Saturday, 12 August 2023

ಶ್ರೀಭುವನೇಂದ್ರತೀರ್ಥ ಶ್ರೀಪಾದಂಗಳವರು

    ಶ್ರೀಮದಾಚಾರ್ಯರ ಪೀಠದ ಮೇಲೆ ವಿರಾಜಮಾನರಾದ ಶ್ರೀಧೀರೇಂದ್ರತೀರ್ಥರ ವಿದ್ಯಾಶಿಷ್ಯರಾದವರು ಶ್ರೀಭುವನೇಂದ್ರತೀರ್ಥರು..



ಹೆಸರಿಗೆ ತಕ್ಕಂತೆ ಭೂಮಂಡಲದಲ್ಲೇ ಶ್ರೇಷ್ಠವಿದ್ವಾಂಸರಾಗಿ ಅನೇಕ ಭೂಪಾಲರಿಂದ ಮಾನಿತರಾದವರು.

ಶ್ರೀಮದಾಚಾರ್ಯರ ಪ್ರಣೀತವಾದ ಋಗ್ಭಾಷ್ಯ 40 ಋಕ್ಕುಗಳಿಗೆ ಅರ್ಥ ಹೇಳಿ ಶ್ರೀಮದಾಚಾರ್ಯರ ವಿಶೇಷಾನುಗ್ರಹಕ್ಕೇ ಪಾತ್ರರಾಗಿದ್ದ ಶ್ರೀಪಾದರು, ಶ್ರೀಮದಾಚಾರ್ಯರು ಗ್ರಂಥರೂಪದಲ್ಲಿ ಅರ್ಥವನ್ನು ಹೇಳದೇ ಬಿಟ್ಟ ಅನೇಕ ಋಕ್ಕುಗಳಿಗೆ ಅರ್ಥಹೇಳಿ ಶ್ರೀಮದಾಚಾರ್ಯರ ವಿಶೇಷಾನುಗ್ರಹಕ್ಕೆ ಪಾತ್ರರಾಗಿದ್ದ ಮಹಾನುಭಾವರು.

ಶ್ರೀಬ್ರಹ್ಮಕರಾರ್ಚಿತವಾದ ಮೂಲರಾಮದೇವರಿಗೆ ಸುಂದರವಾದ ಸುವರ್ಣಮಂಟಪವನ್ನು ಸಮರ್ಪಿಸಿ ವೈಭವಯುತವಾಗಿ ಸರ್ವೋತ್ತಮನ ಪೂಜೆಮಾಡಿದವರು ಶ್ರೀಭುವನೇಂದ್ರತೀರ್ಥರು..

ವಿದ್ಯಾಮಠದ ವಿದ್ವಚ್ಚಕ್ರವರ್ತಿ ಶ್ರೀವರದೇಂದ್ರರಲ್ಲಿ ಅಧ್ಯಯನ ಮಾಡಿ, ಶ್ರೀ ಧೀರೇಂದ್ರರ ಪರಮಾನುಗ್ರಹಕ್ಕೇ ಪಾತ್ರರಾಗಿದ್ದ ಶ್ರೀಜಗನ್ನಾಥದಾಸರು ಶ್ರೀಭುವನೇಂದ್ರ ತೀರ್ಥರ ಸಮಕಾಲೀನರು..

ದಾಸರು ಶ್ರೀಭುವನೇಂದ್ರ ತೀರ್ಥರ ಮಹಾಮಹಿಮೆಯನ್ನು ಬಹುವಾಗಿ ವರ್ಣಿಸುತ್ತಾರೆ.

""ಗಂಗಾ-ಪ್ರಯಾಗ, ಕಾಶಿ ಮುಂತಾದ ತೀರ್ಥಕ್ಷೇತ್ರಗಳ ಸಂದರ್ಶನದ ಫಲ ಕೇವಲ ಶ್ರೀ ಭುವನೇಂದ್ರ ತೀರ್ಥರ ದರ್ಶನಮಾತ್ರದಿಂದಲೇ ಲಭಿಸುವದು""ಎಂದು ಪರಮೋತೃಷ್ಟವಾದ ಅವರ ಮಹಿಮೆಯನ್ನು ತಿಳಿಸಿಕೊಟ್ಟಿದ್ದಾರೆ.
 

ಶ್ರೀಭುವನೇಂದ್ರ ತೀರ್ಥರ ಮೂಲರಾಮನ ಪೂಜೆಯ ವೈಭವವನ್ನು,


""ಶ್ರೀಮೂಲದಿಗ್ವಿಜಯರಾಮ ವ್ಯಾಸಾಂಘ್ಹ್ರಿ ಯುಗ

ತಾಮರಸ ಭಜಕ ಈ ಭೂಯೊಳಿಹ

ಪಾಮರನ ಉದ್ಧರಿಸು ರವಿ ಸಾರ್ವ-

ಭೌಮ ನೀ ಸಂಚರಿಪ ಈ ಮಹೀತಳದಿ""

ಎಂದು ಗುರುಗಳನ್ನು ಶ್ರೀಜಗನ್ನಾಥದಾಸರು ಪ್ರಾರ್ಥಿಸಿದ್ದಾರೆ..

ಶ್ರೀಭುವನೇಂದ್ರ ತೀರ್ಥರ ಮತ್ತೊಂದು ಕೊಡುಗೆ. ಟಿಪ್ಪಣಿಕಾರರ ಪ್ರಪಂಚದಲ್ಲಿ ಅಜರಾಮರರಾದ ಶ್ರೀಮನ್ನ್ಯಾಯಸುಧಾ, ಭಾಗವತಾದಿ ಗ್ರಂಥಗಳಿಗೆ ಟಿಪ್ಪಣಿಯನ್ನು ಬರೆದ ಶ್ರೀವ್ಯಾಸತತ್ವಜ್ಙತೀರ್ಥರನ್ನು ಕೊಟ್ಟದ್ದು..

ಐಜೀ ವೆಂಕಟರಾಮಾಚಾರ್ಯರಿಗೆ ತುರ್ಯಾಶ್ರಮವನ್ನು ನೀಡಿ ಶ್ರೀವ್ಯಾಸತತ್ವಜ್ಙತೀರ್ಥರೆಂದು ನಾಮಕರಣ ಮಾಡಿ ಶ್ರೀವಿಬುಧೇಂದ್ರತೀರ್ಥರಿಗೆ ಸ್ವಪ್ನಲಬ್ಧವಾದ ಷೊಡಷಬಾಹು ನರಸಿಂಹದೇವರನ್ನು ಇವರಿಗೆ ಪ್ರದಾನಮಾಡಿದವರು ಶ್ರೀಭುವನೇಂದ್ರ ತೀರ್ಥರು..

ಶ್ರೀಮದಾಚಾರ್ಯರಿಂದ ಅನೂಚಾನವಾಗಿ ಶ್ರೀಪದ್ಮಾನಾಭತೀರ್ಥರು, ಶ್ರೀನರಹರಿ- ಅಕ್ಷೋಭ್ಯತೀರ್ಥರು, ಶ್ರೀಜಯತೀರ್ಥರು, ಶ್ರೀವಿಬುಧೇಂದ್ರ-ವಿಜಯೀಂದ್ರತೀರ್ಥರು ಹಾಗೂ ಗುರುಸಾರ್ವಭೌಮ ಶ್ರೀರಾಘವೇಂದ್ರತೀರ್ಥರೇ ಮೊದಲಾದ ತಪಸ್ವಿಗಳು ಬಂದ ವಿದ್ಯಾಮಠವೆಂಬ ಖ್ಯಾತಿಗೆ ಪಾತ್ರವಾದ ಶ್ರೀಮದಾಚಾರ್ಯರ ಮೂಲಮಹಾ ಸಂಸ್ಥಾನದ ಗುರುತಿನ ದ್ಯೋತಕವಾಗಿ

"ಶ್ರೀರಾಮೋ ಭಾತಿ ಸ ವ್ಯಾಸಃ ಶ್ರೀಮಧ್ವಾಸ್ಥಾನಸಂಸ್ಥಿತೈಃ

ಶ್ರೀರಾಘವೇಂದ್ರಸದ್ವಂಶೈಃ ಭುವನೇಂದ್ರೈಃ ಶ್ರಿಯಾರ್ಚಿತಃ"


ಎಂದು ರಾಯಸವನ್ನು ಹೊರಡಿಸಿದವರು ಶ್ರೀಭುವನೇಂದ್ರ ತೀರ್ಥರು..



ಶ್ರೀಗಳವರು ಮಹಾಸಂಸ್ಥಾನವನ್ನು 14 ವರ್ಷಗಳ ಕಾಲ ಆಳಿ ಶ್ರೀಸುಬೋಧೇಂದ್ರತೀರ್ಥರಿಗೆ ಆಶ್ರಮವನ್ನು ಕೊಟ್ಟು ಗದ್ವಾಲ್ ಮಹಾಸಂಸ್ಥಾನದ, ಮಂತ್ರಾಲಯ ಕ್ಷೇತ್ರಕ್ಕೇ ಸಮೀಪದಲ್ಲಿರುವ ರಾಜವಳ್ಳಿ ಎಂಬ ಗ್ರಾಮದಲ್ಲಿ ವೃಂದಾವನಸ್ಥರಾದರು.

ಇಂದಿಗೂ ಶ್ರೀಗುರುಸಾರ್ವಭೌಮರಂತೆ ಜಾತಿ-ಮತ ಭೇದವಿಲ್ಲದೇ ಬಂದ ಭಕುತರನ್ನು ಪೊರೆಯುತ್ತಿರುವ


ಶ್ರೀ ಮಧ್ವಾಚಾರ್ಯರ ಮತಾನುಗ ಹೆಮ್ಮೆಯ ಯತಿಗಳು ಶ್ರೀಭುವನೇಂದ್ರ ತೀರ್ಥರು..

ಇವರ ದೇಹವನ್ನು ಕಾರಣಾಂತರಗಳಿಂದ ಇತ್ತೀಚೆಗೆ ಹೊರತೆಗೆದು ಪುನಃ ಪ್ರತಿಷ್ಠಾಪನೆ ಮಾಡಲಾಯಿತು.

ಶ್ರೀಗಳವರ ದೇಹ ಯಾವುದೇ ವಿಕಾರಕ್ಕೊಳಗಾಗಿರಲಿಲ್ಲ ಎನ್ನುವದು ಇವರ ತಪಸ್ಸಿಗೆ ಹಿಡಿದ ಕೈಗನ್ನಡಿ..



ಭೂದೇವವಂದ್ಯಪಾದಾಬ್ಜಂ ಭೂತಿಮಂತಮಭೀಷ್ಟದಮ್ |

ಭೂತಲೇ ಸಾಧುವಿಖ್ಯಾತಂ ಭವನೇಂದ್ರಗುರುಂ ಭಜೇ ||

- ಸಮೀರ ಜೋಷಿ

No comments:

Post a Comment

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...