Monday 3 March 2014

"ವಾಕ್ಸಿದ್ಧಿ" - ರಾಯರ ಪಟ್ಟಾಭಿಷೇಕ ದಿನದ ಲೇಖನ

              ಇಂದು ರಾಘವೇಂದ್ರ ತೀರ್ಥ ಗುರುಸರ್ವಭೌಮರು ವೇದಾಂತ ಸಾಮ್ರಾಜ್ಯಕ್ಕೆ ಅಧಿಪತಿಗಳಾದ ಸುದಿನ.. ಆಚಾರ್ಯರ , ಟೀಕಾರಾಯರ , ವಿಜಯೀಂದ್ರತೀರ್ಥರ, ತಮ್ಮ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರ ಸೇವೆಯನ್ನು ಮಾಡಲು , ನಮ್ಮಂತಹ ಅನೇಕ ಪಾಮರರನ್ನೂ ಉದ್ಧಾರ ಮಾಡಲು ನರಸಿಂಹದೇವರ ಆಶೀರ್ವಾದಗಳೊಂದಿಗೆ ಅವತರಿಸಿದ್ದ ಶ್ರೀ ಪ್ರಹ್ಲಾದರಾಜರು ಶ್ರೀ ರಾಘವೇಂದ್ರ ತೀರ್ಥರಾಗಿ ಅಭಿಶಿಕ್ತರಾದ ಮಂಗಳಕರ ದಿವಸ.. ಒಂದು ವೇಳೆ ರಾಘವೇಂದ್ರ ಗುರುಗಳು ಸನ್ಯಾಸ ತೆಗೆದುಕೊಳ್ಳದೆ ಇದ್ದರೇ ?? ಅಯ್ಯಯ್ಯೋ ಒಂದೆರೆಡು ಕ್ಷಣ ಮನಸ್ಸು ಅಲ್ಲೋಲ ಕಲ್ಲೋಲ ಆಗುತ್ತದೆ.. ಹೃದಯ ಒಡೆದು ಹೋದಂತೆ ಭಾಸವಾಗುತ್ತದೆ .. ಅನಾಥ ಪ್ರಜ್ಞೆ ಮೂಡುತ್ತದೆ.. ಸಧ್ಯ ರಾಯರು ನಮ್ಮೊಂದಿಗಿದ್ದಾರೆ...ಯಾವಾಗಲು ಇರುತ್ತಾರೆ. 

              ಆಹಾ ಶ್ರೀ ರಾಘವೇಂದ್ರ ತೀರ್ಥ .. ಎಷ್ಟೊಂದು ಮಂಗಳಕರ ನಾಮ ? ಯೋಗಿಗಳ , ಮಹಾನುಭಾವರ , ದೈವಾಂಶ ಸಂಭೂತರ ಪ್ರತಿ ಒಂದು ನಡೆಯೂ ಹಾಗೆ.. ಎಲ್ಲವೂ " ಹೈಲಿ ಕ್ಯಾಲ್ಕ್ಯುಲೇಟೆಡ್ !!" .. ಹೌದು ನಮ್ಮ ಆಧುನಿಕ ಯುಗದ ಯಾವ ಉಪಕರಣಗಳು ನಮ್ಮ ಪ್ರಾಚೀನ ಆಚಾರ್ಯರ , ಹಾಗು ಅವರ ಅನುಯಾಯಿಗಳಾಗಿ, ಆಚಾರ್ಯರ ಮಾತಿನಂತೆ " ಹರಿ ಸರ್ವೋತ್ತಮತ್ವಮ್ ವಹ ಸರ್ವದ ಪ್ರತಿಪಾದಯ" ಎಂಬ ಮಾತನ್ನು ಶಿರಸಾವಹಿಸಿ ಜಗತ್ತಿನ ಮೂಲೆ ಮೂಲೆಗಳಲ್ಲಿ ದ್ವೈತವೇದಾಂತದ ಅಪರಿಮಿತ ಸೇವೆ ಮಾಡುತ್ತಾ ವಿರಾಜಿಸುತ್ತಿರುವ ಯತಿವರೆಣ್ಯರ ತಪಃ ಶಕ್ತಿ , ವಿಚಾರಧಾರೆ , ದೂರಾಲೋಚನೆ ಯಾವುದಕ್ಕೂ ಸರಿ ಸಾಟಿ ಇಲ್ಲವೇ ಇಲ್ಲ.. ಶ್ರೀ ಸುಧೀಂದ್ರ ತೀರ್ಥರು ಶ್ರೀ ರಾಘವೇಂದ್ರ ತೀರ್ಥರಿಗೆ ಮಾಡಿದ ಮಹಾಶಿರ್ವಾದವೇ ಇದಕ್ಕೆ ಸಾಕ್ಷಿ .. ಶ್ರೀ ಸುಧೀಂದ್ರರು ತಮ್ಮ ವಿದ್ಯಾ ಶಿಷ್ಯ , ಕರುಣೆಯ ಕಂದ ಶ್ರೀ ವೆಂಕಟನಾಥಾಚರ್ಯರನ್ನ ಉಪಸ್ಯ ಮೂರ್ತಿ ಶ್ರೀ ಮೂಲರಾಮದೇವರ , ಶ್ರೀ ಆಚಾರ್ಯರ ಆದೇಶದಂತೆ ವೇದಾಂತ ಸಾಮ್ರಾಜ್ಯದಲ್ಲಿ , ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ , ವಿದ್ಯಾ ಮಠ ವೆಂದೆ ಖ್ಯತಿವೆತ್ತಿದ್ದ ಮಹಾ ಪೀಠದಲ್ಲಿ ಮಂಡಿಸುವಾಗ ಮಾಡಿದ ಆಶೀರ್ವಾದಗಳು ಇಂದಿಗೆ ಸೂರ್ಯ ಪ್ರಕಾಶದಷ್ಟು ಸ್ಪುಟವಾಗಿ ನಮ್ಮೆದುರೇ ಪ್ರತ್ಯಕ್ಷ ಫಲವಾಗಿವೆ .. 

              ಶ್ರೀ ರಾಯರು ಆಶ್ರಮ ತೆಗೆದುಕೊಳ್ಳುವ ಸಂದರ್ಭದಲ್ಲಿ ಶ್ರೀ ಸುಧೀಂದ್ರರು 
      
     ಶ್ರೀ ಸುರೇಂದ್ರವದಯಂ ತಪಸ್ಯಯಾ ಶ್ರೀ ಜಯೀಂದ್ರ ಇವ ಕೀರ್ತಿಸಂಪದಾ । 
     ವಿಶ್ರುತೋsಹಮಿವ ವಾದ ಸಂಗರೇ ರಾಘವೇಂದ್ರ ಯತಿರಾಟ್ ಸಮೇಧತಾಂ।। 

 ಎಂದು ಶೀರ್ವದಿಸಿದರು ಎಂದು ರಾಘವೇಂದ್ರ ವಿಜಯಕಾರರು ಹೇಳಿದ್ದಾರೆ.. 
     " ಸಮಸ್ತ ಭರತಖಂಡವನ್ನು ಉಪವಾಸ ವ್ರುತದಿಂದ ಮೂರು ಬಾರಿ ಸಂಚರಿಸಿದ , ಕಠಿಣವ್ರುತಾನುಷ್ಥಾನತತ್ಪರರಾದ , ಮಾನಸಪೂಜಾ ಧುರಂಧರರಾದ ಶ್ರೀ ಸುರೇಂದ್ರ ತೀರ್ಥರಂತಹ ಮಾಹಾನುಭಾವರಂತೆ ತಪಶ್ಶಕ್ತಿ ನಿಮ್ಮಲ್ಲಿ ಬರಲಿ , ಚತುಶ್ಶಷ್ಟಿ ಕಲಾ ವಿಷೆಶರಾದ , ಶತಾಧಿಕ ಗ್ರಂಥರತ್ನ ಪ್ರಣೀತರಾಗಿ ಸಮಸ್ತ ದಕ್ಷಿಣ ಭಾರತದ ಅಧಿಪತ್ಯ ಹೊಂದಿದ್ದ ಶ್ರೀ ವಿಜಯೀಂದ್ರ ತೀರ್ಥರಂತೆ ಕೀರ್ತಿವಂತರಾಗಿ ವಿರಾಜಿಸುವಂತಾಗಲಿ.. ಶ್ರೀಮಠದ ವಿದ್ಯಾ ಮಠ ಎಂಬ ಹೆಸರನ್ನು ಸಾರ್ಥಕ ಮಾಡಿದ , "ದಿಗ್ವಿಜಯ ವಿದ್ಯಾ ಸಿಂಹಾಸನಾಧೀಶ್ವರ" ಎಂಬ ಬಿರುದ ಪಡೆದ ಏಕೈಕ ಯತಿ ಸಾರ್ವಭೌಮ , "ಜಗದ್ಗುರು" ಎಂದು ಪರಮತೀಯರಿಂದಲೂ ಮಾನ್ಯರಾದ , ಪರಮತೀಯರು ಸೇರಿದಂತೆ ಎಲ್ಲರೂ " ಅಲಂಕಾರ ಶಾಸ್ತ್ರನಿಪುಣಃ " ಎಂದೇ ಖ್ಯಾತರಾದ , ಪರಮತೀಯ ಕಾವ್ಯಗಳಲ್ಲಿ ಹೊಗಳಿಸಿಕೊಂಡ  , ಮಹಾನ್ ಮೇಧಾವಿ ಮೂರ್ಧನ್ಯರಾದ, ವಿಶ್ವವಿಖ್ಯತರಾದ , ಭಾಗವತದ ಎರೆಡು ಸ್ಕಂದಗಳಿಗೆ ಗಹನ,ಗಂಭೀರವಾದ,ವ್ಯಾಖ್ಯಾನವನ್ನು ರಚಿಸಿದ , ವಾದವಿದ್ಯಾ , ವೇದವಿದ್ಯಾಕುಶಲರಾದ ಶ್ರೀ ಸುಧೀಂದ್ರರು , ರಾಘವೇಂದ್ರ ತೀರ್ಥರಿಗೆ "ನಮ್ಮಂತೆ" ಸಮಸ್ತ ಮಾನವ ಜನಾಂಗದ ಹಿತಕ್ಕಾಗಿ ಸರ್ವರನ್ನೂ ಅನುಗ್ರಹಿಸುತ್ತ ಕಾಪಾಡುತ್ತಾ ಜಯಶೀಲರಾಗಿ ಅಭಿವೃದ್ಧಿ ಹೊಂದಿರಿ ಎಂದು ಹೇಳಿ ಆಶೀರ್ವದಿಸಿದರು.. ಇದಲ್ಲದೆ ಕುಬೇರನಂತೆ ಅಕ್ಷಯವಾದ ಸಂಪತ್ತಿನಿಂದಲೂ , ಜಗನ್ಮಂಗಳ ಮೂರ್ತಿ ರಾಮಚಂದ್ರ ದೇವರಂತೆ ಕೀರ್ತಿವಂತರಾಗಿರುವಂತೆಯೂ ಆಶೀರ್ವಾದ ಮಾಡಿದ್ದಾರೆ.. 
    ಹೀಗೆ ಸಿದ್ಧಪುರುಷರ ತುಂಬು ಹೃದಯದ ಆಶೀರ್ವಾದ ಬಲದೊಂದಿಗೆ ಎಲ್ಲಕ್ಕಿಂತ ಮಿಗಿಲಾಗಿ ತಮ್ಮನ್ನು ಉದ್ಧರಿಸಿದ ಶ್ರೀ ನರಸಿಮ್ಹದೆವರಿಂದ ವಿಶೇಷ ಅನುಗ್ರಹ ಪಡೆದು , ಅವರೇ ಹಿಂದೆ  " ಬ್ರಹ್ಮ ಸಂಬಂಧಿಯಾದ ನನ್ನನ್ನು ನೀನು ಮುಂದೆ ಕಲಿಯುಗದಲ್ಲಿ ಅರ್ಚಿಸುತ್ತೀ " ಎಂದು ಹೇಳಿದಂತೆ ಸಾಕ್ಷಾತ್ ಶ್ರೀ ಬ್ರಹ್ಮದೇವರ ಕರಾರ್ಚಿತ ಶ್ರೀಮನ್ಮೂಲ ರಾಮ ಮೂರ್ತಿಯನ್ನು ಸದಾ ಅರ್ಚಿಸುತ್ತ ರಾಮ ಕೃಷ್ಣ ವೇದವ್ಯಾಸ ನರಹರಿ ರೂಪಗಳನ್ನು ಸದಾ ಧ್ಯಾನಿಸುತ್ತ , ಹಯಗ್ರೀವದೇವರನ್ನು ಮನಸ್ಸಿನಲ್ಲಿ ಪ್ರತಿಷ್ಟಾಪಿಸಿಕೊಂಡು ಸದಾ ನಮ್ಮೆಲ್ಲರನ್ನೂ ಇಂದಿಗೂ ಸಲಹುತ್ತಿದ್ದಾರೆ ನಮ್ಮ "ರಾಘವೇಂದ್ರ ಗುರುಗಳು" ಇವರ ಕೃಪೆ , ದಯೆ , ಕಾರುಣ್ಯಕ್ಕೆ ಮಿತಿ ಉಂಟೆ ?? ಅದಕ್ಕೆ ಇವರ ಪಟ್ಟದ ಶಿಷ್ಯರಾದ ಯೋಗೀಂದ್ರ ತೀರ್ಥ ಶ್ರೀಪಾದಂಗಳವರು ಇವರನ್ನು " ದಯಾಲವೇ " " ಕಾರುಣ್ಯಸಿಂಧವೇ" ಎಂದು ಮನತುಂಬಿ ಕೊಂಡಾಡಿದ್ದಾರೆ. ಯೋಗೀಂದ್ರ ತೀರ್ಥರು ರಾಯರನ್ನು ಕುರಿತು " ಸ್ವಾಮಿ ತಮ್ಮ ಮಹೋನ್ನತ ಸಾಧನೆ ಇಂದ ಈ ಮೂಲ ಮಹಾ ಸಂಸ್ಥಾನವನ್ನು ನಡೆಸಿಕೊಂಡು ಹೋಗುತ್ತಿದ್ದೀರಿ , ತಮ್ಮನ್ನೇ ಸರ್ವವಿಧದಿಂದಲೂ ಆಶ್ರಯಿಸಿರುವ ನಾವು , ನೀವಿಲ್ಲದೇ ( ಪ್ರತ್ಯಕ್ಷವಾಗಿ ) ಸಂಸ್ಥಾನವನ್ನು ಹೇಗೆ ಮುಂದುವರೆಸಿಕೊಂಡು ಹೋಗುವದು ?? " ಎಂದು ಭಾವುಕರಾಗಿ ಕೇಳಿದಾಗ , ಹೇಗೆ ಭರತ ಶ್ರೀರಾಮದೇವರು ವನವಾಸಕ್ಕೆ ಹೋದಾಗ ತಮ್ಮ ಪಾದುಕೆಗಳನ್ನೇ ಭರತನ ಕೈಗಿತ್ತರೋ ಹಾಗೆ ,ಶ್ರೀ ರಾಘವೇಂದ್ರ ಗುರುಗಳು ತಾವು ಧರಿಸಿದ್ಧ ಪಾದುಕಾದ್ವಾಯಗಳನ್ನೂ ಯೋಗೀಂದ್ರ ತೀರ್ಥರ ಕೈಗಿತ್ತು ,  "ಈ ಪಾದುಕೆಗಳು ಎಲ್ಲಿ ಇರುತ್ತವೆಯೋ ಅಲ್ಲಿ ನಮ್ಮ ಸಂಪೂರ್ಣ ಸನ್ನಿಧಾನವಿರುತ್ತಾದೇ , ಈ ರೂಪದಲ್ಲಿ ಸ್ವತಃ ನವೆ ಇದ್ದು ಸಂಸ್ಥಾನಕ್ಕೆ ಯಾವುದೇ ಕುಂದು ಕೊರತೆ ಬರದಂತೆ  ನೋಡಿಕೊಳ್ಳುತ್ತೇವೆ , ಈ ಪಾದುಕಾ ಬಲದಿಂದ ಎಲ್ಲ ಇಷ್ಟಾರ್ಥಗಳು ನೆರವೆರುವವು " ಎಂದು ಅಭಯವಿತ್ತಿದ್ದಾರೆ ಮಹಾನುಭಾವರು.. ಈ ಪಾದುಕೆಗಳನ್ನೂ ಇಂದಿಗೂ ನಾವು ಶ್ರೀ ರಾಯರ ಸಂಸ್ಥಾನದಲ್ಲಿ ಕಾಣಬಹುದು.. ಪರಮಪೂಜ್ಯರಾದ ರಾಯರ ಮಠದ ಪೀಠಾಧಿಪತಿಗಳು ಅದನ್ನು ಶ್ರೀ ಮೂಲರಾಮ ಪೂಜಾ ನಂತರ ಸಕಲ ಭಕ್ತರಿಗೂ ತೋರಿಸಿ ಎಲ್ಲರನ್ನು ಉದ್ಧಾರ ಮಾಡುತ್ತಾರೆ.. 
    ಈ ರೀತಿಯಾಗಿ ರಾಯರ ಮೇಲೆ ಸುಧೀಂದ್ರರು ಏನೆಲ್ಲಾ ಆಶೀರ್ವಾದ ಮಾಡಿದ್ದಾರೆಯೋ , ರಾಘವೇಂದ್ರ ಪ್ರಭುಗಳು ಏನೆಲ್ಲಾ ಅಶೀರ್ವದ ಮಾಡಿದ್ದಾರೆಯೋ ? ಅದೆಲ್ಲ ಇಂದಿಗ್ಗೂ ಸೂರ್ಯಪ್ರಕಾಶದಷ್ಟು ಸತ್ಯ ಎಂಬುದನ್ನು ಎಲ್ಲ ಸಜ್ಜನರೂ ಮನಗಾಣಬಹುದು.. ಇದೆ ದೊಡ್ಡವರ , ಮಹಾನುಭಾವರ , ದೈವಾಂಶಸಂಭೂತರ ಮಾತಿನ ಮಹಿಮೆ.. "ಗುರುರಾಜರೇ ತಮ್ಮ ಜೀವನದ ಪ್ರತಿಯೊಂದು ಘಟನೆಯೂ , ತಮ್ಮ ಪ್ರತಿಯೊಂದು ಮಾತು , ತಮ್ಮ ಪ್ರತಿಯೊಂದೂ ಕಾರ್ಯ , ತಾವು ನೀ ಮಾಡಿದರೂ ಅದರಿಂದ ವೇದಗಳ ಸಾರ , ಶಾಸ್ತ್ರವಿಚಾರವನ್ನೇ ಬೋಧಿಸುತ್ತೀರಿ.. ಇಂಥಾ ಪ್ರಭುವ ಕಾಣೆನೋ ಈ ಜಗದೊಳು , ಹಿಂತಾ ಪ್ರಭುವ ಕಾಣೆನೋ ... ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಪಾಹಿ ಮಾಮ್ ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ರಕ್ಷಮಾಂ .. ನಿಮ್ಮ ಮಹಿಮೆ ವರ್ಣಿಸಲಸಾಧ್ಯ ಎಂದು ವಾದೀಂದ್ರ ತೀರ್ಥ ಗುರುಸಾರ್ವಭೌಮರೆ ಉದ್ಗಾರ ತೆಗೆದಿರುವಾಗ ಇನ್ನು ನನ್ನಂತಹ ಕ್ರಿಮಿ ಇಂದೇನು ಸಾಧ್ಯ ಸ್ವಾಮೀ ?? ನೀವೇ ನಿಂತು ಬರೆಸಿದ್ದೀರಿ .. ಅದು ನಿಮಗೆ ಸಮರ್ಪಿತ .. ಏನೂ ಬೇಡ ಸ್ವಾಮೇ ನಿಮ್ಮ ದಯೆ ಒಂದಿದ್ದರೆ ಸಾಕು ದೊರೆಯೇ .. ಮೂಲರಾಮನ ಪೂಜಿಪ ಯತಿಯೇ.!! 
                                         
ಅಸ್ಮದ್ ಗುರ್ವಂತರ್ಗತ ರಾಘವೇಂದ್ರ  ಗುರ್ವಂತರ್ಗತ ಭಾರತೀರಾಮನ ಮುಖ್ಯಪ್ರಾಣಾಂತರ್ಗತ ಮಧ್ವವಲ್ಲಭ ಸೀತಾಪತೆ ಶ್ರೀಮನ್ಮೂಲರಾಮ ಅಭಿನ್ನ ಶ್ರೀ ಕೃಷ್ಣಾರ್ಪಣಮಸ್ತು..
                          ಭೂ ಇಷ್ಟಾಂ ತೆ ನಮ ಉಕ್ತಿಂ ವಿಧೇಮ      

No comments:

Post a Comment

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...