Thursday, 20 March 2014


ಯಾಕೆ ಮೂಕನಾದ್ಯೋ ಗುರುವೇ ನೀ ??  ಸುದ್ದಿ ತಿಳಿದೊಡನೆಯೇ ದುಃಖದಲ್ಲಿ ಇದನ್ನು ಬರೆಯುತ್ತಿದ್ದೇನೆ. ಹೇಳಿಕೊಳ್ಳ ಬೇಕು ಎನಿಸಿದ್ದನ್ನ ಹೇಳಿಕೊಳ್ಳುತ್ತಿದ್ದೇನೆ.   ಶ್ರೀರಾಘವೇಂದ್ರ ತೀರ್ಥ ಕರುಣಾಪಾತ್ರರೆ ಶ್ರೀ ಧೀರೇಂದ್ರ ತೀರ್ಥ ಸಂಪ್ರದಾಯ ರಕ್ಷಕರೇ ಶ್ರೀ ಸುಶೀಲೆಂದ್ರ ತೀರ್ಥ ಕೃಪಾ ಪಾತ್ರರೆ.. ಶ್ರೀ ಸುಯಮೀಂದ್ರ ತೀರ್ಥ ಕೃಪಾಪೋಷಿತರೆ.. ಶ್ರೀ ಸುಶಮೀಂದ್ರ ತೀರ್ಥ ಕರಕಮಲ ಸಂಜಾತರೇ , ನವಮಂತ್ರಾಲಯದ ಶಿಲ್ಪಿಗಳೇ .. ಶ್ರೀ ಸುಬುಧೇಂದ್ರ ತೀರ್ಥ ಸ್ವರೂಪೋದ್ಧಾರಕರೇ .. ಸ್ವಾಮಿ ನಿಮ್ಮಲ್ಲಿ ಅದೆಷ್ಟು ಸದ್ಗುಣಗಳು ರಾರಾಜಿಸುವವು !! ಶ್ರೀ ಸುಶಮೀಂದ್ರ ತೀರ್ಥರಿಂದ ಆಶ್ರಮ ಪಡೆದು ಗುರುಗಳ ಸೇವೆಯನ್ನು ನಿರಂತರ ಮಾಡಿದಿರಿ .. ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿಯೇ ಚಾಚೂ ತಪ್ಪದೆ ನಡೆದಿರೀ. ಸುಶಮೀಂದ್ರ ಗುರುಗಳು ಕಾಲವಾದ ಕಠಿಣ ಪರಿಸ್ಥಿತಿಯಾ ಬೆನ್ನಲ್ಲೇ ಮಂತ್ರಾಲಯ ಪ್ರವಾಹಕ್ಕೆ ಸಿಲುಕಿಕೊಂಡಿತ್ತು.. ಆದರೆ ಪ್ರವಾಹ ನಿಂತ ಕ್ಷಣದಿಂದಲೇ ಮಂತ್ರಾಲಯದ ಪುನರ್ ನಿರ್ಮಾಣ ಕಾರ್ಯಕ್ಕೆ ರಾಯರೆದುರು ಸಂಕಲ್ಪ ಮಾಡಿ ಧುಮುಕಿದಿರಿ.. ಯಾವುದೇ ಕ್ಷಣದಲ್ಲೂ ಎದೆ ಗುಂದಲೇ ಇಲ್ಲ . ನಿಮ್ಮ ಪೂರ್ವಾಶ್ರಮ ಪುತ್ರರಾದ ಶ್ರೀ ಸುಯಮೀಂದ್ರ ಆಚಾರ್ಯರಲ್ಲಿ ನಿಂತು ಎಲ್ಲ ಕಾರ್ಯವನ್ನು ಮಾಡಿಸಿದಿರಿ.. ಸಮಸ್ತ ಗುರುರಾಜರ ಭಕ್ತರನ್ನು ಗುರುರಾಜರೆಡೆಗೆ ಕೊರೆದೊಯ್ದಿರಿ.. ಇಂದು ಅನೇಕ ಪೀಠಾಧಿಪತಿಗಳು , ಅನೇಕ ಸಜ್ಜನ ಭಕ್ತರು ರಾಯರ ಸನ್ನಿಧಿಯನ್ನು ಇಂದ್ರನ ಅಮರಾವತಿಗೆ ಹೊಲಿಸುತ್ತಿದ್ದಾರೆ ಅಂದರೆ ಅದಕ್ಕೆ ಕಾರಣ ತಾವಲ್ಲದೆ ಇನ್ನಾರು ಸ್ವಾಮಿ ? ಸುಶಮೀಂದ್ರ ತೀರ್ಥರ ಪ್ರಥಮ ಮಹಾಸಾಮಾರಧನೆ ಬರುವಷ್ಟರಲ್ಲೇ ಅನೇಕ ಯೋಜನೆಗಳು ಸಿದ್ಧಗೊಂದಿದ್ದವು. ಶ್ರೀಮಠವನ್ನ ನಂಬಲೂ ಅಸಾಧ್ಯ ಎಂಬ ರೀತಿಯಲ್ಲಿ ಪುನರ್ ನಿರ್ಮಾಣ ಮಾಡಿದ್ದು ಮೂಲರಾಮನ ಕೃಪೆ , ರಾಯರ ಕೃಪೆ ನಿಮ್ಮ ಮೇಲೆ ಎಷ್ಟಿತ್ತು ಅನ್ನೋದನ್ನ ತೋರಿಸುತ್ತದೆ.. ಸ್ವಾಮಿ ಈ ಸಾಧನೆ ಮಾಡಲು , ಗುರುರಾಜರ ಭಕ್ತರನ್ನು ಗುರುರಾಜರೆಡೆಗೆ ಒಯ್ಯಲು ತಾವು ನೆಚ್ಚಿಕೊಂಡಿದ್ದ ತಪಸ್ಸು ಅಸಾಧಾರಣವೇ !! ದಿನಕ್ಕೆ ಹತ್ತಾರು ಘಂಟೆ ಕೇವಲ ಜಪ-ತಪದಲ್ಲೇ ಇದ್ದು ಯಾವಾಗಲೂ ರಾಯರನ್ನೇ ನೆನೆದ ನಿಮ್ಮ ಕರೆಗೆ ಓ ಕೊಟ್ಟೇ ರಾಯರು ಅಷ್ಟು ಭರದಲ್ಲಿ , ಸುಸಜ್ಜಿತವಾಗಿ ತಮ್ಮ ಕ್ಷೇತ್ರವನ್ನು ಪುನರ್ನಿರ್ಮಾಣ ಮಾಡಿಸಿಕೊಂಡಿದ್ದಾರೆ.
                         ಶ್ರೀ ಧೀರಸಿಂಹರ ಸನ್ನಿಧಿಯಲ್ಲಿ ದೇವೇಂದ್ರನನ್ನೇ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಮೆರೆಸಿದಿರಿ. ನಿಮ್ಮ ಆ  ಸುಧಾಮಂಗಳವನ್ನು ಪೇಜಾವರ ಶ್ರೀಗಳು ಸಹ ಬಹಳವಾಗಿ ಮೆಚ್ಚಿಕೊಂಡಿದ್ದರು. ಅದಲ್ಲದೆ ತಾವು ಮಂತ್ರಾಲಯ ಕ್ಷೇತ್ರದಲ್ಲಿ ನಡೆಸಿದ ಮತ್ತೊಂದು ಸುಧಾಮಂಗಲವೂ ಅದ್ಭುತ ರೀತಿಯಲ್ಲಿ ನಡೆದದ್ದು ಇತಿಹಾಸ. ಶ್ರೀ ರಾಯರ ಸೇವೆ ಮಾಡ ರಾಯರ ಪೀಠ ಏರಿದ ನಿಮ್ಮ ಜೀವನ ಸಾರ್ಥಕ ಪ್ರಭು..
                         ಇನ್ನು ಸುಂಕಾಪುರದಲ್ಲಿ ಶ್ರೀಮಠದ ಅಂಗಸಂಸ್ಥೆಯಾದ ಪ್ರಹ್ಲಾದ ಯುವಕ ಮಂಡಳದ ನೇತೃತ್ವದಲ್ಲಿ ನಡೆದ ಸಾಮೂಹಿಕ ಉಪನಯನ ಕಾರ್ಯಕ್ರಮ ಸಂದರ್ಭದಲ್ಲಿ ತೊಂದರೆ ತಂದೊಡ್ಡಲು ತಯಾರಾಗಿ ನಿಂತಿದ್ದ ಮಳೆರಾಯನನ್ನು ಕೇವಲ ತಮ್ಮ ಮಂತ್ರ ಬಲದಿಂದ ನಿಲ್ಲಿಸಿದ್ದು.. ಕೇವಲ ಸುಂಕಾಪುರ ಗ್ರಾಮ ಬಿಟ್ಟು ಉಳಿದ ಸುತ್ತ-ಮುತ್ತಲಿನ ಹಳ್ಳಿಗಳಲ್ಲಿ ಜೋರಾಗಿ ಮಳೆಯಾಗಿ ಅಲ್ಲಿ ಮಾತ್ರ ಆಗದೆ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದಿರಿ.. ಹೀಗೆ ಬೇಕೆಂದಾಗ ಮಳೆಯನ್ನೂ ಬರೆಸಿ , ಬೇಡವಾದಾಗ ಮಳೆಯನ್ನು ನಿಲ್ಲಿಸಿ  ಪವಾಡಗಳನ್ನೂ ತೋರಿಸಿದಿರಿ..
                           ಬಳ್ಳಾರಿಯ  ದಿಗ್ವಿಜಯ ಸಂದರ್ಭದಲ್ಲಿ ಅಲ್ಲಿನ ಭಕ್ತರು ಬರಗಾಲದ ಬಗ್ಗೆ ನಿವೆದಿಸಿದಾಗ ನೀವು  ಶ್ರೀ ರಾಯರಲ್ಲಿ ನಿವೆದಿಸುತ್ತೇವೆ ಎಂದಾಗ ಯಾರಿಗೂ ಏನೂ ತಿಳಿಯದಾಯಿತು. ಆಮೇಲೆ ನೀವು ರಾಯರನ್ನು  ಸಂಪರ್ಕಿಸಿ " ರಾಯರು ಅಭಯ ನೀಡಿದ್ದಾರೆ " ಎಂದು ಘಂಟಾಘೋಷವಾಗಿ ಹೇಳಿ , ಅದರಂತೆ ಆಗಿ ಎಲ್ಲರನ್ನು ಸಂತೋಷ ಗೊಳಿಸಿ.. ನಿಮ್ಮ ವಿನಂತಿಯ ಪ್ರಕಾರ ರಾಯರು ತೋರಿದ ಅದ್ಭುತ ಪವಾಡ.
                        ನೀವು ಪೀಠಾಧಿಪತ್ಯ ವಹಿಸಿಕೊಂಡ ನಂತರದಲ್ಲೇ ನಡೆದ ಜ್ಞಾನಕಾರ್ಯ ನಿಮ್ಮ ಗುರುಗಳನ್ನು ನೆನೆಸುತ್ತವೆ. ವರ್ಷಕ್ಕೆ ಎರೆಡು  ಬಾರೆ ಸಮೀರ ಸಮಯ ಸಂವರ್ಧಿನಿ ಸಭೆಯನ್ನು ತಪ್ಪದೆ ನಡೆಸಿದಿರಿ.. ವಿದ್ವಜ್ಜನರ ಪೋಷಣೆಯಲ್ಲಿ ಸದಾ ರಾಯರ ಮಠ ಸನ್ನದ್ಧ ಎಂದು ತೋರಿಸಿದಿರಿ. ಶ್ರೀರಂಗಂ , ಉಡುಪಿ ಹೀಗೆ ಅನೇಕ ಕಡೆ ನಡೆಸಿದಿರಿ. ಶ್ರೀ ರಾಯರ ಮಠಕ್ಕೆ ಇದ್ದ ವಿದ್ಯಾ ಮಠ ಎಂಬ ಬಿರುದನ್ನು ಸಾರ್ಥಕ ಗೊಳಿಸಿದಿರಿ.. 
                        ಇನ್ನು ನಿಮ್ಮ ಕಾಲದಲ್ಲೇ ಆದ ಸೋದೆ ಮಠದ ಶ್ರೀಗಳಾದ ಪರಮಪುಜ್ಯ ಶ್ರೀ ವಿಶ್ವವಲ್ಲಭ ತೀರ್ಥರ ಸಹಯೋಗದೊಂದಿಗೆ ತಾವೇ ಆಚಾರ್ಯ ಮಧ್ವರ ಕಾರ್ಯಕ್ಷೇತ್ರ ಉಡುಪಿಯಲ್ಲಿ ಏರ್ಪಡಿಸಿದ ಸಮೀರ ಸಮಯ ಸಂವರ್ಧಿನಿ ಸಭೆಯಂತೂ ಎಲ್ಲರ ಮನೆಮಾತಾಗಿದೆ. ನೀವು ನಡೆಸಿದ ಈ ಸಭೆ ಪದ್ಮನಾಭ ತೀರ್ಥರು ಹಾಗು ವಿಷ್ಣು ತೀರ್ಥರ ಕಾಲದಿಂದಲೂ ಇದ್ದ ಉಭಯ ಮಠಗಳ ಸ್ನೇಹಯಾತ್ರೆಯನ್ನು ಮುಂದುವರೆಸಿ ಇನ್ನು ಹೆಚ್ಚಾಗುವಂತೆ ಮಾಡಿ ಶ್ರೀ ವಾದಿರಾಜ-ವಿಜಯೀಂದ್ರ-ರಾಘವೇಂದ್ರ ರಾಯರ ಸೇವೆಯನ್ನು ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾಗಿದ್ದೀರಿ.
                        ಇದರ ಜೊತೆ ಜೊತೆಗೇನೆ ಅನಾರೋಗ್ಯ ವಿದ್ದರೂ ಅನೇಕ ಕಡೆ ಸಂಚರಿಸಿ , ಸಂಪರ್ಕಿಸಲು ಆಗದೇ ಇದ್ದ ಕ್ಷೇತ್ರಗಳ ಶಿಷ್ಯರು ಶ್ರೀಮಠಕ್ಕೆ ಬಂದಾಗ ಅತೀ ಪ್ರೀತಿ ಇಂದ ಅನುಗ್ರಹಿಸಿ ಸನ್ಮಾರ್ಗ ಪ್ರೇರಕರಾಗಿದ್ದಿರಿ..

ಯಾಕೋ ಮೂಕನಾದ್ಯೋ ಗುರುವೇ ನೀ ?? ಸುಯತೀಂದ್ರ ತೀರ್ಥ ಎಂಬ ಯತಿಗಳಲ್ಲಿ ಒಳ್ಳೆಯವರಾದ " ಸುಯತಿ" ಎಂಬ "ಅನರ್ಘ್ಯ ರತ್ನ " ಒಂದು ನಮ್ಮನ್ನಗಿದೆ.. ಶ್ರೀ ಸುಶಮೀಂದ್ರರು ದಯಪಾಲಿಸಿದ ಕಣ್ಣು ನಮಗೆ ಕಾಣದಾಗಿದೆ. ಶ್ರೀ ಸುಭುಧೇಂದ್ರ ತೀರ್ಥರಲ್ಲಿ ಸದಾ ಇದ್ದು ಅವರಿಗ್ಗೋ ಪ್ರೆರಕರಾಗಿ ಶ್ರೀ ಮಠದ ಭವ್ಯ ಪರಂಪರೆಯನ್ನು ಮುಂದೇ " ಪೀಠಾಧಿಪತಿಗಳಾಗಿ" ಬೆಳಗುವಂತೆ ಆಶೀರ್ವದಿಸಿ , ನಮ್ಮನ್ನು ಉದ್ಧರಿಸಬೇಕು ಪ್ರಭು ಅಂತ ಪ್ರಾರ್ಥಿಸುವೆ..                       


No comments:

Post a Comment

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...