Saturday 12 August 2023

ಸಕಲವಿದಜನಕುಮುದವನ ಕೌಮುದೀಶರು ಶ್ರೀಸುರೇಂದ್ರತೀರ್ಥರು

                                                ಸಕಲವಿದಜನಕುಮುದವನ ಕೌಮುದೀಶರು 

ಶ್ರೀಸುರೇಂದ್ರತೀರ್ಥರು





ಯಶ್ಚಕಾರೋಪವಾಸೇನ ತ್ರಿವಾರಂ ಭೂಪ್ರದಕ್ಷಿಣಮ್  । 

ತಸ್ಮೈ ನಮೋ ಯತೀಂದ್ರಾಯ ಶ್ರೀಸುರೇಂದ್ರತಪಸ್ವಿನೇ ।।



ಜಗದ್ಗುರು ಶ್ರೀಮಾನ್ಮಧ್ವಾಚಾರ್ಯರ ಪರಂಪರೆಯಲ್ಲಿ ವೇದಾಂತಸಾಮ್ರಾಜ್ಯವನ್ನು ಪರಿಪಾಲಿಸಿದ ಯತಿವರೇಣ್ಯರಲ್ಲಿ ಪ್ರಸಿದ್ಧರಾದವರು ಶ್ರೀರಾಘವೇಂದ್ರಗುರುಸಾರ್ವಭೌಮರ ಪೂರ್ವಿಕ ಗುರುಗಳಾದ, ಶ್ರೀಜಿತಾಮಿತ್ರತೀರ್ಥರ ಕರಕಮಲಸಂಜಾತರಾಗಿ ಸುದೀರ್ಘಕಾಲ ಶ್ರೀಮದಾಚಾರ್ಯರ ವೇದಾಂತ-ಸಿಂಹಾಸನದಲ್ಲಿ ವೇದಾಂತ-ಸಾಮ್ರಾಜ್ಯಾಧಿಪತಿಗಳಾಗಿ ವಿರಾಜಮಾನರಾಗಿದ್ದವರು ಶ್ರೀಸುರೇಂದ್ರತೀರ್ಥ ಗುರುಸಾರ್ವಭೌಮರು. ಬಾಲಯತಿಗಳಾದ ಶ್ರೀವಿಷ್ಣುತೀರ್ಥರನ್ನು ಶ್ರೀವ್ಯಾಸರಾಜರಿಂದ ಸ್ವೀಕರಿಸಿ ವೇದಾಂತಸಾಮ್ರಾಜ್ಯಾಭಿಷೇಕವನ್ನು ಮಾಡಿ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮಹಾಪೀಠದ ಮೇಲೆ ಮಂಡಿಸಿ ಶ್ರೀವಿಜಯೀ೦ದ್ರತೀರ್ಥರನ್ನಾಗಿಸಿ ವಿದ್ವದ್ವರೇಣ್ಯರಾಗಿ ಮೆರೆಯುವಂತೆ ಅನುಗ್ರಹಿಸಿದವರು ಶ್ರೀಸುರೇಂದ್ರತೀರ್ಥರು



ಶ್ರೀಸುರೇಂದ್ರತೀರ್ಥರ ಹೆಸರು ಕೇಳಿದೊಡನೆಯೇ ಪ್ರಾಯಃ ನಮ್ಮೆಲ್ಲರಿಗೂ ನೆನಪಾಗುವದು ಅವರು ಆಚರಿಸಿದ ಆದರ್ಶ ‘ತಪಸ್ಸು’. ಅಂತೆಯೇ 'ಮಹಾತಪಸ್ವಿ'ಗಳು ಎಂದು ಖ್ಯಾತನಾಮರು. ತಮ್ಮ ವಿಶಿಷ್ಟ ಅನುಸಂಧಾನದಿಂದ ಶ್ರೀಹರಿಯನ್ನು ಓಲೈಸಿಕೊಂಡು ಅನುಷ್ಠಾನಿಗಳಿಗೆ ಅನುಸಂಧಾನ-ಮಾನಸಪೂಜಾದಿ ಮಾರ್ಗಗಳನ್ನೂ ವಿಶಿಷ್ಟರೀತಿಯಲ್ಲಿ ತಿಳಿಸಿಕೊಟ್ಟ ಮಹಾನುಭಾವರು, ಮಾನಸಪುಜಾಧುರಂಧರರು ಶ್ರೀಸುರೇಂದ್ರತೀರ್ಥರು. 


ಯಶ್ಚಕಾರೋಪವಾಸೇನ ತ್ರಿವಾರಂ ಭೂಪ್ರದಕ್ಷಿಣಮ್  । 

ತಸ್ಮೈ ನಮೋ ಯತೀಂದ್ರಾಯ ಶ್ರೀಸುರೇಂದ್ರತಪಸ್ವಿನೇ ।।



ಎಂದು ಇವರ ಚರಮ ಶ್ಲೋಕವೇ ಸಾರುತ್ತಿರುವಂತೆ, ಅನಶನ (ಉಪವಾಸ) ವ್ರತದಿಂದ ಸಮಸ್ತ ಭಾರತಭೂಮಿಯನ್ನು ಮೂರುಬಾರಿ ಸಂಚರಿಸಿ ಭಗವಂತನ ಒಲುಮೆಯನ್ನು ಪಡೆದವರು.ಇವರ ಈ ಮಹಾಮಹಿಮೆಯನ್ನು ಶ್ರೀರಾಘವೇಂದ್ರವಿಜಯವೂ ದಾಖಲಿಸಿದೆ.  





ಶ್ರೀಸುಧೀಂದ್ರತೀರ್ಥರು, ವಿದ್ವಾಂಸರಾದ ವೆಂಕಣ್ಣಭಟ್ಟರನ್ನು ಸಂನ್ಯಸ್ತರನ್ನಾಗಿಸಿ 'ಶ್ರೀರಾಘವೇಂದ್ರತೀರ್ಥ' ಎಂಬ ಅಭಿದಾನವನ್ನು ಅವರಿಗೆ ದಯಪಾಲಿಸುವಾಗ,


ಶ್ರೀಸುರೇಂದ್ರವದಯನ್ ತಪಸ್ಯಯಾ ಶ್ರೀಜಯೀ೦ದ್ರ ಇವ ಕೀರ್ತಿಸಂಪದಾ ।

ವಿಶ್ರುತೋsಹಮಿವ ವಾದಸಂಗರೇ ರಾಘವೇಂದ್ರಯತಿರಾಟ್ ಸಮೇಧತಾಮ್ ।।


ಎಂದು, ತಮ್ಮ ತಪಸ್ಸಿಗೆ ನಿದರ್ಶನರಾದ ಪರಮಗುರುಗಳಾದ ಶ್ರೀಸುರೇಂದ್ರತೀರ್ಥರಂತಹ 'ತಪಸ್ಸು' ನಿಮ್ಮದಾಗಲಿ, ತಮ್ಮ ಗುರುಗಳಾದ ಶ್ರೀವಿಜಯೀ೦ದ್ರತೀರ್ಥರಂತಹ ಕೀರ್ತಿ ನಿಮ್ಮದಾಗಲಿ, ವಾದಕೌಶಲದಲ್ಲಿ ನಿಸ್ಸಿಮರಾದ (..ದ್ಯುತಯೇ ವಾದಿಭೀತಯೇ..) ತಮ್ಮಂತೆಯೇ 'ವಾದಕೌಶಲ' ನಿಮ್ಮದಾಗಲಿ ಎಂದು  ಮಾಡಿದ ಆಶೀರ್ವಚನವನ್ನು ಶ್ರೀರಾಘವೇಂದ್ರವಿಜಯ ಮಾಹಾಕಾವ್ಯ ಸುಂದರವಾಗಿ ದಾಖಲಿಸುತ್ತದೆ. ಅಷ್ಟರಮಟ್ಟಿಗೆ ತಪಸ್ಸಿಗೆ ಹೆಸರಾದವರು ಶ್ರೀಸುರೇಂದ್ರತೀರ್ಥರು



ಶ್ರೀಸುರೇಂದ್ರತೀರ್ಥರಿಗೂ ಹಾಗೂ ಗಜಗಹ್ವರವಾಸಿ ಶ್ರೀವ್ಯಾಸರಾಜಗುರುಸಾರ್ವಭೌಮರಿಗೂ ಇದ್ದ ಅಪೂರ್ವಮೈತ್ರಿ ಇತಿಹಾಸದಲ್ಲಿ ಅಜರಾಮರ. ಅದಲ್ಲದೇ ವಿಜಯನಗರ ಸಾಮ್ರಾಟರಾಗಿದ್ದ ಶ್ರೀಕೃಷ್ಣದೇವರಾಯರೂ ಸಹ ಶ್ರೀಸುರೇಂದ್ರತೀರ್ಥರಲ್ಲಿ ವಿಶೇಷ ಗೌರವಾದರಗಳಿನ್ನಿಟ್ಟುಕೊಂಡು ಶ್ರೀಮಠಕ್ಕೆ ವಿಶೇಷ ಗೌರವ ಸಲ್ಲುವಂತೆ ವ್ಯವಸ್ಥೆಮಾಡಿದ್ದರ ಬಗ್ಗೆ ದಾಖಲೆಗಳು ದೊರೆಯುತ್ತವೆ. 'ಶ್ರೀಮನ್ಮೂಲರಾಮಚಂದ್ರದೇವರ' ಪಾದಪದ್ಮಾರಾಧಕರಾದ ಶ್ರೀಸುರೇಂದ್ರತೀರ್ಥರಿಗೆ    ಶ್ರೀಕೃಷ್ಣದೇವರಾಯರು ಅನೇಕ ಗ್ರಾಮಗಳನ್ನು ದಾನವಾಗಿ ಕೊಟ್ಟ ಶಾಸನದ ದಾಖಲೆಗಳು ಕೂಡ ಇವೆ. ಶ್ರೀಸುರೇಂದ್ರತೀರ್ಥರು ಹಂಪಿಯಲ್ಲಿಯೇ ನೆಲೆಸಿದ್ದರ ಬಗ್ಗೆ, ಅಲ್ಲಿ ಸಂಸ್ಥಾನ ನೆಲೆಗೊಂಡಿದ್ದರ ಬಗ್ಗೆ ಹೇರಳ ದಾಖಲೆಗಳು, ಕುರುಹುಗಳು ದೊರೆತಿವೆ. 


ಶಾಸನಗಳಲ್ಲಿ ಶ್ರೀಸುರೇಂದ್ರತೀರ್ಥರ ವಿದ್ಯಾವೈಭವ : 


ಕ್ರಿ.ಶ. ೧೫೧೩ರಲ್ಲಿ ವಿಜಯನಗರ ಅರಸ ಅರವೀಡು ರಾಮರಾಯನು ( ಅಳಿಯ ರಾಮರಾಯನ ತಾತ) ಶ್ರೀಸುರೇಂದ್ರತೀರ್ಥರಿಗೆ ೬ ಗ್ರಾಮಗಳನ್ನು ದಾನವಾಗಿ ಕೊಟ್ಟ ತೆಲುಗು ಲಿಪಿಯ ಸಂಸ್ಕೃತ ತಾಮ್ರಶಾಸನದಲ್ಲಿ





ಶ್ರೀಮತ್ಪರಮಹಂಸಾಖ್ಯಪರಿವ್ರಾಡೀಶತಾಜುಷಾಮ್ । 

ಪದವಾಕ್ಯಪ್ರಮಾಣಾಭ್ಧೀಪಾರೀಣಾನಾಂ ನಿರಂಕುಶಮ್ ।। 


ಶ್ರೀಮದ್ವೈಷ್ಣವಸಿದ್ಧಾಂತ ಸಂಸ್ಥಾಪನಗರಿಯಸಾಂ । 

ರಾಮಚಂದ್ರಪದಾಂಭೋಜಪೂಜಕಾನಾಮ್ ಮುದಾ ಸದಾ ।। 


ಶ್ರೀಜಿತಾಮಿತ್ರತೀರ್ಥಾರ್ಯಪಾಣಿಪಂಕಜಜನ್ಮನಾಮ್ । 

ಸರ್ವತಂತ್ರಸ್ವತಂತ್ರ ಶ್ರೀರಘುನಂದನಯೋಗಿನಾಮ್ ।। 


ನಿಜಾಂತೆವಾಸಿನೇ ಮಧ್ವಸಿದ್ಧಾಂತಾರ್ಥೋಪದೇಶಿನೇ । 

ವೇದವೇದಾಂಗತತ್ವಾರ್ಥವೇದಿನೆ ಜಿತವಾದಿನೇ ।। 


ಅಶೇಷತೀರ್ಥಸಂಚಾರಪವಿತ್ರೀಕೃತಚೇತಸೇ । 

ವಿದ್ವಕುಮುದಸಂದೋಹಕೌಮುದೀಪ್ರಿಯಬಂಧವೇ ।। 


ರಾಜಾಧಿರಾಜಕೋಟಿರಕೋಟಿಕೂಟಾರ್ಚಿತಾಂಘ್ರಯೇ । 

ಶ್ರೀಸುರೇಂದ್ರಯತೀಂದ್ರಾಯ ಭಕ್ತಾಭೀಷ್ಟಪ್ರದಾಯಿನೇ ।। 


ಎಂಬ ಶ್ಲೋಕಗಳಿಂದ ಶ್ರೀಮದಾಚಾರ್ಯರ ಪೀಠವನ್ನಲಂಕರಿಸಿದ ಶ್ರೀಸುರೇಂದ್ರತೀರ್ಥರ ಮಹೋನ್ನತ ವ್ಯಕ್ತಿತ್ವವನ್ನು ಪರಿಚಯಿಸಿಕೊಳ್ಳಬಹುದಾಗಿದೆ. ಶ್ರೀಮದಾಚಾರ್ಯರ ನಿಜವಾದ ವೈಷ್ಣವಸಿದ್ಧಾಂತದ ಪ್ರತಿಷ್ಠಾಪನಾ ದೀಕ್ಷಾಬದ್ಧರಾಗಿ, ಉಪದೇಶಕರಾಗಿದ್ದವರು, ಶ್ರೀಮನ್ಮೂಲರಾಮಚಂದ್ರದೇವರ ಪಾದಪದ್ಮಾರಾಧಕರಾಗಿದ್ದವರು, ಅಶೇಷತೀರ್ಥ ಸಂಚಾರಕ್ರಮದಿಂದ ಅತ್ಯಂತ ಪವಿತ್ರರಾಗಿದ್ದವರು, ವಿದ್ವಾಂಸರಲ್ಲಿ ಅತ್ಯಂತ ಪ್ರಿಯರಾಗಿದ್ದವರು, ರಾಜಾಧಿರಾಜರ ಕಿರೀಟಗಳ ಸಮೂಹವು ಶ್ರೀಸುರೇಂದ್ರತೀರ್ಥ ಶ್ರೀಪಾದಂಗಳವರ ಪಾದದಲ್ಲಿ ಬಾಗಿ ಪೂಜೆ ಸಲ್ಲಿಸುತ್ತಿದ್ದವು ಎಂಬ ವರ್ಣನೆ ನೋಡಿದರೇ ಶ್ರೀಸುರೇಂದ್ರತೀರ್ಥಗುರುಸಾರ್ವಭೌಮರ ಭವ್ಯವ್ಯಕ್ತಿತ್ವದ ಪರಿಚಯ ನಮಗಾಗುತ್ತದೆ.  

ಇದೇ ಶ್ಲೋಕಗಳಿಂದಲೇ ಶ್ರೀಸುರೇಂದ್ರತೀರ್ಥಗುರುಸಾರ್ವಭೌಮರನ್ನು ವರ್ಣಿಸಿದ ಬಗ್ಗೆ ಅವರಿಗೇ  ಕೊಡಲ್ಪಟ್ಟ ದಾನಶಾಸನಗಳಲ್ಲಿ ದೊರೆಯುತ್ತವೆ. ಅಂತಹ ಶ್ರೇಷ್ಠ ಯತಿಶೇಖರರು ಶ್ರೀಸುರೇಂದ್ರತೀರ್ಥರು. ಇದೇ ವಿಜಯನಗರ ಸಂಸ್ಥಾನದಲ್ಲಿ ಶ್ರೀಸುರೇಂದ್ರತೀರ್ಥರು ವಿಶೇಷವಾಗಿ ಪೂಜೆಗೊಳ್ಳುವ ಯತಿಶೇಖರರು ಆಗಿದ್ದರು ಎನ್ನಲು ದಾಖಲೆಗಳು ದೊರೆಯುತ್ತವೆ. ವಿಜಯವಿಠಲದೇವಾಲಯದ ಉತ್ತರಭಾಗದಲ್ಲಿರುವ ಮಠವನ್ನು ಶ್ರೀಸುರೇಂದ್ರತೀರ್ಥರಿಗೇ  ಸಮರ್ಪಿಸಲಾಗಿತ್ತು. 






ಅದರ ಕುರುಹಾಗಿ 'ಶ್ರೀಸುರೇಂದ್ರವಡೆಯರು' ಎಂಬ ಶಿಲಾಲೇಖ ಇಂದಿಗೂ ಕಾಣಲು ದೊರೆಯುವದು. 


ಇದಲ್ಲದೇ ಇನ್ನು ಅನೇಕ ಶಾಸನಗಳಲ್ಲಿ ರಾಜಾಧಿರಾಜರುಗಳಿಂದ ಪೂಜ್ಯರಾಗಿದ್ದ ಶ್ರೀಸುರೇಂದ್ರತೀರ್ಥರನ್ನು "ಸಕಲವಿದಜನಕುಮುದವನ ಕೌಮುದೀಶರು” - ಸರ್ವಶಾಸ್ತ್ರಪಾರಂಗತರಾದ ಪಂಡಿತರೆಂಬ ನೈದಿಲೆಯ ವನವನ್ನು ಅರಳಿಸುವ ಬೆಳದಿಂಗಳಿಗೆ ಒಡೆಯನಾದ ಚಂದ್ರ ಎಂದು ವರ್ಣಿಸಿ ಅವರ ವಿದ್ಯಾಪರಿಣಿತಿಯನ್ನು ಗೌರವಪೂರ್ಣವಾಗಿ ದಾಖಲಿಸಿದ ಉದಾಹರಣೆ ನಮ್ಮ ಮುಂದೆ ಇದೆ. ಅದರಂತೆಯೇ 'ದುರ್ವಾದಿಸರ್ವಸ್ವ೦ವಸಾಸಹಾರಿಗಳುಂ - ಎಂದು ಅವರನ್ನು ಕರೆದು ಅವರು ದುರ್ವಾದಿಗಳನ್ನು ಮರ್ದಿಸಿದವರು ಎಂದು ವಿಶೇಷವಾಗಿ ವರ್ಣಿಸಲಾಗಿದೆ. 


ಇದಲ್ಲದೇ, ಶ್ರೀಮನ್ಮಧ್ವಾಚಾರ್ಯರಿಂದಪ್ರವರ್ತಿತವಾದ ಶ್ರಿರಾಜೇಂದ್ರಮಠೀಯ ಪೀಠಾಧಿಪತಿಗಳಾಗಿದ್ದ ಶ್ರೀವ್ಯಾಸರಾಜ ಗುರುಸಾರ್ವಭೌಮರ ವಿದ್ಯಾಶಿಷ್ಯರಾಗಿದ್ದು ಅವರ ಗರಡಿಯಲ್ಲೇ ಪಳಗಿದ, ಮಾಹಾಮೇಧಾವಿಗಳಾದ ಬಾಲಯತೀಶ್ವರರಾದ ಶ್ರೀವಿಷ್ಣುತೀರ್ಥರನ್ನು ಶಿಷ್ಯರಾಗಿ ಸ್ವೀಕರಿಸಿ ಶ್ರೀಮನ್ಮಧ್ವಾಚಾರ್ಯರಿಂದಪ್ರವರ್ತಿತವಾದ ಶ್ರೀಕವೀಂದ್ರತೀರ್ಥರ ಪರಂಪರೆಯಲ್ಲಿ ಪೀಠಾಧಿಪತಿಗಳಾಗಿಸಿ ಶ್ರೀವಿಜಯೀ೦ದ್ರತೀರ್ಥರು ಎಂಬ ಅಭಿಧಾನವನ್ನು ಅವರಿಗಿತ್ತು , ಅವರ ಮೇಲೆ ಪೂರ್ಣಾನುಗ್ರಹ ಮಾಡಿದ ಮಹಾನುಭಾವರು ಶ್ರೀಸುರೇಂದ್ರತೀರ್ಥರು. ಶ್ರೀಸುರೇಂದ್ರತೀರ್ಥರ ಮೇಲೆ ಹಾಗೂ ವಿದ್ಯಾಗುರುಗಳಾದ ಶ್ರೀವ್ಯಾಸರಾಜರ ಮೇಲೆ ಶ್ರೀವಿಜಯೀ೦ದ್ರತೀರ್ಥರಿಗಿದ್ದ ಅಪ್ರತಿಮ ಗುರುಭಕ್ತಿ ವರ್ಣಾನಾತೀತ. ತಮ್ಮ ಬಹುತೇಕ ಗ್ರಂಥಗಳಲ್ಲಿ ಈ ಇಬ್ಬರು ಯತೀಶ್ವರರನ್ನು ವಿಶೇಷವಾಗಿ ಸ್ಮರಣೆಮಾಡಿದ್ದನ್ನು ಕಾಣಬಹುದು. 




ಶ್ರೀವಿಜಯೀ೦ದ್ರತೀರ್ಥಗುರುಸಾರ್ವಭೌಮರು  ತಮ್ಮ ಗ್ರಂಥಗಳಲ್ಲಿ, 


"ಶ್ರೀಸುರೇಂದ್ರಗುರೋ: ಪಾದಪದ್ಮೇ ರಾಗಸ್ಯ ಪೀಡನಾತ್ । 

ರಕ್ತೇನಲದಲೋಪೇತೇ ಸೇವೇ ಶಿಷ್ಯಾಲಿಸೇವಿತೇ ।।" 


ಎಂದು, ಶ್ರೀಸುರೇಂದ್ರತೀರ್ಥರು ಅನೇಕ ಶಿಷ್ಯಸಮೂಹಗಳಿಂದ ಸೇವಿತರಾದವರು ಎಂಬುದನ್ನು ದಾಖಲಿಸುವ ಮೂಲಕ  ಅವರ ಗುರುಗಳ ವಿದ್ಯಾವೈಭವನ್ನು ಸ್ತುತಿಸಿದ್ದಾರೆ. 


ಸುರೇಂದ್ರನಾದ ಮೂಲರಾಮನ ವೈಭವದಿ ಅರ್ಚಿಸಿ-ಮೆಚ್ಚಿಸಿದ ಶ್ರೀಸುರೇಂದ್ರತೀರ್ಥ ಗುರುಸಾರ್ವಭೌಮರು: 


ಭಗವತ್ಪ್ರೀತಿಗಾಗಿ ಉಪವಾಸದಿಂದ ಭೂಮಂಡಲ ಪ್ರದೀಕ್ಷಿಣೆಯನ್ನು ಕೈಕೊಂಡ, ಮಾನಸಪುಜಾನಿಸ್ಸಿಮರಾದ, ತುಳಸೀವನವನ್ನೇ ತಮ್ಮ ಉಪಾಸ್ಯ ಶ್ರೀಮನ್ಮೂಲರಾಮನಿಗಾಗಿ ಸಮರ್ಪಿಸಿದ ವ್ಯಾಪ್ತ ಉಪಾಸಕರಾಗಿದ್ದ ಮಹನೀಯರು ಆ ಭಗವಂತನನ್ನು ಕಾಣುವ ಬಗೆಯೇ ಪರಮಾದ್ಭುತ. ಚತುರ್ಯುಗಮೂರ್ತಿ ಚತುರ್ಮುಖಬ್ರಹ್ಮಕರಾರ್ಚಿತ ಶ್ರೀಮೂಲರಾಮದೇವರು, ಶ್ರೀಸರ್ವಜ್ಞಾಚಾರ್ಯ ಕರಕಮಲಾರ್ಚಿತನಾದ ಶ್ರೀದಿಗ್ವಿಜಯರಾಮದೇವರು ಹಾಗೂ ಶ್ರೀಜಯತೀರ್ಥರ ಕರಾರ್ಚಿತ ಶ್ರೀಜಯರಾಮದೇವರು, ವೇದವ್ಯಾಸಪ್ರಣೀತ ಎರೆಡು ವ್ಯಾಸಮುಷ್ಠಿಗಳೊಂದಿಗೆ ಪರಂಪರಾಪ್ರಾಪ್ತವಾಗಿ ಪೂಜೆಗೊಳ್ಳುತ್ತ ಬಂದ ಎಲ್ಲ ಮಹಾಸಂಸ್ಥಾನ ಪ್ರತಿಮೆಗಳೊಂದಿಗೆ ತಾವೇ ಶ್ರೀರುಗ್ಮಿಣೀ-ಸತ್ಯಭಾಮಾಸಮೇತ ಶ್ರೀವಿಜಯವಿಠ್ಠಲದೇವರನ್ನು ಅರ್ಚಿಸಿ ಮೆಚ್ಚಿಸಿದವರು ಶ್ರೀಸುರೇಂದ್ರತೀರ್ಥರು. ಆ ಮಹಾತಪಸ್ವಿಗಳಿಂದ, ಭಗವಂತನ ಸಾಕ್ಷಾತ್ ಅನುಗ್ರಹ ಪಡೆದು ಸಮಸ್ತ ತುಳಸಿವನವನ್ನೇ ಅವನಿಗರ್ಪಿಸಿ ಮೆರೆದ ಯತೀಶ್ವರರಾದ ಶ್ರೀಸುರೇಂದ್ರತೀರ್ಥರ ಕರಸ್ಪರ್ಶಮಾತ್ರದಿಂದಲೇ ದಿವ್ಯಸನ್ನಿಧಾನೋಪೇತವಾದ ಈ ಪ್ರತಿಮೆಗಳನ್ನು ಇಂದಿಗೂ ಮಹಾಸಂಸ್ಥಾನದ ಶ್ರೀಮನ್ಮೂಲರಾಮ-ವೇದವ್ಯಾಸದೇವರ ಪೂಜಾಕಾಲದಲ್ಲಿ ಕಾಣಬಹುದು. 















ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ-ಮಾಹಾಸಂಸ್ಥಾನ ಶ್ರೀರಾಘವೇಂದ್ರಸ್ವಾಮಿಗಳವರ ಮಠದಲ್ಲಿ ನಿತ್ಯವೂ ಪೂಜೆಗೊಳ್ಳುವ 

       ಶ್ರೀಸುರೇಂದ್ರತೀರ್ಥರ ಕರಕಮಲಾರ್ಚಿತ 

ಶ್ರೀರುಗ್ಮಿಣೀ-ಸತ್ಯಭಾಮಾಸಮೇತ ಶ್ರೀವಿಜಯವಿಠ್ಠಲದೇವರು  




ಕರ್ನಾಟಕದ ಹಳೆಯ ಬಳ್ಳಾರಿ ಜಿಲ್ಲೆಯ ಕಂಪ್ಲಿ ಕೊಟ್ಟಾಲ ಸಮೀಪದ ಮುದ್ದಾಪುರ ಗ್ರಾಮದಲ್ಲಿ ಶ್ರೀಸುರೇಂದ್ರತೀರ್ಥ ಶ್ರೀಪಾದಂಗಳವರು ಶ್ರೀವೆಂಕಟೇಶ್ವರಸ್ವಾಮಿಯನ್ನು ಪ್ರತಿಷ್ಠಾಪಿಸಿದ್ದಾರೆ. ಅದೇ ದೇವಸ್ಥಾನದ ಹೊರಭಾಗದಲ್ಲಿ ಈ ಬಗ್ಗೆ ಶಿಲಾಶಾಸನವೂ ಇದೆ. ಇದೇ ದೇವಸ್ಥಾನಕ್ಕೆ ಶ್ರೀಸುರೇಂದ್ರಗುರುಸಾರ್ವಭೌಮರ ಕಾಲದಲ್ಲಿಯೇ ಅನೇಕ ರಾಜ-ಮಹಾರಾಜರುಗಳು, ಆಡಳಿತಗಾರರು, ಶಾನುಭೋಗರುಗಳು ತಮ್ಮ ಆದಾಯವನ್ನು ಸಮರ್ಪಿಸಿದ ವಿವರಗಳುಳ್ಳ ಶಾಸನಗಳೂ ದೊರೆಯುತ್ತವೆ. 


ಶ್ರೀಸುರೇಂದ್ರತೀರ್ಥ ಕರಕಮಲ-ಪ್ರತಿಷ್ಠಿತ ಶ್ರೀಶ್ರೀನಿವಾಸದೇವರು, ಮುದ್ದಾಪುರ 




ಶ್ರೀಸುರೇಂದ್ರಮುನಿಯ ಕರದೊಳು ಮೆರೆದ ಶ್ರೀಮೂಲರಾಮಚಂದ್ರ:



ಶ್ರೀರಘುನಂದನತೀರ್ಥರ ಕರಕಮಲೋದ್ಭವರಾದ ಶ್ರೀಸುರೇಂದ್ರತೀರ್ಥರು ಅವರಿಂದಲೇ ಶ್ರೀಮನ್ಮೂಲರಾಮಚಂದ್ರದೇವರ ಶುಭವಿಗ್ರಹ ಪೂಜೆಯನ್ನು ಮಾಡುವ ಮಹಾಭಾಗ್ಯ ಪಡೆದುಕೊಂಡವರು. ಶ್ರೀವಿಜಯನಗರ ಸಾಮ್ರಾಟರಾದ ಶ್ರೀಕೃಷ್ಣದೇವರಾಯರ ಆಸ್ಥಾನದಲ್ಲಿವಿಶೇಷ ಗೌರವಕ್ಕೆ ಪಾತ್ರರಾಗಿದ್ದ ಶ್ರೀಗಳವರು, ಶ್ರೀವ್ಯಾಸರಾಜರೊಂದಿಗೆ ನಿಕಟಸಂಪರ್ಕ ಹೊಂದಿದ್ದರು. ಈ ಇಬ್ಬರು ಮಹಾನ್ ಗುರುಗಳ ಸಾಂಗತ್ಯ ಬಯಸಿಯೇ ಅಲ್ಲಿದ್ದವರು ಅಪರೋಕ್ಷ ಜ್ಞಾನಿಗಳಾದ ಶ್ರೀಪುರಂದರದಾಸರು.ಶ್ರೀಪುರಂದರದಾಸರು, ಶ್ರೀಸುರೇಂದ್ರತೀರ್ಥಗುರುಸಾರ್ವಭೌಮರು ಮಾಡುವ ಶ್ರೀಮನ್ಮೂಲರಾಮದೇವರ ಮಹಾಪೂಜೆಯನ್ನು ಕಣ್ಣಾರೆ ಆನಂದಿಸಿದ ಮಹಾನುಭಾವರು. ಇವರ ವೈಭವದ ಮಹಾಪೂಜೆಯ ಸೊಬಗನ್ನು ಶ್ರೀಪುರಂದರದಾಸಾರ್ಯರು ತಮ್ಮ, 


ಇಂದಿನ ದಿನ ಸುದಿನವಾಯಿತು  ।।ಪ|| 


ಇಂದಿರೇಶ ‘ಮೂಲರಾಮಚಂದ್ರ’ನ ಪದಕಮಲಗಳ ಸು। 

ರೇಂದ್ರತೀರ್ಥಮುನಿಯು ತೋರಲು ।। ಅ .ಪ ।।  


ಎಂಬ ಪದ್ಯವೊಂದರ ಮೂಲಕ ಸೆರೆಹಿಡಿದಿದ್ದಾರೆ. ಶ್ರೀಗೋರೇಬಾಳು ಹನುಮಂತರಾಯರು ತಮ್ಮ ಸ್ವಹಸ್ತದಿಂದ ಈ ಕೀರ್ತನೆಯನ್ನು ಸಂಗ್ರಹಿಸಿದ್ದನ್ನೂ ನಾವು ಕಾಣಬಹುದಾಗಿದೆ. 


ಶ್ರೀಸುರೇಂದ್ರತೀರ್ಥರ ವಿಶೇಷ  ತಪಸ್ಸು, ಅವರ ಮಾನಸಪುಜಾದಿ ಅನುಸಂಧಾನ ಶ್ರೇಷ್ಠತೆ, ಅನೇಕ ಶಾಸನಗಳಿಂದ ತಿಳಿದುಬರುವಂತೆ ಅವರ ವಿದ್ವತ್ಪೂರ್ಣ ಪಾಂಡಿತ್ಯ, ಪಂಡಿತರ ಪೋಷಣೆ,ವಿದ್ಯಾಪಕ್ಷಪಾತಿತ್ವ, ಅಶೇಷ ಶಿಷ್ಯಸಮೂಹ , ರಾಜಾಧಿರಾಜರುಗಳಿಗೆ ಅವರು ಮಾಡಿದ ಪೂರ್ಣಾನುಗ್ರಹ ಹಾಗೂ ರಾಜರಿಂದ ಶ್ರೀಸುರೇಂದ್ರತೀರ್ಥರಿಗೆ ಹಾಗೂ ಶ್ರೀಮದಾಚಾರ್ಯರ ಸಂಸ್ಥಾನಕ್ಕೆ ಸಂದ ಮಹಾಗೌರವ ಇವುಗಳೆಲ್ಲ ಶ್ರೀಮೂಲರಾಮನ ದಿವ್ಯಪಾದಪದ್ಮಾರಾಧಕರಾಗಿದ್ದ ಶ್ರೀಸುರೇಂದ್ರತೀರ್ಥ ಗುರುಸಾರ್ವಭೌಮರ ಅಪ್ರತಿಮ ವ್ಯಕ್ತಿತ್ವದ ಕುರುಹುಗಳು ಮಾತ್ರ. ಆ ದಿವ್ಯಪರಂಪರೆಯಲ್ಲಿ ಒಬ್ಬರಿಗಿಂತ ಒಬ್ಬೊಬ್ಬರು ಮಹಾನ್ ತಪಸ್ವಿ ಶಿರೋಮಣಿಗಳ ಅವತಾರ ಆದ ನಂತರ, ಶ್ರೀವಿಜಯೀ೦ದ್ರತೀರ್ಥಗುರುಸಾರ್ವಭೌಮರು  ಹಾಗೂ ಶ್ರೀರಾಘವೇಂದ್ರಗುರುಸಾರ್ವಭೌಮರಂತಹ ಮೇರುವ್ಯಕ್ತಿತ್ವಗಳ ಮಧ್ಯದಲ್ಲಿ ಶ್ರೀಜಿತಾಮಿತ್ರತೀರ್ಥರು, ಶ್ರೀರಘುನಂದನತೀರ್ಥರು ಹಾಗು ಶ್ರೀಸುರೇಂದ್ರತೀರ್ಥರಂತಹ ಮಾಹುನುಭಾವರ ಮಹಿಮಾತಿಶಯಗಳು ಪ್ರಾಯಃ ನಮ್ಮಂತಹ ಮಂದಿಮತಿಗಳ ಅಸೂಕ್ಷ್ಮದೃಷ್ಟಿಗೆ ಗೋಚರವಾಗಿಲ್ಲ ಎಂದೇ ಹೇಳಬಹುದು. ಆದರೂ ನಿಷ್ಪಕ್ಷಪಾತಿಗಳಾದ, ಸಂಪ್ರದಾಯ ಬಲ್ಲ  ಜ್ಞಾನಿಗಳ ಹೃತ್ಕಮಲಮಧ್ಯದಲ್ಲಿ ಸದಾ ಸುಸ್ಥಾನವನ್ನು ಭಧ್ರವಾಗಿ ಈ ಮಹಾನುಭಾವರು ಪಡೆದಿದ್ದಾರೆ ಎನ್ನುವದು ವಿದಿತವಿಷಯ.   


ಇಂತಹ ಮಾಹಾನುಭಾವರ ಬಗ್ಗೆಯೂ ಇಲ್ಲಸಲ್ಲದ ಹಗುರ ಮಾತುಗಳನ್ನು ಇಂದಿಗೂ ಆಡುವವರು ಇದ್ದಾರೆ ಎಂದರೇ ಅದು ಆಶ್ಚರ್ಯ! ಶ್ರೀಸುರೇಂದ್ರತೀರ್ಥರಿಗೆ ವಿದ್ಯೆಯೇ ಇರಲಿಲ್ಲ ಹೀಗಾಗಿ ಅವರು ಶ್ರೀವ್ಯಾಸರಾಜರಿಂದ ಶ್ರೀವಿಜಯೀ೦ದ್ರತೀರ್ಥರನ್ನು ಪಡೆದು ತಮ್ಮ ಪರಂಪರೆಯನ್ನು ಮುಂದುವರಿಸಿದರು ಎನ್ನುವ ಹಗುರಮಾತುಗಳನ್ನು ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ಕಾಣುತ್ತಿದ್ದೇವೆ. ರಾಜ್ಯಪ್ರಶಸ್ತಿಯಂತಹ ಉನ್ನತ ಪ್ರಶಸ್ತಿಪಡೆದವರಾಗಿಯೂ ಅಪ್ರಬುದ್ಧವಾಗಿ 'ಶ್ರೀವ್ಯಾಸರಾಜರ ನಂತರ ಶ್ರೀವ್ಯಾಸರಾಯರ ಮಠದಲ್ಲೂ ಹಾಗೂ ಶ್ರೀರಾಯರ ಮಠದಲ್ಲೂ ಹೇಳಿಕೊಳ್ಳುವಂತಹ ಯಾವದೇ ಜ್ಞಾನಿಗಳೂ ಇರಲಿಲ್ಲ' ಎಂದು ಅತ್ಯಂತ ಹಗುರವಾಗಿ, ಅಪ್ರಬುದ್ಧವಾಗಿ, ಇತಿಹಾಸಕ್ಕೆ ವಿರುದ್ಧವಾಗಿ ಮಾತನಾಡುವವರೂ, ಪುಸ್ತಕಗಳಲ್ಲಿ ಛಾಪಿಸುವವರೂ  ನಮ್ಮ ಮಧ್ಯದಲ್ಲಿದ್ದಾರೆ ಎನ್ನುವದು ನಮ್ಮ ದೌರ್ಭಾಗ್ಯವೇ ಸರಿ! ಶ್ರೀಸುರೇಂದ್ರತೀರ್ಥರ ಅನುಗ್ರಹವಾಗಿ ಅವರ ನಿಜವಾದ ವ್ಯಕ್ತಿತ್ವದ ಪರಿಚಯ ಅವರಿಗಾಗಲಿ. 


ಶ್ರೀಸುರೇಂದ್ರತೀರ್ಥರ ವ್ಯಕ್ತಿತ್ವವನ್ನು ನೈಜವಾದ ಇತಿಹಾಸದೊಂದಿಗೆ ತಿಳಿಯುವಂತಾಗಿ  ಅವರ ಅನುಗ್ರಹ ನಮ್ಮೆಲ್ಲರ ಮೇಲಾಗಲಿ.



  • ಸಮೀರ ಜೋಷಿ 















No comments:

Post a Comment

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...