Sunday, 8 December 2013

ತವ ಸಂಕೀರ್ತನಂ....

                                 
                         ದುರ್ವಾದಿಧ್ವಾ೦ತರವಯೇ ವೈಷ್ಣವೇ೦ದೀವರೇ೦ದವೇ
                      ಶ್ರೀ ರಾಘವೇ೦ದ್ರ ಗುರವೇ ನಮೋ ಅತ್ಯ೦ತ ದಯಾಲವೇ ||




ರಾಘವೇಂದ್ರ ಸ್ತೋತ್ರ ಎಲ್ಲದಕ್ಕೂ ಪರಿಹಾರವಾಗಿರುವ ಸ್ತೋತ್ರ. ರಾಯರ ಸ್ತೋತ್ರ ಅಪ್ಪಣ್ಣಾಚಾರ್ಯರಿಂದ ಹೊರಬಂದದ್ದು ಅವರ ನಿರ್ಮಲ ಮನಸ್ಸಿನಿಂದ..ಗುರುಗಳು ವೃಂದಾವನಸ್ಥರಾಗುತ್ತಿದ್ದಾರೆ ಎಂಬ ಸುದ್ದಿ ತಿಳಿದು ಒಡನೆಯೇ ಬಳಿಗೆ ಧಾವಿಸುತ್ತಿದ್ದಾಗ ಅವರ ಬಾಯಿಂದ ಹೋರಾಟ ಭಾವ ಪುಷ್ಪವೇ "ಶ್ರೀ ರಾಯರ ಸ್ತೋತ್ರ".. ಇದು ವೇದಗಳ ಸಾರ , ಇದು ರಾಘವೇಂದ್ರಗುರುಗಳ-ವಾಯುದೇವರ-ಸರ್ವೋತ್ತಮ ಶ್ರೀಹರಿಯ ಪರವಾದ ಸ್ತೋತ್ರ.. ಇದರಲ್ಲಿ ದೊಡ್ಡ ಚಿಂತನೆಗಳೇ ಅಡಗಿವೆ.. ಅದಕ್ಕೆಲ್ಲ ರಾಯರು ಒತ್ತಿದ ಮುದ್ರೆ " ಸಾಕ್ಷಿ ಹಯಾಸ್ಯೋsತ್ರಹೀ " ಎಂಬುದೆ ಸಾಕ್ಷಿ..ರಾಯರ ಸ್ತೋತ್ರ ಬಹು ಬೇಗನೆ ಒಲಿಯುವ,  ಅಭೀಷ್ಟಪ್ರದ ಸ್ತೋತ್ರ ಎಂಬುದು ಇದಕ್ಕೆನೆ.. ಇಲ್ಲಿ ರಾಯರ ಮಾತ್ರವಲ್ಲ ಅವರ ಅಂತರ್ಯಾಮಿಯಾದ ಮಧ್ವರೂ ಮತ್ತು ಮಧ್ವವಲ್ಲಭನಾದ ಶ್ರೀಹರಿಯ ಸ್ತುತಿ ಕೂಡ ಹೌದು.. ರಾಘವೇಂದ್ರ ಎಂದರೆ "ರಘೋ: ಗೊತ್ರಾಪತ್ಯಂ ಪುಮಾನ್ ರಾಘವ: , ರಾಘವೇಷು ಇಂದ್ರ ರಾಘವೇಂದ್ರ: = ಶ್ರೀರಾಮಃ" ಶ್ರೀಹರಿಯಂತೆ , "ರಾಘವಃ ( ಶ್ರೀರಾಮಃ) ಇಂದ್ರಃ ಯಸ್ಯ = ತಸ್ಯ ಶ್ರೀಮದಾಚಾರ್ಯಸ್ಯ , ವಾಯುದೆವಸ್ಯ" ಅಂದರೆ ಆ ರಾಮನು ಯಾರಿಗೆ ಇಂದ್ರನೋ ? ಅವರೇ ರಾಘವೇಂದ್ರ ಅರ್ಥಾತ್ ಶ್ರೀಮದಾಚಾರ್ಯರು.. ಮತ್ತು ಸುಧೀಂದ್ರ ತೀರ್ಥ ಶ್ರೀಪಾದರು ಇತ್ತ ಅನ್ವರ್ಥಕ ನಾಮದಿಂದಲೂ ರಾಯರು ರಾಘವೇಂದ್ರರು , ಮತ್ತು ಶ್ರೀಮದಾಚಾರ್ಯರಂತೆ  ಇವರಿಗೂ ಅವರ ಉಪಾಸ್ಯ ಮೂರ್ತಿ ಶ್ರೀಮೂಲ ರಾಮಚಂದ್ರಪ್ರಭುವೇ , ಪ್ರಭುವಾದಾರಿಂದ ಅಂಕಿತದಿಂದಲೂ ಅವರು ರಾಘವೇಂದ್ರರೇ ಆಗಿದ್ದಾರೆ.. ಇಂತದೊಂದು ಅದ್ಭುತ ಚಿಂತನೆ ರಾಯರ ಸ್ತೋತ್ರಕ್ಕೆ ಸಾಧ್ಯ..   ಈ ಸ್ತೋತ್ರದಲ್ಲಿ   "ತವ ಸಂಕೀರ್ತನಂ ವೇದಶಾಸ್ತ್ರಾರ್ಥ ಜ್ಞಾನ ಸಿದ್ಧಯೇ" ಎಂಬುದು ಗುರುಸ್ತೋತ್ರಕಾರರಾದ , ರಾಘವೇಂದ್ರ ಗುರುಗಳ ಅಂತರಂಗ ಭಕ್ತರಾದ, ಏಕಾಂತ ಭಕ್ತರಾದ ಅಪ್ಪಣ್ಣಾಚಾರ್ಯರ ಮಾತು..  ಇದೂ ಎಷ್ಟು ಅರ್ಥ ಗರ್ಭಿತವಾದುದು ?? ಈಗ ನಾವು ಏನು ಮಾಡುತ್ತಿದ್ದೇವೆ ? ರಾಯರ ಬಗೆಗೆ ಓದುತ್ತಿದ್ದೇವೆ ಅರ್ಥಾತ್ ಂದು ರೀತಿಯಲ್ಲಿ ಸಂಕೀರ್ತನೆಯೇ ಇದರಲ್ಲಿ ಒಂದು ಸಂದೇಶ ಕೂಡ ಕಂಡೆವು ಅದು ಶಾಸ್ತ್ರವಲ್ಲವೇ ?? ಅಲ್ಲಿಗೆ ಸಿದ್ಧವಾಯಿತು     "ತವ ಸಂಕೀರ್ತನಂ ವೇದಶಾಸ್ತ್ರಾರ್ಥ ಜ್ಞಾನ ಸಿದ್ಧಯೇ" ಎಂಬುದು.. ಎಂತಹ ಅದ್ಭುತ ಈ ಮಾತು ?? 

       ರಾಘವೇಂದ್ರ ಗುರುಸಾರ್ವಭೌಮರ ಚರಿತ್ರೆಯೇ ಒಂದು ದೊಡ್ಡ ಸಂದೇಶ ಕೊಡುವ ಉಪನಿಷತ್ತಿನಂತೆ ಇದೆ.. ಚರಿತ್ರೆ ಓದುವದು , ತಿಳಿಯುವದು , ಹೇಳುವುದು , ಕೇಳುವುದು ಇವೆಲ್ಲ ಒಂದರ್ಥದಲ್ಲಿ ಸಂಕೀರ್ತನೆಯೇ ಅಲ್ಲವೇ ?? ರಾಯರ ಚರಿತ್ರೆ ಶಾಸ್ತ್ರದ ಸಂದೇಶವನ್ನು ರವಾನಿಸುತ್ತದೆ ಅದ್ದರಿಂದ ಅದನ್ನು ಸಂಕೀರ್ತನೆ ಮಾಡುವದರಿಂದ ಶಾಸ್ತ್ರ ಜ್ಞಾನ ಸಿದ್ಧಿಸುತ್ತದೆ. ಅಲ್ಲಿಗೆ "ತವ ಸಂಕೀರ್ತನಂ ವೇದಶಾಸ್ತ್ರಾರ್ಥ ಜ್ಞಾನ ಸಿದ್ಧಯೇ" ಎಂಬುದು ಸಿದ್ಧ..   
       ಈಗಾಗಲೇ ಹೇಳಿದಂತೆ 'ರಾಯರ ಸ್ತೋತ್ರವನ್ನು ಹರಿ ಗುರುಗಳ ಪರವಾಗಿ ಅರ್ಥೈಸಬಹುದು ಇದು ಉಚಿತ ಕೂಡ'.. ಸಕಲ ಶಬ್ದಾರ್ಥ ಪ್ರತಿಪಾದ್ಯನು ನಾರಾಯಣ ಎಂದು ಶಾಸ್ತ್ರ ಹೇಳುವದರಿಂದ ಇಲ್ಲಿಯೂ ಶಾಸ್ತ್ರ ವಿಚಾರ ಬಂತಾದ್ದರಿಂದ "ತವ ಸಂಕೀರ್ತನಂ ವೇದಶಾಸ್ತ್ರಾರ್ಥ ಜ್ಞಾನ ಸಿದ್ಧಯೇ" ಎಂಬುದು ಸಿದ್ಧ..
          ಇನ್ನು ಸಾಮಾನ್ಯ ಅರ್ಥದಲ್ಲಿ " ಓಂ ಶ್ರೀ ರಾಘವೇಂದ್ರಾಯ ನಮಃ" ಎಂದರೂ ಕೂಡ ರಾಘವೇಂದ್ರ ಗುರುಗಳು ಶಾಸ್ತ್ರಜ್ಞಾನ ಕೊಡುತ್ತಾರೆ.. ಅದ್ದರಿಂದ ಹೇಗೆ ಚಿಂತನ ಮಾಡಿದರೂ "ತವ ಸಂಕೀರ್ತನಂ ವೇದಶಾಸ್ತ್ರಾರ್ಥ ಜ್ಞಾನ ಸಿದ್ಧಯೇ" ಎಂಬುದು ಸಿದ್ಧವೇ ಆಗಿದೆ.. ಅವರ ವೈಶಿಷ್ಟ್ಯದ ಬಗೆಗಿನ ಈ ಲೇಖನ ಓದುವದರಿಂದಲೂ ಅವರ ಸಂಕೀರ್ತನೆ ಆಗುವದರಿಂದ ಜ್ಞಾನ ಸಿದ್ಧಿ ಆಗುವದು ನಿಸ್ಸಂಶಯ..ಅಂತಹ ಪರಮ ಕಾರುಣೀ ರಾಘವೇಂದ್ರ ತೀರ್ಥ ಗುರುಸರ್ವಭೌಮುರ್ ನಮ್ಮನ್ನು ಉದ್ಧರಿಸಲಿ..                 
                                     ।। ಭೂಯಿಷ್ಟಾಂತೆ ನಮ ಉಕ್ತಿಂ ವಿಧೇಮ ।।
                                ।। ಸರ್ವೋತ್ತಮಃ ಶ್ರೀಶಃ ಮೂಲ ರಾಮಃ ಪ್ರಸೀದತು ।। 
                                                                  

Tuesday, 26 November 2013

ವಿಶ್ವೇಶ

ಇಂದಿನ ದಿನ ಸುದಿನವಾಯಿತು. ಉಡುಪಿ ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಧಾರವಾಡ  ದಿಗ್ವಿಜಯದಲ್ಲಿದ್ದಾರೆ.  ನಮ್ಮ ಮನೆಗೆ ಆಗಮಿಸಿ ಪಾದಪೂಜೆಯನ್ನು ಸ್ವೀಕರಿಸಿ ಸ್ವಲ್ಪ ಹೊತ್ತು ರಮಣೀಯವಾಗಿ ಕಳೆದರು. ಗುರುಗಳು ದ್ವೈತದರ್ಶನ ಬ್ಲಾಗ್ ಅನ್ನು ವೀಕ್ಷಿಸಿ  ಪ್ರಶಂಸಿದರು. ಮತ್ತು ಅವರ ಬಗೆಗಿನ ಲೇಖನವಾದ "ವಿಶ್ವೇಶ ತೀರ್ಥರು ನಿಜ ಧರ್ಮ ರಕ್ಷಕರು" ಅದನ್ನು ಓದಿ ಸಂತುಷ್ಟರಾಗಿ ಈ ಪಾಮರನನ್ನು ಅನುಗ್ರಹಿಸಿದರು.. ಅದಲ್ಲದೆ ನನ್ನ ಸಂಗ್ರಹದಲ್ಲಿರುವ ಅನೇಕ ಚಿತ್ರಗಳನ್ನು  ಮುಂದಿಟ್ಟಾಗ ತಮ್ಮ ಆಶ್ರಮ ದಿನದಿಂದ ಹಿಡಿದು ಮೊನ್ನೆ ಮೊನ್ನೆಯ ಕಾರ್ಯಕ್ರಮಗಳ ಅಪರೂಪದ ದೃಶ್ಯಗಳನ್ನೂ ನೆನೆಸಿಕೊಂಡರು..ವಿಶ್ವಮಾನ್ಯರಿಂದ ಆಶ್ರಮ , ವಿದ್ಯಾಮಾನ್ಯ ರಿಂದ ವಿದ್ಯಾದಾನ, ಅನೇಕ ಮಠಾಧಿಪತಿಗಳೊಡನೆ ಸಂಗಮ, ಬಲು ಅಪರೂಪ ವೆನ್ನಿಸುವ ಸನ್ನಿವೇಶಗಳ ಚಿತ್ರಗಳನ್ನೆಲ್ಲ ಶ್ರೀಗಳು ಸಂತೋಷದಿಂದ ವೀಕ್ಷಿಸಿದರು.. "ಇದನ್ನೆಲ್ಲ ನಾವೂ ನೋಡಿಯೇ ಇರಲಿಲ್ಲ ! , ಅದ್ಭುತ ಸಂಗ್ರಹ " ಎಂದು ಬಹಳ ಸಂತೋಷ ಪಟ್ಟರು..ಇದರೊಂದಿಗೆ ತಾವು ಮೈಸೂರು ಮಹಾರಾಜರ ಜೊತೆಗೆ ಕುಳಿತ ಸಂದರ್ಭ , ವಿದ್ಯಾಮಾನ್ಯರೊಡನೆ ಸೋದೆಯಲ್ಲಿ ಶ್ರಮಾದಾನ , ವಿಶ್ವ ಪ್ರಸನ್ನರ ಆಶ್ರಮ ಪ್ರಸಂಗ ಇತ್ಯಾದಿಯಾಗಿ ವಿವರಿಸಿ ಹೇಳಿದರು.. ಕೊನೆಗೆ ನಾನು ಚಿಕ್ಕವನಿದ್ದಾಗ ರೋಗಬಾಧೆ ಇಂದ ಪರಿಹಾರ ಹೊಂದಲು ವಿಶ್ವೇಶ ತೀರ್ಥರ ಮಂತ್ರಕ್ಷತೆಯೇ ಕಾರಣ ಎಂದು ತಿಳಿದು ಸಂತೋಷಗೊಂಡು ಅನುಗ್ರಹ ಮಾಡಿದರು.. ಅವರ ನಿರಂತರ ಕಾರ್ಯ ಕೆಲಸ ಎಷ್ಟರಮಟ್ಟಿಗೆ ಇರುತ್ತದೆ ಎನ್ನುವದು ಯಾರಿಗೂ ಅಪರಿಚಿತವಲ್ಲ.. ಎಲಾರಿಗೂ ಅವರ ಕಾರ್ಯಕ್ಷಮತೆಯಾ ಬಗ್ಗೆ ಗೊತ್ತೇ ಇದೆ. ಅಂತಹ ಬಿಡುವಿನಲ್ಲೂ ಅವರು ಇಷ್ಟೊಂದು ಉಲ್ಲಸಿತರಾಗಿ ನಮ್ಮೊಡನೆ ಕಾಲ ಕಳೆದದ್ದು ತುಂಬಾ ಮುದವುಂಟು ಮಾಡಿದೆ.

Friday, 15 November 2013

ಅಗಸ್ಟ್ ತಿಂಗಳಿನಲ್ಲಿ ಮಂತ್ರಾಲಯಕ್ಕೆ ಚಾತುರ್ಮಾಸ್ಯ ಸಮಯದಲ್ಲಿ ಹೋದಾಗ ಶ್ರೀ ಸುಯತೀಂದ್ರ ತೀರ್ಥರ ವರಕುಮರರಾದ ಶ್ರೀ ಸುಬುಧೆಂದ್ರ ತೀರ್ಥರು ನನ್ನ ಮೇಲೆ ಪರಮಾನುಗ್ರಹ ಮಾಡಿ ಕಳಿಸಿದ್ದಾರೆ. ಅವರ , ಅವರ ಗುರುಗಳ ಅಂತರ್ಯಾಮಿಯಾಗಿರುವ ಮಂತ್ರಾಲಯದ ಮಾಂತ್ರಿಕ ರಾಘವೇಂದ್ರ ಗುರುಗಳು , ಅವರ ಅಂತರ್ಯಾಮಿ ಶ್ರೀಮನ್ಮೂಲ ರಾಮದೇವರ ಅನುಗ್ರಹದಿಂದ ಈ ಭಾಗ್ಯ ನನ್ನದಾಗಿದೆ..ಈ  ಮಂತ್ರಾಲಯ ಭೇಟಿ ಮನ ಮುಟ್ಟುವಂತಿತ್ತು.. ಈ ಸಂದರ್ಭದಲ್ಲಿ ಮಂತ್ರಾಲಯದ ಪಂಡಿತ ಪುರಾಣಿಕ ಸಂಜೀವಾಚಾರ್ಯರ ಉಪಕಾರವನ್ನು ಭಕ್ತಿ ಪೂರ್ವಕವಾಗಿ ಸ್ಮರಿಸುತ್ತೇನೆ.. ಶ್ರೀಮಠದ ಉತ್ತರಾಧಿಕಾರಿ ಶ್ರೀ ಸುಬುಧೆಂದ್ರ ತೀರ್ಥರು " ಶ್ರೀಮಠದ,ರಾಯರ ಸೇವೆ ನಿರಂತರವಾಗಿ ನಿನ್ನಿಂದಾಗಲಿ" ಎಂದು ಅನುಗ್ರಹಿಸಿದರು.. ಅದರ ಜೊತೆಗೆ ಶ್ರೀಗಳು ತಾವು ಪೂರ್ವಾಶ್ರಮದಲ್ಲಿ ನಮ್ಮಂತಹ ಪಾಮರರಿಗಾಗಿಯೇ ಬರೆದ "ಮೃತ್ತಿಕಾ ಮಹಿಮೆ", " ಗುರುಪರಂಪರಾ ವ್ಯಾಖ್ಯಾನ" ಮತ್ತು "ಹಸ್ತೋದಕ ಮಹಿಮಾ" ಇನ್ನಿತರ ಪುಸ್ತಕಗಳನ್ನು ತಾವೇ ಮುತುವರ್ಜಿ ವಹಿಸಿ ಬಹಳ ಪ್ರೀತಿ ಇಂದ ಅನುಗ್ರಹ ಪೂರ್ವಕವಾಗಿ ನೀಡಿ ಇವುಗಳನ್ನ ಸದ್ಭಕ್ತರಿಗೆ , ಶ್ರೀಮಠದ ಶಿಷ್ಯರಿಗೆ ತಲುಪಿಸುವ ಕಾರ್ಯವಾಗಬೇಕೆಂಬ ಎಂಬ ಮಹದಾಶಯ ಹೊಂದಿದ್ದಾರೆ. ಇದು ಕೇವಲ ಪಾಮರರ ವಿಚಾರವಾದರೆ.. ಪಂಡಿತರಿಗೂ ಶ್ರೀಗಳು ಅನೇಕ ಗ್ರಂಥಗಳ ಲಭ್ಯತೆಯನ್ನು ಹೆಚ್ಚಿಸಲು  ಯೋಜನೆ ಹೊಂದಿದ್ದಾರೆ. ಶ್ರೀಮಠದ ವೆಬ್ ಸೈಟ್ ನಲ್ಲಿ ಶ್ರೀಘ್ರವೇ ಅನೇಕ ಪ್ರಾಚೀನ ( ಪ್ರಕಾಶಿತ-ಅಪ್ರಕಾಶಿತ) ಗ್ರಂಥಗಳನ್ನು ಪ್ರಕಟಿಸುವ ಮಹತ್ತರ ಯೋಜನೆಯನ್ನೂ ಶ್ರೀಪಾದಂಗಳವರು ಹೊಂದಿದ್ದಾರೆ..ಇದಲ್ಲದೆ ಇಂಟರ್ನೆಟ್ ಉಪಯೋಗಿಸಿ ಸಕಲ ಮಾಧ್ವರಿಗೂ ಅನುಕೂಲ ವಾಗುವಂತೆ ಆಚಾರ್ಯರ ಸಛ್ಚಾಸ್ತ್ರಗಳನ್ನೂ ಬೋಧಿಸುವ ದೊಡ್ಡ ಯೋಜನೆಯನ್ನು ಮಹಾ ಸ್ವಾಮಿಗಳು ಹೊಂದಿದ್ದಾರೆ.. ಇದರೊಂದಿಗೆ ಶ್ರೀಪಾದಂಗಳವರು ತಮ್ಮ ಪೂರ್ವಾಶ್ರಮದಲ್ಲೇ ೨೫ ವ್ಯಾಖ್ಯಾನಗಳ ಸಮೇತ ಶ್ರಿಮನ್ಯಾಯಸುಧಾ ಮಂಗಳವನ್ನು ಮಾಡಿ ಈಗ ಸನ್ಯಾಸವನ್ನು ತೆಗೆದುಕೊಂಡ ನಂತರ ಗುರುಸಾರ್ವಭೌಮ ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಶ್ರೀಮನ್ಯಾಯಸುಧಾ ಪಾಠವನ್ನು ವಿಶೇಷವಾಗಿ ನಡೆಸುತ್ತಿದ್ದಾರೆ.. ಶ್ರೀ ಸುಬುಧೇಂದ್ರ ತೀರ್ಥರು ಈ ಶತಮಾನದ ಶಕ್ತಿ ಎಂಬ ಪೇಜಾವರ ಶ್ರೀಗಳ ಮಾತು ನಿಜವಾಗಿಯೂ ಸತ್ಯ..:) :) ಧನ್ಯೋಸ್ಮಿ ..।। ಸರ್ವೋತ್ತಮ: ಶ್ರೀಶ: ಮೂಲರಾಮ: ಪ್ರಸೀದತು।।

Friday, 9 August 2013

"ಶ್ರೀಮನ್ಯಾಯಸುಧಾ" ಪಾಠ

 ।। ಶ್ರೀಮನ್ಮೂಲರಾಮೋ ವಿಜಯತೆ ।।                                             ।। ಶ್ರೀ ಗುರುರಾಜೋ ವಿಜಯತೆ ।।
ಜಗದ್ಗುರು ಶ್ರೀಮನ್ಮಧ್ವಾಚಾರ್ಯ  ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ-ವಿದ್ಯಾ ಮಠದ ದಿಗ್ವಿಜಯ ವಿದ್ಯಾ ಸಿಂಹಾಸನಾಧೀಶ್ವರರಾದ ಶ್ರೀ ೧೦೦೮ ಶ್ರೀ ಸುಯತೀಂದ್ರ ತೀರ್ಥ ಶ್ರೀಪಾದಂಗಳವರ ಕರಕಮಲ ಸಂಜಾತರಾದ ಶ್ರೀ ೧೦೦೮ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ತಮ್ಮ ಪೂರ್ವಿಕ ಗುರುಗಳಾದ ಶ್ರೀ ಟೀಕಾಕೃತ್ಪಾದರ ಮೇರು ಕೃತಿ "ಶ್ರೀಮನ್ಯಾಸುಧಾ" ಗ್ರಂಥದ ಪಾಠವನ್ನು , ಶ್ರೀ ರಾಘವೇಂದ್ರ ಗುರುಸಾರ್ವಭೌಮರ "ಪರಿಮಳ" ಸಮೇತ ೨೫ ವ್ಯಾಖ್ಯಾನಗಳೊಂದಿಗೆ ಶ್ರೀ ಮಂತ್ರಾಲಯ ಪ್ರಭುಗಳ ಹಾಗು ಶ್ರೀಮದ್ವಾದೀಂದ್ರ ತೀರ್ಥ ಗುರುಸರ್ವಭೌಮರ ಹಾಗು ಶ್ರೀ ಸುಧರ್ಮೇಂದ್ರ ತೀರ್ಥರು ಇತ್ಯಾದಿ ತಪಸ್ವೀ ಯತಿವರೆಣ್ಯರ ದಿವ್ಯ ಸನ್ನಿಧಾನವಾದ ಮಂತ್ರಾಲಯ ಕ್ಷೇತ್ರದಲ್ಲಿ , ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ೧೨ ವಿದ್ಯಾರ್ಥಿಗಳಿಗೆ ಪ್ರಾರಂಭಿಸಿದರು..ಕುಂದಾಪುರ ಶ್ರೀ ವ್ಯಾಸರಾಜ ಮಠದ ಪೀಠಾಧಿಪತಿಗಳಾದ ಶ್ರೀ ೧೦೦೮ ಶ್ರೀ ಲಕ್ಷ್ಮೀಂದ್ರ ತೀರ್ಥರು ಹಾಗು ಶ್ರೀ ವಿಶ್ವಗುರುಪ್ರಿಯ ತೀರ್ಥರು ಪಾಠದ ಸಮಯದಲ್ಲಿ ಉಪಸ್ಥಿತರಿದ್ದು ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಆಶೀರ್ವಾದವನ್ನು ಮಾಡಿದರು. ಈ ಹಿಂದೆ ಇದೇ ಸಿದ್ಧ ಕ್ಷೇತ್ರದಲ್ಲಿ ೨೫ ವ್ಯಾಖ್ಯಾನ ಸಮೇತವಾಗಿ ಶ್ರೀಮನ್ಯಾಯಸುಧಾ ಗ್ರಂಥದ ಮಂಗಳವನ್ನು ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ತಮ್ಮ ಪೂರ್ವಾಶ್ರಮದಲ್ಲಿ ಮಾಡಿದನ್ನು ಸ್ಮರಿಸಬಹುದು.. 




Thursday, 27 June 2013

 ಭಾವಿಸಮೀರ ಶ್ರೀಮದ್ವಾದಿರಾಜ ಗುರುಗಳ ಮಾತಿನ  ಮಹಿಮೆಯನ್ನು ಕವಿ ವರ್ಣಿಸುವ ಪರಿ -
   ಸವಿನೋದಂ ಸಾಟ್ಟಹಾಸಂ ಸಸ್ಮಿತಂ ಸುಸ್ವರಾನ್ವಿತಂ । 
   ಸರಹಸ್ಯಂ ಸಪ್ರಮಾಣಂ ವಾದಿರಾಜವಚೋSಮೃತಂ ॥

      ವಾದಿರಾಜರ ಮಾತುಗಳು  ಅರ್ಥಾತ್ ಅವರ ಅಸ್ಖಲಿತ ವಾಣಿಯು ವಿನೋದದಿಂದ ಕೂಡಿವೆ , ಅಟ್ಟಹಾಸದಿಂದ ( ದುರ್ವಾದಿಗಳಿಗೆ ಎಚ್ಚರಿಕೆ ಕೊಡುವಲ್ಲಿ ಅಟ್ಟಹಾಸ) ತುಂಬಿವೆ , ಮಂದಹಾಸವನ್ನು ಬೀರುತ್ತವೆ , ಉತ್ತಮ ಸ್ವರಗಳನ್ನು ಸೂಚಿಸುತ್ತವೆ. ಅವುಗಳಲ್ಲಿ ರಹಸ್ಯಾರ್ಥವಿದೆ , ಪ್ರಮಾಣ ಬದ್ಧವಾಗಿರುತ್ತವೆ , ಪ್ರಮಾಣಗಳಿಂದ ಕೂಡಿರುತ್ತವೆ. ಹೀಗೆ ರಾಜರ ಬಗ್ಗೆ ಆಡಿದ ಮಾತುಗಳು ಅತಿಶಯವೆನಿಸುವದಿಲ್ಲ . ಅದು ಅವರ ವಾಣಿಯ ಮಹಿಮೆ.
       ಹೀಗೆ ಮಹಾನುಭಾವರಾದ ಭಾವಿ ಸಮೀರ ವಾದಿರಾಜರ ಮಾತುಗಳ ಬಗ್ಗೆ ಕವಿ ಆಡಿರುವ ಮಾತುಗಳು ಅತಿಶಯ ಎನ್ನಿಸುವದೇ  ಇಲ್ಲ . ವಾದಿರಾಜರ ಮಾತಿನ ಮಹಿಮೆಯನ್ನು ಸಾರುವ ಒಂದು ಚಿಕ್ಕ-ಚೊಕ್ಕ ನಿದರ್ಶನ ಇಲ್ಲಿದೆ , 

 ಮಹಾಕವಿ ಕಾಳಿದಾಸನಿಂದ ರಚಿತವಾದ 'ರಘುವಂಶ ಮಹಾಕಾವ್ಯ'ದಲ್ಲಿ ಹೀಗೊಂದು ಉಪಮಾನಕ್ಕಾಗಿ ಬಳಸಿದ ಮಾತಿದೆ ,
    ನ ಪಾದಪೋನ್ಮೂಲನರಂಹ: ಶಿಲೋಚ್ಚಯೇ ಮೂರ್ಚತಿ ವಾಯುವೆಗ: 
ಅಂದರೆ , ಮಹಾವೃಕ್ಷಗಳನ್ನೂ ಬೇರುಸಹಿತವಾಗಿ ಉರುಳಿಸಿಬಿಡಬಲ್ಲ ಶಕ್ತಿಉಳ್ಳ ವಾಯುವಿನ ವೇಗವು ಕಲ್ಲಿನ ಸಮೂಹವಾದ ಬೆಟ್ಟದಮೇಲೆ ಪ್ರಭಾವಶಾಲಿಯಾಗಲಾರದು ಎಂದು. 

ಇದಕ್ಕೆ ಮಧ್ವರಾಜರಲ್ಲಿ ಭಕ್ತಿ ಉಳ್ಳವರಾದ , ಭಾವಿ ಸಮೀರರಾದ , ರುಜುಶಿರೋಮಣಿಗಳಾದ ವಾದಿರಾಜರು , ವಾಯುದೇವರ ಅಸಮರ್ಥತೆಯನ್ನು ತಿಳಿಸುವ ಕಾಳಿದಾಸನ ಮಾತಿಗೆ ಸೊಗಸಾಗಿ ತಮ್ಮ "ತೀರ್ಥ ಪ್ರಭಂಧ" ಗ್ರಂಥದಲ್ಲಿ ಉತ್ತರ ಕೊಡುತ್ತಾರೆ. ಅದು ಹೀಗೆ , 

ನ ಮೂರ್ಚತಿ ಶಿಲೋಚ್ಚಯೇ ಪವನವೇಗ ಇತ್ಯಜ್ಞವಾಕ್ 
ಯತೋ ಹನುಮತಾSಹ್ರುತಾ: ಸುಬಹವೋ ಮರುತ್ಸೂನುನಾ । 
ಗಭೀರತಾರಾವಾರಿಧಿಚ್ಛದನಚುಂಚವಃ ಪರ್ವತಾಃ 
ಜಯಂತಿ ಕೃತಸೇವತಃ ಕ್ಷಪಣಹೆತವೋ ರಕ್ಷಸಾಂ ॥

ಎಂದರೆ , ಕಲ್ಲಿನ ಸಮೂಹದ ಮೇಲೆ ವಾಯುವಿನ ವೇಗ ಪರಿಣಾಮಕಾರಿಯಾಗದು ಎಂಬ ಮಾತು ಮೂಢನ ಮತ್ತೆ ಸರಿ , ಏಕೆಂದರೆ ವಾಯುಪುತ್ರನಾದ ಹನುಮಂತನಿಂದ ಇಲ್ಲಿಗೆ ತರಲ್ಪಟ್ಟ ಅನೇಕ ಪರ್ವತಗಳು ಆಳವಾದ ಸಮುದ್ರವನ್ನು ಸಹಿತ ಮುಚ್ಚಲು ಸಮರ್ಥವಾಗಿದ್ದು , ಸೇತುವಿನ ರಚನೆಗೆ ಕಾರಣವಾಗಿ ಪ್ರಸಿದ್ಧವಾಗಿದೆ , ಅವು ರಾಕ್ಷಸರ ವಿನಾಶಕ್ಕೆ ಕಾರಣವಾಗಿವೆ. ವಾಯುವಿನ ವಿಚಾರ ಹಾಗಿರಲಿ , ವಾಯುವಿನ ಸೂನು ಮಾಡಿರುವ ಕೆಲಸ ನೋಡಿದರೆ ಸಾಕು ವಾಯುವಿನ ಮಹಿಮೆ ನಮಗೆ ತಿಳಿಯುತ್ತದೆ ಎಂದು ಕಾಳಿದಾಸನಿಗೆ ಉತ್ತರವನ್ನು ಕೊಟ್ಟಿದ್ದಾರೆ ನಮ್ಮ ಗುರುಗಳು . 

ಇದು ಕೇವಲ ಸಣ್ಣ ನಿದರ್ಶನ , ಮಹಾನ್ ಮಹಾನ್ ವಿದ್ವಾಂಸರು ರಾಜರ ಪ್ರತೀ ಮಾತಿನಲ್ಲಿಯೂ ಹೊಸತನ್ನು , ಹೊಸ ಅರ್ಥವನು , ಪ್ರಮಾಣ ಬಧ್ದತೆಯನ್ನು ಕಾಣುತ್ತಾರೆ . ಅಂತಹ ಭಾವಿ ಸಮೀರ ರಾಜರನ್ನು ಪಡೆದ ನಾವೆ ಧನ್ಯರು. 
   

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...