Saturday, 12 August 2023

ಶ್ರೀ ಧೀರೇಂದ್ರ ತೀರ್ಥರು

 || ಶ್ರೀಮನ್ಮೂಲರಾಮೋ ವಿಜಯತೆ ||                             ||ಶ್ರೀಗುರುರಾಜೋ ವಿಜಯತೆ||

ಪೂರ್ವಾಶ್ರಮ-    

                          ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ದಿಗ್ವಿಜಯ ವಿದ್ಯಾಸಿಂಹಾಸನಾಧೀಶ್ವರರಾದ ಶ್ರೀ ಶ್ರೀ ೧೦೦೮ ಶ್ರೀ ಧೀರೇಂದ್ರ ತೀರ್ಥರ ಬಗ್ಗೆ ಮಾತನಾಡಲು ನನ್ನ ಯೋಗ್ಯತೆ ಸಾಲದು. ಶ್ರೀ ರಾಘವೇಂದ್ರ ಗುರುಗಳ ಪರಮಾನುಗ್ರಹಕ್ಕೆ ಪಾತ್ರರಾಗಿದ್ದ ಶ್ರೀ ವಾದೀಂದ್ರ ತೀರ್ಥರ ಗುರುಸರ್ವಭೌಮರ ಪೂರ್ವಾಶ್ರಮ ಪುತ್ರರ ಹೆಸರು ಶ್ರೀ ಜಯರಾಮಚಾರ್ಯರು ಎಂದು. ಶ್ರೀ ಜಯರಾಮಾಚಾರ್ಯರು ತಮ್ಮ ಸಕಲ ವಿದ್ಯಾಭ್ಯಾಸಗಳನ್ನು ತಮ್ಮ ತಂದೆಗಳಾದ ಶ್ರೀ ಶ್ರೀನಿವಾಸಾಚಾರ್ಯರಲ್ಲಿ ಅರ್ಥಾತ್  ಶ್ರೀಮದಾಚಾರ್ಯರ  ಪೀಠವನ್ನು  ಶ್ರೀಮದುಪೇಂದ್ರ ತೀರ್ಥರ ನಂತರ ಆಳಿದ ಶ್ರೀ ವಾದೀಂದ್ರ ತೀರ್ಥ ಗುರುಸರ್ವಭೌಮರಲ್ಲೇ ಆಯಿತು. ಅವರಲ್ಲಿ ಜನ್ಮ ಪಡೆಯುವದಲ್ಲದೇ ಅವರಲ್ಲೇ  ವಿದ್ಯಾಭ್ಯಾಸ ಮಾಡಿದ ಮಹಾ ಭಾಗ್ಯ ಶ್ರೀ ಧೀರೇಂದ್ರ ತೀರ್ಥ ಶ್ರೀಪಾದಂಗಳವರದ್ದು. ಆಚಾರ್ಯರು ಶ್ರೀ ವಾದೀಂದ್ರ ತೀರ್ಥರ ಪರಮಾನುಗ್ರಹದಿಂದ ವಿಲಕ್ಷಣ ಪಾಂಡಿತ್ಯ ಗಳಿಸಿ ಪೂರ್ವಾಶ್ರಮದಲ್ಲೇ ದೇಶದ ಉದ್ದಗಲಕ್ಕೂ ಸಂಚರಿಸಿ ವಾದಿ ದಿಗ್ವಿಜಯ , ಶ್ರೀಮದಾಚಾರ್ಯರ ಸಿದ್ಧಾಂತ ಮಂಡನೆ ಇತ್ಯಾದಿಗಳನ್ನು ಮಾಡಿ ಸಂಸ್ಥಾನದ ಸೇವೆಗೈಯುತ್ತಿದ್ದರು. ಶ್ರೀ ವಾದೀಂದ್ರ ತೀರ್ಥರು ತತ್ವಪ್ರಕಾಶಿಕಾ ಟಿಪ್ಪಣಿಯಾದ  'ಮೀಮಾಂಸಾ ನಯದರ್ಪಣ' , 'ತತ್ವೊದ್ಯೋತ ಟಿಪ್ಪಣಿ ', 'ಭೂಗೋಳ-ಖಗೋಳ ವಿಚಾರಃ' ,   ' ಜಗದ್ಗುರು ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಮಠಾರ್ಚಾ ಗತಿಕ್ರಮ' , 'ಗುರುಗುಣಸ್ತವನಂ','ನವ್ಯದುರುಕ್ತಿ ಶಿಕ್ಷಾ (ಪೂರ್ವಾಶ್ರಮದಲ್ಲಿ ರಚಿಸಿದ್ದು)' ಹೀಗೆ    ಅನೇಕ ಪ್ರೌಢ ಗ್ರಂಥಗಳನ್ನು ರಚಿಸಿದ್ದಾರೆ. ಅದರಲ್ಲಿ ಶ್ರೀ ರಾಘವೇಂದ್ರ ಗುರುಗಳ ಗ್ರಂಥರಚನ ಶೈಲಿ , ಸಾಮರ್ಥ್ಯ , ಮಹತ್ವ ಎಲ್ಲವನ್ನೂ ವಿಶಿಷ್ಟವಾಗಿ ಸ್ತವನ ಮಾಡುವ ಕೃತಿಯೇ "ಶ್ರೀಗುರುಗುಣಸ್ತವನ" . ಇದನ್ನು ಶ್ರೀ ವಾದೀಂದ್ರ  ತೀರ್ಥರು ಶ್ರೀ ಗುರುಸಾರ್ವಭೌಮರಿಗೆ ಸಮರ್ಪಿಸಿದಾಗ ಶ್ರೀರಾಯರ ಮೂಲಬೃಂದಾವನವು ಅವರ  ಸಮ್ಮತಿ ತಿಳಿಸಲು ಅಲುಗಾಡಿತು. ಅಂತಹ ಮಾಹಾನುಭಾವರು,ರಾಯರನ್ನು ಅರಿತವರು ಶ್ರೀ ವಾದೀಂದ್ರ ತೀರ್ಥರು. ಶ್ರೀ ಜಯರಾಮಚಾರ್ಯರು ಪ್ರೌಢಾವಸ್ಥೆಯಲ್ಲಿಯೇ 'ಗುರುಗುಣಸ್ತವನ'ದಲ್ಲಿ ಉತ್ಸುಕರಾಗಿ ,ಅದನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿ ಅದಕ್ಕೆ ತಮ್ಮದೇ ಒಂದು ಪ್ರೌಢ ವ್ಯಾಖ್ಯಾನ ರಚನೆ ಮಾಡಿ ಶ್ರೀ ವಾದೀಂದ್ರ ತೀರ್ಥ ಗುರುಸಾರ್ವಭೌಮರಲ್ಲಿ ಅದನ್ನು ಸಮರ್ಪಿಸಿದರು ( ಇದೆ ಗ್ರಂಥಕ್ಕೆ ಶ್ರೀ ವಾದೀಂದ್ರ ತೀರ್ಥರ ಪಟ್ಟದ ಶಿಷ್ಯ ಶ್ರೀ ವಸುಧೇಂದ್ರ ತೀರ್ಥರ ವ್ಯಾಖ್ಯಾನವೂ ಇದೆ ) .  ಆಗ ಶ್ರೀ ವಾದೀಂದ್ರ ತೀರ್ಥರು , ತಮ್ಮ ಪೂರ್ವಾಶ್ರಮ ಪುತ್ರರೂ ಹಾಗು ಸಂಸ್ಥಾನದ ಮಹಾ ಮೇಧಾವಿಗಳೂ ಆಗಿರುವ ಇವರು ಪೀಠಕ್ಕೆ ಬಂದರೆ ಸಂಸ್ಥಾನದ ಶ್ರೇಯೋಭಿವೃದ್ಧಿ ಆಗುವದು ಅನ್ನುವದನ್ನ ಅರಿತು  ಆಚಾರ್ಯರಿಗೆ ಸೂಕ್ಷ್ಮವಾಗಿ " ಜಯರಾಮ ! ಇಷ್ಟಾದರೆ ಸಾಲದಪ್ಪ ನಿಜವಾದ ವೈರಾಗ್ಯ ಬೇಕು " ಎಂದು ನುಡಿದರು.





              ಶ್ರೀ ಜಯರಾಮಚಾರ್ಯರು , ಶ್ರೀ ವಾದೀಂದ್ರರ ಮಾತಿನಂತೆ ವೈರಾಗ್ಯವನ್ನನುಸರಿಸುತ್ತ  ಸಂಚಾರ ಪ್ರಾರಂಭ ಮಾಡಿದರು . ಇತ್ತ ಕಾಲ ಕ್ರಮೇಣ ಶ್ರೀ ವಾದೀಂದ್ರ ತೀರ್ಥರು , ಶ್ರೀ ವಸುಧೇಂದ್ರ ತೀರ್ಥರಿಗೆ ಮಹಾ ಸಂಸ್ಥಾನ ಒಪ್ಪಿಸಿ ಮಂತ್ರಾಲಯದಲ್ಲಿ ಶ್ರೀ ಗುರುರಾಜರ ವೃಂದಾವನದ ಪಕ್ಕದಲ್ಲಿ , ಶ್ರೀ ಗುರುರಾಜರಿಗಾಗಿಯೇ ಸಂಕಲ್ಪಿಸಿದ ವೃಂದಾವನವನ್ನು , ಗುರುರಾಜರ ಅಣತಿಯಂತೆ , ಆದೇಶದಂತೆ ಶ್ರೀ ವಾದೀಂದ್ರ ತೀರ್ಥರು ಪ್ರವೇಶಿಸಿದರು. ಘಟನೆಯೊಂದೆ ಸಾಕು ಗುರುರಾಜರು ಶ್ರೀ ವಾದೀಂದ್ರ ತೀರ್ಥರ ಮೇಲೆ ಅದೆಷ್ಟು ಪ್ರೀತಿ ತೋರಿದ್ದಾರೆ ? ಅದೆಷ್ಟು ಅನುಗ್ರಹ ಮಾಡಿದ್ದಾರೆ ? ಅಂತ ತಿಳಿಯಲು. ಹೀಗೆ ಶ್ರೀ ವಾದೀಂದ್ರ ತೀರ್ಥರು ವೃಂದಾವನಸ್ಥರಾದ ವಿಷಯ ಕೇಳಿ ಶ್ರೀ ಜಯರಾಮಚರ್ಯರಿಗೆ ಸಿಡಿಲು ಬಡಿದಂತಾಗಿ ಅನಾಥ ಪ್ರಜ್ಞೆ ಮೂಡಿತು. ಆಚಾರ್ಯರ ವೈರಾಗ್ಯವೃದ್ದಿಗೆ ಇದು ಸಹ ಕಾರಣವಾಯಿತು .

ಸಕಲವಿದಜನಕುಮುದವನ ಕೌಮುದೀಶರು ಶ್ರೀಸುರೇಂದ್ರತೀರ್ಥರು

                                                ಸಕಲವಿದಜನಕುಮುದವನ ಕೌಮುದೀಶರು 

ಶ್ರೀಸುರೇಂದ್ರತೀರ್ಥರು





ಯಶ್ಚಕಾರೋಪವಾಸೇನ ತ್ರಿವಾರಂ ಭೂಪ್ರದಕ್ಷಿಣಮ್  । 

ತಸ್ಮೈ ನಮೋ ಯತೀಂದ್ರಾಯ ಶ್ರೀಸುರೇಂದ್ರತಪಸ್ವಿನೇ ।।



ಜಗದ್ಗುರು ಶ್ರೀಮಾನ್ಮಧ್ವಾಚಾರ್ಯರ ಪರಂಪರೆಯಲ್ಲಿ ವೇದಾಂತಸಾಮ್ರಾಜ್ಯವನ್ನು ಪರಿಪಾಲಿಸಿದ ಯತಿವರೇಣ್ಯರಲ್ಲಿ ಪ್ರಸಿದ್ಧರಾದವರು ಶ್ರೀರಾಘವೇಂದ್ರಗುರುಸಾರ್ವಭೌಮರ ಪೂರ್ವಿಕ ಗುರುಗಳಾದ, ಶ್ರೀಜಿತಾಮಿತ್ರತೀರ್ಥರ ಕರಕಮಲಸಂಜಾತರಾಗಿ ಸುದೀರ್ಘಕಾಲ ಶ್ರೀಮದಾಚಾರ್ಯರ ವೇದಾಂತ-ಸಿಂಹಾಸನದಲ್ಲಿ ವೇದಾಂತ-ಸಾಮ್ರಾಜ್ಯಾಧಿಪತಿಗಳಾಗಿ ವಿರಾಜಮಾನರಾಗಿದ್ದವರು ಶ್ರೀಸುರೇಂದ್ರತೀರ್ಥ ಗುರುಸಾರ್ವಭೌಮರು. ಬಾಲಯತಿಗಳಾದ ಶ್ರೀವಿಷ್ಣುತೀರ್ಥರನ್ನು ಶ್ರೀವ್ಯಾಸರಾಜರಿಂದ ಸ್ವೀಕರಿಸಿ ವೇದಾಂತಸಾಮ್ರಾಜ್ಯಾಭಿಷೇಕವನ್ನು ಮಾಡಿ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮಹಾಪೀಠದ ಮೇಲೆ ಮಂಡಿಸಿ ಶ್ರೀವಿಜಯೀ೦ದ್ರತೀರ್ಥರನ್ನಾಗಿಸಿ ವಿದ್ವದ್ವರೇಣ್ಯರಾಗಿ ಮೆರೆಯುವಂತೆ ಅನುಗ್ರಹಿಸಿದವರು ಶ್ರೀಸುರೇಂದ್ರತೀರ್ಥರು



ಶ್ರೀಸುರೇಂದ್ರತೀರ್ಥರ ಹೆಸರು ಕೇಳಿದೊಡನೆಯೇ ಪ್ರಾಯಃ ನಮ್ಮೆಲ್ಲರಿಗೂ ನೆನಪಾಗುವದು ಅವರು ಆಚರಿಸಿದ ಆದರ್ಶ ‘ತಪಸ್ಸು’. ಅಂತೆಯೇ 'ಮಹಾತಪಸ್ವಿ'ಗಳು ಎಂದು ಖ್ಯಾತನಾಮರು. ತಮ್ಮ ವಿಶಿಷ್ಟ ಅನುಸಂಧಾನದಿಂದ ಶ್ರೀಹರಿಯನ್ನು ಓಲೈಸಿಕೊಂಡು ಅನುಷ್ಠಾನಿಗಳಿಗೆ ಅನುಸಂಧಾನ-ಮಾನಸಪೂಜಾದಿ ಮಾರ್ಗಗಳನ್ನೂ ವಿಶಿಷ್ಟರೀತಿಯಲ್ಲಿ ತಿಳಿಸಿಕೊಟ್ಟ ಮಹಾನುಭಾವರು, ಮಾನಸಪುಜಾಧುರಂಧರರು ಶ್ರೀಸುರೇಂದ್ರತೀರ್ಥರು. 


ಯಶ್ಚಕಾರೋಪವಾಸೇನ ತ್ರಿವಾರಂ ಭೂಪ್ರದಕ್ಷಿಣಮ್  । 

ತಸ್ಮೈ ನಮೋ ಯತೀಂದ್ರಾಯ ಶ್ರೀಸುರೇಂದ್ರತಪಸ್ವಿನೇ ।।



ಎಂದು ಇವರ ಚರಮ ಶ್ಲೋಕವೇ ಸಾರುತ್ತಿರುವಂತೆ, ಅನಶನ (ಉಪವಾಸ) ವ್ರತದಿಂದ ಸಮಸ್ತ ಭಾರತಭೂಮಿಯನ್ನು ಮೂರುಬಾರಿ ಸಂಚರಿಸಿ ಭಗವಂತನ ಒಲುಮೆಯನ್ನು ಪಡೆದವರು.ಇವರ ಈ ಮಹಾಮಹಿಮೆಯನ್ನು ಶ್ರೀರಾಘವೇಂದ್ರವಿಜಯವೂ ದಾಖಲಿಸಿದೆ.  





ಶ್ರೀಸುಧೀಂದ್ರತೀರ್ಥರು, ವಿದ್ವಾಂಸರಾದ ವೆಂಕಣ್ಣಭಟ್ಟರನ್ನು ಸಂನ್ಯಸ್ತರನ್ನಾಗಿಸಿ 'ಶ್ರೀರಾಘವೇಂದ್ರತೀರ್ಥ' ಎಂಬ ಅಭಿದಾನವನ್ನು ಅವರಿಗೆ ದಯಪಾಲಿಸುವಾಗ,


ಶ್ರೀಸುರೇಂದ್ರವದಯನ್ ತಪಸ್ಯಯಾ ಶ್ರೀಜಯೀ೦ದ್ರ ಇವ ಕೀರ್ತಿಸಂಪದಾ ।

ವಿಶ್ರುತೋsಹಮಿವ ವಾದಸಂಗರೇ ರಾಘವೇಂದ್ರಯತಿರಾಟ್ ಸಮೇಧತಾಮ್ ।।


ಎಂದು, ತಮ್ಮ ತಪಸ್ಸಿಗೆ ನಿದರ್ಶನರಾದ ಪರಮಗುರುಗಳಾದ ಶ್ರೀಸುರೇಂದ್ರತೀರ್ಥರಂತಹ 'ತಪಸ್ಸು' ನಿಮ್ಮದಾಗಲಿ, ತಮ್ಮ ಗುರುಗಳಾದ ಶ್ರೀವಿಜಯೀ೦ದ್ರತೀರ್ಥರಂತಹ ಕೀರ್ತಿ ನಿಮ್ಮದಾಗಲಿ, ವಾದಕೌಶಲದಲ್ಲಿ ನಿಸ್ಸಿಮರಾದ (..ದ್ಯುತಯೇ ವಾದಿಭೀತಯೇ..) ತಮ್ಮಂತೆಯೇ 'ವಾದಕೌಶಲ' ನಿಮ್ಮದಾಗಲಿ ಎಂದು  ಮಾಡಿದ ಆಶೀರ್ವಚನವನ್ನು ಶ್ರೀರಾಘವೇಂದ್ರವಿಜಯ ಮಾಹಾಕಾವ್ಯ ಸುಂದರವಾಗಿ ದಾಖಲಿಸುತ್ತದೆ. ಅಷ್ಟರಮಟ್ಟಿಗೆ ತಪಸ್ಸಿಗೆ ಹೆಸರಾದವರು ಶ್ರೀಸುರೇಂದ್ರತೀರ್ಥರು

ಶ್ರೀಭುವನೇಂದ್ರತೀರ್ಥ ಶ್ರೀಪಾದಂಗಳವರು

    ಶ್ರೀಮದಾಚಾರ್ಯರ ಪೀಠದ ಮೇಲೆ ವಿರಾಜಮಾನರಾದ ಶ್ರೀಧೀರೇಂದ್ರತೀರ್ಥರ ವಿದ್ಯಾಶಿಷ್ಯರಾದವರು ಶ್ರೀಭುವನೇಂದ್ರತೀರ್ಥರು..



ಹೆಸರಿಗೆ ತಕ್ಕಂತೆ ಭೂಮಂಡಲದಲ್ಲೇ ಶ್ರೇಷ್ಠವಿದ್ವಾಂಸರಾಗಿ ಅನೇಕ ಭೂಪಾಲರಿಂದ ಮಾನಿತರಾದವರು.

ಶ್ರೀಮದಾಚಾರ್ಯರ ಪ್ರಣೀತವಾದ ಋಗ್ಭಾಷ್ಯ 40 ಋಕ್ಕುಗಳಿಗೆ ಅರ್ಥ ಹೇಳಿ ಶ್ರೀಮದಾಚಾರ್ಯರ ವಿಶೇಷಾನುಗ್ರಹಕ್ಕೇ ಪಾತ್ರರಾಗಿದ್ದ ಶ್ರೀಪಾದರು, ಶ್ರೀಮದಾಚಾರ್ಯರು ಗ್ರಂಥರೂಪದಲ್ಲಿ ಅರ್ಥವನ್ನು ಹೇಳದೇ ಬಿಟ್ಟ ಅನೇಕ ಋಕ್ಕುಗಳಿಗೆ ಅರ್ಥಹೇಳಿ ಶ್ರೀಮದಾಚಾರ್ಯರ ವಿಶೇಷಾನುಗ್ರಹಕ್ಕೆ ಪಾತ್ರರಾಗಿದ್ದ ಮಹಾನುಭಾವರು.

ಶ್ರೀಬ್ರಹ್ಮಕರಾರ್ಚಿತವಾದ ಮೂಲರಾಮದೇವರಿಗೆ ಸುಂದರವಾದ ಸುವರ್ಣಮಂಟಪವನ್ನು ಸಮರ್ಪಿಸಿ ವೈಭವಯುತವಾಗಿ ಸರ್ವೋತ್ತಮನ ಪೂಜೆಮಾಡಿದವರು ಶ್ರೀಭುವನೇಂದ್ರತೀರ್ಥರು..

ವಿದ್ಯಾಮಠದ ವಿದ್ವಚ್ಚಕ್ರವರ್ತಿ ಶ್ರೀವರದೇಂದ್ರರಲ್ಲಿ ಅಧ್ಯಯನ ಮಾಡಿ, ಶ್ರೀ ಧೀರೇಂದ್ರರ ಪರಮಾನುಗ್ರಹಕ್ಕೇ ಪಾತ್ರರಾಗಿದ್ದ ಶ್ರೀಜಗನ್ನಾಥದಾಸರು ಶ್ರೀಭುವನೇಂದ್ರ ತೀರ್ಥರ ಸಮಕಾಲೀನರು..

ದಾಸರು ಶ್ರೀಭುವನೇಂದ್ರ ತೀರ್ಥರ ಮಹಾಮಹಿಮೆಯನ್ನು ಬಹುವಾಗಿ ವರ್ಣಿಸುತ್ತಾರೆ.

""ಗಂಗಾ-ಪ್ರಯಾಗ, ಕಾಶಿ ಮುಂತಾದ ತೀರ್ಥಕ್ಷೇತ್ರಗಳ ಸಂದರ್ಶನದ ಫಲ ಕೇವಲ ಶ್ರೀ ಭುವನೇಂದ್ರ ತೀರ್ಥರ ದರ್ಶನಮಾತ್ರದಿಂದಲೇ ಲಭಿಸುವದು""ಎಂದು ಪರಮೋತೃಷ್ಟವಾದ ಅವರ ಮಹಿಮೆಯನ್ನು ತಿಳಿಸಿಕೊಟ್ಟಿದ್ದಾರೆ.
 

'ಜಗದ್ಗುರು ಶ್ರೀಸುಧೀಂದ್ರತೀರ್ಥರು'

 ರಾಜಾಧಿರಾಜ-ಕೋಟಿರ-ಕೋಟಿ-ಕೂಟಾರ್ಚಿತಾಂಘ್ರಯೇ ಶ್ರೀಸುಧೀಂದ್ರಯತಯೇ ನಮೋ ನಮಃ



'ಜಗದ್ಗುರು ಶ್ರೀಸುಧೀಂದ್ರತೀರ್ಥರು'


    ಶ್ರೀಹಂಸನಾಮಕನ ಸತ್ಪರಂಪರೆಯಲ್ಲಿ, ಶ್ರೀಮನ್ಮಧ್ವಾಚಾರ್ಯರಿಂದ ಹದಿನೈದನೇಯ ಪೀಠಾಧಿಪತಿಗಳಾಗಿ ಶ್ರೀಮನ್ಮಧ್ವಮತವನ್ನು ವಿಶಿಷ್ಟ ಆಯಾಮದಲ್ಲಿ ಪ್ರತಿಷ್ಠಾಪನೆ ಮಾಡಿದವರೇ ಶ್ರೀಸುಧೀಂದ್ರತೀರ್ಥರು.

    ಸಕಲವಿದಜನಕುಮುದವನ ಕೌಮುದೀಶರಾದ, ಭಗವಂತನ ವಿಶಿಷ್ಟಕರುಣೆಗೆ ಪಾತ್ರರಾದ, ಶ್ರೀಸುರೇಂದ್ರತೀರ್ಥರೇ ಇವರ ಆಶ್ರಮ ಗುರುಗಳು, ಚತುಷ್ಷಷ್ಟಿಕಲಾಪ್ರಾವೀಣ್ಯದಿಂದ ಆಸ್ತಿಕ್ಯವನ್ನು ಪುಷ್ಟೀಕರಿಸಿದ, ಚತುರಧಿಕಶತಗ್ರಂಥರತ್ನಪ್ರಣೇತರಾದ (104 ಗ್ರಂಥಗಳನ್ನು ಕರುಣಿಸಿದ),ಚಾತುರ್ಯಕ್ಕೆ ಹೆಸರಾದ ಶ್ರೀವಿಜಯೀಂದ್ರತೀರ್ಥ ಗುರುಸಾರ್ವಭೌಮರು ಇವರ ಗುರುಗಳಾದರೇ,ನಾಸ್ತಿಕ್ಯವನ್ನು ಒದ್ದೋಡಿಸಿದ, ಆಸ್ತಿಕರ ಆರಾಧ್ಯರಾದ, ಶ್ರೀಮನ್ಮಧ್ವಮತಸಂವರ್ಧಕರಾದ ಶ್ರೀಮನ್ಮಂತ್ರಾಲಯಪ್ರಭುಗಳು,ಹಾಗೂ ತಪಸ್ವಿಗಳಾದ ಗ್ರಂಥಕಾರರಾದ ಶ್ರೀಯಾದವೇಂದ್ರತೀರ್ಥರು ಇವರ ವಿದ್ಯಾಶಿಷ್ಯರು, ಆಶ್ರಮಶಿಷ್ಯರು.

    ಇಂತಹ ಲೋಕೋತ್ತರ ಕಾರ್ಯಗಳನ್ನು ಮಾಡಿದ ಗುರುಗಳನ್ನೂ, ಶಿಷ್ಯರನ್ನು ಪಡೆದ ಸ್ವಯಂ ಲೋಕೋತ್ತರ ಮಹಿಮೆಯನ್ನು ಹೊಂದಿದ ಮಹಾನುಭಾವರು ಶ್ರೀಸುಧೀಂದ್ರತೀರ್ಥರು.



ಶ್ರೀಸುಧೀಂದ್ರತೀರ್ಥರ ಆಶ್ರಮ:

ಶ್ರೀವ್ಯಾಸರಾಜರು ಬಾಲಸನ್ಯಾಸಿಗಳಾದ ಶ್ರೀವಿಷ್ಣುತೀರ್ಥರನ್ನು ಮೂಲರಾಮದೇವರ ಪೂಜಾರ್ಥವಾಗಿಯೇ ಶ್ರೀಸುರೇಂದ್ರ ತೀರ್ಥರಿಗೊಪ್ಪಿಸಿದಾಗ, ಸಂತುಷ್ಟರಾದ ಶ್ರೀಸುರೇಂದ್ರತೀರ್ಥರು ಅವರನ್ನು ಶ್ರೀಮಠದ ಸಂಪ್ರದಾಯಾನ್ವಯ ವಿದ್ಯುಕ್ತವಾಗಿ ದಂಡಪಲ್ಲಟಿಸಿ ಶ್ರೀವಿಜಯೀಂದ್ರತೀರ್ಥರು ಎಂಬ ಅಭಿದಾನವನ್ನು ದಯಪಾಲಿಸಿ ತಮ್ಮ ಪಟ್ಟದ ಶಿಷ್ಯರನ್ನಾಗಿ ಸ್ವೀಕಾರ ಮಾಡಿದರು.

ಶ್ರೀಮಧ್ವಾಚಾರ್ಯರ ವಿದ್ಯಾಸಿಂಹಾನಾಧೀಶ್ವರರಾದ ಶ್ರೀಸುಧರ್ಮೇಂದ್ರತೀರ್ಥ ಶ್ರೀಪಾದಂಗಳವರು : ಶ್ರೀಕೃಷ್ಣಾವಧೂತರು ಕಂಡಂತೆ


ಶ್ರೀಮಧ್ವಾಚಾರ್ಯರ ವಿದ್ಯಾಸಿಂಹಾನಾಧೀಶ್ವರರಾದ ಶ್ರೀಸುಧರ್ಮೇಂದ್ರತೀರ್ಥ ಶ್ರೀಪಾದಂಗಳವರು : ಶ್ರೀಕೃಷ್ಣಾವಧೂತರು ಕಂಡಂತೆ

ಶ್ರೀಮಧ್ವಾಚಾರ್ಯರ ವಿದ್ಯಾಸಿಂಹಾನಾಧೀಶ್ವರರಾದ ಶ್ರೀರಾಘವೇಂದ್ರಸ್ವಾಮಿಗಳವರ ಸದ್ವಂಶದಲ್ಲಿ ಉದಿಸಿದ ಪೂರ್ಣಚಂದ್ರಮರಾದ ಶ್ರೀಸುಧರ್ಮೇಂದ್ರತೀರ್ಥ ಶ್ರೀಪಾದಂಗಳವರು.

ಶ್ರೀಕೃಷ್ಣಾವಧೂತರು ಶ್ರೇಷ್ಠವಿದ್ವಾಂಸರು. ಶ್ರೀರಾಘವೇಂದ್ರಸ್ವಾಮಿಗಳಲ್ಲಿ ಅನನ್ಯವಾದ ಭಕ್ತಿಯನ್ನು ಮಾಡಿದವರು. ಒಂದು ಕಾಲದಲ್ಲಿ ವಿಲಾಸಿ ಜೀವನ ನಡೆಸಿದ್ದ ಅವರು ಶ್ರೀರಾಘವೇಂದ್ರಗುರುಗಳ ದಿವ್ಯ-ಪಾದ- ಪದ್ಮಾರಾಧನೆಯಲ್ಲಿಯೇ ಜೀವನ ಸವೆಸಿದ್ದು ಇತಿಹಾಸ. ಶ್ರೀರಾಯರ ಕೃಪಾಶೀರ್ವಾದದಿಂದ ಅನೇಕ ಮಂತ್ರಗಳ ಸಿದ್ಧಿಯನ್ನು ಪಡೆದು, ಪಾಂಡಿತ್ಯವನ್ನು ಸಂಪಾದಿಸಿ ಅನೇಕ ಕೃತಿಗಳನ್ನು ರಚಿಸಿದವರು. ಸಂಸ್ಕೃತದ ಸಾಹಿತ್ಯದಲ್ಲಿ ಅನೇಕ ಪ್ರಕಾರಗಳ ಕೃತಿಗಳನ್ನು ರಚಿಸಿದ ಕೀರ್ತಿ ಇವರದು. ಶ್ರೀರಾಘವೇಂದ್ರತಂತ್ರ, ಶ್ರೀರಾಘವೇಂದ್ರ ಅಕ್ಷರಮಾಲಿಕಾ ಸ್ತೋತ್ರ (ಬಹುತೇಕ ಎಲ್ಲರೂ ಕೇಳಿರಲೇ ಬಹುದಾದ ಶ್ರೀರಾಘವೇಂದ್ರಾರ್ಯ ಪಾಹಿಪ್ರಭೋ... ಎನ್ನುವ ಕೃತಿ) ಮುಂತಾದ ಅಪೂರ್ವ ಗ್ರಂಥಗಳ ಕರ್ತೃಗಳು ಇವರು.

ಇವರು ಶ್ರೀಮದಾಚಾರ್ಯರ ಸತ್ಪರಂಪರೆಯಲ್ಲಿ ಶ್ರೀಸುಜ್ಞಾನೇಂದ್ರತೀರ್ಥ ಶ್ರೀಪಾದಂಗಳವರ ಕರಕಮಲ ಸಂಜಾತರಾದ ಶ್ರೀಸುಧರ್ಮೇಂದ್ರತೀರ್ಥರ ಸಮಕಾಲೀನರು. ಶ್ರೀಸುಧರ್ಮೇಂದ್ರಸ್ವಾಮಿಗಳವರ ವಿಶಿಷ್ಟವಾದ ಆದರ್ಶ ಸಂನ್ಯಾಸ, ಶ್ರೇಷ್ಠ ವೈರಾಗ್ಯ, ಅಪ್ರತಿಮ ಪಾಂಡಿತ್ಯ, ಅನುಪಮ ಶ್ರೀಮನ್ಮೂಲರಾಮ- ದಿಗ್ವಿಜಯರಾಮ- ಜಯರಾಮ- ವೇದವ್ಯಾಸದೇವರ ವೈಭವದ ಮಹಾಪೂಜೆಯನ್ನು ಕಣ್ಣಾರೆ ಕಂಡವರು ಶ್ರೀಕೃಷ್ಣಾವಧೂತರು.

ಶ್ರೀಸುಧರ್ಮೇಂದ್ರತೀರ್ಥರ ದಿವ್ಯ-ಭವ್ಯ ವ್ಯಕ್ತಿತ್ವದ ಪರಿಚಯ ಮಾಡಿಸಲೋಸುಗ ಶ್ರೀಕೃಷ್ಣಾವಧೂತರು "ಶ್ರೀಸುಧರ್ಮೇಂದ್ರಮಹೋದಯಃ" ಎಂಬ ಕೃತಿಯನ್ನೇ ರಚನೆ ಮಾಡಿದ್ದಾರೆ. 

ಅತೋSಹಂ ಸುಧರ್ಮೇಂದ್ರಯತಿನಃ ಮುಹುಃ ಶ್ರಾವಂ ಶ್ರಾವಂ ಗುಣಮಣಿಮನರ್ಘ್ಯಂ ಚಿರತರಂ ಸ್ತೋತುಂ ಎಂದು ತ್ರಿಲೋಕ ವ್ಯಾಪಿಯಾದ ಶ್ರೀಸುಧರ್ಮೇಂದ್ರತೀರ್ಥರ ಗುಣಗಳನ್ನು ಕೇಳಿ ಕೇಳಿ ಮತ್ತೆ ಮತ್ತೆ ಸ್ತುತಿಸಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಶ್ರೀಸುಧರ್ಮೇಂದ್ರಸ್ವಾಮಿಗಳ ಬಗ್ಗೆ ಹೇಳುತ್ತ,

"ಸುಧರ್ಮೇಂದ್ರತೀರ್ಥರ ಶ್ರೀರಾಮದೇವರ ಪೂಜೆಯನ್ನು ನೋಡಲು ಸಾಕ್ಷಾತ್ ಇಂದ್ರದೇವರೇ ಭುವಿಗೆ ಬರುತ್ತಾರೆ"

 

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...