Sunday, 16 January 2022

ಸಂತಾನಕೃಷ್ಣಪ್ರತಿಮಾ ಸೌವರ್ಣೇ ಸರ್ವಸಿದ್ಧಿದಾ


ಸಂತಾನಕೃಷ್ಣಪ್ರತಿಮಾ ಸೌವರ್ಣೇ ಸರ್ವಸಿದ್ಧಿದಾ  ।। 
ಉಪಾಸ್ಯಾ ರಾಘವೇಂದ್ರಾರ್ಯೈಃ ಅಘನಾಶನಕೀರ್ತಿಭಿಃ ।।

ಸಂತಾನಕೃಷ್ಣಪ್ರತಿಮೆಯು ಸುವರ್ಣಮಯವಾದ ಪ್ರತಿಮೆಯಾಗಿದ್ದು, ಸರ್ವಸಿದ್ಧಿಯನ್ನು ಕೊಡುವಂತಹ ಪ್ರತಿಮೆ. 
ಶ್ರೀರಾಘವೇಂದ್ರಗುರುಸಾರ್ವಭೌಮರಿಂದ  ವಿಶೇಷವಾಗಿ ಉಪಾಸನೆಗೊಂಡ ಪ್ರತಿಮೆ. ಬಂದ ಪಾಪಗಳನ್ನು, ತತ್ಸಂಬಂಧಿ ಕಷ್ಟಗಳನ್ನು ನಾಶಮಾಡಬಲ್ಲ ಮಹಾಸನ್ನಿಧಾನೋಪೇತ ಪ್ರತಿಮೆ. 

ಶ್ರೀರಾಘವೇಂದ್ರಗುರುಸಾರ್ವಭೌಮರು ವಿಶೇಷವಾಗಿ ಉಡುಪಿಯಲ್ಲಿ ಶ್ರೀಕೃಷ್ಣನ ಉಪಾಸನೆಯನ್ನು ಮಾಡಿ, ಅಲ್ಲಿ ಚಂದ್ರಿಕಾಗ್ರಂಥಕ್ಕೆ ಪ್ರಕಾಶ ಎಂಬ ವ್ಹಯಾಖ್ಯಾನವನ್ನು ಮಾಡಿ, ಇನ್ನೂ ಕೆಲವು ಟಿಪ್ಪಣಿಗಳನ್ನು ರಚಿಸಿ, ಶ್ರೀಕೃಷ್ಣನ ಸನ್ನಿಧಾನದಲ್ಲಿ ತಾವೇ ಒಂದು ಸುರ್ವಣಮಾಯವಾದ ಪ್ರತಿಮೆಯನ್ನು ನಿರ್ಮಾಣ ಮಾಡಿ, ಶ್ರೀಕೃಷ್ಣನ ಸನ್ನಿಧಾನದಲ್ಲಿಟ್ಟು  ಪೂಜಿಸಿ ತೆಗೆದುಕೊಂಡು ಬಂದು ತಾವು ಉಪಾಸನೆಯನ್ನು ಮಾಡುತ್ತಿದ್ದರು. ಅದೇ ಕೃಷ್ಣನ ಉಪಾಸನಾಬಲದಿಂದ ಸನ್ನಿಧಾನದಲ್ಲಿ ಸಂತಾನಯಂತ್ರ, ಭೀತಿಯಂತ್ರ ಹಾಗೂ ಅಭಿಷ್ಟಯಂತ್ರದ ಸಿದ್ಧಿ ಇದ್ದು, ಇಂದಿಗೂ ಸಂಸ್ಥಾನದಲ್ಲಿ ಇದರ ಜಾಗೃತ ಫಲಗಳನ್ನು ಪ್ರತ್ಯಕ್ಷವಾಗಿ ನೋಡಬಹುದು. 

Wednesday, 3 June 2020

ಶ್ರೀಪಾದರಾಜರು

ಶ್ರೀಪಾದರಾಜರು ( ಶ್ರೀಲಕ್ಷ್ಮೀನಾರಾಯಣ ತೀರ್ಥರು) 

ತಂ ವಂದೇ ನರಸಿಂಹತೀರ್ಥನಿಲಯಂ ಶ್ರೀ ವ್ಯಾಸರಾಟ್ ಪೂಜಿತಂ ಧ್ಯಾಯಂತಾಂ ಮನಸಾ ನೃಸಿಂಹಚರಣಂ ಶ್ರೀಪಾದರಾಜಂ ಗುರುಂ॥

ಆಶ್ರಮನಾಮ: ಶ್ರೀಲಕ್ಷ್ಮೀನಾರಾಯಣ ತೀರ್ಥರು
ಆಶ್ರಮ ಗುರುಗಳು: ಶ್ರೀಸ್ವರ್ಣವರ್ಣತೀರ್ಥರು 
ವಿದ್ಯಾಗುರುಗಳು:  ಶ್ರೀ ವಿಬುಧೆಂದ್ರ ತೀರ್ಥರು (ಶ್ರೀಕವೀಂದ್ರ ತೀರ್ಥ ಪರಂಪರಾ ಭೂಷಾಮಣಿ) 
ಆಶ್ರಮ ಶಿಷ್ಯರು: ಶ್ರೀಹಯಗ್ರೀವತೀರ್ಥರು 
ಪರಂಪರೆ:
 ಶ್ರೀಪಾದರಾಜ ಮಠ : ಶ್ರೀಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ಮಾಧ್ವಯತಿಕುಲ ತಿಲಕ ಶ್ರೀಪದ್ಮನಾಭ ತೀರ್ಥರಿಂದ ಪ್ರವರ್ತಿತವಾದ, ಶ್ರೀಲಕ್ಷ್ಮಿಧರ ತೀರ್ಥ ಶ್ರೀಪಾದರಿಂದ ಮುಂದುವರೆದ ಪರಂಪರೆ. 
ಪೂರ್ವಾಶ್ರಮ ನಾಮ: ಲಕ್ಷ್ಮೀನಾರಾಯಣ 
ವೃಂದಾವನ ಸ್ಥಳ: ಮುಳುಬಾಗಿಲು


ಪೂರ್ವಾಶ್ರಮ - ಸಂನ್ಯಾಸ: 

ಬಾಲಕನಾಗಿದ್ದಾಗಲೇ ಅಪ್ರತಿಮ ಮಾತಿನ ವೈಖರಿಯಿಂದ ಶ್ರೀಸ್ವರ್ಣವರ್ಣತೀರ್ಥರ ಪರಮಾನುಗ್ರಹಕ್ಕೆ ಪಾತ್ರರಾಗಿ ಅವರಿಂದಲೇ  ಸಂನ್ಯಸ್ತರಾಗಿ ಬಾಲಯತಿಗಳಾಗಿ ಕಂಗೊಳಿಸಿದವರು ಶ್ರೀಲಕ್ಷ್ಮೀನಾರಾಯಣತೀರ್ಥರು..

ವಿದ್ಯಾಗುರುಗಳು- ವಿದ್ಯಾಭ್ಯಾಸ: 

ಸಂನ್ಯಸ್ತರಾದ, ಚತುರರಾದ ನೂತನ ಬಾಲಯತಿಗಳನ್ನು ಅಪ್ರತಿಮ ವಿದ್ವಾಂಸರನ್ನಾಗಿ ಮಾಡಬೇಕು ಎಂದು ಅಪೇಕ್ಷೇಯುಳ್ಳ ಶ್ರೀಸ್ವರ್ಣವರ್ಣತೀರ್ಥರು ಬಾಲಯತಿಗಳನ್ನು ಶ್ರೀವಿಬುಧೇಂದ್ರತೀರ್ಥರ ಹತ್ತಿರ ಕಳುಹಿಸುತ್ತಾರೆ.

ಶ್ರೀಮನ್ಮಧ್ವಾಚಾರ್ಯರ- ಶ್ರೀಪದ್ಮನಾಭತೀರ್ಥರ- ಶ್ರೀ ಜಯತೀರ್ಥರ ದಿವ್ಯ ಪರಂಪರೆಯನ್ನು ಬೆಳಗಿದ , ಶ್ರೀಮಧ್ವಾಚಾರ್ಯರ ಸಿದ್ಧಾಂತವನ್ನೇ ತಮ್ಮ ಸಾರಸರ್ವಸ್ವವನ್ನಾಗಿಸಿಕೊಂಡಿದ್ದವರು ಶ್ರೀವಿಬುಧೇಂದ್ರತೀರ್ಥರು. ಕೇರಲದಿಂದ ಹಿಮಾಲಯಪರ್ಯಂತ ದುರ್ವಾದಿಗಳನ್ನು ನಿರಾಕರಿಸಿದವರು, ದುರ್ವಾದಿವೀಘಟನ ದೀಕ್ಷಾಬದ್ಧರಾದ ಮಾಡುವ ಮಾಧ್ವಯತೀಶ್ವರರ ಸೇನಾನಾಯಕನಂತೆ ಕಂಗೊಳಿಸಿದವರು. ಆಗಿನ ಕಾಲದಲ್ಲಿ ವಿದ್ಯೆಗೆ ತವರಾದ ಮಹಾನ್ ಮೇಧಾವಿಗಳು.

ಶ್ರೀವಾದೀಂದ್ರತೀರ್ಥರು, ಶ್ರೀಪಾದರಾಜರ ವಿದ್ಯಾಗುರುಗಳಾದ ಶ್ರೀವಿಬುಧೇಂದ್ರತೀರ್ಥರನ್ನು ಸ್ತುತಿಸುವಾಗ,

"ಅಮೀಲಕ್ಷ್ಮೀನಾರಾಯಣಮುನಿಮುಖಾಶೇಷಯತಯಃ
ಯತೋ ವಿದ್ಯಾಮೃದ್ಧಾಮಧಿಜಗುರುಧಿಷ್ಠಾನಪತಯಃ |
ಮುಹುರ್ಮೋಹೋದಂಚತ್ಪರಮತಪರೀಭಾವಚತುರಃ
ಸ ಮೇ ಭೂಯಃ ಶ್ರೇಯೋ ದಿಶತು ವಿಬುಧೇಂದ್ರವ್ರತಿಪತಿಃ ||

ಎಂದು ಶ್ರೀಪಾದರಾಜರು ಶ್ರೀವಿಬುಧೇಂದ್ರರ ವಿದ್ಯಾಶಿಷ್ಯರು ಎಂದು ವಿಶೇಷವಾಗಿ ಸ್ಮರಿಸಿದ್ದಾರೆ.

ಶ್ರೀವಿಬುಧೆಂದ್ರತೀರ್ಥರಲ್ಲಿ ಸಮಸ್ತ ದ್ವೈತವೇದಾಂತವನ್ನು ಅಭ್ಯಸಿಸಿ, ಗುರುಗಳಂತೆಯೇ ಅಖಂಡ ವಿದ್ಯಾಪಾರಂಗತರಾಗಿ ವಿದ್ಯಾವ್ಯಾಸಂಗ ಮುಗಿಸಿ ಅವರ ಎತ್ತರದ ವ್ಯಕ್ತಿತ್ವದ ದ್ಯೋತಕವಾಗಿ "ಶ್ರೀಪಾದರಾಜರು" ಎಂಬ ಪ್ರಶಸ್ತಿಯನ್ನು ಪಡೆದವರಾಗಿ ಶ್ರೀಸ್ವರ್ಣವರ್ಣತೀರ್ಥರ ಹತ್ತಿರ ಬರುತ್ತಾರೆ.

ಇದನ್ನೇ ಶ್ರೀವಾದೀಂದ್ರ ಶ್ರೀಮಚ್ಚರಣರು ತಮ್ಮ 'ಶ್ರೀರಾಘವೇಂದ್ರಮಠಗತಾರ್ಚಾಗತಿಕ್ರಮ'ದಲ್ಲಿ, ಶ್ರೀಮದ್ವಿಬುಧೇಂದ್ರತೀರ್ಥರ ಬಗ್ಗೆ ಹೇಳುವಾಗ,

ಲಕ್ಷ್ಮೀನಾರಯಣಮುನಿಃ ವ್ಯಾಸದೇಶಿಕದೇಶಿಕಃ |
ಯಸ್ಮಾತ್ ಶ್ರೀಪಾದರಾಜಾಖ್ಯೋ ಹೃದ್ಯಗೀಷ್ಟಾಖಿಲಾಗಮಾನ್ ||
                                                                               - ಅ.ಗ.ಕ್ರ - 5

ಎಂದು ಗುರುಶಿಷ್ಯರ ವಿದ್ಯಾಸಂಬಂಧವನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ.

ಸಂಸ್ಥಾನಾಧಿಪತ್ಯ ಹಾಗೂ ವಿಶ್ವವಿದ್ಯಾನಿಲಯ ಸ್ಥಾಪನೆ : 

Tuesday, 13 December 2016

 "ವಿದ್ಯಾಮಠದಲ್ಲಿ ಶ್ರೀಮನ್ಯಾಯಸುಧಾಮಂಗಳ ಮಹೋತ್ಸವ" 

                        ತತ್ವಜ್ಞಾನಕ್ಕೋಸ್ಕರ ಬ್ರಹ್ಮರುದ್ರಾದಿಗಳಿಂದ ಪ್ರಾರ್ಥಿಸಲ್ಪಟ್ಟ ಸರ್ವೋತ್ತಮನಾದ ಶ್ರೀಮನ್ನಾರಾಯಣನು ಶ್ರೀವೇದವ್ಯಾಸರಾಗಿ ಅವತರಿಸಿ ನಾಶವನ್ನು ಹೊಂದುತ್ತಿರುವ ಅಸ್ತ್ವವ್ಯಸ್ತವಾದ ವೇದರಾಶಿಯನ್ನು ವಿಭಾಗಿಸಿ ತದರ್ಥನಿರ್ಣಯಕ್ಕೋಸ್ಕರ ಸೂತ್ರಸಮೂಹಾತ್ಮಕವಾದ ಬ್ರಹ್ಮಮೀಮಾಂಸಾಶಾಸ್ತ್ರವನ್ನು ರಚಿಸಿದರು. ಸಮನ್ವಯ-ಅವಿರೋಧ-ಸಾಧನ-ಫಲಪ್ರತಿಪಾದಕ ಚತುರಾಧ್ಯಾಯರೂಪವಾದ ಬ್ರಹ್ಮಮೀಮಾಂಸಾಶಾಸ್ತ್ರದಲ್ಲಿ ೫೬೪ ಸೂತ್ರಗಳಿಂದ ನಾರಾಯಣರೂಪಿಯಾದ ಪರಬ್ರಹ್ಮನನ್ನು ಚೆನ್ನಾಗಿ ಪ್ರತಿಪಾದಿಸಿದರು. ಅವೇ ಬ್ರಹ್ಮಸೂತ್ರಗಳು ಎಂದು ಪ್ರಸಿದ್ಧಿ ಪಡೆದಿವೆ.
                 ಶ್ರೀವೇದವ್ಯಾಸರಿಂದ ರಚಿತವಾದ ಅಪರಿಮಿತವಾದ ಬ್ರಹ್ಮಮೀಮಾಂಸಾದಿಶಾಸ್ತ್ರಗಳಿಂದ ಚೆನ್ನಾಗಿ ನಿರ್ಣಯಿಸಲ್ಪಟ್ಟಿರುವ ಸಕಲ ಜ್ಞಾನಿಗಳಿಗೆ ಸಮ್ಮತವಾದ ದೋಷರಹಿತವಾದ ಭಾವವನ್ನು ತಮ್ಮ ಗ್ರಂಥಗಳ ಮೂಲಕವಾಗಿ  ಪ್ರತಿಪಾದಿಸಿದವರು ಅಶೇಷ ಸಜ್ಜನರಿಗೆಲ್ಲ ಜ್ಞಾನದೀಪದಂತಿರುವ, ಶ್ರೀಮುಖ್ಯಪ್ರಾಣ ದೇವರ ಅವತಾರರಾದ ತ್ರೈಲೋಕ್ಯಗುರುಗಳಾದ ಶ್ರೀಮನ್ಮಧ್ವಾಚಾರ್ಯರು. ಜಗತ್ತಿಗೆ ಜಗದ್ಗುರುಗಳಿಂದ ಪ್ರಣೀತವಾದ  ಆ ಅಮೂಲ್ಯ ಸಂಪತ್ತುಗಳೇ  ಸರ್ವಮೂಲ ಗ್ರಂಥಗಳು. ಶ್ರೀವೇದವ್ಯಾಸದೇವರು ಮಾಡಿದ ಆ ಬ್ರಹ್ಮಸೂತ್ರಗಳಿಗೆ ವ್ಯಾಖ್ಯಾನರೂಪವಾಗಿ ಒಂದಲ್ಲ ಎರೆಡಲ್ಲ ಬ್ರಹ್ಮಸೂತ್ರಭಾಷ್ಯ, ಅನುವ್ಯಾಖ್ಯಾನ, ನ್ಯಾಯವಿವರಣ ಹಾಗು ಅಣುಭಾಷ್ಯ ಎಂಬ ನಾಲ್ಕು (೪) ಗ್ರಂಥರತ್ನಗಳನ್ನು ಬರೆದು ಅನುಗ್ರಹ ಮಾಡಿದ್ದಾರೆ.
                  ಈ ಬ್ರಹ್ಮಸೂತ್ರಗಳಿಗೆ ಭಾಷ್ಯರೂಪವಾಗಿ  ೨೧ ಪರಮತೀಯ  ಆಚಾರ್ಯರು ಬರೆದ ಭಾಷ್ಯಗಳ ವಿಮರ್ಶಾತ್ಮಕ ರೂಪವಾಗಿ ಹೊರಟ ಗ್ರಂಥವೇ ಶ್ರೀಮದಾಚಾರ್ಯರ ಬ್ರಹ್ಮಸೂತ್ರಭಾಷ್ಯ. ಶ್ರೀಕೃಷ್ಣಪರಮಾತ್ಮ ತನ್ನ ಪುಟ್ಟ ಬಾಯಲ್ಲಿ ಬ್ರಹ್ಮಾಂಡವನ್ನೇ ತೋರಿದಂತೆ ಸಮಗ್ರ ಬ್ರಹ್ಮಮೀಮಾಂಸಾ ಶಾಸ್ತ್ರಗಳ ಅರ್ಥಸಾರವನ್ನು ಅಣುಭಾಷ್ಯದಲ್ಲಿ ಹಿಡಿದಿಟ್ಟಿದ್ದಾರೆ ನಮ್ಮ ಜಗದ್ಗುರುಗಳು.ಬ್ರಹ್ಮಸೂತ್ರಗಳ ಮಹತ್ವ ತಿಳಿಸಿ , ಶಾಸ್ತ್ರಪ್ರಮೇಯಗಳನ್ನು ವಿಮರ್ಶಾತ್ಮಕವಾಗಿ ಶಿಷ್ಯರ ಪ್ರಾರ್ಥನೆಯ ಮೇರೆಗೆ ಶ್ರೀಮದಾಚಾರ್ಯರು ನಿರೂಪಿಸಿದ ಗ್ರಂಥವೇ ಶ್ರೀಮದಾನುವ್ಯಾಖ್ಯಾನ.
 ಮೇಲಿನ ಮೂರೂ ಗ್ರಂಥಗಳನ್ನು ಬರೆದಾದಮೇಲೆ ರಚಿಸಿದ ಗ್ರಂಥವೇ ನ್ಯಾಯವಿವರಣ. ಮೇಲಿನ ಮೂರೂಗ್ರಂಥಗಳಲ್ಲಿ ಅಡಕವಾದ ನ್ಯಾಯಗಳ ವಿವರಣೆಗಾಗಿ ಈ ಗ್ರಂಥ ಹೊರಟಿದೆ ಎಂದು ಶ್ರೀಮದಾಚಾರ್ಯರು ತಾವೇ ಹೇಳಿದ್ದಾರೆ .
                ಶ್ರೀಮದಾಚಾರ್ಯರ ಅನುವ್ಯಾಖ್ಯಾನಕ್ಕೆ ಅವರ ಸಾಕ್ಷಾತ್ ಶಿಷ್ಯರಾದ, ಶ್ರೀಮಠದ ಪೂರ್ವಿಕ ಗುರುಗಳಾದ, ಶ್ರೀಜಯತೀರ್ಥರು, ಶ್ರೀವಿಬುಧೇಂದ್ರ ತೀರ್ಥರು , ಶ್ರೀವಿಜಯೀ೦ದ್ರ ತೀರ್ಥರು, ಶ್ರೀ ಸುಧೀ೦ದ್ರ ತೀರ್ಥರು, ಶ್ರೀರಾಘವೇಂದ್ರ ತೀರ್ಥರಿಗೇ ಮೊದಲಾದ ಎಲ್ಲ ಜ್ಞಾನಿಗಳಿಗೂ ಪರಮಮಾನ್ಯರಾದ, ಆದಿಟೀಕಾಚಾರ್ಯರಾದ ಶ್ರೀ ಪದ್ಮನಾಭ ತೀರ್ಥರು 'ಸನ್ನ್ಯಾಯರತ್ನಾವಲೀ' ಎಂಬ ಗ್ರಂಥವನ್ನು ಬರೆದಿದ್ದಾರೆ.
                ಸೂತ್ರಪ್ರಸ್ಥಾನದಲ್ಲಿ ಶ್ರೀಮದಾಚಾರ್ಯರ ನಾಲ್ಕು ಗ್ರಂಥಗಳಲ್ಲಿ ಮೂರು ಗ್ರಂಥಗಳಿಗೆ ಮಹತ್ವಪೂರ್ಣವಾದ ಟೀಕೆ ಬರೆದವರು ಶ್ರೀಮಜ್ಜಯತೀರ್ಥ ಗುರುಸಾರ್ವಭೌಮರು   (ಶ್ರೀಮಟ್ಟೀಕಾಕೃತ್ಪಾದರು). ಶ್ರೀಮಜ್ಜಯತೀರ್ಥರು ಬರೆದ ಟೀಕಾಗ್ರಂಥಗಳಲ್ಲಿ ಶ್ರೀಮನ್ಯಾಯಸುಧಾ ಅವರ ಮೇರುಕೃತಿ. ಈ ಶ್ರೀಮನ್ಯಾಯಸುಧೆಯು ಶ್ರೀಮದಾಚಾರ್ಯರ ಅನುವ್ಯಾಖ್ಯಾನಕ್ಕೆ ಟೀಕಾ ರೂಪದಲ್ಲಿ ಬರೆಯಲ್ಪಟ್ಟಿರುವ ಗ್ರಂಥ. ಮಾಧ್ವವಾಂಗ್ಮಯದಲ್ಲೇ ಎತ್ತರಸ್ಥಾನದಲ್ಲಿ ಪೂಜೆಗೊಳ್ಳುವ  ಗ್ರಂಥ. ಆಚಾರ್ಯರ ನಿಜವಾದ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳುವ ಗ್ರಂಥ. ಜ್ಞಾನಿಗಳು ಅಧ್ಯಯನ-ಅಧ್ಯಾಪನ ನಡೆಸುವದಕ್ಕಾಗಿ ಜೀವನವನ್ನೇ ತೇಯ್ದಗ್ರಂಥ ಶ್ರೀಮನ್ಯಾಯಸುಧಾ.
ಪ್ರಸಕ್ತ ಮಾಧ್ವವಾಂಗ್ಮಯದಲ್ಲಿ ಶ್ರೀಮನ್ಯಾಯಸುಧೆಗೆ  ಹೆಚ್ಚು ಟಿಪ್ಪಣಿಗಳು ಬರೆಯಲ್ಪಟ್ಟಿವೆ. ಇಂತಹ ಅಪೂರ್ವಕೃತಿಗೆ ಇಷ್ಟೊಂದು ಮಹತ್ವವಿದ್ದುದರಿಂದಲೇ ಶ್ರೀಮನ್ಯಾಯಸುಧಾ ಪಾಠ-ಪ್ರವಚನ-ಅನುವಾದ- ಮಂಗಳ ಎಲ್ಲವೂ ಸಜ್ಜನರಿಗೆ ಮಹಾ ಉತ್ಸವವೇ.
              ಮಧ್ವವಾಂಗ್ಮಯದ  ವಿಶಿಷ್ಟಕೃತಿಯಾದ ಶ್ರೀಮನ್ಯಾಯಸುಧೆಯ ಪಾಠ ಪ್ರವಚನವನ್ನು ಶ್ರೀಮಜ್ಜಯತೀರ್ಥರ ನಂತರ ಅವರ ಶಿಷ್ಯರಾದ ಶ್ರೀವಿದ್ಯಾಧಿರಾಜತೀರ್ಥರು ಹಾಗು ಅವರ ಪರಂಪರೆಯೆಯಲ್ಲಿ ಬಂದ ಶ್ರೀವಾಗೀಶತೀರ್ಥರು, ಶ್ರೀಕವೀಂದ್ರ ತೀರ್ಥರು, ಶ್ರೀರಾಮಚಂದ್ರ ತೀರ್ಥರು, ಶ್ರೀವಿಬುಧೇ೦ದ್ರ ತೀರ್ಥರು ವಿಶೇಷವಾಗಿ ನಡೆಸಿಕೊಂಡು ಬಂದು ಶ್ರೀಹರಿವಾಯು ಗುರುಗಳ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.
               ನಂತರ ಮಾಧ್ವವಾಂಗ್ಮಯದಲ್ಲಿ ವಿಶೇಷವಾದ ಛಾಪನ್ನು ಮೂಡಿಸಿದ ಕೀರ್ತಿ ಶ್ರೀರಾಮಚಂದ್ರ ತೀರ್ಥರ ಕರಕಮಲ ಸಂಜಾತರಾದ ಶ್ರೀವಿಬುಧೇ೦ದ್ರ ತೀರ್ಥರಿಗೆ ಸಲ್ಲುತ್ತದೆ. ಅವರ ಚರಮ ಶ್ಲೋಕವೇ ಹೇಳುವಂತೆ ಕೆರಳದಿಂದ ಹಿಮಾಲಯದಪರ್ಯಂತ ಅದ್ವೈತ-ಶೈವವಾದಿಗಳನ್ನು ಗುರುಗಳ ಅನುಗ್ರಹದಿಂದ ನಿರಾಕರಿಸಿ, ಅನೇಕ ಜಯಪತ್ರಿಕೆಗಳನ್ನು ಪಡೆದು, ಅವೆಲ್ಲವನ್ನು ತಿರುಪತಿಯ ಸನ್ನಿಧಾನದಲ್ಲಿ ಭಗವಂತನಿಗೆ ಸಮರ್ಪಿಸಿದ ಕೀರ್ತಿ ಅವರದ್ದು. ಇವರ ಶ್ರೀಮನ್ಯಾಯಸುಧಾಗ್ರಂಥದಲ್ಲಿನ ನೈಪುಣ್ಯಕ್ಕೆಇವರ ಹತ್ತಿರ ಅಧ್ಯಯನ ಮಾಡಿದ ಮಹಾನುಭಾವರಾದ ದೃವಾಂಶಸಂಭೂತರಾದ ಶ್ರೀಪಾದರಾಜರೇ ಸಾಕ್ಷಿ. ಶ್ರೀಮನ್ಯಾಯಸುಧಾ ಗ್ರಂಥಕ್ಕೆ ಪ್ರಪ್ರಥಮ ಟಿಪ್ಪಣಿ 'ಬರೆದು ಮಹದುಪಕಾರ ಮಾಡಿದ ಕೀರ್ತಿ ಶ್ರೀವಿಬುಧೇ೦ದ್ರರ ವಿದ್ಯಾಶಿಷ್ಯರಾದ ಶ್ರೀಪಾದರಾಜರಿಗೆ ಸಲ್ಲುತ್ತದೆ. ಇದು ಶ್ರೀವಿಭುಧೇ೦ದ್ರ ತೀರ್ಥರ ವಿದ್ಯಾಪರಂಪರೆಯ ಕೊಡುಗೆ. ಶ್ರೀಪಾದರಾಜರ ಮಹದುಪಕಾರ.
                 ಕೇರಳದಿಂದ ಹಿಮಾಚಲಪರ್ಯಂತ ಸತ್ಸಿದ್ಧಾಂತವನ್ನು ಪ್ರತಿಷ್ಠಾಪಿಸಿ ವೇದಾಂತಸಾಮ್ರಾಜ್ಯವನ್ನು ಅನೇಕ ವರ್ಷಗಳ ಕಾಲ ಆಳಿದ ಮಾಹಾನುಭಾವರಾದ ಶ್ರೀವಿಬುಧೆಂದ್ರ ತೀರ್ಥರ ನಂತರ ಅವರ ಕರಕಮಲ ಸಂಜಾತರಾದ ಶ್ರೀಜಿತಾಮಿತ್ರ ತೀರ್ಥರು ವಿಶೇಷ ತಪಸ್ಸನ್ನಾಚಿರಿಸುತ್ತ ಶ್ರೀಮದಾಚಾರ್ಯರ ಸಿದ್ಧಾಂತವನ್ನು ಪ್ರಚಾರಮಾಡಿ ವಿಶೇಷವಾದ ಸೇವೆಯನ್ನು ಮಾಡಿದರು. ಶ್ರೀವಿಬುಧೇಂದ್ರ ತೀರ್ಥರ ವಿದ್ಯಾಶಿಷ್ಯರಾದ ಶ್ರೀಪಾದರಾಜರು, ಶ್ರೀಜಿತಾಮಿತ್ರತೀರ್ಥರ ಮೇಲಿನ ಕೀರ್ತನೆಯಲ್ಲಿ ಶ್ರೀಜಿತಾಮಿತ್ರ ತೀರ್ಥರನ್ನು "ಸೂತ್ರಪಾಠ ಪಠಿಸುವ ಸುಗುಣ ಜಿತಾಮಿತ್ರ" " ಅಗಣಿತ ಮಹಿಮ"  ಇತ್ಯಾದಿಯಾಗಿ ಸ್ತುತಿಸಿದ್ದಾರೆ. ಇದಲ್ಲದೆ ಇವರ ಗ್ರಂಥರಚನಾ-ಪಾಠಡಾ ಬಗ್ಗೆ ಹೇಳುವಾಗ "ಮಧ್ವಶಾಸ್ತ್ರದ ಗ್ರಂಥಸಾರದ ಪದ್ಧತಿ ತಿಳಿದಂಥ, ಅದ್ವೈತ ಪಂಥ ಮುರಿದು ಮತ ಉದ್ಧರಿಸಿದಂಥ" ಎಂದು ಶ್ರೀಜಿತಾಮಿತ್ರ ತೀರ್ಥರು ಮಾಡಿದ ಸ್ವಮತಸ್ಥಾಪನಾ ಕಾರ್ಯವನ್ನು ವರ್ಣಿಸಿದ್ದಾರೆ. ಇವರ ಗ್ರಂಥರಚನಾ-ಪಾಠನಾ ಸಾಮರ್ಥ್ಯ ಶ್ರೀಪಾದರಾಯರು ವರ್ಣಿಸುವಾಗ ಅದರ  ಮಹತ್ವ ನಮಗೆ ತಿಳಿದು ಬರುತ್ತದೆ.
               ಇವರ ಶಿಷ್ಯರಾದ ಶ್ರೀರಘುನಂದನ ತೀರ್ಥರು ಮಧ್ವಸಿದ್ಧಾಂತ ಸ್ಥಾಪನೆ ಮಾಡಿದ ವಿಚಾರ ಕೆಲ ಉಲ್ಲೇಖಗಳಿಂದ ತಿಳಿದು ಬರುತ್ತದೆ. ಶ್ರೀ ರಘುನಂದನ ತೀರ್ಥರ ಕಾರಕಮಲಸಂಜಾತರಾದ ಶ್ರೀ ಸುರೇಂದ್ರ ತೀರ್ಥರು ಅನಶನವೃತದಿಂದ ಭಾರತವನ್ನು ಮೂರುಬಾರಿ ಸಂಚಾರ ಮಾಡಿದ ಮಹಾನುಭಾವರು. ಇವರು ಟಿಪ್ಪಣಿಗಳನ್ನು ರಚಿಸಿ ವಿದ್ವತ್ಪ್ರಪಂಚದಲ್ಲಿ ಮಾನ್ಯರಾಗಿದ್ದ ತಪಸ್ವಿಗಳು. ಇವರೂ  ಶ್ರೀಮನ್ಯಾಯಸುಧೆಗೆ ಟಿಪ್ಪಣಿಗಳನ್ನು ಬರೆದು ಸುಧಾಗ್ರಂಥದ ಪ್ರಚಾರ ಮಾಡಿದ್ದಾರೆ.
               ಚತುಷ್ಷಷ್ಟಿ ವಿದ್ಯಾಪ್ರವೀಣರಾದ, ಚತುರಧಿಕ ಶತ ಗ್ರಂಥರತ್ನಪ್ರಣಿತರಾದ ಶ್ರೀಸುರೇಂದ್ರವೃತಿವರತನಯರಾದ, ಶ್ರೀವ್ಯಾಸರಾಯರ ವಿದ್ಯಾಶಿಷ್ಯರಾದ ಶ್ರೀವಿಜಯೀ೦ದ್ರ ತೀರ್ಥರು ಶ್ರೀಮನ್ಯಾಯಸುಧಾಗ್ರಂಥಕ್ಕೆ ಶ್ರೀಮನ್ಯಾಯಸುಧಾಬಿಂದು ಎಂಬ  ಟಿಪ್ಪಣಿ ಬರೆದು ತಮ್ಮದೇ ಆದ ಕೊಡುಗೆಯನ್ನ ಟಿಪ್ಪಣಿಗಳ ಪ್ರಪಂಚಕ್ಕೆ ನೀಡಿದ್ದಾರೆ.
                ಇವರ ಶಿಷ್ಯರಾದ ಮಹಾತಪಸ್ವಿಗಳಾದ ಶ್ರೀಸುಧೀಂದ್ರ ತೀರ್ಥರು ಶ್ರೀಮನ್ಯಾಯಸುಧಾಗ್ರಂಥದ ಪಾಠ ಪ್ರವಚನಗಳಲ್ಲಿ ವಿಶೇಷ ಆಸಕ್ತಿ ಇರಿಸಿಕೊಂಡು ಭಗವಂತನ ಕೃಪೆಗೆ ಪಾತ್ರರಾದವರು. ಇವರ ಮಹಿಮೆಯನ್ನು,  ವಾಗ್ದೇವಿಯು "ಶ್ರೀಸುಧೀಂದ್ರ ತೀರ್ಥರಲ್ಲಿ ನಾನು ನೆಲೆಸಿದ್ದೇನೆ" ಎಂದು ರಾಯರಿಗೆ ಆಶ್ರಮ ತೆಗೆದುಕೊಳ್ಳುವಂತೆ ಮನವೊಲೈಕೆಗೆ ಬಂದಾಗ ಹೇಳಿದ್ದನ್ನು ನೋಡಿ ತಿಳಿದುಕೊಳ್ಳಬಹುದು. ಶ್ರೀರಾಘವೇಂದ್ರ ತೀರ್ಥರಂತಹ ವಿದ್ವನ್ಮೂರ್ಧನ್ಯರನ್ನು ತಯಾರು ಮಾಡಿ, ಜಗದ್ಗುರು ಶ್ರೀಮದಾಚಾರ್ಯರ ಪೀಠದ ಮೇಲೆ ಕುಳ್ಳರಿಸಿದ ಮಹಾನ್ ಕೀರ್ತಿ ಶ್ರೀಸುಧೀಂದ್ರರದ್ದು. ಅಂತಹ ಮಹದುಪಕಾರಕ್ಕೆ ಇಡೀ ಮಾಧ್ವ ಸಮಾಜ ಎಂದೆಂದಿಗೂ  ಅವರ ಋಣ ತೀರಿಸಲು ಸಾಧ್ಯವಿಲ್ಲಾ. ಇವರು ಶ್ರೀಮನ್ಯಾಯಸುಧಾ ಗ್ರಂಥಕ್ಕೆ ಟಿಪ್ಪಣಿ ಬರೆದಿದ್ದಾರೆ ಎಂದು ಇತಿಹಾಸದಿಂದ ತಿಳಿದು ಬರುತ್ತದೆ.

Wednesday, 29 July 2015

ಅಭಿಪ್ರಾಯ :



ಅಭಿಪ್ರಾಯ :
ಭಕ್ತಾನಾಂ  ಮಾನಸಾಂಭೋಜ.... ಪುಸ್ತಕಗಳ ಲೋಕದಲ್ಲಿ ವಿಶಿಷ್ಟ ಛಾಪು ಮುಡಿಸಿದ ಪುಸ್ತಕ.. ಎರೆಡು ಸಂಪುಟಗಳು.. ಪುಸ್ತಕ ಕೊಂಡಾಕ್ಷಣ ದೇವರ ಮುಂದೆ ಇಟ್ಟು ಆ ಭಗವಂತನಲ್ಲಿ , ವಾಯುದೇವರಲ್ಲಿ , ಶ್ರೀವಿಜಯೀಂದ್ರ-ರಾಘವೇಂದ್ರಗುರುಸಾರ್ವಭೌಮರಲ್ಲಿ  ಜ್ಞಾನ ವೃದ್ಧಿಗಾಗಿ ಕೇಳಿಕೊಂಡೆ.. ನಂತರ ಎರೆಡು ಸಂಪುಟಗಳ ಪರಿವಿಡಿಯತ್ತ ಗಮನ ಹರಿಸಿದಾಗ ಅದ್ಭುತ , ಅಪೂರ್ವ, ಅತ್ಯುತ್ತಮ ವಿಷಯಗಳ ಬಗ್ಗೆ ಇರುವ ಲೇಖನಗಳ ಸರಮಾಲೆಯನ್ನು ನೋಡಿ ಸಂತೋಷವಾಯಿತು.. ವಿಷಯಾನುಕ್ರಮಣಿಕಾ ಕುತೂಹಲ ಹುಟ್ಟಿಸುವಂಥದ್ದು.. " ಶ್ರೀ ವಿಜಯೀಂದ್ರ ತೀರ್ಥ ಗುರುಸಾರ್ವಭೌಮ"ರ ಬಗ್ಗೆ ವಿಶೇಷ ಕೈಪಿಡಿಯಂತೆ ಇದೆ ಈ ಪುಸ್ತಕ.. ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು .. ಹೇಗೆ ರಾಜಾ ಗುರುರಾಜಾಚಾರ್ಯರ "ಅಜಯ್ಯ ವಿಜಯೀಂದ್ರರು " ಅವರ ಪುಣ್ಯತಮ ಚರಿತ್ರೆಗೆ ಹಿಡಿದ ಕೈಗನ್ನಡಿ ಯಾಗಿದೆಯೋ , ಹಾಗೆ " ಭಕ್ತಾನಾಂ ಮಾನಸಾಂಭೋಜ " ಎಂಬೀ ಪುಸ್ತಕವು ಅವರ ಗ್ರಂಥಗಳ ಅದ್ಭುತ ಜಗತ್ತಿಗೆ , ಅವರ ಸ್ವರೂಪಕ್ಕೆ ಹಿಡಿದ ಕೈಗನ್ನಡಿ ಎನಿಸಿದೆ.. "ಅಜಯ್ಯ ವಿಜಯೀಂದ್ರರು " ಶ್ರೀಮದ್ವಿಜಯೀಂದ್ರ ತೀರ್ಥರ ಕಾಲಕ್ಕೆ ನಮ್ಮನ್ನು ಕರೆದುಕೊಂಡು ಹೋಗಿ , ಆ 'ವಿಜಯೀಂದ್ರ ವಿಜಯದ' ಆ ದಿನಗಳಲ್ಲಿ ನಮ್ಮನ್ನು ತೇಲಿಬಿಡುವದೋ , ಅದೇ ರೀತಿ ನಾಡಿನ ಅನೇಕ ಜನ ವಿದ್ವಾಂಸರುಗಳು ತಮ್ಮ ಜ್ಞಾನವನ್ನು ಒರೆಗಲ್ಲಿಗೆ ಹಚ್ಚಿ ರೂಪು ಕೊಟ್ಟ "ಭಕ್ತಾನಾಂ ಮಾನಸಾಂಭೋಜ" ಶ್ರೀಮದ್ವಿಜಯೀಂದ್ರ ಶ್ರೀಮಚ್ಚರಣರ ಗ್ರಂಥಸಾಗರದಲ್ಲಿ ಆಸಕ್ತರಾಗುವಂತೆ ನಮ್ಮಂತಹ ಸಾಮಾನ್ಯ ಜನರಿಗೂ ಪ್ರೇರೇಪಿಸುವದರಲ್ಲಿ ಸಂಶಯವೇ ಇಲ್ಲ... ನಮ್ಮಂತಹ ಸಾಮಾನ್ಯ ಜನಾರಾ ಅಭಿರುಚಿಗೆ ತಕ್ಕಂತೆ ಚೊಕ್ಕದಾದ ಪುಸ್ತಕಗಳನ್ನು ಪ್ರಕಟಿಸುತ್ತಿರುವ , ನಡೆದಾಡುವ ರಾಯರು , ಮಂತ್ರಾಲಯ ಮಠಾಧೀಶರಾದ ಶ್ರಿಮತ್ಸುಶಮೀಂದ್ರ ತೀರ್ಥರ ಅನುಗ್ರಹಬಲದಿಂದ ಇರುವ " ಶ್ರೀ ಸುಶಮೀಂದ್ರ ಸೇವಾ ಪ್ರತಿಷ್ಠಾನ"ಕ್ಕೆ ನಾನು ಚಿರಋಣಿ.. ಇದರ ಬೆನ್ನುಲುಬಾಗಿ ಇದ್ದ , ಈ ಯೋಜನೆಯ ಮುಖ್ಯ ಕಾರಣರಾದ , ಪುಸ್ತಕ ಪ್ರಕಟಣೆಯಲ್ಲಿ ಎತ್ತಿದ ಕೈ ಇದ್ದ ಶ್ರೀಪಾದಪುತ್ರ ಶ್ರೀ ರಾಜ ಎಸ್ ರಾಜಗೋಪಾಲಾಚಾರ್ಯರು ಇರಬೇಕಿತ್ತು ಈಗ.. ಈ ಗ್ರಂಥಕ್ಕಾಗಿ ಹಾಗು ಪ್ರತಿಷ್ಠಾನದ ಪರವಾಗಿ ದುಡಿದ ಎಲ್ಲ ಸಜ್ಜನರಿಗೂ ನಾವು ಅಭಿನಂದನೆ ಸಲ್ಲಿಸಲೇ ಬೇಕು.. ಇದರಿಂದ " ಶ್ರೀ ಸುಶಮೀಂದ್ರ ಸೇವಾ ಪ್ರತಿಷ್ಠಾನ"ದ ಪುಸ್ತಕಗಳನ್ನು ಕೊಳ್ಳುವ ಒದಗನಿಗೆ ಯಾವುದೇ ನಿರಾಶೆಯಾಗುವದಿಲ್ಲ ಎನ್ನುವದನ್ನ ಪ್ರತಿಷ್ಠಾನ ಸಬೀತು ಪಡಿಸಿದೆ.. ಈ ಗ್ರಂಥದ ನಿರ್ಮಾಣಕ್ಕೆ ಸಂಪೂರ್ಣ ಅನುಗ್ರಹ ಮಾಡಿ ಫಲ ಮಂತ್ರಾಕ್ಷತೆ ಇತ್ತ ಶ್ರೀ ೧೦೦೮ ಶ್ರೀಸುಬುಧೇಂದ್ರ ತೀರ್ಥರಿಗೂ ನಮಸ್ಕಾರಗಳು.

Monday, 18 August 2014

ಶ್ರೀ ವ್ಯಾಸತತ್ವಜ್ಞ ತೀರ್ಥರು

 ಶ್ರೀ ವ್ಯಾಸತತ್ವಜ್ಞ ತೀರ್ಥ ಗುರುಭ್ಯೋ ನಮಃ
ಪ್ರಕಟೀಕೃತಟೀಕೋಕ್ತಿರ್ಮರ್ಕಟೀಕೃತಮಾಯಿರಾಟ್|
ಚಕೃತಾವ್ಯಾಸತತ್ವಜ್ಞಮಸ್ಕರೀಂದ್ರಕೃಪಾಮಯಿ||
ಪೂರ್ವಾಶ್ರಮ ನಾಮ -
 ಐಜಿ ವೆಂಕಟರಾಮಾಚಾರ್ಯರು .
 ಗುರುಗಳು -
  ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಶ್ರೀ ಭುವನೇಂದ್ರ ತೀರ್ಥರು
ಶಿಷ್ಯರು -
ಶ್ರೀ ಜಯತೀರ್ಥಚಾರ್ಯರೇ( ಇವರೇ ಮುಂದೆ ಶ್ರೀ ವಿಷ್ಣುತೀರ್ಥರೆಂದು ಖ್ಯಾತರಾಗಿ , ಮಾದಿನೂರಿನಲ್ಲಿ ನೆಲೆಸಿರುವರು. ) ಮೊದಲಾದ ೩೦೦ ಕ್ಕೂ ಹೆಚ್ಚು ಜನ ಶಿಷ್ಯರು.
ಗ್ರಂಥಗಳು -
* ಮಾನಸಸ್ಮ್ರುತಿ ( ಉಪಾಸನಾಭಾಗ )
* ಸಪ್ತಮಸ್ಕಂದ ಭಾಗವತಕ್ಕೆ ಮಂದನಂದಿನಿ  ಎಂಬ ವ್ಯಾಖ್ಯಾನ 
*  ಗಾಯತ್ರಿ ಸಾರ ಸಂಗ್ರಹ
* ಶ್ರೀಮನ್ಯಾಯಸುಧಾ ವ್ಯಾಖ್ಯಾನ
* ಉಭಯಾನೌಚಿತಿ
* ಸುಧಾದ್ಯುಕ್ತಿರಹಸ್ಯ
* ನ್ಯಾಯಮೃತ ಮಕ್ಷಿಕಾವ್ಯಜನ
* ತಾತ್ಪರ್ಯಚಂದ್ರಿಕಾ ಶರದಾಗಮ
*ಅದ್ವೈತ ಕುಟ್ಟನ
* ನ್ಯಾಯದಮನ
* ಕುಲಿಶ
*ಶ್ರೀಮದ್ಬಿಷ್ಣುತತ್ವನಿರ್ಣಯಕ್ಕೆ "ಲಘುಪ್ರಭಾ" ಮತ್ತು " ಗುರುಪ್ರಭಾ" ಎಂಬ ಎರಡು ವ್ಯಾಖ್ಯಾನಗಳು.
*  ಯತಿಪ್ರಣವಕಲ್ಪ ವ್ಯಾಖ್ಯಾನ

ವೃಂದಾವನ ಸ್ಥಳ _ ಮಂತ್ರಾಲಯದ ಹತ್ತಿರದಲ್ಲೆ ಇದೆ . ಗದ್ವಾಲಿ ಪ್ರಾಂತ್ಯದ , ಅಯಿಜ ( ಐಜಿ ) ಪಟ್ಟಣದಿಂದ ಸ್ವಲ್ಪವೇ ದೂರದಲ್ಲಿರುವ ವೇಣಿಸೋಮಪುರ  ಗ್ರಾಮ.

 ವಿಶೇಷತೆಗಳು -
* ಮಧ್ವ ವಾಂಗ್ಮಯದಲ್ಲೇ ಶ್ರೇಷ್ಠ ವ್ಯಾಖ್ಯಾನಕಾರರ ಸಾಲಿನಲ್ಲಿ ನಿಲ್ಲುವವರು.
* ಶ್ರೀ ವಿಷ್ಣುತೀರ್ಥರಂತಹ ಮಹಾಮತಿಗಳನ್ನೂ ಕೊಟ್ಟಿದ್ದು. ಅಲ್ಲದೆ ೩೦೦ ಕ್ಕೂ ಹೆಹ್ಚು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ , ತಿರುಪತಿಯಲ್ಲಿ ಅನೇಕ ಬಾರೆ ಶ್ರೀಮನ್ಯಾಯಸುಧಾ ಮಂಗಳ ಮಾಡಿದ್ದು.
* ವ್ಯಾಸಸಾಹಿತ್ಯದಲ್ಲಿ ಅನೇಕ ಗ್ರಂಥಗಳನ್ನು ಕೊಟ್ಟದ್ದಲ್ಲದೆ , ಶ್ರೀ ಗೋಪಾಲದಾಸರಿಂದ ಅಂಕಿತ ಹಾಕಿಸಿಕೊಂಡು 'ವಾಸುದೇವವಿಠಲ" ಎಂಬ ಅಂಕಿತದಿಂದ ಹರಿದಾಸ ಕೀರ್ತನೆಗಳನ್ನೂ ರಚನೆ ಮಾಡಿ ಹರಿದಾಸಧುರೀಣರೆನಿಸಿಕೊಂಡದ್ದು.
*  ವಿದ್ವದ್ಗದ್ವಾಲ್ ಎಂದೇ ಖ್ಯಾತವಾದ ಗದ್ವಾಲಿಯಾ ಅರಸನಿಗೆ ರಾಜಗುರುಗಳಾಗಿ ಇದ್ದದ್ದು. ಅನೇಕ ವಾದಿಗಳನ್ನು ಜಯಿಸಿದ್ದು.
* ಶ್ರೀಸುಧಾಪಾಠ ನಿರತರಾಗಿದ್ದಾಗ ರಾಜನ ಆಸ್ಥಾನಕ್ಕೆ ಬಂದಿದ್ದ ದುರ್ವಾದಿಯನ್ನು ಅಡುಗೆಯವನಿಗೆ ಅನುಗ್ರಹಿಸಿ ಅವನು ಆ ವಾದಿಯನ್ನು ಗೆಲ್ಲುವಂತೆ ಮಾಡಿಸಿದ್ದು.
* ಶ್ರೀವಿಷ್ಣುತೀರ್ಥರಿಗೆ ಅನೇಕ ಜನರು ಶಿಷ್ಯರು ದೊರಕುವಂತೆ ಮಾಡಿ ಅನುಗ್ರಹಿಸಿದ್ದು.

ಪವಾಡಗಳು-
* ಶ್ರೀ ಮಂತ್ರಾಲಯ ಮಠದ ಶ್ರೀ ಭುವನೇಂದ್ರ ತೀರ್ಥರಿಂದ ಸನ್ಯಾಸ ಪಡೆದು ಶ್ರೀ ವ್ಯಾಸತತ್ವಜ್ಞ ತೀರ್ಥರಾದದ್ದು.
* ನೀರಿನವನಿಂದ ಶಾಸ್ತ್ರ ಹೇಳಿಸಿದ್ದು
* ಮುದುಮಾಲಿ ದೇಸಾಯಿಯ ಉದರ ಶೋಲೆ ಪರಿಹರಿಸಿದ್ದು
* ತಿರುಪತಿಯಲ್ಲಿ ರಥ ಎಳೆಯುವಾಗ ತೋರಿದ ಮಹಾ ಮಹಿಮೆ
* ತಮ್ಮ ಪಾದುಕೆಗಳನ್ನು ಸೇವಿಸಿದ ವಿಷ್ಣುತೀರ್ಥರಿಗೆ ಭವಿಷ್ಯದಲ್ಲಿ ಒಳಿತಾಗುವಂತೆ ಅನುಗ್ರಹಿಸಿದ್ದು.
*  ತಮ್ಮ ಮಠದ ಬಳಿ ನದ್ಯಭಿಮಾನಿ ದೇವತೆಯನ್ನು ಪ್ರಾರ್ಥಿಸಿ , ದಂಡದಿಂದ ಗೆರೆ ಹಾಕಿ ತುಂಗಬಧ್ರೆಯನ್ನೆ ತಮ್ಮ ಬಳಿ ಕರೆಸಿಕೊಂಡಿದ್ದು .
* ಆರಣಿ ಸಂಸ್ಥಾನದಲ್ಲಿ ತಮ್ಮ ನಾಲ್ಕು ಜನ ಶಿಷ್ಯರನ್ನು ಗೆಲ್ಲುವಂತೆ ಮಾಡಿದ್ದು.
* ಬ್ರಹ್ಮರಾಕ್ಷಸನಿಗೆ ಜನ್ಮ ನಿವಾರಣ ಮಾಡಿದ್ದು.
* ಗದ್ವಾಲ್ ರಾಜನ ಆಪತ್ತು ಪರಿಹರಿಸಿದ್ದು.
* ಐಜಿ ಹಳ್ಳವನ್ನು ಗರುಡಾ ನದಿಯನ್ನಾಗಿಸಿದ್ದು
* ಹಂಪೆಯಲ್ಲಿ ವಿರೂಪಾಕ್ಷನ ರಥಕ್ಕೆ ಹತ್ತಿದ ಬೆಂಕಿಯನ್ನು ವೇಣಿಸೋಮಪುರ ದಿಂದಲೇ ನಂದಿಸಿದ್ದು.
* ಗೋವುಗಳಸಹಿತನಾದ ಶ್ರೀ ಕೃಷ್ಣ ಪರಮಾತ್ಮನ ದರ್ಶಿಸಿದ್ದು.
* ಪೂನ ನಗರದ ವಿದ್ವತ್ಸಭೆಯಲ್ಲಿ ವಾದಿಗಳನ್ನು ಜಯಿಸಿದ್ದು.
* ಮಾರಿಕ ಉಪದ್ರವ ಪರಿಹರಿಸಿದ್ದು.
* ಶ್ರೀಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧಿಪತಿ ಶ್ರೀ ವಿಬುಧೇಂದ್ರ ತೀರ್ಥರಿಗೆ ಒಲಿದು ಬಂದ ಶ್ರೀ ನರಸಿಂಹದೇವರನ್ನು ಅರ್ಚಿಸಿದ್ದು.
* ವರ ರೌದ್ರಿನಾಮಸಂವತ್ಸರ ಶ್ರಾವಣ , ಪರಪಕ್ಷ  ಅಷ್ಟಮಿ  ಭೌಮವಾರ , ಭರಣೀ ನಕ್ಷತ್ರ ಪ್ರಾತಃ ಕಾಲದಲ್ಲಿ ಹರಿಧ್ಯಾನ ತತ್ಪರರಾದರು.
* ಇಂದಿಗೂ ನೆನೆದ ಭಕ್ತರನ್ನು , ಶ್ರೀ ಮಂತ್ರಾಲಯ ಪ್ರಭುಗಳಂತೆ ಜ್ಞಾನ , ಭಕ್ತಿ , ವೈರಾಗ್ಯಾದಿ ಗಳನ್ನೂ ಕೊಟ್ಟು ಅನುಗ್ರಹಿಸುತ್ತಿರುವ ಮಹಾ ಮಹಿಮರು..
ಮೂಲವೃಂದಾವನ

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...