಮಾಡುವ ವೈಭವದ ಶ್ರೀಮೂಲರಾಮಾರ್ಚನೆಯ ಸಂದರ್ಭದಲ್ಲಿ ಶ್ರೀಮೂಲರಾಮದೇವರ ಆಗತಿಕ್ರಮದ ರಚಿಸಿದ ಕೀರ್ತನೆ. ಶ್ರೀಮೂಲರಾಮಪ್ರತಿಮೆಯ ಬಗ್ಗೆ ದಾಸಾರ್ಯರು ದಾಖಲಿಸಿಟ್ಟ ಮಹತ್ತರವಾದ ಐತಿಹಾಸಿಕ ದಾಖಲೆ. ಮೂಲರಾಮನ ಪೂಜಾ ಪರಂಪರೆಯನ್ನು ದಾಖಲಿಸುವ ಕೃತಿ. 

ಮೂಲರಾಮನನ್ನು 'ವಸುಧೇಂದ್ರಾರ್ಯರ ಪ್ರಿಯ ಕವಿಜನ ಗೇಯ' ಎಂದಿದ್ದಾರೆ. 

ಶ್ರೀಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀರಾಘವೇಂದ್ರಸ್ವಾಮಿಗಳವರ ಮಠದ ಸಂಸ್ಥಾನ ಮುಖ್ಯಪ್ರತಿಮಾ 
ಚತುರ್ಮುಖಬ್ರಹ್ಮ ಕರಾರ್ಚಿತ ಶ್ರೀಮನ್ಮೂಲರಾಮಚಂದ್ರದೇವರು (ಮಧ್ಯದಲ್ಲಿ ) 




೨. "ರಾಮನ ನೋಡಿರೈ ರಘುಜಲಲಾಮನ ಪಾಡಿರೈ"-

ರಚನೆ:    ದಾಸಶ್ರೇಷ್ಠ ಶ್ರೀಗೋಪಾಲದಾಸಾರ್ಯರ  ಶಿಷ್ಯರೂ ಹಾಗೂ ತಮ್ಮಂದಿರಾದ  ಶ್ರೀಗೋಪಾಲದಾಸಾರ್ಯರಿಂದಲೇ ಅಂಕಿತ ಪಡೆದ ಮಾಹಾನುಭಾವರಾದ ಶ್ರೀಗುರುಗೋಪಾಲದಾಸಾರ್ಯರ ರಚನೆ. 

ವಸ್ತು:      ಶ್ರೀರಾಘವೇಂದ್ರಮಠಸ್ಥಿತ ಶ್ರೀಬ್ರಹ್ಮಕರಾರ್ಚಿತ ಚತುರ್ಯುಗ ಮೂರ್ತಿ ಶ್ರೀಮೂಲರಾಮ ದೇವರ ದಿವ್ಯ ಪ್ರತಿಮೆ. 

ಪ್ರಸಂಗ:   ಶ್ರೀವಸುಧೇಂದ್ರ ತೀರ್ಥರ ಕಾರಕಮಲಸಂಜಾತರಾದ ಶ್ರೀವರದೇಂದ್ರತೀರ್ಥರು ಮಾಡುವ ವೈಭವದ ಶ್ರೀಮೂಲರಾಮಾರ್ಚನೆಯ ಸಂದರ್ಭದಲ್ಲಿ ಶ್ರೀಮೂಲರಾಮದೇವರ ಆಗತಿಕ್ರಮದ ಬಗ್ಗೆ ಉಲ್ಲೇಖಿಸುತ್ತಾ, ರಚಿಸಿದ ಕೀರ್ತನೆ. ಮೂಲರಾಮಪ್ರತಿಮೆಯ ಬಗ್ಗೆ ದಾಸಾರ್ಯರು ದಾಖಲಿಸಿಟ್ಟ ಮಹತ್ತರವಾದ ಐತಿಹಾಸಿಕ ದಾಖಲೆ. ಶ್ರೀವರದೇಂದ್ರತೀರ್ಥರ ಕರಗಳಿಂದ ಪೂಜೆಗೊಂಬ ಮೂಲರಾಮನ ವೈಭವ ಇಲ್ಲಿದೆ. 


'ಗುರು ವರದೇಂದ್ರರ ಕಾರಕಮಲಾರ್ಚಿತಚರಣ' ಎಂದು ಮೂಲರಾಮನನ್ನು ಉಲ್ಲೇಖಿಸಿದ್ದಾರೆ.  


ಶ್ರೀಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀರಾಘವೇಂದ್ರಸ್ವಾಮಿಗಳವರ ಮಠದ ಸಂಸ್ಥಾನ ಮುಖ್ಯಪ್ರತಿಮಾ 
ಚತುರ್ಮುಖಬ್ರಹ್ಮ ಕರಾರ್ಚಿತ ಶ್ರೀಮನ್ಮೂಲರಾಮಚಂದ್ರದೇವರು (ಮಧ್ಯದಲ್ಲಿ ) 

೩. "ರಾಮನ ನೋಡಿರೈ ಮಂಗಳಧಾಮನ ಪಾಡಿರೈ" - 

ರಚನೆ:  ಶ್ರೀಕೊಪ್ಪರ ಲಕ್ಷ್ಮೀ-ನರಸಿಂಹದೇವರ ದಿವ್ಯಪಾದಪದ್ಮಾರಾಧಕರಾದ ಅರ್ಚಕರಾದ, ಶ್ರೀರಾಘವೇಂದ್ರಗುರುಸಾರ್ವಭೌಮರ ಅನನ್ಯ ಭಕ್ತರಾದ, ಇಭರಾಮಪುರ ಕೃಷ್ಣಾಚಾರ್ಯರ ( ಪೂಜ್ಯ ಅಪ್ಪಾ ಅವರ)  ಭಕ್ತರಾದ ಕೊಪ್ಪರ ಗಿರಿಯಾಚಾರ್ಯರು  

ವಸ್ತು: ಶ್ರೀಕೂಡಲಿ ಆರ್ಯ ಅಕ್ಷೋಭ್ಯತೀರ್ಥಮಠಸ್ಥಿತ ಶ್ರೀಮಧ್ವಾಚಾರ್ಯರ ಕರಾರ್ಚಿತ ಶ್ರೀವೈಕುಂಠರಾಮ ದೇವರ ದಿವ್ಯ ಪ್ರತಿಮೆ. 

ಪ್ರಸಂಗ:  ಶ್ರೀರಘುಶಾಂತ ತೀರ್ಥರು ಮಾಡುವ ವೈಭವದ ಶ್ರೀವೈಕುಂಠರಾಮದೇವರ ಪೂಜೆಯ ಸಂದರ್ಭದಲ್ಲಿ ರಚಿಸಿದ ಕೀರ್ತನೆ. ಶ್ರೀವೈಕುಂಠರಾಮದೇವರ ಬಗ್ಗೆ ದಾಸಾರ್ಯರು ದಾಖಲಿಸಿಟ್ಟ ಮಹತ್ವಪೂರ್ಣ ಐತಿಹಾಸಿಕ ದಾಖಲೆ. 

ಕರ್ತೃಗಳ ಕಾಲಮಾನ : ಕಾರ್ಪರ ನರಹರಿ ದಾಸರ ಕಾಲ (1896-1979)  

ಕೂಡಲಿ ಆರ್ಯ ಅಕ್ಷೋಭ್ಯತೀರ್ಥ ಸಂಸ್ಥಾನದ ಮುಖ್ಯಪ್ರತಿಮಾ
ಶ್ರೀಮನ್ಮಧ್ವಾಚಾರ್ಯರ ಕರಾರ್ಚಿತ ವೈಕುಂಠ ರಾಮಚಂದ್ರದೇವರು 


ಅಂತಹ ಶ್ರೀರಾಮಚಂದ್ರದೇವರ ದರ್ಶನವನ್ನು ಮಾಡಿ ನಾವು ನೀವು ಎಲ್ಲರೂ ಕೃತಾರ್ಥರಾಗೋಣ. 

Wednesday, 30 August 2023

"ಶ್ರೀರಾಘವೇಂದ್ರ ನಿಮ್ಮ ಚಾರು ಚರಣವ "



 * **  ಆರಾಧನಾ ವಿಶೇಷ  *** 


ಶ್ರೀಮದ್ರಾಘವೇಂದ್ರತೀರ್ಥ ಗುರುಸಾರ್ವಭೌಮರ ಅನನ್ಯ ಭಕ್ತರಾದ, ಶ್ರೀವರದೇಂದ್ರತೀರ್ಥರ ವಿದ್ಯಾಶಿಷ್ಯರಾದ,  ಶ್ರೀವಿಜಯದಾಸ-ಶ್ರೀಗೋಪಾಲದಾಸಾರ್ಯರ ಕರುಣಾಪಾತ್ರರಾದ, ಹರಿದಾಸಕುಲಸನ್ನುತರಾದ, ಅಪರೋಕ್ಷ ಜ್ಞಾನಿಗಳಾದ,  "ಶ್ರೀಶ್ರೀಜಗನ್ನಾಥದಾಸಾರ್ಯರು" ಭವಭಯನಿವಾರಕರಾದ, ಸಂಸಾರ ಸಾಗರದಿಂದ ನಮ್ಮನ್ನು ಪಾರುಗಾಣಿಸುವ ಮಹಾನ್ ಗುರುಗಳಾದ "ಶ್ರೀರಾಘವೇಂದ್ರಗುರುಸಾರ್ವಭೌಮ" ರನ್ನು ಕುರಿತು ರಚಿಸಿರುವ  "ಶ್ರೀರಾಘವೇಂದ್ರ ನಿಮ್ಮ ಚಾರು ಚರಣವ " ಎನ್ನುವ ಪ್ರಸಿದ್ಧ ಕೀರ್ತನೆಯಲ್ಲಿ "ಮೂಲರಾಮಾರ್ಚಕ"ರಾದ ಶ್ರೀರಾಘವೇಂದ್ರಪ್ರಭೃತಿಗಳನ್ನು"ಮೂಲರಾಮನ ಪಾದಕೀಲಾಲಜ ಮಧುಪ" ಎಂದು ಉತ್ಕೃಷ್ಟವಾಗಿ ವರ್ಣಿಸಿರುವ ಪರಿ.


ಶ್ರೀ ರಾಘವೇ೦ದ್ರ ನಿಮ್ಮ - ಚಾರುಚರಣವ
ಸಾರಿದೆ ಶರಣ ಮ೦ದಾರ ಕರುಣವ || ಪ ||
ಘೋರ ಭಯವನದಿ ತಾರಿಸು ತವಕದಿ
ಸೂರಿ ಸುಧೀ೦ದ್ರ ಕುಮಾರ ಉದಾರ || ಅ ||

ಮುನಿರಾಯ ನಿಮ್ಮ ಪಾದ - ವನರುಹ ಧ್ಯಾನ
ಪ್ರಣವ ಸುಸ್ತವನ - ಅರ್ಚನೆ ಮಾಳ್ಪ ನಾನಾ
ಜನರ ವಾ೦ಛಿತವೀವ ಗುಣಪೂರ್ಣ ಜ್ಞಾನ
ಧನವ ಪಾಲಿಸೆನಗೀ-ಕ್ಷಣ ನಿನ್ನವಾ
ಮನುಜನ ಪ್ರತಿದಿನ ದಿನದಿ ದಣಿಸುವುದು
ಘನವೇ ಗುರುವೇ ಪಾವನತರಚರಿತ || ೧ ||

"ಮೂಲರಾಮನಪಾದ- ಕೀಲಾಲಜ ಮಧುಪ"
ಬಾಲಕನ ಬಿನ್ನಪ - ಲಾಲಿಸೋ ಮುನಿಪ
ತಾಳಲಾರೆನೊ ತಾಪ - ತ್ರಯದ ಸ೦ತಾಪ
ಕೇಳೊ ವಿಮಲಜ್ಞಾನ - ಶೀಲ ಸ್ವರೂಪ
ಭೂಲಲನಾಧವ ಕೋಲನ೦ದನಾ
ಕೂಲಗ ವರಮ೦ತ್ರಾಲಯ ನಿಲಯ || ೨ ||

ಕಲಿಕಲ್ಮಷ ವಿದೂರ - ಕುಜನಕುಠಾರ
ನಳಿನಾಕ್ಷ ವಿಮಲ ಶ್ರೀ- ತುಲಸಿಯ ಹಾರ
ಗಳಶೋಭಿತ ಕಮ೦ಡಲು ದ೦ಡಧರ
ಅಲವಬೊಧರಮತ - ಜಲಧಿ ವಿಹಾರ
ಸುಲಲಿತ ಕರುಣಾ೦ಬುಧಿ 'ಜಗನ್ನಾಥವಿಠ್ಠಲ'-
ನೊಲುಮೆಯ ಪಡೆದಿಳೆಯೊಳು ಮೆರೆವ || ೩ ||




*** ಸದ್ವೈಷ್ಣವಕುಲಾವತಂಸರಾದ ಶ್ರೀಜಗನ್ನಾಥದಾಸಾರ್ಯರ ಸನ್ನಿಧಾನದಲ್ಲಿರುವ , ಶ್ರೀಜಗನ್ನಾಥದಾಸಾರ್ಯರ ಪುತ್ರರಾದ ಶ್ರೀದಾಮೋದರ ದಾಸಾರ್ಯರ ಸ್ವಹಸ್ತಲಿಖಿತ ಹಸ್ತಪ್ರತಿಯನ್ನೂ ಕೂಡ ಇಂದಿಗೂ ಕಾಣಬಹುದು.







ಸಂಗ್ರಹ: ಸಮೀರ ಜೋಶಿ

Saturday, 12 August 2023

ದಿನಕರನುದಿಸಿದನು…. ಧರೆಯೊಳಗೆ…. ಶ್ರೀರಾಘವೇಂದ್ರವಿಜಯಕಾರರ ದೃಷ್ಟಿಯಲ್ಲಿ


ಶ್ರೀರಾಘವೇಂದ್ರವಿಜಯದ ಕಣ್ಣಲ್ಲಿ ಶ್ರೀರಾಯರ ಅವತಾರ ಗುರುಸಾರ್ವಭೌಮರ ವರ್ಧಂತೀ ಮಹೋತ್ಸವ – ಶ್ರೀರಾಯರು ಭೂಲೋಕದಲ್ಲಿ ಅವತರಿಸಿದ ಪುಣ್ಯಪ್ರದ ದಿವಸ. ಇತಿಹಾಸದುದ್ದಕ್ಕೂ ತಮ್ಮ ಪರಾಕ್ರಮ, ಅನೇಕಕಲಾಪ್ರಾವೀಣ್ಯದಿಂದ, ಪಾಂಡಿತ್ಯಾದಿ ಸದ್ಗುಣಗಳಿಂದ ಜಗದ್ವಿಖ್ಯಾತವಾದ ಮನೆತನದಲ್ಲಿ ಸಕ್ಷಾತ್ ಪ್ರಹ್ಲಾದರಾಜರೇ ಅವತರಿಸಿದ ಪರಮಮಂಗಲಕರ ದಿನ.

ಶ್ರೀರಾಘವೇಂದ್ರಗುರುಸಾರ್ವಭೌಮರ ದಿವ್ಯವಾದ ಚರಿತ್ರೆಯನ್ನು ತಿಳಿಸುವ ಮಹೋಪಕಾರವನ್ನು ಮಾಡಿದ ನಾರಾಯಣಾಚಾರ್ಯರ ಆಪ್ತತ್ವ, ಈ ಗ್ರಂಥದ ಪ್ರಸ್ತುತಿಯ ಹಿನ್ನೆಲೆ, ಆ ಗ್ರಂಥದಲ್ಲಿ ಪ್ರತಿಪಾದಿತವಾಗಿರುವ ಮಧ್ವವಿಜಯದ ಪ್ರತಿಬಿಂಬತ್ವ ಇವೆಲ್ಲವೂ ಶ್ರೀರಾಘವೇಂದ್ರವಿಜಯದ ಪರಮಪ್ರಾಮಾಣಿಕತ್ವವನ್ನು, ಶ್ರೆಷ್ಠತ್ವವನ್ನು ತಿಳಿಸುವ ಪ್ರಮುಖ ವಿಚಾರಗಳು.

ಶ್ರೀರಾಘವೇಂದ್ರಗುರುರಾಜರೇ ಇದನ್ನು ಪರಿಶೀಲಿಸಿ ಪ್ರಮಾಣೀಕರಿಸಿರುವದರಿಂದ ಇದರ ಮೌಲ್ಯ ಎಷ್ಟು ಎಂಬುದು ಊಹೆಗೂ ನಿಲುಕದ್ದು. ಅಂತಹ ಪರಮ ಶ್ರೇಷ್ಠ ಮಹಾಕಾವ್ಯ ಶ್ರೀರಾಘವೇಂದ್ರವಿಜಯ.

ಶ್ರೀರಾಘವೇಂದ್ರವಿಜಯದಲ್ಲಿ ರಾಯರ ಅವತಾರದ ಪ್ರಸ್ತುತಿಯು ತೃತೀಯಸರ್ಗದಲ್ಲಿ ಅವರ ಶ್ರೇಷ್ಠವಂಶದ ಹಿನ್ನೆಲೆ,ಶ್ರೀತಿಮ್ಮಣ್ಣಾರ್ಯರ ಹಾಗೂ ಅವರ ಪೂರ್ವೀಕರ ಶ್ರೇಷ್ಠ ತಪಸ್ಸು, ವಿದ್ಯಾದಿ ವೈಭವಗಳ ಅವರ ಚರಿತ್ರೆಯ ಸಂಕ್ಷಿಪ್ತ ಪರಿಚಯವನ್ನು, ಶ್ರೀರಾಯರ ಅವತಾರ ವೃತ್ತಾಂತವನ್ನು ಶ್ರೀರಾಘವೇಂದ್ರವಿಜಯಕಾರರು ವಿವರಿಸಿದ್ದಾರೆ.



ಗೌತಮರ ಮಹಿಮಾತಿಶಯಗಳು :

ಸರ್ವೋತ್ತಮದೇವತೆಯಾದ ನಾರಾಯಣನಲ್ಲಿ ವಿಶೇಷವಾದ ಭಕ್ತಿಜ್ಞಾನಾದಿಗಳನ್ನೇ ಪ್ರಧಾನವಾಗಿ ಉಳ್ಳ, ಸುದ್ಗಿಣಗಳಿಗೇ ಆಶ್ರಯಭೂತರಾಗಿದ್ದ ಋಷಿಗಳ ಸಮೂಹದಲ್ಲಿ ಪ್ರಧಾನರಾದ ಗೌತಮನಾಮ ಮುನಿಗಳು ಭೂಲೋಕದಲ್ಲಿದ್ದರು. ಇವರು ಅನುಗ್ರಾಹಕತ್ವ ಮೊದಲಾದ ಗುಣಗಳಿಗೆ ಪ್ರಸಿದ್ಧರು. ಅಸುರಮೋಹನಾರ್ಥವಾಗಿ ನ್ಯಾಯಸೂತ್ರವೆಂಬ ತರ್ಕಶಾಸ್ತ್ರವನ್ನು ಮಾಡಿ ಸಜ್ಜನರ ಉದ್ಧಾರವನ್ನು ಮಾಡಿದವರು ಹಾಗೂ ಶ್ರೀವೇದವ್ಯಾಸದೇವರ ಅವತಾರಕ್ಕೆ ಕಾರಣರಾದವರು. ಹೀಗೆ ತಪಸ್ಸು, ಅವರ ಮಹಿಮೆಯ ವರ್ಣನೆಗಳೊಂದಿಗೆ ಶ್ರೀರಾಯರ ಉತ್ಪತ್ತಿವಿಚಾರವು ಈ ಮಹಾಕಾವ್ಯದಲ್ಲಿ ತಿಳಿಸಲ್ಪಟ್ಟಿದೆ.




ಗೌತಮವಂಶದ ವರ್ಣನೆ:

ಈ ರೀತಿ ಗೌತಮರಂತೆಯೇ ಶ್ರೇಷ್ಠ ಸದ್ಗುಣಗಳೇ ತುಂಬಿದ ಶ್ರೇಷ್ಠರು ಅವತರಿಸಿದ ಶ್ರೇಷ್ಠವಂಶ ಗೌತಮರ ವಂಶ. ಈ ವಂಶದಲ್ಲಿನ ಬಹುಜನರು ಮೋಕ್ಷವೆಂಬ ಶ್ರೇಷ್ಠ ಫಲವನ್ನೇ ಪಡೆದವರು. ಒಳ್ಳೆಯ ನಡತೆ ಉಳ್ಳವರು, ಅಳಿಯಿಲಿಕ್ಕಸಾಧ್ಯವಾದ ಎತ್ತರದ ವ್ಯಕ್ತಿತ್ವ ಉಳ್ಳ ಬ್ರಾಹ್ಮಣ ಶ್ರೇಷ್ಠರು ಈ ಗೌತಮವಂಶದಲ್ಲಿ ಅವತರಿಸಿದ್ದರು.


ಇಂತಹ ಅನೇಕ ಗೌತಮ ವಂಶಗಳಲ್ಲಿ ಶ್ರೇಷ್ಠವಾದ ವಂಶವೊಂದಿತ್ತು. “ಜನಕೋಮಪಕನ್ಯಕೇsನ್ವಯೇಸ್ಮಿನ್” ತಂದೆಯ ಹೋಲಿಕೆಯಿಳ್ಳ ಹೆಣ್ಣುಮಕ್ಕಳುಳ್ಳ, “ಅನುಜಾತಸಮಾನಪೂರ್ವಕಾತೇ”  ಸದ್ಗುಣಗಳ ವಿಚಾರದಲ್ಲಿ ತಮ್ಮಂದಿರೆಲ್ಲ ಅಣ್ಣಂದಿರ ಸಮಾನವಾಗಿರುವ, “ನಿಜತಾತಾಧಿಕನಂದನಃ” ಸದ್ಗುಣಗಳು, ವಿದ್ಯಾಪ್ರಭಾವ ಮುಂತಾದ ವಿಷಯಗಳಲ್ಲಿ ತಂದೆಯನ್ನೂ ಮೀರಿಸುವ ಪುತ್ರರತ್ನರು ಹುಟ್ಟುತ್ತಿದ್ದ ಆ ಹಿರಿದಾದ ವಂಶದಲ್ಲಿ ಶ್ರೀಕೃಷ್ಣಾಚಾರ್ಯರೆಂಬ ಶ್ರೇಷ್ಠರು ಇದ್ದರು.



ಪೂರ್ವಿಕರ ಮಹಿಮೆ:

ಶ್ರೀಕೃಷ್ಣಾರ್ಯರು ವಂಶಪಾರಂಪರ್ಯವಾಗಿ ಬಂದ ಶ್ರೇಷ್ಠವಾದ ಬ್ರಾಹ್ಮಣವಿದ್ಯೆಯೊಂದಿಗೆ, ಬ್ರಾಹ್ಮಣಯೋಗ್ಯವಾದ ಅನೇಕರೀತಿಯ ವಿದ್ಯೆಗಳನ್ನು ಧರಿಸಿದವರಾಗಿದ್ದರು. ಸದ್ಭುತ ವೀಣಾವಾದನವನ್ನೂ ಗಳಿಸಿಕೊಂಡಿದ್ದರು. ಅಂತಹ ಕೃಷ್ಣಾರ್ಯರು “ಕೃಷ್ಣಭೂಬಲಾರೇಃ ನಿಜಗಾಂಧರ್ವಕಲಾಂ ಉಪದಿಶ್ಯ…” ಅಖಿಲ ಕರ್ಣಾಟಕ ರತ್ನಸಿಂಹಾಸನಾಧೀಶ್ವರನಾದ ಶ್ರೀಕೃಷ್ಣದೇವರಾಯನಿಗೆ ನಿಜಗಂಧರ್ವವಿದ್ಯೆಯನ್ನು ಉಪದೇಶಿಸಿದವರು. ಗುಣವಾರಿಧಿಗಳಾದ ಶ್ರೀಕೃಷ್ಣಾರ್ಯರಿಗೆ ಸುವರ್ಣಮಯವಾದ ಮೇರುಪರ್ವತದಂತಿರುವ ಕನಕಾಚಲಾರ್ಯರೆಂಬ ಪುತ್ರರು ಹುಟ್ಟಿದರು.

ಶ್ರೀ ಧೀರೇಂದ್ರ ತೀರ್ಥರು

 || ಶ್ರೀಮನ್ಮೂಲರಾಮೋ ವಿಜಯತೆ ||                             ||ಶ್ರೀಗುರುರಾಜೋ ವಿಜಯತೆ||

ಪೂರ್ವಾಶ್ರಮ-    

                          ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ದಿಗ್ವಿಜಯ ವಿದ್ಯಾಸಿಂಹಾಸನಾಧೀಶ್ವರರಾದ ಶ್ರೀ ಶ್ರೀ ೧೦೦೮ ಶ್ರೀ ಧೀರೇಂದ್ರ ತೀರ್ಥರ ಬಗ್ಗೆ ಮಾತನಾಡಲು ನನ್ನ ಯೋಗ್ಯತೆ ಸಾಲದು. ಶ್ರೀ ರಾಘವೇಂದ್ರ ಗುರುಗಳ ಪರಮಾನುಗ್ರಹಕ್ಕೆ ಪಾತ್ರರಾಗಿದ್ದ ಶ್ರೀ ವಾದೀಂದ್ರ ತೀರ್ಥರ ಗುರುಸರ್ವಭೌಮರ ಪೂರ್ವಾಶ್ರಮ ಪುತ್ರರ ಹೆಸರು ಶ್ರೀ ಜಯರಾಮಚಾರ್ಯರು ಎಂದು. ಶ್ರೀ ಜಯರಾಮಾಚಾರ್ಯರು ತಮ್ಮ ಸಕಲ ವಿದ್ಯಾಭ್ಯಾಸಗಳನ್ನು ತಮ್ಮ ತಂದೆಗಳಾದ ಶ್ರೀ ಶ್ರೀನಿವಾಸಾಚಾರ್ಯರಲ್ಲಿ ಅರ್ಥಾತ್  ಶ್ರೀಮದಾಚಾರ್ಯರ  ಪೀಠವನ್ನು  ಶ್ರೀಮದುಪೇಂದ್ರ ತೀರ್ಥರ ನಂತರ ಆಳಿದ ಶ್ರೀ ವಾದೀಂದ್ರ ತೀರ್ಥ ಗುರುಸರ್ವಭೌಮರಲ್ಲೇ ಆಯಿತು. ಅವರಲ್ಲಿ ಜನ್ಮ ಪಡೆಯುವದಲ್ಲದೇ ಅವರಲ್ಲೇ  ವಿದ್ಯಾಭ್ಯಾಸ ಮಾಡಿದ ಮಹಾ ಭಾಗ್ಯ ಶ್ರೀ ಧೀರೇಂದ್ರ ತೀರ್ಥ ಶ್ರೀಪಾದಂಗಳವರದ್ದು. ಆಚಾರ್ಯರು ಶ್ರೀ ವಾದೀಂದ್ರ ತೀರ್ಥರ ಪರಮಾನುಗ್ರಹದಿಂದ ವಿಲಕ್ಷಣ ಪಾಂಡಿತ್ಯ ಗಳಿಸಿ ಪೂರ್ವಾಶ್ರಮದಲ್ಲೇ ದೇಶದ ಉದ್ದಗಲಕ್ಕೂ ಸಂಚರಿಸಿ ವಾದಿ ದಿಗ್ವಿಜಯ , ಶ್ರೀಮದಾಚಾರ್ಯರ ಸಿದ್ಧಾಂತ ಮಂಡನೆ ಇತ್ಯಾದಿಗಳನ್ನು ಮಾಡಿ ಸಂಸ್ಥಾನದ ಸೇವೆಗೈಯುತ್ತಿದ್ದರು. ಶ್ರೀ ವಾದೀಂದ್ರ ತೀರ್ಥರು ತತ್ವಪ್ರಕಾಶಿಕಾ ಟಿಪ್ಪಣಿಯಾದ  'ಮೀಮಾಂಸಾ ನಯದರ್ಪಣ' , 'ತತ್ವೊದ್ಯೋತ ಟಿಪ್ಪಣಿ ', 'ಭೂಗೋಳ-ಖಗೋಳ ವಿಚಾರಃ' ,   ' ಜಗದ್ಗುರು ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಮಠಾರ್ಚಾ ಗತಿಕ್ರಮ' , 'ಗುರುಗುಣಸ್ತವನಂ','ನವ್ಯದುರುಕ್ತಿ ಶಿಕ್ಷಾ (ಪೂರ್ವಾಶ್ರಮದಲ್ಲಿ ರಚಿಸಿದ್ದು)' ಹೀಗೆ    ಅನೇಕ ಪ್ರೌಢ ಗ್ರಂಥಗಳನ್ನು ರಚಿಸಿದ್ದಾರೆ. ಅದರಲ್ಲಿ ಶ್ರೀ ರಾಘವೇಂದ್ರ ಗುರುಗಳ ಗ್ರಂಥರಚನ ಶೈಲಿ , ಸಾಮರ್ಥ್ಯ , ಮಹತ್ವ ಎಲ್ಲವನ್ನೂ ವಿಶಿಷ್ಟವಾಗಿ ಸ್ತವನ ಮಾಡುವ ಕೃತಿಯೇ "ಶ್ರೀಗುರುಗುಣಸ್ತವನ" . ಇದನ್ನು ಶ್ರೀ ವಾದೀಂದ್ರ  ತೀರ್ಥರು ಶ್ರೀ ಗುರುಸಾರ್ವಭೌಮರಿಗೆ ಸಮರ್ಪಿಸಿದಾಗ ಶ್ರೀರಾಯರ ಮೂಲಬೃಂದಾವನವು ಅವರ  ಸಮ್ಮತಿ ತಿಳಿಸಲು ಅಲುಗಾಡಿತು. ಅಂತಹ ಮಾಹಾನುಭಾವರು,ರಾಯರನ್ನು ಅರಿತವರು ಶ್ರೀ ವಾದೀಂದ್ರ ತೀರ್ಥರು. ಶ್ರೀ ಜಯರಾಮಚಾರ್ಯರು ಪ್ರೌಢಾವಸ್ಥೆಯಲ್ಲಿಯೇ 'ಗುರುಗುಣಸ್ತವನ'ದಲ್ಲಿ ಉತ್ಸುಕರಾಗಿ ,ಅದನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿ ಅದಕ್ಕೆ ತಮ್ಮದೇ ಒಂದು ಪ್ರೌಢ ವ್ಯಾಖ್ಯಾನ ರಚನೆ ಮಾಡಿ ಶ್ರೀ ವಾದೀಂದ್ರ ತೀರ್ಥ ಗುರುಸಾರ್ವಭೌಮರಲ್ಲಿ ಅದನ್ನು ಸಮರ್ಪಿಸಿದರು ( ಇದೆ ಗ್ರಂಥಕ್ಕೆ ಶ್ರೀ ವಾದೀಂದ್ರ ತೀರ್ಥರ ಪಟ್ಟದ ಶಿಷ್ಯ ಶ್ರೀ ವಸುಧೇಂದ್ರ ತೀರ್ಥರ ವ್ಯಾಖ್ಯಾನವೂ ಇದೆ ) .  ಆಗ ಶ್ರೀ ವಾದೀಂದ್ರ ತೀರ್ಥರು , ತಮ್ಮ ಪೂರ್ವಾಶ್ರಮ ಪುತ್ರರೂ ಹಾಗು ಸಂಸ್ಥಾನದ ಮಹಾ ಮೇಧಾವಿಗಳೂ ಆಗಿರುವ ಇವರು ಪೀಠಕ್ಕೆ ಬಂದರೆ ಸಂಸ್ಥಾನದ ಶ್ರೇಯೋಭಿವೃದ್ಧಿ ಆಗುವದು ಅನ್ನುವದನ್ನ ಅರಿತು  ಆಚಾರ್ಯರಿಗೆ ಸೂಕ್ಷ್ಮವಾಗಿ " ಜಯರಾಮ ! ಇಷ್ಟಾದರೆ ಸಾಲದಪ್ಪ ನಿಜವಾದ ವೈರಾಗ್ಯ ಬೇಕು " ಎಂದು ನುಡಿದರು.





              ಶ್ರೀ ಜಯರಾಮಚಾರ್ಯರು , ಶ್ರೀ ವಾದೀಂದ್ರರ ಮಾತಿನಂತೆ ವೈರಾಗ್ಯವನ್ನನುಸರಿಸುತ್ತ  ಸಂಚಾರ ಪ್ರಾರಂಭ ಮಾಡಿದರು . ಇತ್ತ ಕಾಲ ಕ್ರಮೇಣ ಶ್ರೀ ವಾದೀಂದ್ರ ತೀರ್ಥರು , ಶ್ರೀ ವಸುಧೇಂದ್ರ ತೀರ್ಥರಿಗೆ ಮಹಾ ಸಂಸ್ಥಾನ ಒಪ್ಪಿಸಿ ಮಂತ್ರಾಲಯದಲ್ಲಿ ಶ್ರೀ ಗುರುರಾಜರ ವೃಂದಾವನದ ಪಕ್ಕದಲ್ಲಿ , ಶ್ರೀ ಗುರುರಾಜರಿಗಾಗಿಯೇ ಸಂಕಲ್ಪಿಸಿದ ವೃಂದಾವನವನ್ನು , ಗುರುರಾಜರ ಅಣತಿಯಂತೆ , ಆದೇಶದಂತೆ ಶ್ರೀ ವಾದೀಂದ್ರ ತೀರ್ಥರು ಪ್ರವೇಶಿಸಿದರು. ಘಟನೆಯೊಂದೆ ಸಾಕು ಗುರುರಾಜರು ಶ್ರೀ ವಾದೀಂದ್ರ ತೀರ್ಥರ ಮೇಲೆ ಅದೆಷ್ಟು ಪ್ರೀತಿ ತೋರಿದ್ದಾರೆ ? ಅದೆಷ್ಟು ಅನುಗ್ರಹ ಮಾಡಿದ್ದಾರೆ ? ಅಂತ ತಿಳಿಯಲು. ಹೀಗೆ ಶ್ರೀ ವಾದೀಂದ್ರ ತೀರ್ಥರು ವೃಂದಾವನಸ್ಥರಾದ ವಿಷಯ ಕೇಳಿ ಶ್ರೀ ಜಯರಾಮಚರ್ಯರಿಗೆ ಸಿಡಿಲು ಬಡಿದಂತಾಗಿ ಅನಾಥ ಪ್ರಜ್ಞೆ ಮೂಡಿತು. ಆಚಾರ್ಯರ ವೈರಾಗ್ಯವೃದ್ದಿಗೆ ಇದು ಸಹ ಕಾರಣವಾಯಿತು .

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...