Sunday, 23 October 2022

"ಅಮಿತಮತಿ ಶ್ರೀಸುಮತೀಂದ್ರತೀರ್ಥ ಯತಿಸಾರ್ವಭೌಮರು"

ಶ್ರೀಹಂಸನಾಮಕನ ಸಾಕ್ಷಾತ್ ಪರಂಪರೆಯಲ್ಲಿ ಶ್ರೀಪದ್ಮನಾಭತೀರ್ಥರ- ಶ್ರೀಜಯತೀರ್ಥರ-ಶ್ರೀಕವೀಂದ್ರತೀರ್ಥರ ಪರಂಪರೆಯಲ್ಲಿ ಉದಿಸಿದ ಪೂರ್ಣಪ್ರಜ್ಞಮತದ ಪೂರ್ಣಚಂದ್ರಮರೇ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದ ವಿಭೂತಿಪುರುಷ ಶ್ರೀಸುಮತೀಂದ್ರ ತೀರ್ಥರು. 

ಶ್ರೀಮದಾಚಾರ್ಯರ ಸತ್ಪರಂಪರೆಯ ಇತಿಹಾಸದಲ್ಲಿಯೇ  ವಿಶಿಷ್ಟಸ್ಥಾನವನ್ನು ಆಚಂದ್ರಾರ್ಕಪರ್ಯಂತ ಪಡೆದ ಅಪ್ರತಿಮ ಪ್ರತಿಭಾ ಸಂಪನ್ನ ಶಕಪುರುಷರು ಶ್ರೀಸುಮತೀಂದ್ರ ತೀರ್ಥರು. 

ಶ್ರೀರಾಘವೇಂದ್ರ ಗುರುಸಾರ್ವಭೌಮರ ವಂಶೋದ್ಭವರಾದ ಶ್ರೀಗಳು  ಶ್ರೀಮನ್ನ್ಯಾಯಸುಧಾದಿ ಉದ್ಗ್ರಂಥಗಳ ಪಾಠವನ್ನು  ಸಾಕ್ಷಾತ್ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ  ಪದತಲದಲ್ಲಿ ಕುಳಿತು ಕೇಳಿದ ಗುರುರಾಜರ  ಸಾಕ್ಷಾತ್ ಶಿಷ್ಯರು. 

ಪೂರ್ವಾಶ್ರಮ ಹಾಗೂ ವಿದ್ಯಾಭ್ಯಾಸ 


ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರ ಪೂರ್ವಾಶ್ರಮ ಅಣ್ಣಂದಿರಾದ ಶ್ರೀಗುರಾಜಾಚಾರ್ಯರ ಮಕ್ಕಳೇ ಶ್ರೀವೆಂಕಟನಾರಾಯಣಾಚಾರ್ಯರು. ಅವರಿಗೆ ಐದು ಜನ ಗಂಡು ಮಕ್ಕಳು. 


ಶ್ರೀವೇಂಕಣ್ಣಾಚಾರ್ಯರು, ಶ್ರೀವಾಸುದೇವಾಚಾರ್ಯರು, ಶ್ರೀಮುದ್ದುವೇಂಕಟಕೃಷ್ಣಾಚಾರ್ಯರು,  ಶ್ರೀವಿಜಯೀಂದ್ರಾಚಾರ್ಯರು ಹಾಗು ಶ್ರೀಗರುಡವಾಹನ ಲಕ್ಷ್ಮೀನಾರಾಯಣಾಚಾರ್ಯರು ಎಂದು. 


ಅವರೆಲ್ಲ ಕ್ರಮವಾಗಿ ಶ್ರೀಯೋಗೀಂದ್ರತೀರ್ಥರು , ಶ್ರೀಸೂರೀಂದ್ರತೀರ್ಥರು,  ಶ್ರೀಸುಮತೀಂದ್ರತೀರ್ಥರು, ಶ್ರೀಉಪೇಂದ್ರತೀರ್ಥರು, ಶ್ರೀಮುನೀಂದ್ರತೀರ್ಥರೆಂದು ಯತ್ಯಾಶ್ರಮ ಸ್ವೀಕರಿಸಿ ವೈರಾಗ್ಯಕ್ಕೆ ಹೆಸರಾದವರು. 


ಇವರಲ್ಲಿ ನಾಲ್ಕು ಜ್ಞಾನ ಶ್ರೀಮದಾಚಾರ್ಯರ ಪೀಠವನ್ನೇರಿದರೇ ಶ್ರೀಮುನೀಂದ್ರತೀರ್ಥರು ಬಿಡಿ ಸಂನ್ಯಾಸಿಗಳಾಗಿಯೇ ಇದ್ದು ಪೀಠಾಧಿಪತಿಗಳಾಗಲಿಲ್ಲ. 


ಇವರೆಲ್ಲರೂ ಶ್ರೀರಾಘವೇಂದ್ರಸ್ವಾಮಿಗಳವರಲ್ಲಿಯೇ ಅಧ್ಯಯನ ನಡೆಸಿದ ಭಾಗ್ಯಶಾಲಿಗಳು. ಶ್ರೀರಾಘವೇಂದ್ರವಿಜಯವು  

ಜನಕೋಪಮಕನ್ಯಕೇsನ್ವಯೇsಸ್ಮಿನ್ನಿಜತಾತಾಧಿಕನಂದನೇ ಗುಣೌಘೈಃ । 

ಅನುಜಾತಸಮಾನಪೂರ್ವಜಾತೇsಭವದೇಕೋ ಭುವಿಕೃಷ್ಣನಾಮಧಾಮಾ ।। 

                 (ಶ್ರೀರಾಘವೇಂದ್ರವಿಜಯ)  

ಎಂದು ಉಲ್ಲೇಖಿಸುವಂತೆ, ತಂದೆಯನ್ನೇ ಮೀರಿಸುವ ಮಕ್ಕಳು, ಗುಣಗಳಲ್ಲಿ ಅಣ್ಣನ ಸಮಾನನೆನಿಸುವ ತಮ್ಮಂದಿರು ಆ ವಂಶದಲ್ಲಿ ಅವತರಿಸುವವರು ಎಂಬ ಮಾತಿನಂತೆ ಎಲ್ಲರೂ ವಿಶಿಷ್ಟಪಾಂಡಿತ್ಯಪೂರ್ಣರೂ, ಗ್ರಂಥಕಾರರು ಎನ್ನುವುದು ವಿಶೇಷ. 

Monday, 17 October 2022

"ವಸುಧಾತಲವಿಖ್ಯಾತ ಶ್ರೀವಸುಧೇಂದ್ರತೀರ್ಥರು"



    ಶ್ರೀಹಂಸನಾಮಕಪರಮಾತ್ಮನ, ಶ್ರೀಮಧ್ವ-ಪದ್ಮನಾಭ-ಶ್ರೀಜಯಾರ್ಯಾದಿ ಯತಿಗಳ ಸತ್ಪರಂಪರೆಯಲ್ಲಿ ಅವತರಿಸಿದ ಮಹಾತಪಸ್ವೀಗಳ ಸಾಲಿನಲ್ಲಿ ಅಗ್ರಗಣ್ಯರು ಶ್ರೀರಾಘವೇಂದ್ರಗುರುಸಾರ್ವಭೌಮರ ವಂಶೋದ್ಭವರಾದ ಶ್ರೀವಸುಧೇಂದ್ರತೀರ್ಥ ಶ್ರೀಪಾದಂಗಳವರು.  

    ಶ್ರೀರಾಘವೇಂದ್ರಗುರುಸಾರ್ವಭೌಮರ ಪೂರ್ವಾಶ್ರಮದ ಸದ್ವಂಶದಲ್ಲಿ, ಅವರ ಮರಿಮಕ್ಕಳಾಗಿ ಅವತರಿಸಿದವರೇ ಶ್ರೀವೇಣುಗೋಪಾಲಾಚಾರ್ಯರು. ಅವರು ಶ್ರೀವಾದೀಂದ್ರತೀರ್ಥರ ಪೂರ್ವಾಶ್ರಮ ತಮ್ಮಂದಿರೂ ಹೌದು. ಶ್ರೀವೇಣುಗೋಪಲಾಚಾರ್ಯರ ಜ್ಯೇಷ್ಠ ಮಕ್ಕಳೇ ಶ್ರೀಪುರುಷೋತ್ತಮಾಚಾರ್ಯರು. 


    ಶ್ರೀಪುರುಷೋತ್ತಮಾಚಾರ್ಯರೇ ಶ್ರೀವಾದೀಂದ್ರತೀರ್ಥರಿಂದ ಚತುರ್ಥಾಶ್ರಮ ಸ್ವೀಕರಿಸಿ "ಶ್ರೀವಸುಧೇಂದ್ರತೀರ್ಥ"ರಾದರು. ಅವರ ಅಪಾರ ಮಹಿಮೆ, ಅಪ್ರತಿಮ ಪಾಂಡಿತ್ಯ, ಮಹಾಸಂಸ್ಥಾನದ ಅಭಿವೃದ್ಧಿ, ಮಹೋನ್ನತವಾದ ವಿದ್ಯಾಪರೆಂಪರೆ,  ಗ್ರಂಥಕರ್ತರೆನಿಸುವ ಶಿಷ್ಯರ ನಿರ್ಮಾಣ, ಅಪಾರ ತಪಃ ಪ್ರಭಾವ, ವೈಭವದ ಶ್ರೀಮೂಲರಾಮಾರ್ಚನೆ, ಹರಿದಾಸಸಾಹಿತ್ಯದ ಪೋಷಣೆ ಶ್ರೀವಿಜಯದಾಸ, ಶ್ರೀಗೋಪಾಲದಾಸರು ಹಾಗೂ ಶ್ರೀಜಗನ್ನಾಥದಾಸರಿಗೆ ಅವರು ಮಾಡಿದ ಪರಮಾನುಗ್ರಹ ಹೀಗೆ ಹಲವು ರೀತಿಯಲ್ಲಿ ಶ್ರೀವಸುಧೇಂದ್ರತೀರ್ಥರ ಹೆಸರು ಚಿರಸ್ಥಾಯಿಯಾಗಿದೆ.



ಮಹಾಸಂಸ್ಥಾನವನ್ನು ಭದ್ರಪಡಿಸಿದ  ಮಹಾನುಭಾವರು:


ಶ್ರೀಗುರುಸಾರ್ವಭೌಮರ ಕಾಲದಲ್ಲಿ ಶ್ರೀಮಠಕ್ಕೆ ಜಹಗೀರು ನೀಡಿದ ಮಂತ್ರಾಲಯಗ್ರಾಮವು ಎಲ್ಲಿಯವರೆಯೆ ಶ್ರೀಮಠದ ಸುಪರ್ದಿಗೆ ಒಳಪಟ್ಟಿದ್ದು ಎನ್ನುವುದು ಸ್ಪಷ್ಟವಿರಲಿಲ್ಲ. ಹಲವು ರಾಜಕೀಯವಿಪ್ಲವಗಳ ಮಧ್ಯೆ ಹಲವು ಕಾಲ ಮಂತ್ರಾಲಯದಲ್ಲೇ ಉಳಿದು ಪಾಠ ಪ್ರವಚನಗಳನ್ನು ನಡೆಸಿ ತಮ್ಮ ಕಾಲದಲ್ಲಿ ಅಂದಿನ ಆದೋನಿಯ ನವಾಬ ಸಬ್ದಲ್ ಜಂಗ್ ಬಹಾದೂರ್ ನಲ್ಲಿ ಮಂತ್ರಾಲಯ ಗ್ರಾಮದ ಬಗ್ಗೆ ಭವಿಷ್ಯದ ಬಗ್ಗೆ ಯೋಚಿಸಿ ಸೂಕ್ತ ಕಾಗದ ಪ್ರತ್ರಗಳನ್ನು ಮಾಡಿಸಿ,ಮಂತ್ರಾಲಯವನ್ನು ಭದ್ರ ಪಡಿಸಿದರು. 


ಹಿಂದೆ ಶ್ರೀರಾಘವೇಂದ್ರಗುರುಗಳ ಕಾಲದಲ್ಲಿ ಶ್ರೀಮಠಕ್ಕೆ ಜಗಗೀರಾಗಿ ಲಭ್ಯವಾಗಿದ್ದ ಕಿರಿಟಗಿರಿಗ್ರಾಮವು ಬದಲಾದ ರಾಜಕೀಯ ಸನ್ನಿವೇಶದಿಂದ ಮಹಾಸಂಸ್ಥಾನದ ಕೈತಪ್ಪಿ ಹೋಗಿತ್ತು. ತಮ್ಮ ವಿಶಿಷ್ಟ ತಪಃ ಪ್ರಭಾವ, ಚರ್ಯೆಯಿಂದ ಶ್ರೀಗಳವರು ಅದನ್ನು ಮರಳಿ ಸಂಸ್ಥಾನಕ್ಕೆ ಬರುವಂತೆ ಮಾಡಿದರು. ಇದಲ್ಲದೇ ಇನ್ನು ಹತ್ತು ಹಲವು ಗ್ರಾಮಗಳನ್ನು ಶ್ರೀಮೂಲರಾಮದೇವರ ಸೇವಾರ್ಥವಾಗಿ ಶ್ರೀಮಠಕ್ಕೆ  ಭದ್ರಪಡಿಸಿದ್ದಲ್ಲದೇ ಅನೇಕ ರಾಜರಿಂದ, ಪಾಳೆಯಗಾರರಿಂದ ಸಮ್ಮಾನಿತರಾಗಿ ಅನೇಕ ಗ್ರಾಮಗಳನ್ನು ದಾನಪಡೆದು ಸಂಸ್ಥಾನಕ್ಕೆ ಅರ್ಪಿಸುವ ವರ್ಚಸ್ಸು ಶ್ರೀಗಳವರಿಗೆ ಇದ್ದಿತ್ತು. 

Saturday, 19 March 2022

 ಶ್ರೀರಾಘವೇಂದ್ರವಿಜಯ ಉಲ್ಲೇಖಿಸುವ ಶ್ರೀರಾಘವೇಂದ್ರತೀರ್ಥರ ಪಟ್ಟಾಭಿಷೇಕ. 



ವೇದಾಂತೇತಿಹಾಸದಲ್ಲಿ ಶ್ರೀರಾಘವೇಂದ್ರಗುರುಸಾರ್ವಭೌಮರ ಸ್ಥಾನದ ಪರಿಚಯವನ್ನು ಪ್ರಯಾಸದಿಂದ ತಿಳಿಯುವ ಅಗತ್ಯ ಸರ್ವಥಾ ಇಲ್ಲ, ಕಾರಣ ಅದು ಸರ್ವಜನನಿತವಾದ ವಿಷಯ. ಶ್ರೀಪದ್ಮನಾಭತೀರ್ಥರು, ಶ್ರೀಮಟ್ಟೀಕಾಕೃತ್ಪಾದರು, ಶ್ರೀವಿಬುಧೇಂದ್ರ-ಜಿತಾಮಿತ್ರರು, ಶ್ರೀಸುರೇಂದ್ರರು, ಶ್ರೀವಿಜಯೀಂದ್ರರು, ಶ್ರೀಸುಧೀಂದ್ರ-ಶ್ರೀರಾಘವೇಂದ್ರರು, ಶ್ರೀಸುಮತೀಂದ್ರ-ಶ್ರೀವಾದೀಂದ್ರರು, ಶ್ರೀವಸುಧೇಂದ್ರ-ಶ್ರೀವರದೇಂದ್ರ-ಶ್ರೀಧೀರೇಂದ್ರರು ಹೀಗೆ ಮಹೋನ್ನತ ಯತಿಪರಂಪರೆಯ ಆ ವಿದ್ಯಾಪ್ರಭಾವ, ಗ್ರಂಥನಿರ್ಮಾಣ, ವಾದಿ-ದಿಗ್ವಿಜಯಗಳು ಮಾತ್ರವಲ್ಲದೇ ಅವರು ಸಮಾಜದ ಕೊನೆಯ ವ್ಯಕ್ತಿಯ ಮೇಲೂ ಮಾಡಿದ ಪರಮಾನುಗ್ರಹ ಪ್ರತ್ಯಕ್ಷಸಿದ್ಧ. ಹೀಗೆ ಶ್ರೀಮನ್ಮಧ್ವಾಚಾರ್ಯರಿಂದ ಪ್ರವಹಿಸಿದ ವಿಶಿಷ್ಟವಾದ ಪರಂಪರೆಯಲ್ಲಿ ಉದಯಿಸಿದ ಒಬ್ಬೊಬ್ಬ ಯತಿಗಳೂ ಕೂಡ ಶ್ರೀಮೂಲರಾಮನಿಗರ್ಪಿಸಿದ ನಕ್ಷತ್ರಮಾಲೆಯ ಹೊಳೆಯುವ  ನಕ್ಷತ್ರಗಳು.


ಅಂತಹ ಶ್ರೇಷ್ಠ ಗುರುಪರಂಪರೆಯಲ್ಲಿ ಬಂದ ಪೂರ್ಣಚಂದ್ರಮರೇ ಶ್ರೀರಾಘವೇಂದ್ರಗುರುಸಾರ್ವಭೌಮರು. ಪ್ರಹ್ಲಾದನ ಅವತಾರಭೂತರಾದ ಶ್ರೀರಾಯರ  ಚರಿತ್ರೆಯನ್ನು ದಾಖಲಿಸುವ ಮಹತ್ವಪೂರ್ಣ ಕೃತಿ ಶ್ರೀರಾಘವೇಂದ್ರವಿಜಯ. ಐತಿಹಾಸಿಕವಾಗಿಯೂ ಪರಮಪ್ರಮಾಣವೆನಿಸಿದ, ಸ್ವತಃ ಶ್ರೀರಾಘವೇಂದ್ರಗುರುಸಾರ್ವಭೌಮರೇ ಪರಿಶೀಲಿಸಿದ ಐತಿಹಾಸಿಕ ದಾಖಲೆ ಇದಾಗಿದೆ ಎನ್ನುವುದನ್ನು ಮರೆಯುವಂತಿಲ್ಲ. ಪ್ರಾಥಮಿಕವಾಗಿ  ಕಾವ್ಯ-ಸಾಹಿತ್ಯ-ವ್ಯಾಕರಣಾದಿ ಪ್ರಾಥಮಿಕ ಪಾಠವನ್ನು ರಾಯರಿಗೆ  ಹೇಳಿದ  ಗುರುಗಳಾದ ಶ್ರೀಲಕ್ಷ್ಮೀನರಸಿಂಹಾಚಾರ್ಯರ ಹಾಗೂ  ರಾಯರ ಪೂರ್ವಾಶ್ರಮ ಅಕ್ಕಂದಿರಾದ ವೇಂಕಟಾಂಬಾ ಅಮ್ಮನವರ ಸುಪುತ್ರರಾದ ಶ್ರೀನಾರಾಯಣಾಚಾರ್ಯರೇ ಈ ಗ್ರಂಥದ ಕರ್ತೃಗಳು. ಶ್ರೀನಾರಾಯಣಾಚಾರ್ಯರು ತಮ್ಮ ಸೋದರಮಾವಂದಿರಾದ  ಶ್ರೀರಾಘವೇಂದ್ರತೀರ್ಥರನ್ನು ತಮ್ಮ ಬಾಲ್ಯದಿಂದಲೇ ಹತ್ತಿರದಿಂದ ನೋಡಿಕೊಂಡು ಬೆಳೆದವರು. ಅವರ ವ್ಯಕ್ತಿತ್ವವನ್ನು ಪ್ರತ್ಯಕ್ಷವಾಗಿ ನೋಡಿ ಹಿರಿ ಹಿರಿ ಹಿಗ್ಗಿದವರು. ಪ್ರಾಯಃ ಶ್ರೀರಾಘವೇಂದ್ರಗುರುಗಳ ಜೀವನದಲ್ಲಿನ ಎಲ್ಲ ಘಟನೆಗಳಿಗೆ ಪ್ರತ್ಯಕ್ಷದರ್ಶಿಗಳಾಗುರುವವರು.   

Saturday, 15 January 2022

ಸಂತಾನಕೃಷ್ಣಪ್ರತಿಮಾ ಸೌವರ್ಣೇ ಸರ್ವಸಿದ್ಧಿದಾ


ಸಂತಾನಕೃಷ್ಣಪ್ರತಿಮಾ ಸೌವರ್ಣೇ ಸರ್ವಸಿದ್ಧಿದಾ  ।। 
ಉಪಾಸ್ಯಾ ರಾಘವೇಂದ್ರಾರ್ಯೈಃ ಅಘನಾಶನಕೀರ್ತಿಭಿಃ ।।

ಸಂತಾನಕೃಷ್ಣಪ್ರತಿಮೆಯು ಸುವರ್ಣಮಯವಾದ ಪ್ರತಿಮೆಯಾಗಿದ್ದು, ಸರ್ವಸಿದ್ಧಿಯನ್ನು ಕೊಡುವಂತಹ ಪ್ರತಿಮೆ. 
ಶ್ರೀರಾಘವೇಂದ್ರಗುರುಸಾರ್ವಭೌಮರಿಂದ  ವಿಶೇಷವಾಗಿ ಉಪಾಸನೆಗೊಂಡ ಪ್ರತಿಮೆ. ಬಂದ ಪಾಪಗಳನ್ನು, ತತ್ಸಂಬಂಧಿ ಕಷ್ಟಗಳನ್ನು ನಾಶಮಾಡಬಲ್ಲ ಮಹಾಸನ್ನಿಧಾನೋಪೇತ ಪ್ರತಿಮೆ. 

ಶ್ರೀರಾಘವೇಂದ್ರಗುರುಸಾರ್ವಭೌಮರು ವಿಶೇಷವಾಗಿ ಉಡುಪಿಯಲ್ಲಿ ಶ್ರೀಕೃಷ್ಣನ ಉಪಾಸನೆಯನ್ನು ಮಾಡಿ, ಅಲ್ಲಿ ಚಂದ್ರಿಕಾಗ್ರಂಥಕ್ಕೆ ಪ್ರಕಾಶ ಎಂಬ ವ್ಹಯಾಖ್ಯಾನವನ್ನು ಮಾಡಿ, ಇನ್ನೂ ಕೆಲವು ಟಿಪ್ಪಣಿಗಳನ್ನು ರಚಿಸಿ, ಶ್ರೀಕೃಷ್ಣನ ಸನ್ನಿಧಾನದಲ್ಲಿ ತಾವೇ ಒಂದು ಸುರ್ವಣಮಾಯವಾದ ಪ್ರತಿಮೆಯನ್ನು ನಿರ್ಮಾಣ ಮಾಡಿ, ಶ್ರೀಕೃಷ್ಣನ ಸನ್ನಿಧಾನದಲ್ಲಿಟ್ಟು  ಪೂಜಿಸಿ ತೆಗೆದುಕೊಂಡು ಬಂದು ತಾವು ಉಪಾಸನೆಯನ್ನು ಮಾಡುತ್ತಿದ್ದರು. ಅದೇ ಕೃಷ್ಣನ ಉಪಾಸನಾಬಲದಿಂದ ಸನ್ನಿಧಾನದಲ್ಲಿ ಸಂತಾನಯಂತ್ರ, ಭೀತಿಯಂತ್ರ ಹಾಗೂ ಅಭಿಷ್ಟಯಂತ್ರದ ಸಿದ್ಧಿ ಇದ್ದು, ಇಂದಿಗೂ ಸಂಸ್ಥಾನದಲ್ಲಿ ಇದರ ಜಾಗೃತ ಫಲಗಳನ್ನು ಪ್ರತ್ಯಕ್ಷವಾಗಿ ನೋಡಬಹುದು. 

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...