ಶ್ರೀಶ್ರೀವರದೇಂದ್ರತೀರ್ಥ ಗುರುಭ್ಯೋ ನಮಃ
ವಾದೇ ವಿಜಯಶೀಲಾಯ ವರದಾಯ ವರಾರ್ಥಿನಾಮ್ ।
ವದಾನ್ಯಜನಸಿಂಹಾಯ ವರದೆಂದ್ರಾಯ ತೇ ನಮಃ ।।
ಸನ್ಯಾಸಿಗಳ ಕರ್ತವ್ಯ ಪರಮತಖಂಡನಪೂರ್ವಕ-ಸ್ವಮತಪ್ರತಿಷ್ಠಾಪನವೇ ಆಗಿದೆ. ಶ್ರೀವರದೇಂದ್ರ ಗುರುರಾಜರು ಇದನ್ನು ಮೈಗೂಡಿಸಿಕೊಂಡು ಸದ್ವೈಷ್ಣವಸಿದ್ಧಾಂತಪ್ರತಿಷ್ಠಾಪನಾಚಾರ್ಯ ಎನ್ನುವ ಬಿರುದಿಗೆ ಅನ್ವರ್ಥದಂತಿದ್ದವರು.
| ಶ್ರೀವರದೇಂದ್ರತೀರ್ಥರ ಮೂಲ ವೃಂದಾವನ, ಪುಣೆ |
ಅವರು ಒಮ್ಮೆ ಪುಣ್ಯನಗರಿ ( ಪುಣೆ) ಗೆ ದಿಗ್ವಿಜಯ ಮಾಡಿಸಿದರಂತೆ. ಅಲ್ಲಿನ ದಿಗ್ವಿಜಯ ಯಾತ್ರೆ ಶ್ರೀವರದೇಂದ್ರರು ಸಾಧಿಸಿದ ದಿಗ್ವಿಜಯಗಳಲ್ಲಿ ಅತ್ಯಂತ ಪ್ರಸಿದ್ಧ ಜನನಿತವಾದ ದಿಗ್ವಿಜಯ. ಇದನ್ನು ಶ್ರೀವದೇಂದ್ರರನ್ನು ಸಾಕ್ಷಾತ್ತಾಗಿ ಕಂಡ, ಅವರ ಅನುಗ್ರಹ ಪಡೆದ ಧನ್ಯಾತ್ಮರಾದ ಶ್ರೀಪ್ರಾಣೇಶದಾಸರು ಹಾಗೂ ಮುಂದಿನ ಪೀಳಿಗೆಯವರಾದ ಶ್ರೀವರದೇಶವಿಠಲರು ದಾಖಲಿಸಿದ್ದಾರೆ. ಶ್ರೀವರದೇಶದಾಸರಂತೂ ಈ ಸಂಪೂರ್ಣ ಘಟನೆಯ ಚಿತ್ರಣವನ್ನೇ ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ್ದಾರೆ.
"ಇನಿತು ಪೇಳಿ ಸಂಸೇವಿತರಾಗುತ ಮುನಿಗಳು ತೆರಳಿದರು ಹರುಷದಲಿ ।।
ಪುಣೆಯ ಸೇರಿದರು ದುರ್ವಾದಿಯ ಮತವನು ದಿಗ್ವಿಜಯಿಪ ಇಚ್ಛೆಯಲೀ ।। "
ಎಂದು ಶ್ರೀವರದೇಂದ್ರ ಪುಣೆ ದಿಗ್ವಿಜಯಯಾತ್ರೆಯ ಪ್ರಸಂಗವನ್ನು ಉಲ್ಲೇಖಿಸಿದ್ದಾರೆ.
ಇದು ಕೇವಲ ದಂತೆಕಥೆಯಾಗಿರದೇ ಇತಿಹಾಸದ ಪುಟಗಳಲ್ಲಿ ದಾಖಲಾದ ನಿಚ್ಚಳ ಚರಿತ್ರೆಯಾಗಿದೆ. ಇತಿಹಾಸದ ಪುಟಗಳಲ್ಲಿ ಹೊಕ್ಕು ನೋಡಿದಾಗ, ಈ ಪ್ರಭುಣೆ ರಾಮಶಾಸ್ತ್ರಿಗಳ ಬಗ್ಗೆ ಹಲವು ಆಯಾಮಗಳಲ್ಲಿ ಮಾಹಿತಿ ದೊರೆಯುತ್ತದೆ.
ಈ ಪ್ರಭುಣೆ ರಾಮಶಾಸ್ತ್ರಿಗಳು ೧೮ನೇ ಶತಮಾನದ ಉತ್ತರಾರ್ಧದ ಕಾಲಘಟ್ಟದಲ್ಲಿ ಮರಾಠಾ ಸಾಮ್ರಾಜ್ಯದ ಪೇಶ್ವೆಯವರ ಮುಖ್ಯ ನ್ಯಾಯಾಧೀಶರಾಗಿದ್ದವರು ( ಅಥವಾ ಪಂತ್ ನ್ಯಾಯಾಧೀಶ್).
