Sunday, 10 August 2014

।। ಶ್ರೀರಾಘವೇಂದ್ರ ಗುರವೇ ನಮಃ ಕಾರುಣ್ಯ ಸಿಧಂವೇ ।।

ಬಂತು ಬಂತು ನಮ್ಮ ರಾಯರ ಆರಾಧನೆ.. ಪ್ರತಿ ವರುಷ ಬರುವ ಈ ಮೂರು ದಿನಗಳು ಆಸ್ತಿಕತೆಯನ್ನು ಬಡೆದೆಬ್ಬಿಸುತ್ತವೆ.. ಎ ರಾಯರ ಆರಾಧನಾ ದಿನಗಳಲ್ಲಿ ಜಗತ್ತಿನಾದ್ಯಂತ ಅವರ ಗುಣಗಾನ , ಗ್ರಂಥಗಳ ಅನುವಾದ , ಅವರ ಪವಾಡ , ಅವರ ಗ್ರಂಥ ವೈಶಿಷ್ಟ್ಯ , ಅವರ ವ್ಯಕ್ತಿತ್ವ , ಅವರ ವಾತ್ಸಲ್ಯ , ಅವರ ಚರಿತ್ರೆ  , ಅವರನ್ನು ಕುರಿತು ಇರುವ ರಾಘವೇಂದ್ರ ವಿಜಯದ ಪ್ರವಚನ , ಒಂದು ಕಡೆ ಯತಿಶ್ರೇಷ್ಠ ಶ್ರೀ ವಾದೀಂದ್ರತೀರ್ಥ ವಿರಚಿತ  ಗುರುಗುಣಸ್ತವನದ ಪ್ರವಚನ-ಪಾರಾಯಣ , ಗ್ರಹಸ್ತಾಶ್ರಮಿಗಳಾದ ಅಪ್ಪಣ್ಣಾಚಾರ್ಯರು ರಚಿಸಿದ ಶ್ರೀ ರಾಘವೇಂದ್ರ ಸ್ತೋತ್ರದ ಪರಾಯಣ ಮತ್ತೊಂದು ಕಡೆ   , ಶ್ರೀ ವಿಜಯದಾಸ-ಜಗನ್ನಾಥದಾಸ-ಗೋಪಾಲದಾಸರೇ ಮೊದಲಾದ ದಾಸಶ್ರೇಷ್ಠರ ಪದಗಳ ಪಾರಾಯಣ ,  ಇತ್ಯಾದಿ  ವೈಭವಗಳನ್ನ ನೋಡಿದರೆ , ಯಾಕೆ ಕೇಳಿದರೆ ಸಾಕು ಮೈ ರೋಮಾಂಚನಗೊಂಡು ಎಂತಹ ನಾಸ್ತಿಕನೂ ಆಸ್ತಿಕನಾಗಬಲ್ಲ.  ಅಂತಹ ಅದ್ಭುತ ಶಿಕ್ತಿಯೇ ಶ್ರೀ ರಾಘವೇಂದ್ರ ಗುರುಸರ್ವಭೌಮರು. ಹೆಸರಿನಲ್ಲಿಯೇ ದೇವರು-ವಾಯುದೇವರ ಸಂಪೂರ್ಣ ಸನ್ನಿಧಾನ. ಇನ್ನು ಮೂಲಸ್ವರೂಪವಂತೂ ಕರ್ಮಜದೇವತೆಯಾದ ಶಂಕುಕರ್ಣ. ಪ್ರಹ್ಲಾದರಾಜ-ಬಾಹ್ಲಿಕರಾಜ  ಅವತರಿಸಿ ಪ್ರತಿ ಅವತಾರದಲ್ಲೂ ಶ್ರೀಹರಿಯನ್ನೇ ಆರಾಧಿಸಿದವರು. ಶ್ರೀ ವ್ಯಾಸರಾಜರಾಗಿ ಅವತರಿಸಿ "ವ್ಯಾಸತ್ರಯ"ಗಳ ಕರ್ತೃಗಳಾಗಿ , ಮಧ್ವಸಿದ್ಧಾಂತ ಪತಾಕೆ ಹರಿಸಿದವರು , ಪುರಂದರ-ಕನಕದಾಸಾದಿಗಳಿಗೆ ಅಶ್ರಯದಾತರು , ಶ್ರೀಕೃಷ್ಣದೇವರಾಯನಿಗೆ ರಾಜಗುರುಗಳಾಗಿ ಮೆರೆದವರು.  ಸಮಾಜಕ್ಕೆ ಶ್ರೀ ವಾದಿರಾಜ-ಶ್ರೀ ವಿಜಯೀಂದ್ರ ತೀರ್ಥರಂತಹ ೨೧ ಮಹಾ ಮೇಧಾವಿ ಮೂರ್ಧನ್ಯರನ್ನು ಕೊಟ್ಟು  , ಶ್ರೀ ಮೂಲಗೋಪಾಲಕೃಷ್ಣ ದೇವರನ್ನುಬಿಡದೇ  ಅರ್ಚಿಸಿ ಕೃತಾರ್ಥರಾದವರು. ಶ್ರೀ ನರಸಿಂಹ ದೇವರ ಅನುಗ್ರಹ ಪ್ರಸಾದ ಪಡೆದು ಮುಕ್ತಿಗೆ ಕರೆ ಸಿಕ್ಕರೂ "ನನ್ನ ಭಕ್ತರನ್ನು ಬಿಟ್ಟು ಬರಲಾರೆ " ಎಂದು ಹೇಳಿ  ಭಕ್ತಾಭಿಮಾನಿಯಾದವರು. ಸಾಕ್ಷಾತ್ ನರಸಿಂಹರೂಪಿ ಪರಮಾತ್ಮನೇ ವರ ಬೇಡು ಎಂದಾಗ " ನಿನಗೆ ವರ ಬೇಡದಂತೆ ವರ ಕೊಡು " ಎಂದು  ಕೇಳಿದ ಮಹಾನುಭಾವರು. ಆ ಶ್ರೀನರಸಿಂಹರೂಪಿ ಪರಮಾತ್ಮ "ನೀನು ಬ್ರಹ್ಮಸಂಬಂಧಿಯಾದ ನನ್ನನ್ನು ಅರ್ಚಿಸುವಿ" ಎಂದು ಅನುಗ್ರಹಿಸಿದ್ದಕ್ಕಾಗಿ ಚತುರ್ಯುಗ ಮೂರ್ತಿ ಶ್ರೀ ಬ್ರಹ್ಮದೇವರ ಕರಾರ್ಚಿತ ಪ್ರತಿಮೆಯಾದ , ಶ್ರೀಸೀತಾ ಸಮೇತ ರಾಮಚಂದ್ರ ದೇವರು ಮುಟ್ಟಿ ಪೂಜಿಸಿದ ದಿವ್ಯ ಸನ್ನಿಧಾನೋಪೆತ ಪ್ರತಿಮೆಯಾದ "ಶ್ರೀಮೂಲರಾಮ"ದೇವರನ್ನು ಅರ್ಚಿಸಲು ಆ ರಾಮಚಂದ್ರನ ಹೆಸರನ್ನೇ ಇಟ್ಟುಕೊಂಡು , ಶ್ರೀ ಸುಧೀಂದ್ರ ತೀರ್ಥರಿಂದ ಅನುಗ್ರಹೀತರಾಗಿ ಹಂಸನಾಮಕನ ಪರಂಪರೆಯಲ್ಲಿ "ಶ್ರೀ ರಾಘವೇಂದ್ರ ತೀರ್ಥ" ಎಂಬ ಅಭಿದಾನದಿನ ಅವತರಿಸಿದ ಮಹಾಪುರುಷರು. ಸಜ್ಜನರ ಉದ್ಧಾರವನ್ನೇ ತಮ್ಮ ಧ್ಯೇಯವನಿಗಿಟ್ಟುಕೊಂಡು ಶ್ರೀಮನ್ಯಾಯಸುಧಾ ಪರಿಮಳವೆ ಮೊದಲಾದ ಟಿಪ್ಪಣಿ ಗ್ರಂಥಗಳು , ದಶೋಪನಿಶತ್ತುಗಳಿಗೆ ವ್ಯಾಖ್ಯಾನ ಇತ್ಯಾದಿಯಾಗಿ ಮಾಡಿ ಜಗದ್ಗುರುಗಳು ಎನ್ನಿಸಿದ ಸಿದ್ಧಪುರುಷರು." ಹನುಮನ ಮತವೆ ಹರಿಯ ಮತವು , ಹರಿಯ ಮತವೆ ಹನುಮನ ಮತವು " ಎಂಬ ಮಾತನ್ನು ಸತ್ಯಪಡಿಸಿ ತೊರಿಸಿದವರು. ನಾಡಿನಾದ್ಯಂತ ಸಂಚರಿಸಿ ಮಧ್ವಮತದ ಕೀರ್ತಿ ಪತಾಕೆ ಹಾರಿಸಿದವರು. ತಪ್ತಮುದ್ರಾದಿಧಾರಣೆಯೇ ಮೊದಲಾದ ಸದ್ವೈಷ್ಣವ ಆಚರಣೆಗಳಿಗೆ ಆಕ್ಷೇಪ ಬಂದಾಗ ಸರಿಯಾದ ಉತ್ತರ ಕೊಟ್ಟು "ದುರ್ವಾದಿಧ್ವಾಂತರವಿಃ " ಎನ್ನಿಸಿಕೊಂಡು , ಸತ್ಪರಂಪರೆ ಉಳಿಯುವಂತೆ ಮಾಡಿ ವೈಷ್ಣವವರಿಗೆ "ವೈಷ್ಣವೇಂದೀವರೆಂದುಃ"ಗಳೆನಿಸಿದವರು. ಅಶೇಷ ಸಜ್ಜನರಿಗೆಲ್ಲ ಕಲ್ಪತರು-ಕಾಮಧೇನುಗಳೆನಿಸಿ " ಅತ್ಯಂತದಯಾಲುಃ" ಎಂದೇ ಖ್ಯಾತನಾಮರಾದವರು. ಮುಕ್ತಿಗೆ ಭಕ್ತಿಯೇ ಪ್ರಧಾನಮಾರ್ಗ ಎಂದು ತಿಳಿ ಹೇಳಿ ಆ ಭಕ್ತಿಯನ್ನು ಶ್ರೀಹರಿಯಲ್ಲಿ ಬರುವಂತೆ ಮಾಡಲು "ಕರೆದಲ್ಲಿ ಬರುವಾತ"ಎಂದೇ ಸುಪ್ರಸಿದ್ಧರಾದವರು.ಶ್ರೀ ಸುಮತೀಂದ್ರ ತೀರ್ಥರ ಕೈಯ್ಯಲ್ಲಿ ಮಧ್ವರ ಸೇವೆ ಮಾಡಿಸಿ , ಶ್ರೇಷ್ಠ ಗ್ರಂಥಗಳನ್ನು ಬರೆಯಲು ಅನುಗ್ರಹಿಸಿದರು. ತಮ್ಮ ನಂತರ ಮಧ್ವರ ಸೇವೆಗೆ ಶ್ರೇಷ್ಠ ಯತಿಗಳು ಬರಲಿದ್ದಾರೆ ಎಂದು ಅಭಯವನ್ನಿತ್ತು , ಆಯಾ ಯತಿಗಳ ಕಾಲದಲ್ಲಿ ಅವರಲ್ಲಿ ನಿಂತು ಸಂಪೂರ್ಣ ಅನುಗ್ರಹ ಮಾಡಿದವರು ( ಶೇಷಚಂದ್ರಿಕಾಚಾರ್ಯರ ಬಗ್ಗೆ ವ್ಯಸರಜಾರ ಭವಿಷ್ಯ ವಾಣಿ , ಶ್ರೀ ವರದೇಂದ್ರ ತೀರ್ಥರ ಬಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಭವಿಷ್ಯವಾಣಿ) . ಇಂತಹ ಮಹಾನುಭಾವರು ಪ್ರಹ್ಲಾದಾವತಾರಿ ಶ್ರೀ ರಾಘವೇಂದ್ರ ಸ್ವಾಮಿಗಳು. ಅಂತಹ ರಾಘವೇಂದ್ರ ಗುರುಗಳು ಇಂದಿಗೂ ತಮ್ಮ ಭಕ್ತರನ್ನು ಮತಬೇಧ-ಮಠಬೇಧವಿಲ್ಲದೆ ಪೊರೆಯುತ್ತಿದ್ದಾರೆ. ಅನೇಕರು ಇವರ ಬಗ್ಗೆ ಇಲ್ಲ ಸಲ್ಲದನ್ನು ಮಾತಾಡಿದರೂ ಹಂತವರಿಗೂ ಕೂಡ ಅನುಗ್ರಹ ಮಾಡುವ ದೊಡ್ಡತನ ರಾಯರು. "ಶಾಪಾನುಗ್ರಹಶಕ್ತರು" " ಗುರುಸರ್ವಭೌಮರು" " ಯತಿಕುಲತಿಲಕರು" "ಶ್ರೀಮೂಲರಾಮನ ಉಪಾಸಕರು" "ಶ್ರೀಮೂಲಗೋಪಾಲಕೃಷ್ಣನ ಉಪಾಸಕರು" " ದಿಗ್ವಿಜಯರಾಮನ ಉಪಾಸಕರು" " ಶ್ರೀಮನ್ಯಾಯಸುಧಾಕಾರ ಜಯತೀರ್ಥ ಕರಾರ್ಚಿತ ಶ್ರೀ ಜಯರಾಮದೇವರ ಉಪಾಸಕರು". ನನ್ನ ಸ್ವರೂಪೋದ್ಧಾರಕರು. ಸ್ವಾಮಿ ! ನಿಮ್ಮಂತಹ ಭಾಗವತಶಿಖಾಮಣಿಗಳ ಬಗ್ಗೆ ಮಾತನಾಡುವದು ನಮ್ಮ ಯೋಗ್ಯತೆಯೇ ? ಸಾಧ್ಯವೇ ಇಲ್ಲ. ಇದು ನಿಮ್ಮ ಪವಾಡವೇ. ಸುಮಧ್ವವಿಜಯಕಾರರು "ಮುಕುಂದಭಕ್ತ್ಯೈ ಗುರುಭಕ್ತಿ ಜಾಯೈ " , " ಮನೋವಿಶುಧ್ಧ್ಯೈ ಚರಿತಾನುವಾದಃ" ಎಂದು  ಹೇಳಿರುವಂತೆ ನನ್ನ ಮೇಲೆ ನಿಮ್ಮಅನುಗ್ರಹವನ್ನು ಗುರುಗಳಾದಂತಹ ಶ್ರೀ ಸುಬುಧೇಂದ್ರ ತೀರ್ಥರ ಮೂಲಕ ಮಾಡಿರಿ ಎಂದು ಬೇಡಿಕೊಳ್ಳುತ್ತ ನಿಮ್ಮಯ ಪಾದಾರವಿಂದಗಳಲ್ಲಿ ನನ್ನ ಈ ಚಿಕ್ಕ ಗುರುಕಾಣಿಕೆ. 

                                       ।।  ಶ್ರೀರಾಘವೇಂದ್ರ ಗುರವೇ ನಮಃ  ಕಾರುಣ್ಯ ಸಿಧಂವೇ ।।  
ತಪ್ಪುಗಳಿದ್ದರೆ ಕ್ಷಮೆ ಇರಲಿ. ಬಾಲನ ಮಾತುಗಳು. 

No comments:

Post a Comment

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...