Saturday 12 August 2023

ಶ್ರೀಮಧ್ವಾಚಾರ್ಯರ ವಿದ್ಯಾಸಿಂಹಾನಾಧೀಶ್ವರರಾದ ಶ್ರೀಸುಧರ್ಮೇಂದ್ರತೀರ್ಥ ಶ್ರೀಪಾದಂಗಳವರು : ಶ್ರೀಕೃಷ್ಣಾವಧೂತರು ಕಂಡಂತೆ


ಶ್ರೀಮಧ್ವಾಚಾರ್ಯರ ವಿದ್ಯಾಸಿಂಹಾನಾಧೀಶ್ವರರಾದ ಶ್ರೀಸುಧರ್ಮೇಂದ್ರತೀರ್ಥ ಶ್ರೀಪಾದಂಗಳವರು : ಶ್ರೀಕೃಷ್ಣಾವಧೂತರು ಕಂಡಂತೆ

ಶ್ರೀಮಧ್ವಾಚಾರ್ಯರ ವಿದ್ಯಾಸಿಂಹಾನಾಧೀಶ್ವರರಾದ ಶ್ರೀರಾಘವೇಂದ್ರಸ್ವಾಮಿಗಳವರ ಸದ್ವಂಶದಲ್ಲಿ ಉದಿಸಿದ ಪೂರ್ಣಚಂದ್ರಮರಾದ ಶ್ರೀಸುಧರ್ಮೇಂದ್ರತೀರ್ಥ ಶ್ರೀಪಾದಂಗಳವರು.

ಶ್ರೀಕೃಷ್ಣಾವಧೂತರು ಶ್ರೇಷ್ಠವಿದ್ವಾಂಸರು. ಶ್ರೀರಾಘವೇಂದ್ರಸ್ವಾಮಿಗಳಲ್ಲಿ ಅನನ್ಯವಾದ ಭಕ್ತಿಯನ್ನು ಮಾಡಿದವರು. ಒಂದು ಕಾಲದಲ್ಲಿ ವಿಲಾಸಿ ಜೀವನ ನಡೆಸಿದ್ದ ಅವರು ಶ್ರೀರಾಘವೇಂದ್ರಗುರುಗಳ ದಿವ್ಯ-ಪಾದ- ಪದ್ಮಾರಾಧನೆಯಲ್ಲಿಯೇ ಜೀವನ ಸವೆಸಿದ್ದು ಇತಿಹಾಸ. ಶ್ರೀರಾಯರ ಕೃಪಾಶೀರ್ವಾದದಿಂದ ಅನೇಕ ಮಂತ್ರಗಳ ಸಿದ್ಧಿಯನ್ನು ಪಡೆದು, ಪಾಂಡಿತ್ಯವನ್ನು ಸಂಪಾದಿಸಿ ಅನೇಕ ಕೃತಿಗಳನ್ನು ರಚಿಸಿದವರು. ಸಂಸ್ಕೃತದ ಸಾಹಿತ್ಯದಲ್ಲಿ ಅನೇಕ ಪ್ರಕಾರಗಳ ಕೃತಿಗಳನ್ನು ರಚಿಸಿದ ಕೀರ್ತಿ ಇವರದು. ಶ್ರೀರಾಘವೇಂದ್ರತಂತ್ರ, ಶ್ರೀರಾಘವೇಂದ್ರ ಅಕ್ಷರಮಾಲಿಕಾ ಸ್ತೋತ್ರ (ಬಹುತೇಕ ಎಲ್ಲರೂ ಕೇಳಿರಲೇ ಬಹುದಾದ ಶ್ರೀರಾಘವೇಂದ್ರಾರ್ಯ ಪಾಹಿಪ್ರಭೋ... ಎನ್ನುವ ಕೃತಿ) ಮುಂತಾದ ಅಪೂರ್ವ ಗ್ರಂಥಗಳ ಕರ್ತೃಗಳು ಇವರು.

ಇವರು ಶ್ರೀಮದಾಚಾರ್ಯರ ಸತ್ಪರಂಪರೆಯಲ್ಲಿ ಶ್ರೀಸುಜ್ಞಾನೇಂದ್ರತೀರ್ಥ ಶ್ರೀಪಾದಂಗಳವರ ಕರಕಮಲ ಸಂಜಾತರಾದ ಶ್ರೀಸುಧರ್ಮೇಂದ್ರತೀರ್ಥರ ಸಮಕಾಲೀನರು. ಶ್ರೀಸುಧರ್ಮೇಂದ್ರಸ್ವಾಮಿಗಳವರ ವಿಶಿಷ್ಟವಾದ ಆದರ್ಶ ಸಂನ್ಯಾಸ, ಶ್ರೇಷ್ಠ ವೈರಾಗ್ಯ, ಅಪ್ರತಿಮ ಪಾಂಡಿತ್ಯ, ಅನುಪಮ ಶ್ರೀಮನ್ಮೂಲರಾಮ- ದಿಗ್ವಿಜಯರಾಮ- ಜಯರಾಮ- ವೇದವ್ಯಾಸದೇವರ ವೈಭವದ ಮಹಾಪೂಜೆಯನ್ನು ಕಣ್ಣಾರೆ ಕಂಡವರು ಶ್ರೀಕೃಷ್ಣಾವಧೂತರು.

ಶ್ರೀಸುಧರ್ಮೇಂದ್ರತೀರ್ಥರ ದಿವ್ಯ-ಭವ್ಯ ವ್ಯಕ್ತಿತ್ವದ ಪರಿಚಯ ಮಾಡಿಸಲೋಸುಗ ಶ್ರೀಕೃಷ್ಣಾವಧೂತರು "ಶ್ರೀಸುಧರ್ಮೇಂದ್ರಮಹೋದಯಃ" ಎಂಬ ಕೃತಿಯನ್ನೇ ರಚನೆ ಮಾಡಿದ್ದಾರೆ. 

ಅತೋSಹಂ ಸುಧರ್ಮೇಂದ್ರಯತಿನಃ ಮುಹುಃ ಶ್ರಾವಂ ಶ್ರಾವಂ ಗುಣಮಣಿಮನರ್ಘ್ಯಂ ಚಿರತರಂ ಸ್ತೋತುಂ ಎಂದು ತ್ರಿಲೋಕ ವ್ಯಾಪಿಯಾದ ಶ್ರೀಸುಧರ್ಮೇಂದ್ರತೀರ್ಥರ ಗುಣಗಳನ್ನು ಕೇಳಿ ಕೇಳಿ ಮತ್ತೆ ಮತ್ತೆ ಸ್ತುತಿಸಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಶ್ರೀಸುಧರ್ಮೇಂದ್ರಸ್ವಾಮಿಗಳ ಬಗ್ಗೆ ಹೇಳುತ್ತ,

"ಸುಧರ್ಮೇಂದ್ರತೀರ್ಥರ ಶ್ರೀರಾಮದೇವರ ಪೂಜೆಯನ್ನು ನೋಡಲು ಸಾಕ್ಷಾತ್ ಇಂದ್ರದೇವರೇ ಭುವಿಗೆ ಬರುತ್ತಾರೆ"

 

ಎಂದು ಉದ್ಗರಿಸುತ್ತಾರೆ.
ಶ್ರೀ ಸುಧರ್ಮೇಂದ್ರರು ಸದ್ಗುಣಪೂರ್ಣರಾಗಿದ್ದು, ತಮ್ಮನು ನಂಬಿದ ಜನರಿಗೆಲ್ಲ ಮುದವನ್ನು ನೀಡುವ ಗುರುಗಳಾಗಿದ್ದರೂ ಕೂಡ ವಿಶೇಷವಾಗಿ "ಭೂಮೌ ದದೌ ಖಲವಾದುಶಿಕ್ಷಾಮ್" ಎಂದು ಭೂವಿಯಲ್ಲಿನ ದುರ್ವಾದಿಗಳನ್ನೆಲ್ಲ ಶಿಕ್ಷಿಸುವವರು ಎಂದು ವಿಷ್ಣುಪರವಾದ ತತ್ತ್ವೋಪದೇಶಕರಾಗಿ, ಪರವಾದಿನಿಗ್ರಹಕರಾಗಿದ್ದವರು ಎಂದು ಉಲ್ಲೇಖಿಸುತ್ತಾರೆ.

ಅವರ ಪಾಂಡಿತ್ಯಕ್ಕೆ ಹಿಡಿದ ಕನ್ನಡಿಯಂತೆ ತಮ್ಮದೇ ಶೈಲಿಯಲ್ಲಿ "ಹೇ! ಉತ್ತಮರಾದ ಕೀರ್ತಿಯುಳ್ಳ ವಾದಿಗಳೇ, ಈಗ ವಾದಿದಿಗ್ವಿಜಯಕ್ಕೆ ಹೋಗಬೇಡ. ಏಕೆಂದರೇ ಸುಧರ್ಮೇಂದ್ರತೀರ್ಥರೆಂಬ ಶ್ರೇಷ್ಠವಿದ್ವಾಂಸರು ಇನ್ನೂ ಭುವಿಯಲ್ಲಿ ಇದ್ದಾರೆ" ಎಂದು ಹೇಳುತ್ತಾರೆ.

ಹೀಗೆ ಅವರ ಅನೇಕ ಸದ್ಗುಣಗಳನ್ನು ಮುಕ್ತಕಂಠದಿಂದ ಪ್ರಶಂಶಿಸಿ ಅವರನ್ನು ಚಿಂತಿತಾರ್ಥವನ್ನು ಕೋಡುವ ಕಲ್ಪವೃಕ್ಷಸಮರೆಂದು ವರ್ಣಿಸಿದ್ದಾರೆ.

ವಿಶೇಷವಾಗಿ,

"ಸಮಸ್ತದೇವಸಾನ್ನಿಧ್ಯಸಿದ್ಧಿಭಾಜೋ ಜಗದ್ಗುರುಃ |

ಪಾವಿತ್ರ್ಯಂ ವ್ರಜತಾದ್ ವಾಣೀ ಸುಧರ್ಮೇಂದ್ರಸ್ಯ ಕೀರ್ತನಾತ್ ||"

ಎಂದು - ಸಕಲ ದೇವತೆಗಳ ಸನ್ನಿಧಾನದಿಂದ ಸಿದ್ಧಿಯನ್ನು ಹೊಂದಿದ ಶ್ರೀಸುಧರ್ಮೇಂದ್ರತೀರ್ಥರ ಕೀರ್ತನೆಯಿಂದ ನನ್ನ ಮಾತುಗಳು ಪವಿತ್ರವಾಗಲಿ ಎಂದಿದ್ದಾರೆ.

ಶ್ರೀಸುಧರ್ಮೇಂದ್ರತೀರ್ಥರ ಮೂಲವೃಂದಾವನ ಶ್ರೀಗುರುರಾಯರ ದಿವ್ಯ ಸನ್ನಿಧಾನ ಮಂತ್ರಾಲಯ ಕ್ಷೇತ್ರದಲ್ಲಿದೆ. ಶ್ರೀರಾಯರು- ಶ್ರೀವಾದೀಂದ್ರರ ನಂತರ ಅಲ್ಲಿ ವೃಂದಾವನಸ್ತರಾದ ಪರಂಪರೆಯ ಮೂರನೇಯ ಯತಿಗಳು ಇವರು.

ಮಂತ್ರಾಲಯಕ್ಕೇ ಭೇಟ್ಟಿ ಕೊಟ್ಟಾಗ ಇವರ ಮೂಲವೃಂದಾವನ ದರ್ಶನ ತಪ್ಪದೇ ಮಾಡಿ ಬನ್ನಿ.

- ಸಮೀರ ಜೋಷಿ.

No comments:

Post a Comment

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...