Friday, 7 March 2014

"ವರ್ಧಂತಿ ಉತ್ಸವ"

                           ದುರ್ವಾದಿಧ್ವಾಂತರವಯೇ ವೈಷ್ಣವೇಂದೀ ವರೇಂದವೇ ।
                           ಶ್ರೀ ರಾಘವೇಂದ್ರ ಗುರವೇ ನಮೋsಅತ್ಯಂತ ದಯಾಲವೇ ।। 

                            ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ।
                             ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ।।

                            ಮೂಕೋsಪಿ ಯತ್ಪ್ರಸಾದೇನ ಮುಕುಂದ ಶಯನಾಯತೇ 
                             ರಾಜ ರಜಾಯತೇ ರಿಕ್ತೋ ರಾಘವೇಂದ್ರಂ ತಮಾಶ್ರಯೇ ।। 

                             ಶ್ರೀ ಸುಧೀಂದ್ರಾಬ್ಧಿ ಸಂಭೂತಾನ್ ರಾಘವೇಂದ್ರ ಕಲಾನಿಧೀನ್ ।
                             ಸೇವೇ ಸುಜ್ಞಾನ ಸೌಖ್ಯಾರ್ಥಂ ಸಂತಾಪತ್ರಯ ಶಾಂತಯೇ ।। 



            ಕಲಿಯುಗ ಕಲ್ಪವೃಕ್ಷ , ಕಾಮಧೇನು ಎಂದೇ ಜಗದ್ವಿಖ್ಯಾತರಾದವರು ಶ್ರೀ ರಾಘವೇಂದ್ರ ತೀರ್ಥರು. ಇಂತಹ ರಾಘವೇಂದ್ರ ತೀರ್ಥರ ಅಗಮ್ಯ ಮಹಿಮೆಯನ್ನು ಅನೇಕ ಮಹಾನುಭವರು , ಜ್ಞಾನಿ ವರೇಣ್ಯರು ನಿರಂತರ ತಿಳಿಸುತ್ತಾ ಬಂದಿದ್ದಾರೆ. ಶ್ರೀ ರಾಯರ ಬಗ್ಗೆ ಮಾತನಾಡಲು ನನಗಾವ ಯೋಗ್ಯತೆಯೂ ಇಲ್ಲ.. ಆದರೂ ರಾಯರಂತಹ 'ದಯಾಳು"ಗಳು ನನ್ನಂತಹವನಿಂದಲೂ ಮಾಡಲ್ಪಟ್ಟ ಅಲ್ಪ ಸೇವೆಯನ್ನು ಸ್ವೀಕಾರ ಮಾಡುತ್ತಾರೆ. ನನಗೂ ಸಜ್ಞಾನಾದಿ ಸಂಪತ್ತು ಕೊಟ್ಟು , ಮಧ್ವರಾಯರ ಕೃಪೆಗೆ ಪಾತ್ರನನ್ನಾಗಿ ಮಾಡಿಸಲಿ ಎಂದು ಪ್ರರ್ಥಿಸುತ್ತೇನೆ. 

           ಇಂದಿನ ದಿನ ಸುದಿನ, ಇಂದು ಪರಮ ಮಂಗಳಕರ ದಿನ , ಶ್ರೀ ರಾಯರು ಭೂಲೋಕದಲ್ಲಿ ಅವತರಿಸಿದ ಪುಣ್ಯಪ್ರದ ದಿವಸ . ರಾಘವೇಂದ್ರ ಗುರುಗಳ ಪೂರ್ವಾಶ್ರಮ ಹಾಗು ಯತ್ಯಶ್ರಮ ಹಾಗು ಅವರ ವತಾರಗಳ ಬಗ್ಗೆ ಸಕ್ಷಿಪ್ತವಾಗಿ ನನ್ನ ಯೋಗ್ಯತೆಗೆ ಅನುಗುಣವಾಗಿ ಹಂಚಿಕೊಳ್ಳಲು ಇಚ್ಚಿಸುತ್ತೇನೆ. ನನ್ನ ತಪ್ಪನ್ನು ಹಿರಿಯರಾದವರು ಮನ್ನಿಸಿ ಅದು ನನ್ನದೇ ಅದ್ದರಿಂದ ಸಂಕಷ್ಟ ದಿಂದ ಪಾರು ಮಾಡಬೇಕು ಅಂತ ಪ್ರಾರ್ಥಿಸುವೆ , ಸರಿ ಇದ್ದದ್ದು ಏನಾದರೂ ಬರೆದಿದ್ದರೆ ಅದಕ್ಕೆ ನನ್ನಲ್ಲಿ ನಿಂತು ಪ್ರೇರಣೆ ನೀಡಿ ನಿರಂತರ ಅನುಗ್ರಹಿಸಿ ಕರುಣೆ ತೋರಿಸಿದ ರಾಯಾರೇ ಕಾರಣ ಎಂದು ಹೇಳುತ್ತಾ ನನ್ನ ಅಂತರಂಗ ಶುದ್ಧಿಗೋಸ್ಕರ ಹಂಚಿಕೊಳ್ಳುತ್ತೇನೆ .

 "ಗೌತಮ ಗೋತ್ರದ" , "ಅರವತ್ತೊಕ್ಕಲಿನ"  " ಷಾಷ್ಟೀಕ ವಂಶದ" , "ಬೀಗ ಮುದ್ರೆ" ಎಂಬ ಜ್ಯೇಷ್ಥ ಮನೆತನದವರು ಮೂಲತಃ ಕನ್ನಡಿಗರು.  ಇತಿಹಾಸದುದ್ದಕ್ಕೂ ತಮ್ಮ ಪರಾಕ್ರಮ , ಪಾಂಡಿತ್ಯಾದಿ ಗುಣಗಳಿಂದ ಜಗದ್ವಿಖ್ಯಾತವಾದ ಮನೆತನ. ಈ ಮಹಾ ವಂಶದಲ್ಲಿ ಅನೇಕ ಬಹುಮುಖ ಪ್ರತಿಭೆಗಳನ್ನೂ ಕಾಣಬಹುದು. ಎಲ್ಲರೂ ಅನೇಕ ಶಾಸ್ತ್ರಗಳಲ್ಲಿ ವಿಧ್ವಾಂಸರು.  "ಗೌತಮ ಗೋತ್ರ" ಅರ್ಥಾತ್ ಗೌತಮ ಮಹರ್ಷಿಗಳೇ  ಪ್ರವರ್ತಕರಾಗಿದ್ದ ವಂಶ ಗೌತಮ ಗೊತ್ರೋದ್ಭವರದ್ದು. ಈ ವಂಶದಲ್ಲಿ ಅನೇಕರು ಮುಕ್ತಿ ಎಂಬ ಅತ್ಯುತ್ತಮ ಫಲ ಹೊಂದಿದವರು ಇದ್ದಾರೆ , ಇನ್ನು ಕೆಲವರು ಮುಕ್ತಿಗೆ ಯೋಗ್ಯರಾದವರಿದ್ದರೆ , ಇನ್ನು ಹಲವರು ಮುಕ್ತಿಗೆ ಯೋಗ್ಯರಾದರು ಅಲ್ಲಿ ಹೋಗದೆ ನಮ್ಮನ್ನುದ್ಧರಿಸಲು ಬಂದವರಿದ್ದಾರೆ. ಮುನಿ ಗೌತಮರು ಹೇಗೆ ಶ್ರೀ ವೇದವ್ಯಾಸರ ಶಾಸ್ತ್ರ ರಚನೆಗೆ ಕಾರಣರಾದರು , ಶ್ರೀಹರಿಯ ಸಂಕಲ್ಪ ಏನಿತ್ತು ? ಎಲ್ಲರಿಗೂ ತಿಳಿದ ವಿಷಯ. ಅಂತಹ ಗೌತಮ ಗೋತ್ರದಲ್ಲಿ ಜನಿಸಿದವರೇ ಶ್ರೀ ಕೃಷ್ಣಾಚಾರ್ಯರು. 
ಉದ್ಧಾಮ ಪಂಡಿತರು , ವೀಣೆಯಲ್ಲಿ ನುರಿತವರಾದ ಕಾರಣ ವೀಣಾಕೃಷ್ಣಾಚಾರ್ಯರೆಂದೇ ಖ್ಯಾತಿಯನ್ನು ಪಡೆದವರು. ಶ್ರೀಮದಾಚಾರ್ಯರ ಶಾಸ್ತ್ರದಲ್ಲಿ ಪ್ರಾವೀಣ್ಯ ಹೊಂದಿದವರು , ಶ್ರೀನ್ಯಾಯಸುಧಾದಿ ಗ್ರಂಥಗಳಲ್ಲಿ ಜೀವ ಇಟ್ಟವರು .  ಕನ್ನಡ ರಾಜ್ಯ ರಾಮಾ ರಮಣ ಶ್ರೀ ಕೃಷ್ಣದೇವರಾಯನಿಗೆ ವೀಣಾ ಪಾಠ ಹೇಳಿ ಕೊಟ್ಟವರು. ಆಸ್ಥಾನ ವಿದ್ವಾಂಸರು. ಅಂತಹ ಮಹಾ ಪಂಡಿತಶೋರೋಮಣಿಯಾ ಪುತ್ರ ರತ್ನರೇ "ಕನಕಾಚಲಭಟ್ಟರು" . ಹೆಸರಿಗೆ ತಕ್ಕಂತೆ ಅವರದೂ ಬಂಗಾರದ ಬೆಟ್ಟದಂತಹ ವ್ಯಕ್ತಿತ್ವ. ತಂದೆಯಂತೆಯೇ ವಂಶ ಗೌರವ ಉಳಿಸಿಕೊಂಡು ಬೆಳೆಸಿಕೊಂಡು ಹೋದವರು. ವಂಶ ವಿದ್ಯೆಯಾದ ವೀಣೆ ಕಲಿತು ವೀಣಾಕನಕಾಚಲ ಭಟ್ಟರು ಎಂದೇ ಖ್ಯಾತರಾದರು. ಇವರ ಪುತ್ರರೆ  ತಿಮ್ಮಣ್ಣಾಚಾರ್ಯರು . ಇವರೂ ಪೂರ್ವಿಕರಂತೆ ಆಚಾರ್ಯರ ಶಾಸ್ತ್ರದಲ್ಲಿ ಹಾಗು ಕುಲವಿದ್ಯೇ ಯಾದ ವೀಣೆಯಲ್ಲಿ ಪ್ರಾವೀಣ್ಯ ಗಳಿಸಿದರು . ಇವರ ಪುತ್ರರೇ "ಶ್ರೀ ವೆಂಕಟನಥಾಚಾರ್ಯರು" . ಇನ್ನು ಮುಂದಿನದನ್ನು ವಿಶೇಷವಾಗಿ ಏನೂ ಹೇಳಬೇಕಿಲ್ಲ ಕಾರಣ ಇವರೇ ನಮ್ಮ ಶ್ರೀ ಗುರುರಾಯರಾದವರು. ಗುರುಗಳೆಂದರೆ ಮಂಚಾಲೆ ರಾಘಪ್ಪ ಅಂತಲೇ ಖ್ಯಾತಿ ಗಳಿಸಿದ ಕೀರ್ತಿಶಾಲಿಗಳು , ಪ್ರಹ್ಲಾದರಜರು.. ಇವರ ಬಗ್ಗೆಕೆಲ್ದ ಮಾಧ್ವನೇ ಇಲ್ಲ.. ಇವರ ಋಣದಲ್ಲೇ ನಾವೆಲ್ಲ ಬದುಕುತ್ತಿದ್ದೇವೆ.  
            ರಾಯರ ಮೂಲ ರೂಪ ಶಂಕುಕರ್ಣ ಎಂಬ ಕರ್ಮಜ ದೇವತೆ. ಈತನೇ ಪ್ರಹ್ಲಾದರಾಜರಾಗಿ ದೈತ್ಯ ಕುಲದಲ್ಲಿ ಅವತರಿಸಿ ದೈತ್ಯರ ತೀರ್ಥಿಕರಣಕಾಗಿಯೇ ಅವತರಿಸಿದ ಧೀರರು ಅಂತ ನಾವೆಲ್ಲತಿಳಿದಿದ್ದೇವೆ .. ಭಾಗವತ ಮಹಾ ಪುರಾಣ ರಾಯರ ಬಗ್ಗೆ ತಿಲಿಸಲಿಕ್ಕೊಸ್ಕರವೇ ಒಂದು ಸ್ಕಂದ ಮೀಸಲಿಟ್ಟಿದೆ ಅಂದರೆ ರಾಯರು ಎಂತಹ ಅಗಮ್ಯ ಮಹಿಮಾನ್ವಿತರು ?? ನಿತ್ಯ ವಾಯ್ವಾವೇಶ ಯುಕ್ತರು .. ಇವರ ಮೇಲೆ ಶ್ರೀಮದಾಚಾರ್ಯರ , ಟೀಕಾರಾಯರ ಅನುಗ್ರಹಕ್ಕೆ ಮಿತಿ ಉಂಟೇನು  ? 

 ಅಂತಹ ರಾಘವೇಂದ್ರ ಗುರುಗಳು ಹುಟ್ಟಿದ ಪರಮಮಂಗಳಕರ ದಿನವನ್ನು ಇಂದು ನಾವು "ವರ್ಧಂತಿ ಉತ್ಸವ" ಎಂದು ಮಾಡುತ್ತಲಿದ್ದೇವೆ. ನಮ್ಮಂತಹ ಪಾಮರರಿಗೆ ಏನೂ ಗೊತ್ತಿಲ್ಲ , ಆಚಾರ್ಯರ ಶಾಸ್ತ್ರ ತಿಳಿಯಲು ನಮಗೆ ಶಕ್ತಿ ಇಲ್ಲ , ಪರಮಾತ್ಮನ ಸಾಮೀಪ್ಯ ಗಳಿಸುವ ವಿಧಾನ ಗೊತ್ತಿಲ್ಲ . ಚಿಂತೆ ಬೇಡ " ನಾವಿದ್ದೇವೆ" ಅನ್ನುತ್ತಾರೆ ರಾಯರು. ಸನ್ಮಾರ್ಗ ತೋರಿಸುತ್ತೇವೆ ಅನ್ನುತ್ತಾರೆ ರಾಯರು. ಅದಕ್ಕಾಗಿಯೇ ಬಂದಿದ್ದೇವೆ ಅನ್ನುತ್ತಾರೆ ರಾಯರು. ಮಗುವಿನಂತೆ ಮೊದಲು ಹತ್ತಿರ  ಕರೆದು ಬೇಡಿದ್ದನ್ನೆಲ್ಲ ಕೊಟ್ಟು ಆಮೇಲೆ ಶಾಸ್ತ್ರದ ಬೋಧನೆ ಮಾಡುತ್ತಾರೆ ರಾಯರು. ವಾದೀಂದ್ರ ತೀರ್ಥರು ರಾಯರನ್ನು ಕುರಿತು  " ಕಿಮ್ ವಾ ದುಸ್ಸಾಧ್ಯಮಸ್ತಿ ತ್ರಿಜಗತಿ ಮಹಾತಾಮಾತ್ಮನ ಪಾಣಿಪದ್ಮೆ"  , " ಉಕ್ತಂ ನೋ ವಕ್ತಿ ಭೂಯಃ ಕ್ವಚಿದಪಿ ಲಿಖಿತಂ ನೈವ ನಿಮ್ರ್ಮಾರ್ಷ್ಟಿ ತಸ್ಮಾತ್ " " ಅದ್ಯ ಶ್ರೀ ರಾಘವೇಂದ್ರಾದ್ವಿಲಸತಿ ಫಲಿತೋ ಮಧ್ವ ಸಿದ್ಧಾಂತ ಶಾಖೀ" ಇತ್ಯಾದಿಯಾಗಿ ವರ್ಣನೆ ಮಾಡುವ ಮೂಲಕ ಅವರ ಮಹಿಮೆ ತಿಳಿಸಿದ್ದಾರೆ.. ಹೀಗೆ ರಾಯರ ಪಟ್ಟಾಭಿಷೇಕ , ವರ್ಧಂತಿ , ಆರಧನಾದಿಗಳನ್ನೂ ಮಾಡಿಯಾದರೂ ನಮಗೆ ಈ ಬ್ರಹ್ಮ ವಿದ್ಯೆಯ ಮಹತ್ವ ಅರಿಯಲು ಸಹಕಾರವಾಗಿ ನಾವು ಆಕಡೆ ಹೋಗಿ ಸಾಧನಾ ಮಾರ್ಗದತ್ತ ನಡೆಯಬೇಕು , ಶಾಸ್ತ್ರಗಳ ಮಹತ್ವ ತಿಳಿಯಬೇಕು ಅನ್ನುವುದೇ ರಾಯರ ಪರಮೊದ್ದೇಶವೇ ಹೊರತು ಎಲ್ಲ ವೈಭವಾದಿಗಳನ್ನು ಸ್ವೀಕಾರ ಮಾಡಿ ಮೆರೆಯುವ ಉದ್ದೇಶ ರಾಯರದ್ದಲ್ಲ ಅನ್ನುವದು ನನ್ನ ಭಾವನೆ.. ರಾಯರಿಗೆ ಸಮರ್ಪಿಸುವ ವೈಭವ ಎಲ್ಲವನ್ನೂ ರಾಯರು ಕ್ಷಣಮಾತ್ರದಲ್ಲಿ ಭಗವಂತನಿಗೆ ಅರ್ಪಿಸಿ ಬಿಡುತ್ತಾರೆ.. ಇಂತಹ ಗುರುಗಳನ್ನು ಪಡೆದ ನಾವೇ ಧನ್ಯ ಧನ್ಯ.. ಅವರನ್ನು ಬೆಂಬತ್ತಿ ನಾವೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದು ಸದ್ಗತಿ ಹೊಂದೋಣ. ಕೃಷ್ಣಾರ್ಪಣಮಸ್ತು.    

                            

No comments:

Post a Comment

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...