"ವಿದ್ಯಾಮಠದಲ್ಲಿ ಶ್ರೀಮನ್ಯಾಯಸುಧಾಮಂಗಳ ಮಹೋತ್ಸವ"
ತತ್ವಜ್ಞಾನಕ್ಕೋಸ್ಕರ ಬ್ರಹ್ಮರುದ್ರಾದಿಗಳಿಂದ ಪ್ರಾರ್ಥಿಸಲ್ಪಟ್ಟ ಸರ್ವೋತ್ತಮನಾದ ಶ್ರೀಮನ್ನಾರಾಯಣನು ಶ್ರೀವೇದವ್ಯಾಸರಾಗಿ ಅವತರಿಸಿ ನಾಶವನ್ನು ಹೊಂದುತ್ತಿರುವ ಅಸ್ತ್ವವ್ಯಸ್ತವಾದ ವೇದರಾಶಿಯನ್ನು ವಿಭಾಗಿಸಿ ತದರ್ಥನಿರ್ಣಯಕ್ಕೋಸ್ಕರ ಸೂತ್ರಸಮೂಹಾತ್ಮಕವಾದ ಬ್ರಹ್ಮಮೀಮಾಂಸಾಶಾಸ್ತ್ರವನ್ನು ರಚಿಸಿದರು. ಸಮನ್ವಯ-ಅವಿರೋಧ-ಸಾಧನ-ಫಲಪ್ರತಿಪಾದಕ ಚತುರಾಧ್ಯಾಯರೂಪವಾದ ಬ್ರಹ್ಮಮೀಮಾಂಸಾಶಾಸ್ತ್ರದಲ್ಲಿ ೫೬೪ ಸೂತ್ರಗಳಿಂದ ನಾರಾಯಣರೂಪಿಯಾದ ಪರಬ್ರಹ್ಮನನ್ನು ಚೆನ್ನಾಗಿ ಪ್ರತಿಪಾದಿಸಿದರು. ಅವೇ ಬ್ರಹ್ಮಸೂತ್ರಗಳು ಎಂದು ಪ್ರಸಿದ್ಧಿ ಪಡೆದಿವೆ.
ಶ್ರೀವೇದವ್ಯಾಸರಿಂದ ರಚಿತವಾದ ಅಪರಿಮಿತವಾದ ಬ್ರಹ್ಮಮೀಮಾಂಸಾದಿಶಾಸ್ತ್ರಗಳಿಂದ ಚೆನ್ನಾಗಿ ನಿರ್ಣಯಿಸಲ್ಪಟ್ಟಿರುವ ಸಕಲ ಜ್ಞಾನಿಗಳಿಗೆ ಸಮ್ಮತವಾದ ದೋಷರಹಿತವಾದ ಭಾವವನ್ನು ತಮ್ಮ ಗ್ರಂಥಗಳ ಮೂಲಕವಾಗಿ ಪ್ರತಿಪಾದಿಸಿದವರು ಅಶೇಷ ಸಜ್ಜನರಿಗೆಲ್ಲ ಜ್ಞಾನದೀಪದಂತಿರುವ, ಶ್ರೀಮುಖ್ಯಪ್ರಾಣ ದೇವರ ಅವತಾರರಾದ ತ್ರೈಲೋಕ್ಯಗುರುಗಳಾದ ಶ್ರೀಮನ್ಮಧ್ವಾಚಾರ್ಯರು. ಜಗತ್ತಿಗೆ ಜಗದ್ಗುರುಗಳಿಂದ ಪ್ರಣೀತವಾದ ಆ ಅಮೂಲ್ಯ ಸಂಪತ್ತುಗಳೇ ಸರ್ವಮೂಲ ಗ್ರಂಥಗಳು. ಶ್ರೀವೇದವ್ಯಾಸದೇವರು ಮಾಡಿದ ಆ ಬ್ರಹ್ಮಸೂತ್ರಗಳಿಗೆ ವ್ಯಾಖ್ಯಾನರೂಪವಾಗಿ ಒಂದಲ್ಲ ಎರೆಡಲ್ಲ ಬ್ರಹ್ಮಸೂತ್ರಭಾಷ್ಯ, ಅನುವ್ಯಾಖ್ಯಾನ, ನ್ಯಾಯವಿವರಣ ಹಾಗು ಅಣುಭಾಷ್ಯ ಎಂಬ ನಾಲ್ಕು (೪) ಗ್ರಂಥರತ್ನಗಳನ್ನು ಬರೆದು ಅನುಗ್ರಹ ಮಾಡಿದ್ದಾರೆ.
ಈ ಬ್ರಹ್ಮಸೂತ್ರಗಳಿಗೆ ಭಾಷ್ಯರೂಪವಾಗಿ ೨೧ ಪರಮತೀಯ ಆಚಾರ್ಯರು ಬರೆದ ಭಾಷ್ಯಗಳ ವಿಮರ್ಶಾತ್ಮಕ ರೂಪವಾಗಿ ಹೊರಟ ಗ್ರಂಥವೇ ಶ್ರೀಮದಾಚಾರ್ಯರ ಬ್ರಹ್ಮಸೂತ್ರಭಾಷ್ಯ. ಶ್ರೀಕೃಷ್ಣಪರಮಾತ್ಮ ತನ್ನ ಪುಟ್ಟ ಬಾಯಲ್ಲಿ ಬ್ರಹ್ಮಾಂಡವನ್ನೇ ತೋರಿದಂತೆ ಸಮಗ್ರ ಬ್ರಹ್ಮಮೀಮಾಂಸಾ ಶಾಸ್ತ್ರಗಳ ಅರ್ಥಸಾರವನ್ನು ಅಣುಭಾಷ್ಯದಲ್ಲಿ ಹಿಡಿದಿಟ್ಟಿದ್ದಾರೆ ನಮ್ಮ ಜಗದ್ಗುರುಗಳು.ಬ್ರಹ್ಮಸೂತ್ರಗಳ ಮಹತ್ವ ತಿಳಿಸಿ , ಶಾಸ್ತ್ರಪ್ರಮೇಯಗಳನ್ನು ವಿಮರ್ಶಾತ್ಮಕವಾಗಿ ಶಿಷ್ಯರ ಪ್ರಾರ್ಥನೆಯ ಮೇರೆಗೆ ಶ್ರೀಮದಾಚಾರ್ಯರು ನಿರೂಪಿಸಿದ ಗ್ರಂಥವೇ ಶ್ರೀಮದಾನುವ್ಯಾಖ್ಯಾನ.
ಮೇಲಿನ ಮೂರೂ ಗ್ರಂಥಗಳನ್ನು ಬರೆದಾದಮೇಲೆ ರಚಿಸಿದ ಗ್ರಂಥವೇ ನ್ಯಾಯವಿವರಣ. ಮೇಲಿನ ಮೂರೂಗ್ರಂಥಗಳಲ್ಲಿ ಅಡಕವಾದ ನ್ಯಾಯಗಳ ವಿವರಣೆಗಾಗಿ ಈ ಗ್ರಂಥ ಹೊರಟಿದೆ ಎಂದು ಶ್ರೀಮದಾಚಾರ್ಯರು ತಾವೇ ಹೇಳಿದ್ದಾರೆ .
ಶ್ರೀಮದಾಚಾರ್ಯರ ಅನುವ್ಯಾಖ್ಯಾನಕ್ಕೆ ಅವರ ಸಾಕ್ಷಾತ್ ಶಿಷ್ಯರಾದ, ಶ್ರೀಮಠದ ಪೂರ್ವಿಕ ಗುರುಗಳಾದ, ಶ್ರೀಜಯತೀರ್ಥರು, ಶ್ರೀವಿಬುಧೇಂದ್ರ ತೀರ್ಥರು , ಶ್ರೀವಿಜಯೀ೦ದ್ರ ತೀರ್ಥರು, ಶ್ರೀ ಸುಧೀ೦ದ್ರ ತೀರ್ಥರು, ಶ್ರೀರಾಘವೇಂದ್ರ ತೀರ್ಥರಿಗೇ ಮೊದಲಾದ ಎಲ್ಲ ಜ್ಞಾನಿಗಳಿಗೂ ಪರಮಮಾನ್ಯರಾದ, ಆದಿಟೀಕಾಚಾರ್ಯರಾದ ಶ್ರೀ ಪದ್ಮನಾಭ ತೀರ್ಥರು 'ಸನ್ನ್ಯಾಯರತ್ನಾವಲೀ' ಎಂಬ ಗ್ರಂಥವನ್ನು ಬರೆದಿದ್ದಾರೆ.
ಸೂತ್ರಪ್ರಸ್ಥಾನದಲ್ಲಿ ಶ್ರೀಮದಾಚಾರ್ಯರ ನಾಲ್ಕು ಗ್ರಂಥಗಳಲ್ಲಿ ಮೂರು ಗ್ರಂಥಗಳಿಗೆ ಮಹತ್ವಪೂರ್ಣವಾದ ಟೀಕೆ ಬರೆದವರು ಶ್ರೀಮಜ್ಜಯತೀರ್ಥ ಗುರುಸಾರ್ವಭೌಮರು (ಶ್ರೀಮಟ್ಟೀಕಾಕೃತ್ಪಾದರು). ಶ್ರೀಮಜ್ಜಯತೀರ್ಥರು ಬರೆದ ಟೀಕಾಗ್ರಂಥಗಳಲ್ಲಿ ಶ್ರೀಮನ್ಯಾಯಸುಧಾ ಅವರ ಮೇರುಕೃತಿ. ಈ ಶ್ರೀಮನ್ಯಾಯಸುಧೆಯು ಶ್ರೀಮದಾಚಾರ್ಯರ ಅನುವ್ಯಾಖ್ಯಾನಕ್ಕೆ ಟೀಕಾ ರೂಪದಲ್ಲಿ ಬರೆಯಲ್ಪಟ್ಟಿರುವ ಗ್ರಂಥ. ಮಾಧ್ವವಾಂಗ್ಮಯದಲ್ಲೇ ಎತ್ತರಸ್ಥಾನದಲ್ಲಿ ಪೂಜೆಗೊಳ್ಳುವ ಗ್ರಂಥ. ಆಚಾರ್ಯರ ನಿಜವಾದ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳುವ ಗ್ರಂಥ. ಜ್ಞಾನಿಗಳು ಅಧ್ಯಯನ-ಅಧ್ಯಾಪನ ನಡೆಸುವದಕ್ಕಾಗಿ ಜೀವನವನ್ನೇ ತೇಯ್ದಗ್ರಂಥ ಶ್ರೀಮನ್ಯಾಯಸುಧಾ.
ಪ್ರಸಕ್ತ ಮಾಧ್ವವಾಂಗ್ಮಯದಲ್ಲಿ ಶ್ರೀಮನ್ಯಾಯಸುಧೆಗೆ ಹೆಚ್ಚು ಟಿಪ್ಪಣಿಗಳು ಬರೆಯಲ್ಪಟ್ಟಿವೆ. ಇಂತಹ ಅಪೂರ್ವಕೃತಿಗೆ ಇಷ್ಟೊಂದು ಮಹತ್ವವಿದ್ದುದರಿಂದಲೇ ಶ್ರೀಮನ್ಯಾಯಸುಧಾ ಪಾಠ-ಪ್ರವಚನ-ಅನುವಾದ- ಮಂಗಳ ಎಲ್ಲವೂ ಸಜ್ಜನರಿಗೆ ಮಹಾ ಉತ್ಸವವೇ.
ಮಧ್ವವಾಂಗ್ಮಯದ ವಿಶಿಷ್ಟಕೃತಿಯಾದ ಶ್ರೀಮನ್ಯಾಯಸುಧೆಯ ಪಾಠ ಪ್ರವಚನವನ್ನು ಶ್ರೀಮಜ್ಜಯತೀರ್ಥರ ನಂತರ ಅವರ ಶಿಷ್ಯರಾದ ಶ್ರೀವಿದ್ಯಾಧಿರಾಜತೀರ್ಥರು ಹಾಗು ಅವರ ಪರಂಪರೆಯೆಯಲ್ಲಿ ಬಂದ ಶ್ರೀವಾಗೀಶತೀರ್ಥರು, ಶ್ರೀಕವೀಂದ್ರ ತೀರ್ಥರು, ಶ್ರೀರಾಮಚಂದ್ರ ತೀರ್ಥರು, ಶ್ರೀವಿಬುಧೇ೦ದ್ರ ತೀರ್ಥರು ವಿಶೇಷವಾಗಿ ನಡೆಸಿಕೊಂಡು ಬಂದು ಶ್ರೀಹರಿವಾಯು ಗುರುಗಳ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.
ನಂತರ ಮಾಧ್ವವಾಂಗ್ಮಯದಲ್ಲಿ ವಿಶೇಷವಾದ ಛಾಪನ್ನು ಮೂಡಿಸಿದ ಕೀರ್ತಿ ಶ್ರೀರಾಮಚಂದ್ರ ತೀರ್ಥರ ಕರಕಮಲ ಸಂಜಾತರಾದ ಶ್ರೀವಿಬುಧೇ೦ದ್ರ ತೀರ್ಥರಿಗೆ ಸಲ್ಲುತ್ತದೆ. ಅವರ ಚರಮ ಶ್ಲೋಕವೇ ಹೇಳುವಂತೆ ಕೆರಳದಿಂದ ಹಿಮಾಲಯದಪರ್ಯಂತ ಅದ್ವೈತ-ಶೈವವಾದಿಗಳನ್ನು ಗುರುಗಳ ಅನುಗ್ರಹದಿಂದ ನಿರಾಕರಿಸಿ, ಅನೇಕ ಜಯಪತ್ರಿಕೆಗಳನ್ನು ಪಡೆದು, ಅವೆಲ್ಲವನ್ನು ತಿರುಪತಿಯ ಸನ್ನಿಧಾನದಲ್ಲಿ ಭಗವಂತನಿಗೆ ಸಮರ್ಪಿಸಿದ ಕೀರ್ತಿ ಅವರದ್ದು. ಇವರ ಶ್ರೀಮನ್ಯಾಯಸುಧಾಗ್ರಂಥದಲ್ಲಿನ ನೈಪುಣ್ಯಕ್ಕೆಇವರ ಹತ್ತಿರ ಅಧ್ಯಯನ ಮಾಡಿದ ಮಹಾನುಭಾವರಾದ ದೃವಾಂಶಸಂಭೂತರಾದ ಶ್ರೀಪಾದರಾಜರೇ ಸಾಕ್ಷಿ. ಶ್ರೀಮನ್ಯಾಯಸುಧಾ ಗ್ರಂಥಕ್ಕೆ ಪ್ರಪ್ರಥಮ ಟಿಪ್ಪಣಿ 'ಬರೆದು ಮಹದುಪಕಾರ ಮಾಡಿದ ಕೀರ್ತಿ ಶ್ರೀವಿಬುಧೇ೦ದ್ರರ ವಿದ್ಯಾಶಿಷ್ಯರಾದ ಶ್ರೀಪಾದರಾಜರಿಗೆ ಸಲ್ಲುತ್ತದೆ. ಇದು ಶ್ರೀವಿಭುಧೇ೦ದ್ರ ತೀರ್ಥರ ವಿದ್ಯಾಪರಂಪರೆಯ ಕೊಡುಗೆ. ಶ್ರೀಪಾದರಾಜರ ಮಹದುಪಕಾರ.
ಕೇರಳದಿಂದ ಹಿಮಾಚಲಪರ್ಯಂತ ಸತ್ಸಿದ್ಧಾಂತವನ್ನು ಪ್ರತಿಷ್ಠಾಪಿಸಿ ವೇದಾಂತಸಾಮ್ರಾಜ್ಯವನ್ನು ಅನೇಕ ವರ್ಷಗಳ ಕಾಲ ಆಳಿದ ಮಾಹಾನುಭಾವರಾದ ಶ್ರೀವಿಬುಧೆಂದ್ರ ತೀರ್ಥರ ನಂತರ ಅವರ ಕರಕಮಲ ಸಂಜಾತರಾದ ಶ್ರೀಜಿತಾಮಿತ್ರ ತೀರ್ಥರು ವಿಶೇಷ ತಪಸ್ಸನ್ನಾಚಿರಿಸುತ್ತ ಶ್ರೀಮದಾಚಾರ್ಯರ ಸಿದ್ಧಾಂತವನ್ನು ಪ್ರಚಾರಮಾಡಿ ವಿಶೇಷವಾದ ಸೇವೆಯನ್ನು ಮಾಡಿದರು. ಶ್ರೀವಿಬುಧೇಂದ್ರ ತೀರ್ಥರ ವಿದ್ಯಾಶಿಷ್ಯರಾದ ಶ್ರೀಪಾದರಾಜರು, ಶ್ರೀಜಿತಾಮಿತ್ರತೀರ್ಥರ ಮೇಲಿನ ಕೀರ್ತನೆಯಲ್ಲಿ ಶ್ರೀಜಿತಾಮಿತ್ರ ತೀರ್ಥರನ್ನು "ಸೂತ್ರಪಾಠ ಪಠಿಸುವ ಸುಗುಣ ಜಿತಾಮಿತ್ರ" " ಅಗಣಿತ ಮಹಿಮ" ಇತ್ಯಾದಿಯಾಗಿ ಸ್ತುತಿಸಿದ್ದಾರೆ. ಇದಲ್ಲದೆ ಇವರ ಗ್ರಂಥರಚನಾ-ಪಾಠಡಾ ಬಗ್ಗೆ ಹೇಳುವಾಗ "ಮಧ್ವಶಾಸ್ತ್ರದ ಗ್ರಂಥಸಾರದ ಪದ್ಧತಿ ತಿಳಿದಂಥ, ಅದ್ವೈತ ಪಂಥ ಮುರಿದು ಮತ ಉದ್ಧರಿಸಿದಂಥ" ಎಂದು ಶ್ರೀಜಿತಾಮಿತ್ರ ತೀರ್ಥರು ಮಾಡಿದ ಸ್ವಮತಸ್ಥಾಪನಾ ಕಾರ್ಯವನ್ನು ವರ್ಣಿಸಿದ್ದಾರೆ. ಇವರ ಗ್ರಂಥರಚನಾ-ಪಾಠನಾ ಸಾಮರ್ಥ್ಯ ಶ್ರೀಪಾದರಾಯರು ವರ್ಣಿಸುವಾಗ ಅದರ ಮಹತ್ವ ನಮಗೆ ತಿಳಿದು ಬರುತ್ತದೆ.
ಇವರ ಶಿಷ್ಯರಾದ ಶ್ರೀರಘುನಂದನ ತೀರ್ಥರು ಮಧ್ವಸಿದ್ಧಾಂತ ಸ್ಥಾಪನೆ ಮಾಡಿದ ವಿಚಾರ ಕೆಲ ಉಲ್ಲೇಖಗಳಿಂದ ತಿಳಿದು ಬರುತ್ತದೆ. ಶ್ರೀ ರಘುನಂದನ ತೀರ್ಥರ ಕಾರಕಮಲಸಂಜಾತರಾದ ಶ್ರೀ ಸುರೇಂದ್ರ ತೀರ್ಥರು ಅನಶನವೃತದಿಂದ ಭಾರತವನ್ನು ಮೂರುಬಾರಿ ಸಂಚಾರ ಮಾಡಿದ ಮಹಾನುಭಾವರು. ಇವರು ಟಿಪ್ಪಣಿಗಳನ್ನು ರಚಿಸಿ ವಿದ್ವತ್ಪ್ರಪಂಚದಲ್ಲಿ ಮಾನ್ಯರಾಗಿದ್ದ ತಪಸ್ವಿಗಳು. ಇವರೂ ಶ್ರೀಮನ್ಯಾಯಸುಧೆಗೆ ಟಿಪ್ಪಣಿಗಳನ್ನು ಬರೆದು ಸುಧಾಗ್ರಂಥದ ಪ್ರಚಾರ ಮಾಡಿದ್ದಾರೆ.
ಚತುಷ್ಷಷ್ಟಿ ವಿದ್ಯಾಪ್ರವೀಣರಾದ, ಚತುರಧಿಕ ಶತ ಗ್ರಂಥರತ್ನಪ್ರಣಿತರಾದ ಶ್ರೀಸುರೇಂದ್ರವೃತಿವರತನಯರಾದ, ಶ್ರೀವ್ಯಾಸರಾಯರ ವಿದ್ಯಾಶಿಷ್ಯರಾದ ಶ್ರೀವಿಜಯೀ೦ದ್ರ ತೀರ್ಥರು ಶ್ರೀಮನ್ಯಾಯಸುಧಾಗ್ರಂಥಕ್ಕೆ ಶ್ರೀಮನ್ಯಾಯಸುಧಾಬಿಂದು ಎಂಬ ಟಿಪ್ಪಣಿ ಬರೆದು ತಮ್ಮದೇ ಆದ ಕೊಡುಗೆಯನ್ನ ಟಿಪ್ಪಣಿಗಳ ಪ್ರಪಂಚಕ್ಕೆ ನೀಡಿದ್ದಾರೆ.
ಇವರ ಶಿಷ್ಯರಾದ ಮಹಾತಪಸ್ವಿಗಳಾದ ಶ್ರೀಸುಧೀಂದ್ರ ತೀರ್ಥರು ಶ್ರೀಮನ್ಯಾಯಸುಧಾಗ್ರಂಥದ ಪಾಠ ಪ್ರವಚನಗಳಲ್ಲಿ ವಿಶೇಷ ಆಸಕ್ತಿ ಇರಿಸಿಕೊಂಡು ಭಗವಂತನ ಕೃಪೆಗೆ ಪಾತ್ರರಾದವರು. ಇವರ ಮಹಿಮೆಯನ್ನು, ವಾಗ್ದೇವಿಯು "ಶ್ರೀಸುಧೀಂದ್ರ ತೀರ್ಥರಲ್ಲಿ ನಾನು ನೆಲೆಸಿದ್ದೇನೆ" ಎಂದು ರಾಯರಿಗೆ ಆಶ್ರಮ ತೆಗೆದುಕೊಳ್ಳುವಂತೆ ಮನವೊಲೈಕೆಗೆ ಬಂದಾಗ ಹೇಳಿದ್ದನ್ನು ನೋಡಿ ತಿಳಿದುಕೊಳ್ಳಬಹುದು. ಶ್ರೀರಾಘವೇಂದ್ರ ತೀರ್ಥರಂತಹ ವಿದ್ವನ್ಮೂರ್ಧನ್ಯರನ್ನು ತಯಾರು ಮಾಡಿ, ಜಗದ್ಗುರು ಶ್ರೀಮದಾಚಾರ್ಯರ ಪೀಠದ ಮೇಲೆ ಕುಳ್ಳರಿಸಿದ ಮಹಾನ್ ಕೀರ್ತಿ ಶ್ರೀಸುಧೀಂದ್ರರದ್ದು. ಅಂತಹ ಮಹದುಪಕಾರಕ್ಕೆ ಇಡೀ ಮಾಧ್ವ ಸಮಾಜ ಎಂದೆಂದಿಗೂ ಅವರ ಋಣ ತೀರಿಸಲು ಸಾಧ್ಯವಿಲ್ಲಾ. ಇವರು ಶ್ರೀಮನ್ಯಾಯಸುಧಾ ಗ್ರಂಥಕ್ಕೆ ಟಿಪ್ಪಣಿ ಬರೆದಿದ್ದಾರೆ ಎಂದು ಇತಿಹಾಸದಿಂದ ತಿಳಿದು ಬರುತ್ತದೆ.