Saturday, 12 August 2023

ಸೋದಾಪುರಾಧೀಶ ಭಾವೀಮುಖ್ಯಪ್ರಾಣರಾದ ಶ್ರೀಮದ್ವಾದಿರಾಜಪ್ರಭುಗಳು

ಶ್ರೀಮನ್ಮಧ್ವಾಚಾರ್ಯರ ಪೂರ್ವಾಶ್ರಮದ ಅನುಜರಾಗಿ ಅವತರಿಸಿ, ಶ್ರೀಮನ್ಮಧ್ವಾಚಾರ್ಯರಿಂದ ಉಪದೇಶವನ್ನು ಪಡೆದು ಅವರ ಪದಕಮಲಗಳನ್ನು ಸೇವಿಸಿ ಧನ್ಯರಾದ ಮಾಹಾಭಾಗ್ಯಶಾಲಿಗಳು ಶ್ರೀವಿಷ್ಣುತೀರ್ಥರು.

ಶ್ರೀವಿಷ್ಣುತೀರ್ಥರ ಚರಿತ್ರೆಯನ್ನು, ಅವರ ಮಹಿಮೆಯನ್ನು ಅತ್ಯಂತ ಭಕ್ತ್ಯಾದರಗಳಿಂದ ಶ್ರೀನಾರಾಯಣಪಂಡಿತಾಚಾರ್ಯರು ಶ್ರೀಸುಮಧ್ವವಿಜಯದಲ್ಲಿ ಉಲ್ಲೇಖಿಸಿದ್ದಾರೆ. ಇವರ ಭವ್ಯಸ್ವರೂಪದ ರೋಮಾಂಚನಕಾರಿ ವರ್ಣನೆಯನ್ನು ಮಾಡಿದ್ದಾರೆ. ಶ್ರೀಮದಾಚಾರ್ಯರು ಹಾಗೂ ಶ್ರೀವಿಷ್ಣುತೀರ್ಥರನ್ನು "ವೇದಾಂತಗುರುಸೋದರ"ರು ಎಂದು ಉಲ್ಲೇಖಿಸಿದ್ದಾರೆ. ಅವರ ತೀರ್ಥಯಾತ್ರೆ, ತಪೋವೈಭವ, ಆ ತಪ್ಪಸ್ಸಿನ ತೀವ್ರತೆ, ಅಸಂಪ್ರಜ್ಞಾತಸ್ಥಿತಿಯಲ್ಲಿ ಅವರು ಮಾಡಿದ ಭಗವದ್ದರ್ಶನ, ಈ ಎಲ್ಲ ಅಪೂರ್ವಸಿದ್ಧಿಗಳನ್ನು ಹೊಂದಿದ ಮಹಾನುಭಾವರು ಶ್ರೀವಿಷ್ಣುತೀರ್ಥರು.

ಶ್ರೀಮಧ್ವಾನುಜಾಚಾರ್ಯರು ಎಂದೇ ಮಾಧ್ವಪರಂಪರೆಯ ಜ್ಞಾನಿವರೇಣ್ಯರಿಂದ ಸ್ತುತಿಸಲ್ಪಡುವ ಮಹಾ ತಪಸ್ವೀಶ್ರೇಷ್ಠರಾದ, ದೈವಾಂಶಸಂಭೂತರಾದ ಶ್ರೀವಿಷ್ಣುತೀರ್ಥರೇ ಅಷ್ಟಮಠಗಳಲ್ಲಿ ಒಂದಾದ 'ಕುಂಭಾಶಿ' ಮಠಕ್ಕೂ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಮಠಕ್ಕೂ ಮೂಲಪುರುಷರು.

ಅವರ ದಿವ್ಯಪರಂಪರೆಯಲ್ಲಿ ಶ್ರೀವಾಗೀಶತೀರ್ಥ ಶ್ರೀಮಚ್ಚರಣರ ಕರಕಮಲಸಂಜಾತರಾಗಿ ಧರೆಗಿಳಿದು ಬಂದವರೇ ಭಾವೀಹನೂಮಚ್ಚಕ್ರವರ್ತಿಗಳಾದಂತಹ ಶ್ರೀಶ್ರೀವಾದಿರಾಜತೀರ್ಥ ಗುರುಸಾರ್ವಭೌಮರು.

ಆಚಾರ-ವಿಚಾರ, ಸಂಪ್ರದಾಯಗಳ ಪರಿಪಾಲನೆ, ತಪಶ್ಚರ್ಯೆ ಎಲ್ಲದರಲ್ಲೂ ಪ್ರತಿಯೊಂದು ಚರ್ಯೆಯಲ್ಲೂ ಪೂರ್ವಾಚಾರ್ಯರ, ವಿಶೇಷವಾಗಿ ಮಧ್ವಸಾದೃಶ್ಯ.

ಸಶರೀರ ವೃಂದಾವನಪ್ರವೇಶ. ಸಂಸ್ಕೃತ- ಕನ್ನಡ - ತುಳು ಭಾಷೆಗಳಲ್ಲಿ ಶತಾಧಿಕ ಗ್ರಂಥಗಳ ನಿರ್ಮಾಣ. ವೇದಾಂತದಲ್ಲಿ ಭಾಷ್ಯಗ್ರಂಥಗಳು, ಟೀಕಾಗ್ರಂಥಗಳು, ಟಿಪ್ಪಣೀಗ್ರಂಥಗಳು, ಕಾವ್ಯಗ್ರಂಥಗಳು, ವಿಮರ್ಶಾಗ್ರಂಥಗಳು, ಸ್ತೋತ್ರಸಾಹಿತ್ಯ, ಹೀಗೇ ಬಹುಪ್ರಕಾರವಾಗಿರುವ ಅವರ ಗ್ರಂಥರಚಾನಾ ಸಾಮರ್ಥ್ಯ. ಗ್ರಂಥಗಳಲ್ಲಿ ತೋರುವ ಸಂಪ್ರದಾಯ-ಸಿದ್ಧಾಂತ ನಿಷ್ಠೆ. ಪ್ರಮೇಯಗಳನ್ನು ಹೇಳುವ ನಿರ್ದುಷ್ಟವಾದ, ಮನೋಹರ ಶೈಲಿ.

ವಿಶ್ವಾಸವಿಟ್ಟವರಿಗೆ ಎಚ್ಚರದಂತೆ ಕಾಣುವ, ವಿಶ್ವಾಸವಿಲ್ಲದವರಿಗೆ ಚಾಟಿ ಏಟಿನಂತೆ ತೋರುವ ಅವರ ವಾಣಿವಿಲಾಸ. ವಿಷಯಸಾಧನೆಗೆ ಪೂರಕವಾಗಿ ಯುಕ್ತಿಯನ್ನು ಹಣೆದು ಸವಿಯನ್ನು ಉಣಬಡಿಸುವ ಅವರ ನಿರಂಕುಶ ವಾಗ್ಝರಿ. ಸಾಹಿತ್ಯ-ಕಾವ್ಯ-ನಾಟಕ-ಅಲಂಕಾರಾದಿ ಶಾಸ್ತ್ರಗಳಲ್ಲಿ ಅವರಿಗಿರುವ ನಿಪುಣತೆ. ವೇದಾಂತಾದಿ ಶಾಸ್ತ್ರಗಳಲ್ಲಿ ಅವರಿಗಿರುವ ಅದ್ಭುತ ಹಿಡಿತ. ಗ್ರಂಥಗಳಲ್ಲಿ ಯುಕ್ತಯುತವಾಗಿ ಅವರು ಉದಾಹರಿಸುವ, ಶತಮಾನಗಳೂ ಉರುಳಿದರೂ ನಿತ್ಯನೂತನವೆನಿಸುವ ಅವರ ಹಿತೋಪದೇಶಗಳು. ಚಿರಸ್ಥಾಯಿಯಾಗಿರುವಂತಹ ಅವರ ಕಾಲದಲ್ಲಿ ಅವರು ಮಾಡಿದ ಲೋಕೋತ್ತರ ವ್ಯಾಪಾರಗಳು. ಇವಲ್ಲದಕ್ಕೂ ಶ್ರೀವಾದಿರಾಜ ಗುರುಸರ್ವಭೌಮರಿಗೇ , ಶ್ರೀವಾದಿರಾಜರಗುರು ಸಾರ್ವಭೌಮರೇ ಸಾಟಿ!!!


ಅವರ ಈ ಭವ್ಯಮಹಿಮೆಯ ದ್ಯೋತಕವಾಗಿಯೇ ವೃತ್ತರತ್ನಸಂಗ್ರಹದಲ್ಲಿ,

"ಸವಿನೋದಂ ಸಾಟ್ಟಹಾಸಂ ಸಸ್ಮಿತಂ ಸುಸ್ವರಾನ್ವಿತಮ್ |

ಸರಹಸ್ಯಂ ಸಪ್ರಮಾಣಂ ವಾದಿರಾಜವಚೋsಮೃತಮ್ ||"

 

ವಾದಿರಾಜರ ಮಾತುಗಳು ಅರ್ಥಾತ್ ಅವರ ಅಸ್ಖಲಿತ ವಾಣಿಯು ವಿನೋದದಿಂದ ಕೂಡಿವೆ , ಅಟ್ಟಹಾಸದಿಂದ ( ದುರ್ವಾದಿಗಳಿಗೆ ಎಚ್ಚರಿಕೆ ಕೊಡುವಲ್ಲಿ ಅಟ್ಟಹಾಸ) ತುಂಬಿವೆ , ಮಂದಹಾಸವನ್ನು ಬೀರುತ್ತವೆ , ಉತ್ತಮ ಸ್ವರಗಳನ್ನು ಸೂಚಿಸುತ್ತವೆ. ಅವುಗಳಲ್ಲಿ ರಹಸ್ಯಾರ್ಥವಿದೆ , ಪ್ರಮಾಣ ಬದ್ಧವಾಗಿರುತ್ತವೆ , ಪ್ರಮಾಣಗಳಿಂದ ಕೂಡಿರುತ್ತವೆ. ಹೀಗೆ ರಾಜರ ಬಗ್ಗೆ ಆಡಿದ ಮಾತುಗಳು ಅತಿಶಯವೆನಿಸುವದಿಲ್ಲ . ಅದು ಅವರ ವಾಣಿಯ ಮಹಿಮೆ.

ಹೀಗೆ ಮಹಾನುಭಾವರಾದ ಭಾವಿ ಸಮೀರ ವಾದಿರಾಜರ ಮಾತುಗಳ ಬಗ್ಗೆ ಕವಿ ಆಡಿರುವ ಮಾತುಗಳು ಅತಿಶಯ ಎನ್ನಿಸುವದೇ ಇಲ್ಲ . ಅವರ ಗ್ರಂಥಗಳಲ್ಲಿ ಇದರ ಪ್ರತ್ಯಕ್ಷ ಅನುಭವ ಸರ್ವಾಥಾ ಆಗದೇ ಇರದು.ಭಾವೀಸಮೀರರ ವಾಗ್ವೈಖರಿಯನ್ನು ಅನೇಕ ಜ್ಞಾನಿಗಳು ಇದೆ ಕ್ರಮದಲ್ಲಿ ವರ್ಣಿಸಿದ್ದಾರೆ.

ಓರ್ವ ಯತಿಗಳಾಗಿ ಪ್ರಾಯಃ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದವರು ಇವರ ಹಾಗೆ ಮತ್ತೊಬ್ಬರಿಲ್ಲ.

ಪ್ರೌಢವೇದಾಂತಗ್ರಂಥಗಳು,ಸ್ವತಂತ್ರಪ್ರಬಂಧವೆನಿಸುವ ಗ್ರಂಥಗಳು, ನಿತ್ಯಪಠನೀಯ ಸ್ತೋತ್ರಗಳು, ಅನುಸಂಧಾನಕ್ಕೆ ಯೋಗ್ಯವಾದ ಪದ-ಪದ್ಯಗಳು, ಕಮನೀಯ ಕಾವ್ಯಗಳು, ತೀರ್ಥಪ್ರಬಂಧದಂತಹ ಅಪೂರ್ವಕೃತಿಗಳು ಹೀಗೆ ರಾಜರ ಕೊಡೆಗೆಯನ್ನೂ ಎಷ್ಟು ಸ್ಮರಿಸಿದರೂ ಸಾಲದು.

ಅವರ ಗ್ರಂಥವೈಭವ ಈ ರೀತಿಯದ್ದಾದರೇ, ಅವರು ಮಾಡಿದ ಅನೇಕ ವಾದಿದಿಗ್ವಿಜಯಗಳು, ಪವಾಡಗಳು, ಸಜ್ಜನರ ಮೇಲೆ ಅವರು ಮಾಡಿದ ಅನುಗ್ರಹ ಎಲ್ಲವೂ ಜನನಿತ. ಇದೆಲ್ಲದರ ಜೊತೆಗೆ ಶ್ರೀವಾದಿರಾಜರು ಬೀರಿದ ಸಾಮಾಜಿಕ ಪ್ರಭಾವ ಗಣ್ಯವಾದುದು.

ಸೋದೆಯಲ್ಲಿ ರಮಾತ್ರಿವಿಕ್ರಮ ದೇವರೇ ಮೊದಲಾದ ದೇವತಾ ಪ್ರತಿಷ್ಠಾನ, ಅವರ ಆಖ್ಯಾನದ

"ಅಹಂ ಬ್ರಹ್ಮಾ ಚ ವಾಯುಶ್ಚ ವಿಷ್ಣುರುದ್ರಶ್ಚ ಪಂಚಮ

ರಮಾಮ ನಿತ್ಯಮೇವಾತ್ರ ಶ್ವೇತದ್ವೀಪೆ ಯಥಾ ವಯಮ್ || "

ಎಂಬ ಮಾತಿಗೆ ಸಂವಾದಿಯಾಗಿ ಸಜ್ಜನರ ಉದ್ಧಾರಕ್ಕಾಗಿ ಅವರು ಪ್ರತಿಷ್ಠಾಪಿಸಿದ ದೇವತಾಮೂರ್ತಿಗಳು. ಧರ್ಮಸ್ಥಳದಲ್ಲಿ ಅವರು ಮಾಡಿದ ಮಹಾರುದ್ರದೇವರ ಪ್ರತಿಷ್ಠೆ.

ಉಡುಪಿಯ ಭೈಷ್ಮೀ-ಮಧ್ವಕರಾರ್ಚಿತ ಶ್ರೀಕೃಷ್ಣದೇವರ ಪೂಜಾಕೈಂಕರ್ಯವನ್ನು ಸುಲಲಿತಗೊಳಿಸಲು ಎರೆಡು ತಿಂಗಳ ಪರ್ಯಾಯವನ್ನು, ಎರೆಡು ವರ್ಷಗಳಿಗೆ ವಿಸ್ತರಿಸಿದ ಅವರ ನಿರ್ಧಾರ.

ಇತಿಹಾಸದಲ್ಲಿ ಅವರು ಜರುಗಿಸಿದ ಐದು ಐತಿಹಾಸಿಕ ಶ್ರೀಕೃಷ್ಣದೇವರ ಪೂಜಾಕೈಂಕರ್ಯದ ಪರ್ಯಾಯಗಳು. ಒಂದು ನೂರಾ ಇಪ್ಪತ್ತು ವರ್ಷಗಳ ಕಾಲ ಬಾಳಿ ಬದುಕಿ ಎಲ್ಲರನ್ನೂ ಅನುಗ್ರಹಿಸಿದ ಅವರ ಕಾರುಣ್ಯ. ಶ್ರೀಕೃಷ್ಣನ ಎದುರಿಗೆ ಅಯೋಧ್ಯೆಯಿಂದ ಬಂದ ಶ್ರೀಮುಖ್ಯಪ್ರಾಣದೇವರ ಹಾಗೂ ಶ್ರೀಗರುಡದೇವರ ಪ್ರತಿಷ್ಠೆ.

ಪವಿತ್ರ ಪಾಜಕಕ್ಷೇತ್ರದಲ್ಲಿ ಶ್ರೀಮಧ್ವಾಚಾರ್ಯರ ಪ್ರತಿಮಾಪ್ರತೀಕದ ಪತಿಷ್ಠೆ. ಶ್ರೀಕೃಷ್ಣದೇವರ ಎದುರುನಲ್ಲಿಯೇ ನೇರವಾಗಿ ಇರುವ ರಥಬಿದಿಯ ಸ್ಥಳದಲ್ಲಿ ತಮ್ಮ ಅತ್ಯಾಪ್ತಮಿತ್ರರಾಗಿದ್ದ ಶ್ರೀಪದ್ಮನಾಭತೀರ್ಥರ ಪರಂಪರೆಯ ಭೂಷಾಮಣಿಗಳಾದ ಶ್ರೀವಿಜಯೀಂದ್ರಗುರುಸಾರ್ವಭೌಮರಿಗೆ ಅವರು ಕಟ್ಟಿಸಿ ಕೊಟ್ಟು ಅವರು ತೋರಿದ ಸೌಹಾರ್ದ ಮನೋಭಾವ. (ಆ ಮಠದಲ್ಲಿಯೇ ಶ್ರೀರಾಘವೇಂದ್ರಗುರುಸಾರ್ವಭೌಮರು ಚಂದ್ರಿಕಾಪ್ರವಚನ, ಚಂದ್ರಿಕಾಪ್ರಕಾಶ, ನ್ಯಾಯಮುಕ್ತಾವಲೀ ಮೊದಲಾದ ಉದ್ಗ್ರಂಥಗಳ ನಿರ್ಮಾಣವನ್ನು ಮಾಡಿದ್ದು.)

ಇಂತಹ ಅನೇಕ ಲೋಕೋಪಕಾರಿ ಚರ್ಯೆಯನ್ನು ಶ್ರೀಭಾವೀಸಮೀರ ವಾದಿರಾಜರು ಜೀವನದುದ್ದಕ್ಕೂ ಪ್ರಕಟಿಸಿದ್ದಾರೆ. ಒಂದೊಂದು ಕಾರ್ಯಗಳನ್ನೂ ಮಾಧ್ವ ಸಮಾಜ ಸ್ಮರಿಸಲೇಬೇಕಾದ್ದು. ಈ ಎಲ್ಲವನ್ನೂ ಗಮನಿಸಿದಾಗ ಅವರು ಸತ್ಯಲೋಕಾಧಿಪತಿಯ ಪದವಿಯೋಗ್ಯರೇ ಅನ್ನುವದರಲ್ಲಿ ಯಾವ ಸಜ್ಜನರಿಗೂ ಸಂಶಯ ಹುಟ್ಟದು.

ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು, ಸಮಾಧಾನವಾಗದು, ಎಲ್ಲವನ್ನು ಹೇಳುವುದೂ ಮನುಷ್ಯಮಾತ್ರರಿಂದ ಸಾಧ್ಯವೇ ಇಲ್ಲ! ಅಂತಹ ಶ್ರೀವಾದಿರಾಜಗುರುಸಾರ್ವಭೌಮರು ಅವರ ಆರಾಧನಾ ಪರ್ವಕಾಲದ ದಿನದಂದು ನಮ್ಮನ್ನು ವಿಶೇಷವಾಗು ಅನುಗ್ರಹಿಸಿ ಶ್ರೀಮಧ್ವಸಿದ್ಧಾಂತದ ಅರಿವನ್ನು ಹುಟ್ಟಿಸುವಂತೆ ಅನುಗ್ರಹಿಸಿ ಜ್ಞಾನ-ಭಕ್ತಿ-ವೈರಾಗ್ಯಗಳನ್ನು ಕೊಟ್ಟು ಕೃಪಾದೃಷ್ಟಿಯನ್ನು ನಿರಂತರವಾಗಿ ಇಟ್ಟಿರಲಿ ಎಂದು ಪ್ರಾರ್ಥಸುತ್ತಾ..

ಶ್ರೀಕೃಷ್ಣಾರ್ಪಣಮಸ್ತು.

- ಸಮೀರ ಜೋಷಿ.

No comments:

Post a Comment

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...